Advertisement
Opinion

ಅಡಿಕೆ ದರ ಇಳಿಯುತ್ತದೆ, ಕೂಲಿ ಏರುತ್ತದೆ ; ಬೆಳೆಗಾರನಿಗೆ ಉಳಿಯುವುದೇನು?

Share

“ಆಳು ಸಂಬಳ ಜಾಸ್ತಿಯಾಗಿದೆ…”

ಇದು ಮೊನ್ನೆಯಿಂದ ಕೇಳಿಸುತ್ತಿರುವ ಮಾತು.

ಹಿಂದಿನ ದಿನವಷ್ಟೇ ಎರಡು ತಿಂಗಳ ಹಿಂದೆ ₹54 ಸಾವಿರ ಇದ್ದ ಅಡಿಕೆಯನ್ನು ಸಹಕಾರಿ ಮಾರಾಟ ಸಂಸ್ಥೆಯಲ್ಲಿ ₹46 ಸಾವಿರಕ್ಕೆ ಮಾರಾಟ ಮಾಡಿ ಬಂದಿದ್ದೆ. ಮಾರನೇ ದಿನ ನಮ್ಮ ಮಾಮೂಲಿನ ಕೃಷಿ ಕಾರ್ಮಿಕ, “ಸಂಬಳ ಜಾಸ್ತಿಯಾಗಿದೆ” ಎಂದು ಘೋಷಣೆ ಮಾಡಿದ.

ನಾವು ಅಡಿಕೆ ಬೆಳೆಗಾರರು. ನಾವೂ ಇದೇ ಸಮಾಜದಲ್ಲಿ ಬದುಕುತ್ತಿದ್ದೇವೆ. ನಮಗೂ ದಿನನಿತ್ಯ ಬೇಕಾಗುವ ಬಹುತೇಕ ಎಲ್ಲ ವಸ್ತುಗಳನ್ನು ಅಂಗಡಿಯಿಂದಲೇ ಖರೀದಿಸಬೇಕು. ಬೆಲೆ ಏರಿಕೆಯ ಬಿಸಿ ನಮಗೂ ತಟ್ಟುತ್ತದೆ. ಆದರೆ ನಮ್ಮ ಆದಾಯದ ಮೂಲವಾದ ಅಡಿಕೆಯ ಮಾರುಕಟ್ಟೆ ಖರೀದಿ ದರ ಮಾತ್ರ ಕಡಿಮೆಯಾಗುತ್ತಲೇ ಹೋಗುತ್ತದೆ.

ಹಾಗಾದರೆ ಸಾಮಾಜಿಕ ನ್ಯಾಯ ನಮಗೆ ನೀಡುವವರು ಯಾರು?

ಅಡಿಕೆ ದರ ಕಡಿಮೆಯಾಗುತ್ತಿರುವುದೇಕೆ? ಅಡಿಕೆಗೆ ಬೇಡಿಕೆ ಕಡಿಮೆಯಾಗಿದೆಯೇ? ಅಕ್ರಮವಾಗಿ ಅಡಿಕೆ ಆಮದಾಗುತ್ತಿದೆಯೇ? ಮಾರುಕಟ್ಟೆಯಲ್ಲಿ ಬೇರೆ ಯಾವುದಾದರೂ ಕಾರಣಗಳಿವೆಯೇ? ಗೊತ್ತಿಲ್ಲ.

ಇತ್ತೀಚೆಗೆ ನಾನು ಮಾರಾಟ ಮಾಡಿದ ಅಡಿಕೆಯನ್ನು ಮೊದಲ ಬಾರಿಗೆ ಹರಾಜಿಗೆ ಇಟ್ಟಾಗ ₹41 ಸಾವಿರಕ್ಕೆ ಟೆಂಡರ್ ಆಗಿತ್ತು. ಎರಡನೇ ವಾರ ಮತ್ತೆ ಮಾರಾಟಕ್ಕೆ ಇಟ್ಟಾಗ ₹46,500ಕ್ಕೆ ಟೆಂಡರ್ ಆಯಿತು. ಅದೇ ಸಂದರ್ಭದಲ್ಲಿ ಗರಿಷ್ಠ ದರ ₹50 ಸಾವಿರದಷ್ಟಿತ್ತು.

ಇದೆಲ್ಲಾ ಏನು?

ನಂಬಿಕಸ್ಥ ಎಂದು ರೈತರು ನಂಬಿರುವ ಸಹಕಾರಿ ಮಾರಾಟ ಸಂಸ್ಥೆಯಲ್ಲಿಯೇ ಇಂತಹ ದರ ವ್ಯತ್ಯಾಸ ಏಕೆ?

ಅನುಮಾನ ಮೂಡುವುದು ಸಹಜವಲ್ಲವೇ?

ಇರಲಿ, ಅದೊಂದು ಬೇರೆ ವಿಚಾರ.

ರೈತ ವ್ಯಾಪಾರಿ ಸಂಸ್ಥೆಗಳು ನಿಗದಿಪಡಿಸಿದ ದರಕ್ಕೆ ತನ್ನ ಉತ್ಪನ್ನವನ್ನು ಮಾರಾಟ ಮಾಡಬೇಕಾದ ಅನಿವಾರ್ಯತೆ ರೈತನದ್ದು. ಇದು ಒಂದು ರೀತಿಯ ಶೋಷಣೆ.

ಇನ್ನೊಂದು ಕಡೆ ಕೃಷಿ ಕಾರ್ಮಿಕರ ವೇತನದ ವಿಚಾರ.

ಕಳೆದ 25–30 ವರ್ಷಗಳಿಂದ ಕೃಷಿ ಕೂಲಿ ದರದ ಗ್ರಾಫ್ ಏರುತ್ತಲೇ ಇದೆ. ಅದರಲ್ಲಿ ತಪ್ಪೇನಿಲ್ಲ. ದುಡಿಯುವ ಕಾರ್ಮಿಕರಿಗೆ ಉತ್ತಮ ಸಂಬಳ ಸಿಗಬೇಕು. ಅವರ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಬೇಕು.

ಆದರೆ ಅದೇ ಸಮಯದಲ್ಲಿ ಕೆಲಸದ ಅವಧಿ, ಕೆಲಸದ ಪ್ರಮಾಣ ಮತ್ತು ಕಾರ್ಯಕ್ಷಮತೆಯಲ್ಲೂ ಬದಲಾವಣೆ ಆಗಿದೆಯೇ? ಎಂಬ ಪ್ರಶ್ನೆಯನ್ನೂ ಕೇಳಬೇಕಾಗಿದೆ.

ಮಲೆನಾಡಿನ ಬಹುತೇಕ ಪ್ರದೇಶಗಳಲ್ಲಿ ಇಂದು ವಿವಿಧ ಕೃಷಿ ಕೆಲಸಗಳಿಗೆ ಬಯಲುಸೀಮೆ ಹಾಗೂ ಹೊರ ರಾಜ್ಯಗಳಿಂದ ಬರುವ ಕೂಲಿ ಕಾರ್ಮಿಕರನ್ನೇ ಅವಲಂಬಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ಥಳೀಯ ಕಾರ್ಮಿಕರು ಲಭ್ಯವಿರುವ ಕಡೆಗಳಲ್ಲಿ ಕೆಲವೊಮ್ಮೆ ಆರು ತಿಂಗಳಿಗೊಮ್ಮೆ ಕೂಲಿ ದರ ಹೆಚ್ಚಾಗುತ್ತಿರುವ ಅನುಭವ ರೈತರದ್ದು.

ಕೆಲವು ಊರುಗಳಲ್ಲಿ ಒಬ್ಬ ಕೃಷಿ ಕಾರ್ಮಿಕನ ದಿನದ ಕೂಲಿ ಈಗ ₹1,000 ದಾಟಿದೆ.

ಮಣ್ಣಿನ ಕೆಲಸಕ್ಕೆ ಒಂದು ದರ, ಗೊಬ್ಬರದ ಕೆಲಸಕ್ಕೆ ಮತ್ತೊಂದು ದರ, ಗದ್ದೆ ಕೆಲಸಕ್ಕೆ ಮತ್ತೊಂದು ದರ, ಅಡಿಕೆ ಕೊಯ್ಲು ಮತ್ತು ಸಂಸ್ಕರಣೆಗೆ ಮತ್ತೊಂದು ದರ.

ಸಾಮಾನ್ಯ ಕೃಷಿ ಕೂಲಿ ದರವೇ ₹600ರಿಂದ ಆರಂಭವಾಗುವ ಪರಿಸ್ಥಿತಿ ಇದೆ.

ಸಣ್ಣಪುಟ್ಟ ಕೃಷಿ ಹಿಡುವಳಿದಾರರಿಗೆ ಇದು ದೊಡ್ಡ ಸವಾಲಾಗಿದೆ.

ಸ್ವತಃ ಕೃಷಿ ಕೆಲಸ ಮಾಡಲು ಸಾಧ್ಯವಾಗದವರು ಕೂಲಿ ಕಾರ್ಮಿಕರನ್ನು ಅವಲಂಬಿಸಲೇಬೇಕು. ಆದರೆ ಎಷ್ಟೇ ಹಣ ನೀಡಲು ಸಿದ್ಧರಿದ್ದರೂ, ಕೃಷಿಗೆ ಅಗತ್ಯವಿರುವ ಸಮಯದಲ್ಲಿ ಕಾರ್ಮಿಕರು ಸಿಗುವುದಿಲ್ಲ.

ದೊಡ್ಡ ಜಮೀನ್ದಾರರು ಕಾರ್ಮಿಕರಿಗೆ ಮುಂಗಡ ಹಣ ಅಥವಾ ಇತರ ರೀತಿಯ ವ್ಯವಸ್ಥೆ ಮಾಡಿ ವರ್ಷಪೂರ್ತಿ ಕೆಲಸ ನೀಡುವ ಮೂಲಕ ಕಾರ್ಮಿಕರನ್ನು ತಮ್ಮಲ್ಲಿ ಉಳಿಸಿಕೊಳ್ಳುತ್ತಾರೆ.

ಹಾಗಾದರೆ ಸಣ್ಣ ರೈತರು ಕೃಷಿ ಕೆಲಸ ಮಾಡಿಸುವುದು ಹೇಗೆ?

ಕೃಷಿ ಕಾರ್ಮಿಕರು ನಮ್ಮ ಕೃಷಿಗೆ ಬೆನ್ನೆಲುಬು. ಅವರು ದುಡಿಯುತ್ತಾರೆ; ಅವರ ಕುಟುಂಬದ ಬದುಕಿಗೆ ಸಂಬಳವೇ ಆಧಾರ. ಅವರಿಗೆ ಉತ್ತಮ ವೇತನ ದೊರೆಯಬೇಕು. ಇದರಲ್ಲಿ ಎರಡು ಮಾತಿಲ್ಲ.

ಆದರೆ ರೈತನ ಪರಿಸ್ಥಿತಿಯನ್ನೂ ಯಾರು ಕೇಳಬೇಕು?

ಬೆಳೆ ಹಾನಿಯಾದಾಗ ರೈತನನ್ನು ಕೇಳುವವರು ಯಾರು?
ಮಳೆ ಕೈಕೊಟ್ಟಾಗ?
ಅತಿಮಳೆಯಿಂದ ಬೆಳೆ ಕೊಳೆತಾಗ?
ರೋಗ–ಕೀಟಗಳಿಂದ ನಷ್ಟವಾದಾಗ?
ಮಾರುಕಟ್ಟೆ ದರ ಕುಸಿದಾಗ?

ಸಂಬಳ ನಿಗದಿ ಮಾಡುವಾಗ ಕಾರ್ಮಿಕನ ಮಾತು ಮುಖ್ಯ. ಆದರೆ ಸಂಬಳ ಕೊಡುವ ರೈತನ ಸಾಮರ್ಥ್ಯಕ್ಕೆ ಪಾತ್ರವೇ ಇಲ್ಲವೇ?

“ಸಂಬಳ ಇಷ್ಟು” ಎಂದು ಒಂದು ಕಡೆಯಿಂದ ನಿರ್ಧರಿಸುವುದು ಮಾತ್ರವೇ ನ್ಯಾಯವೇ?

ಈ ಪ್ರಶ್ನೆ ಕೃಷಿ ಕಾರ್ಮಿಕರ ವಿರುದ್ಧವಲ್ಲ. ಕೃಷಿ ವ್ಯವಸ್ಥೆಯಲ್ಲಿ ರೈತ ಮತ್ತು ಕಾರ್ಮಿಕ ಇಬ್ಬರ ಹಿತವನ್ನೂ ಸಮತೋಲನಗೊಳಿಸುವ ವ್ಯವಸ್ಥೆ ಬೇಕು ಎಂಬುದಷ್ಟೇ.

ಇಂದು ಮಲೆನಾಡಿನಲ್ಲಿ ಬಯಲುಸೀಮೆ ಮಾತ್ರವಲ್ಲದೆ ಉತ್ತರ ಮತ್ತು ಈಶಾನ್ಯ ರಾಜ್ಯಗಳಿಂದಲೂ ಕೃಷಿ ಕೂಲಿ ಕಾರ್ಮಿಕರು ಲಭ್ಯರಾಗುತ್ತಿದ್ದಾರೆ. ಈ ಹೊರಗಿನ ಕಾರ್ಮಿಕರ ಲಭ್ಯತೆಯೂ ಮಲೆನಾಡಿನ ಕೃಷಿ ಕೂಲಿ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದೆ.

ಒಂದು ವೇಳೆ ಅಕಸ್ಮಾತ್ತಾಗಿ ಹೊರಗಿನಿಂದ ಮಲೆನಾಡಿಗೆ ಕೃಷಿ ಕೂಲಿ ಕಾರ್ಮಿಕರು ಬರುವುದೇ ನಿಂತುಹೋದರೆ, ಇಂದಿನ ಕೂಲಿ ದರ ಎಷ್ಟಾಗಬಹುದು?

ಐದು ಸಾವಿರ ರೂಪಾಯಿಯನ್ನೂ ದಾಟುತ್ತಿತ್ತೇ?

ಬಹುಶಃ ಆಗ ಮಲೆನಾಡಿನ ರೈತರು ಕೃಷಿ ಕೂಲಿ ಕಾರ್ಮಿಕರನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡಿ, ಸರದಿ ಬರುವವರೆಗೆ ಕಾಯಬೇಕಾದ ಪರಿಸ್ಥಿತಿಯೂ ಬಂದರೂ ಆಶ್ಚರ್ಯವಿಲ್ಲ!

ವಿಷಯ ಹಾಸ್ಯವಲ್ಲ.

ಒಂದು ಕಡೆ ಉತ್ಪನ್ನದ ಬೆಲೆ ರೈತನ ಕೈಯಲ್ಲಿಲ್ಲ. ಇನ್ನೊಂದು ಕಡೆ ಉತ್ಪಾದನಾ ವೆಚ್ಚವೂ ರೈತನ ಕೈಯಲ್ಲಿಲ್ಲ. ಗೊಬ್ಬರ, ಔಷಧಿ, ವಿದ್ಯುತ್, ಯಂತ್ರೋಪಕರಣ, ಕಾರ್ಮಿಕರ ಕೂಲಿ—ಎಲ್ಲವೂ ಹೆಚ್ಚುತ್ತಿವೆ.

ಆದರೆ ರೈತ ಬೆಳೆದ ಉತ್ಪನ್ನದ ಬೆಲೆ?

ಅದು ಮಾರುಕಟ್ಟೆ ನಿರ್ಧರಿಸುತ್ತದೆ.

ಹೀಗಿರುವಾಗ ರೈತನ ಕೃಷಿ ಉಳಿಯಬೇಕಾದರೆ, ರೈತನ ಆದಾಯ ಮತ್ತು ಉತ್ಪಾದನಾ ವೆಚ್ಚದ ನಡುವಿನ ಸಮತೋಲನವನ್ನು ಯಾರು ಕಾಪಾಡಬೇಕು?

ಕೃಷಿ ಕಾರ್ಮಿಕರ ಹಿತ ಕಾಯುವುದು ಎಷ್ಟು ಮುಖ್ಯವೋ, ಕೃಷಿ ಮಾಡುವ ರೈತನ ಹಿತ ಕಾಯುವುದೂ ಅಷ್ಟೇ ಮುಖ್ಯ.

ಕಾರ್ಮಿಕನಿಗೆ ನ್ಯಾಯಯುತ ಕೂಲಿ ಬೇಕು. ರೈತನಿಗೆ ನ್ಯಾಯಯುತ ಬೆಲೆ ಬೇಕು.

ಈ ಎರಡನ್ನೂ ಸಮತೋಲನಗೊಳಿಸುವ ವ್ಯವಸ್ಥೆಯೇ ಕೃಷಿಯ ಭವಿಷ್ಯವನ್ನು ಉಳಿಸಬಲ್ಲದು.

ಇಲ್ಲದಿದ್ದರೆ ಒಂದು ದಿನ ಕೃಷಿ ಉಳಿಯಬಹುದು, ಬೆಳೆ ಉಳಿಯಬಹುದು; ಆದರೆ ಕೃಷಿ ಮಾಡುವ ರೈತನೇ ಉಳಿಯದ ಪರಿಸ್ಥಿತಿ ಬಂದರೆ?

ಇದು ಕೇವಲ ಅಡಿಕೆ ಬೆಳೆಗಾರನ ಪ್ರಶ್ನೆಯಲ್ಲ.

ಇದು ಕೃಷಿ ವ್ಯವಸ್ಥೆಯನ್ನೇ ಕಾಡುತ್ತಿರುವ ಪ್ರಶ್ನೆ.

ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಫಾಲೋಮಾಡಲು ಇಲ್ಲಿ ಕ್ಲಿಕ್‌ ಮಾಡಿ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಪ್ರಬಂಧ ಅಂಬುತೀರ್ಥ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದ ನಿವಾಸಿ ಪ್ರಬಂಧ. ಬಿ ಎ. ವಿಧ್ಯಾಭ್ಯಾಸ ಮುಗಿಸಿದ ಮೇಲೆ ಕೃಷಿ ಕೆಲಸ. ಕಥೆ , ಪರಿಸರ, ಕೃಷಿ , ವಿಜ್ಞಾನ , ಸಾಮಾಜಿಕ ಮತ್ತು ರಾಜಕೀಯ ವಿಚಾರಗಳ ಲೇಖನ ಬರೆಯುವ ಹವ್ಯಾಸ. ಮಲೆನಾಡು ಗಿಡ್ಡ ಗೋ ತಳಿ ಸಂವರ್ಧನೆ, ಜೀರಿಗೆ ಮೆಣಸಿನಕಾಯಿ ಬೆಳೆಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಮಲೆನಾಡು ಗಿಡ್ಡ ತಳಿ ಹಸುಗಳ ಸೆಗಣಿಯನ್ನು ಮೌಲ್ಯ ವರ್ಧನೆ ಮಾಡಿ ಕೃಷಿ ಸ್ನೇಹಿ ಸೂಕ್ಷ್ಮಾಣು ಜೀವಿಯುಕ್ತ ಸಾವಯವ ಗೊಬ್ಬರ ತಯಾರಿಸಿ ಮಾರಾಟ ಮಾಡುವ ಕೆಲಸವನ್ನೂ ಮಾಡುತ್ತಿದ್ದಾರೆ.

Published by
ಪ್ರಬಂಧ ಅಂಬುತೀರ್ಥ

Recent Posts

ಬರ್ಮಾ ಅಡಿಕೆ ಅಕ್ರಮ ಸಾಗಾಟಕ್ಕೆ ಮತ್ತೊಂದು ಹೊಡೆತ

ಮಿಜೋರಾಂನ ಚಂಫೈ ಜಿಲ್ಲೆಯಲ್ಲಿ ಬರ್ಮಾ ಅಡಿಕೆಯನ್ನು ವಶಪಡಿಸಿಕೊಳ್ಳಲಾಗಿದ್ದು, ಮ್ಯಾನ್ಮಾರ್ ಪ್ರಜೆಯೊಬ್ಬ ಸೇರಿದಂತೆ ನಾಲ್ವರನ್ನು…

17 hours ago

ಚಾಮರಾಜನಗರದಲ್ಲಿ ರೈತರಿಗೆ 12 ತಿಂಗಳ ಕೃಷಿ ಸಾಲ ಮರುಪಾವತಿ ಮುಂದೂಡಿಕೆ

ಚಾಮರಾಜನಗರ ಜಿಲ್ಲೆ ಬರಪೀಡಿತ ಎಂದು ಘೋಷಣೆಯಾದ ಹಿನ್ನೆಲೆಯಲ್ಲಿ ಅರ್ಹ ಬೆಳೆ ಸಾಲ ಮತ್ತು…

1 day ago

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 3.0 ತೀವ್ರತೆಯ ಭೂಕಂಪ ದಾಖಲು

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ತಿಮ್ಮೋಜನಹಳ್ಳಿ ಗ್ರಾಮದ ಸಮೀಪ ಶುಕ್ರವಾರ ಬೆಳಿಗ್ಗೆ…

2 days ago

ಹವಾಮಾನ ವರದಿ | 23-10-2026 | ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮತ್ತೆ ಮಳೆಯ ಮುನ್ಸೂಚನೆ

ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ಕೆಲವು ದಿನ…

2 days ago

ಕಿರಾಣಿ ಅಂಗಡಿಯಿಂದ ದಾಳಿಂಬೆ ಕೃಷಿಯತ್ತ ಯಶಸ್ವಿ ಜಿಗಿತ

ಕೊಪ್ಪಳ ಜಿಲ್ಲೆಯ ತುಂಬರಗುದ್ದಿ ಗ್ರಾಮದ ಮಂಜುನಾಥ್ ರಾಮಪ್ಪ ಇಳಿಗೆರ್ ಅವರು ಕಿರಾಣಿ ಅಂಗಡಿಯಿಂದ…

2 days ago

ಕಾಡಿನ ನಡಿಗೆ – ಮನಸ್ಸಿಗೆ ನೆಮ್ಮದಿ, ದೇಹಕ್ಕೆ ಚೈತನ್ಯ..!

ಕಾಡಿನಲ್ಲಿ ಸಮಯ ಕಳೆಯುವುದು ಮಾನಸಿಕ ಒತ್ತಡ ಕಡಿಮೆ ಮಾಡಲು ಮತ್ತು ದೇಹದ ರೋಗನಿರೋಧಕ…

2 days ago