ವಾಣಿಜ್ಯ ಉದ್ದೇಶಕ್ಕಾಗಿ ಅಡಿಕೆ, ಕರಿಮೆಣಸು ಸೇರಿದಂತೆ ಇತರ ವಸ್ತುಗಳನ್ನು ಆಮದು ಮಾಡಿಕೊಳ್ಳಲು ನೇಪಾಳ ಸರ್ಕಾರ ಅನುಮತಿ ನೀಡಿದೆ. ಕೈಗಾರಿಕೆ, ವಾಣಿಜ್ಯ ಮತ್ತು ಸರಬರಾಜು ಸಚಿವಾಲಯವು ನೇಪಾಳ ಗೆಜೆಟ್‌ನಲ್ಲಿ ಈ ಬಗ್ಗೆ ಅಧಿಸೂಚನೆಯನ್ನು ಹೊರಡಿಸಿದ್ದು, ಕಳ್ಳಸಾಗಣೆಯಾಗುತ್ತಿದ್ದ ಈ ವಸ್ತುಗಳ ಆಮದನ್ನು ವ್ಯಾಪಾರಿಗಳಿಗೆ ಅನುಮತಿಸಲಾಗಿದೆ ಎಂದು ಹೇಳಿದೆ. ಇದು ಭಾರತದ ಅಡಿಕೆ ಮಾರುಕಟ್ಟೆ ಮೇಲೆ ಪರಿಣಾಮವಾದೀತೇ ಎಂಬ ಪ್ರಶ್ನೆ ಎದ್ದಿದೆ. ಸದ್ಯ ಯಾವುದೇ ಪರಿಣಾಮವಾಗದೇ ಇದ್ದರೂ ಅಡಿಕೆ ಮಾರುಕಟ್ಟೆ ಭಾರೀ ಏರಿಕೆಯ ನಿರೀಕ್ಷೆ ಸದ್ಯಕ್ಕೆ ಕಷ್ಟ ಎಂದು ಅಂದಾಜಿಸಲಾಗಿದೆ. ಸದ್ಯ ಮಾರುಕಟ್ಟೆಯ ಮೇಲೆ ಯಾವುದೇ ಪರಿಣಾಮ ಬೀರದು.
ನೇಪಾಳದ ವಿದೇಶಿ ವಿನಿಮಯ ಸಂಗ್ರಹವು ಕುಸಿಯುತ್ತಿರುವ ಮತ್ತು ಸರ್ಕಾರವು 1,500 ಕ್ಕೂ ಹೆಚ್ಚು ವಸ್ತುಗಳ ಆಮದನ್ನು ಬಿಗಿಗೊಳಿಸುತ್ತಿರುವ ಸಮಯದಲ್ಲಿ, ಸರ್ಕಾರವು ಕೈಗಾರಿಕಾ ಉದ್ದೇಶಗಳಿಗಾಗಿ ಅಡಿಕೆ ಹಾಗೂ ಇತರ ಕೆಲವು ವಸ್ತುಗಳ ಆಮದನ್ನು ಮುಕ್ತವಾಗಿಸಿ ಅನುಮತಿ ನೀಡಿದೆ. ನೇಪಾಳ ಸರ್ಕಾರ ಅಡಿಕೆಯನ್ನು ಪ್ರತ್ಯೇಕಿಸಿ ಆಮದಿಗೆ ಅವಕಾಶ ಮಾಡಿದೆ.
ನೇಪಾಳದಲ್ಲಿ ಕಡಿಮೆ ಅಡಿಕೆ ಬೆಳೆಯುತ್ತಿದ್ದರೂ ಅತೀ ಹೆಚ್ಚಿನ ಪ್ರಮಾಣದಲ್ಲಿ ಬಾಂಗ್ಲಾ ಸೇರಿದಂತೆ ವಿವಿದೆಡೆಯಿಂದ ಆಮದಾಗಿ ಭಾರತಕ್ಕೆ ರಪ್ತಾಗುತ್ತಿತ್ತು. ಯಾವುದೇ ತೆರಿಗೆ ಇಲ್ಲದೆ ಭಾರತ ಹಾಗೂ ನೇಪಾಳದ ನಡುವೆ ಅಡಿಕೆ ಸಾಗಾಟ ಅಧಿಕೃತವಾಗಿ ನಡೆಯುತ್ತಿತ್ತು. ಹೀಗಾಗಿ ವಿವಿದೆಡೆಯ ಅಡಿಕೆಯು ಭಾರತದೊಳಗೆ ನೇಪಾಳ ಮೂಲಕ ಆಮದಾಗುತ್ತಿತ್ತು. ಕೊರೋನಾ ನಂತರ ದೇಶದ ಎಲ್ಲಾ ಗಡಿಗಳು ಭದ್ರತೆಯಿಂದ ಕೂಡಿದ್ದ ಕಾರಣದಿಂದ ಅಡಿಕೆ ಆಮದು ಕಷ್ಟವಾಯಿತು. ಆದರೆ ನೇಪಾಳ ದಾರಿಯಲ್ಲಿ ಸ್ವಲ್ಪ ಪ್ರಮಾಣದ ಅಡಿಕೆ ಭಾರತಕ್ಕೆ ಬರುತ್ತಿತ್ತು. ಯಾವುದೇ ತೆರಿಗೆ ಇಲ್ಲದೆ ನೇಪಾಳಕ್ಕೂ ನಷ್ಟವಾಗುವ ಹಿನ್ನೆಲೆಯಲ್ಲಿ ಕಳೆದ ಒಂದು ವರ್ಷದಿಂದ ಅಡಿಕೆ ಆಮದು ಹಾಗೂ ರಫ್ತು ಮೇಲೆ ನೇಪಾಳ ಸರ್ಕಾರ ಹಿಡಿತ ಸಾಧಿಸಿ, ನಿರ್ಬಂಧ ಹೇರಿತ್ತು. ಇದರಿಂದ ಭಾರತದ ಅಡಿಕೆ ಮಾರುಕಟ್ಟೆ ಬಿಗುಗೊಂಡು ಧಾರಣೆ ಏರಿಕೆಯ ಹಾದಿಯಲ್ಲಿ ಸಾಗಲೂ ಒಂದು ಕಾರಣವಾಯಿತು.
ಇದೀಗ ತೆರಿಗೆ ಸಹಿತವಾಗಿ ಅಡಿಕೆ ಆಮದಿಗೆ ನೇಪಾಳ ಸರ್ಕಾರ ಅನುಮತಿ ನೀಡಿದೆ. ಹೀಗಾಗಿ ನೇಪಾಳಕ್ಕೆ ಆಮದು ಆಗಿ ತೆರಿಗೆ ಸೇರಿದಂತೆ ಭಾರತಕ್ಕೆ ಮತ್ತೆ ಸಾಗಾಟವಾಗುವ ವೇಳೆಗೆ ಬಹುಪಾಲು ಭಾರತದ ಅಡಿಕೆ ಮಾರುಕಟ್ಟೆಯ ಈಗಿನ ಧಾರಣೆಯೇ ಆಗಿರುತ್ತದೆ. ಹೀಗಾಗಿ ಅಡಿಕೆ ಧಾರಣೆ ಮುಂದೆ ಭಾರೀ ಏರಿಕೆಯ ನಿರೀಕ್ಷೆ ಸದ್ಯಕ್ಕೆ ಕಷ್ಟ ಸಾಧ್ಯವೇ ಎಂಬುದು ಮಾರುಕಟ್ಟೆ ವಲಯದ ಅಭಿಪ್ರಾಯ. ಆದರೆ ಈಗಿನ ಅಡಿಕೆ ಮಾರುಕಟ್ಟೆ, ಧಾರಣೆಯ ಮೇಲೆ ಸದ್ಯ ಯಾವುದೇ ಪರಿಣಾಮ ಬೀರಲಾರದು ಎನ್ನುವುದು ಈಗಿನ ಅಂದಾಜು. ಮಾರುಕಟ್ಟೆ ಕುಸಿತವಾಗದಂತೆ ಈಗಾಗಲೇ ಸಾಕಷ್ಟು ಎಚ್ಚರಿಕೆಗಳನ್ನು ಸರ್ಕಾರವೂ ಕೈಗೊಂಡಿದೆ. ಭಾರತದೊಳಗ್ಗೆ ಅಸ್ಸಾಂ ಗಡಿಯ ಮೂಲಕ ಅಕ್ರಮವಾಗಿ ಅಡಿಕೆ ಆಮದಾಗುತ್ತಿರುವುದು ಬಹುಪಾಲು ಕಡಿಮೆಯಾಗಿದ್ದು, ಇನ್ನೀಗ ಅಧಿಕೃತವಾಗಿ ನೇಪಾಳದ ಮೂಲಕ ಭಾರತದೊಳಕ್ಕೆ ಬರುವ ಅಡಿಕೆಯ ಬಗ್ಗೆ ಮಾತ್ರಾ ಹೆಚ್ಚು ನಿಗಾ ಇಡಬೇಕಾಗಿದೆ ಎನ್ನುವುದು ಮಾರುಕಟ್ಟೆ ತಜ್ಞರ ಅಭಿಪ್ರಾಯ.
ಮಾನಸಿಕ ವಿಕಲಚೇತನರಾಗಿ ಉಡುಪಿಯಲ್ಲಿ ರಸ್ತೆ ಬದಿ ತಿರುಗಾಡುತ್ತಿದ್ದ ಬಿಹಾರದ ರಮಾದೇವಿ ಅವರು ವರ್ಷದ…
ಮಣ್ಣಿನಲ್ಲಿ ಬಿದ್ದ ಬೀಜವು ಜೀವಂತಿಕೆಯಿಂದ ತನ್ನ ಬೇರುಗಳನ್ನು ಸಿಕ್ಕಿದ ಬಿರುಕುಗಳಲ್ಲಿ ಹಬ್ಬಿಸುತ್ತ ತೆವಳುತ್ತ…
ಮುಂದಿನ ಆರ್ಥಿಕ ವರ್ಷದಿಂದ ರಾಜ್ಯದ ಸಾವಯವ ಉತ್ಪನ್ನಗಳ ಮಾರಾಟಕ್ಕೆ ಎಪಿಎಂಸಿಗಳಲ್ಲಿ ಮಾರುಕಟ್ಟೆ ವ್ಯವಸ್ಥೆ…
ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಬಗ್ಗೆ ಅಧ್ಯಯನ ಮಾಡಲು ಶ್ರೀಲಂಕಾದಿಂದ 38 ಮಂದಿ “ಲಂಕಾ…
ಬದಲಾದ ಕಾಲದಲ್ಲಿ ನಾವು ಇಂತಹ ಪರಿಕರಕೊಳ್ಳುವ ಮೊದಲು ನಮಗೆಷ್ಟು ಇದು ಪ್ರಯೋಜನಕಾರಿ ಎಂದು…
ಐತಿಹಾಸಿಕ ಕುಂಭಮೇಳ ನಡೆಯುತ್ತಿರುವ ಪ್ರಯಾಗ್ ರಾಜ್ ನಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧ್ಯಕ್ಷತೆಯಲ್ಲಿ …