ಅಡಿಕೆ ಮಾರುಕಟ್ಟೆ ಸ್ಥಿರತೆಗೆ ಕ್ಯಾಂಪ್ಕೋ ಸತತ ಪ್ರಯತ್ನ ಮಾಡುತ್ತಿದೆ. ಈ ಬಾರಿಯೂ ಅಡಿಕೆ ಮಾರುಕಟ್ಟೆ ತೀರಾ ಕುಸಿಯದಂತೆ ಅಡಿಕೆ ಬೆಳೆಗಾರರ ಪರವಾಗಿ ಕ್ಯಾಂಪ್ಕೋ ನಿಲ್ಲಲಿದೆ, ಯಾವುದೇ ಆತಂಕ ಬೇಡ, ಊಹಾಪೋಹಗಳಿಗೆ ಕಿವಿಗೊಡಬೇಕಾಗಿಲ್ಲ ಎಂದು ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಹೇಳಿದರು.
ಅವರು ಮಂಗಳೂರಿನಲ್ಲಿ ವಿಜಯವಾಣಿ ಪತ್ರಿಕೆ ನಡೆಸಿದ ಅಡಿಕೆ ಮಾರುಕಟ್ಟೆ-ಭವಿಷ್ಯ ಎಂಬ ವಿಷಯದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಡಿಕೆ ಧಾರಣೆ ಕೆಲವು ಕಾರಣಗಳಿಂದ ಇಳಿಕೆಯಾಗುತ್ತಿದೆ. ಅಡಿಕೆ ಮಾರುಕಟ್ಟೆಯಲ್ಲಿ ಸರಬರಾಜು ಹಾಗೂ ಪೂರೈಕೆಯಲ್ಲಿ ಕಳೆದ ಕೆಲವು ಸಮಯಗಳಿಂದ ವ್ಯತ್ಯಾಸ ಇತ್ತು. ಇದೀಗ ಈ ಕಾರಣಗಳಿಂದ ಹಾಗೂ ಅಡಿಕೆ ಕಳ್ಳದಾರಿಯ ಮೂಲಕ ಬರುತ್ತಿರುವುದು ಹಾಗೂ ಅಡಿಕೆ ಬಳಕೆಯ ಪ್ರದೇಶದಲ್ಲಿ ಕೂಡಾ ಕೆಲವು ಪರಿಣಾಮಗಳ ಕಾರಣಗಳಿಂದ ಧಾರಣೆ ಏರಿಕೆ ಕಾಣುತ್ತಿಲ್ಲ. ಆದರೆ ಇದೀಗ ಧಾರಣೆ ಸ್ಥಿರತೆಯ ಹಂತಕ್ಕೆ ಬಂದಿದೆ. ಇನ್ನಷ್ಟು ಕುಸಿತ ಸಾಧ್ಯವಿಲ್ಲ ಎಂದು ಕಿಶೋರ್ ಕುಮಾರ್ ಕೊಡ್ಗಿ ಅಭಿಪ್ರಾಯಪಟ್ಟಿದ್ದಾರೆ.
ಅಡಿಕೆ ಧಾರಣೆಯು ವಿಪರೀತ ಏರಿಕೆ ಆಗಿ ಅದೊಂದು ಫ್ಯಾನ್ಸಿ ಧಾರಣೆ ಆಗಿರುವ ಕಾರಣದಿಂದ ಅಡಿಕೆ ಬೆಳೆ ವಿಸ್ತರಣೆಯಾಗಿದೆ. ಆದರೆ ಈಗ ಬೆಳೆ ವಿಸ್ತರಣೆಯ ಅಡಿಕೆ ಮಾರುಕಟ್ಟೆ ಬಂದಿಲ್ಲ, ಈ ಕಾರಣದಿಂದ ಧಾರಣೆ ಇಳಿಕೆಯೂ ಆಗಿಲ್ಲ. ಸದ್ಯ ತಾತ್ಕಾಲಿಕವಾಗಿ ಮಾರುಕಟ್ಟೆಯಲ್ಲಿ ಸಹಜವಾದ ಏರಿಳಿತ ಕಂಡುಬಂದಿದೆ. ಆದರೆ ಧಾರಣೆ ಮುಂದೆ ಸ್ಥಿರತೆ ಕಾಣಲಿದೆ ಎಂದು ಕಿಶೋರ್ ಕುಮಾರ್ ಕೊಡ್ಗಿ ಹೇಳಿದರು.