ಅಡಿಕೆ ರೇಟು ಏರಿಕೆಯ ಹಾದಿಯಲ್ಲಿದೆ. ಬೆಳೆಗಾರರು ಈಗ ಖುಷ್…! ಯಾವ ಕೃಷಿಯಲ್ಲೂ ಈ ಮಾದರಿಯ ಲಾಭವೂ ಇಲ್ಲ, ನೆಮ್ಮದಿಯೂ ಇಲ್ಲ..! ಇಂತಹ ಭಾವನೆಯೇ ನಾಡಿನಲ್ಲಿ ಬಂದು ಬಿಟ್ಟಿದೆ. ಹೀಗಾಗಿ ಅಡಿಕೆ ಬೆಳೆಯದ, ಅಡಿಕೆ ಗುಣಮಟ್ಟ ಬಾರದ ಪ್ರದೇಶದಲ್ಲೂ ಅಡಿಕೆ ಬೆಳೆ ಆರಂಭವಾಗಿದೆ. ಸ್ವಲ್ಪ ಸ್ವಲ್ಪ ಪ್ರಮಾಣದಲ್ಲಲ್ಲ, ಕನಿಷ್ಟ 5 ಸಾವಿರ ಗಿಡಗಳ ನಾಟಿ ಕಾರ್ಯ ನಡೆಯುತ್ತಿದೆ. ಮುಂದಿನ 10 ವರ್ಷಗಳಲ್ಲಿ ಅಡಿಕೆ ಮಾರುಕಟ್ಟೆ, ಅಡಿಕೆ ಧಾರಣೆ ಹೇಗಿರಬಹುದು ? ಮಾರುಕಟ್ಟೆ ಅಧ್ಯಯನ ನಡೆದಿದೆಯೇ ? ಬೆಳೆಗಾರರು ಯೋಚಿಸಿದ್ದಾರೆಯೇ ? ಹೀಗೊಂದು ಚರ್ಚೆ ಈಗ ಆರಂಭವಾಗುತ್ತಿದೆ.
ಕಳೆದ ಎರಡು ವರ್ಷಗಳಿಂದ ಅಡಿಕೆ ಧಾರಣೆ ಉತ್ತಮವಾಗಿದೆ. ಚಾಲಿ ಅಡಿಕೆ ಹಾಗೂ ಕೆಂಪಡಿಕೆ ಎರಡೂ ಮಾದರಿಯ ಅಡಿಕೆಗೆ ಉತ್ತಮ ಧಾರಣೆ ಲಭ್ಯವಾಗುತ್ತಿದೆ. ಉಳಿದೆಲ್ಲಾ ಕೃಷಿಯಲ್ಲೂ ಅಡಿಕೆಯಷ್ಟು ಲಾಭವೂ ಇಲ್ಲ, ಧಾರಣೆಯೂ ಲಭ್ಯವಿಲ್ಲ ಎನ್ನುವ ಭಾವನೆಯಿಂದ ಎಲ್ಲೆಡೆಯೂ ಅಡಿಕೆ ಕೃಷಿ ನಡೆಯುತ್ತಿದೆ. ಮಲೆನಾಡು ಪ್ರದೇಶದಿಂದ ಆರಂಭವಾಗಿ ಬಯಲುಸೀಮೆಯಲ್ಲೂ ಅಡಿಕೆ ಕೃಷಿ ನಡೆಸಲಾಗುತ್ತಿದೆ. ಸಾಮಾನ್ಯವಾಗಿ ಈ ಹಿಂದೆ ಕೇರಳದ ಅದರಲ್ಲೂ ಬದಿಯಡ್ಕದ ಚಾಲಿ ಅಡಿಕೆಗೆ ಉತ್ತಮ ಧಾರಣೆ ಸಿಕ್ಕಿದರೆ, ಆ ಬಳಿಕ ವಿಟ್ಲ, ಪಾಣಾಜೆ, ಬಾಯಾರು ಪ್ರದೇಶದ ಚಾಲಿ ಅಡಿಕೆಗೆ ಉತ್ತಮ ಧಾರಣೆ ಲಭ್ಯವಾಗುತ್ತಿತ್ತು, ಉತ್ತರ ಭಾರತದ ವ್ಯಾಪಾರಿಗಳು ಇದೇ ಅಡಿಕೆಯನ್ನು ಕೇಳಿ ಪಡೆಯುತ್ತಿದ್ದರು. ಅದೇ ಮಾದರಿಯಲ್ಲಿ ಶಿವಮೊಗ್ಗ, ಸಾಗರ ಪ್ರದೇಶದ ಕೆಂಪಡಿಕೆಗೂ ಅದೇ ಮಾದರಿಯಲ್ಲಿ ಧಾರಣೆ ಲಭ್ಯವಾಗುತ್ತಿತ್ತು. ಮಲೆನಾಡಿನ ಕೆಂಪಡಿಕೆಗೆ ಸಹಜವಾಗಿಯೇ ಉತ್ತಮ ಧಾರಣೆ ಸಿಗುತ್ತಿತ್ತು. ಎರಡೂ ಪ್ರದೇಶದ ಚಾಲಿ ಹಾಗೂ ಕೆಂಪಡಿಕೆ ತಿಂದು ಉಗುಳುವುದು ಬಿಟ್ಟರೆ ಬೇರೆ ಯಾವುದೇ ಉತ್ಪಾದನೆಗೂ ಹೆಚ್ಚಾಗಿ ಬಳಕೆಯಾಗುವುದು ಇದುವರೆಗೂ ಮಾಹಿತಿ ಇಲ್ಲ. ಸನ್ಣ ಪುಟ್ಟ ಉದ್ಯಮಗಳಿಗೆ ಅಡಿಕೆ ಬಳಕೆಯಾದರೂ ದೊಡ್ಡ ಪ್ರಮಾಣದಲ್ಲಿ ಗುಟ್ಕಾ ಹಾಗೂ ಪಾನ್ ಮಸಾಲೆ, ಪಾನ್ ಬೀಡಾ ಗಳಿಗೆ ಬಳಕೆಯಾಗುತ್ತದೆ. ಹಾಗಿದ್ದರೆ ಇಡೀ ದೇಶಕ್ಕೆ ಅಡಿಕೆ ಎಷ್ಟು ಪ್ರಮಾಣದಲ್ಲಿ ಬೇಕಾಗುತ್ತದೆ ? ಮಾರುಕಟ್ಟೆ ಎಷ್ಟು ಇರಬೇಕು ? ವ್ಯಾಪಕಾಗಿ ಅಡಿಕೆ ಬೆಳೆದರೆ ಮುಂದಿನ 10 ವರ್ಷಗಳಲ್ಲಿ ಅಡಿಕೆ ಬೆಳೆಯ, ಮಾರುಕಟ್ಟೆಯ ಪರಿಸ್ಥಿತಿ ಏನು ?
ಮಾಹಿತಿಗಳ ಪ್ರಕಾರ ಅಧಿಕೃತವಾಗಿ ಸಿಪಿಸಿಆರ್ ಐ ಅಂತಹ ಸಂಸ್ಥೆಯ ಮೂಲಕವೇ ವರ್ಷಕ್ಕೆ ಸುಮಾರು .1 ರಿಂದ1.5 ಲಕ್ಷ ಸುಧಾರಿತ, ಹೆಚ್ಚಿನ ಫಸಲು ಬರುವ ಅಡಿಕೆ ಗಿಡಗಳು ಹಾಗೂ ಗಿಡ ಮಾಡಲು ಸುಮಾರು 5 ಲಕ್ಷ ಅಡಿಕೆ ಬೀಜಗಳನ್ನು ರೈತರು ಈಗಾಗಲೇ ಕೊಂಡೊಯ್ಯುತ್ತಿದ್ದಾರೆ, ಇನ್ನು ಉಳಿದ ನರ್ಸರಿಗಳ ಮೂಲಕ ಪ್ರತ್ಯೇಕವಾಗಿ ಗಿಡಗಳ ಮಾರಾಟ ನಡೆಯುತ್ತದೆ. ಹೀಗಾಗಿ ವಾರ್ಷಿಕವಾಗಿ ಸರಾಸರಿ ಸುಮಾರು 7 ಲಕ್ಷ ಗಿಡಗಳು ಅಧಿಕೃತವಾಗಿ ನಾಟಿಯಾದರೆ ಒಟ್ಟಾರೆ ಸುಮಾರು 20-30 ಲಕ್ಷ ಗಿಡಗಳ ನಾಟಿ ನಡೆಯಬಹುದಾಗಿದೆ. ಅದರಲ್ಲೂ ಈಚೆಗೆ ತಮಿಳುನಾಡು ಭಾಗಗಳಲ್ಲೂ ಅಡಿಕೆ ಗಿಡಗಳ ನಾಟಿ ನಡೆಯುತ್ತಿದ್ದು ಒಬ್ಬ ರೈತ ಕನಿಷ್ಟ 5 ಸಾವಿರ ಅಡಿಕೆ ಗಿಡಗಳನ್ನು ಏಕಕಾಲಕ್ಕೆ ನೆಡುತ್ತಿದ್ದಾರೆ. ಇನ್ನು ಬಯಲುಸೀಮೆಯಲ್ಲೂ ಎಕರೆಗಟ್ಟಲೆ ಅಡಿಕೆ ನಾಟಿ ಮಾಡಲಾಗುತ್ತಿದೆ, ಅದೇ ಪ್ರಮಾಣದಲ್ಲಿ ಮಲೆನಾಡು, ದ ಕ ಜಿಲ್ಲೆ, ಉತ್ತರ ಕನ್ನಡದಲ್ಲೂ ಅಡಿಕೆ ತೋಟದ ವಿಸ್ತರಣೆಯಾಗುತ್ತಿದೆ.
ಈಗಾಗಲೇ ಇಡೀ ಪ್ರಪಂಚದ ಅಡಿಕೆ ಬೆಳೆಯನ್ನು ಗಮನಿಸಿದಾಗಲೂ ಭಾರತದಲ್ಲಿ ಗಣನೀಯ ಪ್ರಮಾಣದಲ್ಲಿ ಅಡಿಕೆ ಬೆಳೆ ಏರಿಕೆಯಾಗುತ್ತಿದೆ.ಈಗಿನ ಅಂದಾಜು ಪ್ರಕಾರ ಭಾರತದಲ್ಲಿ 10 ಲಕ್ಷ ಟನ್ ಅಡಿಕೆ ಬೆಳೆಯಲಾಗುತ್ತಿದೆ. ಇಡೀ ಪ್ರಪಂಚದಲ್ಲಿ 10 ಕ್ಕೂ ಹೆಚ್ಚು ದೇಶಗಳಲ್ಲಿ ಅಡಿಕೆ ಬೆಳೆಯಲಾಗುತ್ತಿದೆ, ಅದರಲ್ಲಿ ಭಾರತ ಮೊದಲ ಸ್ಥಾನದಲ್ಲಿದ್ದರೆ ನಂತರ ಬಾಂಗ್ಲಾದೇಶ, ಮ್ಯಾನ್ಮಾರ್, ಇಂಡೋನೇಶ್ಯಾ, ಥೈವಾನ್ ಮೊದಲಾದ ದೇಶಗಳಲ್ಲೂ ಅಡಿಕೆ ಬೆಳೆಯಲಾಗುತ್ತದೆ. ಇಡೀ ಪ್ರಪಂಚದಲ್ಲಿ ಸುಮಾರು 17 ಲಕ್ಷ ಟನ್ ಅಡಿಕೆ ಬೆಳೆಯಲಾಗುತ್ತದೆ. ಆದರೆ ಭಾರತ ಹೊರತುಪಡಿಸಿ ಉಳಿದೆಲ್ಲಾ ದೇಶಗಳಲ್ಲೂ ಅಡಿಕೆ ಬೆಳೆಯಿಂದ ಪರ್ಯಾಯ ಕೃಷಿಯತ್ತ ಜನರು ಗಮನಹರಿಸಿದ್ದಾರೆ, ದಾಖಲೆಗಳ ಪ್ರಕಾರ ಅಡಿಕೆ ಉತ್ಪಾದನೆ ಕಡಿಮೆಯಾಗುತ್ತಿದೆ ಕೆಲವು ದೇಶಗಳಲ್ಲಿ ನಿಧಾನವಾಗಿ ಏರಿಕೆಯಾಗುತ್ತಿದೆ.
ಭಾರತದಲ್ಲಿ ಸಣ್ಣ ಪ್ರಮಾಣದ ಬೆಳೆ ಹೊರತುಪಡಿಸಿ ಸುಮಾರು 10 ರಾಜ್ಯಗಳಲ್ಲಿ ಅಡಿಕೆ ಬೆಳೆಯಲಾಗುತ್ತದೆ. ಅದರಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಶೇ.63 ರಷ್ಟು ಪ್ರಮಾಣದ ಅಡಿಕೆ ರಾಜ್ಯದಲ್ಲಿಯೇ ಬೆಳೆದರೆ ಉಳಿದಂತೆ ಕೇರಳ, ಅಸ್ಸಾಂ ಮೊದಲಾದ ರಾಜ್ಯಗಳಲ್ಲಿ ಬೆಳೆಯಲಾಗುತ್ತಿದೆ. ಈಚೆಗೆ ತಮಿಳುನಾಡಿನಲ್ಲೂ ಗಣನೀಯ ಪ್ರಮಾಣದಲ್ಲಿ ಅಡಿಕೆ ಬೆಳೆಯಾಗುತ್ತಿದೆ.
ದೇಶದಲ್ಲಿ ಬೆಳೆಯುವ ಅಡಿಕೆಗೆ ಸದ್ಯ ದೇಶದಲ್ಲೇ ಮಾರುಕಟ್ಟೆ ಲಭ್ಯವಿದೆ. ಉತ್ತರಭಾರತದಲ್ಲಿ , ಗುಜರಾತ್ ಭಾಗದಲ್ಲಿ ಅಡಿಕೆಗೆ ಹೆಚ್ಚಿನ ಬೇಡಿಕೆ ಇದೆ. ಕೇವಲ ಅಡಿಕೆ ಜಗಿದು ತಿನ್ನುವುದಕ್ಕೆ ಬಳಕೆಯಾಗುತ್ತಿದೆ. ಚಳಿ ಪ್ರದೇಶದಲ್ಲಿ ಮೈ ಬಿಸಿಯಾಗಿಸಲು ಕೆಲವು ಮಂದಿ ಅಡಿಕೆ ಜಗಿಯುವ ಅಭ್ಯಾಸ ಮಾಡಿದ್ದಾರೆ, ಉಳಿದಂತೆ ಗುಟ್ಕಾ, ಪಾನ್ ಮಸಾಲಾಗಳಿಗೆ , ಪಾನ್ ಬೀಡಾ ಅಂಗಡಿಗಳಲ್ಲೂ ಅಡಿಕೆ ಮಾರಾಟವಾಗುತ್ತದೆ. ಆದರೆ ವರ್ಷದಿಂದ ವರ್ಷಕ್ಕೆ ಅಡಿಕೆ ತಿನ್ನುವ ಮಂದಿ ಕಡಿಮೆಯಾಗುತ್ತಿದ್ದಾರೆ ಎನ್ನುತ್ತದೆ ಅಧ್ಯಯನ ವರದಿ.
ಭಾರತದ ಅಡಿಕೆ ಮಾರುಕಟ್ಟೆ ಹೊರತುಪಡಿಸಿ ಉಳಿದ ದೇಶಗಳಲ್ಲಿ ಗುಣಮಟ್ಟ ಕಡಿಮೆ ಇರುವ ಅಡಿಕೆ ಬೆಳೆಯಲಾಗುತ್ತಿದೆ. ಅಲ್ಲಿನ ಅಡಿಕೆಗಳು ಸುಮಾರು 250 ರೂಪಾಯಿ ಆಸುಪಾಸಿಗೆ ಭಾರತದ ಮಾರುಕಟ್ಟೆಗೆ ಈ ಹಿಂದೆ ಪ್ರವೇಶ ಮಾಡುತ್ತಿತ್ತು. ಇದಕ್ಕಾಗಿ ಸರಕಾರಗಳು ಆಮದು ದರ ಏರಿಕೆ, ಆಮದು ಸುಂಕ ಏರಿಕೆ ಇತ್ಯಾದಿಗಳ ಕಾರಣದಿಂದ ಸದ್ಯ ಅಡಿಕೆ ಭಾರತಕ್ಕೆ ಆಮದು ಅಗುವ ವೇಳೆಗೆ 250 ರೂಪಾಯಿ ತಗಲುತ್ತಿತ್ತು. ಹೀಗಾಗಿ ಭಾರತದ ಅಡಿಕೆಯೂ ಅದೇ ಧಾರಣೆಯಲ್ಲಿ ಕಳೆದ ಹಲವು ಸಮಯಗಳಿಂದ ಇತ್ತು. ಈಚೆಗೆ ಕೊರೋನಾ ಲಾಕ್ಡೌನ್ ಕಾರಣದಿಂದ ಭಾರತದ ಅಡಿಕೆ ಮಾತ್ರಾ ಲಭ್ಯ ಇರುವುದರಿಂದ ಧಾರಣೆ ಏರಿಕೆಯಾಗಿದೆ. ಈ ಧಾರಣೆ ಸದ್ಯ ಏರಿಕೆಯಲ್ಲಿ, ಇನ್ನೂ ಏರಿಕೆಯಾಗಲಿದೆ. ಕೊರೋನಾ ಲಾಕ್ಡೌನ್ ನಂತರ, ಆಮದು ಪ್ರಕ್ರಿಯೆಗಳು ಸರಾಗವಾದ ಬಳಿಕ ಅಡಿಕೆ ಮಾರುಕಟ್ಟೆ ಸ್ಥಿತಿ ಏನು ಎಂದು ತಜ್ಞರು ಕೂಡಾ ಈಗ ಹೇಳುತ್ತಿಲ್ಲ.
ಸರಕಾರಗಳು ಕೂಡಾ ಅಡಿಕೆ ಬೆಳೆಗೆ ಹೆಚ್ಚಿನ ಪ್ರೋತ್ಸಾಹ ಈಗಾಗಲೇ ನೀಡುತ್ತಿಲ್ಲ, ಅಡಿಕೆ ಬೆಳೆಯುವ ಪ್ರದೇಶದ ಬೆಳೆಗಾರರ ಮತ ಗಳಿಸಲು ರಾಜಕೀಯ ಪಕ್ಷಗಳು ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. ಹಿಂದೊಮ್ಮೆ ಅಡಿಕೆ ಕೊಳೆರೋಗ ವ್ಯಾಪಕವಾಗಿ ಭಾರೀ ನಷ್ಟ ಅನುಭವಿಸಿದಾಗ ಅದೂ ಒಂದು ರಾಜಕೀಯ ಇಶ್ಯೂ ಆಗಿತ್ತು, ಅದಾದ ಇನ್ನೊಂದು ವರ್ಷ ಪರಿಹಾರವೂ ನೀಡಿತ್ತು ಸರಕಾರ. ಆ ಬಳಿಕ ಯಾವುದೇ ಸಹಕಾರಗಳೂ ಅಡಿಕೆಗೆ ಲಭ್ಯವಾಗುತ್ತಿಲ್ಲ. ಕೇವಲ ಬೆಳೆವಿಮೆ, ಸಹಾಯಧನಗಳನ್ನು ಹೊರತುಪಡಿಸಿ. ಅಡಿಕೆ ಸಂಶೋಧನಾ ಸಂಸ್ಥೆಗಳೂ ಹೊಸ ಅಧ್ಯಯನದಲ್ಲಿ ನಿರತವಾಗಲು ಅನುದಾನಗಳೂ ಕಡಿಮೆ ಬಿಡುಗಡೆಯಾಗುತ್ತಿದೆ. ಇನ್ನೊಂದು ಕಡೆ ಅಡಿಕೆ ಮೇಲೆ ತೂಗುಗತ್ತಿ ಸದಾ ಇದೆ. ಈಗಲೂ ನ್ಯಾಯಾಲಯದಲ್ಲಿಯೇ ಆ ಪ್ರಕರಣ ಓಡಾಡುತ್ತಿದೆ. ಅಡಿಕೆ ಆರೋಗ್ಯಕ್ಕೆ ಹಾನಿಕಾರಕ ಎಂಬ ಸಂದೇಶ ಆಗಾಗ ಮಾಧ್ಯಮಗಳ ಮೂಲಕ ಬೆನ್ನು ಬಿಡದೆ ಕಾಡುತ್ತಿದೆ. ಆ ಸಮಯದಲ್ಲಿ ದೊಡ್ಡ ಸುದ್ದಿಯಾಗಿ ನಂತರ ಸದ್ದಿಲ್ಲದೇ ಮರೆಯಾಗುವ ಈ ಅಂಶದ ಬಗ್ಗೆ ಇಂದಿಗೂ ಸುದೀರ್ಘ ಸಂಶೋಧನೆಯೇ ನಡೆಯಲಿಲ್ಲ. ಹೀಗಾಗಿ ಅಡಿಕೆಯ ಭವಿಷ್ಯ ಏನು ಎಂಬುದೂ ಸ್ಪಷ್ಟವಿಲ್ಲ. ಹಾಗೆಂದು ಈಗಾಗಲೇ ಅಡಿಕೆ ಬೆಳೆಯುವ ಪ್ರದೇಶಗಳಲ್ಲಿ ಅಡಿಕೆಗೆ ಪರ್ಯಾಯ ಯಾವುದೂ ಎಂಬುದೂ ದೊಡ್ಡ ಪ್ರಶ್ನೆ?.
ಇಷ್ಟೆಲ್ಲಾ ಸಂಗತಿಗಳ ನಡುವೆಯೂ ಈಗಾಗಲೇ ಭಾರತದಲ್ಲಿ ಮಾತ್ರವೇ ಹೆಚ್ಚಿನ ಪ್ರಮಾಣದಲ್ಲಿ ಅಡಿಕೆ ಬೆಳೆಯುತ್ತಿರುವಾಗ ಮತ್ತು ವೇಗವಾಗಿ ವಿಸ್ತರಣೆಯಾಗುತ್ತಿರುವಾಗ ಅಡಿಕೆ ಬೆಳೆ ವಿಸ್ತರಣೆ ಹಾಗೂ ಅಡಿಕೆ ಮಾರುಕಟ್ಟೆ ಬಗ್ಗೆ ಚಿಂತನೆಯನ್ನು ಕೃಷಿಕರೇ ನಡೆಸಬೇಕಿದೆ. ಈಗಿನ ಮಾರುಕಟ್ಟೆ ಗಮನಿಸಿ ಕೃಷಿ ಬದಲಾವಣೆ, ರಬ್ಬರ್ ಕಡಿದು ಅಡಿಕೆ ಬೆಳೆ, ಬೇರೆ ಬೆಳೆ ನಾಶ ಮಾಡಿ ಅಡಿಕೆ ಬೆಳೆ ಮಾಡುವುದಕ್ಕೂ ಮುನ್ನ ಅಧ್ಯಯನ ನಡೆಸಬೇಕಿದೆ. ಸಂಸ್ಥೆಗಳು ಈ ಕಡೆಗೂ ಹೆಚ್ಚಿನ ಗಮನ ನೀಡಬೇಕಾದ ಅವಶ್ಯಕತೆ ಇದೆ.
ಸರಕಾರಗಳು ಕೂಡಾ ಭವಿಷ್ಯದಲ್ಲಿ ಕೃಷಿ ಕ್ಷೇತ್ರ ಉಳಿಸುವ ದೃಷ್ಟಿಯಿಂದ ಗಮನಿಸಬೇಕಾದ್ದು ಅಗತ್ಯವಿದೆ. ಇಂದು ಬಯಲುಸೀಮೆ ಹಾಗೂ ಮಲೆನಾಡಿನ ಹಲವು ಪ್ರದೇಶಗಳಲ್ಲಿ ಅಡಿಕೆ ಬೆಳೆ ಕಡೆಗೆ ಕೃಷಿ ಬದಲಾವಣೆಗೆ ಕಾರಣ, ಲಾಭದಾಯಕ ಎನ್ನುವ ಕಾರಣ ಒಂದೇ. ಖರ್ಚು, ಶ್ರಮ ಎರಡೂ ಕಡಿಮೆ ಎನ್ನುವ ಕಾರಣದಿಂದ.
ಭತ್ತ ಬೆಳೆಯುವ ರೈತ ತನ್ನ ಕೈಯಿಂದಲೇ ನಷ್ಟ ಮಾಡಿಕೊಳ್ಳುವ ಪರಿಸ್ಥಿತಿ ಇದೆ. ಹೀಗೇ ನಷ್ಟವಾಗುವ ಕಾರಣದಿಂದ ಕರ್ನಾಟಕ ಮಾತ್ರವಲ್ಲ ತಮಿಳುನಾಡಿನಲ್ಲೂ ಅಡಿಕೆ ಬೆಳೆಗೆ ಶಿಪ್ಟ್ ಆಗುತ್ತಿರುವುದು. ಈಗ ಇಂತಹ ಕೃಷಿಕರು ತಮ್ಮ ಮನೆಗೆ ಆಗುವಷ್ಟು ಭತ್ತ ಮತ್ತು ತಮ್ಮ ಜಾನುವಾರುಗಳಿಗೆ ಬೇಕಾಗುವ ಭತ್ತದ ಬೆಳೆದುಕೊಂಡು ಉಳಿದ ಭೂಮಿಯಲ್ಲಿ ವಾಣಿಜ್ಯ ಬೆಳೆಗಳಿಗೆ ಮೊರೆ ಹೋಗುತ್ತಿದ್ದಾರೆ.ಸಕ್ಕರೆ ಕಾರ್ಖಾನೆಗಳು ಹತ್ತಿರ ಇರುವ ಕೃಷಿ ಪ್ರದೇಶಗಳಲ್ಲಿ ಕಬ್ಬು , ಶುಂಠಿಗೆ ಬೆಳೆಯುತ್ತಿದ್ದಾರೆ. ಈಗ ವಿಸ್ತಾರವಾಗಿ ಅಡಿಕೆಯನ್ನೂ ಬೆಳೆಯುತ್ತಿದ್ದಾರೆ. ಭತ್ತದ ಗದ್ದೆಗಳು ಒಮ್ಮೆ ಅಡಿಕೆ ಅಥವಾ ಬೇರೆ ಕೃಷಿಗೆ ವರ್ಗಾವಣೆಯಾದರೆ ಅದು ದೀರ್ಘಾವಧಿ ಕೃಷಿಯಾಗುತ್ತದೆ, ನಂತರ ಯಾವುದೇ ಕಾರಣಕ್ಕೂ ಭತ್ತದ ಕೃಷಿಗೆ ಮರಳಲು ಸಾದ್ಯವಿಲ್ಲ. ಇದಕ್ಕಾಗಿ ಸರಕಾರಗಳೂ ಗಮನಿಸಬೇಕು, ಸಂಸ್ಥೆಗಳೂ ಗಮನಿಸಬೇಕು. ಸರಕಾರ ಭತ್ತ ಸೇರಿದಂತೆ ಇತರ ಬೆಳೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲು ಮುಂದಾಗಬೇಕು.
ನಮ್ಮ YouTube ಚಾನೆಲ್ Subscribe ಮಾಡಿರಾಜ್ಯ ಬಜೆಟ್ 2026-27ರಲ್ಲಿ ರೈತರಿಗೆ ಕೃಷಿ, ತೋಟಗಾರಿಕೆ, ಮೀನುಗಾರಿಕೆ ಹಾಗೂ ಗ್ರಾಮೀಣ ಅಭಿವೃದ್ಧಿಗೆ…
ರಾಜ್ಯ ಬಜೆಟ್ 2026-27ರಲ್ಲಿ ಕೃಷಿ, ತೋಟಗಾರಿಕೆ ಮತ್ತು ಮೀನುಗಾರಿಕೆ ಕ್ಷೇತ್ರಗಳಿಗೆ ಹಲವು ಹೊಸ…
ಕರಾವಳಿ ಜಿಲ್ಲೆಗಳಲ್ಲಿ ಮಧ್ಯಾಹ್ನದ ಬಳಿಕ ಮೋಡದ ವಾತಾವರಣ ಹೆಚ್ಚಾಗುವ ಸಾಧ್ಯತೆ ಇದೆ. ಘಟ್ಟದ…
ಕರ್ನಾಟಕದಲ್ಲಿ ಮುಂದಿನ ಕೆಲವು ದಿನಗಳವರೆಗೆ ಒಣ ಹವಾಮಾನ ಮುಂದುವರಿಯುವ ಸಾಧ್ಯತೆ ಇದೆ. ಗುಜರಾತ್…
ಇಂದಿನ ಅಡಿಕೆ ಮಾರುಕಟ್ಟೆಯಲ್ಲಿ ಪಿಂಗಾರ, ಮಾಸ್, ಟಿಎಸ್‌ಎಸ್, ತುಮ್ಕೋಸ್, ಮ್ಯಾಮ್ಕೋಸ್ ಹಾಗೂ ಕ್ಯಾಂಪ್ಕೊ…
ಕಾಡಾನೆ ಹಾವಳಿ ನಿಯಂತ್ರಣಕ್ಕಾಗಿ ಕರ್ನಾಟಕ ಸರ್ಕಾರ 28 ಸಿಬ್ಬಂದಿಯ ಎಲಿಫೆಂಟ್ ಟಾಸ್ಕ್ ಫೋರ್ಸ್…