Advertisement
MIRROR FOCUS

ಅಡಿಕೆ ಮಾರುಕಟ್ಟೆಯಲ್ಲಿ ಆತಂಕದ ತಿರುವು..! ಧಾರಣೆ ಇಳಿಕೆ ಯಾಕೆ..? ಮತ್ತೆ ಏರಿಕೆಯಾಗುತ್ತದಾ..? ಬೆಳೆಗಾರರಲ್ಲಿ ಹೆಚ್ಚಿದ ಕುತೂಹಲ

Share

ಚಾಲಿ ಅಡಿಕೆ ಮಾರುಕಟ್ಟೆ ಕಳೆದ ಕೆಲವು ದಿನಗಳಿಂದ ಅನಿರೀಕ್ಷಿತ ಏರಿಳಿತ ಕಾಣುತ್ತಿದ್ದು, ಇದೀಗ ಅಡಿಕೆ ಬೆಳೆಗಾರರಲ್ಲಿ ಮತ್ತೆ ಆತಂಕದ ವಾತಾವರಣ ನಿರ್ಮಾಣವಾಗಿದೆ. ಸಾಮಾನ್ಯವಾಗಿ ಏಪ್ರಿಲ್‌-ಮೇ ತಿಂಗಳಲ್ಲಿ ಅಡಿಕೆ ಧಾರಣೆ ಏರಿಕೆ ಕಾಣಬೇಕಾದ ಸಮಯ. ಆದರೆ ಈ ಬಾರಿ ಮಾರುಕಟ್ಟೆ ಟ್ರೆಂಡ್‌ ಬದಲಾಗಿದ್ದು, ಮೇ 12 ರ ನಂತರ ಚಾಲಿ ಅಡಿಕೆ ಧಾರಣೆ ನಿಧಾನವಾಗಿ ಇಳಿಕೆಗೆ ತಿರುಗಿರುವುದು ಬೆಳೆಗಾರರಲ್ಲಿ ಪ್ರಶ್ನೆ ಹುಟ್ಟಿಸಿದೆ.

ಈ ವರ್ಷ ಇಳುವರಿ ಕುಸಿತದಿಂದಲೇ ಸಂಕಷ್ಟ ಎದುರಿಸುತ್ತಿರುವ ರೈತರಿಗೆ, ಕೆಲವು ತಿಂಗಳ ಹಿಂದೆ ಕಂಡ ಧಾರಣೆ ಏರಿಕೆ ಕೊಂಚ ನಿರಾಳತೆ ತಂದಿತ್ತು. ಆದರೆ ಇದೀಗ ಮತ್ತೆ ಧಾರಣೆ ಕುಸಿತದ ಹಾದಿ ಹಿಡಿದಿರುವುದು ಬೆಳೆಗಾರರ ಆತಂಕ ಹೆಚ್ಚಿಸಿದೆ. ವಿಶೇಷವಾಗಿ ಮಾರ್ಚ್‌-ಮೇ ಅವಧಿ ಅಡಿಕೆ ತೋಟ ನಿರ್ವಹಣೆಗೆ ಅತ್ಯಂತ ಪ್ರಮುಖ ಸಮಯವಾಗಿದ್ದು, ಗೊಬ್ಬರ, ಔಷಧಿ ಸಿಂಪಡಣೆ, ಕಳೆ ತೆಗೆಯುವುದು ಸೇರಿದಂತೆ ಹಲವು ತುರ್ತು ಖರ್ಚುಗಳು ಇದೇ ಅವಧಿಯಲ್ಲಿ ಎದುರಾಗುತ್ತವೆ. ಈ ಸಂದರ್ಭ ಉತ್ತಮ ಧಾರಣೆ ಲಭಿಸದಿದ್ದರೆ ರೈತರ ಆರ್ಥಿಕ ಚಕ್ರವೇ ಅಸ್ತವ್ಯಸ್ತವಾಗುವ ಭೀತಿ ಇದೆ.

ಅಡಿಕೆ ಧಾರಣೆ ಏಕಾಏಕಿ ಇಳಿಕೆಗೆ ಕಾರಣವೇನು..? :  ಮಾರುಕಟ್ಟೆ ವಲಯದ ಮಾಹಿತಿ ಪ್ರಕಾರ, ಪಶ್ಚಿಮ ಬಂಗಾಳ ಹಾಗೂ ಅಸ್ಸಾಂ ಚುನಾವಣೆಯ ಅವಧಿಯಲ್ಲಿ ಇಂಡೋನೇಷ್ಯಾ ಮತ್ತು ಬರ್ಮಾ ದೇಶಗಳಿಂದ ಅಡಿಕೆ ಆಮದು ಹೆಚ್ಚಾಗಿದೆ ಎನ್ನಲಾಗುತ್ತಿದೆ. ಈಗಾಗಲೇ ಇಂಡೋನೇಷ್ಯಾದ “ಇಂಡೋಫಾಲಿ” ಅಡಿಕೆ ಹಾಗೂ ಬರ್ಮಾದ “ಗೋಟಾ” ಅಡಿಕೆ ದೊಡ್ಡ ಪ್ರಮಾಣದಲ್ಲಿ ದಾಸ್ತಾನು ಆಗಿರುವುದರಿಂದ ಸ್ಥಳೀಯ ಚಾಲಿ ಅಡಿಕೆಗೆ ಒತ್ತಡ ಎದುರಾಗಿದೆ.

ಸದ್ಯ ಬರ್ಮಾ ಹಾಗೂ ಇಂಡೋನೇಷ್ಯಾ ಅಡಿಕೆ ₹370 ರಿಂದ ₹400 ದರದೊಳಗೆ ಮಾರುಕಟ್ಟೆಗೆ ಬರುತ್ತಿದ್ದು, ಇದರಿಂದ ಸ್ಥಳೀಯ ಚಾಲಿ ಅಡಿಕೆ ಧಾರಣೆ ಏರಿಕೆಗೆ ಅಡ್ಡಿಯಾಗುತ್ತಿದೆ ಎನ್ನಲಾಗಿದೆ.

ಉತ್ತರ ಭಾರತದಲ್ಲಿ ಗುಣಮಟ್ಟಕ್ಕಿಂತ ಕಡಿಮೆ ಬೆಲೆಯ ಅಡಿಕೆ ಖರೀದಿಗೆ ಹೆಚ್ಚು ಒಲವು ಹಾಗೂ ಈ ಬಾರಿಯ ಆಮದು ಅಡಿಕೆ ಗುಣಮಟ್ಟ ತೀರಾ ಕಳಪೆ ಆಗದೇ ಇರುವುದು ಕೂಡಾ ಕಂಡುಬರುತ್ತಿರುವುದು ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆಯ ಮೇಲೂ ಪರಿಣಾಮ ಬೀರಿದೆ. “ಅಡಿಕೆ ಯಾವುದಾದರೂ ಸರಿ, ಕಡಿಮೆ ಬೆಲೆ ಸಾಕು” ಎನ್ನುವ ಟ್ರೆಂಡ್‌ ಸದ್ಯ ಮಾರುಕಟ್ಟೆಯಲ್ಲಿ ಗೋಚರಿಸುತ್ತಿದೆ.

ಸಹಕಾರಿ ಸಂಸ್ಥೆಗಳ ಮೇಲೂ ಒತ್ತಡ..! :  ಮಾರುಕಟ್ಟೆ ಮೂಲಗಳ ಪ್ರಕಾರ, ಸಹಕಾರಿ ಸಂಸ್ಥೆಗಳು ಈಗಾಗಲೇ ಖರೀದಿ ಮಾಡಿರುವ ಅಡಿಕೆ ಸರಾಗವಾಗಿ ಮಾರಾಟವಾಗದೇ ಇರುವುದರಿಂದ ಅವುಗಳ ಮೇಲೂ ಒತ್ತಡ ಹೆಚ್ಚಾಗಿದೆ. ಹೀಗಾಗಿ ಚಾಲಿ ಅಡಿಕೆ ಧಾರಣೆ ಏರಿಕೆಗೆ ಸಹಕಾರಿ ಸಂಸ್ಥೆಗಳು ಇನ್ನೂ ಮುಂದಾಗಿಲ್ಲ ಎನ್ನಲಾಗಿದೆ. ಆದರೆ ಖಾಸಗಿ ಮಾರುಕಟ್ಟೆಯಲ್ಲಿ ಅಡಿಕೆಗೆ ಬೇಡಿಕೆ ಮುಂದುವರಿದಿದ್ದರೂ, ಅಧಿಕೃತ ಧಾರಣೆ ಏರಿಕೆ ಕಾಣದ ಕಾರಣ ಮಾರುಕಟ್ಟೆ ಸ್ಥಿತಿ ನಿಧಾನಗೊಂಡಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಇನ್ನೂ 15-20 ದಿನ ಇದೇ ಟ್ರೆಂಡ್‌..? : ‌ ಸದ್ಯದ ಮಾರುಕಟ್ಟೆ ಟ್ರೆಂಡ್ ಅಭಿಪ್ರಾಯ ಪ್ರಕಾರ, ಮುಂದಿನ 15-20 ದಿನಗಳವರೆಗೆ ಇದೇ ಟ್ರೆಂಡ್‌ ಮುಂದುವರಿಯುವ ಸಾಧ್ಯತೆ ಇದೆ. ಆದರೆ ಬರ್ಮಾ ಹಾಗೂ ಇಂಡೋನೇಷ್ಯಾ ಅಡಿಕೆ ದಾಸ್ತಾನು ಕಡಿಮೆಯಾಗುವ ಹಂತಕ್ಕೆ ಬಂದ ಬಳಿಕ ಮತ್ತೆ ಧಾರಣೆ ಚೇತರಿಕೆ ಕಾಣುವ ನಿರೀಕ್ಷೆಯೂ ವ್ಯಕ್ತವಾಗಿದೆ. ಇದೀಗ ಪಶ್ಚಿಮ ಬಂಗಾಳ ಹಾಗೂ ಅಸ್ಸಾಂ ಚುನಾವಣೆ ಬಳಿಕ ಗಡಿ ಭದ್ರತೆ ಕಠಿಣಗೊಳ್ಳುತ್ತಿರುವುದರಿಂದ ಅಕ್ರಮ ಅಡಿಕೆ ಸಾಗಾಟಕ್ಕೂ ನಿಯಂತ್ರಣ ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಸರ್ಕಾರಗಳ ಪಾತ್ರ ಈಗ ಬಹುಮುಖ್ಯ : ಸದ್ಯದ ಪರಿಸ್ಥಿತಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಪಾತ್ರ ಅತ್ಯಂತ ಮಹತ್ವ ಪಡೆದುಕೊಂಡಿದೆ. ಅಡಿಕೆ ಆಮದು ನಿಯಂತ್ರಣ, ಅಕ್ರಮ ಸಾಗಾಟ ಹಾಗೂ ಕಳ್ಳಸಾಗಾಣಿಕೆ ತಡೆಯ ಬಗ್ಗೆ ಈಶಾನ್ಯ ರಾಜ್ಯಗಳಲ್ಲಿ ತಕ್ಷಣದ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ರೈತ ವಲಯದಿಂದ ಕೇಳಿಬರುತ್ತಿದೆ.

ವಿಶೇಷವಾಗಿ ಗಡಿ ಪ್ರದೇಶಗಳ ಮೂಲಕ ನಡೆಯುತ್ತಿರುವ ಅಕ್ರಮ ಅಡಿಕೆ ಸಾಗಾಟದ ಮೇಲೆ ಕಟ್ಟುನಿಟ್ಟಿನ ನಿಗಾ ಅಗತ್ಯವಿದೆ ಎನ್ನಲಾಗುತ್ತಿದೆ. ಕೇಂದ್ರ ಸರ್ಕಾರ ಕೂಡಾ ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡಿ ಅಕ್ರಮ ಅಡಿಕೆ ಆಮದು ಹಾಗೂ ಕಳ್ಳಸಾಗಾಣಿಕೆ ವಿರುದ್ಧ ಕಠಿಣ ನಿಲುವು ತೆಗೆದುಕೊಳ್ಳಬೇಕೆಂಬ ಆಗ್ರಹ ಹೆಚ್ಚಾಗಿದೆ.

ಅಡಿಕೆ ಬೆಳೆಯುವ ರಾಜ್ಯಗಳ ಸಂಸದರು, ಜನಪ್ರತಿನಿಧಿಗಳು ಹಾಗೂ ರೈತಪರ ಸಂಘಟನೆಗಳು ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡು ಕೇಂದ್ರದ ಗಮನ ಸೆಳೆಯಬೇಕಾಗಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ.

“ಚಾಲಿ ಅಡಿಕೆಗೆ ಬೇಡಿಕೆ ಇದೆ.. ಆದರೆ..!” : ಮಾರುಕಟ್ಟೆ ವಲಯದ ಪ್ರಕಾರ ಚಾಲಿ ಅಡಿಕೆಗೆ ಬೇಡಿಕೆ ಇನ್ನೂ ಇದೆ. ಆದರೆ ಅನಿರೀಕ್ಷಿತ ಆಮದು, ದಾಸ್ತಾನು ಒತ್ತಡ ಹಾಗೂ ಮಧ್ಯವರ್ತಿಗಳ ಲಾಭದ ಲೆಕ್ಕಾಚಾರದಿಂದ ಸದ್ಯ ಮಾರುಕಟ್ಟೆ ಟ್ರೆಂಡ್‌ ಬದಲಾಗಿದೆ. ಕೆಲವು ದಿನಗಳ ಬಳಿಕ ಮತ್ತೆ ಧಾರಣೆ ಏರಿಕೆಯಾಗುವ ನಿರೀಕ್ಷೆ ರೈತ ವಲಯದಲ್ಲಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಶಿವಮೊಗ್ಗದಲ್ಲಿ ಸರಕು ಅಡಿಕೆಗೆ ಭರ್ಜರಿ ದರ : ಇದೇ ನಡುವೆ ಶಿವಮೊಗ್ಗ ಎಪಿಎಂಸಿ ಮಾರುಕಟ್ಟೆಯಲ್ಲಿ ಸರಕು ಅಡಿಕೆ ಗರಿಷ್ಠ ₹99,239 ದರ ತಲುಪಿ ಗಮನ ಸೆಳೆದಿದೆ. ರಾಶಿ ಅಡಿಕೆಗೂ ಉತ್ತಮ ಬೇಡಿಕೆ ದಾಖಲಾಗಿದ್ದು, ಗುಣಮಟ್ಟದ ಸರಕುಗಳಿಗೆ ವ್ಯಾಪಾರಿಗಳಿಂದ ಭಾರೀ ಪೈಪೋಟಿ ಕಂಡುಬಂದಿದೆ.

ಬೆಟ್ಟೆ ಅಡಿಕೆಗೆ ₹66 ಸಾವಿರದ ಗಡಿ ದಾಟಿದ ವ್ಯಾಪಾರ ದಾಖಲಾಗಿದ್ದು, ಮಲೆನಾಡು ಭಾಗದ ರೈತರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.

TUMCOS, MAMCOS ಮಾರುಕಟ್ಟೆಯಲ್ಲೂ ಚಟುವಟಿಕೆ :  ಚನ್ನಗಿರಿಯ TUMCOS ಹಾಗೂ MAMCOS ಮಾರುಕಟ್ಟೆಗಳಲ್ಲಿ ಹೊಸ ಹಾಗೂ ಹಳೆಯ ಅಡಿಕೆ ಎರಡಕ್ಕೂ ಉತ್ತಮ ಬೇಡಿಕೆ ದಾಖಲಾಗುತ್ತಿದೆ. ಮುಂಗಾರು ಪೂರ್ವ ಮಳೆಯ ನಡುವೆಯೂ ರೈತರು ಅಡಿಕೆ ಮಾರಾಟಕ್ಕೆ ಆಸಕ್ತಿ ತೋರಿಸುತ್ತಿರುವುದು ಮಾರುಕಟ್ಟೆಯಲ್ಲಿ ಚಟುವಟಿಕೆ ಹೆಚ್ಚಿಸಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

Arecanut prices in Karnataka have shown unexpected fluctuations, causing concern among growers. Imports from Myanmar and Indonesia, stock pressure, and changing market trends have slowed the expected price rise in chali arecanut. However, traders believe prices may recover in the coming weeks once imported stock reduces. Meanwhile, Shivamogga market recorded strong prices for quality arecanut lots.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ವಿಶೇಷ ಪ್ರತಿನಿಧಿ

ರೂರಲ್‌ ಮಿರರ್‌ ವಿಶೇಷ ಪ್ರತಿನಿಧಿ.

Published by
ವಿಶೇಷ ಪ್ರತಿನಿಧಿ

Recent Posts

ಹವಾಮಾನ ವರದಿ | 14-09-2026 | ಸೆ.18ರ ಬಳಿಕ ಮಳೆ ಚಿತ್ರಣ ಬದಲಾಗಬಹುದೇ?

ಕರ್ನಾಟಕದಲ್ಲಿ ಸದ್ಯ ಬಿಸಿಲು ಮುಂದುವರಿದಿದ್ದರೂ ಸೆ.18ರಿಂದ ಮಳೆಯ ವ್ಯಾಪ್ತಿ ಹೆಚ್ಚಾಗುವ ಸೂಚನೆಗಳಿವೆ. ಸೆ.19ರಿಂದ…

21 hours ago

ನನ್ನ ಚಿತ್ರ-ನನ್ನ ಖುಷಿ | ಬಣ್ಣಗಳ ಮೂಲಕ ಅರಳಿದ ಗಣೇಶ

ಬಣ್ಣಗಳ ಮೂಲಕ ಅರಳಿದ ಗಣೇಶ - ಕುಕ್ಕೆ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ 8…

22 hours ago

ನನ್ನ ಚಿತ್ರ-ನನ್ನ ಖುಷಿ | ಬಣ್ಣಗಳ ಲೋಕದಲ್ಲಿ ಪುಟ್ಟ ಮನಸ್ಸಿನ ಖುಷಿ

ನನ್ನ ಚಿತ್ರ – ನನ್ನ ಖುಷಿ | ಗಣೇಶನನ್ನು ಬಣ್ಣಗಳಲ್ಲಿ ಅರಳಿಸಿದ ಪುಟಾಣಿ…

23 hours ago

ವಿಘ್ನಗಳ ಆಚೆ ಕಾಣುವ ಗಣೇಶತತ್ತ್ವ

ಗಣೇಶ ಚತುರ್ಥಿಯನ್ನು ಕೇವಲ ಧಾರ್ಮಿಕ ಆಚರಣೆಯಾಗಿ ನೋಡುವುದಕ್ಕಿಂತ, ಗಣೇಶನ ರೂಪಲಕ್ಷಣಗಳಲ್ಲಿರುವ ಜೀವನದ ಸಂದೇಶಗಳನ್ನು…

1 day ago

ಶಿರಾಡಿ ಘಾಟ್‌ನಲ್ಲಿ ಸೋಮವಾರ ಟ್ರಾಫಿಕ್‌ ಸಂಕಷ್ಟದ ಸಾಧ್ಯತೆ – ಮುಂಜಾಗ್ರತಾ ಕ್ರಮ ಅಗತ್ಯ

ಮೂರು ದಿನಗಳ ರಜೆ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಮಧ್ಯಾಹ್ನದ ಬಳಿಕ ಶಿರಾಡಿ ಘಾಟ್‌ನಲ್ಲಿ…

2 days ago