ಅನುಕ್ರಮ

ಯುಗಾದಿ ಹಾಗೂ ಮಲೆನಾಡಿನ ಅಡಿಕೆ ಭವಿಷ್ಯ ಏನು…? | ಮಲೆನಾಡಿನ ಅಡಿಕೆ ಬೆಳೆಗಾರರು ಎಚ್ಚರಿಕೆ ವಹಿಸಬೇಕಾದ್ದೇನು…?

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಮೊನ್ನೆ ಉದ್ಯಮಿ ಕ್ಷೇತ್ರದ ಮಿತ್ರರೊಬ್ಬರ ಜೊತೆಗೆ ಮಾತನಾಡುವಾಗ ಅವರು ತಮ್ಮ ಮಲೆನಾಡಿನ ಪ್ರದೇಶದಲ್ಲಿದ್ದ ಅಡಿಕೆ ತೋಟ ಮಾರಾಟ ಮಾಡಿ ಬಯಲು ಸೀಮೆಯಲ್ಲಿ ಖಾಲಿ ಜಮೀನು ಖರೀದಿಸಿದೆ ಎಂದರು. ನಾನು ಅವರಿಗೆ ಸ್ವಾಭಾವಿಕವಾಗಿಯೇ ಆ ಹೊಸ ಖಾಲಿ ಜಾಗದಲ್ಲಿ ಅಡಿಕೆ ತೋಟ ಹಾಕುತ್ತೀರ …? ಎಂದೆ.

Advertisement

ಹತ್ತಾರು ಊರು ಸುತ್ತುವ ವಾಣಿಜ್ಯೋದ್ಯಮ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಿದ ಅವರು ಇತ್ತೀಚಿನ ವರ್ಷಗಳಲ್ಲಿ ಬಯಲು ಸೀಮೆಯ ಪ್ರದೇಶದಲ್ಲಿ ಯಾವುದೇ ಅಂಕೆಯಿಲ್ಲದೇ ಅಡಿಕೆ ತೋಟ ವಿಸ್ತರಣೆ ಆಗಿರುವುದು ಮತ್ತು ಆಗುತ್ತಿರುವುದನ್ನ ಆಧಾರದಲ್ಲಿಟ್ಟುಕೊಂಡು ನಾನು “ಅಡಿಕೆ ಕೃಷಿ ” ಮಾಡುವುದಿಲ್ಲ ” ಎಂದರು.

ಸತ್ಯ ಅಲ್ವಾ…?, ಬಯಲು ಸೀಮೆಯ ಗ್ರಾಮವೊಂದರಲ್ಲಿ ಈ ವರ್ಷ ನೂರು ಎಕರೆ ಅಡಿಕೆ ತೋಟ ನಾಟಿಯಾದರೆ ಮುಂದಿನ ವರ್ಷ ಸಾವಿರ ಎಕರೆ ಪ್ರದೇಶದಲ್ಲಿ ಅಡಿಕೆ ವಿಸ್ತರಣೆ ಆಗಿರುತ್ತದೆ. ಮಲೆನಾಡಿನ ಮೂಲದ ನದಿಗಳಿಗೆ ಬಯಲು ಸೀಮೆಯ ಅಂಚಿನಲ್ಲಿ ಆಣೆಕಟ್ಟು ಕಟ್ಟಿ ಇತ್ತ ಕಡೆ ಮಲೆನಾಡಿನ ನೆಲ ಜಲ ಮುಳುಗಿಸಿ ಕೊನೆಯಲ್ಲಿ ಪಶ್ಚಿಮ ಘಟ್ಟಗಳಲ್ಲಿ ಉಳಿದ ಭೂಮಿ ಯಲ್ಲಿ ಮಾಡಿಕೊಂಡ ಏಕೈಕ ಜೀವನಾಧಾರ ಕೃಷಿ ಬೆಳೆ “ಅಡಿಕೆ” ಗೂ ಆಣೆಕಟ್ಟಿನಾಚೆಯ ಚಾನಲ್ ಏರಿಯಾದ ಕೃಷಿ ಭೂಮಿಗೆ ವಿಸ್ತರಣೆ ಮಾಡಿ ಮಲೆನಾಡನ್ನ ಸಂಪೂರ್ಣವಾಗಿ ಮುಳುಗಡೆ ಮಾಡಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಬಯಲು ಸೀಮೆಯ ಸಾಂಪ್ರದಾಯಿಕೇತರ ಪ್ರದೇಶದ ಅಡಿಕೆ ಬೆಳೆ ಹತ್ತು > ನೂರು > ಸಾವಿರ > ಹತ್ತು ಸಾವಿರ ಎಕರೆಗಳ ಲೆಕ್ಕಾಚಾರದಲ್ಲಿ ಅಡಿಕೆ ತೋಟ ವಿಸ್ತರಣೆ ಆಗ್ತಿದೆ.

ಬಹುಶಃ ನಾಲ್ಕು ತಿಂಗಳ ಕಾಲ ಕುಂಬದ್ರೋಣ ಮಳೆಗೆ ಚಿತ್ತಾಗಿ ಬಗೆ ಬಗೆಯ ರೋಗದಿಂದಲೂ ಜರ್ಜರಿತವಾಗಿ ಮಲೆನಾಡಿನ ಕೃಷಿ ನಲುಗುತ್ತಿದೆ.ನಮಳೆಗಾಲದಲ್ಲಿ ಭರಪೂರ ಮಳೆಯುಂಡು ಮಣ್ಣಸವೆಸಿ ಸಾರ ನಶಿಸಿ ಮಲೆನಾಡು ಈ ಕಾಲದ ಅಡ್ಡಾದಿಡ್ಡಿ ಮಳೆಗೆ ಒಂದು ಬಗೆಯಲ್ಲಿ ನಾಶವೇ ಆಗಿ ಆಣೆಕಟ್ಟಿನ ಒಡಲು ತುಂಬಿಸುತ್ತಿದೆ.

ಇದೊಂಥರ ಕಣ್ಣೀರಿನ ಕೋಡಿ….,  ಇಂತಹ ನೀರಿನಲ್ಲಿ ಬಯಲು ಸೀಮೆಯ ಫಲವತ್ತಾದ ಕಪ್ಪು ಮಣ್ಣಿನ ಸಾರದ ಭೂಮಿ ಪ್ರದೇಶದಲ್ಲಿ ಕೊಳೆ ಇಲ್ಲದ , ಮಂಗ, ಕಾಡು ಪ್ರಾಣಿಗಳ ಹಾವಳಿಯಿಲ್ಲದೆ ಈಸೀಯಾಗಿ ಮಲೆನಾಡಿನ ಎಕರೆವಾರು ಲೆಕ್ಕಾಚಾರದಲ್ಲಿ ಕಡಿಮೆ ವೆಚ್ಚದಲ್ಲಿ ಡಬಲ್ ಇಳುವರಿಯನ್ನು ಪಡೆಯಬಹುದು.

Advertisement

ಮಲೆನಾಡಿಗೆ ಅಡಿಕೆಯೇ ಜೀವನಾಡಿ,  ಈ ಮಳೆಯಲ್ಲಿ ಈ ವಾತಾವರಣದಲ್ಲಿ ಅಡಿಕೆಯಷ್ಟು ಗ್ಯಾರಂಟಿ ಬೆಳೆ ಬೇರಿಲ್ಲ. ಕಾಫಿ , ಕಾಳುಮೆಣಸು ಅಂತರ್ಬೆಳೆ ಬೆಳೆಯಲೂ “ಅಡಿಕೆ” ಬೇಕು. ಯಾವ ಬೆಳೆಯನ್ನಾದರೂ ಬೆಳೆಯ ಬಹುದಾದ ಬಯಲು ಸೀಮೆಯ ಪ್ರದೇಶದಲ್ಲಿ ಈಗ ಎಲ್ಲಿ ನೋಡಿದರೂ ಅಡಿಕೆ ಅಡಿಕೆ ಅಡಿಕೆ ಬೆಳೆ…!

ನೀವೊಂದು ವಿಚಾರ ಗಮನಿಸಿದ್ದೀರಾ..?,  ಮೊನ್ನಿನ ಮಳೆಗಾಲದಲ್ಲಿ ಮಲೆನಾಡು ಕರಾವಳಿ ಒಟ್ಟು ನಾಲ್ಕು ಜಿಲ್ಲೆ ಯಲ್ಲಿ ಕನಿಷ್ಟ ಐವತ್ತು ಪ್ರತಿಶತ ಅಡಿಕೆ ಉದುರಿ ಹೋಗಿದೆ…!. ಈ “ಕೊರತೆಗೆ ” ಅಡಿಕೆ ಮಾರುಕಟ್ಟೆ ಯಲ್ಲಿ ಅಡಿಕೆಗೆ ದರ ಏನಾದರೂ ಗಮನಾರ್ಹವಾಗಿ ಹೆಚ್ಚಳವಾಗಿದೆಯಾ…?, ಬಾಯಿ ಮಾತಿಗೆ ಏರಿಕೆ ಎನ್ನುತ್ತಾರೆ ನಿಜ, ಆದರೆ ಅಡಿಕೆ ರಾಶಿ ಇಡಿ ಉತ್ಪನ್ನಕ್ಕೆ ಸಮಾಧಾನ ಕರ ಬೆಲೆ ಇದೆಯೆಂಬುದು ಹೊರತುಪಡಿಸಿದರೆ ನಾಲ್ಕು ಜಿಲ್ಲೆಯ ಅಡಿಕೆ ಉತ್ಪತ್ತಿ ಕುಸಿತದ ಪರಿಣಾಮವಾಗಿ ಅಡಿಕೆ ಬೆಲೆ ಹೆಚ್ಚಳ ಆಗಿಲ್ಲ…!

ಯಾಕೆ ಹೀಗೆ…?, ಅಕಸ್ಮಾತ್ತಾಗಿ ಬಯಲು ಸೀಮೆಯ ಅಡಿಕೆ ಉತ್ಪನ್ನದಲ್ಲಿ ಐವತ್ತು ಪ್ರತಿಶತ ಕಡಿಮೆ ಆಗಿದ್ದಿದ್ದರೆ ಅಡಿಕೆ ಬೆಲೆ ಅಥವಾ ಬೇಡಿಕೆ ಖಂಡಿತವಾಗಿಯೂ ಹೆಚ್ಚುತ್ತಿತ್ತು .. ಅಲ್ವಾ…?,  ಇದನ್ನು ಏನಂಥ ವಿಶ್ಲೇಷಣೆ ಮಾಡಬೇಕಂತಲೇ ಗೊತ್ತಾಗ್ತಿಲ್ಲ…!.  ಸಾಂಪ್ರದಾಯಿಕ ಪ್ರದೇಶದ ಅಡಿಕೆ ಬೆಳೆಯ ಉತ್ಪಾದನೆಯ ಹೆಚ್ಚು ಕಡಿಮೆ ಯಾವುದೂ ಸಾಂಪ್ರದಾಯಿಕವಲ್ಲದ ಕ್ಷೇತ್ರದ ಅಡಿಕೆ ವಿಸ್ತರಣೆ ಕಾರಣಕ್ಕೆ ಲೆಕ್ಕಕ್ಕೇ ಬರುತ್ತಿಲ್ಲ.
ಇನ್ನೊಂದು ನಾಲ್ಕೈದು ವರ್ಷಗಳಲ್ಲಿ ಒಂದು ವೇಳೆ ಸಾಂಪ್ರದಾಯಿಕ ಅಡಿಕೆ ಬೆಳೆ ಸಂಪೂರ್ಣ ವಾಗಿ ನಾಶವಾದರೂ ಅಡಿಕೆ ಮಾರುಕಟ್ಟೆಯ ಮೇಲೆ ಯಾವುದೇ ದುಷ್ಪರಿಣಾಮ ಬೀರೋಲ್ಲ…!.  ಮಲೆನಾಡು ಕರಾವಳಿ ಪ್ರದೇಶದ ಅಡಿಕೆ ಉತ್ಪಾದನೆ ಬಯಲು ಸೀಮೆಯ ಪ್ರದೇಶದ ಅಡಿಕೆ ಉತ್ಪಾದನೆಯಲ್ಲಿ  ಆನೆ ಇರುವೆ …! ಇದ್ದಂತೆ…!!

ಕ್ಷಮಿಸಿ…,  ಬಯಲು ಸೀಮೆ ಪ್ರದೇಶದಲ್ಲಿ ಅಡಿಕೆ ಬೆಳೆಯುವವರೂ ನಮ್ಮ ಬಂಧುಗಳೇ… ನಮ್ಮಂತೆಯೇ ಕೃಷಿಕರು…  ಅವರ ಅನುಕೂಲ ಅವರ ಫಲವತ್ತಾದ ಮಣ್ಣು ಅವರ ಅಡಿಕೆ ಇಳುವರಿಗೆ ಶುಭಾಶಯಗಳು, ನಮಗೆ ಖಂಡಿತವಾಗಿಯೂ ಹೊಟ್ಟೆ ಕಿಚ್ಚಿಲ್ಲ.  ಸರ್ಕಾರ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರಗಳು ಮನಸು ಮಾಡಿದ್ದಿದ್ದರೆ ಆ ಫಲವತ್ತಾದ ಪ್ರದೇಶ ಗಳಿಗೆ ಅಡಿಕೆಗಿಂತ ಹೆಚ್ಚು ಲಾಭ ತರುವ ಬೇರೆ ತೋಟಗಾರಿಕೆ ಬೆಳೆಯನ್ನು ಪರಿಚಯಿಸಿ ಪ್ರೋತ್ಸಾಹಿಸಬಹುದಿತ್ತು.

ಹೀಗೆ ಎಲ್ಲರೂ ಅಡಿಕೆ ಬೆಳೆ ನೆಚ್ಚಿ ಹಚ್ಚುತ್ತಾ ಹೋದರೆ ಎಷ್ಟು ದಿನ ಅಡಿಕೆ ಮಾರುಕಟ್ಟೆ ನಿಲ್ಲಲು ಸಾಧ್ಯ…?  ಬಯಲು ಸೀಮೆಯ ಪ್ರದೇಶದ
ಒಂದು ಭಾಗದಲ್ಲಿ ಈ ವರ್ಷ ನೂರು ಎಕರೆ ಫಸಲು ಬಂದರೆ ಇನ್ನೊಂದು ವರ್ಷದಲ್ಲಿ ಸಾವಿರ ಎಕರೆ ಅಡಿಕೆ ಉತ್ಪತ್ತಿ ಬರುತ್ತದೆ. ಈ ಬಗೆಯಲ್ಲಿ ಹಲವಾರು ಪಟ್ಟು ಅಡಿಕೆ ಉತ್ಪತ್ತಿ ಹೆಚ್ಚುತ್ತಾ ಹೋದರೆ ಅಡಿಕೆ ಬೆಲೆ ಹೇಗೆ ನಿಲ್ಲುತ್ತದೆ…? ನಮ್ಮೂರ ಅಡಿಕೆ ಕೋಗಿನಾಚೆ ಹೋಗದ ಅನೇಕರು “ಅಡಿಕೆ ಬೆಲೆ ಯಾವತ್ತೂ ಕುಸಿಯೋಲ್ಲ ” ಅಂತ ವಿಶ್ಲೇಷಣೆ ಮಾಡ್ತಾರೆ…!, ಇನ್ನಷ್ಟು ಜನರು ನಂಬುತ್ತಾರೆ..!. ಆದರೆ ಅವರೊಮ್ಮೆ ಬಯಲು ಸೀಮೆಯ ಪ್ರದೇಶದ ಅಡಿಕೆ ಬೆಳೆ ವಿಸ್ತರಣೆ ನೋಡಿದರೆ ಅವರಿಗೆ ಆಘಾತ ವಾಗಬಹುದು.  ಒಣ ಭೂಮಿ ಪ್ರದೇಶ ಅದು. ಜೋಳ , ರಾಗಿ ಬೆಳೆಯುವ ಪ್ರದೇಶ.  ಅವರಿಗೆ ನಮ್ಮ ಮಲೆನಾಡು ಕರಾವಳಿ ಪ್ರದೇಶದ ರೈತರ ಹಾಗೆ ಹತ್ತು ಗುಂಟೆ ಇಪ್ಪತ್ತು ಗುಂಟೆ ಒಂದು ಎಕರೆ ಎರಡು ಎಕರೆ ಯ ಚಿಕ್ಕ ಜಮೀನು ಇರೋಲ್ಲ…!,  ಅಲ್ಲಿ ಸಣ್ಣ ರೈತ ಅಂದರೆ ಹತ್ತು ಎಕರೆ ಜಮೀನು ಇರುತ್ತದೆ….!,  ಅಲ್ಲಿ ಅಡಿಕೆ ರಿಸ್ಕ್ ಇಲ್ಲದೇ ಶಾರ್ಟ್ ಟರ್ಮಲ್ಲಿ ಸುಲಭವಾಗಿ ಬರುವ ಬೆಳೆ. ಇಪ್ಪತ್ತು ಮೂವತ್ತು ಎಕರೆ ಅಡಿಕೆ ತೋಟ ಇರುವವ ಅಲ್ಲಿನ ಬೆಳೆಗಾರರಿಗೆ ಒಂದು ಹತ್ತು ವರ್ಷ ಅಡಿಕೆ ಫಸಲು ಸಿಕ್ಕಿದರೆ ಮತ್ತು ಅಡಿಕೆ ಬೆಳೆ ಹಾಳು ಬಿದ್ದು ಹೋದರೂ ತೊಂದರೆ ಇಲ್ಲ…!

Advertisement

ಮಲೆನಾಡಿನ- ಕರಾವಳಿಯ ಅಡಿಕೆ ಬೆಳೆಗಾರರು ಎಲೆಚುಕ್ಕಿ ಹಳದಿ ಎಲೆ ರೋಗಬಾಧೆ ಗಿಂತ ಮೊದಲು ಬಯಲು ಸೀಮೆಯ ಅಡಿಕೆ ಬೆಳೆ ವಿಸ್ತರಣೆ ಯ ಬಗ್ಗೆ ಜಾಗೃತಿ ಹೊಂದಬೇಕು.  ಈ ವಿಸ್ತರಣೆಯಿಂದ ಕೆಲವೇ ಕೆಲವು ವರ್ಷಗಳಲ್ಲಿ ಅಡಿಕೆ ಬೆಲೆ ಗಂಭೀರವಾಗಿ ಕುಸಿತದೆ. ಎಷ್ಟೇ ಬೆಲೆ ಕುಸಿದರೂ ಬಯಲು ಸೀಮೆ ಪ್ರದೇಶದ ಅಡಿಕೆ ಬೆಳೆಗಾರರಿಗೆ “ಅಡಿಕೆ” ಲಾಭದಾಯಕ ಬೆಳೆ. ಆದರೆ ಮಲೆನಾಡು ಕರಾವಳಿ ಪ್ರದೇಶದ ಅಡಿಕೆ ಬೆಳೆಗಾರರಿಗೆ ಈಗಿರುವ ಬೆಲೆಗಿಂತ ಕೆಳಕ್ಕೆ ಕುಸಿದರೆ ಅಡಿಕೆ ನಷ್ಟ ಕಷ್ಟದಾಯಕ…!.

ಮಲೆನಾಡು ಕರಾವಳಿ ಪ್ರದೇಶದ ರೈತರು ಲಕ್ಷ ಲಕ್ಷ ಖರ್ಚು ಮಾಡಿ ಹೊಸದಾಗಿ ಅಡಿಕೆ ಕೃಷಿ ವಿಸ್ತರಣೆ ಮಾಡಬೇಡಿ. ಇರುವ ಅಡಿಕೆ ಬೆಳೆಯನ್ನು ನೋಡಿಕೊಳ್ಳಿ.ಅಡಿಕೆ ಬೆಳೆಯಲ್ಲಿ ಅಂತರಬೆಳೆಯ ಬಗ್ಗೆ ಗಮನ ಕೊಡಿ.  ಈ ವಿಶ್ವವಸು ಸಂವತ್ಸರ  ಮಲೆನಾಡು ಕರಾವಳಿಯ ಸಣ್ಣ ಅತಿ ಸಣ್ಣ , ನೇರವಾಗಿ ಅಡಿಕೆ ಕೃಷಿಯೊಂದನ್ನೇ ಆಧಾರವಾಗಿಟ್ಟುಕೊಂಡ ಅಡಿಕೆ ಬೆಳೆಗಾರರು ತ್ವರಿತವಾಗಿ ಅಡಿಕೆಯೇತರ ಉತ್ಪತ್ತಿ ನೀಡುವ ಪರ್ಯಾಯ ಬೆಳೆ ಅಥವಾ ಜೀವನದತ್ತ ಸಾಗಲು ತೀರ್ಮಾನ ಕೈಗೊಂಡು ಆ ಬಗ್ಗೆ ಕಾರ್ಯ ತತ್ಪರರಾಗುವುದು ಉತ್ತಮ.

ಬರಹ :
ಪ್ರಬಂಧ ಅಂಬುತೀರ್ಥ
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಪ್ರಬಂಧ ಅಂಬುತೀರ್ಥ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದ ನಿವಾಸಿ ಪ್ರಬಂಧ. ಬಿ ಎ. ವಿಧ್ಯಾಭ್ಯಾಸ ಮುಗಿಸಿದ ಮೇಲೆ ಕೃಷಿ ಕೆಲಸ. ಕಥೆ , ಪರಿಸರ, ಕೃಷಿ , ವಿಜ್ಞಾನ , ಸಾಮಾಜಿಕ ಮತ್ತು ರಾಜಕೀಯ ವಿಚಾರಗಳ ಲೇಖನ ಬರೆಯುವ ಹವ್ಯಾಸ. ಮಲೆನಾಡು ಗಿಡ್ಡ ಗೋ ತಳಿ ಸಂವರ್ಧನೆ, ಜೀರಿಗೆ ಮೆಣಸಿನಕಾಯಿ ಬೆಳೆಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಮಲೆನಾಡು ಗಿಡ್ಡ ತಳಿ ಹಸುಗಳ ಸೆಗಣಿಯನ್ನು ಮೌಲ್ಯ ವರ್ಧನೆ ಮಾಡಿ ಕೃಷಿ ಸ್ನೇಹಿ ಸೂಕ್ಷ್ಮಾಣು ಜೀವಿಯುಕ್ತ ಸಾವಯವ ಗೊಬ್ಬರ ತಯಾರಿಸಿ ಮಾರಾಟ ಮಾಡುವ ಕೆಲಸವನ್ನೂ ಮಾಡುತ್ತಿದ್ದಾರೆ.

Published by
ಪ್ರಬಂಧ ಅಂಬುತೀರ್ಥ

Recent Posts

ಯಾದಗಿರಿಯಲ್ಲಿ ಹೆಸರು ಬೆಳೆಗೆ ಹಳದಿ ನಂಜಾಣು ರೋಗ ಭಾದೆ

ಯಾದಗಿರಿಯಲ್ಲಿ ಹೆಸರು ಬೆಳೆಗೆ ಹಳದಿ ನಂಜಾಣು ರೋಗದ ಭಾದೆ ಕಾಣಿಸಿಕೊಂಡಿದ್ದು, ಇದರ ತಡೆಗೆ…

16 minutes ago

ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಧಾರಾಕಾರ ಮಳೆ | ಮಳೆಗೆ ಎಲ್ಲೆಲ್ಲಿ ಏನೇನಾಯ್ತು…? |

ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ವ್ಯಾಪಕ ಮಳೆಯಾಗಿದೆ. ದಕ್ಷಿಣಕನ್ನಡ ಜಿಲ್ಲೆಯ ಮುಲ್ಕಿಯಲ್ಲಿ 30…

26 minutes ago

ಹವಾಮಾನ ವರದಿ | 17-07-2025 | ಸಾಮಾನ್ಯ ಮಳೆ ಮುಂದುವರಿಕೆ ಎಷ್ಟು ದಿನ..? | ಜು.25 ರವರೆಗೂ ರಾಜ್ಯದಲ್ಲಿ ಹೇಗಿದೆ ಮಳೆ..?

ಈಗಿನಂತೆ ಜುಲೈ 25ರ ತನಕವೂ ರಾಜ್ಯದಾದ್ಯಂತ ಅಲ್ಲಲ್ಲಿ ಮಳೆ ಮುಂದುವರಿಯುವ ಲಕ್ಷಣಗಳಿವೆ.

40 minutes ago

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ವ್ಯಾಪಕ ಮಳೆ | ದ ಕ ಜಿಲ್ಲಾಧಿಕಾರಿ ಭೇಟಿ

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ವ್ಯಾಪಕ ಮಳೆಯಾಗುತ್ತಿದ್ದು, ಹಲವು ಕಡೆ ಗುಡ್ಡ ಜರಿತ, ನೆರೆ,…

57 minutes ago

ಅಡಿಕೆ ಮಾರುಕಟ್ಟೆ ಏನಾಗುತ್ತಿದೆ…? | 500 ರೂಪಾಯಿ ಯಾವಾಗ ಆಗುತ್ತೆ…?

ಕಳೆದ ಕೆಲವು ದಿನಗಳಿಂದ ಅಡಿಕೆ ಬೆಳೆಗಾರರಿಗೆ ನಿರೀಕ್ಷೆಯ ಮೇಲೆ ನಿರೀಕ್ಷೆ.ಚಾಲಿ ಅಡಿಕೆ ಧಾರಣೆ…

15 hours ago

ಕುಂಡಲಿಯ ರಹಸ್ಯ | ಈ ರಾಶಿಯವರಿಗೆ 12ನೇ ಮನೆಯಿಂದ ಗುಪ್ತ ಶತ್ರುಗಳ ಎಚ್ಚರಿಕೆ

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್…

15 hours ago