ಮಲೆನಾಡು, ಕರಾವಳಿ ಭಾಗದಲ್ಲಿ ಮಾತ್ರವೇ ಇದ್ದ ಅಡಿಕೆ ಬೆಳೆ ಈಗ ವಿಸ್ತರಣೆಯಾಗಿದೆ. ಮಲೆನಾಡಿನಲ್ಲಿ ಈ ಬಾರಿ ಹವಾಮಾನದ ಕಾರಣದಿಂದ ಅಡಿಕೆ ಬೆಳೆ ಕುಸಿತವಾಗಿತ್ತು. ಚಾಲಿ ಅಡಿಕೆ ಧಾರಣೆಯೂ ನಿರೀಕ್ಷಿತ ಮಟ್ಟದಲ್ಲಿ ಇರಲಿಲ್ಲ. ಇದೀಗ ಏರಿಕೆ ಕಾಣುತ್ತಿದೆ. ಈ ನಡುವೆ ಚಾಮರಾಜ ನಗರದಲ್ಲಿ ಅಡಿಕೆ ಬೆಳೆಗೆ ಉತ್ತಮ ಧಾರಣೆ ಲಭಿಸಿದ ಸಂತಸದಲ್ಲಿ ಬೆಳೆಗಾರರು ಇದ್ದಾರೆ.…..ಮುಂದೆ ಓದಿ….
ರಾಜ್ಯದಲ್ಲಿ ಈ ಬಾರಿ ಅಡಿಕೆ ಬೆಳೆಗೆ ಉತ್ತಮ ಧಾರಣೆ ಲಭಿಸುವ ನಿರೀಕ್ಷೆ ಇದೆ. ಬೆಳೆ ಕಡಿಮೆ ಇದೆ. ಆದರೆ ಚಾಲಿ ಅಡಿಕೆ ಹೊರತುಪಡಿಸಿ ಕೆಂಪಡಿಕೆ ಉತ್ತಮ ಫಸಲು ಕಂಡಿದೆ. ಇದರ ಜೊತೆಗೆ ಉತ್ತಮ ಧಾರಣೆಯೂ ಲಭಿಸಿದೆ ಎಂದು ಚಾಮರಾಜನಗರ ಜಿಲ್ಲೆಯ ಬೂದಿತಿಟ್ಟು ಗ್ರಾಮದ ರೈತ ಕೃಪಾನಿಧಿ ಸಂತಸ ವ್ಯಕ್ತಪಡಿಸುತ್ತಾರೆ. ಐದು ಎಕರೆ ಜಮೀನಿನಲ್ಲಿ 2500 ಅಡಿಕೆ ಸಸಿಗಳನ್ನ ಅವರು ಬೆಳೆಸಿದ್ದು, ವರ್ಷಕ್ಕೆ 10 ರಿಂದ 12 ಲಕ್ಷ ರೂಪಾಯಿವರೆಗೂ ಆದಾಯ ಪಡೆಯುತ್ತೇನೆ ಎನ್ನುತ್ತಾರೆ. ಏಳು ಎಕರೆ ಜಮೀನಿನಲ್ಲಿ ಅಡಿಕೆ ಬೆಳೆದಿದ್ದು, ಪ್ರತಿ ಎಕರೆಗೆ ಪ್ರತಿ ವರ್ಷ ಮೂರರಿಂದ ನಾಲ್ಕು ಲಕ್ಷ ರೂಪಾಯಿಗಳ ಲಾಭ ಪಡೆಯುತ್ತಿದ್ದೇವೆ ಎಂದು ರೈತ ಮದಲಿಂಗ ಅವರು ಹೇಳುತ್ತಾರೆ.
ಇದು ಚಾಮರಾಜನಗರ ಜಿಲ್ಲೆಯ ಅಡಿಕೆ ಬೆಳೆಗಾರರ ಕತೆಯಾದರೆ, ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಕಳೆದ ವರ್ಷದ ಹವಾಮಾನ ವೈಪರೀತ್ಯದ ಕಾರಣದಿಂದ ಇಳುವರಿಯಲ್ಲಿ ಕೊರತೆ ಕಂಡಿದೆ. ಹೀಗಾಗಿ ಉತ್ತಮ ಧಾರಣೆಯ ನಿರೀಕ್ಷೆ ಇದೆ. ಚಾಲಿ ಅಡಿಕೆಯಲ್ಲಿ ಶೇ.50 ರಷ್ಟು ಕುಸಿತವಾಗಬಹುದು ಎಂದು ಅಂದಾಜಿಸಲಾಗಿದೆ. ಆದರೆ ಮುಂದಿನ ವರ್ಷ ಉತ್ತಮ ಇಳುವರಿಯ ನಿರೀಕ್ಷೆ ಇದೆ. ಸದ್ಯ ಅಡಿಕೆ ಕೊರತೆ ಹಿನ್ನೆಲೆಯಲ್ಲಿ ಚಾಲಿ ಅಡಿಕೆ ಧಾರಣೆಯ ಏರಿಕೆ ನೀರೀಕ್ಷೆ ಇದೆ.

ಅಡಿಕೆ ಮಾರುಕಟ್ಟೆ ತಜ್ಞ ಡಾ.ವಿಘ್ನೇಶ್ವರ ಭಟ್ ವರ್ಮುಡಿ ಅವರ ಪ್ರಕಾರ, ಅಡಿಕೆ ಧಾರಣೆ ಏರಿಕೆಯಾಗಲು ಹಲವು ಕಾರಣಗಳನ್ನು ನೀಡಿದ್ದಾರೆ. ಈಗಾಗಲೇ ಮ್ಯಾನ್ಮಾರ್ ಮತ್ತು ಬಾಂಗ್ಲಾ ಗಡಿ ಬಂದ್ ಮತ್ತು ತೀವ್ರ ನಿಗಾದಿಂದಾಗಿ ಕಳ್ಳದಾರಿಯ ಮೂಲಕ ಅಡಿಕೆ ಆಮದು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ನಿಲ್ಲುವ ಸಾಧ್ಯತೆ ಇದೆ. ಇದೇ ರೀತಿಯ ಬಂದ್ ಕೊರೊನಾ ಸಂದರ್ಭದಲ್ಲಿ ಆದಾಗ ಆಮದು ನಿಂತು ಹೋಗಿ ಆಂತರಿಕವಾಗಿ ಧಾರಣೆ ಏರಿಕೆ ಕಂಡು ಬಂದಿತ್ತು. ಇದೇ ಸ್ಥಿತಿ ಯುದ್ಧ ಮತ್ತು ಗಡಿ ಬಂದ್ ಆದಾಗ ಈ ಮೊದಲು ಆಗಿತ್ತು. ಗಡಿ ಬಂದಿನಿಂದಾಗಿ ಕಳಪೆ ಗುಣಮಟ್ಟದ ಅಡಿಕೆ ಆಮದಿಗೆ ಕಡಿವಾಣ ಬಿದ್ದು ಪಟೋರಾ ಉಳ್ಳಿ ಕರಿಗೋಟ್ ಮತ್ತು ಉತ್ತಮ ದರ್ಜೆಯ ಅಡಿಕೆಗೆ ಆಂತರಿಕವಾಗಿ ಬೇಡಿಕೆ ಹೆಚ್ಚಾಗಬಹುದು ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದಲ್ಲದೆ, ಯುದ್ಧದ ಕಾರ್ಮೋಡ ಕವಿಯುತ್ತಿರುವ ಕಾರಣ ಅಡಿಕೆಗೆ ಹಣಕಾಸಿನ ಲಭ್ಯತೆ ಆಧಾರದಲ್ಲಿ ಬೇಡಿಕೆ ಹೆಚ್ಚಾಗಿ ಧಾರಣೆ ಏರಿಕೆಗೆ ಅವಕಾಶ ಆಗಬಹುದು. ಅಡಿಕೆಯನ್ನು ಒಂದು ಚಟವಾಗಿ ಬಳಸುತ್ತಿರುವ ಕಾರಣ ಯುದ್ಧದ ಕಾರ್ಮೋಡ ಮತ್ತು ಬೀತಿಯಿಂದ ಬರುವಂತಹ ಒತ್ತಡದಿಂದಾಗಿ ಈ ಚಟ ಹೆಚ್ಚಾಗಿ ಅಡಿಕೆ ಬಳಕೆ ಏರಿ ಬೇಡಿಕೆ ಹೆಚ್ಚಾಗಲು ಸಾಧ್ಯ. ಇವೆಲ್ಲಾ ಅಡಿಕೆ ಬೆಳೆಗಾರರಿಗೆ ಸಿಹಿಯನ್ನು ಕೊಡಲು ಸಾಧ್ಯವಾಗಿರುವುದು ಇನ್ನೊಂದು ಕಾರಣ.
ಇನ್ನೊಂದು ಕಡೆ ಅಡಿಕೆಯ ಮೌಲ್ಯ ವರ್ಧಿತ ಉತ್ಪನ್ನಗಳೂ ಭಾರತದಿಂದ ಬಾಂಗ್ಲಾ ಮ್ಯಾನ್ಮಾರ್ ಗಳಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಅಲ್ಪ ಪ್ರಮಾಣದಲ್ಲಿ ರಫ್ತು ಆಗುತ್ತಿದ್ದು ಇದು ಇನ್ನು ಮುಂದೆ ನಿಂತರೂ ಅದರಿಂದ ಆಂತರಿಕವಾಗಿ ಯಾವುದೇ ಸಮಸ್ಯೆ ಉಂಟಾಗದು. ಹೀಗಾಗಿ ನಮ್ಮ ಮಾರುಕಟ್ಟೆಯಲ್ಲಿ ಸ್ವಾಭಾವಿಕವಾಗಿ ಅಡಿಕೆಯನ್ನು ದಾಸ್ತಾನು ಮಾಡುವ ಪ್ರವೃತ್ತಿ ಹೆಚ್ಚಾಗಲು ಸಾಧ್ಯ. ಇದೇ ಇಂದು ಆಗುತ್ತಿದೆ.ಪರಿಣಾಮವಾಗಿ ಧಾರಣೆ ಹೆಚ್ಚಳಕ್ಕೆ ವಿಪುಲ ಅವಕಾಶಗಳಿವೆ ಎನ್ನುತ್ತಾರೆ ಡಾ.ವಿಘ್ನೇಶ್ವರ ಭಟ್.