ಅಡಿಕೆಯ (Arecanut) ಬಳಕೆ ಪುರಾತನ ಕಾಲದಿಂದಲೂ ಗುರುತಿಸಲ್ಪಟ್ಟಿದೆ. ಇದರಲ್ಲಿ ಹಲವಾರು ಔಷಧೀಯ ಗುಣಗಳಿವೆ ಎಂಬುದಾಗಿ ಪುರಾತನ ಆಯುರ್ವೇದ ನಿಘಂಟುಗಳಲ್ಲಿ ತಿಳಿಸಿದ್ದಾರೆ. ಇತ್ತೀಚೆಗಿನ ವೈಜ್ಞಾನಿಕ ಸಂಶೋಧನೆಗಳು ಕೂಡಾ ಅವುಗಳನ್ನೆಲ್ಲಾ ಧೃಡಪಡಿಸಿವೆ. ಆದರೂ, ಕೆಲವು ಅವೈಜ್ಞಾನಿಕ ಲೇಖನಗಳು ಅಡಿಕೆ ಕ್ಯಾನ್ಸರ್ ಕಾರಕ ಎಂಬುದನ್ನು ಬಿಂಬಿಸಿವೆ. ಈ ಬೆಳವಣಿಗೆಯ ದಿಸೆಯಲ್ಲಿ, ಹಲವಾರು ವೈಜ್ಞಾನಿಕ ಲೇಖನಗಳನ್ನು ಹುಡುಕಿ ಸಮೀಕ್ಷೆ ಮಾಡಿದಾಗ ಅಡಿಕೆ ಕ್ಯಾನ್ಸರ್ ಕಾರಕವಲ್ಲ ಬದಲಾಗಿ ಕ್ಯಾನ್ಸರನ್ನು ಗುಣಪಡಿಸುತ್ತದೆ ಎಂಬ ವಿವರ ಲಭ್ಯವಾಗಿದೆ.
ಅಡಿಕೆ ಕ್ಯಾನ್ಸರ್ ಕಾರಕವಲ್ಲ: ಡಾ. ಲಲಿತಕುಮಾರಿ ಮತ್ತು ಇತರರು 1974 ರಲ್ಲಿ ಚಿಕ್ಕಿಲಿಗಳ ಮೇಲೆ ಅಡಿಕೆಯ ಸತ್ವವನ್ನು ಪ್ರಯೋಗಮಾಡಿ ಅದು ಕ್ಯಾನ್ಸರ್ ಕಾರಕವಲ್ಲ ಎಂಬುದನ್ನು ಸಾಬೀತುಪಡಿಸಿದ್ದರು. ಡಾ. ರಣದಿವೆ ಮತ್ತು ಇತರರು 1976ರಲ್ಲಿ ಅಡಿಕೆಯ ಪೇಸ್ಟನ್ನು ಚಿಕ್ಕಿಲಿಗಳ ಚರ್ಮದ ಮೇಲೆ ಒಂದು ಕೆ.ಜಿ. ದೇಹದ ತೂಕಕ್ಕೆ ಐದು ಗ್ರಾಂನಷ್ಟು ಹಚ್ಚಿದಾಗ ಕ್ಯಾನ್ಸರ್ ಕಾಣಿಸಲಿಲ್ಲ. ಅದೇ ರೀತಿ ಅಡಿಕೆಯ ಪೇಸ್ಟನ್ನು ಹಾಮ್‍ಸ್ಟರ್‌ಗಳ ಬಾಯಿಯೊಳಗಿನ ಚರ್ಮದ ಪದರಕ್ಕೆ ಒಂದು ಕೆ.ಜಿ. ದೇಹದ ತೂಕಕ್ಕೆ 1.5 ಗ್ರಾಂ ನಷ್ಟು ಜೀವನಪರ್ಯಂತ ನಿತ್ಯ ಹಚ್ಚಿದಾಗಲೂ ಕ್ಯಾನ್ಸರ್ ಕಾಣಿಸಲಿಲ್ಲ. ಡಾ.ರಮೇಶ್ ರಾವ್ ಮತ್ತು ಡಾ. ಪದ್ಮಾದಾಸ್ ಎಂಬ ವಿಜ್ಞಾನಿಗಳು 1989 ರಲ್ಲಿ ಮಂಗಳೂರು ಚಾಲಿ ಅಡಿಕೆ ಮತ್ತು ಮಲೆನಾಡಿನ ಕೆಂಪು ಅಡಿಕೆಗಳ ಹುಡಿಗಳನ್ನು ಒಂದು ಕೆ.ಜಿ. ದೇಹದ ತೂಕಕ್ಕೆ ಒಂದು ಗ್ರಾಂನಷ್ಟು ಆಹಾರದೊಂದಿಗೆ ಮಿಶ್ರಮಾಡಿ ಸತತವಾಗಿ 12 ತಿಂಗಳುಗಳ ಕಾಲ ಚಿಕ್ಕಿಲಿಗಳಿಗೆ ಕೊಟ್ಟಾಗಲೂ ಕ್ಯಾನ್ಸರಿನ ಲಕ್ಷಣಗಳು ಗೋಚರಿಸಲಿಲ್ಲ.
ಡಾ. ನಂದಕುಮಾರ್ ಮತ್ತು ಇತರರು 1990 ರಲ್ಲಿ ನಡೆಸಿದ ಪ್ರಯೋಗದಲ್ಲಿ ತಂಬಾಕು ರಹಿತ ಪಾನ್ ತಿನ್ನುವುದು ಬಾಯಿಯ ಕ್ಯಾನ್ಸರಿಗೆ ಕಾರಣವಲ್ಲ ಎಂದು ಹೇಳಿದ್ದಾರೆ. ಹಾಗೆಯೇ, ಡಾ. ಶ್ರೀಹರಿ ಮತ್ತು ಇತರರಿಗೆ 2010 ರ ಸಂಶೋಧನೆಯಲ್ಲಿ ತಂಬಾಕು ರಹಿತ ಪಾನ್ ತಿನ್ನುವವರಲ್ಲಿ ಬಾಯಿಯ ಓರಲ್ ಸಬ್ಮುಕೋಸಿಸ್ ಫೈಬ್ರೋಸಿಸ್ ಕೂಡ ಕಂಡುಬರಲಿಲ್ಲ. ಡಾ. ಜೋಸ್ ಮತ್ತು ಇತರರು 2020 ರಲ್ಲಿ ನಡೆಸಿದ ಒಂದು ವೈಜ್ಞಾನಿಕ ಸಮೀಕ್ಷೆಯಲ್ಲಿ ಸಾಂಪ್ರದಾಯಿಕ ಬೀಡ ತಿನ್ನುವವರಲ್ಲಿ ಕ್ಯಾನ್ಸರ್ ಮತ್ತು ಇತರ ರೋಗಗಳು ಬೀಡ ತಿನ್ನದವರಿಂದ ಕಡಿಮೆ ಇತ್ತು.
ಅಡಿಕೆಯು ಕ್ಯಾನ್ಸರ್ ಬೆಳವಣಿಗೆಯನ್ನು ತಡೆಯುತ್ತದೆ: ಅಡಿಕೆಯು ಕ್ಯಾನ್ಸರ್ ಬೆಳವಣಿಗೆಯನ್ನು ಕೂಡ ತಡೆಯುತ್ತದೆ ಎಂದು ಹಲವಾರು ವೈಜ್ಞಾನಿಕ ವರದಿಗಳಿವೆ. ಲಲಿತ ಕುಮಾರಿ ಮತ್ತು ಇತರರು 1974 ರಲ್ಲಿ ಇಲಿಗಳ ಮೇಲೆ ನಡೆಸಿದ ಪ್ರಯೋಗಗಳಲ್ಲಿ ಇದು ಸಂಶಯಾತೀತವಾಗಿ ಸಾಬೀತಾಗಿದೆ. ಇಲಿಗಳ ಚರ್ಮದ ಮೇಲೆ ಕ್ಯಾನ್ಸರ್ ಕಾರಕವಾದ 3:4,ಬೆಂಜ್ಪೈರೀನ್ (BP) ಲೇಪಿಸಿದಾಗ 33ನೇ ವಾರಗಳಿಂದ ಕ್ಯಾನ್ಸರ್ ಗೆಡ್ಡೆಗಳು ಬೆಳವಣಿಗೆಯಾಗಲು ಪ್ರಾರಂಭಿಸಿ 39ನೇ ವಾರದಲ್ಲಿ ಎಲ್ಲಾ ಪ್ರಾಣಿಗಳಲ್ಲಿ ಗೋಚರಿಸಿದವು. ಆದರೆ ಅಡಿಕೆ ಸಾರದೊಂದಿಗೆ BP ಪಡೆದ ಪ್ರಾಣಿಗಳಲ್ಲಿ ಅಂತಹ ಗೆಡ್ಡೆಗಳು ಕಂಡುಬರಲಿಲ್ಲ ಎಂದು ಅವರು ಪ್ರಚುರಪಡಿಸಿದ್ದರು.
ಅಡಿಕೆಯು ಬಾಯಿ ಕ್ಯಾನ್ಸರ್ ವಿರುದ್ಧ ಕೂಡ ಪರಿಣಾಮಕಾರಿ. ಅಡಿಕೆ ಸಾರವು ಮಾನವನ ಬಾಯಿ ಕ್ಯಾನ್ಸರ್ ಕೋಶಗಳಾದ HSC-2 ಮತ್ತು HSC-3 ಜೀವಕೋಶಗಳನ್ನು ಕೊಲ್ಲುತ್ತದೆ ಆದರೆ ಸಾಮಾನ್ಯ ಜೀವಕೋಶಗಳನ್ನು ಅಲ್ಲ ಎಂಬುದಾಗಿ ಸಾರಿ ಮತ್ತು ಇತರರು 2017 ಮತ್ತು 2018 ರಲ್ಲಿ ಹೇಳಿದ್ದಾರೆ. ಇದಲ್ಲದೆ ಮಾನವನ ಹೊಟ್ಟೆಯ ಮತ್ತು ಪಿತ್ತಕೋಶದ ಕ್ಯಾನ್ಸರ್ ಕೋಶಗಳನ್ನು ಕೊಲ್ಲುವ ಗುಣ ಅಡಿಕೆಯ ಸತ್ವಕ್ಕೆ ಇದೆ ಎಂದು ಕ್ಸಿಯಾಂಗ್ ಮತ್ತು ಇತರರು 2010 ರಲ್ಲಿ ಹಾಗೂ ಸ್ತನದ ಕ್ಯಾನ್ಸರ್ ಕೋಶಗಳನ್ನು ಕೊಲ್ಲುವ ಗುಣ ಇದೆ ಎಂಬುದಾಗಿ ಅನಜ್‍ವಾಲ ಮತ್ತು ಇತರರು ಅದೇ ವರ್ಷ ಹೇಳಿದ್ದಾರೆ. ಹಾಗೆಯೇ, ವೀ ಮತ್ತು ಇತರರು 2021 ರಲ್ಲಿ ಅಡಿಕೆ ಪಿತ್ತಕೋಶದ ಕ್ಯಾನ್ಸರ್ ಬೆಳವಣಿಗೆಯನ್ನು ತಡೆಯುತ್ತೆ ಎಂಬುದಾಗಿ ಹೇಳಿದ್ದಾರೆ. ಮೇಲಾಗಿ ಅಡಿಕೆ ಸಾರದ ಸುಧೀರ್ಘ ಬಳಕೆಯಿಂದ ದೇಹದ ಒಳಗಿನ ಪ್ರಮುಖ ಅಂಗಗಳಾದ ಪಿತ್ತಕೋಶ, ಹೃದಯ, ಶ್ವಾಸಕೋಶ, ಕಿಡ್ನಿ, ಮೊದಲಾದವುಗಳಲ್ಲಿ ಯಾವುದೇ ರೀತಿಯ ವೈಫಲ್ಯ ಕಂಡುಬರಲಿಲ್ಲ ಎಂಬುದು ಅವರ ಹೇಳಿಕೆ.
ಅಡಿಕೆಯ ಅರೆಕೊಲಿನ್ ಅಂಶ ಕೂಡ ಕ್ಯಾನ್ಸರ್ ಬೆಳವಣಿಗೆಯನ್ನು ತಡೆಯುತ್ತದೆ ಎಂಬುದಾಗಿ ಫಾನ್ ಮತ್ತು ಇತರ 25 ವಿಜ್ಞಾನಿಗಳ ಸಮೂಹ ಇಲಿಗಳ ಮೇಲೆ ನಡೆಸಿದ ಮತ್ತೊಂದು ಅಧ್ಯಯನದಲ್ಲಿ ದೃಢೀಕರಿಸಿದ್ದಾರೆ. ಅರೆಕೊಲಿನ್ ಹೈಡ್ರೋಬ್ರೊಮೈಡ್, ಕ್ಯಾನ್ಸರ್ ಕೋಶಗಳ ಪ್ರಸರಣ ಮತ್ತು ಬೆಳವಣಿಗೆಗೆ ಪ್ರಮುಖ ಕಾರಣವಾದ ಅಸೆಟೈಲ್-COA ಅಸೆಟೈಲ್ಟ್ರಾನ್ಸ್ಫರೇಸ್ (ACAT1) ಕಿಣ್ವದ ಚಟುವಟಿಕೆಯನ್ನು ಪ್ರತಿಬಂಧಿಸುತ್ತದೆ ಎಂದು ಅವರು 2016 ರಲ್ಲಿ ವರದಿ ಮಾಡಿದ್ದಾರೆ. ಮಾತ್ರವಲ್ಲದೆ, ಕ್ಯಾನ್ಸರ್ ಗೆಡ್ಡೆಗಳಿರುವ ಇಲಿಗಳಿಗೆ ಅರೆಕೊಲಿನ್ ಒಂದು ಕೆ. ಜಿ. ದೇಹದ ತೂಕಕ್ಕೆ 50 ಮಿ. ಗ್ರಾಂ. ನಷ್ಟು ಇಂಜೆಕ್ಷನ್ ಮೂಲಕ ಕೊಟ್ಟಾಗ ಕ್ಯಾನ್ಸರ್ ಗೆಡ್ಡೆಗಳ ಬೆಳವಣಿಗೆಗಳನ್ನು ನಿಯಂತ್ರಿಸಿವೆ ಎಂಬುದಾಗಿ ಅವರು ಹೇಳಿರುತ್ತಾರೆ.
ಅಡಿಕೆ ತನ್ನ ನೈಜ ಗುಣದಲ್ಲಿ ಯಾವುದೇ ಕಾನ್ಸರ್‌ಕಾರಕ ಗುಣವನ್ನು ಹೊಂದಿಲ್ಲ. ಹಾಗಿದ್ದರೂ ತದ್ವಿರುದ್ಧ ವೈಜ್ಞಾನಿಕ ವರದಿಗಳು ಬರಲು ಹೇಗೆ ಸಾಧ್ಯ? ಎಂಬುದು ಯಕ್ಷ ಪ್ರಶ್ನೆಯಾಗಿದೆ. ಇಂತಹ ವರದಿಗಳ ಹಿಂದೆ ಕಾಣದ ಕೈಗಳ ಕೆಲಸ ನಡೆಯುತ್ತದೆಯೇ ಎನ್ನುವುದು ಈಗ ಇರುವ ಪ್ರಶ್ನೆಯಾಗಿದೆ.
25.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
ಅಡಿಕೆ ಬೆಳೆಯಲ್ಲಿ ಪೋಷಕಾಂಶಗಳ ನಿರ್ವಹಣೆಯ ಬಗ್ಗೆ ಡಾ.ಭವಿಷ್ಯ ಅವರು ನೀಡಿರುವ ಮಾಹಿತಿ ಇಲ್ಲಿದೆ..(ಸಂಪೂರ್ಣ…
ಅಡಿಕೆ ಎಲೆಚುಕ್ಕಿ ರೋಗ ನಿರ್ವಹಣೆ ಹೇಗೆ..? ಕೃಷಿ ವಿಚಾರಗೋಷ್ಟಿಯಲ್ಲಿ ಮಾತನಾಡಿರುವ ಆಡಿಯೋ ಇಲ್ಲಿದೆ..
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…