ರಾಶಿಬಿದ್ದ ಹಣ್ಣಡಿಕೆಯನ್ನು ಹರಡಿ ವ್ಯವಸ್ಥೆಗೊಳಿಸಲು ಬಿಸಿಲು ಮನೆಯೊಳಗೆ ಹೋದೆ. ಅಲ್ಲಲ್ಲಿ ಇಂಟರ್ಲಾಕಿನ ಸೆರೆಯಲ್ಲಿ ಹುಲ್ಲು ಬೆಳೆಯಲು ಹೊರಟಿತ್ತು. ರಾಜಸ್ಥಾನದ ವಲಸೆ ಕಾರ್ಮಿಕರೊಂದಿಗೆ ಹುಲ್ಲನ್ನು ಕಿತ್ತು ತೆಗೆಯುತ್ತಿದ್ದ ನನಗೆ ಪ್ರಶ್ನೆಯೊಂದನ್ನು ಮುಂದಿಟ್ಟರು. ಇಷ್ಟು ಎಳೆಯ ಬಿಸಿಲು ಇರುವಾಗಲೇ ಇದರೊಳಗೆ ಕುಳಿತು ಕೊಳ್ಳಲು ಕಷ್ಟವಾಗುವ ನಮಗೆ, ಹುಲ್ಲು ಅದೆಂತು ಚಿಗುರಿ ಬರುತ್ತದೆ ಎಂದು ಆಶ್ಚರ್ಯವನ್ನು ವ್ಯಕ್ತ ಪಡಿಸಿದರು. ಹಿಂದಿ ಭಾಷೆ ಗೊತ್ತಿಲ್ಲದ ನನಗೆ ಅವರಿಗೆ ಅರ್ಥವಾಗುವಂತೆ ಹಿಂದಿ, ಕನ್ನಡ-ತುಳು, ಆಂಗ್ಲ ಮತ್ತು ಶಾರೀರಿಕವಾದ ಹೊಸ ಭಾಷೆಯ ಮೂಲಕ ನನಗೆ ಗೊತ್ತಿರುವ ಅಲ್ಪ ವಿಜ್ಞಾನ ವನ್ನು ವಿವರಿಸ ಹೊರಟೆ…..
ಕೋಟ್ಯಂತರ ವರ್ಷಗಳ ಹಿಂದೆ ಗೋಲ ಒಂದು ಕಾಲಾಘಾತಕ್ಕೆ ಸಿಲುಕಿ ಮಹಾ ಆಸ್ಪೋಟಗೊಂಡಿತಂತೆ. ಸಿಡಿದ ಚೂರುಗಳು ಎಲ್ಲೆಂದರಲ್ಲಿ ಚದುರಿ ಬಿದ್ದದ್ದು ಆಕಾಶಕಾಯಗಳಂತೆ. ಅದರ ಒಂದು ತುಣುಕು ನಾವು ವಾಸಿಸುವ ಭೂಮಿ. ಅದೆಷ್ಟೋ ಸಾವಿರ ವರ್ಷಗಳ ನಂತರ ಸಿಡಿದ ತುಣುಕು ಮಳೆ ಬಂದು ತಂಪಾಗುತ್ತಾ ಬಂತು. ಮಳೆಯ ನೀರಿಗೆ ಮಣ್ಣು ಕರಗಿ ಹೋಗದಂತೆ ನಿಧಾನಕ್ಕೆ ಅದರ ಮೇಲೆ ಪಾಚಿ ಬೆಳೆಯಿತು. ಬೆಳೆದ ಪಾಚಿಯ ಫಲವತ್ತತೆಯಿಂದ ಹುಲ್ಲು ಬೆಳೆಯಿತು.
ಹುಲ್ಲಿನ ಅಡಿಯ ತಂಪನ್ನು ಬಳಸಿಕೊಂಡು ನಿಧಾನಕ್ಕೆ ಸಣ್ಣ ಸಣ್ಣ ಗಿಡಗಳು, ಪೊದೆಗಳು ಮತ್ತೆ ವೃಕ್ಷಗಳು ಬೆಳೆಯಲಾರಂಭಿಸಿತು. ತರಗೆಲೆಗಳು ಬಿದ್ದಂತೆ ಮಣ್ಣು ಫಲವತ್ತತೆ ಗೊಂಡು ಸೂಕ್ಷ್ಮಾಣು ಜೀವಿಗಳು ಸೃಷ್ಟಿಯಾದುವು. ಆ ನಂತರದಲ್ಲಿ ಜೀವಜಗತ್ತಿನ ಮೊದಲ ಜೀವಿಯಾದ ಎರೆಹುಳುಗಳು ಹುಟ್ಟಿಕೊಂಡವಂತೆ. ನಂತರ ಹಕ್ಕಿಪಕ್ಷಿಗಳು, ಖಗಮೃಗಗಳಾದಿ ಸಸ್ತನಿಗಳು ಜನ್ಮತಾಳಿದವು. ಪ್ರತಿಯೊಂದು ಜೀವಿಗಳು ಒಂದನ್ನೊಂದು ಅವಲಂಬಿಸಿ ಬದುಕ ಹತ್ತಿದವು. ಇಷ್ಟೆಲ್ಲಾ ವ್ಯವಸ್ಥೆಗಳು ಪ್ರಕೃತಿಯಲ್ಲಿ ಸೃಷ್ಟಿಯಾದ ಮೇಲೆ ಮಾನವನ ಅವತಾರವಾಯಿತು.
ಮನುಷ್ಯ ಬಾಳಿ ಬದುಕಬೇಕಾದರೆ ಸಸ್ಯ ವೈವಿಧ್ಯತೆಗಳಿರಬೇಕು, ಪ್ರಾಣಿ-ಪಕ್ಷಿಗಳ ಸಂಕುಲ ಇರಬೇಕು, ಬೆಳೆ ಚೆನ್ನಾಗಿ ಬರುವಂತೆ ಫಲವತ್ತಾದ ಭೂಮಿ ಇರಬೇಕು,ಕಾಲಕಾಲಕ್ಕೆ ಮಳೆ ಬರುತ್ತಿರಬೇಕು, ಎಂದೆಲ್ಲಾ ಪ್ರಕೃತಿಗೆ ಗೊತ್ತಿತ್ತು.ಅಂತೆಯೇ ಪ್ರಕೃತಿ ಶಿಸ್ತುಬದ್ಧವಾಗಿ ನಡಕೊಂಡಿದೆ.
ಹಾಗಾಗಿ ಭೂಮಿ ಬಿಸಿ ಇರುವ ಸಮಯದಲ್ಲಿ ಬಿಸಿಯನ್ನು ತಂಪು ಮಾಡಲು ಹುಟ್ಟಿಕೊಂಡ ಸಸ್ಯ ವೈವಿಧ್ಯಗಳು ಎಷ್ಟೇ ಬಿಸಿ ಯನ್ನಾದರೂ ತಾಳಿಕೊಳ್ಳಬಲ್ಲವು. ಸಹಿಸಿಕೊಳ್ಳಲು ಅಸಾಧ್ಯವಾಗುವುದು ಮನುಷ್ಯರಿಗೆ ವಿನಹ: ಸಸ್ಯಗಳಿಗೆ ಅಲ್ಲ. ಇದನ್ನೇ ಹೇಳುವುದು ಹಸಿರು ಮನೆ ಪರಿಣಾಮ ಎಂದು ನನ್ನ ವಿವರಣೆಯನ್ನು ನಿಲ್ಲಿಸಿದೆ.ಅವರಿಗೆ ಎಷ್ಟು ಅರ್ಥವಾಯಿತೋ ನನಗೆ ಗೊತ್ತಾಗಲಿಲ್ಲ.ಮುಗ್ಧವಾಗಿ ನಾನು ಹೇಳುವುದನ್ನೆಲ್ಲಾ ಕೇಳಿದರು.ಅಷ್ಟೊತ್ತಿಗೆ ಬಿಸಿಲು ಮನೆಯೊಳಗಿನ ಹುಲ್ಲು ಕಿತ್ತು ಮುಗಿದಿತ್ತು ಮನೆಯಿಂದ ಹೊರಬಂದೆವು. ಹೊರಬರುವಾಗ ಅನಿಲ ನಿಯಂತ್ರಕ ಕೋಣೆಯಒಳಗೆ ನುಗ್ಗಿದ ಅನುಭವವಾಯಿತು.
ಕಥೆಯನ್ನು ಕೇಳಿದ ಹುಡುಗರು ತಮ್ಮೂರು ಕಥೆಯನ್ನು ವಿವರಿಸಿದರು. 25 ವರ್ಷಗಳ ಹಿಂದೆ ನಮ್ಮೂರಲ್ಲಿ ತುಂಬಾ ಕಾಡಿತ್ತು.ಕೃಷಿಗಾಗಿ ನೆರಳು ಬರುತ್ತದೆಂದು ಮರಗಳನ್ನೆಲ್ಲ ಕಡಿದು ಕಡಿದು ನಾಶ ಮಾಡಿ ಇಂದು ನೀರು ಇಲ್ಲ, ಮಳೆಯು ಇಲ್ಲದ ಪರಿಸ್ಥಿತಿ ನಮ್ಮದಾಗಿದೆ. ಮನೆಯ ಬುಡದಲ್ಲಿದ್ದ ಬಾವಿಯ ನೀರು ಬತ್ತಿಹೋಗಿ 3 ಕಿಲೋಮೀಟರ್ ವರೆಗೂ ಹೋಗಬೇಕಾಗುತ್ತದೆ. 500 ರೂ ಕೊಟ್ಟಲ್ಲಿ ಟ್ಯಾಂಕರ್ ನೀರು ಮನೆಗೆ ಬರುತ್ತದೆ. ಇಲ್ಲಿಯ ಗುಡ್ಡೆ ಗುಡ್ಡೆಯ ಅಡಿಕೆ ತೋಟ ನೋಡುವಾಗ ನಮ್ಮೂರು ಪರಿಸ್ಥಿತಿ ಇಲ್ಲಿಯೂ ಬರಬಹುದಲ್ಲವೇ? ಎಂಬ ಪ್ರಶ್ನೆಯನ್ನು ಮುಂದಿಟ್ಟರು. ಹಾಗಾಗದಿರಲಿ ಎಂದು ಮನಸ್ಸಿನಲ್ಲಿಯೇ ಪ್ರಕೃತಿ ಮಾತೆಗೆ ನಮಿಸಿದೆ.
ತುಳುನಾಡಿನ ವಿಶೇಷ ಖಾದ್ಯ ಕೆಂಡತಡ್ಯ( ಪಾತ್ರೆಯೊಳಗೆ ಹಿಟ್ಟನ್ನು ಸುರಿದು ಮಡಿಕೆಯನ್ನು ಪಾತ್ರೆಯ ಮೇಲೆ ಇರಿಸಿ ಮೇಲಿನ ಮಡಿಕೆಯಲ್ಲಿ ಬೆಂಕಿ ಹಾಕುವುದು. ಪಾತ್ರೆಯ ಅಡಿಯಲ್ಲಿ ಸಣ್ಣ ಬೆಂಕಿ.) ಹೀಗಾಗಿದೆ ಇಂದು ನಮ್ಮ ಪರಿಸ್ಥಿತಿ. ಮೇಲಿನಿಂದ ಸೂರ್ಯ ಶಾಖ ವಿಪರೀತ ಏರುತ್ತಿದೆ. ಅಂತರ್ಜಲ ಕೆಳಕೆಳಗೆ ಹೋಗುತ್ತಿದೆ. ಬೆಂಕಿಯ ಬಿಸಿಗೆ ಬೆಂದು ಕರಟಿ ಹೋಗುವ ಮುನ್ನ ಎಚ್ಚರವಾಗೋಣ ಎಂಬುದೇ ನನ್ನ ಆಸೆ….
# ಎ.ಪಿ. ಸದಾಶಿವ ಮರಿಕೆ.
ನೂರಾರು ಕೋಟಿ ರೂಪಾಯಿ ಖರ್ಚು ಮಾಡಿ ಮಲೆನಾಡಿನ ಗ್ರಾಮೀಣ ಭಾಗಕ್ಕೂ ಶುದ್ಧವಾಗಿರುವ ಕುಡಿಯುವ…
ದೇಶಾದ್ಯಂತ ನಗರೀಕರಣ ಬೆಳವಣಿಗೆಯಾದಂತೆ ಸಮುದಾಯದ ಸ್ಥಳಗಳು ಕಣ್ಮರೆಯಾಗಿವೆ. ಕರಾವಳಿ ನಗರದಾದ್ಯಂತ ಸುಮಾರು 250…
ರಾಜ್ಯದ ಕಾಡಂಚಿನ ಪ್ರದೇಶದಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಸರ್ಕಾರ…
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಾಳೆ ಮಂಡಿಸಲಿರುವ ಕೇಂದ್ರ ಬಜೆಟ್ 2025…
ಬೆಂಗಳೂರಿನ ಯಲಹಂಕ ತಾಲ್ಲೂಕಿನ ಒಟ್ಟು 5678 ಎಕರೆ ಗುಂಟೆ ಪ್ರದೇಶವನ್ನು ಪರಿಸರ ಸಂರಕ್ಷಣೆ…
ಬೆಳೆಗಾರರಿಗೆ ತರಬೇತಿ ನೀಡಲು ತರಬೇತಿ ಕೇಂದ್ರ ಸ್ಥಾಪನೆ ಮಾಡಲಾಗುವುದು ಎಂದು ಕರ್ನಾಟಕ ಕೊಳಚೆ…