ಅಡಿಕೆ ಹಳದಿ ಎಲೆ ರೋಗ ವಿಸ್ತರಣೆ ತಡೆಗೆ ಪ್ಲಾಸ್ಟಿಕ್ ಹೊದಿಕೆಯಿಂದ ತಡೆಯಾಗಬಹುದೇ? ಹೀಗೊಂದು ಪ್ರಶ್ನೆ ಹಲವು ಸಮಯಗಳಿಂದ ಕಾಡುತ್ತಿತ್ತು. ಈ ಬಗ್ಗೆ ಈಚೆಗೆ ಸಿಪಿಸಿಆರ್‌ಐ ಮಾಜಿ ನಿರ್ದೇಶಕ ಡಾ.ಚೌಡಪ್ಪ ಅವರು ಹೇಳಿಕೆಯನ್ನೂ ನೀಡಿದ್ದರು. ಇದೀಗ ಪ್ಲಾಸ್ಟಿಕ್ ಹೊದಿಕೆ ಹಾಕಿರುವ ಈ ತೋಟದಲ್ಲಿ ವಿಸ್ತರಣೆ ತಡೆಯಾಗಿದೆ ಎಂದು ಕೃಷಿಕ ರಾಘವ ಹೇಳುತ್ತಾರೆ. ಆದರೆ ಆ ಪ್ಲಾಸ್ಟಿಕ್ ವಿಲೇವಾರಿ, ತ್ಯಾಜ್ಯ ನಿರ್ವಹಣೆ ಭವಿಷ್ಯದಲ್ಲಿ ಬಹುದೊಡ್ಡ ಸಮಸ್ಯೆಯಾಗಬಹುದು ಎನ್ನುವ ಅಭಿಪ್ರಾಯ ಇದೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸಂಪಾಜೆ, ಅರಂತೋಡು, ಮರ್ಕಂಜ ಪ್ರದೇಶದಲ್ಲಿ ಕಂಡುಬಂದಿದ್ದ ಅಡಿಕೆ ಹಳದಿ ಎಲೆ ರೋಗ ಈಗ ಹಲವು ಕಡೆಗಳಲ್ಲಿ ಕಂಡುಬಂದಿದೆ. ಇದಕ್ಕಾಗಿ ಹಲವು ವರ್ಷಗಳಿಂದ ವಿವಿಧ ಅಧ್ಯಯನ, ಸಂಶೋಧನೆ ನಡೆಯುತ್ತಲೇ ಇದೆ. ಖಚಿತವಾದ ಪರಿಹಾರ ಇದುವರೆಗೂ ಸಾಧ್ಯವಾಗಿಲ್ಲ. ಆದರೆ ಹಲವು ಮಾದರಿಗಳ ಬಗ್ಗೆ ವಿಜ್ಞಾನಿಗಳು ಹೇಳಿದ್ದಾರೆ. ಈ ನೆಲೆಯಲ್ಲಿ ಸಂಶೋಧನೆಗಳಿಗೆ ಸಾಕಷ್ಟು ಅನುದಾನಗಳು, ಸರಕಾರದ ಸಹಾಯವೂ ಬೇಕಾಗಿದೆ. ಈ ನಡುವೆಯೇ ಸಿಪಿಸಿಆರ್‌ಐ ವಿಜ್ಞಾನಿಗಳ ತಂಡ ಕಳೆದ 5 ವರ್ಷದ ಹಿಂದೆ ಪ್ರಾಯೋಗಿಕವಾದ ಕೆಲವು ಅಧ್ಯಯನ ನಡೆಸಿತ್ತು. ಅದರಲ್ಲಿ ಅಡಿಕೆ ಹಳದಿ ಎಲೆ ರೋಗದ ತೋಟದಲ್ಲಿ ಪ್ಲಾಸ್ಟಿಕ್ ಹೊದಿಕೆ ಹಾಕುವುದು ಒಂದು ವಿಧಾನ. ಹಳದಿ ಎಲೆ ರೋಗ ಪ್ರಾರಂಭಿಕ ಹಂತದಲ್ಲಿದ್ದರೆ ಪ್ಲಾಸ್ಟಿಕ್ ಹೊದಿಕೆಯ ವಿಧಾನ ಹೆಚ್ಚು ಪರಿಣಾಮಕಾರಿಯಾಗಿದೆ.
ಮಳೆಗಾಲದ ಅವಧಿಗೆ ಅಂದರೆ ಜೂನ್ ತಿಂಗಳಲ್ಲಿ ಮಣ್ಣಿಗೆ ನೀರು ಹರಿಯದಂತೆ ಇಡೀ ತೋಟಕ್ಕೆ ಪ್ಲಾಸ್ಟಿಕ್ ಹಾಕುವುದು, ಆ ಬಳಿಕ ಮಳೆಗಾಲದ ನಂತರ ಪ್ಲಾಸ್ಟಿಕ್ ತೆಗೆಯುವುದು. ಪ್ರಾಯೋಗಿಕವಾಗಿ ಹಾಗೂ ಅಧ್ಯಯನದ ನೆಲೆಯಲ್ಲಿ ಸಿಪಿಸಿಆರ್‌ಐ ವಿಜ್ಞಾನಿಗಳ ತಂಡ ಅಡಿಕೆ ಹಳದಿ ಎಲೆ ರೋಗ ಇರುವ ಕಡೆಗಳಲ್ಲಿ ಎರಡು ತೋಟಗಳಲ್ಲಿ ಈ ಬಗ್ಗೆ ಕಳೆದ ಐದು ವರ್ಷಗಳಿಂದ ಅಧ್ಯಯನ ಮಾಡುತ್ತಿದ್ದಾರೆ. ಈ ಬಗ್ಗೆ ಈಚೆಗೆ ಸಿಪಿಸಿಆರ್‌ಐ ಮಾಜಿ ನಿರ್ದೇಶಕ ಡಾ.ಚೌಡಪ್ಪ ಅವರು ಹೇಳಿಕೆಯನ್ನೂ ನೀಡಿದ್ದರು. ಒಟ್ಟು 5 ತೋಟಗಳಲ್ಲಿ ಈ ಪ್ರಯೋಗ ನಡೆದಿದೆ. ಸುಳ್ಯ ತಾಲೂಕಿನ ಮರ್ಕಂಜದಲ್ಲಿ 2 ತೋಟ ಹಾಗೂ ಕಲ್ಮಕಾರಿನಲ್ಲಿ ಒಂದು ತೋಟ ಮತ್ತು ಶೃಂಗೇರಿಯಲ್ಲಿ 2 ತೋಟದಲ್ಲಿ ಈ ಪ್ರಯೋಗ ಮಾಡಲಾಗಿದೆ.
ಸುಳ್ಯ ತಾಲೂಕಿನ ಮರ್ಕಂಜ ಗ್ರಾಮದ ಹರ್ಲಡ್ಕ ರಾಘವ ಹಾಗೂ ಇನ್ನೊಂದು ತೋಟದಲ್ಲಿನ ಹಳದಿ ಎಲೆ ರೋಗದ ತೀವ್ರತೆಯನ್ನು ಸರ್ವೆ ಮೂಲಕ ಪತ್ತೆ ಮಾಡಿದ್ದರು. ಹೀಗಾಗಿ ಆ ತೋಟದ ಮಧ್ಯ ಭಾಗದಲ್ಲಿ 60 ಅಡಿಕೆ ಮರದ ಸುತ್ತ ಪ್ಲಾಸ್ಟಿಕ್ ಹೊದಿಕೆ ಹಾಕಿದ್ದರು. ಐದು ವರ್ಷಗಳ ಕಾಲ ನಿರ್ವಹಣೆ ಮಾಡಿ ಇದೀಗ ಆ ತೋಟದಲ್ಲಿ ಅಡಿಕೆ ಹಳದಿ ಎಲೆ ರೋಗ ವಿಸ್ತರಣೆಯ ಪ್ರಮಾಣ ಕಡಿಮೆ ಇದೆ ಎಂದು ಕೃಷಿಕ ರಾಘವ ಅವರು ಹೇಳುತ್ತಾರೆ. ಈ ಬಗ್ಗೆ ವಿಜ್ಞಾನಿಗಳು ಖಚಿತವಾದ ದಾಖಲೆ ಹಾಗೂ ಅಂಕಿ ಅಂಶಗಳ ಮೂಲಕ ವರದಿಯನ್ನು ಬಹಿರಂಗಪಡಿಸಬೇಕಿದೆ. ಅದರಲ್ಲಿ ಮಣ್ಣಿನ ಪೋಷಕಾಂಶ ಸಹಿತ ಇತರ ಅಧ್ಯಯನ ನಡೆಯುತ್ತಿದೆ. ಆದರೆ ಮೇಲ್ನೋಟಕ್ಕೆ ಅಡಿಕೆ ಹಳದಿ ಎಲೆ ರೋಗ ವಿಸ್ತರಣೆಯಲ್ಲಿ ತಡೆಯಾಗಿದೆ ಎಂಬುದು ಕೃಷಿಕ ರಾಘವ ಅವರು ಅನುಭವ.
ಆದರೆ ಇಲ್ಲಿ ಸಮಸ್ಯೆಯಾಗುತ್ತಿರುವುದು ಪ್ಲಾಸ್ಟಿಕ್ ನಿರ್ವಹಣೆ. ಇಡೀ ತೋಟಕ್ಕೆ ಮಳೆಗಾಲದ ಮುನ್ನ ಪ್ಲಾಸ್ಟಿಕ್ ಹೊದಿಕೆ ಹಾಗೂ ಮಳೆಗಾಲದ ನಂತರ ಪ್ಲಾಸ್ಟಿಕ್ ತೆಗೆಯುವುದು. ಆ ಪ್ಲಾಸ್ಟಿಕ್ ವಿಲೇವಾರಿ, ತ್ಯಾಜ್ಯ ನಿರ್ವಹಣೆ ಭವಿಷ್ಯದಲ್ಲಿ ಬಹುದೊಡ್ಡ ಸಮಸ್ಯೆಯಾಗಬಹುದು. ಒಂದು ಸಮಸ್ಯೆ ನಿವಾರಿಸಲು ಹೋಗಿ ಇನ್ನೊಂದು ಸಮಸ್ಯೆ ಎಳೆದಂತಾಗಬಹುದು. ಇಡೀ ಪ್ರದೇಶದಲ್ಲಿ ಪ್ಲಾಸ್ಟಿಕ್ ಸಮಸ್ಯೆ ಕಾಡಬಹುದು ಎಂಬುದು ಸದ್ಯದ ಅಭಿಪ್ರಾಯ.
ಈ ನಡುವೆಯೇ ಅಡಿಕೆ ಹಳದಿ ರೋಗ ಪರಿಹಾರ ಹಾಗೂ ನಿಯಂತ್ರಣದ ಬದಲಾಗಿ ರೋಗ ನಿರೋಧಕ ತಳಿ ಅಭಿವೃದ್ಧಿಯ ಸಾಧ್ಯತೆ ಈಗಿನ ಆಶಾವಾದದ ಬೆಳವಣಿಗೆ. ಎರಡು ದಿನಗಳ ಹಿಂದೆಯಷ್ಟೇ ಐಸಿಎಆರ್ ಈಚೆಗೆ ಅಭಿವೃದ್ಧಿ ಪಡಿಸಿದ ಸುಮಾರು 35 ರೋಗ ನಿರೋಧಕ ತಳಿಯನ್ನು ಬಿಡುಗಡೆ ಮಾಡಲಾಗಿತ್ತು. ಅದೇ ಮಾದರಿಯಲ್ಲಿ ಅಡಿಕೆ ಹಳದಿ ಎಲೆ ರೋಗದಲ್ಲೂ ರೋಗ ನಿರೋಧಕ ತಳಿ ಅಭಿವೃದ್ಧಿ ಮಾಡುವುದು ಹಾಗೂ ಅದನ್ನು ರೈತರು ಬೆಳೆದಲ್ಲಿ ರೋಗ ನಿರೋಧಕ ಶಕ್ತಿಯುಳ್ಳ ಅಡಿಕೆ ಸಸಿಗಳನ್ನು ಪಡೆಯುವ ಸಾಧ್ಯತೆ ಹೆಚ್ಚು. ಈಗಾಗಲೇ ತೆಂಗಿನ ತಳಿ ಅಭಿವೃದ್ಧಿಯಲ್ಲಿ ಈ ಕೆಲಸ ನಡೆಯುತ್ತಿದೆ. ಈ ಸಂಬಂಧ ಈ ಹಿಂದೆಯೇ ಅಧ್ಯಯನ ನಡೆದಿದ್ದರೂ ಅನುಷ್ಟಾನ ಮಾತ್ರಾ ಆಗಿರಲಿಲ್ಲ.
ಸುಮಾರು 25 ವರ್ಷಕ್ಕಿಂತಲೂ ಹಳೆಯ, ಸಂಪೂರ್ಣವಾಗಿ ಅಡಿಕೆ ಹಳದಿ ಎಲೆ ರೋಗ ಬಾಧಿತ ಅಡಿಕೆ ತೋಟದಲ್ಲಿ ಈಗಲೂ ಹಸಿರಾಗಿರುವ ಅಡಿಕೆ ಮರಗಳನ್ನು ಆಯ್ಕೆ ಮಾಡಿ ಅದರಲ್ಲಿ ಕೃತಕವಾಗಿ ಪರಾಗಸ್ಪರ್ಶ ಮಾಡಿ ಅದರಲ್ಲಿ ಲಭ್ಯವಾಗುವ ಅಡಿಕೆಯನ್ನು ಗಿಡ ಮಾಡಿ ನಾಟಿ ಮಾಡಿದರೆ ರೋಗ ನಿರೋಧಕ ತಳಿಯಾಗಬಹುದು ಎಂಬುದು ಅಧ್ಯಯನ. ಹೀಗಾದರೆ 5 ವರ್ಷಗಳಲ್ಲಿ ಫಸಲು ಕೂಡಾ ಲಭ್ಯವಾಗುತ್ತದೆ. ಇಂತಹ ಅಡಿಕೆ ಗಿಡಗಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿರುತ್ತದೆ ಎಂಬುದು ಈ ಅಧ್ಯಯನದ ಸಂಕ್ಷಿಪ್ತ ಅಭಿಪ್ರಾಯ. ಈ ನಿಟ್ಟಿನಲ್ಲಿ ಇದೀಗ ಚಿಂತನೆಗಳು ನಡೆಯಬೇಕಿದೆ. ವಿಜ್ಞಾನಿಗಳ ತಂಡ ಈ ನೆಲೆಯಲ್ಲಿ ಯೋಚನೆ ಮಾಡುತ್ತಿದ್ದಾರೆ. ಅಡಿಕೆ ಬೆಳೆಗಾರರ ಹಾಗೂ ಸಂಸ್ಥೆಗಳ ಮತ್ತು ಸರಕಾರದ ಸಹಾಯ ಈಗ ಬೇಕಾಗಿದೆ. ಸುಳ್ಯ ಸೇರಿದಂತೆ ವಿವಿದೆಡೆ ವೇಗವಾಗಿ ಹರಡುತ್ತಿರುವ ಅಡಿಕೆ ಹಳದಿ ಎಲೆ ರೋಗಕ್ಕೆ ಪರಿಹಾರ ಸಿಗಬೇಕಿದೆ.
ಅಡಿಕೆ ಬೆಳೆಯಲ್ಲಿ ಪೋಷಕಾಂಶಗಳ ನಿರ್ವಹಣೆಯ ಬಗ್ಗೆ ಡಾ.ಭವಿಷ್ಯ ಅವರು ನೀಡಿರುವ ಮಾಹಿತಿ ಇಲ್ಲಿದೆ..(ಸಂಪೂರ್ಣ…
ಅಡಿಕೆ ಎಲೆಚುಕ್ಕಿ ರೋಗ ನಿರ್ವಹಣೆ ಹೇಗೆ..? ಕೃಷಿ ವಿಚಾರಗೋಷ್ಟಿಯಲ್ಲಿ ಮಾತನಾಡಿರುವ ಆಡಿಯೋ ಇಲ್ಲಿದೆ..
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…