ಅಡಿಕೆ ಹಳದಿ ಎಲೆರೋಗ (Arecanut Yellow Leaf Disease )ವಿಸ್ತರಣೆಯಾಗುತ್ತಿದೆ. ಹೀಗಾಗಿ ಕೃಷಿಕರ ಆತಂಕ ಹೆಚ್ಚಾಗುತ್ತಿದೆ. ಶೃಂಗೇರಿ, ಕೊಪ್ಪ, ಸಂಪಾಜೆಯಲ್ಲಿ ಮಾತ್ರವೇ ಇದ್ದ ಹಳದಿ ಎಲೆರೋಗ ಈಗ ವಿಸ್ತರಣೆಯಾಗುತ್ತಲೇ ಇದೆ. ಈ ಕಾರಣದಿಂದ ಸರ್ಕಾರ ಹಾಗೂ ಸಂಸ್ಥೆಗಳು ಈ ಬಗ್ಗೆ ಸರಿಯಾದ ಸಂಶೋಧನೆ , ಅಧ್ಯಯನ ಹಾಗೂ ಪರಿಹಾರ ಮಾರ್ಗಗಳ ಬಗ್ಗೆ ತಕ್ಷಣವೇ ಕ್ರಮ ಕೈಗೊಳ್ಳಲು ಕೃಷಿಕರಿಂದಲೇ ಒತ್ತಡ ಹೆಚ್ಚಿದೆ.
ಅಡಿಕೆ ಹಳದಿ ಎಲೆರೋಗದ ಸಂಶೋಧನೆ ಅನೇಕ ಸಮಯಗಳಿಂದ ಸಿಪಿಸಿಆರ್ ಐ ವಿಜ್ಞಾನಿಗಳು ಹಾಗೂ ಇತರ ವಿಜ್ಞಾನಿಗಳು ನಡೆಸುತ್ತಿದ್ದರೂ ಇಂದಿಗೂ ಸರಿಯಾದ ಕಾರಣ ತಿಳಿದಿಲ್ಲ. ಸಿಪಿಸಿಆರ್ ಐ ವಿಜ್ಞಾನಿಗಳು ಫೈಟೋಪ್ಲಾಸ್ಮಾ ಎಂಬ ವೈರಸ್ ಕಾರಣ ಎಂದು ಈ ನೆಲೆಯಲ್ಲಿ ಅಧ್ಯಯನ ಮುಂದುವರಿಸುತ್ತಾ, ಈಗ ರೋಗ ನಿರೋಧಕ ತಳಿಯ ಅಭಿವೃದ್ಧಿ ಕಡೆಗೆ ಗಮನಹರಿಸಿದ್ದಾರೆ. ಇದೇ ವೇಳೆ ಫೈಟೋಪ್ಲಾಸ್ಮಾ ಕಾರಣವಲ್ಲ ಅದಕ್ಕೆ ಬೇರೆಯೇ ಕಾರಣ ಎಂಬ ಇನ್ನೊಂದು ವಾದವೂ ಇದೆ. ಹೀಗಾಗಿ ಅಡಿಕೆ ಹಳದಿ ಎಲೆರೋಗ ಆರಂಭವಾಗಿ ಸುಮಾರು 60 ವರ್ಷ ಕಳೆದರೂ ಸರಿಯಾದ ಒಮ್ಮತದ ನಿರ್ಧಾರಗಳು ಸಾಧ್ಯವಾಗಿಲ್ಲ.
ಇದೀಗ ಕೃಷಿಕರು ಹಳದಿ ಎಲೆರೋಗಕ್ಕೆ ಸೂಕ್ತ ಪರಿಹಾರ ಹಾಗೂ ಅಧ್ಯಯನ ನಡೆಸಲು ಒತ್ತಾಯ ಮಾಡುತ್ತಿದ್ದಾರೆ. ಸರ್ಕಾರಕ್ಕೆ ಒತ್ತಾಯ ಮಾಡುವುದರ ಜೊತೆಗೆ ಸಹಕಾರಿ ಸಂಸ್ಥೆ ಕ್ಯಾಂಪ್ಕೋ ಮೂಲಕವೂ ಒತ್ತಾಯ ಮಾಡಲು ಆರಂಭಿಸಿದ್ದಾರೆ. ಕಳೆದ ವರ್ಷದ ಕ್ಯಾಂಪ್ಕೋ ಮಹಾಸಭೆಯಲ್ಲಿ ಅಡಿಕೆ ಹಳೆದಿ ಎಲೆರೋಗದ ಬಗ್ಗೆ ಪ್ರಸ್ತಾಪವಾಗಿದ್ದರೂ ಯಾವುದೇ ಗಮನಾರ್ಹವಾದ ಬೆಳವಣಿಗೆಯಾಗಿರಲಿಲ್ಲ. ಈ ಬಾರಿ ಮತ್ತೆ ಕೃಷಿಕರು ಸಂಘಟಿತರಾಗಿ ಕ್ಯಾಂಪ್ಕೋ ಕೂಡಾ ಅಡಿಕೆ ಹಳದಿ ಎಲೆರೋಗದ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು. ಕ್ಯಾಂಪ್ಕೋ ಮೂಲಕವೇ ಆರಂಭವಾದ ಸಂಶೋಧನಾ ವಿಭಾಗವನ್ನು ಬಲಗೊಳಿಸುವುದು ಹಾಗೂ ಈ ಮೂಲಕ ಕೇಂದ್ರ ಸರ್ಕಾರದ ಕೃಷಿ ಸಂಸ್ಥೆಯಾದ ಸಿಪಿಸಿಆರ್‌ಐ ಗೆ ನೆರವು ನೀಡಬೇಕು ಎನ್ನುವ ಒತ್ತಾಯ ಆರಂಭವಾಗಿದೆ.
ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘವೂ ಅಡಿಕೆ ಹಳದಿ ರೋಗದ ಹಿನ್ನೆಲೆಯಲ್ಲಿ ಕಳೆದ ಬಾರಿಯ ಕ್ಯಾಂಪ್ಕೋ ಮಹಾಸಭೆಯಲ್ಲೂ ವಿಷಯ ಪ್ರಸ್ತಾಪಿಸಿತ್ತು. ಈ ಬಾರಿ ಕೂಡಾ ಅಡಿಕೆ ಹಳದಿ ಎಲೆರೋಗದ ಬಗ್ಗೆ ಸೂಕ್ತ ನೆರವು ನೀಡಲು ಒತ್ತಾಯಿಸಲಿದೆ. ಅದರ ಜೊತೆಗೆ ಅಡಿಕೆ ಬೆಳೆಗಾರರ ಸಂಘವು ಸರ್ಕಾರವನ್ನೂ ಒತ್ತಾಯಿಸಿದೆ. ಹಳದಿ ಎಲೆರೋಗ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ವಾಸ್ತವ ಸ್ಥಿತಿಯನ್ನೂ ಸರ್ಕಾರದ ಗಮನಕ್ಕೆ ತಂದಿದೆ ಎಂದು ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಅಶೋಕ್ ಕಿನಿಲ ಹೇಳಿದ್ದಾರೆ.
ಅಡಿಕೆ ಹಳದಿ ಎಲೆರೋಗ ವ್ಯಾಪಕವಾಗುತ್ತಿರುವ ಈ ಸಂದರ್ಭದಲ್ಲಿ ಸೂಕ್ತವಾದ ಕ್ರಮಗಳು ಅನಿವಾರ್ಯವಾಗಿದೆ. ಈ ಕಾರಣದಿಂದ ಕೃಷಿಕರ ಸಂಸ್ಥೆಯಾದ ಕ್ಯಾಂಪ್ಕೋ ಸಹಿತ ಎಲ್ಲಾ ಸಹಕಾರಿ ಸಂಸ್ಥೆಗಳು ಮತ್ತು ಸರ್ಕಾರವು ಕೂಡಾ ಪರಿಹಾರ ಮಾರ್ಗದ ಕಡೆಗೆ ನೆರವು ನೀಡಬೇಕಿದೆ ಎಂದು ಕೃಷಿಕರು ಒತ್ತಾಯಿಸಿದ್ದಾರೆ.