ಅಡಿಕೆ ಹಳದಿ ಎಲೆರೋಗ ಈಚೆಗೆ ಹರಡುತ್ತಿದೆ. ಶೃಂಗೇರಿ, ಕೊಪ್ಪ ಹಾಗೂ ಸಂಪಾಜೆ ಪ್ರದೇಶದಲ್ಲಿ ಹೆಚ್ಚಾಗಿ ಕಂಡುಬಂದಿದ್ದ ಅಡಿಕೆ ಹಳದಿ ಎಲೆರೋಗ ಈಚೆಗೆ ಎಲ್ಲೆಡೆಯೂ ಹಬ್ಬುತ್ತಿದೆ. ಹೀಗಾಗಿ ಅಡಿಕೆ ಹಳದಿ ಎಲೆರೋಗ ಇಂದು ಬಹುದೊಡ್ಡ ಚರ್ಚೆಯ ವಿಷಯ. ಈಗ ಅಡಿಕೆ ಹಳದಿ ಎಲೆರೋಗಕ್ಕೆ ಪರಿಹಾರ, ಪರ್ಯಾಯ ಬೆಳೆ, ರೋಗನಿರೋಧಕ ತಳಿ ಈ ಮೂರು ವಿಚಾರಗಳ ನಡುವೆ ಅಡಿಕೆ ಬೆಳೆಗಾರರಿಗೆ ಆಯ್ಕೆಗಳು ತೆರೆದುಕೊಳ್ಳುತ್ತಿವೆ.
ಅಡಿಕೆಗೆ ಹಳದಿ ಎಲೆರೋಗ ಎಂದಾಕ್ಷಣ ಹಲವರು ಕೃಷಿಕರ, ಹಳದಿ ಎಲೆ ಬಾಧಿತರಲ್ಲದ ಕೃಷಿಕರ, ಅಧಿಕಾರಿಗಳು, ಜನಪ್ರತಿನಿಧಿಗಳ ಸಲಹೆ ಪರ್ಯಾಯ ಬೆಳೆ. ಅಡಿಕೆಯ ಬದಲು ಪರ್ಯಾಯ ಬೆಳೆ ಬೆಳೆಯಿರಿ ಎಂದು ಸುಲಭದಲ್ಲಿ ಸಲಹೆ ನೀಡುತ್ತಾರೆ. ಆದರೆ ಅಡಿಕೆ ಹಳದಿ ಎಲೆಬಾಧಿತ ಪ್ರದೇಶದ ರೈತರ ಸ್ಥಾನದಲ್ಲಿ ನಿಂತು ಯೋಚಿಸಿದಾಗ ಅಲ್ಲಿನ ಗಂಭೀರತೆ ಅರಿವಾಗುತ್ತದೆ. ಒಂದು ಕಡೆ ಹಳದಿ ರೋಗದಿಂದ ಅಡಿಕೆ ಮರಗಳು ಸಾಯುತ್ತಿದ್ದರೆ ಇನ್ನೊಂದು ಕಡೆ ಅಡಿಕೆ ಗಿಡಗಳ ಮರು ನಾಟಿ ಆಗುತ್ತಲೇ ಇದೆ. ಕಾರಣ ಆಶಾಭಾವನೆ. ಕನಿಷ್ಟ 10 ವರ್ಷ ಅಡಿಕೆ ಬಂದರೂ ಸಾಕು..!. ಅದಕ್ಕೆ ಕಾರಣ ಅಡಿಕೆ ಮಾರುಕಟ್ಟೆ, ಅಡಿಕೆ ಧಾರಣೆ….!. ಅಡಿಕೆ ಪರ್ಯಾಯ ಯಾವುದು ಎಂದು ಕೇಳಿದರೆ, ಅಡಿಕೆಯಷ್ಟು ಲಾಭವಿಲ್ಲದ ಕೃಷಿಯೇ ಕಾಣುತ್ತದೆ. ಈ ಎಲ್ಲದರ ನಡುವೆಯೂ ದಕ ಜಿಲ್ಲೆಯಲ್ಲಿ 2022-23ನೇ ಸಾಲಿನ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಅಡಿಕೆ ತೋಟದ ಪರ್ಯಾಯ ಬೆಳೆಗಳಿಗೆ ಪ್ರತಿ ಹೆಕ್ಟೇರಿಗೆ ಶೇ. 50ರಂತೆ ಪ್ರೋತ್ಸಾಹಧನ ನೀಡಲು ತಿರ್ಮಾನಿಸಲಾಗಿದೆ.
ಅಡಿಕೆ ಹಳದಿರೋಗಕ್ಕೆ ಇನ್ನೊಂದು ಮಾರ್ಗ, ಪರಿಹಾರ. ಪ್ರತೀ ರೈತಿಗೆ ಪರಿಹಾರ ನೀಡುವುದು. ಇದು ಸರ್ಕಾರದಿಂದ ಅಸಾಧ್ಯವಾದ ಮಾತು. ರೈತರಿಗೆ ಪರ್ಯಾಯ ಯಾವ ಮಾನದಂಡದಲ್ಲಿ ನೀಡುವುದು ಎನ್ನುವುದು ಪ್ರಶ್ನೆ. ಹಳದಿ ಎಲೆಪೀಡಿತ ತೋಟದಲ್ಲಿ ಮುಂದೆ ಬೆಳೆಯುವ ಬೆಳೆ, ಕೃಷಿಕನ ಬದುಕು ಇದೆರಡಕ್ಕೂ ಪರಿಹಾರ ನೀಡುವುದು ಹೇಗೆ ಮತ್ತು ಎಷ್ಟು ನೀಡಲು ಸಾಧ್ಯ. ಸರ್ಕಾರವು ಗ್ರಾಮಪಂಚಾಯತ್ ಮೂಲಕ ಸರ್ವೇ ನಡೆಸಲು ಸೂಚಿಸಿ, ಈಗ 1,043.38 ಹೆಕ್ಟೇರ್ ಬಾಧಿತ ಪ್ರದೇಶವನ್ನು ಹಳದಿ ರೋಗ ಬಾಧಿತ ಪ್ರದೇಶಗಳ ವ್ಯಾಪ್ತಿ ಮತ್ತು ತೀವ್ರತೆಯ ಅಂಕಿ-ಅಂಶಗಳ ನಿಖರ ಅಧ್ಯಯನಕ್ಕೆ ಎಲ್ಲ ಗ್ರಾ.ಪಂ. ವ್ಯಾಪ್ತಿಯಲ್ಲಿ ಬರುವ ತಾಂತ್ರಿಕ ಅಧಿಕಾರಿಗಳಿಗೆ ಸಮೀಕ್ಷೆ ನಡೆಸಲು ಕಳೆದ ಜನವರಿಯಲ್ಲಿ ತಂಡ ರಚಿಸಲಾಗಿತ್ತು. ಹಾಗೂ ಇದೀಗ ರಾಜ್ಯಾದ್ಯಂತ 13,993 ಸರ್ವೇ ನಂಬರ್ ಪ್ರದೇಶದಲ್ಲಿ ಸಮೀಕ್ಷೆ ನಡೆಸಿದ್ದು, ಒಟ್ಟು 7,048 ಸರ್ವೇ ನಂಬರ್ ವ್ಯಾಪ್ತಿಯಲ್ಲಿ ಈ ಹಳದಿ ರೋಗ ಬಾಧೆ ಕಂಡುಬಂದಿದೆ. ಹಾಗೂ ಇದು ಒಂದು ಬಹಳಷ್ಟು ನಷ್ಟ ಉಂಟು ಮಾಡುವ ರೋಗವಾಗಿದ್ದು 1,043.38 ಹೆಕ್ಟೇರ್‌ಗಳಲ್ಲಿ ಸುಮಾರು 14,29,440 ಅಡಿಕೆ ಮರಗಳು ರೋಗಬಾಧಿತ ಎಂದು ಪರಿಗಣಿಸಲಾಗಿತ್ತು. ಇದರ ಪ್ರಮಾಣ ಹೆಚ್ಚಾಗುತ್ತಿದೆ. ಇತ್ತೀಚೆಗೆ ರೋಗ ಲಕ್ಷಣ ಅಲ್ಲಲ್ಲಿ ಕಾಣುತ್ತಿದೆ. ಹೀಗಾಗಿ ಹಳದಿ ಎಲೆಪೀಡಿತ ಕೃಷಿಕರಿಗೆ ಪರಿಹಾರ ನೀಡುವುದು ವಿಸ್ತರಿಸುತ್ತಲೇ ಹೋಗುವುದು.
ಇನ್ನೀಗ ವಿಜ್ಞಾನಿಗಳು ಸಂಶೋಧನೆ ಹಾಗೂ ಅಧ್ಯಯನದ ದಾರಿಯಲ್ಲಿ ಇರುವುದು ದೇಶದ ಇತರೆಲ್ಲಾ ಬೆಳೆಗಳಿಲ್ಲಿ ನಡೆಸಿದಂತೆ ರೋಗ ನಿರೋಧಕ ತಳಿ ಅಭಿವೃದ್ಧಿ. ಇದು ಕೂಡಾ ಒಂದೆರಡು ವರ್ಷದ ಫಲಿತಾಂಶ ಅಲ್ಲ. ಕನಿಷ್ಟ 4-5 ವರ್ಷ ಬೇಕಾಗುತ್ತದೆ. ದೇಶದಲ್ಲಿ ಇತರೆಲ್ಲಾ ತಳಿಗಳಲ್ಲಿ ರೋಗ ನಿರೋಧಕ ತಳಿ ಅಭಿವೃದ್ಧಿ ಮಾಡಲಾಗಿದ್ದರೂ ಅಡಿಕೆಯಲ್ಲಿ ಇದುವರೆಗೂ ಆಗಿಲ್ಲ. ಹೀಗಾಗಿ ಈಗಾಗಲೇ ಅಡಿಕೆ ಹಳದಿ ಎಲೆರೋಗ ಪೀಡತ ಪ್ರದೇಶದಲ್ಲಿ ಈಗಲೂ ರೋಗ ನಿರೋಧಕವಾಗಿರುವ ತಳಿಯನ್ನು ಹುಡುಕಿ ಅವುಗಳಿಂದ ಗಿಡ ತಯಾರಿಸಿ ಬೆಳೆಸುವುದು ಈಗ ಬೆಳೆಗಾರರ ಮುಂದೆ ಇರುವ ದಾರಿಯಲ್ಲಿ ಒಂದು.
ಇದೆಲ್ಲವೂ ಅಲ್ಲದೆ, ಅಡಿಕೆ ಹಳದಿ ಎಲೆರೋಗವು ಅಡಿಕೆಯ ಮರದಲ್ಲಿ ಪೋಷಕಾಂಶಗಳ ಕೊರತೆಯಿಂದ ಬರುತ್ತದೆ ಎಂಬ ವಾದವೂ ಇದೆ. ಇದಕ್ಕಾಗಿ ಪೋಶಕಾಂಶಗಳ ಬಳಕೆ ಹಾಗೂ ಪ್ರತ್ಯೇಕವಾದ ಪ್ರಯತ್ನವೂ ಕೆಲವು ಕಡೆ ನಡೆದಿದೆ, ನಡೆಯುತ್ತಿದೆ.
ಇಷ್ಟೆಲ್ಲಾ ಬೆಳವಣಿಗೆ ಆಗುತ್ತಿರುವುದು ಇಂದು ನಿನ್ನೆಯಲ್ಲ. ಕಳೆದ ಹತ್ತಾರು ವರ್ಷಗಳಿಂದ ಅಡಿಕೆಯ ಹಳದಿ ಎಲೆರೋಗ ಇದೆ. ಹರಡುತ್ತಿದೆ. ಆದರೆ ಇಲಾಖೆಗಳು, ಸರ್ಕಾರ, ಜನಪ್ರತಿನಿಧಿಗಳು ಮಾತ್ರಾ ಅಷ್ಟೊಂದು ಗಂಭೀರವಾಗಿ ಪರಿಗಣಿಸಲೇ ಇಲ್ಲ. ಈಗ ಅಡಿಕೆ ಬೆಳೆಗಾರರು ಜಾಗೃತರಾಗಿದ್ದಾರೆ, ಇಲಾಖೆಗಳಿಗೆ, ಜನಪ್ರತಿನಿಧಿಗಳಿಗೆ ಈಗ ಎಚ್ಚರಿಕೆಯ ಗಂಟೆಯಾಗಿದೆ.