ಕಳೆದ ಎರಡು ವರ್ಷಗಳಿಂದ ಮಲೆನಾಡು ಹಾಗೂ ಕರಾವಳಿ ಭಾಗದ ಅಡಿಕೆ ಬೆಳೆಗಾರರ ನಡುವೆ ಇರುವ ಮಾತು, “ಫಸಲು ಇಲ್ಲ”, ಈ ಬಾರಿ ಅರ್ಧಕ್ಕರ್ಧ ಅಡಿಕೆ ಇಲ್ಲ, ಮುಂದಿನ ಸಲವೂ ಹೀಗೇ ಆಗಬಹುದು, ಏನು ಮಾಡಬಹುದು ಹೇಳಿ..!. ಎಲ್ಲರೂ ಮಾತನಾಡುವ ವಿಷಯ ಇದು. ಹೀಗೆ ಆಗುವುದಕ್ಕೆ ಕಾರಣವೇನು..? ಇಷ್ಟೇ ಅಲ್ಲ. ಅಡಿಕೆ ಮಾತ್ರವಲ್ಲ ಕಾಫಿ, ರಬ್ಬರ್, ತೆಂಗು ಬೆಳೆಗಾರರು ಕೂಡಾ ಸಂಕಷ್ಟ ಅನುಭವಿಸುತ್ತಿದ್ದಾರೆ. ಹಾಗಿದ್ದರೆ ಮುಂದೆ ಏನು ಮಾಡಬಹುದು, ಮಾಡಬೇಕು..? ಎನ್ನುವುದರ ಬಗ್ಗೆ ಆತಂಕವಲ್ಲ, ಚಿಂತನೆ ಶುರುವಾಗಬೇಕಿದೆ.………ಮುಂದೆ ಓದಿ……..
ಈಚೆಗೆ ಹವಾಮಾನ ಇಲಾಖೆ ತಾಪಮಾನದ ಮಾಹಿತಿ ನೀಡುತ್ತಿದೆ. ಈ ಮಾಹಿತಿಯ ಪ್ರಕಾರ ಹೆಚ್ಚು ಕಾಡು ಇರುವ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ತಾಪಮಾನ ಅಧಿಕ ಪ್ರಮಾಣದಲ್ಲಿ ದಾಖಲಾಗುತ್ತಿರುವ ಬಗ್ಗೆ ಹೇಳಿದೆ. ಬರದನಾಡು, ಗಣಿನಾಡು ಎಂದೆಲ್ಲಾ ಕರೆಯಿಸಿಕೊಳ್ಳುವ ಪ್ರದೇಶದಲ್ಲಿ ಇರಬೇಕಾದ ತಾಪಮಾನ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಕಂಡಿದೆ. ಈ ಬಾರಿ ಮಾರ್ಚ್11 ರಂದು ದಕ್ಷಿಣ ಕನ್ನಡ ಹಾಗೂ ಉತ್ತರಕನ್ನಡ ಜಿಲ್ಲೆಯಲ್ಲಿ ಅಧಿಕ ತಾಪಮಾನ ದಾಖಲಾಗಿದೆ, ನಂತರದ ಸ್ಥಾನ ಕೊಡಗು ಪ್ರದಶದಲ್ಲಿದೆ, ಆ ಬಳಿಕ ಶಿವಮೊಗ್ಗ, ಚಿಕ್ಕಮಗಳೂರು ಕೂಡಾ ಸೇರಿಕೊಂಡಿದೆ. ಒಂದು ದಿನವಲ್ಲ, ಇಂತಹ ತಾಪಮಾನ ಇನ್ನೂ ಕೆಲವು ದಿನಗಳಲ್ಲಿ ದಾಖಲಾಗಿದೆ.
ಸಾಮಾನ್ಯವಾಗಿ ಅಡಿಕೆ ಬೆಳೆಯು 14 ಡಿಗ್ರಿಯಿಂದ 36 ಡಿಗ್ರಿಯವರೆಗೆ ಮಾತ್ರವೇ ಅನುಕೂಲಕರವಾದ ವಾತಾವರಣ. ಈಗ ಸುಮಾರು 38 ಡಿಗ್ರಿಯರೆಗಿನ ತಾಪಮಾನ ಹೊಂದಿಕೆಯಾಗುತ್ತದೆ. ಕಳೆದ 4 ವರ್ಷಗಳಿಂದ ತಾಪಮಾನದಲ್ಲಿ ಬದಲಾವಣೆ ಆರಂಭವಾಗಿದೆ. 40 ಡಿಗ್ರಿಗಿಂತಲೂ ಅಧಿಕ ತಾಪಮಾನ ಒಂದು ದಿನವಲ್ಲ ಕೆಲವು ದಿನಗಳ ಕಾಲ ಆಗಾಗ ದಾಖಲಾಗುತ್ತಿದೆ.ಇದರ ಜೊತೆಗೇ ಗಮನಿಸಬೇಕಾದ ಅಂಶ ವಾತಾವರಣದಲ್ಲಿನ ತೇವಾಂಶ ಗಣನೀಯವಾಗಿ ಇಳಿಕೆಯಾಗುತ್ತಿದೆ. ಅಡಿಕೆ ಬೆಳೆಯು ಹೆಚ್ಚಿನ ತೇವಾಂಶವನ್ನು ಬಯಸುತ್ತದೆ. ಅಡಿಕೆ ನಳ್ಳಿ ಬೆಳೆಯುವ ವೇಳೆ ತೇವಾಂಶ ಶೇ.80 ರಿಂದ ಹೆಚ್ಚು ಇದ್ದರೆ ಮಾತ್ರವೇ ಇಳುವರಿಯನ್ನು ಹೆಚ್ಚಿಸುತ್ತದೆ. ಆ ಬಳಿಕ ಕೀಟಗಳ ನಿಯಂತ್ರಣ ಸೇರಿದಂತೆ ಉಳಿದೆಲ್ಲಾ ನಿರ್ವಹಣಾ ಕ್ರಮಗಳಿಂದ ಸಾಧ್ಯವಿದೆ.
ಕಾಫಿ ಬೆಳೆಗೆ ಅದರಲ್ಲಿ ಅರೇಬಿಕಾ ಕಾಫಿ ತಂಪಾದ ವಾತಾವರಣದಲ್ಲಿ ಉತ್ತಮವಾಗಿ ಬೆಳೆಯುತ್ತದೆ, ತಾಪಮಾನವು 15 ಡಿಗ್ರಿಯಿಂದ 35 ಡಿಗ್ರಿಯವರೆಗೆ ಶೇ.70 ರಷ್ಟು ತೇವಾಂಶ ಇದ್ದರೆ ಉತ್ತಮವಾಗಿ ಬೆಳೆಯುತ್ತದೆ. ರೋಬಸ್ಟಾ ಕಾಫಿ 5 ಡಿಗ್ರಿಯಿಂದ 30 ಡಿಗ್ರಿಯವರೆಗೆ ತಾಪಮಾನ ಹಾಗೂ ಶೇ.80 ತೇವಾಂಶವನ್ನು ಸಹಿಸಿಕೊಳ್ಳುತ್ತದೆ ಎನ್ನುವುದು ಅಧ್ಯಯನ ವರದಿಗಳು. ಹೆಚ್ಚಿನ ಮತ್ತು ಕಡಿಮೆ ತಾಪಮಾನ ಎರಡೂ ಕೂಡಾ ಕಾಫಿ ಬೆಳೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
ರಬ್ಬರ್ ಬೆಳೆಯ ಮೇಲೂ ಹವಾಮಾನ ಹಾಗೂ ತಾಪಮಾನದ ಏರಿಕೆ ಪರಿಣಾಮ ಉಂಟು ಮಾಡುತ್ತದೆ. ರಬ್ಬರ್ ಕೃಷಿ ಅತ್ಯುತ್ತಮವಾಗಿ ಬರಲು ವಾರ್ಷಿಕವಾಗಿ 2000 ಮಿಮೀ ಮಳೆ ಅಗತ್ಯ ಇದೆ. ಇದಕ್ಕಿಂತ ಹೆಚ್ಚಾದರೂ ಸಮಸ್ಯೆ ಇಲ್ಲ. ರೋಗಗಳು ಅಧಿಕವಾಗುತ್ತದೆ. ಆದರೆ ತಾಪಮಾನದಲ್ಲಿ ಬದಲಾವಣೆಯಾದರೆ ಇಳುವರಿ ಮೇಲೆ ಪರಿಣಾಮ ಬೀರುತ್ತದೆ. ಅಂದರೆ 20 ಡಿಗ್ರಿಯಿಂದ 35 ಡಿಗ್ರಿಯವರೆಗಿನ ವಾತಾವರಣ ರಬ್ಬರ್ ಇಳುವರಿಯ ಮೇಲೆ ಪೂರಕ ವಾತಾವರಣ ಇರುತ್ತದೆ. ಇದರ ಜೊತೆಗೆ ಶೇ.80 ರಷ್ಟು ತೇವಾಂಶ ಇರಬೇಕಾಗುತ್ತದೆ. ಹೀಗಿದ್ದರೆ ಮಾತ್ರವೇ ರಬ್ಬರ್ ಮರದ ಬೆಳವಣಿಗೆ ಹಾಗೂ ಇಳುವರಿಯೂ ಇರುತ್ತದೆ.
ಸದ್ಯ ಕಾಳುಮೆಣಸು ಕೃಷಿಯ ಟ್ರೆಂಡ್ ಇದೆ. ಕಾಡು ಕಡಿದು, ಕಾಂಕ್ರೀಟ್ ಪೋಲ್ ಮೂಲಕವೂ ಕಾಳುಮೆಣಸು ಕೃಷಿ ನಡೆಯುತ್ತಿದೆ. ಆದರೆ ಸದ್ಯ ಇಳುವರಿಯ ಬಗ್ಗೆ ಯಾವ ಚಿಂತೆ-ಚಿಂತನೆಯೂ ಇಲ್ಲ. ಆದರೆ ಅಧ್ಯಯನಗಳ ಪ್ರಕಾರ ಭಾರತದಲ್ಲಿ ಕಾಳುಮೆಣಸು ಕೃಷಿ ಯಶಸ್ಸಾಗಲು 23 ಡಿಗ್ರಿಯಿಂದ 35 ಡಿಗ್ರಿಯವರೆಗಿನ ತಾಪಮಾನ ಹಾಗೂ ಶೇ.75-80% ತೇವಾಂಶವೂ ಅಗತ್ಯ ಇದೆ. ಉಳಿದಂತೆ ಮಳೆಯ ಪ್ರಮಾಣ ಇತ್ಯಾದಿಗಳೆಲ್ಲವೂ ನಿರ್ವಹಣೆಯ ಮೂಲಕ ಸಾಧ್ಯವಿದೆ.
ಅಡಿಕೆಗೆ ಎಲೆಚುಕ್ಕಿ ರೋಗಕ್ಕಿಂತಲೂ ಈಗ ಕಾಡುತ್ತಿರುವುದು ಅಡಿಕೆಯ ಎಳೆ ನಳ್ಳಿ ಬೀಳುವ ಸಮಸ್ಯೆ. ತಾಪಮಾನ ಏರಿಕೆಯಾಗುತ್ತಿದ್ದಂತೆಯೇ ಹಲವು ಬಾರಿ ಔಷಧಿ ಸಿಂಪಡಣೆ ಮಾಡಿದ ಕೃಷಿಕರೂ ಈಗ ಮಾತಿಗೆ ಬರುತ್ತಿದ್ದಾರೆ. ಡಿಸೆಂಬರ್-ಜನವರಿ ಹೊತ್ತಿಗೆ ಅಡಿಕೆ ಫಸಲು ಈ ಬಾರಿ ಉಳಿಸಿಕೊಳ್ಳಬೇಕಾದರೆ ಎಳೆ ಅಡಿಕೆ ಸಿಂಪಡಣೆ ಮಾಡಿ ಎಂಬ ಸಲಹೆಗಳೇ ಇದ್ದವು. ಹೀಗಾಗಿ ಅನೇಕ ಕೃಷಿಕರು ಸಿಂಪಡಣೆಗೆ ಇಳಿದರು. ಕೆಲವರು ತಿಂಗಳು ಎರಡು ಬಾರಿ ಐದಾರು ಬಗೆಯ ಔಷಧಿ ಹಾಕಿ ಸಿಂಪಡಿಸಿದರು. ಇದೆಲ್ಲಾ ಮುಗಿದ ಬಳಿಕ ಮಾನಸಿಕವಾಗಿ ನೆಮ್ಮದಿಯಿಂದ ಇದ್ದ ಕೃಷಿಕರು ಮಾರ್ಚ್ ಆರಂಭವಾಗುತ್ತಿದ್ದಂತೆಯೇ ಅನುಭವ ಹೇಳಿಕೊಳ್ಳಲು ಆರಂಭಿಸಿದರು, ಔಷಧಿ ಸಿಂಪಡಣೆಯ ಬಳಿಕವೂ ಎಳೆ ಅಡಿಕೆ ಬೀಳುತ್ತಿದೆ, ಕಾರಣ ಏನು..? ಇನ್ನೂ ಏನು ಸಿಂಪಡಿಸಬೇಕು..? ಎನ್ನುವುದು ಅವರ ಆತಂಕವಾಗಿತ್ತು. ಏಕೆಂದರೆ ಅಡಿಕೆ ಬೆಳೆಗೆ ಈಗಿನ ಅದರ ಧಾರಣೆಗೆ ತಕ್ಕಷ್ಟು ಸಿಂಪಡಣೆಯಾಗಿದೆ. ಮುಂದೇನು..? ಎನ್ನುವ ಆತಂಕ ಬೆಳೆಗಾರರದ್ದು ಸಹಜವೇ ಆಗಿದೆ. ಹೇಗಾದರೂ ಮಾಡಿ ಬೆಳೆ ಉಳಿಸಿಕೊಳ್ಳಬೇಕು ಎನ್ನುವುದು ಅವರೆಲ್ಲರ ಹೆಬ್ಬಯಕೆ. ಆದರೆ ತಾಪಮಾನ ಈ ಬಾರಿಯೂ ಅಡಿಕೆ ಬೆಳೆಗೆ ಸೂಕ್ತವಾಗಿಲ್ಲ. ಈಗಿನ ಹವಾಮಾನ ವಿಶ್ಲೇಷಣೆ ಹಾಗೂ ಹವಾಮಾನ ಬದಲಾವಣೆಯ ಪ್ರಕಾರ ಬಹುಶ: ಮುಂದೆ ಇದೇ ಮಾದರಿಯ ವಾತಾವರಣ ಇರುತ್ತದೆ. ಹೀಗಾಗಿ ಮಲೆನಾಡು-ಕರಾವಳಿ ಭಾಗದ ಅಡಿಕೆ ಬೆಳೆಗಾರರು ಆತಂಕಕ್ಕೆ ಒಳಪಡುವ ಅಥವಾ ವಿಪರೀತ ಔಷಧಿ ಸಿಂಪಡಣೆಯ ಬದಲಾಗಿ ವಾಸ್ತವ ಹಾಗೂ ಭವಿಷ್ಯದ ಬಗ್ಗೆ ಯೋಚಿಸುವುದು ಹೆಚ್ಚು ಸೂಕ್ತ. ಏಕೆಂದರೆ ಎಲೆಚುಕ್ಕಿ ರೋಗಕ್ಕೆ ತೇವಾಂಶ ಕಡಿಮೆ ಇರಬೇಕು, ಅಡಿಕೆ ಫಸಲು ಹೆಚ್ಚು ಬರಬೇಕಾದರೆ ತೇವಾಂಶ ಹೆಚ್ಚು ಇರಬೇಕು. ಹೀಗಾಗಿ ಇದೆರಡನ್ನೂ ಸರಿ ಹೊಂದಿಸಿಕೊಳ್ಳುವುದು ವಿಜ್ಞಾನಕ್ಕೂ, ವಿಜ್ಞಾನಿಗಳಿಗೂ ಸಾಧ್ಯವಿಲ್ಲ. ಪ್ರಕೃತಿಗೆ ಮಾತ್ರವೇ ಸಾಧ್ಯ. ಅನಗತ್ಯವಾಗಿ ವಿಜ್ಞಾನಿಗಳನ್ನು ದೂರುವ ಕೆಲಸ ಮಾತ್ರಾ ನಡೆಯಬೇಕಷ್ಟೆ…!, ಯಾವ ಪರಿಹಾರವೂ ಇಲ್ಲ..!.
ರೈತರು ಹೇಳುತ್ತಾರೆ, ಈ ಬಾರಿಯೂ ಅಡಿಕೆ ನಷ್ಟವಾಗಿದೆ, ಅಡಿಕೆ ಉದುರುತ್ತಿದೆ. ಹವಾಮಾನ ವೈಪರೀತ್ಯದಿಂದಾಗಿ ಅಡಿಕೆ ಬೆಳೆಗೆ ಭಾರೀ ನಷ್ಟವಾಗಿದೆ.ಈ ವರ್ಷ ಫೆಬ್ರವರಿಯಿಂದಲೇ ವಿಪರೀತ ಬಿಸಿಲಿನ ಬೇಗೆ ಇದೆ , ಇಲಾಖೆ ಸೂಚಿಸಿದ ಔಷಧ ಸಿಂಪಡಿಸಿದರೂ ನಿರೀಕ್ಷಿತ ಫಲಿತಾಂಶ ಸಿಗುತ್ತಿಲ್ಲ ಎನ್ನುತ್ತಾರೆ. ಹೀಗಾಗಿ ಹವಾಮಾನ ವೈಪರೀತ್ಯ ಎನ್ನುವುದೇ ಕಾರಣ ಎಂದು ಅರಿವು ಇದ್ದ ಮೇಲೂ ಅದರ ನಿಯಂತ್ರಣಕ್ಕೆ ದೀರ್ಘಕಾಲಿಕವಾದ ಪ್ರಯತ್ನ ಅಗತ್ಯ ಇದೆ. ಕೃಷಿ ಉಳಿವಿಗೆ, ಕೃಷಿಕನ ಉಳಿವಿಗೆ. ಅಂತರಾಷ್ಟ್ರೀಯ ಮಟ್ಟದಲ್ಲೂ ಇಂದು ಹೋರಾಟ ನಡೆಯುತ್ತಿರುವುದು ಇದೇ ಹವಾಮಾನ ವೈಪರೀತ್ಯದ ಬಗ್ಗೆಯೇ..!. ಅಡಿಕೆ, ರಬ್ಬರ್, ಕಾಫಿ ಸೇರಿದಂತೆ ಹಲವು ಕೃಷಿಗೆ ಈಗ ಬಾಧಿಸಿದೆ. ತಾಪಮಾನ ಏರಿಕೆಗೆ ಜೊತೆಗೆ ತೇವಾಂಶವೂ ಇಳಿಕೆಯಾಗುತ್ತಿರುವುದು ಆತಂಕಕಾರಿಯಾದ ವಿಷಯ.
ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ತಾಪಮಾನ ಏರಿಕೆ ಹಾಗೂ ತೇವಾಂಶ ಇಳಿಕೆಗೆ ಕಾರಣ ಏನು ಎಂಬುದರ ಬಗ್ಗೆ ಅಧ್ಯಯನಗಳು ಇನ್ನಷ್ಟು ಬಲಗೊಳ್ಳಬೇಕಿದೆ. ಮಲೆನಾಡು ಭಾಗದಲ್ಲಿ ಸಾಕಷ್ಟು ಕಾಡುಗಳು ಇದ್ದವು..!. ಈಗ ಬೃಹತ್ ಮರಗಳು, ಕಾಡುಗಳು ನಾಶವಾಗಿ ಅದರೊಳಗೆ ಕೃಷಿ ಬೆಳೆಯುತ್ತಿದೆ. ಅಧ್ಯಯನವೊಂದರ ಪ್ರಕಾರ ಈಗಿನ ಕಾಡುಗಳಿಗೆ ತಾಪಮಾನದ ಕಾರಣದಿಂದ ಬೃಹತ್ ಮರಗಳಿಗೂ ತೇವಾಂಶವನ್ನು ಕಾಡಿನಲ್ಲಿ ಹಿಡಿದಿಡುವ ಸಾಮರ್ಥ್ಯ ಕಡಿಮೆಯಾಗುತ್ತಿದೆ, ಕಾಡಿನಲ್ಲಿ ಈಗ ಇರಬೇಕಾದ ತೇವಾಂಶಗಳೂ ಕಡಿಮೆಯಾಗುತ್ತಿದೆ. ಹೀಗಾಗಿ ಮಲೆನಾಡು ಕೂಡಾ ಒಣಭೂಮಿಯಾಗುತ್ತಿದೆ. ಈಚೆಗೆ ತಾಪಮಾನದ ಕಾರಣದಿಂದ ಕಾಡ್ಗಿಚ್ಚು ಹೆಚ್ಚಾಗುತ್ತಿದೆ, ಎಲ್ಲೋ ದೂರದಲ್ಲಿ ಕಾಡಿನ ಬೆಂಕಿ ಎಷ್ಟೋ ದೂರದವರೆಗೂ ಪರಿಣಾಮ ಬೀರುತ್ತಿದೆ. ಕಾಡ್ಗಿಚ್ಚು ಕಾರಣದಿಂದ ಕಾಡಿನ ತೇವಾಂಶ ಕಡಿಮೆಯಾಗುತ್ತಿದೆ, ಬಿಸಿ ಗಾಳಿ ಮತ್ತಷ್ಟು ಹೆಚ್ಚಾಗುತ್ತಿದೆ. ಹೀಗಾಗಿ ತಾಪಮಾನಕ್ಕೆ ಕೊಡುಗೆಯಾಗಿದೆ, ಕೃಷಿಯ ಮೇಲೆ ಪರಿಣಾಮ ಬೀರುತ್ತಿದೆ. ಕೆಲವು ಸಮಯದವರೆಗೂ ಕೃಷಿಕರೇ ಕಾಡನ್ನು ಉಳಿಸುತ್ತಿದ್ದರು. ಕೃಷಿ ಜೊತೆಗೆ ಇದ್ದ ಕಾಡನ್ನು ಕೃಷಿಗೆ ಪೂರಕ ಎಂದು ಉಳಿಸಿಕೊಳ್ಳುತ್ತಿದ್ದರು. ಈಗ ಇಂತಹ ಕಾಡುಗಳು ನಾಶವಾಗುತ್ತಿದೆ, ಕಾಡ್ಗಿಚ್ಚೂ ಹೆಚ್ಚಾಗಿದೆ.
ಈಗ ತಾಪಮಾನ ಏರಿಕೆಯ ನಡುವೆ ತೇವಾಂಶ ಹೆಚ್ಚಿಸಲು ಮಲೆನಾಡು ಹಾಗೂ ಕರಾವಳಿ ಭಾಗದ ಕೃಷಿಕರು ಆದ್ಯತೆ ನೀಡಬೇಕಿದೆ. ಇದಕ್ಕೆ ಅಗತ್ಯ ಇರುವ ಅಂಶಗಳ ಕಡೆಗೆ ಗಮನಹರಿಸಬೇಕಿದೆ. ಹಾಗಿದ್ದರೆ ಮಲೆನಾಡು ಹೊರತುಪಡಿಸಿ ಈಗಾಗಲೇ ವಿಸ್ತರಣೆಯಾಗಿರುವ ಅಡಿಕೆ ಬೆಳೆಯ ಕತೆ ಏನು? ಎನ್ನುವುದು ಕೂಡಾ ಪ್ರಶ್ನೆ ಇದೆ. ಆದರೆ ಹೆಚ್ಚಿನ ಕಡೆಗಳಲ್ಲಿ ತಾಪಮಾನದಲ್ಲಿ ಏರಿಕೆಯಾದರೂ ತೇವಾಂಶಗಳು ಅಡಿಕೆ ನಳ್ಳಿಯ ಮೇಲೆ ಪರಿಣಾಮ ಬೀರುತ್ತಿದೆ. ಹೀಗಾಗಿ ನೀರಿನ ಕೊರತೆ, ತಾಪಮಾನದಿಂದ ಅಡಿಕೆ ಮರ ಅಥವಾ ಕೃಷಿಯೇ ಒಣಗುತ್ತದೆ ಬಿಟ್ಟರೆ ಇಳುವರಿಯ ಮೇಲೆ ಅಷ್ಟೊಂದು ಹೊಡೆತವಾಗುತ್ತಿಲ್ಲ. ನೀರು ಯಥೇಚ್ಛವಾಗಿದ್ದರೆ ಇಳುವರಿಯೂ ಉಳಿದುಕೊಳ್ಳುತ್ತದೆ. ತಾಪಮಾನದ ಕಾರಣದಿಂದ ಎಲೆಚುಕ್ಕಿ ರೋಗವೂ ಅಡಿಕೆ ಗಿಡ ಮೇಲೆ ಗಂಭೀರವಾದ ಹೊಡೆತ ನೀಡಿಲ್ಲ ಎನ್ನುತ್ತದೆ ವರದಿಗಳು.
ಇಂದಿನ ಹವಾಮಾನ ಬದಲಾವಣೆಗೆ ಪ್ರಮುಖವಾಗಿ ಐದು ಹವಾಮಾನ ಅಸ್ಥಿರಗಳು ಕಾರಣವಾಗಿದೆ ಎಂದು ಅಧ್ಯಯನಗಳು ಹೇಳುತ್ತವೆ. ಗಾಳಿಯ ಉಷ್ಣತೆ, ತೇವಾಂಶ, ಆವಿ ಒತ್ತಡದ ಕೊರತೆ, ನಿರ್ದಿಷ್ಟವಾದ ಹ್ಯುಮಿಡಿಟಿ ಮತ್ತು ಮಣ್ಣಿನ ತಾಪಮಾನ. ಇಲ್ಲಿ ಯಾವುದೇ ಏರುಪೇರಾದರೂ ನಿಧಾನವಾಗಿ ಹವಾಮನದ ಮೇಲೆ ಪರಿಣಾಮ ಬೀರುತ್ತದೆ. ಮಲೆನಾಡು, ಕರಾವಳಿ ಭಾಗದಲ್ಲಿ ಈಗ ಆಗಿರುವ ಬದಲಾವಣೆಗಳು ಪರಿಣಾಮ ಬೀರಲು ಆರಂಭವಾಗಿದೆ. ಪ್ರಮುಖವಾದ ಹವಾಮಾನ ಅಸ್ಥಿರಗಳು ಕಾಣಲು ಆರಂಭವಾಗಿದೆ. ಅರಣ್ಯ ವ್ಯವಸ್ಥೆಗಳಲ್ಲಿ ಮಾನವನ ತೊಂದರೆಯು ಸೂಕ್ಷ್ಮವಾಗಿ ಪರಿಣಾಮ ನೀಡುತ್ತದೆ. ಈ ಸೂಕ್ಷ್ಮ ಬದಲಾವಣೆ ಕೃಷಿಯ ಮೇಲೆ ತಕ್ಷಣದ ಪರಿಣಾಮ ಕಾಣುತ್ತದೆ.
ರಬ್ಬರ್ ಬೆಳೆಗಾರರಿಗೆ ಇದರ ಬಗ್ಗೆ ಸಾಕಷ್ಟು ಅರಿವು ಇದೆ. ಮೋಡ ಬಂದ ಮರುದಿನ ರಬ್ಬರ್ ಇಳುವರಿ ಕಡಿಮೆ, ಪರಿಸರದಲ್ಲಿನ ಬದಲಾವಣೆ ರಬ್ಬರ್ ಇಳುವರಿಯಲ್ಲಿ ಮರುದಿನವೇ ಗೋಚರವಾಗುತ್ತದೆ. ಹೀಗಾಗಿ ಪರಿಸರ ವ್ಯವಸ್ಥೆಯ ಮೇಲೆ ಕೃಷಿಕರು ಗಮನಹರಿಸಬೇಕಿದೆ. ಅನಗತ್ಯವಾದ ಸಿಂಪಡಣೆಯು ಯಾವುದೇ ಪರಿಹಾರ ಕಾಣಲು ಸಾಧ್ಯವಿಲ್ಲ.ಸಮಸ್ಯೆ ಮತ್ತಷ್ಟು ಜಟಿಲವಾಗುತ್ತಲೇ ಹೋಗುತ್ತಿದೆಯಷ್ಟೆ.
For the past couple of years, arecanut growers in the Malnad and coastal areas have been buzzing with the same concern: “There is no harvest” This year, there’s only about half the usual yield, and everyone’s worried it might happen again. But it’s not just arecanut that’s taking a hit—coffee, rubber, and coconut growers are feeling the pinch too. Instead of fretting, maybe it’s time we put our heads together and brainstorm on what we can do next. Let’s focus on innovations and strategies to tackle these challenges head-on, because worrying won’t fill those baskets, right?
ರಾಜ್ಯದ ದಕ್ಷಿಣ ಒಳನಾಡು ಭಾಗಗಳಲ್ಲಿ ಮಾರ್ಚ್ 22 ರಿಂದ ಬೇಸಿಗೆ ಮಳೆ ಆರಂಭವಾಗುವ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜೋತಿಷಿಗಳನ್ನು ಸಂಪರ್ಕಿಸಿ 9535156490
ಭಾರತೀಯ ಮೂಲದ ಅಮರಿಕನ್ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಬಾಹ್ಯಾಕಾಶದಿಂದ…
ಒಂಬತ್ತು ತಿಂಗಳ ಹಿಂದೆ ಜೂನ್ 5 ರಂದು ISS ಅಂದರೆ ಅಂತಾರಾಷ್ಟ್ರೀಯ ಬಾಹ್ಯಾಕಾಶ…
ಮಂಗನಕಾಯಿಲೆ ಸೋಂಕು ಮಲೆನಾಡು ಕಡೆಗಳಲ್ಲಿ ಹೆಚ್ಚಾಗಿ ಕಾಣಿಸುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಕೆಲವು ಕಡೆ…