ಅಡಿಕೆ ಮಿತವಾದ ಬಳಕೆ ಹಾನಿಕಾರಕವಲ್ಲ. ಅನೇಕ ಸಮಯಗಳಿಂದ ಅಡಿಕೆ ಬಳಕೆ ಇದೆ. ವಿವಿಧ ಉತ್ಪನ್ನ ತಯಾರಾಗಿದೆ. 1974 ರಿಂದಲೇ ವಿವಿಧ ವರದಿಗಳು ಇವೆ. ಹಾಗಿದ್ದರೂ ಅಡಿಕೆ ಹಾನಿಕಾರಕ ಪಟ್ಟಿಯಿಂದ ಹೊರಬಂದಿಲ್ಲ. ಈಗ ನ್ಯಾಯಾಲಯಕ್ಕೆ ಈ ಬಗ್ಗೆ ವರದಿ ಸಲ್ಲಿಸುವ ಕೆಲಸ ನಡೆಯಬೇಕಿದೆ. ಈ ಮೂಲಕ ಅಡಿಕೆಯ ಮೇಲೆ ಇರುವ ಹಾನಿಕಾರಕ ಪಟ್ಟಿಯಿಂದ ಹೊರತರಿಸುವ ಕೆಲಸ ನಡೆಯಬೇಕಿದೆ.
ಅನೇಕ ವರ್ಷಗಳಿಂದ ಅಡಿಕೆ ಬಳಕೆ ಇದೆ. ಧಾರ್ಮಿಕವಾಗಿಯೂ ಅಡಿಕೆ ಬಳಕೆ ಇದ್ದರೆ, ಅಡಿಕೆ ಜಗಿಯುವುದಕ್ಕೂ ಬಹುಪಾಲು ಉಪಯೋಗವಾಗುತ್ತಿದೆ. ಆದರೆ ತಂಬಾಕು ಜೊತೆಗೆ ಸೇರಿಸಿ ವಿಪರೀತವಾಗಿ ಅಡಿಕೆ ಸೇವನೆಯಿಂದ ಅಪಾಯವೂ ಇದೆ ಎನ್ನುವುದು ವರದಿಗಳು ಇದೆ. ಆದರೆ ಅಡಿಕೆ ಮಾತ್ರವೇ ಹಾನಿಕಾರಕ ಅಲ್ಲ ಎಂಬ ಅಧ್ಯಯನ ವರದಿಗಳು 1974 ರಿಂದಲೇ ಇದೆ. ಹಾಗಿದ್ದರೂ ಅಡಿಕೆಯ ಹಾನಿಕಾರಕ ಪಟ್ಟ ಮಾತ್ರ ದೂರವಾಗಿಲ್ಲ.
ಅಡಿಕೆ ಕ್ಯಾನ್ಸರ್ ಕಾರಕವೇ ಅಥವಾ ಅಲ್ಲವೆ ಎಂಬುದನ್ನು ತಿಳಿಯಲು ಇಲಿಗಳ ಮೇಲೆ ಪ್ರಯೋಗಗಳನ್ನು ಮಾಡಲಾಗಿದೆ. ಈ ರೀತಿ ಪ್ರಯೋಗಗಳನ್ನು ಮಾಡುವಾಗ ಹೆಚ್ಚಿನ ಕಡೆ ಅಡಿಕೆಯನ್ನು ಮಿತಿಗಿಂತ ಹೆಚ್ಚು ಪ್ರಮಾಣದಲ್ಲಿ ಬಳಕೆ ಮಾಡಲಾಗಿದೆ. ಅಡಿಕೆಯನ್ನು ಹಿತಮಿತವಾಗಿ ಬಳಸಿದಲ್ಲಿ ಅಡಿಕೆ ಅಥವಾ ತಂಬಾಕುರಹಿತ ಬೀಡಾ ಮತ್ತು ಪಾನ್‍ಮಸಾಲ ಕ್ಯಾನ್ಸರ್ ಕಾರಕವಲ್ಲ ಎಂಬುದನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವೈಜ್ಞಾನಿಕ ಸಂಶೋಧನೆಗಳು ದೃಡಪಡಿಸಿವೆ. ಅದರ ಸಾರಾಂಶವನ್ನು ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ(ARDF) ಸಂಯೋಜಕ ಡಾ| ಕೇಶವ ಭಟ್ ಸರ್ಪಂಗಳ, ದ ರೂರಲ್ ಮಿರರ್‌ಗೆ ತಿಳಿಸಿದ್ದಾರೆ.ಅವರು ನೀಡಿರುವ ಮಾಹಿತಿ ಹೀಗಿದೆ…
ತಂಬಾಕುರಹಿತ ಬೀಡಾ ಕ್ಯಾನ್ಸರಿಗೆ ಕಾರಣವಲ್ಲ ಎಂದು 1962ರಲ್ಲಿ ಡಾ| ದುನ್‍ಹಾಮ್ ಮತ್ತು ಡಾ| ಹೆರಾಲ್ಡ್ ಎಂಬ ವಿಜ್ಞಾನಿಗಳು ಹಾಮ್‍ಸ್ಟರ್ ಜಾತಿಯ ಇಲಿಗಳ ಮೇಲೆ ಪ್ರಯೋಗ ಮಾಡಿ ಹೇಳಿದ್ದರು. ಅವರು ಅಮೇರಿಕಾದ ಮೇರಿಲ್ಯಾಂಡ್‍ನಲ್ಲಿ ಸಿಗುವ ತಂಬಾಕುರಹಿತ ವಿವಿಧ ತರದ ಬೀಡಾಗಳನ್ನು 375 ಹಾಮ್‍ಸ್ಟರ್‍ಗಳ ಬಾಯಿಯೊಳಗಿನ ತೆಳುವಾದ ಚರ್ಮದೊಳಗೆ ದೀರ್ಘ ಸಮಯ ಇರಿಸಿ ಈ ಪ್ರಯೋಗಗಳನ್ನು ಮಾಡಿದ್ದರು. ಪ್ರಯೋಗಕ್ಕೆ ಒಳಗಾದ ಹಾಮ್‍ಸ್ಟರ್‍ಗಳಲ್ಲಿ ಯಾವುದೇ ಕ್ಯಾನ್ಸರ್ ಲಕ್ಷಣಗಳು ಕಂಡುಬರಲಿಲ್ಲ.
ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಡಾ| ಲಲಿತಕುಮಾರಿ ಮತ್ತು ಇತರ ವಿಜ್ಞಾನಿಗಳು 1974 ರಲ್ಲಿ ಚಿಕ್ಕಿಲಿಗಳ ಮೇಲೆ ಅಡಿಕೆಯ ಸತ್ವವನ್ನು ಪ್ರಯೋಗಮಾಡಿದ್ದರು. ಶೇಕಡಾ 1ರ ಪ್ರಮಾಣದಲ್ಲಿ ಅಡಿಕೆಯ ಸತ್ವ ತೆಗೆದು 0.1 ಮಿ.ಲೀ. ನಷ್ಟು ಮತ್ತು ಶೇಕಡಾ 2ರ ಪ್ರಮಾಣದಲ್ಲಿ ತಂಬಾಕುರಹಿತ ಬೀಡಾದ ಸತ್ವವನ್ನು 0.1 ಮಿ. ಲೀ. ನಷ್ಟು ಚಿಕ್ಕಿಲಿಗಳ ಮೇಲೆ ಪ್ರಯೋಗಮಾಡಿದಾಗ ಅದು ಕ್ಯಾನ್ಸರ್ ಕಾರಕವಲ್ಲ ಎಂಬುದನ್ನು ಸಾಬೀತುಪಡಿಸಿದ್ದರು. ಅವರು ಇಂತಹ ಸತ್ವವನ್ನು ಸತತ ಎರಡು ವರ್ಷಗಳ ಕಾಲ ಸಾಧಾರಣ ಮತ್ತು ರೋಗವನ್ನು ತಡೆಯುವ ಶಕ್ತಿ ಇಲ್ಲದ ಚಿಕ್ಕಿಲಿಗಳ ಬೆನ್ನಿನ ಚರ್ಮದ ಮೇಲೆ ಹಚ್ಚಿ ಈ ಪ್ರಯೋಗಮಾಡಿದ್ದರು. ಚಿಕ್ಕಿಲಿಗಳ ಮೇಲೆ ಪ್ರಯೋಗಮಾಡಿದ ಅಡಿಕೆಯ ಪ್ರಮಾಣವು ಒಂದು ಕೆ.ಜಿ. ದೇಹದ ತೂಕಕ್ಕೆ ಸಾಧಾರಣ 3.3 ಗ್ರಾಂನಿಂದ 6.6 ಗ್ರಾಂ ನಷ್ಟು ಆಗುತ್ತದೆ.
ಡಾ| ರಣದಿವೆ ಮತ್ತು ಇತರ ವಿಜ್ಞಾನಿಗಳು 1976 ರಲ್ಲಿ ಅಡಿಕೆಯ ಪೇಸ್ಟನ್ನು ಹಾಮ್‍ಸ್ಟರ್‍ಗಳ ಬಾಯಿಯೊಳಗಿನ ತೆಳುವಾದ ಚರ್ಮದ ಪದರಕ್ಕೆ ಒಂದು ಕೆ.ಜಿ. ದೇಹದ ತೂಕಕ್ಕೆ 1.5 ಗ್ರಾಂ ನಷ್ಟು ಜೀವನಪರ್ಯಂತ ನಿತ್ಯ ಹಚ್ಚಿದಾಗಲೂ ಕ್ಯಾನ್ಸರ್ ಕಾಣಿಸಲಿಲ್ಲ. ಅದೇ ರೀತಿ ಚಿಕ್ಕಿಲಿಗಳ ಚರ್ಮದ ಮೇಲೆ ಒಂದು ಕೆ.ಜಿ. ದೇಹದ ತೂಕಕ್ಕೆ ಐದು ಗ್ರಾಂನಷ್ಟು ಅಡಿಕೆಯ ಪೇಸ್ಟನ್ನು ಹಚ್ಚಿದಾಗಲೂ ಕ್ಯಾನ್ಸರ್ ಕಾಣಿಸಲಿಲ್ಲ.
ಡಾ| ರಮೇಶ್ ರಾವ್ ಮತ್ತು ಡಾ| ಪದ್ಮಾದಾಸ್ ಎಂಬ ವಿಜ್ಞಾನಿಗಳು 1989ರಲ್ಲಿ ಒಂದು ಅಧ್ಯಯನದಿಂದ “ಒಬ್ಬ ವ್ಯಕ್ತಿಯು ಒಂದು ದಿವಸ ಹೆಚ್ಚೆಂದರೆ ಅವನ ಒಂದು ಕೆ.ಜಿ. ತೂಕಕ್ಕೆ ಹೋಲಿಸಿದಾಗ 0.5 ಗ್ರಾಂ ನಷ್ಟು ಅಡಿಕೆಯನ್ನು ಬೇರೆ ಬೇರೆ ಸಾಮಾಗ್ರಿಗಳೊಂದಿಗೆ ಜಗಿಯುತ್ತಾನೆ” ಎಂಬುದಾಗಿ ಲೆಕ್ಕ ಹಾಕಿದ್ದಾರೆ. ಹೀಗಾದಾಗ 60 ಕೆ.ಜಿ. ತೂಕದ ಒಬ್ಬ ವ್ಯಕ್ತಿಯು ಹೆಚ್ಚೆಂದರೆ 30 ಗ್ರಾಂನಷ್ಟು ಅಡಿಕೆಯನ್ನು ದಿನಾಲೂ ಜಗಿಯುತ್ತಾನೆ ಎಂದಾಯಿತು. ಅವರು ಮಂಗಳೂರು ಚಾಲಿ ಅಡಿಕೆ ಮತ್ತು ಮಲೆನಾಡಿನ ಕೆಂಪು ಅಡಿಕೆಗಳ ಹುಡಿಗಳನ್ನು ಒಂದು ಕೆ.ಜಿ. ದೇಹದ ತೂಕಕ್ಕೆ ಒಂದು ಗ್ರಾಂನಷ್ಟು ಆಹಾರದೊಂದಿಗೆ ಮಿಶ್ರಮಾಡಿ ಸತತವಾಗಿ 12 ತಿಂಗಳುಗಳ ಕಾಲ ಚಿಕ್ಕಿಲಿಗಳಿಗೆ ಕೊಟ್ಟಾಗಲೂ ಕ್ಯಾನ್ಸರಿನ ಲಕ್ಷಣಗಳು ಗೋಚರಿಸಲಿಲ್ಲ.
ತೈವಾನ್ ದೇಶದಲ್ಲಿ ಬೀಡಾದೊಂದಿಗೆ ತಂಬಾಕನ್ನು ಸೇರಿಸುವ ಅಭ್ಯಾಸವಿಲ್ಲ. ಬದಲಾಗಿ ಅಲ್ಲಿ ಎಳೆಅಡಿಕೆಯನ್ನು ಎರಡಾಗಿ ಸೀಳಿ ಅದರೊಳಗೆ ವೀಳ್ಯದೆಲೆಯ ಬದಲಾಗಿ ಅದರ ಹೂವು ಅಥವ ಕೋಡನ್ನು ಮತ್ತು ಸುಣ್ಣವನ್ನು ಸೇರಿಸಿ ಜಗಿಯುತ್ತಾರೆ. ಡಾ| ಲಿನ್ ಮತ್ತು ಇತರ ವಿಜ್ಞಾನಿಗಳು 1997ರಲ್ಲಿ ತೈವಾನ್‍ನಲ್ಲಿ ಬಳಸುವ ಬೀಡಾವನ್ನು ರುಬ್ಬಿ ಪೇಸ್ಟನ್ನಾಗಿ ಮಾಡಿ ಹಾಮ್‍ಸ್ಟರ್‍ಗಳ ಬಾಯಿಯೊಳಗಿನ ತೆಳುವಾದ ಚರ್ಮದ ಮೇಲೆ 14 ತಿಂಗಳುಗಳ ಕಾಲ ಸತತವಾಗಿ ಉಜ್ಜಿದಾಗಲೂ ಕ್ಯಾನ್ಸರ್ ಕಾಣಿಸಲಿಲ್ಲ.
ಪಾನ್ ಮಸಾಲದಿಂದ ತಯಾರಿಸಿದ ಸತ್ವವನ್ನು ಡಾ| ಆಶಾ ರಾಮ್‍ಚಂದಾನಿ ಮತ್ತು ಇತರ ವಿಜ್ಞಾನಿಗಳು 1998ರಲ್ಲಿ ಚಿಕ್ಕಿಲಿಗಳ ಮೇಲೆ 40 ವಾರಗಳ ಕಾಲ ಪ್ರಯೋಗಮಾಡಿ “ಪಾನ್ ಮಸಾಲದ ಸತ್ವವನ್ನು 50 ಮಿ. ಗ್ರಾಂ. ವರೆಗೆ ಚಿಕ್ಕಿಲಿಗಳ ಬೆನ್ನಿನ ಚರ್ಮಕ್ಕೆ ಅಷ್ಟೂ ಸಮಯ ಹಚ್ಚಿದಾಗಲೂ ಕ್ಯಾನ್ಸರ್ ಕಾಣಿಸಲಿಲ್ಲ” ಎಂದು ಹೇಳಿದ್ದಾರೆ. ಹಾಗೆಯೇ ಪಾನ್ ಮಸಾಲ ಸತ್ವವನ್ನು ಆರು ತಿಂಗಳವರೇಗೆ ದಿನಾಲೂ ಚಿಕ್ಕಿಲಿಗಳ ಜಠರಕ್ಕೆ ಪೈಪಿನ ಮೂಲಕ ಸೇರಿಸಿದಾಗಲೂ ಕ್ಯಾನ್ಸರ್ ಕಾಣಿಸಲಿಲ್ಲ. ಚಿಕ್ಕಿಲಿಗಳಿಗೆ 50 ಮಿ.ಗ್ರಾಂ. ಎಂದರೆ ಒಂದು ಕೆ.ಜಿ. ದೇಹದ ತೂಕಕ್ಕೆ 1.61 ಗ್ರಾಂ ಮತ್ತು 60 ಕೆ.ಜಿ. ದೇಹದ ತೂಕಕ್ಕೆ 100ಗ್ರಾಂ ನಷ್ಟು ಪಾನ್ ಮಸಾಲ ಆಗುತ್ತದೆ.
ಡಾ| ಭಿಡೆ ಮತ್ತು ಇತರ ವಿಜ್ಞಾನಿಗಳು 1979ರಲ್ಲಿ ಅಡಿಕೆಯ ಪ್ರಧಾನ ಅಲ್ಕಾಲಾಯ್ಡ್ – ಅರೆಕೊಲಿನ್‍ನನ್ನು 1.5 ಮಿ. ಗ್ರಾಂ. ನಷ್ಟು ಚಿಕ್ಕಿಲಿಗಳ ಜಠರಕ್ಕೆ ಪೈಪಿನ ಮೂಲಕ ಜೀವನಪೂರ್ತಿ ಕೊಟ್ಟಾಗ 25–58% ಮೂಷಿಕಗಳಲ್ಲಿ ಕ್ಯಾನ್ಸರ್ ಕಂಡುಬಂದಿದೆ. ಅಡಿಕೆಯಲ್ಲಿರುವ ಅರೆಕೊಲಿನ್ ಪ್ರಮಾಣವನ್ನು ಪರಿಗಣಿಸಿದಾಗ 1.5 ಮಿ.ಗ್ರಾಂ.ನಷ್ಟು ಅರೆಕೊಲಿನ್ ಸಿಗಲು 625 ಮಿ.ಗ್ರಾಂ. ಅಡಿಕೆ ಬೇಕಾಗುತ್ತದೆ. ಇದನ್ನು ಒಂದು ಕೆ.ಜಿ. ದೇಹದ ತೂಕಕ್ಕೆ ಹೋಲಿಸಿದಾಗ 20 ಗ್ರಾಂನಷ್ಟು ಅಡಿಕೆ ಆಗುತ್ತದೆ. ಅಂದರೆ ಒಬ್ಬ ವ್ಯಕ್ತಿಯು ದಿನಾಲೂ 1000 ದಿಂದ 1200 ಗ್ರಾಂ. ನಷ್ಟು ಅಡಿಕೆ ತಿನ್ನಬೇಕು!
ಅಡಿಕೆಯು ಕ್ಯಾನ್ಸರ್ ಬೆಳವಣಿಗೆಯನ್ನು ತಡೆಯುತ್ತದೆ: ಅಡಿಕೆಯು ಕ್ಯಾನ್ಸರ್ ಬೆಳವಣಿಗೆಯನ್ನು ಕೂಡ ತಡೆಯುತ್ತದೆ ಎಂದು ಹಲವಾರು ವೈಜ್ಞಾನಿಕ ವರದಿಗಳಿವೆ. ಲಲಿತ ಕುಮಾರಿ ಮತ್ತು ಇತರರು 1974ರಲ್ಲಿ ಚಿಕ್ಕಿಲಿಗಳ ಮೇಲೆ ನಡೆಸಿದ ಪ್ರಯೋಗಗಳಲ್ಲಿ ಇದು ಸಂಶಯಾತೀತವಾಗಿ ಸಾಬೀತಾಗಿದೆ. ಚಿಕ್ಕಿಲಿಗಳ ಚರ್ಮದ ಮೇಲೆ ಕ್ಯಾನ್ಸರ್ ಕಾರಕವಾದ 3:4,ಬೆಂಜ್ಪೈರೀನ್ ಲೇಪಿಸಿದಾಗ 33ನೇ ವಾರಗಳಿಂದ ಕ್ಯಾನ್ಸರ್ ಗೆಡ್ಡೆಗಳು ಬೆಳವಣಿಗೆಯಾಗಲು ಪ್ರಾರಂಭಿಸಿ 39ನೇ ವಾರದಲ್ಲಿ ಎಲ್ಲಾ ಪ್ರಾಣಿಗಳಲ್ಲಿ ಗೋಚರಿಸಿದವು. ಆದರೆ ಅಡಿಕೆ ಸಾರದೊಂದಿಗೆ ಪಡೆದ ಚಿಕ್ಕಿಲಿಗಳಲ್ಲಿ ಅಂತಹ ಗೆಡ್ಡೆಗಳು ಕಂಡುಬರಲಿಲ್ಲ ಎಂದು ಅವರು ಪ್ರಚುರಪಡಿಸಿದ್ದರು.
ಅಡಿಕೆಯು ಬಾಯಿ ಕ್ಯಾನ್ಸರ್ ವಿರುದ್ಧ ಕೂಡ ಪರಿಣಾಮಕಾರಿ. ಅಡಿಕೆ ಸಾರವು ಮಾನವನ ಬಾಯಿ ಕ್ಯಾನ್ಸರ್ ಜೀವಕೋಶಗಳನ್ನು ಕೊಲ್ಲುತ್ತದೆ ಆದರೆ ಸಾಮಾನ್ಯ ಜೀವಕೋಶಗಳನ್ನು ಅಲ್ಲ ಎಂಬುದಾಗಿ ಸಾರಿ ಮತ್ತು ಇತರರು 2017 ಮತ್ತು 2018ರಲ್ಲಿ ಹೇಳಿದ್ದಾರೆ. ಅಡಿಕೆಯ ಎಥೆನಾಲ್ ಸಾರಕ್ಕೆ ಜೀವಕೋಶಗಳನ್ನು 24 ಮತ್ತು 48 ಗಂಟೆಗಳ ಕಾಲ ಒಡ್ಡಿದಾಗ ಈ ಎರಡೂ ಕ್ಯಾನ್ಸರ್ ಜೀವಕೋಶಗಳ ಸಾವಿನಲ್ಲಿ ಗಮನಾರ್ಹ ಹೆಚ್ಚಳವನ್ನು ಅವರು ಗಮನಿಸಿದ್ಧರು. ಹೀಗಾಗಿ, ಈ ಲೇಖಕರು ಅಡಿಕೆಯನ್ನು ಮಾನವನ ಬಾಯಿ ಕ್ಯಾನ್ಸರ್ ಕೋಶಗಳ ವಿರುದ್ಧ ಕೀಮೋಥೆರಪಿಟಿಕ್ ಏಜೆಂಟ್ ಆಗಿ ಬಳಸಬಹುದು ಮತ್ತು ಸಾಂಪ್ರದಾಯಿಕ ಕೀಮೋ ರೇಡಿಯೋಥೆರಪಿಯ ಅಡ್ಡ ಪರಿಣಾಮಗಳನ್ನು ಸಮರ್ಥವಾಗಿ ಕಡಿಮೆ ಮಾಡಬಹುದು ಎಂದು ಪ್ರತಿಪಾದಿಸಿದ್ದಾರೆ.
ಇದಲ್ಲದೆ ಮಾನವನ ಸ್ತನದ ಕ್ಯಾನ್ಸರ್ ಕೋಶಗಳನ್ನು ಕೊಲ್ಲುವ ಗುಣ ಅಡಿಕೆಯ ಸತ್ವಕ್ಕೆ ಇದೆ ಎಂಬುದಾಗಿ ಅನಜ್‍ವಾಲ ಮತ್ತು ಇತರರು 2010ರಲ್ಲಿ ಹಾಗೂ ಹೊಟ್ಟೆಯ ಮತ್ತು ಪಿತ್ತಕೋಶದ ಕ್ಯಾನ್ಸರ್ ಕೋಶಗಳನ್ನು ಕೊಲ್ಲುವ ಗುಣ ಇದೆ ಎಂದು ಕ್ಸಿಯಾಂಗ್ ಮತ್ತು ಇತರರು ಅದೇ ವರ್ಷ ಹೇಳಿದ್ದಾರೆ. ತೈವಾನಿನ ತೈಪೆ ವೈದ್ಯಕೀಯ ವಿಶ್ವವಿದ್ಯಾಲಯದ ವೀ ಮತ್ತು ಇತರರು ಕೂಡ 2021ರ ಸಂಶೋಧನೆಯಲ್ಲಿ ಅಡಿಕೆ ಪಿತ್ತಕೋಶದ ಕ್ಯಾನ್ಸರ್ ಬೆಳವಣಿಗೆಯನ್ನು ತಡೆಯುತ್ತೆ ಎಂಬುದಾಗಿ ಹೇಳಿದ್ದಾರೆ. ಪಿತ್ತಕೋಶದ ಕಾನ್ಸರ್ ತಗಲಿದ ಚಿಕ್ಕಿಲಿಗಳಲ್ಲಿ ಅಡಿಕೆ ಸಾರವನ್ನು ಕೊಟ್ಟಾಗ ಕ್ಯಾನ್ಸರ್ ಗಡ್ಡೆಗಳ ಬೆಳವಣಿಗೆ ಮತ್ತು ಗಾತ್ರದಲ್ಲಿ ಅಡಿಕೆ ಸಾರ ಕೊಡದ ಚಿಕ್ಕಿಲಿಗಳಲ್ಲಿರುವ ಕ್ಯಾನ್ಸರ್ ಗಡ್ಡೆಗಳಿಗಿಂತ ಶೇ 50 ಕ್ಕಿಂತಲೂ ಕಡಿಮೆ ಆಗಿತ್ತು ಎಂದು ಅವರು ಹಳಿದ್ದಾರೆ. ಮೇಲಾಗಿ ಅಡಿಕೆ ಸಾರದ ಸುಧೀರ್ಘ ಬಳಕೆಯಿಂದ ದೇಹದ ಒಳಗಿನ ಪ್ರಮುಖ ಅಂಗಗಳಾದ ಪಿತ್ತಕೋಶ, ಹೃದಯ, ಶ್ವಾಸಕೋಶ, ಕಿಡ್ನಿ, ಮೊದಲಾದವುಗಳಲ್ಲಿ ಯಾವುದೇ ರೀತಿಯ ವೈಫಲ್ಯ ಕಂಡುಬರಲಿಲ್ಲ ಎಂಬುದು ಅವರ ಹೇಳಿಕೆ. ಈ ಅನ್ವೇಷಣೆಯ ಪ್ರಕಾರ ಅಡಿಕೆಯ ಸಾರವನ್ನು ಪಿತ್ತಕೋಶದ ಕ್ಯಾನ್ಸರ್ ತಡೆಯಲು ಒಂದು ಉಪಯುಕ್ತ ಚಿಕಿತ್ಸಾ ಪದ್ದತಿಯಾಗಿ ಬಳಸಬಹುದು ಎಂಬುದು ಈ ವಿಜ್ಞಾನಿಗಳ ಅನಿಸಿಕೆ.
ಅಡಿಕೆಯ ಅರೆಕೊಲಿನ್ ಅಂಶ ಕೂಡ ಕ್ಯಾನ್ಸರ್ ಬೆಳವಣಿಗೆಯನ್ನು ತಡೆಯುತ್ತದೆ ಎಂಬುದಾಗಿ ಫಾನ್ ಮತ್ತು ಇತರ 25 ವಿಜ್ಞಾನಿಗಳ ಸಮೂಹ ಇಲಿಗಳ ಮೇಲೆ ನಡೆಸಿದ ಮತ್ತೊಂದು ಅಧ್ಯಯನದಲ್ಲಿ ದೃಢೀಕರಿಸಿದ್ದಾರೆ. ಅರೆಕೊಲಿನ್ ಹೈಡ್ರೋಬ್ರೊಮೈಡ್, ಕ್ಯಾನ್ಸರ್ ಕೋಶಗಳ ಪ್ರಸರಣ ಮತ್ತು ಬೆಳವಣಿಗೆಗೆ ಪ್ರಮುಖ ಕಾರಣವಾದ ಅಸೆಟೈಲ್-ಅoಂ ಅಸೆಟೈಲ್ಟ್ರಾನ್ಸ್ಫರೇಸ್ ಕಿಣ್ವದ ಚಟುವಟಿಕೆಯನ್ನು ಪ್ರತಿಬಂಧಿಸುತ್ತದೆ ಎಂದು ಅವರು 2016ರಲ್ಲಿ ವರದಿ ಮಾಡಿದ್ದಾರೆ. ಮಾತ್ರವಲ್ಲದೆ, ಕ್ಯಾನ್ಸರ್ ಗೆಡ್ಡೆಗಳಿರುವ ಇಲಿಗಳಿಗೆ ಅರೆಕೊಲಿನ್ ಒಂದು ಕೆ. ಜಿ. ದೇಹದ ತೂಕಕ್ಕೆ 50 ಮಿ. ಗ್ರಾಂ. ನಷ್ಟು ಇಂಟ್ರಾಪೆರಿಟೋನಿಯಲ್ ಇಂಜೆಕ್ಷನ್ ಮೂಲಕ ಕೊಟ್ಟಾಗ ಕ್ಯಾನ್ಸರ್ ಗೆಡ್ಡೆಗಳ ಬೆಳವಣಿಗೆಗಳನ್ನು ನಿಯಂತ್ರಿಸಿವೆ ಎಂಬುದಾಗಿ ಅವರು ಹೇಳಿರುತ್ತಾರೆ ಎಂದು ಕೇಶವ ಭಟ್ ಅವರು ತಮ್ಮ ಸಂಗ್ರಹದಿಂದ ನೀಡಿದ ವರದಿಯಾಗಿದೆ.
ಅಡಿಕೆ ಹಾನಿಕಾರಕವಲ್ಲ ಎಂಬ ಅಧ್ಯಯನ ವರದಿಗಳು ಸಾಕಷ್ಟು ಇದ್ದರೂ ಅಡಿಕೆಯ ಮೇಲಿನ ಹಾನಿಕಾರಕ ಭೀತಿ ಮಾತ್ರಾ ದೂರವಾಗಿಲ್ಲ. ಇದೀಗ ಜೆಡ್ಡು ಆಯುರ್ವೇದ ಸಂಸ್ಥೆ, ಮಣಿಪಾಲದ ಆಯುರ್ವೇದ ಸಂಸ್ಥೆ ಸೇರಿದಂತೆ ಹಲವಾರು ಆಯುರ್ವೇದಸಂಸ್ಥೆಗಳು ಅಡಿಕೆಯ ಬಗ್ಗೆ ಅಧ್ಯಯನ ಮಾಡಿವೆ. ಅಡಿಕೆ ಹಾನಿಕಾರಕವಲ್ಲ, ಮಿತವಾಗಿ ಬಳಕೆ ಮಾಡಬೇಕು , ಅದೊಂದು ಔಷಧೀಯ ವಸ್ತು ಎಂದು ಹೇಳಿದ್ದರೂ ಸರ್ಕಾರಗಳು ನ್ಯಾಯಾಲಯದ ಗಮನಕ್ಕೆ ಇದನ್ನು ತರುವಲ್ಲಿ ಇನ್ನೂ ಗಂಭೀರವಾದ ಪ್ರಯತ್ನ ನಡೆಸಿಲ್ಲ. ಈ ಪ್ರಯತ್ನ ನಡೆಯಬೇಕಿದೆ. ಆಗ ಅಡಿಕೆ ಬೆಳೆಗಾರರಿಗೆ ಇರುವ ಭಯ ಶಾಶ್ವತವಾಗಿ ನಿವಾರಣೆಯಾಗಲಿದೆ.
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel