ಅಡಿಕೆ ಕಳ್ಳಸಾಗಾಣಿಕೆ ಮೂಲಕ ಭಾರತಕ್ಕೆ ಬರುವುದು ಇನ್ನೂ ಕಡಿಮೆಯಾಗಿಲ್ಲ. ಕಳೆದ ಎರಡು ತಿಂಗಳಿನಿಂದ ಅಕ್ರಮವಾಗಿ ಭಾರತದೊಳಕ್ಕೆ ಬಂದಿರುವ ಬರ್ಮಾ ಅಡಿಕೆಯು ಇಲ್ಲಿನ ಮಾರುಕಟ್ಟೆ ಮೇಲೆ ಪರಿಣಾಮ ಬೀರುತ್ತಿದೆ. ಈ ನಡುವೆ ಮತ್ತೆ ಬರ್ಮಾ ಅಡಿಕೆ ಕಳ್ಳದಾರಿಯ ಮೂಲಕ ಸಾಗಾಟ ಮಾಡಲಾಗುತ್ತಿದೆ. ಸೆ.3 ರಂದು ಮಿಜೋರಾಂನ ಭದ್ರತಾ ಪಡೆಗಳು ಚಂಫೈ ಜಿಲ್ಲೆಯಲ್ಲಿ ಅಡಿಕೆ ಸಾಗಾಟವನ್ನು ಅಸ್ಸಾಂ ರೈಫಲ್ಸ್ ವಶಪಡಿಸಿಕೊಂಡಿದೆ. ಸುಮಾರು 89.6 ಲಕ್ಷ ಮೌಲ್ಯದ ಅಡಿಕೆ ವಶ ಪಡೆದಿದ್ದಾರೆ.
ಮಿಜೋರಾಂನಲ್ಲಿ ಅಸ್ಸಾಂ ರೈಫಲ್ಸ್ ಮತ್ತು ತೆರಿಗೆ ಇಲಾಖೆ ಅಧಿಕಾರಿಗಳ ಜಂಟಿ ಕಾರ್ಯಾಚರಣೆಯಲ್ಲಿ ಅಡಿಕೆ ಸಾಗಾಟ ಪತ್ತೆ ಮಾಡಲಾಗಿದೆ. 89.6 ಲಕ್ಷ ಮೌಲ್ಯದ 160 ಚೀಲ ಅಡಿಕೆಗಳನ್ನು ವಶಪಡಿಸಿಕೊಂಡಿದೆ ಎಂದು ಅಸ್ಸಾಂ ರೈಫಲ್ಸ್ ಹೇಳಿಕೆ ತಿಳಿಸಿದೆ.
ಕಳೆದ ಕೆಲವು ಸಮಯಗಳಿಂದ ಅಡಿಕೆ ಕಳ್ಳಸಾಗಾಣಿಕೆ ಮೂಲಕ ಭಾರತದೊಳಕ್ಕೆ ಬರುತ್ತಿದೆ. ಬರ್ಮಾ ಅಡಿಕೆಯು ವಿವಿಧ ದಾರಿಯ ಮೂಲಕ ಭಾರತದೊಳಕ್ಕೆ ಬಂದು, ಕರ್ನಾಟಕದ ವಿವಿಧ ಕಡೆಗಳಿಗೂ ಬಂದಿಳಿದಿದೆ ಎಂದು ಮಾರುಕಟ್ಟೆ ವಲಯದಲ್ಲಿ ಚರ್ಚೆಯಾಗುತ್ತಿದೆ. ಹೀಗಾಗಿ ಈಗ ಏರಿಕೆ ಕಾಣಬೇಕಾದ ಅಡಿಕೆ ಮಾರುಕಟ್ಟೆಯು ಕಳೆಗುಂದಿದೆ.
ಗಣೇಶ ಚೌತಿಯ ಸಮಯದಲ್ಲಿ ಅಡಿಕೆಗೆ ಹೆಚ್ಚಿನ ಬೇಡಿಕೆ ಬರುವುದು ಸಾಮಾನ್ಯವಾಗಿದೆ. ಗಣೇಶ ಚೌತಿಯ ಬೇಡಿಕೆ ಪೂರೈಕೆಗೆ ಈಗಲೇ ಅಡಿಕೆ ದಾಸ್ತಾನು ಪ್ರಕ್ರಿಯೆ ನಡೆಯುತ್ತದೆ. ಆದರೆ ಈ ಬಾರಿ ಅಂತಹ ಬೇಡಿಕೆ ಆರಂಭಗೊಂಡಿಲ್ಲ. ಕಳೆದ ಕೆಲವು ದಿನಗಳಿಂದ ಹಾಗೂ ಈಗಲೂ ವಿವಿಧ ಮಾರ್ಗಗಳಿಂದ ಬರ್ಮಾ ಅಡಿಕೆಯನ್ನು ಸಂಗ್ರಹಿಸಿ ಗಣೇಶ ಚೌತಿಯ ಬೇಡಿಕೆಯನ್ನು ಪೂರೈಸಲು ಬಳಕೆ ಮಾಡಲಾಗುತ್ತಿದೆ ಎನ್ನುವುದು ಮಾರುಕಟ್ಟೆ ವಲಯದ ಅಭಿಪ್ರಾಯ. ಆದರೆ ಅಡಿಕೆ ಧಾರಣೆ ಸ್ಥಿರತೆಯಲ್ಲಿ ಇರಬಹುದು, ನಿರೀಕ್ಷೆಯಂತೆ ಏರಿಕೆಯಾಗದು ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಕಡಿಮೆ ಗುಣಮಟ್ಟದ ಬರ್ಮಾ ಅಡಿಕೆಯನ್ನು ಇಲ್ಲಿನ ಅಡಿಕೆಯೊಂದಿಗೆ ಬೆರೆಸಿ ಮಾರಾಟ ಮಾಡುವ ಪ್ರಯತ್ನವೂ ಕೆಲವು ಕಡೆ ನಡೆಯುತ್ತಿದೆ. ಹೀಗಾಗಿ ಈಗ ಅಡಿಕೆ ಬೆಳೆಗಾರರಿಗೆ ಬರ್ಮಾ ಅಡಿಕೆ ಬಹುದೊಡ್ಡ ತಲೆನೋವಾಗಿದೆ.