ಅಡಿಕೆ ಹಳದಿಎಲೆ ರೋಗದಿಂದ ತತ್ತರಿಸುತ್ತಿದ್ದರೆ ಇನ್ನೊಂದು ಕಡೆ ಈ ವರ್ಷ ಮಳೆಯ ಕಾರಣದಿಂದಲೂ ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಮಳೆಯ ಕಾರಣದಿಂದ ಅಡಿಕೆ ಒಣಗಿಸಲು ಆಗದೆ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕೊಡಗಿನಲ್ಲೂ ಕಾಫಿ ಬೆಳೆಗಾರರಿಗೆ ಆದ ಮಾದರಿಯಲ್ಲಿಯೇ ಸಮಸ್ಯೆ ಆಗಿದೆ. ಹೀಗಾಗಿ ಅಡಿಕೆ ಬೆಳೆಗಾರರಿಗೂ ಅದೇ ಮಾದರಿಯಲ್ಲಿ ಪರಿಹಾರ ನೀಡಬೇಕು ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಸದನದಲ್ಲಿ ಒತ್ತಾಯಿಸಿದ್ದಾರೆ.
ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲ ಅಧಿವೇಶನದಲ್ಲಿ ಮಂಗಳವಾರ ಸದನ ಗಮನ ಸೆಳೆಯುವ ಪ್ರಶ್ನೆಯಲ್ಲಿ ಮಾತನಾಡಿದರು. ದೇಶದಲ್ಲಿ ಅತೀ ಹೆಚ್ಚು ಅಡಿಕೆ ಬೆಳೆಯುವ ರಾಜ್ಯ ಕರ್ನಾಟಕ. ಶೇ 61 ರಷ್ಟು ಅಡಿಕೆ ಇಲ್ಲಿ ಬೆಳೆಯಲಾಗುತ್ತದೆ. ಸುಮಾರು 706 ಸಾವಿರ ಟನ್ ಅಡಿಕೆ ಇಲ್ಲಿ ಬೆಳೆಯಲಾಗುತ್ತದೆ. ಹೀಗಾಗಿ ಈ ಬಾರಿ ಮಳೆಗಾಲದಲ್ಲಿ ಸಮಸ್ಯೆಯಾಗಿದೆ. ಅದಕ್ಕಾಗಿ ಅಡಿಕೆ ಬೆಳೆಗಾರರ ಹಿತರಕ್ಷಣೆಗೆ ಸರಕಾರ ಬರಬೇಕು ಎಂದು ಹರೀಶ್ ಪೂಂಜಾ ಒತ್ತಾಯಿಸಿದರು.
ಆರಂಭದಲ್ಲಿ ಅಡಿಕೆ ಹಳದಿ ಎಲೆ ರೊಗದ ಬಗ್ಗೆ ಪ್ರಸ್ತಾಪ ಮಾಡಿದ ಶಾಸಕ ಹರೀಶ್ ಪೂಂಜಾ , ಅಡಿಕೆ ಹಳದಿ ಎಲೆರೋಗದಿಂದ ರಾಜ್ಯದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ದಾವಣಗೆರೆಯಲ್ಲಿ ಕೃಷಿಕರಿಗೆ ಸಮಸ್ಯೆಯಾಗಿದೆ. ಶೃಂಗೇರಿಯಲ್ಲಿ ಶೇ ೬೨, ಕೊಪ್ಪದಲ್ಲಿ ಶೇ 72 , ಮೂಡಿಗೆರೆಯಲ್ಲಿ ಶೇ56 , ಸುಳ್ಯದಲ್ಲಿ ಶೇ 53 , ಮಡಿಕೇರಿಯಲ್ಲಿ ಶೇ 73 ರಷ್ಟು ಅಡಿಕೆ ಬೆಳೆ ನಾಶವಾಗಿದೆ. ಈಗ ಹಳದಿ ಎಲೆ ರೋಗ ವಿಸ್ತರಣೆಯೂ ಆಗಿದೆ. ಹೀಗಾಗಿ ಸರ್ಕಾರ ಈಚೆಗೆ ಘೋಷಣೆ ಮಾಡಿದ 25 ಕೋಟಿ ಅನುದಾನದ ಬಳಕೆ ಬಗ್ಗೆ ಕೇಳಿದ ಪ್ರಶ್ನೆಗೆ ಕಾಸರಗೋಡು ಸಿಪಿಸಿಆರ್‌ಐಗೆ 3 ಕೋಟಿ ನೀಡಲಾಗುವುದು ಎಂದು ಉತ್ತರ ನೀಡಲಾಗಿದೆ. ಆದರೆ ದ ಕ ಜಿಲ್ಲೆಯಲ್ಲಿ ಇರುವ ಎಆರ್‌ಡಿಎಫ್ ಗೆ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು. ಅಡಿಕೆ ಬೆಳೆಗಾರರ ಹಿತರಕ್ಷಣೆಗಾಗಿ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆಯಲ್ಲಿ ಇರುವ ಎಆರ್‌ಡಿಎಫ್ (ARDF) ಸಂಸ್ಥೆಯಲ್ಲಿ ಕ್ಯಾಂಪ್ಕೋ, ಮ್ಯಾಪ್ಕೋಸ್, ಟಿ ಎಸ್ ಎಸ್, ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ ಮೊದಲಾದ ಸಂಸ್ಥೆಗಳೂ ಇವೆ. ಈಗ ಅಡಿಕೆ ಹಳದಿ ಎಲೆ ರೋಗ ಶಾಶ್ವತ ಪರಿಹಾರಕ್ಕೆ ರೋಗ ನಿರೋಧಕ ತಳಿಯ ಅಭಿವೃಧ್ಧಿಯೇ ಸೂಕ್ತವಾಗಿದೆ ಎಂದು ಹರೀಶ್ ಪೂಂಜಾ ಸದನದಲ್ಲಿ ಒತ್ತಾಯಿಸಿದರು.
ಧ್ವನಿಗೂಡಿಸಿದ ಪುತ್ತೂರು ಶಾಸಕ ಸಂಜೀವ ಮಟಂದೂರು, ಅಡಿಕೆ ಹಳದಿ ಎಲೆ ರೋಗಕೆ ಸರಿಯಾದ ಅಧ್ಯಯನ ನಡೆಯಬೇಕು. ಬೇರೆ ಬೇರೆ ತಾಲೂಕಿಗೆ ಈಗ ವ್ಯಾಪಿಸುತ್ತಿದೆ. ಯಡಿಯೂರಪ್ಪ ಅವರು ನೀಡಿರುವ ಅನುದಾನ ರೈತರಿಗೆ ಸರಿಯಾಗಿ ಸಿಗಬೇಕು. ಹಳದಿ ಎಲೆರೋಗದ ಸಂಶೋಧನೆಗೆ 3 ಕೋಟಿ ಅನುದಾನ ಕೇರಳದಲ್ಲಿರುವ ಸಿಪಿಸಿಆರ್‌ಐಗೆ ನೀಡುವ ಬದಲಾಗಿ ದ ಕ ಜಿಲ್ಲೆಯಲ್ಲಿ ಇರುವ ಎಆರ್ ಡಿಎಪ್ ಗೆ ನೀಡಬೇಕು ಎಂದರು.
ಇದೇ ವೇಳೆ ಮಾತನಾಡಿದ ಶಾಸಕ ರಾಜು ಗೌಡ, ಅಡಿಕೆ ಹಳದಿ ಎಲೆರೋಗದಿಂದ ವಾಣಿಜ್ಯ ಬೆಳೆ ನಶಿಸಿಹೋಗುವ ಸಾಧ್ಯತೆ ಇದೆ. ಹಳದಿ ರೋಗದಿಂದ ಕಾಸರಗೋಡು, ಶೃಂಗೇರಿಯಲ್ಲಿ ಸಂಶೋಧನೆ ನಡೆಯಲು ವಿಜ್ಞಾನಿಗಳ ಕೊರತೆ ಇದೆ ಎಂದರು.
ಉತ್ತರ ನೀಡಿದ ತೋಟಗಾರಿಕಾ ಇಲಾಖಾ ಸಚಿವರು ಮುನಿರತ್ನ, ಅಡಿಕೆ ಹಳದಿ ರೋಗದಿಂದ ಶೇ.60 ರಷ್ಟು ನಷ್ಟ ಆಗಿರುವುದು ತಿಳಿದಿದೆ. ಇದಕ್ಕಾಗಿ ಪರ್ಯಾಯ ಬೆಳೆಗೆ ಸುಮಾರು 16 ಕೋಟಿ ಅನುದಾನಕ್ಕಾಗಿ ಆರ್ಥಿಕ ಇಲಾಖೆಗೆ ಅನುಮೋದನೆಗೆ ಕಳುಹಿಸಲಾಗಿದೆ. ಹಳದಿ ಎಲೆ ರೋಗ ಸಂಶೋಧನೆಗೆ 817 ಲಕ್ಷ ಮೀಸಲಿಟ್ಟಿದೆ. ಇದನ್ನೂ ಆರ್ಥಿಕ ಇಲಾಖೆಗೆ ಅನುಮೋದನೆಗೆ ಕಳುಸಿದೆ . ಬಂದ ತಕ್ಷಣ ನೀಡಲಾಗುವುದು ಎಂದರು.ʼ
ಈ ಸಂದರ್ಭ ಮಾತನಾಡಿದ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಆರ್ಥಿಕ ಇಲಾಖೆ ಎಲ್ಲಿದೆ ಗೊತ್ತಾ ? ತಕ್ಷಣವೇ ಮಂಜೂರಾತಿ ಸಿಗಬೇಕು ಎಂದರು. ಇಡೀ ಸದನ ಹೇಳಿದೆ , ತಕ್ಷಣ ಮಾಡಬೇಕು. ಮಲೆನಾಡು ಕರಾವಳಿಯಲ್ಲಿ ಅಡಿಕೆ ಬೆಳೆ ಇದೆ, ಸಂಕಷ್ಟ ಹೆಚ್ಚಾಗುತ್ತಿದೆ. ಹೀಗಾಗಿ ಇಚ್ಛಾಶಕ್ತಿ ತೋರಿಸಿ ಕೆಲಸ ಮಾಡಿಸಬೇಕು ಎಂದು ಸಭಾಧ್ಯಕ್ಷರು ಹೇಳಿದರು.
ಉತ್ತರಿಸಿದ ಸಚಿವ ಅಶೋಕ್, ಆರ್ಥಿಕ ಇಲಾಖೆಗೆ ಕಳುಹಿಸಲಾಗಿದಗದು ಇಲಾಖೆ ಒಪ್ಪಿಗೆ ಸೂಚಿಸಿದೆ. ಅಡಿಕೆ ಹಳದಿ ಎಲೆರೋಗ ಸಂಶೋಧನೆ ಹಾಗೂ ಪರ್ಯಾಯ ಬೆಳೆಗೆ ಅನುದಾನ ಸಿಗಲಿದೆ ಎಂದರು.
ಆರ್ಥಿಕ ಇಲಾಖೆಗೆ ತಕ್ಷಣವೇ ಮನವಿ ಮಾಡಿ ಸಮಸ್ಯೆ ಬಗೆಹರಿಸುತ್ತೇವೆ ಎಂದು ಸಚಿವ ಮುನಿರತ್ನ ಸದನಕ್ಕೆ ಉತ್ತರಿಸಿದರು.