ರಾಜ್ಯದ ಅಡಿಕೆ ಬೆಳೆಗಾರರನ್ನು ಕಾಡುತ್ತಿರುವ ಹಳದಿ ಎಲೆ ರೋಗವು ಈಗ ನೆರೆಯ ಕಾಸರಗೋಡು ಜಿಲ್ಲೆಯಲ್ಲೂ ಕಾಣಿಸಿಕೊಂಡಿದೆಯೇ ಎಂಬ ಆತಂಕ ಅಲ್ಲಿನ ಕೃಷಿಕರನ್ನು ಕಾಡುತ್ತಿದೆ. ಕುಂಬಳೆ ಸಮೀಪದ ಕೃಷಿಕರು ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ಸುಳ್ಯ ,ಪುತ್ತೂರು ತಾಲೂಕಿನ ಅಡಿಕೆ ತೋಟಗಳನ್ನು ಆಕ್ರಮಿಸಿಕೊಂಡ ಅಡಿಕೆಯ ಹಳದಿ ಎಲೆ ರೋಗ ಇದೀಗ ಕಾಸರಗೋಡು ತಾಲೂಕಿನ ತೋಟಗಳಿಗೂ ವ್ಯಾಪಿಸಿದೆಯೇ ಎಂಬ ಸಂದೇಹ ಉಂಟಾಗಿದೆ.ಕಾಸರಗೋಡು ತಾಲೂಕಿನ ಅಡೂರು,ಕುಂಬಳೆ ,ಮಧೂರು ಪ್ರದೇಶಗಳ ಕೆಲವು ತೋಟಗಳಲ್ಲಿ ಅಡಿಕೆ ಸೋಗೆ ಹಳದಿಯಾಗಿರುವುದನ್ನು ಸರಿಪಡಿಸಲು ಸಾಧ್ಯವಾಗುತ್ತಿಲ್ಲ ಎಂದು ಕೃಷಿಕರು ಆತಂಕ ಪಡುತ್ತಿದ್ದಾರೆ.
ಕುಂಬಳೆ ಸಮೀಪದ ಎಡನಾಡು ಬಳಿಯ ಕೃಷಿಕರೊಬ್ಬರ ತೋಟದಲ್ಲಿ ಕಳೆದ ಕೆಲವು ಸಮಯಗಳಿಂದ ಅಡಿಕೆ ಮರದ ಸೋಗೆ ಹಳದಿಯಾಗಿತ್ತು. ಇದಕ್ಕೆ ವಿಜ್ಞಾನಿಗಳ ಸಲಹೆ ಪಡೆದು ಸೂಕ್ಷ್ಮಪೋಷಕಾಂಶಗಳನ್ನು ಬಳಕೆ ಮಾಡಿದ್ದಾರೆ. ಅದರ ಜೊತೆಗೆ ಮೆಗ್ನೀಷಿಯಂ ಸಲ್ಫೇಟ್ ಮತ್ತು ಡೊಲೋಮೈಟ್ ಕೂಡಾ ಬಳಕೆ ಮಾಡಿದ್ದಾರೆ. ಅದಾದ ಬಳಿಕ ಅಡಿಕೆ ಮರದ ಸೋಗೆ ಹಸಿರಾದರೂ ಇದೀಗ ಮತ್ತೆ ಹಳದಿ ಆಗುವುದಕ್ಕೆ ಕಾರಣವೇನು ಎಂದು ತಿಳಿದಿಲ್ಲ ಎನ್ನುತ್ತಾರೆ ಸ್ಥಳೀಯ ಕೃಷಿಕರು. ಕೆಲವು ಬಾರಿ ಅಡಿಕೆ ಮರದ ಸೋಗೆ ಹಳದಿಯಾಗುವುದಕ್ಕೆ ಹಳದಿ ಎಲೆರೋಗವೇ ಕಾರಣ ಆಗಿರುವುದಿಲ್ಲ. ಪೋಷಕಾಂಶಗಳ ಕೊರತೆಯೂ ಕಾರಣವಾಗಿರುತ್ತದೆ.ಮೆಗ್ನೀಷಿಯಂ ಕೊರತೆ ಲಕ್ಷಣವೂ ಹಳದಿ ಎಲೆರೋಗದ ಲಕ್ಷಣಗಳೂ ಹೆಚ್ಚೂ ಕಡಿಮೆ ಒಂದೇ ರೀತಿ ಇರುತ್ತದೆ. ಹೀಗಾಗಿ ಸೋಗೆ ಹಳದಿಯಾದ ತಕ್ಷಣವೇ ಹಳದಿ ಎಲೆರೋಗ ಎಂದು ಕೃಷಿಕರು ಭಾವಿಸಬೇಕಾಗಿಲ್ಲ ಎಂದು ಈ ಹಿಂದೆ ವಿಜ್ಞಾನಿಗಳು ಹೇಳಿದ್ದರು. ಆದರೆ ಕಾಸರಗೋಡಿನ ಕುಂಬಳೆಯ ಎಡನಾಡಿನ ಈ ಪ್ರದೇಶದಲ್ಲಿ ಮತ್ತೆ ಹಳದಿಯಾಗಿರುವುದು ಈಗ ಕೃಷಿಕರ ಆತಂಕಕ್ಕೆ ಕಾರಣ.