ಬದುಕು ಪುರಾಣ | ಮನವನ್ನು ಚುಚ್ಚುವ ಅಳಿಲು

July 14, 2025
10:56 PM
ಸಾಮಾಜಿಕ ವ್ಯವಸ್ಥೆಯಲ್ಲಿ ‘ಸೇವೆ’ಗೆ ಮೌಲ್ಯ ನಿರ್ಧರಿಸಲು ಕಷ್ಟಸಾಧ್ಯ. ಆತ್ಮಾರ್ಥ ಸೇವೆಗಳು ಸದ್ದಾಗುವುದಿಲ್ಲ. ಫಕ್ಕನೆ ಯಾರ ಕಣ್ಣಿಗೂ ಗೋಚರವಾಗದು. ಆರ್ಥಿಕ ಕಾಮಿತದ ಸ್ಪರ್ಶವಿಲ್ಲದ ಕೈಂಕರ್ಯಗಳನ್ನು ಜನರು ತಡವಾಗಿ ಗುರುತಿಸುತ್ತಾರೆ, ಮಾನಿಸುತ್ತಾರೆ. 
ನಿತ್ಯದ ಬದುಕಿನಲ್ಲಿ ಕ್ಷೀಷೆಗೆ ಒಳಗಾಗಿರುವ ಪದ ‘ಸೇವೆ’. ಬಹುತೇಕ ಎಲ್ಲಾ ಕೆಲಸಗಳಿಗೂ ‘ಸೇವೆ’ಯ ಸ್ಪರ್ಶ! ಪ್ರಚಾರಕ್ಕಾಗಿಯೂ ಸೇವೆ ಮಾಡುವವರಿದ್ದಾರೆ. ಸೇವೆಯು ಪ್ರಾಮಾಣಿಕತೆ, ನಿಸ್ವಾರ್ಥ ಮತ್ತು ತ್ಯಾಗವನ್ನು ಬಯಸುತ್ತದೆ. ಸೇವೆ ‘ಷಡ್ಮೈರಿ’ಗಳ ಸ್ಪರ್ಶ ಮಾಡದು.
ಒಂದರ್ಥ ಗಂಟೆ ವಾಹಿನಿಗಳನ್ನೊಮ್ಮೆ ವೀಕ್ಷಿಸಿ. ಸರಕಾರದ ಸವಲತ್ತುಗಳನ್ನು ನಾಗರಿಕರಿಗೆ ವಿತರಿಸಿ, ‘ಸೇವೆ’ಯ ಫೋಸ್ ನೀಡುವ ಮುಖಗಳನ್ನು ನೋಡಿದ್ದೇನೆ. ಅವರ ಹಿಂದೆ ಮುಂದೆ ಕ್ಯಾಮೆರಾಗಳು ಸುತ್ತಾಡುತ್ತಿರುತ್ತವೆ. ವರದಿ ಮಾಡಲು ಪತ್ರಕರ್ತರು ಕಾದಿರುತ್ತಾರೆ. ಇದನ್ನು ‘ತ್ಯಾಗ’ವೆಂದು ಬಿಂಬಿಸುವ ಅನುಯಾಯಿಗಳ ವರ್ತನೆಗಳು, ಮಾತುಗಳು ಅವರ ನಿಜ ಬಣ್ಣವನ್ನು ತೋರಿಸುತ್ತದೆ. ನೋಟಕನಿಗೆ ಅಸಹ್ಯ ಭಾವ ಉಂಟಾಗುತ್ತದೆ.
ರಾಜಕೀಯ, ಧಾರ್ಮಿಕ, ಸಾಮಾಜಿಕ ರಂಗಗಳ ಕಾರ್ಯಕ್ರಮಗಳಲ್ಲಿ ಸ್ವಯಂಸೇವಕರ ದುಡಿತ ದಾಖಲಾಗುವುದು ಕಡಿಮೆ. ಸಮವಸ್ತ್ರ, ಶಾಲು, ಬ್ಯಾಜ್ ಹಾಕಿಕೊಂಡು ಓಡಾಡಿಕೊಂಡಿರುವುದೂ ಸೇವೆಯೇ!  ಇವರ ಮಧ್ಯೆ ಸದ್ದಿಲ್ಲದೆ ದುಡಿದು ಒಟ್ಟಂದಕ್ಕೆ ಕಾರಣರಾಗುವ ಮಂದಿ ಇದ್ದಾರಲ್ವಾ,  ಇಂಥವರ ಸೇವೆ ಕಣ್ಣಿಗೆ ಕಾಣದು. ಇನ್ನೊಂದಿಷ್ಟು ಮಂದಿ ಯಾರ ಆದೇಶಕ್ಕೂ ಕಾಯದೆ ಕಾರ್ಯವೆಸಗುತ್ತಿರುತ್ತಾರೆ. ಇವರದ್ದೆಲ್ಲಾ ‘ಅಳಿಲು ಸೇವೆ’. ಈ ಮನಃಸ್ಥಿತಿಗೆ ಬೆಲೆ ಕಟ್ಟಲಾಗದು. ಹತ್ತು ಹೆಗಲುಗಳ ಅಳಿಲು ಸೇವೆಗಳೇ ದೊಡ್ಡ ಸಂಘಟನಾ ಶಕ್ತಿ.
ಬ್ರಹ್ಮಕಲಶ, ಜಾತ್ರೆ, ದೈವಾರಾಧನೆ ಮೊದಲಾದ ಸಂದರ್ಭಗಳಲ್ಲಿ ಪುರುಷರು, ಮಹಿಳೆಯರು ಸ್ವ-ಪ್ರೇರಣೆಯಿಂದ ‘ಸ್ವಯಂಸೇವಕ’ರಾಗುತ್ತಾರೆ. ಶ್ರಮದ ಕೆಲಸಗಳಲ್ಲಿ ತೊಡಗುತ್ತಾರೆ. ಅತಿಥಿಗಳನ್ನು ನಗುಮುಖದಿಂದ ಸ್ವಾಗತಿಸುತ್ತಾರೆ. ಅನ್ನ ಬಡಿಸುತ್ತಾರೆ. ಊಟ ಮಾಡುವಂತೆ ಪ್ರೀತಿಯಿಂದ ಒತ್ತಾಯಿಸುತ್ತಾರೆ. ಕಾರ್ಯಕ್ರಮ ಎಲ್ಲಾ ಮುಗಿದ ಮೇಲೆ ‘ಒತ್ತರೆ’ ಕೆಲಸಗಳನ್ನೂ ಪ್ರೀತಿಯಿಂದ ಮೈಮೇಲೆ ಎಳೆದುಕೊಳ್ಳುತ್ತಾರೆ. ಇಂತಹ ಸೇವೆಗಳಿಗೆ ಮೌಲ್ಯ ಕಟ್ಟಲು ಅಸಾಧ್ಯ. ಇವರಿಗಿಲ್ಲಿ ‘ಕಾಯಕವೇ ಕೈಲಾಸ’.
ಕೊರೊನಾ ಲಾಕ್‍ಡೌನ್ ಸಮಯದಲ್ಲಿ ದೇಶಾದ್ಯಂತ ಸು-ಮನಸ್ಸನ್ನು ಹೊಂದಿದವರು ಆಹಾರ, ಔಷಧಿ, ಬಟ್ಟೆಗಳನ್ನು ನೀಡುವ ಮೂಲಕ ನಿಜಾರ್ಥದ ‘ಸೇವೆ’ ಸಲ್ಲಿಸಿದ್ದರು. ‘ಒಂದು ಕೈಯಲ್ಲಿ ಕೊಟ್ಟುದು ಇನ್ನೊಂದು ಕೈಗೆ ಗೊತ್ತಾಗದಂತೆ’ ಸೇವಾ ಕೈಂಕರ್ಯವನ್ನು ಎಷ್ಟೊಂದು ಮಂದಿ ಮಾಡಿಲ್ಲ. ಈ ಸೇವೆಗೆ ಜಾತಿಯ, ಮತೀಯತೆಗಳ ಹಂಗಿಲ್ಲ. ಆದರೆ ಉದ್ದೇಶಪೂರ್ವಕವಾಗಿಯೇ ಇಲ್ಲೆಲ್ಲಾ ಜಾತಿ, ಮತಗಳನ್ನು ಟಂಕಿಸುವ ಕುತ್ಸಿತ ಭಾವನೆಗಳನ್ನು ಹೊಂದಿರುವ ವ್ಯಕ್ತಿಗಳ ಕಾಣದ ಕೈಗಳ ಕೆಲಸಗಳು ಅಜ್ಞಾತವಾಗಿರುತ್ತದೆ.
ಪುತ್ತೂರಿನ ಪ್ರಾಣಿಪ್ರಿಯ ರಾಜೇಶ್ ಬನ್ನೂರು ಪುರಸಭೆಯ ಮಾಜಿ ಅಧ್ಯಕ್ಷರು. ಸಾಮಾಜಿಕ ಕಾರ್ಯಕರ್ತ. ಒಂದೂವರೆ ದಶಕದಿಂದ ಅವರು ಬೀದಿನಾಯಿಗಳ ಹೊಟ್ಟೆ ತಂಪು ಮಾಡುತ್ತಿದ್ದಾರೆ. ಇವರಿಂದಾಗಿ ನೂರಾರು ಬೀದಿನಾಯಿಗಳು ಹಸಿವೆಯಿಂದ ಸತ್ತಿಲ್ಲ! ಪ್ರತಿದಿನ ಅನ್ನ. ಕೋಳಿಮಾಂಸ, ಒಣಮೀನನ್ನು ಬೆರೆಸಿದ ‘ಶ್ವಾನದಡುಗೆ’ ಸಿದ್ಧ ಮಾಡುತ್ತಾರೆ. ಸಂಜೆ ನಾಲ್ಕು ಗಂಟೆಗೆ ಅಡುಗೆಯೊಂದಿಗೆ ಸ್ಕೂಟರ್ ಏರಿದರೆ ಮನೆಸೇರುವಾಗ ರಾತ್ರಿ ಹತ್ತಾಗುತ್ತದೆ. ಇವರೊಂದಿಗೆ ಸಮಾನ ಮನಃಸ್ಥಿತಿಯ ಸ್ನೇಹಿತರ ಸಾಥ್. ಪುತ್ತೂರಿನ ಪ್ರಾಣಿಪ್ರಿಯರು ರಾಜೇಶರ ಕೈಂಕರ್ಯಕ್ಕೆ ಸಹಕಾರದ ಹಸ್ತ ನೀಡಿದ್ದಾರೆ. “ಒಮ್ಮೆ ಅನ್ನ ಹಾಕಿದರೆ ನಾಯಿಯು ಅನ್ನ ಹಾಕಿದವನನ್ನು ಮರೆಯುವುದಿಲ್ಲ. ಅವುಗಳು ತೋರುವ ಪ್ರೀತಿಯೇ ಪ್ರೇರಣೆ’ ಎನ್ನುತ್ತಾರೆ. ಇದು ಪ್ರಚಾರದ ಕಾಮಿತವಿಲ್ಲದ ಕೈಂಕರ್ಯ ‘ಸೇವೆ’ ಅಲ್ವಾ. ಸೇವೆಯ ನಿಜಾರ್ಥ ಗೊತ್ತಿಲ್ಲದ, ಬದುಕಿನಲ್ಲಿ ಸೇವೆಯಲ್ಲಿ ತೊಡಗಿಸಿಕೊಳ್ಳದ ಮಂದಿಗೆ ಇವೆಲ್ಲಾ ಋಣಾತ್ಮಕವಾದ ಮಾತಿಗೆ ವಿಷಯಗಳು, ಗೊಣಗಾಟಗಳು.
ಕಚೇರಿಯ ಅಧಿಕಾರಿಗಳು, ಸಿಬ್ಬಂದಿಗಳು ನಿವೃತ್ತರಾಗುವಾಗ ಸಂಮಾನ ಮಾಡಿ, ಗುಣಕಥನ ಫಲಕವನ್ನು ವಾಚಿಸಿ, ‘ಸರಳ ಸಜ್ಜನಿಕೆಯ ಸಾಕಾರ ಮೂರ್ತಿಯಾಗಿರುವ ಇವರ ಪ್ರಾಮಾಣಿಕ, ನಿಸ್ವಾರ್ಥವಾದ  ಸೇವೆಗಾಗಿ ಈ ಗೌರವ’, ಎಂದಾಗ ಅವರ ನಿಜ ವ್ಯಕ್ತಿತ್ವವನ್ನು ಗೊತ್ತಿರುವವರು ಮುಸಿಮುಸಿ ನಕ್ಕಿರುವುದನ್ನು ಯಾರೂ ಗಮನಿಸಿರುವುದಿಲ್ಲ! ಈ ಗುಣಕಥನ ಫಲಕದ ಹೂರಣವನ್ನು ಕೇಳಿದ ಅವರ ಮನೆಯ ಮಂದಿಯೇ ಚೋದ್ಯಕ್ಕೆ ಈಡಾಗಿರುವುದನ್ನು ಗಮನಿಸಿದ್ದೇನೆ! ಹೊಟ್ಟೆ ತುಂಬಿಸುವ ಕಾಯಕದಲ್ಲಿ ಪ್ರಾಮಾಣಿಕತೆ, ಶ್ರದ್ಧೆ ಮತ್ತು ತಮ್ಮ ಕೆಲಸಗಳಿಂದ ಉತ್ತಮ ಮಾದರಿಗಳನ್ನು ಸೃಷ್ಟಿಸುವುದು ಬದ್ಧತೆ. ಆಂಗ್ಲ ಭಾಷೆಯ ‘ಸರ್ವಿಸ್’ ಕೊಡುವ ಅರ್ಥಕ್ಕೂ ಕನ್ನಡದ ‘ಸೇವೆ’ಗೂ ವ್ಯತ್ಯಾಸವಿದೆ. ಅದು ಕಲಾ ಕ್ಷೇತ್ರಕ್ಕೂ ಅನ್ವಯ.
ಸಮಾಜದ ಮಧ್ಯೆ ಸೇವಾ ಸಂಸ್ಥೆಗಳು ಎಷ್ಟಿಲ್ಲ? ಅವುಗಳ ಕಾರ್ಯತತ್ಪರತೆಯು ಸಾಮಾಜಿಕ ಬದುಕಿನಲ್ಲಿ ಹಿರಿದು. ಅನ್ಯಾನ್ಯ ಕ್ಷೇತ್ರಗಳ ಸಾಧನೆಗಳಿಗೆ ಕಾರಣರಾದ ಸು-ಮನಸ್ಸಿಗರನ್ನು ರೂಪಿಸುವಲ್ಲಿ ದೊಡ್ಡ ಕೊಡುಗೆ. ಕೆಲವೊಂದನ್ನು ಹೆಸರಿಸುವುದಾದರೆ – ರೋಟರಿ ಕ್ಲಬ್, ಲಯನ್ಸ್ ಕ್ಲಬ್, ಜೇಸಿ, ಪೌಂಡೇಶನ್ನುಗಳು, ಟ್ರಸ್ಟ್ ಗಳು, ಯುವಕ-ಯುವತಿ ಮಂಡಲಗಳ ‘ಸೇವಾ ಭಾವ’ಗಳು ಸಮಾಜ ವಾಹಿನಿಯಲ್ಲಿ ನಿತ್ಯ ಹರಿಯುತ್ತಿರುತ್ತವೆ.
ಹಿಂದೊಮ್ಮೆ ಧರ್ಮಸ್ಥಳದಲ್ಲಿ ವಯೋವೃದ್ಧೆಯೋರ್ವರು ತನ್ನ ‘ಕಿರು ಅಂಗಡಿ’ಯ ಮುಂದೆ ಗುಂಪು ಸೇರಿರುವ ಪಾರಿವಾಳಗಳಿಗೆ ಕಾಳನ್ನು ತಿನ್ನಿಸುತ್ತಿರುವ ದೃಶ್ಯ ನೋಡಿದ್ದೆ. ಅವರಿಗೆ ಪೈಸೆಯೂ ಚಿನ್ನಕ್ಕೆ ಸರಿಸಮ. ಅಂತಹುದರಲ್ಲಿ ಪಾರಿವಾಳಗಳಿಗೆ ಕಾಳುಣಿಸಲು ತನ್ನ ಗಳಿಕೆಯ ಒಂದು ಪಾಲನ್ನು ವಿನಿಯೋಗಿಸಿದ್ದು ಗ್ರೇಟ್ ಅಲ್ವಾ. ‘ನನ್ನೊಂದಿಗೆ ಪಕ್ಷಿಗಳಿಗೂ ಬದುಕುವ ಹಕ್ಕಿದೆ’ ಎಂಬ ಸಂದೇಶ ಸಾರಿದ್ದರು. ಅಳಿಲ ಸೇವೆಗೊಂದು ‘ಲೈವ್’ ದೃಷ್ಟಾಂತವಿದು. ಬಡವಿಯಾದ ಅಜ್ಜಿಯ ಕಾರ್ಯವನ್ನು ನೋಡುವ ಕಣ್ಣುಗಳು ಮಂಜಾದುದು ಅಜ್ಜಿಯ ದೌರ್ಬಲ್ಯವಲ್ಲ. “ಆ ಅಜ್ಜಿಯ ಪಕ್ಷಿ ಕಾಳಜಿಯನ್ನು ನೋಡಿ ನನ್ನಲ್ಲಿದ್ದ ಅಹಮಿಕೆ ನನ್ನನ್ನು ಚುಚ್ಚಿತು.” – ಸ್ನೇಹಿತ ಜಯಶಂಕರ ಶರ್ಮರು ತಮ್ಮ ಮನಸ್ಸನ್ನೊಮ್ಮೆ ಹಂಚಿಕೊಂಡಿದ್ದರು. ಈಗ ಆ ಅಜ್ಜಿ, ಅಂಗಡಿ ಇದೆಯೋ ಇಲ್ವೋ ಗೊತ್ತಿಲ್ಲ.
ಸೇವೆಯ ಕೈಂಕರ್ಯದಲ್ಲಿ ‘ಗುಮಾನಿ ಬೀಜ’ ಮೊಳಕೆಯೊಡೆಯುತ್ತವೆ! ಓರ್ವ ತನ್ನೂರಿನ ರಸ್ತೆಗಳ ಇಕ್ಕೆಡೆಗಳಲ್ಲಿ, ಸಾರ್ವಜನಿಕ ಜಾಗಗಳಲ್ಲಿ, ಶಾಲೆಯ ಆವರಣಗಳಲ್ಲಿ ಗಿಡಗಳನ್ನು ನೆಟ್ಟು ಪೋಷಿಸುತ್ತಾನೆ ಎಂದಿಟ್ಟುಕೊಳ್ಳೋಣ. ಇಂತಹ ವ್ಯಕ್ತಿಗಳಿಗೆ ಹಸಿರೇ ಉಸಿರು. ಒಂದಷ್ಟು ಕಾಲ ಕಳೆದ ಬಳಿಕ ಇವರ ಕೈಂಕರ್ಯವನ್ನು ಹತ್ತಾರು ಮಂದಿ ಹೊಗಳುತ್ತಾರೆ. ಮಾಧ್ಯಮ ಬೆಳಕು ಬೀಳುತ್ತದೆ. ಸಂಮಾನ, ಪ್ರಶಸ್ತಿಗಳು ಅರಸಿ ಬರುತ್ತವೆ. ಆಗ ನೋಡಿ ಗುಮಾನಿ ವ್ಯಕ್ತಿಗಳ ಗುಸುಗುಸು! ‘ಲಾಭವಿಲ್ಲದೆ ಈ ಕೆಲಸ ಮಾಡಿಯಾರಾ’, ಅವರಿಗೆ ಎಲ್ಲಿಂದಲೋ ಹಣ ಹರಿದು ಬರುತ್ತದೆ’.. ಇಂತಹ ಹಗುರ ಮಾತುಗಳು ತೇಲಿ ಬರುತ್ತವೆ. ಜನ ಹೌದೆಂದು ನಂಬುತ್ತಾರೆ. ಆತ ಜನರಿಂದಾಗಿಯೇ ಸೇವೆಯ ಅರ್ಥವು ಢಾಳಾಗುತ್ತವೆ.
ಸಾಮಾಜಿಕ ಸ್ವಾಸ್ಥ್ಯದ ಹಿನ್ನೆಲೆಯಲ್ಲಿ ರೂಪುಗೊಳ್ಳುವ ‘ಸೇವೆ’ ಗುರುತರ. ಇಲ್ಲಿ ಉದ್ದೇಶ ಸ್ಪಷ್ಟವಿರುತ್ತದೆ. ಆ ಉದ್ದೇಶ ಸಾಧನೆಗೆ ಪಡುವ ಶ್ರಮದ ಹಿಂದೆ ಯಾವುದೇ ಗಳಿಕೆಯ ಆಶಯವಿರುವುದಿಲ್ಲ. ಇಪ್ಪತ್ತನಾಲ್ಕು ಗಂಟೆಯೂ ನಿತ್ಯ ಯೋಚನೆ. ಸಿಗುವ ಮಾಹಿತಿಗಳು ಸಮಾಜಕ್ಕೆ ಒದಗಬೇಕೆನ್ನುವ ಕಾಳಜಿ. ಇಂತಹ ಮಾಹಿತಿಗಳನ್ನು ಸ್ವೀಕರಿಸಿದ ಫಲಾನುಭವಿಗಳು ನೀಡುವ ಹಿಮ್ಮಾಹಿತಿಗಳು ನಿಜಾರ್ಥದಲ್ಲಿ ಸೇವೆಗೆ ಸಿಗುವ ಪ್ರತಿಫಲ.
ತುಂಬಾ ದೂರ ಯಾಕೆ. ಪುತ್ತೂರಿನಿಂದ ಪ್ರಕಾಶಿತವಾಗುತ್ತಿರುವ ಕನ್ನಾಡಿನ ಕೃಷಿ ಮಾಧ್ಯಮ ‘ಅಡಿಕೆ ಪತ್ರಿಕೆ’ಯ ಸಂಪಾದಕ ಶ್ರೀ ಪಡ್ರೆ ಮತ್ತು ತಂಡದ ಕಾಯಕ ದೊಡ್ಡ ಉದಾಹರಣೆ. ಅವರ ಸಾಮಾಜಿಕ ಸ್ವಾಸ್ಥ್ಯದ ಪರಿಕಲ್ಪನೆಯು ಪತ್ರಿಕೆಯ ಮೂಲಕ ಅನಾವರಣಗೊಂಡ ಹತ್ತಾರು ಆಂದೋಳನಗಳು ಮಾತನಾಡುತ್ತಿವೆ. ಉದಾ: ನೆಲಜಲ ಸಂರಕ್ಷಣೆ, ಕೃಷಿಕರ ಕೈಗೆ ಲೇಖನಿ, ರಾಸಾಯನಿಕ ರಹಿತ ಕೃಷಿ, ಮೌಲ್ಯವರ್ಧನೆ, ಹಲಸು ಆಂದೋಳನ, ಬಾಕಾಹು ಆಂದೋಳನ, ನೆಲದಿಂದಲೇ ಮರಗೆಲಸದ ತರಬೇತಿಗಳು, ಅಡಿಕೆಯ ಚೊಗರು.. ಇವೆಲ್ಲಾ ಕೃಷಿ ಸಮುದಾಯದ ಮಾತ್ರವಲ್ಲ, ಕೃಷಿಯನ್ನು ಪ್ರೀತಿಸುವ ಎಲ್ಲರ ಮನಮುಟ್ಟುವ ಕಾಯಕಗಳು.
ಸಹಕಾರಿ ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳು, ಸೇವಾ ಸಂಸ್ಥೆಗಳ ಪದಾಧಿಕಾರಿಗಳನ್ನು ಗಮನಿಸಿ. ಯಾವುದೇ ಫಲಾಪೇಕ್ಷೆಯಿಲ್ಲದ ಹುದ್ದೆಗಳು. ಒಂದು ಸಂಸ್ಥೆಯ ಅಧ್ಯಕ್ಷ, ಕಾರ್ಯದರ್ಶಿಯ ವ್ಯಾಪ್ತಿ ಬರೇ ಆ ಸಂಸ್ಥೆಗೆ ಮಾತ್ರವಲ್ಲ, ಸುತ್ತಲಿನ ಸಮಾಜವನ್ನು ಪ್ರತಿನಿಧಿಸುತ್ತಾರೆ. ಸಮಾಜದಲ್ಲಿ ಮನ್ನಣೆಯಿದೆ.  ನಮ್ಮ ಬದುಕಿನ ಒಂದಷ್ಟು ಸಮಯವನ್ನು ಇಂತಹ ಸಂಸ್ಥೆಗಳಿಗೆ ನೀಡುವುದು ಕೂಡಾ ‘ಸೇವೆ’ಯ ಇನ್ನೊಂದು ಮಗ್ಗುಲು. ಸಭೆ ಆಯೋಜನೆಗೊಂಡಾಗ ಅಲ್ಲಿದ್ದ ಆಸನಗಳನ್ನು ಯಾರ ಆದೇಶಕ್ಕೂ ಕಾಯಿದೆ ಒಪ್ಪ ಓರಣವಾಗಿ ಜೋಡಿಸಿಡುವುದೂ ‘ಅಳಿಲು ಸೇವೆ’. ಬಹುಶಃ ಇಂತಹ ನೂರಾರು ಅಲ್ಲ, ಅಸಂಖ್ಯ ಮನಸ್ಸುಗಳ ಸೇವೆಯ ಪರಿಣಾಮವಾಗಿ ಇಂದು ಅನೇಕ ಸಂಸ್ಥೆಗಳು ಗಟ್ಟಿಯಾಗಿವೆ. ಈ ಮಾತಿಗೆ ಅಪವಾದಗಳು ನೂರಾರಿವೆ ಬಿಡಿ. ಋಣಾತ್ಮಕವಾಗಿ ಯೋಚಿಸುವುದನ್ನು ಬಿಡೋಣ.
ಸೇವೆಯ ವ್ಯಾಪ್ತಿ ತುಂಬಾ ಹಿರಿದು. ವೈದ್ಯಕೀಯದಿಂದ ತೊಡಗಿ ಧಾರ್ಮಿಕತೆ ತನಕ. ಸೇವೆ ಎನ್ನುವ ಪದಕ್ಕೆ ‘ಮನಸ್ಸು’ ಎಂದು ಅರ್ಥ ಮಾಡಿಕೊಳ್ಳೋಣ. ಮನಸ್ಸಿಗೆ ಧನಾತ್ಮಕ ಚಿಕಿತ್ಸೆ ನೀಡುವ ಉಪಾಧಿ ‘ಸೇವೆ’. ಸೇವೆ ಮಾಡುವ ವ್ಯಕ್ತಿ, ಸಂಸ್ಥೆಗಳ ಕಾಯಕ ಸುತ್ತಲಿನ ಸಮಾಜದಲ್ಲಿ ಧನಾತ್ಮಕವಾದ ಪರಿಣಾಮಗಳನ್ನು ಬೀರುತ್ತದೆ. ಮನಸ್ಸು ಋಣಾತ್ಮಕತೆಯತ್ತ ವಾಲದಂತೆ ಭದ್ರವಾದ ಬೇಲಿಯನ್ನು ‘ಸೇವೆ’ ಒದಗಿಸುತ್ತದೆ. ಇವೆಲ್ಲಾ ಬರೆದಂತೆ ಸುಲಭವಲ್ಲ. ಒಂದಷ್ಟು ತ್ಯಾಗ ಮನಃಸ್ಥಿತಿ ಸಿದ್ಧವಾಗಬೇಕಾಗುತ್ತದೆ. ತ್ಯಾಗ ಅಂದಾಗ ಅದು ಸಮಯದ ರೂಪದಲ್ಲಿರಬಹುದು, ಆರ್ಥಿಕತೆಯ ರೂಪದಲ್ಲಿರಬಹುದು. ಬೌದ್ಧಿಕತೆಯ ಸ್ಥಿತಿಯಲ್ಲಿರಬಹುದು. ಅದು ಅವರವರ ವೈಯಕ್ತಿಕ ಸ್ಥಿತಿ-ಗತಿಯನ್ನು ಅವಲಂಬಿಸುತ್ತದೆ.
ನಮ್ಮ ಬದುಕಿನುದ್ದಕ್ಕೂ ಅಲ್ಲಲ್ಲಿ ಟಂಕಿಸಲ್ಪಡುವ ‘ಅಳಿಲು ಸೇವೆ’ ಪದವು ರಾಮಾಯಣದ ಎರವಲು. ಸೇವೆಯು ಮಂತ್ರವಾಗಬೇಕು, ಯಜ್ಞವಾಗಬೇಕು. ಅದು ಕಂಠಪಾಠದ ಮಂತ್ರವಾಗದಿರಲಿ. ‘ಇದು ಸೇವೆ’ ಎಂದು ಸದಾ ಮನಸ್ಸಿಗೆ ಚುಚ್ಚುತ್ತಿರುವ ಅಳಿಲಿನ ಮನಸ್ಥಿತಿ ನಮ್ಮದಾಗಲಿ.
ರಾಮನ ಮನಗೆದ್ದ ಅಳಿಲು : ಹನುಮಂತನು ಲಂಕೆಯ ಅಶೋಕವನದಲ್ಲಿರುವ ಸೀತಾದೇವಿಯನ್ನು ದರ್ಶನ ಮಾಡಿ ‘ಚೂಡಾಮಣಿ’ಯನ್ನು ತರುತ್ತಾನೆ. ಸೀತೆಯ ಇರವನ್ನು ತಿಳಿಸಿದ ಶ್ರೀರಾಮನು ಹನುಮಂತನನ್ನು ಅಭಿನಂದಿಸುತ್ತಾನೆ. ಕಪಿಗಳಿಗೆಲ್ಲಾ ಸಂತೋಷವಾಗುತ್ತದೆ. ಸಮಾಲೋಚನೆಯ ಬಳಿಕ ಲಂಕೆಯನ್ನು ಸೇರಲು ಶರಧಿಗೆ ಸೇತುವನ್ನು ಬಲಿಯಲು ನಿರ್ಧಾರವಾಗುತ್ತದೆ. ತಂತ್ರಜ್ಞನಾದ ನಳನ ಮುಂದಾಳ್ತನದಲ್ಲಿ ಸೇತುವೆಯ ಕಾರ್ಯಕ್ಕೆ ಶ್ರೀಕಾರ.  ಕಪಿವೀರರೆಲ್ಲಾ ದೊಡ್ಡ ದೊಡ್ಡ ಕಲ್ಲು, ಬಂಡೆಗಳನ್ನು ಹೊತ್ತು ತಂದರು. ಪಕ್ಷಿಗಳು, ಪ್ರಾಣಿಗಳು ಕೂಡಾ ತಂತಮ್ಮ ಮಿತಿಯಲ್ಲಿ ರಾಮ ಸೇವೆಗೆ ಕೈಜೋಡಿಸಿದ್ದುವು!
ಒಂದು ಅಳಿಲಿನ ಸೇತುವೆಯ ನಿರ್ಮಾಣದ ಕಾರ್ಯದಲ್ಲಿ ಸ್ಪಂದಿಸಿದ ಕುಶಲತೆಯನ್ನು ಗಮನಿಸಿ, ‘ನಾನ್ಯಾಕೆ ಕೆಲಸ ಮಾಡಬಾರದು’ ತನ್ನೊಳಗೆ ಪ್ರಶ್ನೆ ಹಾಕಿಕೊಂಡಿತು. ಸೇವೆ ಮಾಡಲು ಕಪಿಗಳಲ್ಲಿ ಅವಕಾಶ ಬೇಡಿತು. ಅಳಿಲಿನ ಮಾತನ್ನು ಯಾರು ಕೇಳುತ್ತಾರೆ? ನನ್ನ ಕರ್ತವ್ಯ ನಾನು ಮಾಡುವೆ ಎನ್ನುತ್ತಾ, ಒಮ್ಮೆ ಸಮುದ್ರದ ನೀರಿನಲ್ಲಿ ಮುಳುಗಿತು. ಮರಳಿನಲ್ಲಿ ಹೊರಳಾಡಿತು. ಕಪಿಗಳ ಕಾಲ್ತುಳಿತಕ್ಕೆ ಸಿಗದೆ, ಸೇತುವೆ ಮೇಲೆ ತನ್ನ ಮೈಯನ್ನು ಕೊಡವಿತು.
ಹೀಗೆ ಹಲವಾರು ಬಾರಿ ಮುಳುಗುವುದು, ಹೊರಳಾಡುವುದು, ಮೈ ಕೊಡವುವ ಕೆಲಸವನ್ನು ಮಾಡುತ್ತಿತ್ತು. ರಾಮಸೇವೆಗಾಗಿ ಮರಳನ್ನು ತರುವ ಕೈಂಕರ್ಯದಲ್ಲಿ ತೊಡಗಿದ್ದ ಅಳಿಲನ್ನು ಕಂಡ ಶ್ರೀರಾಮನು ‘ನನಗಾಗಿ ನೀನು ಮಾಡಿದ ಉಪಕಾರಕ್ಕೆ ಕೃತಜ್ಞತೆಗಳು’ ಎನ್ನುತ್ತಾ ಮೈದಡವಿದನು.  ರಾಮನ ಬೆರಳುಗಳು ಅಳಿಲಿನ ಬೆನ್ನನ್ನು ಸ್ಪರ್ಶಿಸಿದ ಜಾಗದಲ್ಲಿ ಸುಂದರ ರೇಖೆಗಳು ಮೂಡಿದುವು. ಈಗಲೂ ಅಳಿಲುಗಳ ಬೆನ್ನಿನಲ್ಲಿ ರೇಖೆಗಳನ್ನು ಕಾಣಬಹುದು.
ಪುಣ್ಯದ ಕೆಲಸಗಳು ಚಿಕ್ಕದೇ ಇರಲಿ, ದೊಡ್ಡದೇ ಇರಲಿ, ಸಹಾಯ ಮಾಡುವ ಮನಃಸ್ಥಿತಿ ಇದೆಯಲ್ಲಾ, ಅದು ಅಳಿಲು ಸೇವೆ. ಯೋಜನ ದೂರದ ಸೇತುವೆಯ ನಿರ್ಮಾಣದಲ್ಲಿ ಏನಿಲ್ಲವೆಂದರೂ ಅಳಿಲು ತಂದ ಮರಳು ಒಂದು ಬೊಗಸೆಯಾದೀತೋ ಏನೋ. ಇಲ್ಲಿ ಎಷ್ಟು ಮರಳು ಸಂಗ್ರಹವಾಯಿತು ಮುಖ್ಯವಲ್ಲ. ರಾಮ ಕಾರ್ಯಕ್ಕೆ  ‘ಕಿರು ಸೇವೆ’ ಎಂದು ಅಳಿಲು ನೀಡಿದ ಸಂದೇಶ ಸಾರ್ವಕಾಲಿಕ. (ವಾಲ್ಮೀಕಿ ರಾಮಾಯಣದಲ್ಲಿ ಈ ಘಟನೆಯ ಉಲ್ಲೇಖವಿಲ್ಲ)

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ನಾ.ಕಾರಂತ ಪೆರಾಜೆ

ಪತ್ರಕರ್ತ , ಕಲಾವಿದ , ಅಂಕಣಕಾರ ನಾ.ಕಾರಂತ ಪೆರಾಜೆ ಅವರು ಪ್ರಸ್ತುತ ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಕರ್ತರಾಗಿ, ಕಲಾವಿದರಾಗಿ, ಅಂಕಣಕಾರರಾಗಿ ಗುರುತಿಸಿಕೊಂಡಿರುವ ನಾ.ಕಾರಂತ ಅವರು ತಾಳಮದ್ದಳೆಯಲ್ಲಿ ಅರ್ಥದಾರಿಯಾಗಿ ಹಾಗೂ ವಿವಿಧ ಮೇಳಗಳಲ್ಲಿ ವೇಷಧಾರಿಯೂ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಪುತ್ತೂರು ತಾಲೂಕಿನ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಇದನ್ನೂ ಓದಿ

ಬದುಕು ಪುರಾಣ | ಕೃಷ್ಣ ಬಂದ, ನೋಡಲಾಗಲಿಲ್ಲ..!
August 17, 2025
6:34 AM
by: ನಾ.ಕಾರಂತ ಪೆರಾಜೆ
ಹೊಸರುಚಿ | ಹಲಸಿನ ಹಣ್ಣಿನ ಬಜ್ಜಿ
August 16, 2025
11:33 AM
by: ದಿವ್ಯ ಮಹೇಶ್
ಗ್ರಾಮೀಣ ಆರ್ಥಿಕತೆಯ “ಸಹಕಾರಿ” ಸಂಘದ “ಮಾದರಿ” ಗುಟ್ಟು…!
August 15, 2025
7:07 AM
by: ರಮೇಶ್‌ ದೇಲಂಪಾಡಿ
ಸ್ವಾತಂತ್ರ್ಯಕ್ಕಾಗಿ ಮದುವೆ
August 14, 2025
8:43 PM
by: ಡಾ.ಚಂದ್ರಶೇಖರ ದಾಮ್ಲೆ

You cannot copy content of this page - Copyright -The Rural Mirror

Join Our Group