ಇವರು ತಮ್ಮ ವಯೋಸಹಜ ಕಾರಣಗಳಿಂದ ತಕ್ಕ ಮಟ್ಟಿಗೆ ತಮ್ಮ ಕೆಲಸ ಮಾಡಿಕೊಂಡು ಉತ್ಸಾಹದಿಂದ ಇರುವವರು. ಜೀವನದಲ್ಲಿ ಬಹಳಷ್ಟು ಕಷ್ಟಪಟ್ಟವರು. ಬದುಕಿನ ಒಂದೊಂದೇ ಹೊಡೆತಗಳು ಅವರನ್ನು ಕಠಿಣ ವ್ಯಕ್ತಿಯೆಂದೇ ಬಿಂಬಿಸುವಂತೆ ಮಾಡಿಬಿಟ್ಟಿದೆ. ತಾವಾಯಿತು ತಮ್ಮ ಮನೆಯಾಯಿತು, ಕರೆದರೆ ಸಂಬಂಧಿಕರಲ್ಲಿಗೆ ಕಾರ್ಯಕ್ರಮಗಳಿಗೆ ಹೋಗಿ ಬಂದರಾಯಿತು.
ಪಕ್ಕದ ಮನೆಯಾಕೆ ಪೇಟೆಯಿಂದ ಹೊಸ ಬ್ಯಾಗ್ ಖರೀದಿಸಿದ್ದನ್ನು ನೋಡಿದ ಇವರು ಕುತೂಹಲದಿಂದ ಅದನ್ನೇ ಗಮನಿಸಿ ನೋಡಿದರೆ ಮನಸು 50 ವರ್ಷ ಗಳಷ್ಟು ಹಿಂದೆ ಹೋಯಿತು. ಅರೇ ಇದು ನಾನು ಮಾಡುತ್ತಿದ್ದ ನೂಲಿನ ಬ್ಯಾಗ್ ಅಲ್ಲವಾ ಎಂದು ಮತ್ತೆ ಮತ್ತೆ ತಿರುಗಿಸಿ ನೋಡಿದರು. ಯಾವುದೋ ಬಣ್ಣಕ್ಕೆ ಇನ್ನು ಯಾವುದೋ ಮ್ಯಾಚ್ ಆಗದ ಕಾಂಬಿನೇಶನ್ ನೋಡಿ ಇದೂ ಒಂದು ಅಭಿರುಚಿಯಾ ಅನ್ನಿಸಿ ಯಾಕೆ ಒಂದು ಪ್ರಯತ್ನ ಮಾಡಬಾರದು ಎಂದು ಕಾರ್ಯಪ್ರವೃತ್ತರಾದರು. ಪಕ್ಕದ ಫ್ಯಾನ್ಸಿ ಅಂಗಡಿಯಿಂದ ಕ್ರೋಷ ಕಡ್ಡಿ ,ನೂಲು ಸಾಮಾನುಗಳನ್ನು ಖರೀದಿಸಿ ಬ್ಯಾಗ್ ನೇಯುವ ಕೆಲಸ ಆರಂಭಿಸಿದರು. ಮರೆತೇ ಹೋಗಿದ್ದ ನೆಚ್ಚಿನ ಹವ್ಯಾಸ 80ರ ಹರೆಯದಲ್ಲಿ ಮತ್ತೆ ಚಿಗುರೊಡೆಯಿತು. ಇಪ್ಪತೈದಕ್ಕೂ ಹೆಚ್ಚಿನ ನಮೂನೆವಾರು ಬ್ಯಾಗ್ ಗಳನ್ನು ಮಾಡಿ ತನ್ನ ನೆಚ್ಚಿನವರ ಕಣ್ಣಲ್ಲಿ ಮಿಂಚು ಮೂಡಿಸಿದವರು . ತಮ್ಮ ಕಡಕ್ ವ್ಯಕ್ತಿತ್ವಕ್ಕೆ ಕತ್ತರಿ ಹಾಕಿದ್ದು ತನ್ನ ಹವ್ಯಾಸವೆಂದು ಹೆಮ್ಮೆಯಿಂದ ಆ ಹಿರಿಯರು ಹಂಚಿಕೊಂಡರು.
ಲಾಕ್ ಡೌನ್ ಸಮಯದಲ್ಲಿ ಯಾವುದೇ ಹಾಳು ಹರಟೆಯೂ ಇಲ್ಲದೆ, ಮನಸ್ಸಿನ ಸಮತೋಲನವನ್ನು ಕಾಯ್ದುಕೊಂಡು ಮತ್ತೆ ಹೊಸ ಜೀವನಕ್ಕೆ ಅತ್ಯಲ್ಪ ಸಮಯದಲ್ಲಿ ಹೊಂದಿಕೊಂಡು ಇತರರಿಗೆ ಮಾದರಿಯಾದವರು.
ಇನ್ನೊಬ್ಬರು ಎರಡೆರಡು ಪಿ ಎಚ್ ಡಿ ಮಾಡಿಕೊಂಡವರು. ಅಧ್ಯಾಪನ ವೃತ್ತಿಯಲ್ಲಿದ್ದು ಜನರೊಂದಿಗೆ, ಮಕ್ಕಳೊಂದಿಗೆ ಸದಾ ಚಟುವಟಿಕೆಯಿಂದ ಇರುತ್ತಿದ್ದ ವ್ಯಕ್ತಿಗೆ ಪ್ರಪಂಚವೇ ಶೂನ್ಯವಾದ ಅನುಭವ. ಪ್ರವಾಸವೆಂದು ಕಾಲಿಗೆ ಚಕ್ರ ಕಟ್ಟಿಕೊಂಡೇ ತಿರುಗುತ್ತಿದ್ದ ವ್ಯಕ್ತಿಗೆ ಕಟ್ಟಿ ಹಾಕಿದ ಭಾವನೆ. ಆದರೆ ಓದುವ ಹವ್ಯಾಸವೊಂದು ಇತ್ತಲ್ಲಾ ಅದಕ್ಕೆ ಪೂರ್ಣ ಸಮಯ ಲಾಕ್ ಡೌನ್ ಒದಗಿಸಿತು. ಎಷ್ಟೋ ವರುಷಗಳಿಂದ ಖರೀದಿ ಮಾಡಿ ಅಟ್ಟಿ ಇಟ್ಟ ಪುಸ್ತಕಗಳನ್ನು ತಿರುವಿ ಹಾಕುವ ಸುಯೋಗ . ಎಣಿಸದೆ ದೊರೆತ ಮಾನಸಿಕ ಬದಲಾವಣೆ. ದೇಹ ಮನಸಿಗೆರಡಕ್ಕೂ ಒತ್ತಡರಹಿತ ಪೂರ್ಣ ವಿಶ್ರಾಂತಿ. ನಮಗೆ ಒಂದು ವಿಷಯ ಸ್ಪಷ್ಟವಾಗಿ ಅರ್ಥವಾಗುತ್ತದೆ. ಸಮಯ ಹೇಗೆ ಬಂದರೂ ನಾವು ಅದನ್ನು ಯಾವ ರೀತಿಯಲ್ಲಿ ಸ್ವೀಕರಿಸುತ್ತವೆ ಎಂಬುದು ಬಹಳ ಮುಖ್ಯ ಪಾತ್ರ ವಹಿಸುತ್ತದೆ.
ಅಶ್ವಿನಿ ಮೂರ್ತಿ ಅಯ್ಯನಕಟ್ಟೆ