“ಕಾಂತಾರ” ಸಿನಿಮಾ ಬಂದು, ಆ ಸಿನಿಮಾ ಯಶಸ್ಸಿನ ಪ್ರವಾಹದಲ್ಲಿ ತೇಲುವಾಗ “ವ್ಯಕ್ತಿ”ಯೊಬ್ಬರು ಕಾಂತಾರ ಸಿನೆಮಾದಲ್ಲಿ ದಿಗ್ದದರ್ಶಿತವಾದ ಜಾನಪದ ಪಾಚೀನ ಆಚರಣೆ “ಪಂಜುರ್ಲಿ ಕೋಲ” ಮತ್ತು ಆ ಕೋಲ ಕಟ್ಟುವ ಸಮುದಾಯಗಳನ್ನ ಉಲ್ಲೇಖಿಸಿ ಮಾಧ್ಯಮಗಳಲ್ಲಿ ತಮ್ಮ ಅನಿಸಿಕೆಯನ್ನೇ ಅಂತಿಮ ಸತ್ಯವೆಂದು ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ. ಈ ಭೂತ ಕೋಲ ಆಚರಿಸುವ ಸಮುದಾಯಗಳು ಈ ದೇಶದ ಮೂಲನಿವಾಸಿಗಳು. ಅವರು “ಹಿಂದೂ” ಗಳಲ್ಲ , ಭೂತ / ಕೋಲ ಆಚರಣೆಗಳು ಹಿಂದೂ ಧರ್ಮದ ಆಚರಣೆಗಳಲ್ಲ. ಅವರನ್ನು ಹಿಂದೂ ಧರ್ಮಿಯರಿಂದ ದೂರ ಇಡಬೇಕು. ಹಿಂದೂ ವೈದೀಕ ಶಾಹಿಗಳು ಇವರನ್ನು ಇವರ ಆಚರಣೆಗಳನ್ನು ಹೈಜಾಕ್ ಮಾಡಬಾರದು. “ಹಿಂದೂ” ಧರ್ಮ ಕೇವಲ ಮೂರುವರೆ ಸಾವಿರ ವರ್ಷಗಳ ಈಚಿನದ್ದು. ಇದನ್ನು ಮಧ್ಯ ಏಷ್ಯಾ ದಿಂದ ಆರ್ಯರು ಅಥವಾ ಬ್ರಾಹ್ಮಣರು ತಂದದ್ದು …. ಹೀಗೆ ಅವರ ವಾದ ಸರಣಿ ಸಾಗುತ್ತಾ ಹೋಗುತ್ತದೆ.
ಈ ಪಂಜುರ್ಲಿ ದೇವರು ಘಟ್ಟದ ಮೇಲಿನ ಕಾಡಿನಿಂದ ಕರಾವಳಿಯ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಂದು ಅಲ್ಲಿಂದ ಮತ್ತೆ ಕೈಲಾಸ ಸೇರಿ ಮತ್ತೆ ಶಿವ ಪಾರ್ವತಿಯ ಕೃಪೆಯಿಂದ ದೇವರಾಗುವ ತನಕ ಈ ಸಂಬಂಧಿಸಿದ ಕಥಾನಕ “ಪಾಡ್ದಾನ” ದಲ್ಲಿ ಉಲ್ಲೇಖವಿದೆ. ಇದೇ ಮೂಲ ಕಥೆಯ ಬೇರೆ ಬೇರೆ ರೂಪದಲ್ಲಿ ಬೇರೆ ಬೇರೆ ಊರಿನಲ್ಲಿ ತುಳುನಾಡಿನಾದ್ಯಂತ ಪ್ರಚಲಿತದಲ್ಲಿದೆ. ಪಂಜುರ್ಲಿ ಯಲ್ಲಿ ನೂರಕ್ಕಿಂತ ಹೆಚ್ಚು ಬೇರೆ ಬೇರೆಯ ಪಂಜುರ್ಲಿ ದೇವರು ಇದ್ದಾರಂತೆ…!.
ಇವತ್ತು ವೈದೀಕಶಾಹಿಗಳು ಮೂಲನಿವಾಸಿಗಳ ಈ ಆಚರಣೆಗಳನ್ನು ಹೈಜಾಕ್ ಮಾಡ್ತಾರೆಂಬ ಆರೋಪ ಮಾಡುವ ಇವರಿಗೆ ಈ ಬಗೆ ಬಗೆಯ ಪಂಜುರ್ಲಿ ದೈವ ಸಮೂಹದಲ್ಲಿ “ಬ್ರಾಹ್ಮಣ ಪಂಜುರ್ಲಿ ” ಯೂ ಅಂತ ಒಂದಿದೆ ಎಂಬ ಅಧ್ಯಯನ ಇವರಿಗಿಲ್ಲ…!!!ಈ ಕೋಲ ಪಂಜುರ್ಲಿ ಆರಾಧನೆ ಹತ್ತಾರು ಸಾವಿರ ವರ್ಷಗಳ ಹಿಂದಿನದ್ದು, ಆದರೆ ಈ ಆರ್ಯರು ಮೂರುವರೆ ಸಾವಿರ ವರ್ಷಗಳ ಹಿಂದೆ ಮಧ್ಯ ಏಷ್ಯಾದಿಂದ ಭಾರತಕ್ಕೆ ಬಂದ ಮೇಲೆ “ಹಿಂದೂ” ಧರ್ಮ ಉಗಮವಾಯಿತು ಎನ್ನುವ ವಾದ ಮಾಡುವುದಾದರೆ ಈ ಪಂಜುರ್ಲಿ ಪಾಡ್ದಾನದಲ್ಲಿ ಉಲ್ಲೇಖ ವಾಗಿರುವ ಕೈಲಾಸದ ಶಿವ ಪಾರ್ವತಿ , ಕುಕ್ಕೆ ಸುಬ್ರಹ್ಮಣ್ಯ ದೇವರು ಮುಂತಾದ “ಆರ್ಯರ ಸೃಷ್ಟಿ”ಯ ದೇವರು ಆರ್ಯರು ಬರುವ ಮೊದಲೇ ಮೂಲ ನಿವಾಸಿಗಳಿಗೆ ಸಿಕ್ಕಿದ್ದು ಹೇಗೆ…?
ಈ ಭೂತ ದೈವಗಳಲ್ಲಿ ಮೂರು ಬಗೆಯಿರುತ್ತದೆ. ಒಂದು ಪ್ರಕೃತಿ ಯ ಮೂಲದ ದೇವರು. ಇನ್ನೊಂದು ಪ್ರಾಣಿ ಮೂಲದ ದೇವರು
(ಉದಾಹರಣೆಗೆ ಪಂಜುರ್ಲಿ ದೇವರು, ನಾಗದೇವರು ಇತ್ಯಾದಿ) .ಮತ್ತೊಂದು ಮನುಷ್ಯ ತನ್ನ ಜೀವಿತಾವಧಿಯಲ್ಲಿ ಅತಿಮಾನುಷ ಶಕ್ತಿ ಪ್ರದರ್ಶನ ಮಾಡಿ ಸತ್ತು ದೇವರಾಗೋದು ಅಥವಾ ನೊಂದ ಮನುಷ್ಯ ಸತ್ತು ಪ್ರೇತವಾಗದೇ ಭೂತವಾಗಿ ತನಗೆ ಜೀವಿತದಲ್ಲಿ
ಅನ್ಯಾಯ ಮಾಡಿದವರಿಗೆ ಸೇಡು ತೀರಿಸಿ ಕೊಂಡು ಒಂದು ದೈವ ಶಕ್ತಿ ಯಾಗೋದು. ಉದಾಹರಣೆಗೆ ಕಲ್ಲು ಕುಟಿಗ ದೇವರು.ಇಲ್ಲೆಲ್ಲ ಈ ಭೂತ ದೈವ ದ ಕೊಂಡಿ ಹಿಂದೂ ಪುರಾಣದ ಸಂಪರ್ಕ ಇದ್ದೇ ಇರುತ್ತದೆ.
ಈ ಮೂಲನಿವಾಸಿಗಳು ಈ ಆಚರಣೆಯನ್ನು ಹತ್ತು ಸಾವಿರ ವರ್ಷಗಳ ಹಿಂದಿನಿಂದಲೂ ಆಚರಿಸುತ್ತಾ ಬಂದಿದ್ದಾದರೆ ಮೂರುವರೆ ಸಾವಿರ ವರ್ಷಗಳ ಈಚೆ ಮಧ್ಯ ಏಷ್ಯಾ ದಿಂದ ಭಾರತಕ್ಕೆ ಬಂದ ಆರ್ಯರ ಹಿಂದೂ ದೇವರುಗಳನ್ನು ಈ ಮೂಲನಿವಾಸಿಗಳು ತಮ್ಮ ಪೂಜಾ ಸಂಸ್ಕೃತಿಗಳಲ್ಲಿ ಬಳಸಿ ಕೊಂಡಿದ್ದು ಹೇಗೆ…?!!!
ದ್ರಾವಿಡರು ಮಾತ್ರ ಈ ದೇಶದ ಮೂಲ ನಿವಾಸಿಗಳು ಎಂದು ವಾದ ಮಾಡುವ ಇವರುಗಳ ವಾದವನ್ನು ಇತಿಹಾಸ ತಜ್ಞರು ಒಪ್ಪುವುದಿಲ್ಲ. ದ್ರಾವಿಡರೂ ಕೂಡ ಆಫ್ರಿಕಾ ಖಂಡದಿಂದಲೇ ಈ ಭಾರತ ಖಂಡಕ್ಕೆ ಸಮುದ್ರ ದ ಕರಾವಳಿ ದಂಡೆಯಲ್ಲಿ ವಲಸೆ ಬಂದದ್ದು ಎನ್ನುತ್ತಾರೆ. ಬಹಳ ಆಳವಾಗಿ ವಿಶ್ಲೇಷಣೆ ಮಾಡಿದರೆ ಈ ಆರ್ಯ ದ್ರಾವಿಡ ವಾದವನ್ನು ಬ್ರಿಟಿಷ್ ಸಂಶೋಧಕರು ತಮ್ಮ ಎಂದಿನ ದೇಶದ ಜನರ ಒಡೆದು ಆಳುವ ನೀತಿಗಾಗಿ, ತಮ್ಮ ದೇಶದಿಂದ ಇತಿಹಾಸ ತಜ್ಞರನ್ನು ಭಾರತಕ್ಕೆ ಕರೆಸಿ ಅಧ್ಯಯನ ಮಾಡಿಸಿ ಅವರಿಂದ “ಆರ್ಯ ದ್ರಾವಿಡ ” ಸೃಷ್ಟಿಸಿ ಬೆರಸಿ ಬಳಸಿಕೊಂಡಿದ್ದಾರೆಂಬುದು ಸುಸ್ಪಷ್ಟ.
ಟಿವಿ ಚಾನಲ್ ಗಳಲ್ಲಿ ಪ್ಯಾನಲ್ ಚೆರ್ಚೆ ಗೆ ಕೂರುವ ಈ ಮೇಧಾವಿಗಳು ಯಾವುದೇ ನಿಖರವಾದ ಆಧಾರವಿಲ್ಲದೆ ಸಲೀಸಾಗಿ
ಐವತ್ತು ಅರವತ್ತ ಸಾವಿರ ವರ್ಷಗಳಿಂದ ಆರಂಭವಾಗಿ ಲಕ್ಷ ವರ್ಷದ ತನಕ ಭಾರತದ ಇತಿಹಾಸ ಹೇಳುತ್ತಾರೆ.
ವಿಪರ್ಯಾಸವೆಂದರೆ ಏಳನೂರು ಎಂಟನೂರು ವರ್ಷಗಳ ಹಿಂದಿನ ಭಕ್ತಿ ಭಂಡಾರಿ ಬಸವಣ್ಣನವರ ಹುಟ್ಟು ಸಾವಿನ ಬಗ್ಗೆ ನಿಖರವಾದ ಮಾಹಿತಿ ನಮಗೆ ಸಿಗುವುದಿಲ್ಲ. ದಾಸ ಪರಂಪರೆಯ ಮೇರು ದಾಸ ಸಾಹಿತಿ ಪುರಂದರ ದಾಸರ ಹುಟ್ಟೂರು ಎಲ್ಲೆಂಬ ನಿಖರತೆಯ ದಾಖಲೆ ಇವತ್ತಿಗೂ ನಮ್ಮಲ್ಲಿಲ್ಲ. ಈ ಸಾವಿರ ವರ್ಷಗಳ ಈಚೆಯ ಇಂತಹ ಸಾವಿರ ಪ್ರಶ್ನೆಗಳು ನಿಖರ ದಾಖಲೆಗಳಿಲ್ಲದೇ ಇತಿಹಾಸ ತಜ್ಞರಿಗೂ ಒಮ್ಮತ ಮೂಡದೇ ಪ್ರಶ್ನೆಗಳಾಗಿಯೇ ಉಳಿದಿವೆ. ಇವೆಲ್ಲವೂ ಸಾಕಷ್ಟು ನಾಗರೀಕತೆ ಮುಂದುವರಿದ ಈ ಒಂದು ಸಾವಿರ ಈಚಿನ ವರ್ಷಗಳದ್ದು. ಹೀಗಿದ್ದ ಮೇಲೆ ಹತ್ತು ಸಾವಿರ ವರ್ಷಗಳಿಂದ ಐವತ್ತು ಸಾವಿರ ವರ್ಷಗಳ ಹಿಂದಿನ ಐತಿಹಾಸಿಕ ದಾಖಲೆ ಇವರಿಗೆ ಯಾರು ಕೊಟ್ಟರು…?
ಭಾರತಕ್ಕೆ ಯೂರೋಪಿಯನ್ನರು ವ್ಯಾಪಾರಿ ಉದ್ದೇಶಕ್ಕಾಗಿ ಬರಲಾರಂಭಿಸಿದ ಮೇಲೆ ನಿಖರ ದಾಖಲೆಗಳು ಸಿಗಲಾರಂಭಿಸುತ್ತದೆ. ಅದೂ ಐದನೂರು ವರ್ಷಗಳದ್ದು ಮಾತ್ರ. ಇನ್ನು ಳಿದದ್ದು ಶಿಲಾ ಶಾಸನಗಳು, ತಾಳೆಗರಿ ಇತ್ಯಾದಿಗಳಲ್ಲೂ ಸೊಲಪ ಮಟ್ಟಿಗಿನ ಇತಿಹಾಸ ಸಿಕ್ಕುತ್ತಾದರೂ ಅದು ಇಷ್ಟು ದೊಡ್ಡ ದೇಶದ ಸಂಪೂರ್ಣ ನಿಖರತೆ ವಿವರ ಖಂಡಿತವಾಗಿಯೂ ಲಭ್ಯವಾಗುವು ದಿಲ್ಲ. ಸ್ವತಃ ಕವಿಗಳು ರಾಶಿ ರಾಶಿ ಬರಹ ಬರೆದರೂ ಸ್ವತಃ ತಮ್ಮ ವೈಯಕ್ತಿಕ ವಿವರ ಗಳನ್ನು ಮತ್ತು ಆ ಕಾಲಘಟ್ಟ ವನ್ನು ವಿವರಿಸದಿರುವುದು ನಮ್ಮ ದೇಶದ ಇತಿಹಾಸದ ಅಸ್ಪಷ್ಟತೆಗೆ ಕಾರಣವಾಗಿದೆ ಎನ್ನಬಹುದೇನೋ. ಬಹಳಷ್ಟು ಜ್ಞಾನ ಗಳು ಆ ಕಾಲದಿಂದ ಬರೆದು ದಾಖಲು ಮಾಡುವ ಕಾಲದ ತನಕ ಮೌಖಿಕವಾಗಿ ತಲತಲಾಂತರದಿಂದ ಬಾಯಿಂದ ಬಾಯಿಗೆ ಹರಿದು ಬಂದದ್ದು ಮಾತ್ರ ದಾಖಲಾಗಿದೆ . ಹಾಗಾಗಿ ಬಹಳಷ್ಟು ವಿಚಾರಗಳು ವಿವಾದವಾಗಿ ಗೊಂದಲವಾಗಿ ಉಳಿದಿರುವುದು.
ಹಿಂದೂ ಧರ್ಮ ಬಹು ಸಂಸ್ಕೃತಿಯ ಧರ್ಮ. ಎಲ್ಲಾ ಜಾತಿಗಳ ಎಲ್ಲಾ ಸಾಂಸ್ಕೃತಿಕ ಆಚರಣೆಗಳ ಸಂಗಮ.
ಇವರುಗಳ ಲೆಕ್ಕಾಚಾರದಲ್ಲಿ ಸಾವಿರ ವರ್ಷಗಳ ಹಿಂದೆ ಬಂದ ದಾಳಿಕೋರರು, ಐದನೂರು ವರ್ಷಗಳ ಹಿಂದೆ ದೇಶಕ್ಕೆ ಬಂದ ಯೂರೋಪಿಯನ್ ವಸಾಹತು ಷಾಹಿಗಳು ಈ ದೇಶದ ಅದೆಷ್ಟು ಸಂಖ್ಯೆಯ ಮೂಲ ನಿವಾಸಿಗಳ, ಆದಿವಾಸಿಗಳ ಅದೆಷ್ಟು ಪೂಜೆ ಪುನಸ್ಕಾರಗಳನ್ನ ಮತಾಂತರದ ಮೂಲಕ ಆಪೋಷನ ತೆಗೆದುಕೊಂಡಿದ್ದಾರೆ..!?
ಹಿಂದೂ ಧರ್ಮ ಬಹುಸಂಸ್ಕೃತಿಗಳನ್ನು ಪೋಷಿಸಿದ ಕಾರಣ ಎಲ್ಲ ಹಿಂದೂಗಳು ಈ ಎಲ್ಲಾ ಸಾಂಸ್ಕೃತಿಕ ಆಚರಣೆಗಳನ್ನು ನಂಬಿ ಸಮಸ್ತರೂ ಕೂಡಿ ಭಾವ ಭಕ್ತಿಯಿಂದ ಆಚರಣೆ ಮಾಡುವುದರಿಂದ ಇವತ್ತಿಗೂ ಕೋಲ ಇತ್ಯಾದಿ ಆಚರಣೆ ಗಳು ಶ್ರೀಮಂತ ವಾಗಿ ಉಳಿದಿದೆ. ಅಕಸ್ಮಾತ್ ಈ ಆಚರಣೆಗಳನ್ನು ಆಚರಿಸುತ್ತಿರುವ ಈ ” ಮೂಲನಿವಾಸಿ”ಗಳನ್ನುವವರೇನಾದರೂ ದಾಳಿಕೋರರ ಕತ್ತಿ ಅಲುಗಿನ ಭಯಕ್ಕೆ ಸಿಲುಕಿ ಅಥವಾ ವಸಾಹತುಶಾಹಿಗಳ ಆಮಿಷಕ್ಕೆ ಮರುಳಾಗಿ ಮತಾಂತರವಾಗಿದ್ದರೆ ಈ ಕೋಲ ಇತ್ಯಾದಿ ಜಾನಪದ ಆಚರಣೆಗಳು ಇಂದು ಉಳಿಯುತ್ತಿತ್ತಾ…? ಈ ದಾಳಿಕೋರರು ಮತ್ತು ವಸಾಹತುಶಾಹಿಗಳ ಮತಾಂತರ ದಾಳಿಗೆ ಈ ಬಗೆಯ ಅದೆಷ್ಟು ಜಾನಪದ ಸಂಸ್ಕೃತಿ ಗಳು ಈ ದೇಶದಲ್ಲಿ ನಾಶವಾಗಿರಬಹುದು….?!
ಈಗ್ಗೆ ಇಪ್ಪತ್ತೈದು ಮೂವತ್ತು ವರ್ಷಗಳ ಹಿಂದಿನ ತನಕವೂ ಈಶಾನ್ಯ ರಾಜ್ಯಗಳಲ್ಲಿ ಸಾವಿರಾರು ಬುಡಕಟ್ಟು ಜನಾಂಗಗಳಿದ್ದವು. ಅಲ್ಲಿ ಈಗ ಉಳಿದಿರುವುದು ಬೆರಳೆಣಿಕೆಯ ಬುಡಕಟ್ಟು ಜನಾಂಗಗಳು…!! ಎಲ್ಲಾ ಮತಾಂತರ ಮಯವಾಗಿದೆ.ಬಹುಶಃ ಈ ದಾಳಿಕೋರರು ದಾಳಿ ಮಾಡಿದ ದೇಶಗಳಲ್ಲೆಲ್ಲಾ ಅಲ್ಲಿನ ಮೂಲ ನಿವಾಸಿಗಳು ಬದುಕಬೇಕೆಂದರೆ “ಮತಾಂತರ” ಹೊಂದಲೇ ಬೇಕಾದ ಅನಿವಾರ್ಯತೆ ಸೃಷಿಯಾಗುತ್ತಿತ್ತು.
ಇದು ಕೇವಲ ಭಾರತ ದೇಶವೊಂದರ ಕಥೆಯಲ್ಲ..! . ಅಮೆರಿಕಾ, ಆಫ್ರಿಕಾ ಖಂಡದಲ್ಲಿ ಭಾರಿ ಮಟ್ಟದ ವಸಾಹತು ಷಾಹಿಗಳ ದೌರ್ಜನ್ಯ ದಿಂದ ಮೂಲನಿವಾಸಿಗಳು , ಬುಡಕಟ್ಟು ಜನಾಂಗಗಳೇ ಹೇಳ ಹೆಸರಿಲ್ಲದಂತೆ ಕಣ್ಮರೆಯಾಗಿವೆ ಇಲ್ಲ ಮತಾಂತರ ಗೊಂಡು ಮೂಲನಿವಾಸಿಗಳ ಸಂಸ್ಕೃತಿ ನಾಶವಾಗಿದೆ. ಇದು ಬರಿಗಣ್ಣಿಗೆ ಕಾಣಿಸುವ ಕ್ರೂರ ಸತ್ಯ.ಈ ಬುದ್ಧಿಜೀವಿಗಳಿಗೆ ಹೀಗೆ ದಾಳಿಕೋರರ ವಸಾಹತುಶಾಹಿಗಳ ಮತಾಂತರದಿಂದ ಮೂಲನಿವಾಸಿಗಳ ಜಾನಪದ ಸಾಂಸ್ಕೃತಿಕ ಆಚರಣೆಗಳು , ದೇವರು ನಂಬಿಕೆ ನಾಶವಾದರೂ ಪರವಾಗಿಲ್ಲ. ಆದರೆ ಅದೇ ಈ ಮೂಲನಿವಾಸಿಗಳು “ಹಿಂದೂ” ಗಳಾಗಿ ಇರಬಾರದು ಎಂದರೆ ಏನರ್ಥ …?. ಇಲ್ಲೇನೋ ಬಲವಾದ ಹುನ್ನಾರ ಇದೆ…
ಆ “ಮನುಷ್ಯ” ಪತ್ರಕರ್ತ ರಿಗೆ ತನ್ನ ವಾದ ಮಂಡಿಸಿತ್ತಿದ್ದರೆ ಅಷ್ಟೇನೋ ಜ್ಞಾನ ವಿಲ್ಲದ ಅನೇಕ ಪತ್ರಕರ್ತರು ಆತನ ವಾದಕ್ಕೆ ತಬ್ಬಿಬ್ಬಾಗುತ್ತಿದ್ದರು. ಈತ ಹೇಳುವುದೇ ನಿಜವೇನೋ ಎಂದು ನಂಬಿದಂತೆ ಕಾಣಿ ಸುತ್ತಿದ್ದರು. ಈ ತುಳುನಾಡ ಭೂತ ದೈವ ದ ಬಗ್ಗೆ ಆಳವಾದ ಅರಿವಿರುವ ಸಂಶೋಧಕರನ್ನು ಮಾತನಾಡಿಸಿದರೆ ಈ ಬಗ್ಗೆ ಸರಿಯಾದ ಮಾಹಿತಿ ಸಿಗುತ್ತದೆ. ಈ ಅರ್ಧಮರ್ಧ ಪಂಡಿತರು ತುಂಬಾ ಬುದ್ದಿವಂತಿಗೆಯಿಂದ ಅನಾವಶ್ಯಕವಾಗಿ ಬ್ರಾಹ್ಮಣರನ್ನು ಈ ನಡುವೆ ಎಳೆದು ತಂದು ಹಿಂದೂ ಧರ್ಮದ ಸಮಸ್ತ ಅಪಸವ್ಯಕ್ಕೆಲ್ಲ ಬ್ರಾಹ್ಮಣರೇ (ವೈದೀಕ ಶಾಹಿ ) ಕಾರಣ ಎಂದು ಸಲೀಸಾಗಿ ಘೋಷಿಸುತ್ತಾರೆ.
ಎಲ್ಲೋ ಕೂತವ ಏನೇ ಅಂದರೂ ಎಷ್ಟೇ ಬೈದರೂ ಮೈಮೇಲೆ ಬರದ ವೈದೀಕರನ್ನ ಎಳೆತಂದು ದೊಡ್ಡ ಸಾಧನೆ ಮಾಡಿ ಗೆದ್ದಂತೆ ಆಡುತ್ತಿ ದ್ದಾರೆ. ಹೀಗೆ ಅಸಂಬದ್ಧ ವಾಗಿ ಆಡುವವ ರಿಗೆಲ್ಲ ಉತ್ತರ ಕೊಡಬೇಕಾದ ಅವಶ್ಯಕತೆ ಇಲ್ಲ… ಆದರೂ ಕೆಲವರು ಈತನ ಮಾತಿಗೆ ಹೀಗೂ ಆಗಿರಬಹುದಾ ಎಂದು ಅನುಮಾನ ಪಡುವವರಿಗೆ ಇಲ್ಲೊಂದಷ್ಟು ಸರಳ ಚಿಂತನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಪ್ರಯತ್ನ ಮಾಡುವೆ.
ಹಿಂದೆ ಭಾರತದಲ್ಲಿದ್ದದ್ದು ವೃತ್ತಿ ಆಧಾರಿತ ಜಾತಿ ಪದ್ದತಿ. ಚಮ್ಮಾರ , ಕಮ್ಮಾರ , ಸೊನಗಾರ, ನೇಕಾರ, ಗುಡಿಗಾರ, ಕುಂಬಾರ , ಕೃಷಿಕ, ಕ್ಷೌರಿಕ, ಮೀನುಗಾರ ಮುಂತಾದ ವೃತ್ತಿ ಯ ಸಾಲಿ ನಲ್ಲಿ ಅರ್ಚಕ ವೃತ್ತಿ ಯೂ ಒಂದಾಗಿತ್ತು. ಈಗಲೂ ನಮ್ಮ ಬುದ್ಧಿಜೀವಿಗಳು ಮಾತು ಮಾತಿಗೂ “ಪುರೋಹಿತ ಶಾಹಿ” ಎಂದು ಮೂದಲಿಸುವ ಸಾಲಿನಲ್ಲಿ ಎಲ್ಲಾ ಜಾತಿಯಲ್ಲೂ ಪುರೋಹಿತರು ಇರುತ್ತಿದ್ದರು. ಈಗಲೂ ಇದ್ದಾರೆ.. ಆಗ ಹೆಚ್ಚಿನ ಬ್ರಾಹ್ಮಣರು ಕೃಷಿಕರಾಗಿರಲಿಲ್ಲ . ದೇವಸ್ಥಾನಗಳ ಉಂಬಳಿ ಜಮೀನನ್ನು ಗೇಣಿಗೆ ಕೊಟ್ಟು ತಾವು ದೇವಾಲಯ ದ ಪೂಜೆ ಪುನಸ್ಕಾರ ಮಾಡಿಕೊಂಡಿರುತ್ತಿದ್ದರು. ಅಲ್ಪ ತೃಪ್ತ ಬ್ರಾಹ್ಮಣ ಅರ್ಚಕ ನಿಷ್ಠೆಯಿಂದ ದೇವತಾರ್ಚನೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಅದೇ ಅಂದಿನ ಕಾಲದ ಜೀವನವಾಗಿತ್ತು. ಅದೆಲ್ಲಾ ರಾಜಾಶ್ರಯ ದ ಕಾಲ. ಅಂದಿನಿಂದ ಇಂದಿನವರೆಗೂ ಬ್ರಾಹ್ಮಣರಲ್ಲಿ ಬಡ, ಮಧ್ಯಮ ವರ್ಗದವರೇ ಅಧಿಕ. ಈ ದೇಶದ ಅಲ್ಪ ಸಂಖ್ಯಾತ ಜಾತಿ. ಹೆಚ್ಚು ಜನರಿಲ್ಲದ , ಒಗ್ಗಟ್ಟಿಲ್ಲದ, ದಿನ ದಿನಕ್ಕೂ ಅಳಿದು ಹೋಗುತ್ತಿರುವ ಸಮುದಾಯ ಬ್ರಾಹ್ಮಣ ಜಾತಿ. ಅತಿ ಬಡವರಿದ್ದರೂ , ಅತ್ಯಂತ ಅಲ್ಪ ಸಂಖ್ಯಾತರಾಗುತ್ತಿದ್ದರೂ ಸರ್ಕಾರದಿಂದ ಯಾವುದೇ ಸಹಾಯ, ಸಹಾಯ ಧನ, ಮೀಸಲಾತಿ ಬೇಡದೇ ಕಷ್ಟದಲ್ಲೂ ಸ್ವಾಭಿಮಾನದಿಂದ ಜೀವನ ನೆಡೆಸುತ್ತಿದ್ದಾರೆ ಬ್ರಾಹ್ಮಣ ಸಮುದಾಯ.
ಸಾವಿರಾರು ವರ್ಷಗಳ ಇತಿಹಾಸ ಹೇಳುವ ಬುದ್ದಿಜೀವಿಗಳು ಈ ಹಿಂದಿನ ಸಾವಿರ ವರ್ಷಗಳ ಈಚೆ ಅತಿ ಹೆಚ್ಚು ದಾಳಿ ಗೊಳಗಾದ ಜಾತಿ ವರ್ಗ ಬ್ರಾಹ್ಮಣ ಎಂಬುದನ್ನು ಮರೆಯುತ್ತಾರೆ. ಈಗಲೂ ಕಾಶ್ಮೀರ ದಲ್ಲಿರುವ ಬ್ರಾಹ್ಮಣರನ್ನು ಕೊಂದು ಬೆದರಿಸಿ ಅಲ್ಲಿಂದ ಓಡಿಸುತ್ತಿರುವುದನ್ನ ನಾವು ನೋಡಬಹುದು. ಉತ್ತರ ಭಾರತದಲ್ಲಿ ಬಡ ಬ್ರಾಹ್ಮಣರು ಅತ್ಯಂತ ದಯನೀಯ ಪರಿಸ್ಥಿತಿಯಲ್ಲಿದ್ದಾರೆ. ಯಾವುದೇ ರಾಜಕೀಯ ಇಚ್ಛಾಶಕ್ತಿ ಇಲ್ಲದ ಗಟ್ಟಿ ಧ್ವನಿ ಇಲ್ಲದ ಇಂದಿನ ಬ್ರಾಹ್ಮಣ ಸಮುದಾಯ ವನ್ನು ಇಂದಿನ ಎಂದಿಂದಿನ ಜಾತಿ ಶೋಷಣೆ ಅಸ್ಪೃಷ್ಯತೆಗೆ ಬ್ರಾಹ್ಮಣ ಜನಾಂಗ ಕಾರಣ ಅಂತ ವೃತಾ ಆರೋಪ ಮಾಡುತ್ತಿ ದ್ದಾರೆ. ಏನಿದೆ ಬ್ರಾಹ್ಮಣರ ಬಳಿ ಶೋಷಣೆ ಮಾಡಲು…?
ಈ ಮೇಲು ಕೀಳು ಅಸ್ಪ್ರಶ್ಯತೆ ಖಂಡಿತವಾಗಿಯೂ ಖಂಡನೀಯವೇ. ಆದರೆ ಇದಕ್ಕೆ ಯಾವುದೋ ಒಂದು ಜಾತಿ ಕಾರಣವಲ್ಲ . ಇದು ಇಲ್ಲದಿರುವ ಜಾಗವಿಲ್ಲ. ಕಳೆದ ಸರತಿ ಅಮೆರಿಕದ ಅಧ್ಯಕ್ಷ ರಾಗಿ ಆಯ್ಕೆಯಾದ ಬರಾಕ್ ಒಬಾಮರನ್ನ ಕಪ್ಪು ವರ್ಣಿಯ ನೊಬ್ಬ ಅಮೆರಿಕದ ಅಧ್ಯಕ್ಷ ರಾದ ಅಂತ ಬಣ್ಣಿಸಲಾಯಿತು. ಮೊನ್ನೆ ಇಂಗ್ಲೆಂಡ್ ನ ಪ್ರಧಾನಿಯಾದ ಋಷಿ ಸುನಕ್ ರನ್ನು ಒಬ್ಬ ಯಶಸ್ವಿ ಷೇರು ಉದ್ಯಮಿ ಬುದ್ದಿವಂತ ಅತ್ಯಂತ ಕಿರಿಯ ವಯಸ್ಸಿನ ಯುವಕ ಇಂಗ್ಲೆಂಡ್ ನ ಚುಕ್ಕಾಣಿ ಹಿಡಿದ ಎಂದು ವಿಶ್ಲೇಷಣೆ ಮಾಡದೇ ಹೆಚ್ಚಿನ ಮಾದ್ಯಮಗಳು ಕಂದು ವರ್ಣಿಯ ನೊಬ್ಬ ಇಂಗ್ಲೆಂಡ್ ಗೆ ಸಾರಥಿಯಾದ ಎಂದು ಮಾತನಾಡಿದವು. ಕೆಲವು ವರ್ಷಗಳ ಹಿಂದೆ ಅಂತರಾಷ್ಟ್ರೀಯ ರಿಯಲಿಟಿ ಷೋ ವೊಂದಕ್ಕೆ ಬಾಲಿವುಡ್ ಚಿತ್ರ ನಟಿಯೊಬ್ಬಳು ಸ್ಪರ್ಧಿಯಾಗಿದ್ದರು. ಆಕೆ ಭಾರತದ ಮಟ್ಟಿಗೆ ಸುಂದರಿ. ಆದರೆ ಆ ರಿಯಲಿಟಿ ಷೋ ನಲ್ಲಿ ಆಕೆಯನ್ನು ಕಂದು ವರ್ಣೆ ಎಂದು ಸಹ ಸ್ಪರ್ಧಿಯೊಬ್ಬರು ಹೀಯಾಳಿಸಿ ಆ ನಟಿ ಮನನೊಂದ ಘಟನೆ ವರದಿಯಾಗಿತ್ತು. ಇಂತಹ ಘಟನೆಗಳು ಅತ್ಯಂತ ಮುಂದು ವರಿದ ನೂರಕ್ಕೆ ನೂರರಷ್ಟು ಶಿಕ್ಷಿತರೇ ಇರುವ ಅತಿ ಶ್ರೀಮಂತ ದೇಶಗಳಲ್ಲಿ ನೆಡೆದ ನೆಡೆಯುತ್ತಿರುವ ಘಟನೆ ಯಾಗಿದೆ.
ಅಂತಹದ್ದರಲ್ಲಿ ಶಿಕ್ಷಣ ಸೇರಿದಂತೆ ಸಮಾಜದ ಎಲ್ಲ ಸ್ತರದಲ್ಲೂ ಅಭಿವೃದ್ಧಿ ಕಾಣುತ್ತಿರುವ ಭಾರತದಂತಹ ಅಭಿವೃದ್ದಿಶೀಲ ದೇಶದಲ್ಲಿ ಇನ್ನೂ ಕೆಲವು ವರ್ಷಗಳಾದರೂ ಈ ಅಸ್ಪ್ರಶ್ಯತೆ ಮೇಲು ಕೀಳು ನಾಶವಾಗಲು ಬೇಕು.
ನಿಧಾನವಾಗಿಯಾದರೂ ಇವೆಲ್ಲ ದೋಷ ಗಳು ನಿವಾರಣೆಯಾಗುತ್ತಿವೆ. ಆದರೆ ಅದಕ್ಕೆ ಈ ಬಗೆಯ ಸಮಾಜಕ್ಕೆ ಹುಳಿ ಹಿಂಡಿ ಒಡೆವವರು, ಒಟ್ಟು ಸಮಾಜದಲ್ಲಿ ಒಂದಾಗದಂತೆ ತಡೆಯೊಡ್ಡುವವರು ಮತ್ತು “ಚುನಾವಣೆ ವ್ಯವಸ್ಥೆ ” ಅಡ್ಡಗಾಲು ಎನ್ನುವುದನ್ನ ಹೊರತು ಪಡಿಸಿದರೆ ಇನ್ನುಳಿದಂತೆ ಸಮಾಜ ಎಲ್ಲರನ್ನೂ ತನ್ನೊಳಗೆ ಒಂದಾಗಿ ತೆಗೆದುಕೊಂಡು “ಮಾನವ ಕುಲವೊಂ ಒಂದೇ ” ಎಂಬ ಕವಿವಾಣಿ ಯಂತಾಗುವ ಹಾದಿಯಲ್ಲಿದೆ.
ಈಗ ಕಾಂಗ್ರೆಸ್, ಬಿಜೆಪಿ ಅಥವಾ ತೃತೀಯ ರಂಗ ಯಾವುದೇ ಪಕ್ಷದ ಸರ್ಕಾರವಿರಲಿ ಪರೋಕ್ಷವಾಗಿ ಬಂಡವಾಳಷಾಹಿಗಳೇ ಅಧಿಕಾರ ಮಾಡುವುದು. ಈ ಬಂಡವಾಳಶಾಹಿ ವ್ಯವಸ್ಥೆ ಓಡುವ ಕುದುರೆಯ ಬಾಲಬಡಿದು ಹಿಡಿದು ಸಮಯ ಸಾದಿಸುತ್ತಾರೆ.
ಅವರಿಗೆ ಯಾರು ಸತ್ತರೆ ಏನು…? ಸಾಮಾಜಿಕ ಸ್ವಾಸ್ಥ್ಯ ಕೆಟ್ಟರೆ ಏನು…? ಪರಸ್ಪರ ಎಲ್ಲರ ನಡುವೆ ಭಯ ಅಭದ್ರತೆ ಯನ್ನು ಹುಟ್ಟು ಹಾಕಿ ಅದೇ ಆಧಾರದ ಮೇಲೆ ಅಧಿಕಾರಕ್ಕೆ ಬಂದು ತಮ್ಮ ಬಂಡವಾಳ ವೃದ್ದಿಸಿಕೊಳ್ತಾರೆ. ಇದಕ್ಕೆ ಸಮಾಜದ ಸ್ವಾಸ್ಥ್ಯ ಬಲಿ ಕೊಟ್ಟು ತಮ್ಮ ಆಸ್ತಿ ವೃದ್ಧಿಸಿಕೊಳ್ತಾರೆ. ಈ ಸ್ವಾಸ್ಥ್ಯ ಹಾನಿ ಯಲ್ಲಿ ಯಾರೋ ,ಯಾವುದೋ ಜಾತಿ ಧರ್ಮದ ಅಮಾಯಕರು ಬಲಿಯಾಗು ತ್ತಾರೆ.
ದಯವಿಟ್ಟು ಪ್ರಾಜ್ಞರು ವಿಚಾರ ವಿಮರ್ಶೆ ಮಾಡಿ ಇಂತಹ ಅಸಂಬದ್ಧ ಪ್ರಲಾಪದ ವಾದಗಳಿಗೆ ಬೆಲೆ ಕೊಡ ಬಾರದು ಎಂಬುದು ವಿನಂತಿ. ಎಲ್ಲೋ ಇಂತಹ ವಾದ ವಿವಾದಗಳಾದಾಗ ಈ ಸಂಘರ್ಷ ಕ್ಕೆ ಸಂಬಂಧವೇ ಇಲ್ಲದ ಬ್ರಾಹ್ಮಣ ಜಾತಿ ಸಮುದಾಯವನ್ನು ರಾಜಕೀಯ ದುರುದ್ದೇಶಕ್ಕಾಗಿ “ಹಿತಾಸಕ್ತಿ” ಗಳು ಅನಗತ್ಯ ವಾಗಿ ಎಳೆತರುವುದು ನಿಲ್ಲಬೇಕು. ಸಮಾನತೆ ಸಾಮರಸ್ಯ ಸಮಾಜದಲ್ಲಿ ಒಡಮೂಡಬೇಕೆಂಬುದು ನಮ್ಮ ಆಶಯ.
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…