Advertisement
MIRROR FOCUS

ಸರಿಗಮಪ ಲಿಟಲ್ ಚಾಂಪ್ಸ್ 2026ರ ವಿಜೇತ ಅಶ್ಮಿತ್‌ಗೆ ಮಂಗಳೂರಿನಲ್ಲಿ ಅಭಿನಂದನೆ – ಪುಟ್ಟ ಕಲಾವಿದನ ಸಾಧನೆಯ ಹಿಂದಿನ ಪಯಣಕ್ಕೆ ಮೆಚ್ಚುಗೆ

Share

ಕೆಲವು ಗೆಲುವುಗಳು ವೇದಿಕೆಯ ಮೇಲೆ ಕಾಣಿಸುತ್ತವೆ.  ಆದರೆ ಆ ಗೆಲುವಿನ ಹಿಂದೆ ನಡೆದಿರುವ ದೀರ್ಘ ಪ್ರಯಾಣ ಮಾತ್ರ ವೇದಿಕೆಯ ಬೆಳಕಿನಿಂದ ಬಹಳ ದೂರ ಇರುತ್ತದೆ.  ಒಬ್ಬ ಬಾಲಕ ಟ್ರೋಫಿ ಎತ್ತಿ ಹಿಡಿಯುವ ಕ್ಷಣವನ್ನು ನಾವು ನೋಡುತ್ತೇವೆ.  ಅವನ ಧ್ವನಿಗೆ ಚಪ್ಪಾಳೆ ತಟ್ಟುತ್ತೇವೆ.  ಅವನ ಹೆಸರನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತೇವೆ. ಖುಷಿ ಪಡುತ್ತೇವೆ.

ಆದರೆ ಆ ಧ್ವನಿಯ ಹಿಂದೆ ವರ್ಷಗಳ ಅಭ್ಯಾಸವಿದೆ.  ಆ ಪ್ರತಿಭೆಯ ಹಿಂದೆ ಒಬ್ಬ ಗುರು ಇದ್ದಾರೆ. ಆ ಕನಸಿನ ಹಿಂದೆ ಒಂದು ಕುಟುಂಬವಿದೆ. ಕುಟುಂಬದ ಸುದೀರ್ಘವಾದ ಶ್ರಮ ಇದೆ. ನಿದ್ರೆಗಳಿಲ್ಲದ ರಾತ್ರಿಗಳು ಇರುತ್ತವೆ. ಆ ಪ್ರತಿಭೆಗೆ ವೇದಿಕೆ ನೀಡಿದ ಒಂದು ಸಂಸ್ಥೆಯೂ ಇರುತ್ತದೆ. ಅಶ್ಮಿತ್ ಎ. ಜೆ. ಅವರ ಗೆಲುವಿನ ಕಥೆಯೂ ಹೀಗೆಯೇ.

ಕರ್ನಾಟಕದ ಜನಪ್ರಿಯ ಸರಿಗಮಪ ಲಿಟಲ್ ಚಾಂಪ್ಸ್ 2026ರ ವಿಜೇತನಾಗಿ ರಾಜ್ಯದ ಗಮನ ಸೆಳೆದಿರುವ ಈ ಪುಟ್ಟ ಕಲಾವಿದನಿಗೆ ಮಂಗಳೂರಿನ “ಶ್ರೀ ಸಂಗೀತ ಪಾಠಶಾಲೆ” ವತಿಯಿಂದ ನಡೆದ ಅಭಿನಂದನಾ ಕಾರ್ಯಕ್ರಮ, ವಾಸ್ತವವಾಗಿ ಒಬ್ಬ ವಿಜೇತನನ್ನು ಸನ್ಮಾನಿಸುವ ಕಾರ್ಯಕ್ರಮಕ್ಕಿಂತಲೂ ಮಿಗಿಲಾಗಿತ್ತು.  ಅದು ಒಬ್ಬ ಪ್ರತಿಭೆಯನ್ನು ಗುರುತಿಸಿದ ಗುರುಗಳಿಗೆ, ಬೆಂಬಲಿಸಿದ ಪೋಷಕರಿಗೆ, ಅವಕಾಶ ನೀಡಿದ ಶಾಲೆಗೆ ಮತ್ತು ಆ ಅವಕಾಶವನ್ನು ಸಾಧನೆಯಾಗಿ ಪರಿವರ್ತಿಸಿದ ಬಾಲಕನಿಗೆ ಸಲ್ಲಿಸಿದ ಗೌರವ.  ಅತ್ಯಂತ ವಿಶೇಷವಾದ ಹಾಗೂ ಮಹತ್ವದ ಅಭಿನಂದನೆ ಅದು.

ಗೆದ್ದ ನಂತರವೂ… “ನಾನು ಕಲಿಯಲು ಬಂದಿದ್ದೇನೆ” :  ಅಶ್ಮಿತ್ ಅವರ ಗೆಲುವಿನಲ್ಲಿ ಸಂಭ್ರಮಿಸಿಕೊಳ್ಳಬೇಕಾದ್ದು ಅವರ ಧ್ವನಿ ಮಾತ್ರವಲ್ಲ, ಅವರ ವಿನಯವನ್ನೂ ಕೂಡಾ ಹೌದು.  ಸರಿಗಮಪ ವೇದಿಕೆಯಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಾಗಲೇ ಅಶ್ಮಿತ್ ಹೇಳಿದ್ದ ಮಾತು, “ನಾನು ಇಲ್ಲಿಗೆ ಕಲಿಯಲು ಬಂದಿದ್ದೇನೆ.”  ಅದು ಕಾರ್ಯಕ್ರಮದ ಆರಂಭದ ಮಾತು.  ಆದರೆ ಇನ್ನಷ್ಟು ಗಮನ ಸೆಳೆಯುವುದು, ಗೆಲುವಿನ ಅಂತಿಮ ಘಟ್ಟದಲ್ಲೂ ಅದೇ ಭಾವನೆ ಅವರಲ್ಲಿದ್ದದ್ದು.  ಟ್ರೋಫಿ, ಪ್ರಶಸ್ತಿ ಮತ್ತು ದೊಡ್ಡ ಮೊತ್ತದ ನಗದು ಬಹುಮಾನ ಕೈ ಸೇರುವ ಕ್ಷಣದಲ್ಲೂ, “ಈ ಕ್ಷಣದಲ್ಲಿ ನಿನ್ನ ಭಾವನೆ ಏನು?” ಎಂಬ ಪ್ರಶ್ನೆಗೆ ಅವರು ಹೇಳಿದ್ದು ಮತ್ತೆ ಅದೇ, “ನಾನು ಇಲ್ಲಿಗೆ ಕಲಿಯಲು ಬಂದಿದ್ದೇನೆ… ತುಂಬಾ ಹಾಡುಗಳನ್ನು ಕಲಿತಿದ್ದೇನೆ.”  ಗೆಲುವಿನ ಕ್ಷಣದಲ್ಲಿ ಗೆದ್ದಿರುವುದನ್ನು ಹೇಳುವುದು ಸಹಜ. ಆದರೆ ಇನ್ನೂ ಕಲಿಯಬೇಕಿದೆ ಎನ್ನುವುದು ದೊಡ್ಡತನ.  ಅಶ್ಮಿತ್ ಅವರಲ್ಲಿರುವ ಈ ಸರಳತೆ, ಅವರ ಸಂಗೀತದಷ್ಟೇ ಗಮನ ಸೆಳೆಯುವ ಗುಣ.

ನಾಲ್ಕನೇ ವಯಸ್ಸಿನಲ್ಲಿ ಆರಂಭವಾದ ಪಯಣ : ಇಂದು ಲಕ್ಷಾಂತರ ಜನರ ಗಮನ ಸೆಳೆದಿರುವ ಅಶ್ಮಿತ್ ಅವರ ಸಂಗೀತ ಪಯಣ ನಿನ್ನೆಮೊನ್ನೆ ಆರಂಭವಾದದ್ದಲ್ಲ.  ಅವರು ಕೇವಲ ನಾಲ್ಕನೇ ವಯಸ್ಸಿನಲ್ಲೇ ಸಂಗೀತ ಕಲಿಯಲು ಆರಂಭಿಸಿದ್ದರು. ಎಳೆ ವಯಸ್ಸಿನಲ್ಲಿಯೇ ವೇದಿಕೆ ಏರಿ ಕಾರ್ಯಕ್ರಮ ನೀಡುವಷ್ಟು ಆಸಕ್ತಿ ಮತ್ತು ನಿರಂತರ ಅಭ್ಯಾಸ ಅವರ ಬದುಕಿನ ಭಾಗವಾಗಿತ್ತು. ಅವರ ಪೋಷಕರು ಸಂಗೀತ ಶಾಲೆಗೆ ಕರೆದುಕೊಂಡು ಹೋಗುವುದರಿಂದಲೇ ಸಂಗೀತ ಪಯಣ ಆರಂಭವಾಗಿದೆ.

ಇಲ್ಲಿ ಒಂದು ಮುಖ್ಯ ಸಂಗತಿ ಗಮನಿಸಬೇಕು. ಪ್ರತಿಭೆ ಇದ್ದರೆ ಮಾತ್ರ ಸಾಧನೆ ಸಾಧ್ಯವಿಲ್ಲ. ಪ್ರತಿಭೆಯನ್ನು ಗುರುತಿಸಬೇಕು.  ಅದಕ್ಕೆ ಸರಿಯಾದ ತರಬೇತಿ ಸಿಗಬೇಕು.  ನಿರಂತರ ಅಭ್ಯಾಸ ಇರಬೇಕು.  ತಪ್ಪುಗಳನ್ನು ತಿದ್ದಿಕೊಳ್ಳುವ ಮನಸ್ಸಿರಬೇಕು. ಮತ್ತೆ ಮತ್ತೆ ವೇದಿಕೆ ಏರುವ ಅವಕಾಶ ದೊರೆಯಬೇಕು. ಅಶ್ಮಿತ್ ಅವರ ಪಯಣದಲ್ಲಿ ಈ ಎಲ್ಲವೂ ಒಂದಕ್ಕೊಂದು ಸೇರಿಕೊಂಡಿವೆ.

ಒಬ್ಬ ಗುರು ಪ್ರತಿಭೆಯನ್ನು ಹೇಗೆ ಸಾಧನೆಯಾಗಿ ರೂಪಿಸುತ್ತಾರೆ? :  ಅಶ್ಮಿತ್ ಅವರ ಸಂಗೀತ ಪಯಣದ ಹಿಂದೆ ಅವರ ಗುರು ಸಂಧ್ಯಾ ಸತ್ಯನಾರಾಯಣ ಅವರ ಮಾರ್ಗದರ್ಶನ ಅತ್ಯಂತ ಮಹತ್ವದ್ದು. ಸಂಗೀತವೆಂದರೆ ಕೇವಲ ಚೆನ್ನಾಗಿ ಹಾಡುವುದು ಅಲ್ಲ. ಶ್ರುತಿ, ಲಯ, ಧ್ವನಿ ನಿಯಂತ್ರಣ, ರಾಗದ ಸ್ವಭಾವ, ಸಾಹಿತ್ಯದ ಭಾವ, ಉಚ್ಚಾರಣೆ, ವೇದಿಕೆಯ ಆತ್ಮವಿಶ್ವಾಸ  ಇವೆಲ್ಲವನ್ನೂ ನಿಧಾನವಾಗಿ ಕಲಿಯಬೇಕಾಗುತ್ತದೆ.  ಒಂದು ಮಗುವಿನ ಸಹಜ ಪ್ರತಿಭೆಯನ್ನು ಗುರುತಿಸಿ, ಅದಕ್ಕೆ ಶಾಸ್ತ್ರೀಯ ಶಿಸ್ತು ನೀಡುವುದು ಗುರುಗಳ ಕೆಲಸ.  ಅಶ್ಮಿತ್ ಅವರ ಸಾಧನೆಯನ್ನು ನೋಡಿದಾಗ, ಅವರ ಧ್ವನಿಯ ಹಿಂದೆ ಕೇಳಿಸುವುದು ಕೇವಲ ಒಂದು ಬಾಲಕನ ಪರಿಶ್ರಮವಲ್ಲ; ಅದರ ಹಿಂದೆ ವರ್ಷಗಳ ಗುರು-ಶಿಷ್ಯ ಸಂಬಂಧದ ಶಿಸ್ತು ಕೂಡ ಇದೆ.  ಹೀಗಾಗಿ ಅಶ್ಮಿತ್ ಗೆದ್ದಾಗ, ಅವರ ಗುರುಗಳೂ ಗೆದ್ದಿದ್ದಾರೆ.  ಮೊನ್ನೆಯಷ್ಟೇ ಅಭಿನಂದನಾ ಕಾರ್ಯಕ್ರಮಕ್ಕೆ ಬಂದಾಗಲೂ ಮೊದಲು ನಮಿಸಿದ್ದೇ ಗುರುಗಳಿಗೆ. ಅದು ಇನ್ನೊಂದು ಬೆಳವಣಿಗೆಯ ಸಂಕೇತ.

ಪೋಷಕರು ಕನಸನ್ನು ಕಂಡರು; ಮಗ ಅದಕ್ಕೆ ಧ್ವನಿ ಕೊಟ್ಟ :  ಯಾವುದೇ ಮಗುವಿನ ಪ್ರತಿಭೆಯ ಹಿಂದೆ ಕುಟುಂಬದ ಪಾತ್ರವನ್ನು ಕಡೆಗಣಿಸಲು ಸಾಧ್ಯವಿಲ್ಲ. ಅತ್ಯಂತ ಸಾಮಾನ್ಯ ಕುಟುಂಬದಿಂದ ಬಂದ ಅಶ್ಮಿತ್.‌ ಅವರ ಕುಂಟುಬಕ್ಕೂ ದೊಡ್ಡ ಹಿನ್ನೆಲೆಯೂ ಇಲ್ಲ. ಅಶ್ಮಿತ್ ಅವರ ಪೋಷಕರಾದ ಜಯರಾಮ್ ಎ. ಮತ್ತು ರೇವತಿ ಅವರು ಮಗನ ಪ್ರತಿಭೆಯನ್ನು ಗುರುತಿಸಿ, ಅದಕ್ಕೆ ಬೆಂಬಲ ನೀಡಿದವರು.  ಮಕ್ಕಳ ಪ್ರತಿಭೆಯನ್ನು ಗುರುತಿಸುವುದು ಒಂದು ಹಂತ.  ಅದನ್ನು ಬೆಳೆಸಲು ಸಮಯ, ಅವಕಾಶ ಮತ್ತು ನಿರಂತರ ಪ್ರೋತ್ಸಾಹ ನೀಡುವುದು ಇನ್ನೊಂದು ದೊಡ್ಡ ಜವಾಬ್ದಾರಿ.

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳನ್ನು ಅಂಕ, ರ‍್ಯಾಂಕ್ ಮತ್ತು ಫಲಿತಾಂಶಗಳ ಮೂಲಕವೇ ಅಳೆಯುವ ಪ್ರವೃತ್ತಿ ಹೆಚ್ಚಾಗಿದೆ.  ಆದರೆ ಪ್ರತಿಯೊಬ್ಬ ಮಗುವಿನಲ್ಲೂ ಒಂದು ಪ್ರಶ್ನೆ ಅಡಗಿದೆ “ನನಗೆ ನಿಜವಾಗಿ ಏನು ಮಾಡಲು ಇಷ್ಟ?” ಆ ಪ್ರಶ್ನೆಗೆ ಉತ್ತರ ಹುಡುಕಲು ಅವಕಾಶ ನೀಡಿದಾಗಲೇ ಪ್ರತಿಭೆ ಅರಳುತ್ತದೆ. ಅಶ್ಮಿತ್ ಅವರ ಕಥೆ, ಈ ವಿಚಾರವನ್ನು ಮತ್ತೊಮ್ಮೆ ನೆನಪಿಸುತ್ತದೆ.

ಶ್ರೀ ಸಂಗೀತ ಪಾಠಶಾಲೆಗೆ ಇದು ಕೇವಲ ಹೆಮ್ಮೆಯ ಕ್ಷಣವಲ್ಲ :  ಇಂದು ಅಶ್ಮಿತ್ ಅವರನ್ನು ರಾಜ್ಯ ಗುರುತಿಸುತ್ತಿದೆ. ಆದರೆ ಅವರ ಪ್ರತಿಭೆಯ ಆರಂಭಿಕ ಹೆಜ್ಜೆಗಳನ್ನು ನೋಡಿದವರು, ಬೆಳೆಸಿದವರು ಮತ್ತು ವೇದಿಕೆಗೆ ಸಿದ್ಧಗೊಳಿಸಿದವರು ಅವರ ಶ್ರೀ ಸಂಗೀತ ಪಾಠಶಾಲೆ ಹಾಗೂ ಅಲ್ಲಿನ ಗುರುಗಳು.  ಹೀಗಾಗಿ ಅಶ್ಮಿತ್ ಅವರ ಗೆಲುವು ಆ ಶಾಲೆಯ ಪಾಲಿಗೂ ಒಂದು ದೊಡ್ಡ ಗೌರವ. ಮಂಗಳೂರಿನ ಶಾರದಾ ವಿದ್ಯಾಲಯದ ಧ್ಯಾನ ಮಂದಿರದ ಸಭಾಂಗಣದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಪೋಷಕರು, ಗುರುಗಳು ಮತ್ತು ಕಲಾಸಕ್ತರು ಒಂದಾಗಿ ಸೇರಿದ್ದು ಇದೇ ಕಾರಣಕ್ಕೆ ವಿಶೇಷವಾಗಿತ್ತು. ಇದು ಕೇವಲ “ನಮ್ಮ ವಿದ್ಯಾರ್ಥಿ ಗೆದ್ದಿದ್ದಾನೆ” ಎನ್ನುವ ಸಂಭ್ರಮವಾಗಿರಲಿಲ್ಲ. “ನಮ್ಮ ಕಣ್ಣೆದುರೇ ಬೆಳೆದ ಪ್ರತಿಭೆ ಇಂದು ರಾಜ್ಯದ ವೇದಿಕೆಯಲ್ಲಿ ಬೆಳಗಿದೆ” ಎನ್ನುವ ಹೆಮ್ಮೆಯ ಕ್ಷಣವಾಗಿತ್ತು. ಅಲ್ಲಿ ಬಂದಿರುವ ಎಲ್ಲಾ ಪೋಷಕರಿಗೂ , “ನಮ್ಮ ಸಂಗೀತ ಶಾಲೆಯ” ವಿದ್ಯಾರ್ಥಿ ಎನ್ನುವ ಭಾವ ಕಂಡಿತ್ತು.

ಹುಟ್ಟುಹಬ್ಬದ ಸಂಭ್ರಮದ ನಡುವೆ ಪುಟ್ಟ ವಿಜೇತನಿಗೆ ಆಶೀರ್ವಾದ : ಕಾರ್ಯಕ್ರಮಕ್ಕೆ ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಡಾ. ಎಂ. ಬಿ. ಪುರಾಣಿಕ್ ಅವರ ಉಪಸ್ಥಿತಿಯೂ ವಿಶೇಷ ಅರ್ಥ ನೀಡಿತು.  80 ವರ್ಷಗಳನ್ನು ಪೂರೈಸಿ 81ನೇ ವರ್ಷಕ್ಕೆ ಕಾಲಿಟ್ಟ ಅವರ ಜನ್ಮದಿನದಂದೇ ಅಶ್ಮಿತ್ ಅವರಿಗೆ ಅಭಿನಂದನೆ ಹೇಳಿದ್ದು ಇನ್ನೊಂದು ವಿಶೇಷತೆ. ಒಂದು ಕಡೆ ದಶಕಗಳ ಅನುಭವದ ಹಿರಿಯರು. ಇನ್ನೊಂದು ಕಡೆ ಭವಿಷ್ಯದ ದಶಕಗಳನ್ನು ಎದುರು ನೋಡುತ್ತಿರುವ ಪುಟ್ಟ ಪ್ರತಿಭೆ. ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಆಶೀರ್ವಾದದಂತೆ ಕಂಡ ಆ ಕ್ಷಣ ಕಾರ್ಯಕ್ರಮಕ್ಕೆ ಮತ್ತೊಂದು ಅರ್ಥ ನೀಡಿತು.  ಶಾರದಾ ವಿದ್ಯಾಸಂಸ್ಥೆಗಳ ನಿರ್ದೇಶಕರಾದ ಸಮೀರ್ ಪುರಾಣಿಕ್ ಹಾಗೂ ಶಾರದಾ ವಿದ್ಯಾಲಯದ ಪ್ರಾಂಶುಪಾಲರಾದ ದಯಾನಂದ ಕಟೀಲ್ ಅವರ ಉಪಸ್ಥಿತಿಯೂ ಕಾರ್ಯಕ್ರಮಕ್ಕೆ ಮೆರುಗು ನೀಡಿತು.

“ಅಶ್ಮಿತ್‌ನಿಂದ ನಮಗೆ ಹೆಮ್ಮೆ”  ಒಂದು ಮಾತಿನಲ್ಲಿದ್ದ ಮಂಗಳೂರಿನ ಆತ್ಮೀಯತೆ :  ಅಶ್ಮಿತ್ ಅವರ ಪಯಣಕ್ಕೆ ಮಂಗಳೂರಿನೊಂದಿಗಿನ ಮತ್ತೊಂದು ವಿಶೇಷ ಸಂಬಂಧವಿದೆ.  ಅಶ್ಮಿತ್ ಮೊದಲ ಬಾರಿಗೆ ಟಿವಿ ಪರದೆಯಲ್ಲಿ ಕಾಣಿಸಿಕೊಂಡದ್ದು “ನಮ್ಮ ಕುಡ್ಲ ವಾಹಿನಿ” ಯ ಮೂಲಕ ಎಂಬುದನ್ನು ನೆನಪಿಸಿದ ಸಂಸ್ಥೆಯ ನಿರ್ದೇಶಕ ಲೀಲಾಕ್ಷ ಬಿ. ಕರ್ಕೇರ ಅವರ ಮಾತುಗಳು, ಸ್ಥಳೀಯ ಪ್ರತಿಭೆಯನ್ನು ಬೆಳೆಸುವ ಮಾಧ್ಯಮದ ಪಾತ್ರವನ್ನೂ ನೆನಪಿಸಿತು.  “ಅಶ್ಮಿತ್‌ನಿಂದ ನಮಗೆ ಹೆಮ್ಮೆ” ಎಂಬ ಸರಳ ಮಾತಿನಲ್ಲಿ ಒಂದು ಊರಿನ ಆತ್ಮೀಯತೆ ಇತ್ತು.  ಒಬ್ಬ ಪ್ರತಿಭೆ ದೊಡ್ಡ ವೇದಿಕೆಗೆ ಹೋದಾಗ, ಅವನ ಹಿಂದೆ ನಿಂತ ಊರು ಕೂಡ ಹೆಮ್ಮೆಪಡುತ್ತದೆ.  ಅಶ್ಮಿತ್ ಅವರ ವಿಷಯದಲ್ಲಿ ಮಂಗಳೂರಿನ ಹೆಮ್ಮೆಯೂ ಹಾಗೆಯೇ.

ಮುಂದಿನ ಗೆಲುವು ಇನ್ನೂ ದೊಡ್ಡದು : ಅಶ್ಮಿತ್ ಈಗ ಗೆದ್ದಿರುವುದು ಅಂತಿಮ ಗೆಲುವಲ್ಲ. ಇದು ಅವರ ಸಂಗೀತ ಪಯಣದ ಒಂದು ದೊಡ್ಡ ಮೈಲಿಗಲ್ಲು ಮಾತ್ರ.  ಇಂದಿನಿಂದ ಅವರಿಗೆ ಸಿಗುವುದು ಚಪ್ಪಾಳೆ ಮಾತ್ರವಲ್ಲ; ನಿರೀಕ್ಷೆಯೂ ಹೌದು.  ಜನಪ್ರಿಯತೆ ಹೆಚ್ಚಾದಂತೆ ಅಭ್ಯಾಸ ಕಡಿಮೆಯಾಗಬಾರದು. ಪ್ರಶಸ್ತಿಗಳು ಹೆಚ್ಚಾದಂತೆ ವಿನಯ ಕಡಿಮೆಯಾಗಬಾರದು.  ವೇದಿಕೆಗಳು ಹೆಚ್ಚಾದಂತೆ ಕಲಿಯುವ ಹಂಬಲ ಕಡಿಮೆಯಾಗಬಾರದು. ಶಹಭಾಸ್ ಸಿಕ್ಕಾಗ ನಿಲ್ಲಬಾರದು; ಇನ್ನೊಂದು ಹೆಜ್ಜೆ ಇಡಬೇಕು.  ಸಂಗೀತಕ್ಕೆ ಅಂತ್ಯವಿಲ್ಲ.  ಕಲಿಯಲು ಅಂತ್ಯವಿಲ್ಲ. ಹೀಗಾಗಿ ಅಶ್ಮಿತ್ ಅವರ ಮುಂದಿನ ದೊಡ್ಡ ಪರೀಕ್ಷೆ ಮತ್ತೊಂದು ಸ್ಪರ್ಧೆಯನ್ನು ಗೆಲ್ಲುವುದಲ್ಲ. ಇಂದು ರಾಜ್ಯ ಗುರುತಿಸಿರುವ ಪ್ರತಿಭೆಯನ್ನು ನಾಳೆ ಒಬ್ಬ ಸಂಪೂರ್ಣ ಕಲಾವಿದನನ್ನಾಗಿ ರೂಪಿಸಿಕೊಳ್ಳುವುದು. ಅದು ಸಾಧ್ಯವಾಗಲಿ, ಸಮಾಜವೂ ಅದಕ್ಕೆ ಸಹಕರಿಸಲಿ. ಈ ಶ್ರಮದ ಹಿಂದೆ ಪೋಷಕರ ತ್ಯಾಗವಿದೆ. ಗುರುವಿನ ಪರಿಶ್ರಮವಿದೆ. ಶಾಲೆಯ ನಂಬಿಕೆಯಿದೆ. ಅವಕಾಶ ನೀಡಿದವರ ಪ್ರೋತ್ಸಾಹವಿದೆ. ಮತ್ತು ಎಲ್ಲಕ್ಕಿಂತ ಮುಖ್ಯವಾಗಿ, ಕಲಿಯುತ್ತಲೇ ಇರಬೇಕು ಎನ್ನುವ ಬಾಲಕನ ಹಂಬಲವಿದೆ ಎನ್ನುವುದು ಅಭಿನಂದನಾ ಸಮಾರಂಭದ ಸಂದೇಶವಾಯಿತು.

ಕಾರ್ಯಕ್ರಮದಲ್ಲಿ ಶ್ರೀ ಸಂಗೀತ ಪಾಠಶಾಲೆಯ ಕಾರ್ಯದರ್ಶಿ ಸತ್ಯನಾರಾಯಣ ಭಟ್ರಕೋಡಿ, ಸಂಗೀತ ಗುರುಗಳಾದ ಸಂಧ್ಯಾ ಸತ್ಯನಾರಾಯಣ ಇದ್ದರು.

ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಫಾಲೋಮಾಡಲು ಇಲ್ಲಿ ಕ್ಲಿಕ್‌ ಮಾಡಿ

SaregamaPa Little Champs 2026 winner Ashmith A.J. was felicitated by Shree Sangeetha Paathashala(Shree Music School) in Mangaluru. The event highlighted not just his victory but also the contribution of his music teacher Sandhya Sathyanarayana, parents Jayaram A. and Revathi, and the institution that nurtured his talent from a young age. Ashmith’s humility and his continued desire to learn, even after winning the competition, were among the highlights of the event.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 14-09-2026 | ಸೆ.18ರ ಬಳಿಕ ಮಳೆ ಚಿತ್ರಣ ಬದಲಾಗಬಹುದೇ?

ಕರ್ನಾಟಕದಲ್ಲಿ ಸದ್ಯ ಬಿಸಿಲು ಮುಂದುವರಿದಿದ್ದರೂ ಸೆ.18ರಿಂದ ಮಳೆಯ ವ್ಯಾಪ್ತಿ ಹೆಚ್ಚಾಗುವ ಸೂಚನೆಗಳಿವೆ. ಸೆ.19ರಿಂದ…

3 hours ago

ನನ್ನ ಚಿತ್ರ-ನನ್ನ ಖುಷಿ | ಬಣ್ಣಗಳ ಮೂಲಕ ಅರಳಿದ ಗಣೇಶ

ಬಣ್ಣಗಳ ಮೂಲಕ ಅರಳಿದ ಗಣೇಶ - ಕುಕ್ಕೆ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ 8…

4 hours ago

ನನ್ನ ಚಿತ್ರ-ನನ್ನ ಖುಷಿ | ಬಣ್ಣಗಳ ಲೋಕದಲ್ಲಿ ಪುಟ್ಟ ಮನಸ್ಸಿನ ಖುಷಿ

ನನ್ನ ಚಿತ್ರ – ನನ್ನ ಖುಷಿ | ಗಣೇಶನನ್ನು ಬಣ್ಣಗಳಲ್ಲಿ ಅರಳಿಸಿದ ಪುಟಾಣಿ…

4 hours ago

ವಿಘ್ನಗಳ ಆಚೆ ಕಾಣುವ ಗಣೇಶತತ್ತ್ವ

ಗಣೇಶ ಚತುರ್ಥಿಯನ್ನು ಕೇವಲ ಧಾರ್ಮಿಕ ಆಚರಣೆಯಾಗಿ ನೋಡುವುದಕ್ಕಿಂತ, ಗಣೇಶನ ರೂಪಲಕ್ಷಣಗಳಲ್ಲಿರುವ ಜೀವನದ ಸಂದೇಶಗಳನ್ನು…

7 hours ago

ಶಿರಾಡಿ ಘಾಟ್‌ನಲ್ಲಿ ಸೋಮವಾರ ಟ್ರಾಫಿಕ್‌ ಸಂಕಷ್ಟದ ಸಾಧ್ಯತೆ – ಮುಂಜಾಗ್ರತಾ ಕ್ರಮ ಅಗತ್ಯ

ಮೂರು ದಿನಗಳ ರಜೆ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಮಧ್ಯಾಹ್ನದ ಬಳಿಕ ಶಿರಾಡಿ ಘಾಟ್‌ನಲ್ಲಿ…

18 hours ago

ಹವಾಮಾನ ವರದಿ |13-09-2026 | ಕರ್ನಾಟಕದಲ್ಲಿ ಮಳೆ ಮತ್ತೆ ಹಂತ ಹಂತವಾಗಿ ಚುರುಕಾಗಬಹುದೇ?

ಕರ್ನಾಟಕದಲ್ಲಿ ಸದ್ಯ ಮಳೆ ಕಡಿಮೆಯಾಗಿದ್ದು, ಬಿಸಿಲು ಹೆಚ್ಚಾಗಿರುವ ನಡುವೆಯೇ ಸೆ.14ರಿಂದ ದಕ್ಷಿಣ ಒಳನಾಡಿನಲ್ಲಿ…

1 day ago