ಮಾನವ ಸಮಾಜದಲ್ಲಿ ಹಣವು ಆವಶ್ಯಕತೆಯ ಆಧಾರಶಿಲೆ. “ಅನ್ನಂ ನ ನಿತ್ಯಂ, ಧನಂ ನ ನಿತ್ಯಂ, ಧರ್ಮೋ ನಿತ್ಯಃ” ಅನ್ನವಷ್ಟೇ ಅಲ್ಲ, ಹಣವೂ ಶಾಶ್ವತವಲ್ಲ; ಆದರೆ ಧರ್ಮವು ಮಾತ್ರ ಶಾಶ್ವತ ಎಂಬ ಉಪನಿಷತ್ ವಾಕ್ಯವೇ ಈ ಚರ್ಚೆಗೆ ಬೆಳಕು ಚೆಲ್ಲುತ್ತದೆ. ಅನ್ನ ,ವಸ್ತ್ರ ,ವಾಸಸ್ಥಾನ,ಶಿಕ್ಷಣ,ಆರೋಗ್ಯ ಈ ಪಂಚ ಅವಶ್ಯಕತೆಗಳನ್ನು ಪೂರೈಸಲು ಹಣ ಅವಶ್ಯ. ಆದರೂ ಹಣವೇ ಜೀವನದ ಪರಮ ಗುರಿ ಅಲ್ಲ. ಹಣವನ್ನು ಸಾಧನವೆಂದು ಕಾಣಬೇಕು; ಗುರಿಯೆಂದು ಅಲ್ಲ.
ಧನವೇ ಬಲವೆಂಬ ಭ್ರಮೆ: “ಧನಮೂಲಂ ಇದಂ ಜಗತ್” ಎಂಬ ನುಡಿಯನ್ನು ಸಾಮಾನ್ಯರು ತಕ್ಷಣ ಒಪ್ಪಿಕೊಳ್ಳುತ್ತಾರೆ. ಆದರೆ ವಾಸ್ತವದಲ್ಲಿ ಧನವು ಕೇವಲ ಬಾಹ್ಯ ಬಲ. ನಿಜವಾದ ಬಲವೆಂದರೆ ಧರ್ಮ, ಜ್ಞಾನ, ನೈತಿಕತೆ.
ನಮ್ಮ ಪುರಾಣಗಳನ್ನು ನೋಡುವುದಾದರೆ ಮಹಾಭಾರತದಲ್ಲಿ ದುರ್ಯೋಧನನ ಬಳಿ ಅಪಾರ ಸಂಪತ್ತು, ಸೈನ್ಯ, ಅಧಿಕಾರವಿತ್ತು. ಆದರೆ ಅವನು ನೈತಿಕ ಶಕ್ತಿಯನ್ನು ಕಳೆದುಕೊಂಡಿದ್ದರಿಂದ ಪಾಂಡವರ ಎದುರು ಸೋಲನುಭವಿಸಲೇಬೇಕಾಯಿತು.
ರಾವಣನ ಅಷ್ಟಮಹಾಸಂಪತ್ತು ಮತ್ತು ಅವನ ಧಾಷ್ಟ್ಯದಿಂದ ಲೋಕಭಯ ಹುಟ್ಟಿಸಿದರೂ, ರಾಮನ ಧರ್ಮಶಕ್ತಿಯ ಮುಂದೆ ಮಣ್ಣು ಮುಕ್ಕಿತು.
ಹೀಗಾಗಿ ಧನವು ಬಲವಲ್ಲ; ಧರ್ಮವೇ ಶಾಶ್ವತ ಬಲ.
ಸಮಾಜದಲ್ಲಿ ಬಹುಪಾಲು ಜನರು ಐಶ್ವರ್ಯವಂತರಿಗೆ ಗೌರವ ನೀಡುತ್ತಾರೆ. ಅದನ್ನು “ಗೌರವ”ವೆಂದು ಭ್ರಮಿಸುತ್ತಾರೆ. ಆದರೆ ಅದು ಕೇವಲ ಬಾಹ್ಯ ಶರಣಾಗತಿ. ನಿಜವಾದ ಗೌರವ ಸಿಗುವುದು ಗುಣ, ಸೇವಾಭಾವ, ನೈತಿಕತೆಗಳಿಂದಲೇ ಎಂಬುದನ್ನು ತಿಳಿದುಕೊಳ್ಳಬೇಕಿದೆ.
ಬಂಗಾರದ ಅರಮನೆ ಹೊಂದಿದ ರಾಜರು ಮರೆಯಾದರೂ, ಬಟ್ಟಲಿನಲ್ಲಿ ಊಟ ಮಾಡಿದ ಸುಧಾಮನನ್ನು ಇಂದಿಗೂ ಸ್ಮರಿಸಲಾಗುತ್ತಿದೆ.
ಬಡತನದಲ್ಲೇ ಬದುಕಿದ ಸಂತ–ಕವಿಗಳು ಇಂದಿಗೂ ಜನಮನದಲ್ಲಿ ಜೀವಂತ.ಅಂತೆಯೇ, ಗೌರವವನ್ನು ಹಣದಿಂದ ಖರೀದಿಸಬಹುದು; ಆದರೆ ಶಾಶ್ವತ ಗೌರವವನ್ನು ಕೇವಲ ಗುಣವೇ ಕೊಡುತ್ತದೆ .
ಹಣವೆಂಬುದು ಸಂಬಂಧಗಳ ಕೆಡಿಸುವ ಶಕ್ತಿ : ಹಣವು ಸಂಬಂಧಗಳನ್ನು ಹಾಳು ಮಾಡುತ್ತದೆ. ಎಷ್ಟೋ ದೃಷ್ಟಾ೦ತಗಳಲ್ಲಿ ಸಹೋದರರು ಜಾಗದ ಹಂಚಿಕೆಯಲ್ಲಿ ಪರಸ್ಪರ ವೈರಿ ಆಗಿರುವ ಉದಾಹರಣೆಗಳು ಅಸಂಖ್ಯಾತ. ಸ್ನೇಹಿತರು ಸಾಲ–ಕಡಗಳ ವ್ಯವಹಾರದಲ್ಲಿ ದೂರವಾದುದನ್ನು ಪ್ರತಿಯೊಬ್ಬರೂ ಕಂಡಿದ್ದಾರೆ.ಅದಕ್ಕೆ ಕಾರಣವೇನೆಂದರೆ “ಯತ್ರ ಲಾಭಃ ತತ್ರ ಕಲಹಃ” ಲಾಭ ಇರುವಲ್ಲಿ ಕಲಹವೂ ಹುಟ್ಟುತ್ತದೆ.ಹೀಗಾಗಿ ಹಣವನ್ನು ಸಂಬಂಧಗಳ ಮಧ್ಯೆ ತರಬಾರದು; ತಂದರೆ ಅದು ಬಾಂಧವ್ಯವನ್ನೇ ಭಸ್ಮಮಾಡುತ್ತದೆ.
ಜೀವನದಲ್ಲಿ ಬೇಕಾದ ಜಾಗರೂಕತೆ: ಹಣದ ಬಳಕೆಯನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಜೀವನ ಶ್ರೀಮಂತ. ಇಲ್ಲದಿದ್ದರೆ ಅದು ದುಃಖದ ಮೂಲ.
ಹಣವು ಸಾಧನ, ಗುರಿ ಅಲ್ಲ. ಗುರಿಯನ್ನೇ ಹಣವೆಂದು ಭಾವಿಸಿದರೆ ಜೀವನದ ತೂಕಡಿಕೆ ತಪ್ಪದು.ಹಣವನ್ನು ಗುರಿ ಮಾಡಿದವನು ಎಷ್ಟೇ ಸಂಪಾದಿಸಿದರೂ “ಇನ್ನೂ ಸ್ವಲ್ಪ” ಬೇಕೆಂಬ ಹಸಿವು ಕಡಿಮೆಯಾಗುವುದಿಲ್ಲ.
ಜೀವನದಲ್ಲಿ ಯಾವತ್ತ್ತು ನೈತಿಕ ಸಂಪಾದನೆ ಇರಬೇಕು . ದುಡಿಯದೆ ಬಂದ ಹಣ, ಅಕ್ರಮದಲ್ಲಿ ಬಂದ ಸಂಪತ್ತು ನಾಶವಾಗುವುದು ಖಚಿತ. “ಅಧರ್ಮೇಣ ಜಯತೇ ಧನಂ, ತತ್ ತಕ್ಷಣಂ ನಶ್ಯತಿ” – ಧರ್ಮವಿಲ್ಲದೆ ಬಂದ ಧನ ತಕ್ಷಣವೇ ನಾಶವಾಗುತ್ತದೆ. ಹಣ ಹಂಚುವಲ್ಲಿ ನ್ಯಾಯ, ಪಾರದರ್ಶಕತೆ, ಸಹಾನುಭೂತಿ ಇರಬೇಕು. ಹಣಕ್ಕಾಗಿ ಮೌಲ್ಯ, ಆರೋಗ್ಯ, ಕುಟುಂಬವನ್ನು ಬಲಿಕೊಡುವುದು ಸ್ವವಿನಾಶವೇ.
ಆದುದರಿಂದ ನಾವು ಗಮನಿಸಬೇಕಾದ್ದು ,ಹಣದಿಂದ ಆರಾಮ ಸಿಗಬಹುದು, ಆದರೆ ಶಾಂತಿ ಸಿಗುವುದಿಲ್ಲ.ಹಣದಿಂದ ಐಶ್ವರ್ಯಬರಬಹುದು , ಆದರೆ ನೈತಿಕತೆ ಬರುವುದಿಲ್ಲ..ಹಣದಿಂದ ಒಡವೆ ಸಿಗಬಹುದು, ಆದರೆ ಒಲವು ಸಿಗುವುದಿಲ್ಲ.
ಹಣವು ಬದುಕಿನ ಅವಿಭಾಜ್ಯ ಅಂಗ, ಆದರೆ ಅದು ಆಧಿಪತ್ಯ ಬಲ ಅಲ್ಲ. ನಿಜವಾದ ಬಲವೆಂದರೆ ಮೌಲ್ಯಮಯ ಜೀವನ, ಸ್ವಭಾವದ ಶ್ರೇಷ್ಠತೆ ಮತ್ತು ಸಮಾಜಹಿತದ ಮನೋಭಾವ.
“ಧನಮೂಲಂ ನ ಜಗತ್; ಧರ್ಮಮೂಲಂ ಇಹ ಜಗತ್” ಹಣವಿಲ್ಲದೆ ಬದುಕು ಅಸಾಧ್ಯ, ಆದರೆ ಧರ್ಮವಿಲ್ಲದೆ ಬದುಕು ಅರ್ಥಶೂನ್ಯ. ಎಂಬ ಸಂದೇಶವೇ ಮಾನವ ಸಮಾಜಕ್ಕೆ ದಿಕ್ಕು.


