ಅಷ್ಟಮಿ ಮುಗಿಯಿತು. ಕೃಷ್ಣನಿಗೆ ವಿದಾಯ ಹೇಳಿದೆವು! ನಮ್ಮ ಬದುಕೇ ಹಾಗೆ. ಎಲ್ಲದಕ್ಕೂ, ಎಲ್ಲದರಲ್ಲೂ ವಿದಾಯ. ವಿದಾಯಗಳಿಂದ ಹೆಣೆಯಲ್ಪಟ್ಟ ಬದುಕು. ವಿದಾಯದ ಬಳಿಕ ಸ್ವಾಗತ. ಕೃಷ್ಣನ ಬದುಕಿನಲ್ಲಿ ವಿದಾಯ ಮತ್ತು ಸ್ವಾಗತ ಎರಡಕ್ಕೂ ಸಮಭಾವ, ಸಮಚಿತ್ತ. ಹಾಗಾಗಿ ಆತ ಜಗದ್ವಾಪಿ. ಅವನಿಗೆ ಗೊತ್ತಿತ್ತು – ಯಾವ ಮುಖದಿಂದ ವಿದಾಯ ಉಸುರಿದ್ದೇವೆಯೋ, ಅದೇ ಮುಖ ಸ್ವಾಗತಕ್ಕೂ ಸಜ್ಜಾಗಬೇಕು.
ಬದುಕಿನ ಕಳೆಯನ್ನು ಕಳೆದು, ಧರ್ಮವನ್ನು ಕೈಗೆತ್ತಿಕೊಂಡ. ಮಾನಸಿಕ ವಿಕಾರಕ್ಕೆ ವಿದಾಯ ಹೇಳಿದ. ಹೊಸದಾದ ಬೌದ್ಧಿಕ ವಿಚಾರಗಳನ್ನು ಸ್ವಾಗತ ಮಾಡುತ್ತಾ ಬದುಕಿದ. ಬದುಕಿನ ಈ ದಾರಿ ಇದೆಯಲ್ಲಾ, ನಿಜಕ್ಕೂ ವಿಶ್ವಕೋಶ. ನಮ್ಮ ಬದುಕೇ ಅರ್ಥವಾಗಿಲ್ಲ, ಅರ್ಥವಾಗುತ್ತಿಲ್ಲ. ಅರ್ಥಮಾಡಿಕೊಳ್ಳುವ ಪುರುಸೊತ್ತು ಇಲ್ಲವೇ ಇಲ್ಲ. ಹೀಗಿರುತ್ತಾ ಕೃಷ್ಣನ ಬದುಕು ಹೇಗೆ ಅರ್ಥವಾಗುತ್ತದೆ? ನಮ್ಮೊಳಗೆ ಕೃಷ್ಣನನ್ನು ಕಾಣಬೇಕು.
ಬಾಲ್ಯದಲ್ಲಿ ಮೊಸರು ಕದ್ದ, ಮೆದ್ದ, ಮೆತ್ತಿಕೊಂಡ, ಮೆತ್ತಿಸಿಕೊಂಡ. ಇತರರ ಮುಖಕ್ಕೂ ಮೆತ್ತಿದ. ಬದುಕಿನಲ್ಲಿ ಹಾಲು, ಮೊಸರಿಗೆ ಆದ್ಯತೆಯನ್ನು ನೀಡಿದ. ಪೌಷ್ಟಿಕವಾದ ಆಹಾರ ಸೇವಿಸಬೇಕೆನ್ನುವ ವಿಚಾರವನ್ನು ಹೇಳಿದ. ಗೋಪಾಲಕರು, ಗೋಪಿಕೆಯರು ಅನುಸರಿಸಿದರು.
ನಾವಾದರೋ.. ಹಾಲು ನೀಡುವ ದನವನ್ನು ಕೈಯಾರೆ ಪರಾಧೀನಗೊಳಿಸಿದೆವು. ಪ್ಯಾಕೆಟ್ ಹಾಲು, ಮೊಸರನ್ನು ಅಪ್ಪ್ಪಿಕೊಂಡೆವು. ನಾವು ತಿಂದೆವು. ಆದರೆ ಮೆತ್ತಿಸಿಕೊಂಡಿಲ್ಲ. ಇತರರಿಗೆ ವಿಚಾರ-ವಿಕಾರ ಭಾವಗಳ ಕೊಳೆಯನ್ನು ಮೆತ್ತಿದೆವು! ಮೆತ್ತುತ್ತಾ ಬಂದೆವು! ಪೌಷ್ಟಿಕ ಆಹಾರ ಎನ್ನುತ್ತಾ ವಿಷವನ್ನು ನಿತ್ಯ ಸೇವಿಸುವುದು ಬೌದ್ಧಿಕ ಸಿರಿವಂತರಾದ ನಮಗೆ ಖುಷಿಯೋ ಖುಷಿ.
ಕೃಷ್ಣ ವನಿತೆಯರನ್ನು ಪ್ರೀತಿಸಿದ. ಮನಸ್ಸಿನಲ್ಲಿ ಸ್ಥಾನ ಕೊಟ್ಟ. ಮನಸಾ ಪೀಡಿಸಿದ. ವಸ್ತ್ರವನ್ನು ಅಪಹರಿಸಿ ಪರಿಹಾಸ್ಯ ಮಾಡಿದ. ಆಪತ್ತಿನಲ್ಲಿ ವಸ್ತ್ರವನ್ನೂ ನೀಡಿ ಮಾನ ಕಾಪಾಡಿದ. ಪ್ರಾಣಕ್ಕೆ ಆಸರೆಯಾದ. ಆದರೆ ಎಂದೂ ಕಾಮದ ಕಣ್ಣಿಂದ ಕಂಡಿಲ್ಲ. ಕೃಷ್ಣನ ಬಾಲ್ಯದ ತುಂಟತನವನ್ನು ಬೇಕಾದಂತೆ ತಿರುಚಿ ವ್ಯಾಖ್ಯಾನ ಮಾಡಿದೆವು. ‘ಆತ ವನಿತಾಪ್ರಿಯ’ ಎನ್ನುತ್ತಾ ನಮ್ಮ ಮನದ ಕೊಳೆಯನ್ನು ಆತನ ಮುಖಕ್ಕೆ ಮೆತ್ತುವುದಕ್ಕೆ ಮುಂದಾದೆವು. ಕಾಮದ ಸುಳಿಯೊಳಗೆ ಸಿಲುಕಿ ಬದುಕಿನಿಂದ ಜಾರಿದೆವು. ಮತ್ತೊಮ್ಮೆ ಮೇಲೆದ್ದು ಬಾರದಂತೆ..! ಕೃಷ್ಣನಿಗೆ ಅಂಟಿಸಿಕೊಳ್ಳಲೂ ಗೊತ್ತಿತ್ತು, ಅದರಿಂದ ಬಿಡಿಸಿಕೊಳ್ಳಲೂ ಗೊತ್ತಿತ್ತು, ಇದೇ ಬದುಕಿನ ಸುಭಗತನ.
ನರಕಾಸುರನನ್ನು ಕೊಂದು ಸೆರೆಮನೆಯಲ್ಲಿದ್ದ ಹದಿನಾರು ಸಾವಿರ ಸ್ತ್ರೀಯರ ಬಂಧಮುಕ್ತ ಮಾಡಿದ. ಮಾನ-ಪ್ರಾಣವನ್ನು ಕಾಪಾಡಿದ. ತನ್ನೂರಿಗೆ ಕರೆತಂದ. ಎಲ್ಲರ ಮನದಲ್ಲೂ ನೆಲೆಯಾದ, ಸೆರೆಯಾದ. ಎಲ್ಲೆಲ್ಲಿ, ಏನೇನೋ ಆಗಬಹುದಾದ ಸ್ತ್ರೀಯರ ಬದುಕಿಗೆ ಆಸರೆಯಾದ. ಅವರ ಮಾನವೀಯ ಗುಣವನ್ನು ನಾವು ದುರ್ಗುಣಗಳ ಪಟ್ಟಿಗೆ ಸೇರಿಸಿದೆವು. ಅಂದರೆ ಅದು ನಮ್ಮ ದುರ್ಗುಣಗಳ ಪ್ರತಿಫಲನ ಎಂದರ್ಥ. ಅಂಗೈ ಹುಣ್ಣಿಗೆ ಕನ್ನಡಿ ಬೇಡ ತಾನೆ!
ಗೋವುಗಳ, ಗೋಪಾಲಕರ ನೆಚ್ಚಿನ ಸ್ನೇಹಿತ ಕೃಷ್ಣ. ಗೋ ಮಂದೆಯ ಬದುಕು ಪ್ರಿಯ. ಕೊಳಲ ದನಿಗೆ ತಲೆಯಾಡಿಸದ, ಕುಣಿಯದ ಪಶುಗಳಿರಲಿಲ್ಲ. ಬಾಯಿ ತೆರೆದಾಗ ಹಾಲುಣಿಸುವ ಎಷ್ಟು ದನಗಳಿದ್ದುವು? ಬದುಕಿಗೆ ಅತೀ ಅಗತ್ಯವಾದ ಹಾಲು, ಮೊಸರು, ಬೆಣ್ಣೆಗಳ ತಯಾರಿಯಲ್ಲಿ ಸ್ವಾವಲಂಬನೆಯನ್ನು ಪ್ರಪಂಚಕ್ಕೆ ತೋರಿಸಿದ. ‘ಇದ್ದ ದನವನ್ನು ಮಾರೋಣ. ಹಾಲು ಪಕ್ಕದ ಮನೆಯಿಂದ ತರೋಣ’ ಎನ್ನುತ್ತಾ ನಮ್ಮ ಹಟ್ಟಿಯನ್ನು ಖಾಲಿ ಮಾಡಿ, ಗೋಡೌನ್ ಮಾಡಿದ ಸಾರ್ಥಕತೆ ನಮ್ಮದು! ನಂತರ ಪಶ್ಚಾತ್ತಾಪ ಪಟ್ಟೆವು. ಬದುಕಿನಲ್ಲಿ ಪಶು ಸಂಸಾರಕ್ಕೆ ಶೂನ್ಯ ಜಾಗ. ಅದನ್ನು ಉಳಿಸಿ, ಬೆಳೆಸುವುದು ಬಹುಶಃ ಇನ್ನು ಕಾನೂನು ಮಾತ್ರವೋ ಏನೋ?
ಕೃಷ್ಣ ಗುರುಕುಲಕ್ಕೆ ಅಣ್ಣನೊಂದಿಗೆ ತೆರಳಿದ. ಅರುವತ್ತ ನಾಲ್ಕು ವಿದ್ಯೆಯನ್ನು ಶೀಘ್ರ ಕಲಿತ. ಮರಣಿಸಿದ ಗುರುಪುತ್ರನನ್ನು ‘ಗುರುಕಾಣಿಕೆ’ಯಾಗಿ ನೀಡಿ ಜಗತ್ತಿಗೆ ಮಾದರಿಯಾದ. ಕೃಷ್ಣನ ಗುರುಭಕ್ತಿ ಕಣ್ಣ ಮುಂದಿರುವಾಗ, ಕನಿಷ್ಠ ‘ಶಿಕ್ಷಕ ದಿನಾಚರಣೆ’ಯಂದಾದರೂ ಗುರುವಿಗೆ ನಮಸ್ಕರಿಸಿದ ಉದಾಹರಣೆ ಇದೆಯೇ? ಇದ್ದರೆ ಗ್ರೇಟ್! ಗುರು ಅಂದರೆ ಹಿರಿದು. ಹಿರಿದುದರ ಮುಂದೆ ಕಿರಿದು ಶರಣಾಗಬೇಕು. ಅದು ಶಿಕ್ಷಣದ ಅಂತಿಮ ಫಲಿತ. ನಮ್ಮ ಶಿಕ್ಷಣ ವ್ಯವಸ್ಥೆಗಳು ತಲೆಬಾಗಲು ಕಲಿಸುತ್ತವೆಯೇ? ತಲೆಬಾಗುವುದು ಅಂದರೆ ದಾಸ್ಯವೆಂದಲ್ಲ. ಅದು ಸಂಸ್ಕಾರ. ಶಿಕ್ಷಣ ಅದಕ್ಕೆ ಉಪಾಧಿ.
ತನ್ನೂರನ್ನು ಹಾಳುಗೈಯಲು ಬಂದ ಕಪಟ ರಾಕ್ಷಸರನ್ನೆಲ್ಲಾ ತುಳಿದ, ತರಿದ. ವಿಷದ ಹಾಲನ್ನು ನೀಡಲು ಬಂದ ಪೂತನಿಗೆ ಬುದ್ಧಿ ಕಲಿಸಿದ. ಬದುಕಿದ ಹಳ್ಳಿಯನ್ನು ಸಂರಕ್ಷಿಸಿದ. ಗೋಮಂದೆಯನ್ನು ಉಳಿಸಿದ. ಧರ್ಮವನ್ನು ಉಳಿಸಲು ಮಾವ ಕಂಸನನ್ನೇ ಕೊಲ್ಲಬೇಕಾಯಿತು. ನಮ್ಮೊಳಗಿನ ವಿಷವನ್ನು ಕಕ್ಕಿಸಲು ವರುಷ ವರುಷವೂ ಕೃಷ್ಣ ಬರುತ್ತಿದ್ದಾನೆ. ‘ನಮ್ಮೊಳಗೆ ವಿಷವಿದೆ’ ಅಂತ ನಮಗೆ ಗೊತ್ತಿಲ್ಲ, ಕೃಷ್ಣನಿಗೆ ಗೊತ್ತಿದೆ. ಆತನಿಗೆ ನಾವು ಹೃದಯ ಕೊಡದಿದ್ದರೆ ಆತ ಕಕ್ಕಿಸುವುದಾದರೂ ಹೇಗೆ, ಪಾಪ?
ಪಾಂಡವರ ಪ್ರತಿನಿಧಿಯಾಗಿ ಸಂಧಾನಕ್ಕೆ ತೆರಳಿದ. ಸಂಗ್ರಾಮ ನಿರ್ಣಯಿಸಿ ಬಂದ. ಮಹಾಭಾರತವೇ ನಡೆದು ಹೋಯಿತು. ಧರ್ಮ ಜಯಿಸಿತು. ಧರ್ಮರಾಯ ಹಸ್ತಿನೆಯಲ್ಲಿ ಪಟ್ಟಾಭಿಷಿಕ್ತನಾದ. ಎಲ್ಲಿ ಧರ್ಮವಿದೆಯೋ ಅಲ್ಲಿ ಜಯವಿದೆ ಎಂದು ತೋರಿಸಿಕೊಟ್ಟ.
ಕೃಷ್ಣನ ವ್ಯಕ್ತಿತ್ವವನ್ನು ಓದುತ್ತೇವೆ. ಪಾರಾಯಣ ಮಾಡುತ್ತೇವೆ. ಅರ್ಚಿಸುತ್ತೇವೆ. ಎಂದಾದರೂ ಆತನ ಬದುಕಿನೊಂದಿಗೆ ನಮ್ಮ ಬದುಕನ್ನು ಅನುಸಂಧಾನ ಮಾಡಿ ನೋಡಿದ್ದುಂಟೋ? ಆತನಂತೆ ಬದುಕಲು ಸಾಧ್ಯವಿಲ್ಲ. ಆ ಬದುಕು ಅವನಿಗೇ ಮೀಸಲು. ಅದರ ಪೇಟೆಂಟ್ ಅವನಿಗೆ ಮಾತ್ರ. ಇನ್ನೊಬ್ಬ ಅದನ್ನು ಅನುಕರಿಸಿದರೆ ಕಾನೂನು ಬಾಹಿರ!
ಆದರೆ ಅನುಸರಿಸಬಹುದಲ್ಲಾ..! ಸಮಾಜದ ಒಳಿತಾಗಿ ‘ಮಾಡಿ ತೋರಿಸಿದ’ ಎಷ್ಟು ಉದಾಹರಣೆಗಳು ಬೇಕು? ಅವೆಲ್ಲವನ್ನೂ ಬುದ್ಧಿವಂತರಾದ ನಾವು ಢಾಳಾಗಿ ಕಾಣುತ್ತಾ, ನಮ್ಮ ಬದುಕನ್ನೂ ಢಾಳು ಮಾಡುತ್ತಿದ್ದೇವೆ. ಕೃಷ್ಣ ಬಂದ, ನೋಡಲಾಗಲಿಲ್ಲ. ವರುಷವೂ ಬರುತ್ತಿದ್ದಾನೆ, ನೋಡಲು ಸಿಗುತ್ತಿಲ್ಲ.
*** *****
ಮಹಾಭಾರತದುದ್ದಕ್ಕೂ ಧರ್ಮಕ್ಕೆ ಜಯವನ್ನು ತಂದು ಕೊಟ್ಟ ಕೃಷ್ಣನನ್ನು ಅಷ್ಟಮಿಯ ದಿವಸ ಪೂಜ್ಯ ಭಾವದಿಂದ ಆರಾಧಿಸುತ್ತೇವೆ. ಭಾಗವತ ಪ್ರವಚನ ಮಾಡುತ್ತೇವೆ. ಕೃಷ್ಣನ ಬದುಕಿನ ಗಾಥೆಗೆ ಕಿವಿಯಾಗುತ್ತೇವೆ. ದೇವಾಲಯ, ಭಜನ ಮಂದಿರಗಳ ಮೂಲಕ ನಿತ್ಯ ಆರಾಧನೆ ಮಾಡುತ್ತೇವೆ. ಇವೆಲ್ಲಾ ಬದುಕಿನ ಸಂಸ್ಕಾರದ ಮುಖಗಳು.
ಎಲ್ಲಾ ಸರಿ, ಆದರೆ ಬದುಕಿನ ವ್ಯವಹಾರದಲ್ಲಿ ಕೃಷ್ಣನನ್ನು ಕೇವಲ ‘ಕಾಮರೂಪಿ’ಯಾಗಿಯೇ ಕಾಣುತ್ತಿರುವುದು ವಿಷಾದ. ವರ್ತಮಾನದ ನಾಲಗೆಯಲ್ಲಿ ನಡೆಯುತ್ತಿರುವ ಕಾಮವಿಕಾರಗಳಿಗೆ ಕಾರಣರಾದವರನ್ನು ‘ಆತ ಕೃಷ್ಣ ಅಲ್ವಾ, ಎಷ್ಟು ಮಡದಿಯರೋ ಏನೋ” ಎಂದು ತಕ್ಷಣ ಆರೋಪಿಸಿಬಿಡುತ್ತೇವೆ. ಕೃಷ್ಣನನ್ನು ಅಷ್ಟಕ್ಕೇ ಸೀಮಿತಗೊಳಿಸಿದ್ದು ನಮ್ಮ ಬೌದ್ಧಿಕ ದಾರಿದ್ರ್ಯ.
ಇನ್ನು ಕಳ್ಳತನದಲ್ಲೂ ಕೃಷ್ಣನ ಹೆಸರನ್ನು ಟಂಕಿಸುತ್ತಾರೆ. ಬಾಲ್ಯ ಸಹಜವಾಗಿ ಹಾಲು, ಮೊಸರು, ಬೆಣ್ಣೆಯನ್ನು ತಾಯಿಯ ಗಮನಕ್ಕೆ ಬಾರದೆ ತಾನು ತಿಂದುದಲ್ಲದೆ, ತನ್ನ ಸ್ನೇಹಿತರಿಗೂ ಹಂಚಿದ ಕತೆಗಳನ್ನ ಭಾಗವತ ಹೇಳುತ್ತದೆ. ಇಲ್ಲಿ ‘ಆತ ಬೆಣ್ಣೆ ಕದ್ದಿದ್ದಾನೆ, ಹೆಣ್ಣುಮಕ್ಕಳ ಹೃದಯವನ್ನು ಕದ್ದಿದ್ದಾನೆ. ಆತ ಕಳ್ಳರ ಕುಲಗುರು’ ಎಂಬಿತ್ಯಾದಿ ಆರೋಪಗಳು ನಮ್ಮ ಅಪಕ್ವ ಮನಸ್ಸಿನ ಲಕ್ಷಣ.
ವಿನೋದಕ್ಕಾಗಿ ಅಮ್ಮಂದಿರು ತಮ್ಮ ಚಿಣ್ಣರಿಗೆ ಹೇಳುವುದುಂಟು, “ಏನೋ ಕೃಷ್ಣನ ಹಾಗೆ ಬೆಣ್ಣೆ ಕದೀತಿಯಾ.. ಕಳ್ಳ’ ಎನ್ನುವುದುಂಟು. ಅದೇ ಅಮ್ಮ ಕಂದನನ್ನು ಎದೆಗವಚಿಕೊಂಡು ‘ನೀನು ನನ್ನ ಪಾಲಿನ ಕೃಷ್ಣ’, ‘ಇದ್ದರೆ ಇರಬೇಕು, ಕೃಷ್ಣನಂತಹ ಮಗು’ ಎನ್ನುವ ಅಮ್ಮಂದಿರ ಅಂತಃಕರಣದಲ್ಲಿ ಕೃಷ್ಣನ ಮೇಲೆ ಆರೋಪಗಳಿಲ್ಲ. ಇಲ್ಲಿರುವ ನಿವ್ರ್ಯಾಜ ಪ್ರೀತಿ ಮಾತ್ರ. ನಿಜಾರ್ಥದಲ್ಲಿ ಕೃಷ್ಣನು ‘ಪ್ರೀತಿ’ಗೆ ರೂಪಕವಾಗಿ ಕಾಣುತ್ತಾನೆ.
ಕನ್ನಾಡಿನ ರಾಜಕೀಯವನ್ನು ನೋಡಿದಾಗ ಮುಖಮುಚ್ಚಿಕೊಳ್ಳುವಷ್ಟು ಅಸಹ್ಯವೆನಿಸುತ್ತದೆ. ಯಾವುದೇ ಪಕ್ಷ ಇರಲಿ, ಅವುಗಳ ಸಿದ್ಧಾಂತವಿರಲಿ.. ಅವನ್ನೆಲ್ಲಾ ಗಾಳಿಗೆ ತೂರಿದ ಅನೈತಿಕತೆಯ ಮುಂದೆ ‘ನ್ಯಾಯ’ ಮುದುಡಿದೆ. ಇಂದಲ್ಲ, ಬಹಳ ಸಮಯಗಳ ಹಿಂದಿನಿಂದಲೇ ಕನ್ನಾಡು ನೋಡುತ್ತಿದೆ, ಕೆಲವು ಹೆಸರೆತ್ತಿ ಹೇಳಬಹುದಾದ ರಾಜಕೀಯ ನಾಯಕರ ‘ಚಾರಿತ್ರ್ಯಹೀನತೆ’! ಇಂತಹವರ ಕಾಮನೆಗಳನ್ನು ವಿಶ್ಲೇಷಿಸುವಾಗ ವಾಹಿನಿಗಳು ‘ಶ್ರೀಕೃಷ್ಣ’ನನ್ನು ತಮ್ಮ ವಿಶೇಷ ವರದಿಯ ಶೀರ್ಷಿಕೆಯಲ್ಲಿ ತಂದು ಬಿಡುತ್ತವೆ! ಪೌರಾಣಿಕ ಅರಿವಿನ ದಾರಿದ್ರ್ಯ. ಪೌರಾಣಿಕ ಶ್ರದ್ಧಾವಂತರ ಸಹನೆಯ ಪರೀಕ್ಷೆ.
ಆಸ್ತಿಕಾಗ್ರೇಸರ ಕೃಷ್ಣ : ಯದುಕುಲೋತ್ಪನ್ನನಾದ ಶೂರಸೇನನ ಪುತ್ರ ವಸುದೇವ ಮತ್ತು ದೇವಕಿಯರ ಪುತ್ರ ಶ್ರೀಕೃಷ್ಣ. ಮಥುರೆಯ ಕಂಸನ ತಂಗಿ ದೇವಕಿ. ‘ಎಂಟನೇ ಗರ್ಭದಿಂದ ಮರಣ’ ಎನ್ನುವ ನಭೋವಾಣಿಯಂತೆ ಮೃತ್ಯುಭಯದಿಂದ ವಸುದೇವ-ದೇವಕಿಯರಿಗೆ ಕಾರಾಗೃಹ. ಶ್ರಾವಣ ಮಾಸದ ಅಷ್ಟಮಿಯ ರೋಹಿಣಿ ನಕ್ಷತ್ರದಲ್ಲಿ ಜನನ. ಹೆತ್ತವರಿಗೆ ದೇವರಾಗಿಯೇ ಕಾಣಿಸಿಕೊಂಡು, ‘ನನ್ನನ್ನು ನಂದಗೋಕುಲಕ್ಕೆ ಕರೆದೊಯ್ಯಿರಿ. ಅಲ್ಲಿ ಯಶೋದೆಯ ಬಳಿಯಲ್ಲಿರುವ ಮಾಯಾ ಶಿಶುವನ್ನು ತನ್ನಿ’ ಸೂಚಿಸುವನು. ದೇವ ಮಹಿಮೆಯಿಂದ ಕಾರಾಗೃಹದ ಬಾಗಿಲು ತೆರೆದುಕೊಳ್ಳುತ್ತದೆ. ಮಳೆ, ಗಾಳಿ, ಸಿಡಿಲನ್ನು ಲೆಕ್ಕಿಸದೆ ವಸುದೇವನು ಕೃಷ್ಣನನ್ನು ನಂದಗೋಕುಲಕ್ಕೂ, ಅಲ್ಲಿನ ಹೆಣ್ಣುಶಿಶುವನ್ನು ಮಥುರೆಗೆ ತಂದು ದೇವಕಿಯ ಬಳಿಯಲ್ಲಿರಿಸಿದ. ನಂದಗೋಕುಲದಲ್ಲಿ ಕೃಷ್ಣ ಬೆಳೆಯುತ್ತಿದ್ದಾನೆ.
ಕಂಸನು ಕೃಷ್ಣನನ್ನು ಕೊಲ್ಲಲು ತನ್ನ ಪರಿವಾರದ ಒಬ್ಬೊಬ್ಬರನ್ನು ಕಳುಹಿಸುತ್ತಾನೆ. ಎಲ್ಲರೂ ಮೃತರಾಗುವರು. ಕೊನೆಗೆ ಬಿಲ್ಲಹಬ್ಬದ ನೆವದಿಂದ ಅಳಿಯರನ್ನು ಕರೆಸಿಕೊಂಡ ಕಂಸನು ಅವರಿಂದಲೇ ಹತನಾಗುವನು. ಮುಂದೆ ಗೋವರ್ಧನೋದ್ಧರಣ, ನರಕಾಸುರ ವಧೆ, ಜರಾಸಂಧ ವಧೆಗಳು ನಡೆಯುತ್ತವೆ. ಪಾಂಡವರ ಜೀವನದಲ್ಲಿ ಕೃಷ್ಣನ ಪ್ರವೇಶ. ‘ಧರ್ಮವಿದ್ದಲ್ಲಿ ಜಯವಿದೆ’ ಎಂದು ಘೋಷಿಸಿದ ಕೃಷ್ಣ ಅದರಂತೆ ನಡೆದುಕೊಂಡ. ಪಾಂಡವರನ್ನು ಧರ್ಮದ ಪರವಾಗಿ ಬೆಳೆಸಿದ. ಅರ್ಜುನನ ಸಾರಥಿಯಾಗಿ ಮಹಾಭಾರತ ಯುದ್ಧದಲ್ಲಿ ಧರ್ಮಕ್ಕೆ ಜಯ ತಂದಿತ್ತ. ಗೀತೋಪದೇಶದಿಂದ ಪಾರ್ಥನು ಪಾವನನಾದನು.
ಆತನ ಬಾಲ್ಯ ರೋಚಕ. ಕೈಯ ಕೊಳಲಿನ ನಾದಕ್ಕೆ ಮನಸ್ಸನ್ನು ಮುದಗೊಳಿಸುವ ಶಕ್ತಿಯಿತ್ತು. ಗೋಪಿಕೆಯರು ಮುರಳೀ ನಾದಕ್ಕೆ ಮನಸೋತಿದ್ದರು. ನಮ್ಮ ಈಗಿನ ಕಾಲಮಾನದಲ್ಲಿ ಕೃಷ್ಣನಿಗೂ, ಗೋಪಿಕೆಯರಿಗೂ ಏನಿಲ್ಲವೆಂದರೂ ಹತ್ತು ವರುಷವಾಗಿದ್ದಿತು. ಒಮ್ಮೆ ಯುಮುನೆಯಲ್ಲಿ ಗೋಪಿಕೆಯರು ದಡದಲ್ಲಿ ತಮ್ಮ ಉಡುಪನ್ನು ಕಳಚಿಟ್ಟು, ಸ್ನಾನಕ್ಕಿಳಿದಿದ್ದರು. ಕೃಷ್ಣನು ಅವರ ವಸ್ತ್ರದೊಂದಿಗೆ ಮರವೇರಿ ಕುಳಿತ. ಗೋಪಿಕೆಯರಿಗೆ ಭಯವಾಯಿತು. ಕೃಷ್ಣನ ಮೊರೆಹೋದರು. “ಸ್ನಾನ ಮಾಡುವಾಗ ವಿವಸ್ತ್ರದಿಂದ ಇರಕೂಡದು.” ಎನ್ನುವ ಬುದ್ಧಿವಾದವನ್ನು ಹೇಳಿ ವಸ್ತ್ರವನ್ನು ನೀಡಿದ. ಇಲ್ಲಿ ಗೋಪಿಕೆಯರು ಮತ್ತು ಕೃಷ್ಣನ ಮುಂದೆ ಅವ್ಯಾಜವಾದ ಪ್ರೀತಿಯಿತ್ತು. ಮುಂದೆ ದ್ರೌಪದಿ ವಸ್ತ್ರಾಪಹಾರದ ಸಂದರ್ಭದಲ್ಲಿ ತಂಗಿ ಪಾಂಚಾಲಿಗೆ ಅಕ್ಷಯಾಂಬರವನ್ನು ಕರುಣಿಸಿದ್ದ.
ಕೃಷ್ಣನ ವ್ಯಕ್ತಿತ್ವವನ್ನು ಪ್ರೊ.ಕೆ.ಎಸ್.ನಾರಾಯಣಾಚಾರ್ಯರು ‘ಮಹಾಭಾರತ ಪಾತ್ರ ಪ್ರಪಂಚ’ ಕೃತಿಯಲ್ಲಿ ಚೆನ್ನಾಗಿ, ಅರ್ಥವಾಗುವಂತೆ ಹೇಳುತ್ತಾರೆ. “ಕೃಷ್ಣನು ಜ್ಞಾನಿಗಳಿಗೆ ಯೋಗೀಶ್ವರನಾಗಿಯೂ, ಯೋಗೇಶ್ವರನಾಗಿಯೂ, ಮಹಾರಾಜಕಾರಣ ಮುತ್ಸದ್ದಿಯಾಗಿಯೂ, ವಿಶ್ವಶಾಂತಿ ಸ್ಥಾಪಕನಾಗಿಯೂ; ಭಕ್ತರನ್ನು, ನಂಬಿದ ಸ್ನೇಹಿತರನ್ನು ಎಂದೂ ಕೈ ಬಿಡದ ಗೆಳೆಯನಾಗಿಯೂ, ಸ್ತ್ರೀಯರ ಶೋಷಣೆಯ ವಿರುದ್ಧ ಸಿಡಿದೆದ್ದವನಾಗಿಯೂ, ಕರುಣಾಪೂರ್ಣನಾಗಿಯೂ, ಸಕಲ ಗುಣನಿಧಿಯಾಗಿಯೂ ಕಾಣುತ್ತಾನೆ.”
“ಮನಸ್ಸಿನ ಸಮತೋಲನವನ್ನು ಸಾಧಿಸಿ, ಜಗತ್ತಿನ ಹಿತಕ್ಕೆ ತನ್ನನ್ನು ಅರ್ಪಿಸಿಕೊಂಡು, ಸದಾ ಕಾರ್ಮಯೋಗಿಯಾಗಿರುತ್ತಾ, ಸ್ವ-ಜನ, ಪರರೆಂಬ ಪಕ್ಷಪಾತ ಮಾಡದೆ ಶಿಷ್ಟರ ಮಿತ್ರನಾಗಿರುತ್ತಾ, ದುಷ್ಟರ ನಿಗ್ರಹಕ್ಕೆ ತನ್ನೆಲ್ಲವನ್ನು ಧಾರೆ ಎರೆದ ಕೃಷ್ಣ ಮಾಡಿದ್ದೂ, ಆಡಿದ್ದೂ ಒಂದೇ ರೀತಿ. ಅದೇ ಯೋಗ. ಹುಟ್ಟಿನಿಂದ ಮನುಷ್ಯರಿಗೆ ಕರ್ತವ್ಯ ಸಿದ್ಧವಾಗಿರುತ್ತದೆ. ಅದು ಈಶ್ವರ ಪ್ರೀತಿಯ ಗುರಿಯನ್ನು ಹೊಂದಿದ್ದರೆ, ತನಗೂ ಇತರರಿಗೂ ಸೌಖ್ಯ. ತ್ಯಾಗವಿಲ್ಲದ ಬದುಕಿನಲ್ಲಿ ಭೋಗವೂ ಬರಲಾರದೆಂಬ ವೇದದ ಸಿದ್ಧಾಂತವನ್ನು ಕೃಷ್ಣ ಬೋಧಿಸಿದ. ಮನುಷ್ಯನ ಆತ್ಮ ಅಮರವೆಂದು ಸಾರಿ, ಅದನ್ನು ಅವಸಾನಗೊಳಿಸದೇ, ಉದ್ಧರಿಸಿಕೊಳ್ಳುವ ದಾರಿಯನ್ನೂ ತೋರಿದ. ಪರಲೋಕ, ಮೌಲ್ಯ, ದೇವರು, ಪುಣ್ಯ-ಪಾಪಗಳ ವ್ಯತ್ಯಾಸ ಎಲ್ಲವನ್ನೂ ಬೋಧಿಸಿದ ಶ್ರೀಕೃಷ್ಣ ಆಸ್ತಿಕಾಗ್ರೇಸರ. ಋಷಿಮುನಿಗಳ ಸಂದೇಶವೆಲ್ಲ ಇವರ ವಾಣಿಯಲ್ಲಿ ಹೊಸ ಮೆರುಗನ್ನು ಚಿರಂತನತೆಯನ್ನು ಪಡೆಯಿತು.”
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement

