ಸಮಸ್ಯೆಯೊಂದಕ್ಕೆ ಉತ್ತರ ಹೊಳೆಯದೇ ಇದ್ದಾಗ, ಪರಿಹಾರಕ್ಕೆ ಸುಗಮ ಹಾದಿ ಸಿಗದಿದ್ದಾಗ, ಎಷ್ಟು ತಿಣುಕಿದರೂ ಮೂಲವನ್ನು ಪತ್ತೆ ಮಾಡಲಾಗದ ಸಂದರ್ಭದಲ್ಲಿ ‘ಯಕ್ಷಪ್ರಶ್ನೆ’ ಪದವು ಮುಂದೊತ್ತಿ ಬರುತ್ತದೆ. ಅರ್ಥ ತಿಳಿಯದೆ ಬಳಸುವುದೇ ಹೆಚ್ಚು.
ಮಹಾಭಾರತದ ‘ವನಪರ್ವ’ದಲ್ಲಿ ಯಕ್ಷ ಹಾಗೂ ಧರ್ಮರಾಯ ಇವರಿಬ್ಬರೊಳಗೆ ನಡೆದ ಪ್ರಶ್ನೋತ್ತರದಲ್ಲಿ ಬದುಕಿನ ಗೂಢತೆಯಿದೆ. ಗೂಢತೆ ಅಂದರೆ ಗುಟ್ಟಲ್ಲ. ಇದು ಧರ್ಮರಾಯನ ಬೌದ್ಧಿಕ ಜ್ಞಾನದ ತೆರೆದ ಪುಟ. ಯಕ್ಷನ ಪ್ರಶ್ನೆಗಳಿಗೆ ಗೊಂದಲಗಳಿಲ್ಲದೆ, ಒತ್ತಡವಿಲ್ಲದೆ, ಸ್ಪಷ್ಟವಾಗಿ, ಕರಾರುವಾಕ್ಕಾಗಿ, ಬಿಂದು-ವಿಸರ್ಗ ಲೋಪವಿಲ್ಲದೆ ಉತ್ತರಿಸುತ್ತಾನೆ. ಒಂದು ಸಮ್ಮನಸ್ಸಿನ ಪಕ್ವ ಲೋಕವನ್ನು ಯಕ್ಷನ ಮುಂದೆ ಅನಾವರಣಗೊಳಿಸುತ್ತಾನೆ. ಯಕ್ಷನ ಪ್ರಶ್ನೆಗಳ ಗೊಂಚಲುಗಳ ಒಂದೆರಡು ಮಾದರಿಗಳು ಇಲ್ಲಿದೆ.
ಯಕ್ಷನ ಪ್ರಶ್ನೆ : ಸಾಗರಕ್ಕೆ ಯಾವುದರ ಹೋಲಿಕೆ ಸರಿಯಾಗಬಲ್ಲುದು? ನಾವು ಬದುಕಿ ಬಾಳುವ ಈ ವಸುಧೆಗೆ ಹಿತವನ್ನುಂಟು ಮಾಡುವವರು ಯಾರು? ಮನುಜ ಕುಲಕ್ಕೆ ಯಾರು ಮಾತೆ? ಸೂರ್ಯಪ್ರಭೆಗೆ ಸರಿಸಮ?
ಧರ್ಮರಾಯನ ಉತ್ತರ : ಅಂಬುಧಿಗೆ ಆಕಾಶವೇ ಸರಿಯಾದ ಹೋಲಿಕೆಯಾಗುತ್ತದೆ. ಈ ಧರಿತ್ರಿಗೆ ಸರ್ವವಿಧದಲ್ಲಿಯೂ ಹಿತವನ್ನುಂಟು ಮಾಡತಕ್ಕವನು ದೇವತೆಗಳ ಅಧಿಪತಿಯಾದ ಇಂದ್ರನಾಗಿರುತ್ತಾನೆ. ಮಾನವ ಕುಲಕ್ಕೆ ಗೌರವ ಸ್ಥಾನದಲ್ಲಿ ತಾಯಿಯಂತೆ ಇರುವುದು ಗೋಮಾತೆ. ಸೂರ್ಯನಿಗೆ ಸರಿ-ಸಮವಾದುದು ಶ್ರೇಷ್ಠವಾದ ಸತ್ಯ.
ಧರ್ಮರಾಯನ ಸೂಚ್ಯವಾದ ಉತ್ತರಗಳ ಮತಿತಾರ್ಥವು ಆಳವಾಗಿದೆ. ಮೇಲ್ನೋಟಕ್ಕೆ ಸರಳವಾಗಿ ಕಂಡರೂ ಆರ್ಥಗಳನ್ನು ಪೋಸ್ಟ್‍ಮಾರ್ಟಂ ಮಾಡಿದರೆ ವಿಶಾಲ ಲೋಕದ ದರ್ಶನವಾಗುತ್ತದೆ. ಹಾಗೆಂದು ಎಲ್ಲವೂ ಅರ್ಥವಾಗುತ್ತದೆ ಎಂದರ್ಥವಲ್ಲ. ನಮ್ಮಂತಹ ಪಾಮರರಿಗೆ ಬೊಗಸೆಯಷ್ಟು ಗ್ರಹಿಕೆಗೆ ಎಟಕುತ್ತದಷ್ಟೇ.
‘ಸಾಗರಕ್ಕೆ ಸಾಗರವೇ ಹೋಲಿಕೆ’ – ಭಾಷಣಗಳಲ್ಲಿ, ಉಪನ್ಯಾಸಗಳಲ್ಲಿ ಯಕ್ಷಗಾನ ಅರ್ಥಗಾರಿಕೆಯಲ್ಲಿ ಉಲ್ಲೇಖವಾಗುವ ಪದಗುಚ್ಛ. ಹೌದಲ್ಲ, ಸಾಗರಕ್ಕೆ ಬೇರೆ ಹೋಲಿಕೆ ಯಾಕೆ? ಧರ್ಮರಾಯನು ಸಾಗರವನ್ನು ಆಕಾಶಕ್ಕೆ ಹೋಲಿಸಿದ್ದಾನೆ. ಅಕಾಶ ಎನ್ನುವುದು ಬದುಕಿನ ಮೂಲ ಉಸಿರು. ಸಾಗರದಷ್ಟೇ ವಿಶಾಲವಾಗಿರುವ ಗಗನವು ಭುವಿಗೆ ಬೇಕಾದ ಜೀವಧಾತುಗಳ ಒಳಸುರಿಗಳ ಉಪಾಧಿ. ಋತುಮಾನಕ್ಕೆ ಸರಿಯಗಿ ಬೇಸಿಗೆ, ಮಳೆ, ಚಳಿಗಾಲಗಳು ಆವರ್ತವಾಗಿ ಬಂದರೆ ಭುವಿ ಸುಭಿಕ್ಷ. ಸುಭಿಕ್ಷ್ಯದ ಅಧಿದೇವತೆ ದೇವೇಂದ್ರ. ಆತ ಭುವಿಯ ಹಿತಾಕಾಂಕ್ಷಿ. ಆದರೆ ಸುಭಿಕ್ಷಕ್ಕೆ ಬೇಕಾದ ಪೂರಕ ವಾತಾವರಣವನ್ನು ಭೂವಿಯ ಮನುಜರೇ ರೂಪಿಸಿಬೇಕು.
ಭೂಮಿಗೆ ಸುಭಿಕ್ಷೆ ಒದಗಿಸುವ ಕಾಯಕ ದೇವೇಂದ್ರನದ್ದೇನೋ ಹೌದು. ಹಕ್ಕುಗಳ ಬಗ್ಗೆ ಕಂಠತ್ರಾಣದಲ್ಲಿ ಮಾತನಾಡುತ್ತೇವೆ. ಕರ್ತವ್ಯದ ಮಾತು ಬಂದಾಗ ದನಿ ಕ್ಷೀಣವಾಗುತ್ತದೆ. ಯಾಕೆ ಅಲಕ್ಷ್ಯ? ಅದು ನಮಗೆ ಸಂಬಂಧಿಸಿದ್ದಲ್ಲ ಎಂಬ ಮನಃಸ್ಥಿತಿ. ನೆಲ-ಜಲ ಸಂರಕ್ಷಣೆ, ಪ್ರಕೃತಿ ರಕ್ಷಣೆ, ಮರಗಳ ರಕ್ಷಣೆ, ವಾತಾವರಣವನ್ನು ಕೆಡಿಸದಿರುವದು, ಸ್ವಚ್ಛ ಪರಿಸರ.. ಈ ಕರ್ತವ್ಯಗಳು ದೇವೇಂದ್ರದ್ದಲ್ಲ. ನಾವೆಲ್ಲಾ ಜತೆ ಸೇರಿ ಮಾಡಬೇಕಾದುದು. ಹೀಗೆ ಮಾಡುತ್ತಾ ಬಂದರೆ ದೇವೇಂದ್ರನಷ್ಟು ಎತ್ತರಕ್ಕೆ ಏರಬಲ್ಲೆವು. ನಮ್ಮ ಆತ್ಮಸಾಕ್ಷಿಯನ್ನು ಒಮ್ಮೆ ಪ್ರಶ್ನಿಸಿಕೊಳ್ಳೋಣ. ಒಂದು ಗಿಡವನ್ನಾದರೂ ನೆಟ್ಟು ಪೋಶಿಸಿದ್ದೇವೆಯೇ? ನೀರಿನ ರಕ್ಷಣೆ ಎಷ್ಟು ಮಾಡಿದ್ದೇವೆ? ಮಣ್ಣನ್ನು ಎಷ್ಟು ಹಾಳು ಮಾಡಿದ್ದೇವೆ? ಎಷ್ಟು ಮರಗಳನ್ನು ಕಡಿದಿದ್ದೇವೆ? ಈ ಸಾಲಿನ ಮಳೆಗಾಲದಲ್ಲಿ ಗುಡ್ಡಗಳೆಲ್ಲಾ ಜರಿದುವಲ್ಲಾ, ಅದು ಯಾರ ಕೈವಾಡದಿಂದ ಆಯಿತು? ಸ್ವಚ್ಛ ಭಾರತ್ ಪ್ರಕ್ರಿಯೆಯು ಕೇವಲ ಪ್ರಧಾನಿಯವರ ಕೆಲಸವಲ್ಲ. ಅವರು ದಿಕ್ಸೂಚಿ ತೋರಿದ್ದಾರೆ. ನಾವು ಪಾಲಿಸಬೇಕು.
ಪರಿಸರ ಪತ್ರಕರ್ತ ಶಿವಾನಂದ ಕಳವೆಯವರು ಆಗಾಗ್ಗೆ ಹೇಳುತ್ತಿದ್ದರು. “ಉತ್ತರ ಕನ್ನಡ ಭಾಗದಲ್ಲಿ ಅಪ್ಪೆ ಮಿಡಿಯ ಋತುವಿನಲ್ಲಿ, ಮಿಡಿಯನ್ನು ಕೊಯ್ಯುವ ಧಾವಂತದಲ್ಲಿ ಗೆಲ್ಲುಗಳೇ ಮುರಿದು ಬೀಳುತ್ತವೆ. ಈ ಗೆಲ್ಲುಗಳಲ್ಲಿ ಮುಂದಿನ ಋತುವಿನಲ್ಲಿ ಫಲ ಬಿಡುತ್ತವೆ ಎನ್ನುವ ಕನಿಷ್ಠ ಜ್ಞಾನವೂ ಮಿಡಿ ಕೀಳುವವರಲ್ಲಿ ಇರುವುದಿಲ್ಲ. ಇದರಿಂದಾಗಿ ಎಷ್ಟೋ ಅಪರೂಪದ ತಳಿಗಳ ಅಭಿವೃದ್ಧಿಗೆ ಹಿನ್ನಡೆಯಾಗಿದೆ.”
ಮಾನವ ಕುಲಕ್ಕೆ ತಾಯಿ ಗೋಮಾತೆ. ನಮ್ಮದು ಗೋ ಆಧಾರಿತ ಬದುಕು. ಒಂದು ಕಾಲಘಟ್ಟವನ್ನು ಜ್ಞಾಪಿಸಿಕೊಳ್ಳೋಣ. ಹಟ್ಟಿ ತುಂಬಾ ಆಕಳುಗಳು. ಕುಡಿಯಲು ಯಥೇಷ್ಟ ಹಾಲು. ತಿನ್ನಲು ತುಪ್ಪ, ಮೊಸರು. ಎಲ್ಲವೂ ತಾಜಾ. ಗದ್ದೆ ಬೇಸಾಯದ ಹೂಟೆಗಳಿಗೆ ಕೋಣಗಳ ಸಾಕಣೆ. ಸ್ವಾವಲಂಬಿ ಒಳಸುರಿಗಳು. ಕೃಷಿಗೆ ಪೂರಕವಾಗಿ ಹೈನುಗಾರಿಕೆ. ಪೂರಕ ಕೊಂಡಿಗಳು. ‘ಲೋಕದ ತಾಯಿ ಗೋಮಾತೆ’ ಎಂದು ಧರ್ಮರಾಯನಿಗೆ ತಿಳಿದಿತ್ತು. ನಮಗೆ ತಿಳಿಯುವುದು ಯಾವಾಗ?
ಗೋಮಾತೆಯ ವಿಷಯ ಬಂದಾಗ ಒಂದು ಘಟನೆ ನೆನಪಾಗುತ್ತದೆ. ನಮ್ಮ ಎಳೆಯ ಮನಸ್ಸುಗಳು ಗೋವನ್ನು, ಹಾಲನ್ನು ಅರ್ಥಮಾಡಿಕೊಂಡ ಆ ದಿವಸ ನೆನಪಾಗುತ್ತದೆ. ಪಾಣಾಜೆಯ ವೆಂಕಟರಾಮ ದೈತೋಟ ಹಾಗೂ ಜಯಲಕ್ಷ್ಮೀ ದೈತೋಟ – ಇವರು ಮೂಲಿಕಾ ಪರಂಪರೆಯ ವೈದ್ಯ ದಂಪತಿ. ಇಬ್ಬರೂ ಕೀರ್ತಿಶೇಷರು. ಒಮ್ಮೆ ರಾಜಧಾನಿಯಲ್ಲಿ ವಾಸ ಮಾಡುವ ಕುಟುಂಬವೊಂದು ಚಿಕಿತ್ಸೆಗಾಗಿ ದೈತೋಟಕ್ಕೆ ಬಂದಿತ್ತು. ಜಯಲಕ್ಷ್ಮೀಯವರು ಹಟ್ಟಿಯಲ್ಲಿ ಹಾಲು ಕರೆಯುತ್ತಿದ್ದರು.
ಆ ಕುಟುಂಬದಲ್ಲಿ ಇಬ್ಬರು ವಿದ್ಯಾರ್ಥಿಗಳಿದ್ದರು. ಚಿಕ್ಕವನು ಎಸ್.ಎಸ್.ಎಲ್.ಸಿ., ದೊಡ್ಡವನು ಪಿ.ಯು.ಸಿ. ಅವರಮ್ಮನಲ್ಲಿ ಚಿಕ್ಕವ ಹೇಳುತ್ತಾನೆ, ‘ಅಮ್ಮ, ಹಸು ಹಾಲು ಕೊಡುತ್ತಾ’! ದಿಗಿಲಾಗುವ ಸರದಿ ನನ್ನದು. ಸ್ವಲ್ಪ ಹೊತ್ತಲ್ಲಿ ಜಯಲಕ್ಷ್ಮೀಯವರು ಹಾಲಿನ ಪಾತ್ರೆಯೊಂದಿಗೆ ಹೊರ ಬಂದರು. ಆಗ ಹಿರಿಯವನು ‘ಹಸುವಿನ ಹಾಲು ಇಷೊಂದು ಬಿಳಿಯಾಗಿರುತ್ತಾ?’ ಅವರು ಮುಗುಳ್ನಗುತ್ತಾ ಒಳ ಹೋದರು. ಇಲ್ಲಿ ಎಲ್ಲೋ ತಪ್ಪಾಗಿದೆಯಲ್ವಾ! ಯಾರ ತಪ್ಪು? ಮಕ್ಕಳು ನಗರದ ಪ್ಯಾಕೆಟ್ ಹಾಲನ್ನು ನೋಡಿರುತ್ತಾರೆ, ಕುಡಿದಿರುತ್ತಾರೆ. ಬೀದಿ ದನಗಳನ್ನು ಬಿಟ್ಟರೆ; ಹಾಲು ಕೊಡುವ, ಕರೆಯುವ ದನಗಳನ್ನು ನೋಡಿದವರ ಸಂಖ್ಯೆ ವಿರಳ. ಕೆಲವೊಮ್ಮೆ ದನ ಎದುರಿಗೆ ಬಂದರೆ ಹುಲಿಯೋ, ಸಿಂಹವೋ ಬಂದಂತೆ ಹೆದರಿ ಓಡುವುದಿಲ್ವಾ? ಗೋವಿನ ಕುರಿತಾದ ಜ್ಞಾನ ಅಷ್ಟಕ್ಕಷ್ಟೇ.
ಗೋ ಅಂದಾಗ ಅದಕ್ಕೊಂದಿಷ್ಟು ರಾಜಕೀಯ, ಮತೀಯ, ಜಾತೀಯ ವಿಚಾರಗಳನ್ನು ಥಳಕು ಹಾಕುವುದನ್ನು ನೋಡಿದರೆ ‘ಗೋ ಮಾತೆ’ ಎನ್ನುವುದೇ ಮರೆತಿದ್ದೇವೆ. ಇದೇ ಗೋವಿನ ಹಾಲು, ತುಪ್ಪ, ಮೊಸರು, ಕೆನೆ, ಹಾಲಿನ ಉತ್ಪನ್ನಗಳಿಂದ ಹೊಟ್ಟೆ ತಂಪಾಗುತ್ತದೆ. ಎಷ್ಟು ಮೌಲ್ಯ ತೆತ್ತಾದರೂ ಉತ್ಪನ್ನಗಳು ಬೇಕು, ಗೋವು ಮಾತ್ರ ಬೇಡ!
ಪ್ರಶ್ನೆಗಳ ಮಾಲೆಯನ್ನು ಯಕ್ಷ ಪೋಣಿಸುತ್ತಾನೆ. “ಜಗತ್ತಿನಲ್ಲಿ ನಿಂದಿಸಲ್ಪಡಬೇಕಾದವನು ಯಾರು? ಅಭಿವಂದನೆಗೆ ಅರ್ಹನು ಯಾರು? ಬದುಕಿದ್ದರೂ ಮೃತನಂತಿರುವವನು ಯಾರು? ಯಾರಿಂದಾಗಿ ರಾಷ್ಟ್ರವು ಅಳಿಯುವ ಸಾಧ್ಯತೆಯಿದೆ? ಮಾಡಿದ ಯಜ್ಞವು ಕೆಡಲು ಸಾಧ್ಯವೇ?
ಧರ್ಮರಾಯನ ಉತ್ತರ : ಪರರನ್ನು ನಿಂದಿಸುವವನು ‘ನಿಂದ್ಯ’ನೆನಿಸಿಕೊಳ್ಳುತ್ತಾನೆ. ಪರಹಿತವನ್ನು ಬಯಸುವವನು ಅಭಿವಂದನೆಗೆ ಪಾತ್ರನಾಗುತ್ತಾನೆ. ಸ್ವಂತಿಕೆ ಇಲ್ಲದೆ ಇತರರ ಇಚ್ಚೆಗೆ ತಾಳ ಹಾಕುವ ರಾಜನಿಂದ ದೇಶವು ಅಳಿಯುವುದು. ದಟ್ಟ ದರಿದ್ರನು ಬದುಕಿದ್ದರೂ ಮೃತನಾದಂತೆಯೇ ಸರಿ. ಕೊಟ್ಟ ದಕ್ಷಿಣೆಯಿಂದ ವಿಪ್ರರು ತೃಪ್ತರಾಗದಿದ್ದಲ್ಲಿ ಯಜ್ಞ ನಿಷ್ಫಲವಾಗುತ್ತದೆ.
‘ಪರರನ್ನು ನಿಂದಿಸುವವನು ನಿಂದ್ಯನೆನಿಸಿಕೊಳ್ಳುತ್ತಾನೆ’, ಈ ಮಾತನ್ನು ಗಮನಿಸಿ. ಯಕ್ಷನ ಪ್ರಶ್ನೆಗಳಿಗೆ ನೀಡಿದ ಉತ್ತರಗಳೆಲ್ಲವೂ ವರ್ತಮಾನದ ಬದುಕಿಗೆ ಪುಷ್ಟಿ ನೀಡುತ್ತದೆ. ಪರನಿಂದೆಯಿಂದ ಸಮಾಜದಲ್ಲಿ ನಿಂದ್ಯರಾಗುತ್ತಾ ಇರುವುದೇ ‘ಬದುಕಲು ಇರುವ ಅರ್ಹತೆ’ ಎಂದು ಬಿಂಬಿಸಿಕೊಳ್ಳುತ್ತೇವೆ. ಇದನ್ನು ಸುಲಭ ಭಾಷೆಯಲ್ಲಿ ‘ರಾಜಕೀಯ’ ಎನ್ನೋಣ. ರಾಜಕೀಯ ಅಂದರೆ ಪಕ್ಷಗಳಲ್ಲ. ತನ್ನ ಕಾರ್ಯಸಾಧನೆಗೋಸ್ಕರವಾಗಿ ಪರರ ವಿಷಯವಾಗಿ ಇಲ್ಲಸಲ್ಲದ ವಿಚಾರಗಳನ್ನು ಹರಿಯಬಿಡುತ್ತಾ, ಅದನ್ನು ಹತ್ತು ಕಿವಿಗಳಿಗೂ ಸುರಿದು ಸಂತೋಷಪಡುವ ಮಂದಿ ಒಬ್ಬರೇ, ಇಬ್ಬರೇ?
ರಾಜಕೀಯ ಕ್ಷೇತ್ರವನ್ನು ಗಮನಿಸಿ. ನಿತ್ಯ ಪತ್ರಿಕೆಗಳಲ್ಲಿ, ವಾಹಿನಿಗಳಲ್ಲಿ ಸದಾ ಸುದ್ದಿಯಲ್ಲಿರುವ ‘ಪರನಿಂದಾ ಶೂರರು’ ಎಷ್ಟಿಲ್ಲ? ಎದುರಿಗೆ ಆಪ್ತವಾಗಿ ಮಾತನಾಡುತ್ತಾರೆ. ಸ್ನೇಹಿತನಂತೆ ವರ್ತಿಸುತ್ತಾರೆ. ಅದೇ ವ್ಯಕ್ತಿ ಒಂದೈದು ನಿಮಿಷ ಕಳೆದರೆ ಸಾಕು, ಗೋಸುಂಬೆಯಂತೆ ಬಣ್ಣ ಬದಲಿಸಿಕೊಳ್ಳುತ್ತಾರೆ. ಇವರ ಪದಕೋಶದಲ್ಲಿ ‘ನಿಂದ್ಯ’ ಪದವೇ ಇಲ್ಲ! ರಾಜ್ಯ, ರಾಷ್ಟ್ರದ ರಾಜಕಾರಣದಲ್ಲಿರುವ ಪರನಿಂದಾ ಶೂರರನ್ನು ನೋಡುತ್ತಾ, ಸಮಾಜದಲ್ಲಿ ಶೂರರು ಸೃಷ್ಟಿಯಾಗಿದ್ದಾರೆ, ಆಗುತ್ತಿದ್ದಾರೆ. ಹತ್ತು ಮಂದಿ ಒಟ್ಟು ಸೇರಿದರೆ ಸಾಕು, ಮತ್ತೊಬ್ಬರ ಚಾರಿತ್ರ್ಯವನ್ನು ಸಂಶಯಿಸುತ್ತಾ, ವೃತ್ತಿಯನ್ನು ಗೇಲಿ ಮಾಡುತ್ತಾ, ಕುಟುಂಬವನ್ನು ಹಳಿಯುತ್ತಾ ಇರುತ್ತಾರೆ. ಅದನ್ನವರು ‘ಭೂಷಣ’ ಎಂದು ಗ್ರಹಿಸಿಕೊಂಡಿರುತ್ತಾರೆ.
ಇನ್ನು ‘ಪರಹಿತವನ್ನು ಬಯಸುವವನು ಅಭಿವಂದನೆಗೆ ಪಾತ್ರನಾಗುತ್ತಾನೆ’. ಹೌದಲ್ಲಾ.. ಪರರ ಹಿತಾಕಾಂಕ್ಷಿಯಾಗಿರುವ ಮಂದಿ ಸಮಾಜದಲ್ಲಿದ್ದಾರೆ. ಅವರು ಮುನ್ನಲೆಗೆ ಬರುವುದಿಲ್ಲ. ಸಾಧನೆ ಸುದ್ದಿಯಾಗುವುದಿಲ್ಲ. ಸಾಮಾಜಿಕ ಸ್ವಾಸ್ಥ್ಯದತ್ತ ಅವರ ಲಕ್ಷ್ಯ. ಕೊರೊನಾ ಕಾಲಘಟ್ಟದಲ್ಲಿ ಪರಹಿತವನ್ನು ಬಯಸುವ ಜ್ಞಾತ, ಅಜ್ಞಾತ ವ್ಯಕ್ತಿಗಳ ಸೇವೆಯನ್ನು ಗಮನಿಸಿದ್ದೇವೆ. ಆದರೆ ಗುರುತಿಸಲಿಲ್ಲ. ನನ್ನ ಒಂದು ಘಟನೆಯನ್ನು ಹೇಳಿಕೊಂಡರೆ ದಾಷ್ಟ್ರ್ಯ ಆಗಲಾರದು ತಾನೆ.
ಕೊರೊನಾ ಸಂದರ್ಭ. ಕಚೇರಿಯಲ್ಲಿ ಚಿಕ್ಕ ಪುಟ್ಟ ಕೆಲಸಗಳನ್ನು ನಿರ್ವಹಿಸುತ್ತಿದ್ದೆ. ಓರ್ವ ಅಜ್ಞಾತ ವ್ಯಕ್ತಿ ಬಂದು ‘ಯಜಮಾನ್ರು ಕೊಟ್ಟಿದ್ದಾರೆ’ ಎಂದು ಕವರನ್ನು (ಲಕೋಟೆ) ಕೈಗಿತ್ತು ಹೊರಟು ಹೋದರು. ಬಿಡಿಸಿ ನೋಡಿದರೆ ಐದು ಸಾವಿರ ರೂಪಾಯಿ. ಕವರಿನಲ್ಲಿ ನೀಡಿದವರ ಹೆಸರು ಇದ್ದಿರಲಿಲ್ಲ. ತಂದವರ ಪರಿಚಯವೂ ಇಲ್ಲ. ಯಾರೂಂತ ಗೊತ್ತಿಲ್ಲ. ‘ಇಂತಹ ಧರ್ಮತ್ಮರು ಯಾರು’ ಎಂದು ತಲೆಕೆರೆದುಕೊಳ್ಳುತ್ತಿದ್ದೆ. ಕೊನೆಗೂ ಇದು ‘ಯಕ್ಷಪ್ರಶ್ನೆ’ಯಾಗಿಯೇ ಉಳಿಯಿತು. ಬಹುಶಃ ಕೊರೊನಾ ತಂದಿತ್ತ ಆರ್ಥಿಕ ಸಂಕಷ್ಟವನ್ನು ಗ್ರಹಿಸಿ ಉದಾರತೆಯಿಂದ ನೀಡಿದ ಆ ಮನಸ್ಸಿಗೆ ಶರಣು. ನನಗೊಬ್ಬನಿಗೆ ಮಾತ್ರವಲ್ಲ, ಬೇರೆಯವರಿಗೂ ನೀಡಿರಬಹುದು. ಹೆಸರಿನ ಮೋಹವಿಲ್ಲದ ಈ ಅಜ್ಞಾತ ವ್ಯಕ್ತಿಯ ‘ಪರಹಿತದ’ ವಾಂಛೆ ಇದೆಯಲ್ಲಾ ಗ್ರೇಟ್.
ಯಕ್ಷನ ಇನ್ನೊಂದು ಪ್ರಶ್ನೆಗೆ ಧರ್ಮರಾಯನ ಉತ್ತರ ನೋಡಿ, ‘ಕೊಟ್ಟ ದಕ್ಷಿಣೆಯಿಂದ ವಿಪ್ರರು ತೃಪ್ತರಾಗದಿದ್ದಲ್ಲಿ ಯಜ್ಞ ನಿಷ್ಫಲವಾಗುತ್ತದೆ.’ ಮಾಡಿದ ಕರ್ಮಕ್ಕೆ ನೀಡುವ ಪ್ರತಿಫಲ ‘ದಕ್ಷಿಣೆ’. ಇದನ್ನು ಸಂಬಳ, ಸಂಭಾವನೆ ಎಂದು ಧಾರ್ಮಿಕತೆಯಲ್ಲಿ ಶ್ರದ್ಧೆಯಿದ್ದ ಯಾರೂ ಹೇಳುವುದಿಲ್ಲ. ದಕ್ಷಿಣೆ ಮೊತ್ತ ಎಷ್ಟು? ಆಯಾಯ ಕಾಲಘಟ್ಟದ ಸ್ಥಿತಿ-ಗತಿಯನ್ನು ಲಕ್ಷಿಸಿ ನಿರ್ಧಾರವಾಗುತ್ತದೆ. ಕೊಡುವಾತನ ನಿರ್ಮಲ ಮನಸ್ಥಿತಿ ಮೊತ್ತವನ್ನು ನಿರ್ಧರಿಸುತ್ತದೆ. ಹಾಗೆಂತ ‘ತನಗಿಷ್ಟು ಸಿಗಲೇ ಬೇಕು’ ಎನ್ನಬಾರದು. ಹಾಗಾದರೆ ಅದು ‘ಸಂಬಳ’ವಾಗುತ್ತದೆ. ಸಾಮಾಜಿಕ ಸ್ವಾಸ್ಥ್ಯವನ್ನು ಬಯಸುವ, ತನ್ನ ಕುರಿತಾಗಿ ‘ಅತಿ ಮೋಹ’ ಇಲ್ಲದ, ತಾನು ಕಲಿತ ವಿದ್ಯೆಯನ್ನು ಗೌರವಿಸುವ ವಿಪ್ರ, ತನಗೆ ಸಂದ ದಕ್ಷಿಣೆಯನ್ನು ತೃಪ್ತ ಭಾವದಿಂದ ಸ್ವೀಕರಿಸುತ್ತಾರೆ. ಈ ತೃಪ್ತ ಭಾವವೇ ಯಜ್ಞದ ಯಶಸ್ಸು.
ಹೀಗೆ ‘ಯಕ್ಷ ಪ್ರಶ್ನೆ’ಗಳಿಗೆ ಧರ್ಮರಾಯನ ಮೂಲಕ ವ್ಯಾಸ ಮಹರ್ಷಿಗಳು ಉತ್ತರ ಹೇಳಿಸಿದ್ದಾರೆ. ಇದು ಬದುಕಿಗೆ ‘ಬೋಧನೆ’ಯಾಗಿದೆ. ಓದಿ ಬಿಡುವಂತಹುದಲ್ಲ. ಮನನಿಸಬೇಕಾದ ಪಠ್ಯ.
ವರ್ತಮಾನದಲ್ಲಿ ನಾವು ಬಳಸುವ ‘ಯಕ್ಷಪ್ರಶ್ನೆ’ ಪದವು ಬೇಕಾಬಿಟ್ಟಿಯಾಗಿದೆ. ಯಕ್ಷನು ಮುಂದಿಟ್ಟ ಸಮಸ್ಯೆಗಳ ಗೂಡಿನಂತಿರುವ ಪ್ರಶ್ನೆಗಳಿಗೆ ಧರ್ಮರಾಯ ಉತ್ತರ ನೀಡಿದ್ದಾನೆ.
ಭಾರತದೊಳಗಣ ‘ಯಕ್ಷಪ್ರಶ್ನೆ’ : ಪಾಂಡವರ ವನವಾಸದ ಸಂದರ್ಭ. ಒಂದಿವಸ ಧರ್ಮರಾಯನಲ್ಲಿ ಬ್ರಾಹ್ಮಣನೋರ್ವ “ನನ್ನ ಅಗ್ನಿಹೋತ್ರದ ಅರಣಿ, ಮಂಥನ ದಂಡವನ್ನು ಮರಕ್ಕೆ ತೂಗುಹಾಕಿದ್ದೆ. ಜಿಂಕೆಯೊಂದು ಮರಕ್ಕೆ ಮೈಯುಜ್ಜಿಕೊಳ್ಳುತ್ತಿದ್ದಾಗ ಅದರ ಕೊಂಬಿಗೆ ಸಿಕ್ಕಿತು. ಬಿಡಿಸಲು ಯತ್ನಿಸಿದಾಗ ಜಿಂಕೆಯು ಓಡಿಹೋಯಿತು. ಅರಣಿ, ಮಂಥನವಿಲ್ಲದೆ ಅಗ್ನಿಕಾರ್ಯವನ್ನು ಹೇಗೆ ಮಾಡಲಿ?” ಎಂದು ದುಃಖಿಸಿದ.
ಪಾಂಡವರೈವರೂ ಆಯುಧಪಾಣಿಗಳಾಗಿ ಜಿಂಕೆಯನ್ನು ಬೆನ್ನಟ್ಟಿದರು. ಕಾಡು-ಮೇಡುಗಳಲ್ಲಿ ಅಲೆಸಿದ ಜಿಂಕೆಗೆ ಬಾಣ ಪ್ರಯೋಗ ಮಾಡಿದರೂ ಫಲಪ್ರದವಾಗಲಿಲ್ಲ. ಮಾರ್ಗಾಯಾಸದಿಂದ ಬಳಲಿದರು. ತೃಷೆಯೂ ಅಧಿಕವಾಗತೊಡಗಿತು. ನಕುಲನು ಅಣ್ಣಂದಿರ ತೃಷೆಗಾಗಿ ನೀರು ತರಲು ತೆರಳಿದನು. ಒಂದು ಸರೋವರಕ್ಕಿಳಿದು ಇನ್ನೇನು ನೀರು ಕುಡಿಯಬೇಕು ಎನ್ನುವಾಗ ಅವ್ಯಕ್ತ ದನಿಯೊಂದು, ‘ನನ್ನ ಪ್ರಶ್ನೆಗೆ ಉತ್ತರ ಕೊಟ್ಟು, ನಂತರ ನೀರು ಕುಡಿಯಬಹುದು.” ಎಂದಿತು. ನಕುಲನು ಲೆಕ್ಕಿಸದೆ ನೀರು ಕುಡಿದ, ಬಳಿಕ ಶವವಾದ! ಇವನನ್ನು ಹುಡುಕಿಕೊಂಡು ಬಂದ ಸಹದೇವ, ಅರ್ಜುನ, ಭೀಮನಿಗೂ ಇದೇ ಗತಿ.
ಕೊನೆಗೆ ಧರ್ಮರಾಯನು ಸಹೋದರರನ್ನು ಹುಡುಕುತ್ತಾ ಸರೋವರದ ಬಳಿಗೆ ಬರುತ್ತಾನೆ. ಶವವಾಗಿ (ಮೂರ್ಛಿತರಾಗಿ) ಬಿದ್ದಿದ್ದ ತಮ್ಮಂದಿರ ಅವಸ್ಥೆಯನ್ನು ನೋಡಿ ದುಃಖಿಸಿದ. ಸರೋವರದ ನೀರನ್ನು ಕುಡಿದು ಇವರೆಲ್ಲಾ ಶವವಾಗಿದ್ದಾರೆಂದು ಊಹಿಸಿದ ಧರ್ಮಜನು ತಮ್ಮಂದಿರ ಹಾದಿಯೇ ನನಗಾಗಲಿ ಎಂದು ನೀರು ಕುಡಿಯಲು ಮುಂದಾದನು. ಆಗ ಅವ್ಯಕ್ತ ಧ್ವನಿಯೊಂದು “ಈ ಸರೋವರ ನನ್ನದು, ನನ್ನ ಅಪ್ಪಣೆಯಿಲ್ಲದೆ ನೀರು ಕುಡಿಯುವಂತಿಲ್ಲ. ನನ್ನ ಪ್ರಶ್ನೆಗಳಿಗೆ ಉತ್ತರ ಕೊಡು.” ಎಂದಿತು. ಧರ್ಮರಾಯನ ಕೋರಿಕೆಯಂತೆ ಆ ಧ್ವನಿಗೆ ಕಾರಣನಾದ ಯಕ್ಷನು ಪ್ರತ್ಯಕ್ಷನಾದ. ಆತನ ಪ್ರಶ್ನೆಗಳಿಗೆಲ್ಲಾ ಧರ್ಮಸೂಕ್ತವಾದ ಉತ್ತರಗಳನ್ನು ನೀಡಿದ್ದರಿಂದ ಯಕ್ಷನು ಪ್ರಸನ್ನನಾಗಿ ಭೀಮ, ಅರ್ಜುನ, ನಕುಲ, ಸಹದೇವರನ್ನು ಬದುಕಿಸಿದ.
“ನಾನೇ ಯಮಧರ್ಮ. ದುರ್ಯೋಧನನು ಶಕುನಿಯ ಪ್ರೇರಣೆಯಂತೆ ಮಾಂತ್ರಿಕರೊಬ್ಬರಿಂದ ಆಭಿಚಾರಿಕ ಪ್ರಯೋಗ ಮಾಡಿ, ಭೂತವೊಂದನ್ನು ಸೃಷ್ಟಿಸಿ ನಿಮ್ಮ ನಾಶಕ್ಕೆ ಯತ್ನಿಸುತ್ತಿದ್ದ. ಆ ಭೂತದಿಂದ ನಿಮ್ಮನ್ನು ರಕ್ಷಿಸಲು ಹೀಗೆಲ್ಲಾ ಮಾಡಬೇಕಾಯಿತು. ನಿಮ್ಮನ್ನು ತಿನ್ನಲಾಗದ ಭೂತ ಮಾಂತ್ರಿಕನನ್ನೇ ತಿಂದು ತೇಗಿತು. ನಾನೇ ಜಿಂಕೆಯ ರೂಪದಿಂದ ಬಂದವನು. ಈ ಅರಣಿ ಮತ್ತು ದಂಡವನ್ನು ಬ್ರಾಹ್ಮಣನಿಗೆ ನೀಡು. ನಿಮಗೆ ಶುಭವಾಗಲಿ” ಎಂದು ಅಂತರ್ಧಾನನಾದ. ಹೀಗೆ ಯಕ್ಷನ ಕ್ಷಿಷ್ಟಕರವಾದ ಪ್ರಶ್ನೆಗಳಿಗೆ ಧರ್ಮರಾಯನು ಉತ್ತರಿಸಿದ ಆ ಸನ್ನಿವೇಶವು ‘ಯಕ್ಷಪ್ರಶ್ನೆ’ಯಾಗಿ ಪ್ರಸಿದ್ಧವಾಗಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement

