ತಾರಸಿಯಲ್ಲಿ 150ಕ್ಕೂ ಹೆಚ್ಚು ಗಿಡಗಳನ್ನು ಬೆಳೆಸಿ, ಅವುಗಳಿಂದ ನೈಸರ್ಗಿಕ ದಿನಬಳಕೆಯ ಉತ್ಪನ್ನಗಳನ್ನು ತಯಾರಿಸುತ್ತಿರುವ ಬಳ್ಳಾರಿಯ ಆರ್.ಜೆ. ಸುಜಾತ.
ನಗರ ಪ್ರದೇಶಗಳಲ್ಲಿ ಜಾಗದ ಕೊರತೆಯಿಂದ ಹಸಿರು ಪರಿಸರ ನಿರ್ಮಿಸುವುದು ಸವಾಲಿನ ಕೆಲಸ. ಆದರೆ ಮನೆಯ ಮೇಲ್ಛಾವಣಿಯನ್ನೇ ಹಸಿರು ತೋಟವನ್ನಾಗಿ ಪರಿವರ್ತಿಸಿರುವ ಬಳ್ಳಾರಿಯ ಗೃಹಿಣಿಯೊಬ್ಬರು, ಅಲ್ಲಿ ಬೆಳೆದ ಔಷಧಿ ಸಸ್ಯಗಳು, ಹೂವು ಮತ್ತು ಇತರ ಸಸ್ಯಗಳಿಂದ ದಿನನಿತ್ಯ ಬಳಕೆಯ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುವ ಮೂಲಕ ಸ್ವಾವಲಂಬನೆಯ ಹಾದಿ ಕಂಡುಕೊಂಡಿದ್ದಾರೆ.
ಬಳ್ಳಾರಿ ನಗರದ ಆರ್.ಜೆ. ಸುಜಾತ ಅವರು ತಮ್ಮ ಮನೆಯ ತಾರಸಿಯಲ್ಲಿ 150ಕ್ಕೂ ಹೆಚ್ಚು ವಿವಿಧ ಜಾತಿಯ ಸಸ್ಯಗಳನ್ನು ಬೆಳೆಸಿದ್ದಾರೆ. ಕೇವಲ ಹಸಿರು ಪರಿಸರ ನಿರ್ಮಿಸುವುದಕ್ಕೆ ಸೀಮಿತವಾಗದೆ, ಸಸ್ಯಗಳಿಂದಲೇ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿ ಸಣ್ಣ ಉದ್ಯಮವನ್ನಾಗಿ ರೂಪಿಸಿಕೊಂಡಿದ್ದಾರೆ.
ತಾರಸಿಯೇ ಹಸಿರು ಪ್ರಯೋಗಾಲಯ : ಸುಜಾತ ಅವರ ಮನೆಯ ಮೇಲ್ಛಾವಣಿಯಲ್ಲಿ ಅಲಂಕಾರಿಕ ಬೋನ್ಸಾಯಿ ಗಿಡಗಳು, ಕಮಲದ ಹೂವು, ನಿಂಬೆ, ನೇರಳೆ, ಸಪೋಟ, ಪೇರಲ, ನುಗ್ಗೆ, ಕರಿಬೇವು ಸೇರಿದಂತೆ ವಿವಿಧ ಹಣ್ಣಿನ ಮತ್ತು ತರಕಾರಿ ಸಸ್ಯಗಳಿವೆ. ತುಳಸಿ, ಅಲೋವೆರಾ, ಬೇವು, ಅರಿಶಿನ ಸೇರಿದಂತೆ ಹಲವು ಔಷಧಿ ಸಸ್ಯಗಳನ್ನೂ ಬೆಳೆಸಿದ್ದಾರೆ.
ವಿವಿಧ ಬಗೆಯ ಹೂವು, ಅಲಂಕಾರಿಕ ಗಿಡಗಳು ಮತ್ತು ಔಷಧಿ ಸಸ್ಯಗಳಿಂದ ಮನೆಯ ಮೇಲ್ಛಾವಣಿ ಹಸಿರು ತಾಣವಾಗಿ ರೂಪುಗೊಂಡಿದೆ. ನಗರ ಜೀವನದ ನಡುವೆ ಪ್ರಕೃತಿಯೊಂದಿಗೆ ಬೆರೆಯುವ ಅವಕಾಶವನ್ನು ಈ ತೋಟ ಒದಗಿಸಿದೆ.
ಗೋವಿನ ಉತ್ಪನ್ನಗಳಿಂದ ದಿನಬಳಕೆಯ ವಸ್ತುಗಳು : ತೋಟದಲ್ಲಿ ಬೆಳೆದ ಸಸ್ಯಗಳ ಎಲೆ, ಹೂವು, ಬೇರುಗಳು ಹಾಗೂ ಗೋವಿನ ಉತ್ಪನ್ನಗಳನ್ನು ಬಳಸಿಕೊಂಡು ಸುಜಾತ ಅವರು ವಿವಿಧ ವಸ್ತುಗಳನ್ನು ತಯಾರಿಸುತ್ತಿದ್ದಾರೆ.
ಆಕಳ ಸಗಣಿಯಿಂದ ಪೂಜೆಗೆ ಬಳಸುವ ದೀಪಗಳು ಮತ್ತು ದೇವರ ಅಲಂಕಾರಿಕ ಮೂರ್ತಿಗಳನ್ನು ತಯಾರಿಸುತ್ತಿದ್ದಾರೆ. ಇದರ ಜತೆಗೆ ಮನೆ ಸ್ವಚ್ಛತೆಗೆ ಬಳಸುವ ಫಿನಾಯಿಲ್, ಸ್ನಾನದ ಸೋಪು, ಚರ್ಮದ ಆರೈಕೆಗೆ ಗಿಡಮೂಲಿಕೆ ಎಣ್ಣೆ ಮತ್ತು ಕೂದಲಿನ ಆರೈಕೆಗೆ ಆಯುರ್ವೇದ ಶಾಂಪೂಗಳನ್ನೂ ಸಿದ್ಧಪಡಿಸುತ್ತಿದ್ದಾರೆ.
ಈ ಉತ್ಪನ್ನಗಳ ತಯಾರಿಕೆಯಲ್ಲಿ ಕೃತಕ ರಾಸಾಯನಿಕಗಳನ್ನು ಬಳಸದೆ, ಸಸ್ಯಜನ್ಯ ಮತ್ತು ಗೋವಿನ ಉತ್ಪನ್ನಗಳನ್ನು ಆಧರಿಸಿದ ತಯಾರಿಕಾ ವಿಧಾನವನ್ನು ಅನುಸರಿಸುತ್ತಿರುವುದು ವಿಶೇಷ.
ಕುಟುಂಬದ ಸಹಕಾರವೇ ಉದ್ಯಮದ ಶಕ್ತಿ : ಸುಜಾತ ಅವರ ಪತಿ ಬಸವರಾಜ ಗೌಡ ಅವರು ಮನೆಯ ಮೇಲ್ಛಾವಣಿಯಲ್ಲಿ ಸುಮಾರು 150ಕ್ಕೂ ಹೆಚ್ಚು ಸಸಿಗಳನ್ನು ಬೆಳೆಸಲಾಗಿದೆ. ಅವುಗಳಿಗೆ ನೀರು ಹಾಕುವುದು, ಸ್ವಚ್ಛಗೊಳಿಸುವುದು ಮತ್ತು ಆರೈಕೆ ಮಾಡುವುದು ದಿನನಿತ್ಯದ ಚಟುವಟಿಕೆಯಾಗಿದೆ. ಇದರಿಂದ ಪ್ರತ್ಯೇಕವಾಗಿ ವ್ಯಾಯಾಮಕ್ಕೆ ತೆರಳುವ ಅಗತ್ಯವಿಲ್ಲದೆ ದೈಹಿಕ ಚಟುವಟಿಕೆಯೂ ಸಾಧ್ಯವಾಗುತ್ತಿದೆ ಎಂದು ತಿಳಿಸಿದ್ದಾರೆ.
ಮಗ ಅಕ್ಷಯ ಕುಮಾರ್ ಅವರು ಉತ್ಪನ್ನಗಳ ಮಾರಾಟಕ್ಕೆ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಕರ್ನಾಟಕ ಮತ್ತು ಆಂಧ್ರಪ್ರದೇಶದ ಕೆಲವು ಜಿಲ್ಲೆಗಳಿಂದ ಗ್ರಾಹಕರು ಉತ್ಪನ್ನಗಳನ್ನು ಖರೀದಿಸುತ್ತಿದ್ದು, ಇದರಿಂದ ಕುಟುಂಬಕ್ಕೆ ಆರ್ಥಿಕ ಲಾಭ ದೊರೆಯುತ್ತಿದೆ ಎಂದು ಹೇಳಿದ್ದಾರೆ.
ಹಸಿರಿನ ಜತೆಗೆ ಆರೋಗ್ಯಕರ ಬದುಕಿನ ಪ್ರಯತ್ನ : ಸುಜಾತ ಅವರು ಮಾತನಾಡಿ, ತಾರಸಿಯಲ್ಲಿ ವಿವಿಧ ಜಾತಿಯ ಸಸ್ಯಗಳು ಮತ್ತು ಔಷಧಿ ಗಿಡಗಳನ್ನು ಬೆಳೆಸುತ್ತಿದ್ದೇವೆ. ಅವುಗಳಿಂದ ಫಿನಾಯಿಲ್, ದೀಪಗಳು, ಸೋಪು, ಶಾಂಪು ಮತ್ತು ಹೇರ್ ಆಯಿಲ್ ತಯಾರಿಸಲಾಗುತ್ತಿದೆ. ಸಾಧ್ಯವಾದಷ್ಟು ನೈಸರ್ಗಿಕ ಕಚ್ಚಾ ವಸ್ತುಗಳನ್ನು ಬಳಸಿಕೊಂಡು ಉತ್ಪನ್ನಗಳನ್ನು ಸಿದ್ಧಪಡಿಸುವುದು ನಮ್ಮ ಪ್ರಯತ್ನವಾಗಿದೆ ಎಂದು ತಿಳಿಸಿದ್ದಾರೆ.
ಒಟ್ಟಿನಲ್ಲಿ, ಮನೆಯ ಮೇಲ್ಛಾವಣಿಯ ಸಣ್ಣ ಜಾಗವನ್ನೇ ಹಸಿರು ತೋಟವಾಗಿ, ಅದನ್ನೇ ಉತ್ಪಾದನಾ ಕೇಂದ್ರವಾಗಿ ಪರಿವರ್ತಿಸಿಕೊಂಡಿರುವ ಸುಜಾತ ಅವರು ಪರಿಸರ ಸ್ನೇಹಿ ಜೀವನಶೈಲಿ, ಮಹಿಳಾ ಸ್ವಾವಲಂಬನೆ ಮತ್ತು ಕುಟುಂಬದ ಸಹಭಾಗಿತ್ವದ ಉದ್ಯಮಕ್ಕೆ ಮಾದರಿಯಾಗಿದ್ದಾರೆ. ನಗರ ಪ್ರದೇಶಗಳಲ್ಲಿಯೂ ಆಸಕ್ತಿ ಮತ್ತು ಸೃಜನಶೀಲತೆ ಇದ್ದರೆ ಸಣ್ಣ ಜಾಗದಲ್ಲಿ ಹಸಿರು ಪರಿಸರ ನಿರ್ಮಿಸುವುದರ ಜತೆಗೆ ಆದಾಯದ ಅವಕಾಶವನ್ನೂ ಕಂಡುಕೊಳ್ಳಬಹುದು ಎಂಬುದನ್ನು ಅವರ ಪ್ರಯತ್ನ ತೋರಿಸಿಕೊಟ್ಟಿದೆ.
A homemaker from Ballari, R.J. Sujatha, has transformed her rooftop into a green garden with more than 150 varieties of plants, including medicinal herbs, flowers, fruits and ornamental species. Going beyond gardening, she uses plant-based ingredients and cow-derived materials to prepare household products such as soaps, herbal shampoos, hair oils, floor cleaners, traditional lamps and decorative items. Her family supports production and online marketing, with customers from parts of Karnataka and Andhra Pradesh. Her initiative demonstrates how rooftop gardening can support environmental awareness, women’s self-reliance and small-scale entrepreneurship.
ಹೋಟೆಲ್‌ಗಳಲ್ಲಿ ಬಳಕೆಯಾದ ಅಡುಗೆ ಎಣ್ಣೆ ಸಂಗ್ರಹಣೆ ಮತ್ತು ವಿಲೇವಾರಿಗೆ ಮೂರು ತಿಂಗಳೊಳಗೆ ಅಧಿಕೃತ…
ಕೃಷಿ ಕ್ಷೇತ್ರದಲ್ಲಿ ವಾರ್ಷಿಕ ಶೇ.4ಕ್ಕೂ ಅಧಿಕ ಬೆಳವಣಿಗೆ ದಾಖಲಾಗಿದ್ದು, ರೈತರ ಆದಾಯ ಹೆಚ್ಚಿಸಲು…
ಸಾವಯವ ಕೃಷಿ ನಿರ್ದಿಷ್ಟ ಉತ್ಪಾದನಾ ಮಾನದಂಡ ಮತ್ತು ಪ್ರಮಾಣೀಕರಣಕ್ಕೆ ಒತ್ತು ನೀಡಿದರೆ, ಪುನರುತ್ಪಾದಕ…
ಪರಿಸರ ಸಮತೋಲನ ಮತ್ತು ಜೀವವೈವಿಧ್ಯ ಸಂರಕ್ಷಣೆಗೆ ಗಿಡ-ಮರಗಳು ಅತ್ಯಗತ್ಯ ಎಂದು ಕೇಂದ್ರ ಕೃಷಿ…
ಕರ್ನಾಟಕದಾದ್ಯಂತ ಮುಂದಿನ 10 ದಿನ ಒಣಹವೆ ಮುಂದುವರಿಯುವ ಸಾಧ್ಯತೆಯಿದ್ದು, ಉತ್ತರ ಒಳನಾಡಿನಲ್ಲಿ ರಾತ್ರಿ…
ರಾಜ್ಯ ಪೊಲೀಸ್ ಇಲಾಖೆಯ ಕಾನ್ಸ್‌ಟೇಬಲ್‌ಗಳು ಹಾಗೂ ಹೆಡ್ ಕಾನ್ಸ್‌ಟೇಬಲ್‌ಗಳಿಗೆ ನೂತನ ‘ಖಾಕಿ ವಿಜಿಲ್…