ಮೈಸೂರು ದಸರಾ ಎಷ್ಟೊಂದು ಸುಂದರ, ಚೆಲ್ಲಿದೆ ನಗೆಯಾ ಪನ್ನೀರ.. ಈ ಹಾಡು ಯಾರು ಕೇಳಿಲ್ಲ ಹೇಳಿ. ಈ ಹಾಡಿನಷ್ಟೇ ಸುಂದರ ಮೈಸೂರು ದಸರಾ ಕೂಡ. ದಸರಾ ಅಂದ ಕೂಡಲೇ ನಾಡಿನಾದ್ಯಂತ ಅದೇನೋ ಸಂಭ್ರಮ. ದೇವತಾ ಕಾರ್ಯಗಳು ಚಾಲನೆಗೊಳ್ಳುತ್ತವೆ. ಹಾಗೆ ಈ ಬಾರಿಯ ವಿಶ್ವವಿಖ್ಯಾತ ಮೈಸೂರು ದಸರಾಗೆ ದಿನಗಣನೆ ಆರಂಭವಾಗಿದೆ. ನಾಡಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ಪ್ರಮುಖ ಆಕರ್ಷಣೆ ಎಂದರೆ ಅದು ಜಂಬೂ ಸವಾರಿ. ಜಂಬೂ ಸವಾರಿಗೆ 9 ಆನೆಗಳು ಆಯ್ಕೆಯಾಗಿವೆ.
ಮೈಸೂರು ಅರಮನೆ ಸುತ್ತಮುತ್ತ ಡ್ರೋನ್ ಕ್ಯಾಮೆರಾ ಹಾರಾಟವನ್ನು ನಿರ್ಬಂಧಿಸಲಾಗಿದೆ. ಡ್ರೋನ್ ಹಾರಾಟವನ್ನು ನಿರ್ಬಂಧಿಸಿ ಅರಮನೆ ಮಂಡಳಿ ಆದೇಶ ಹೊರಡಿಸಿದೆ. ಕಳೆದ ಕೆಲವು ದಿನಗಳಿಂದ ಅರಮನೆಯ ಸುತ್ತಮುತ್ತ ಡ್ರೋನ್ ಕ್ಯಾಮೆರಾ ಬಳಕೆ ಹೆಚ್ಚಾಗುತ್ತಿದೆ. ಆ ಕಾರಣದಿಂದ ಅರಮನೆ ಮಂಡಳಿ ಡ್ರೋನ್ ಹಾರಾಟವನ್ನು ನಿರ್ಬಂಧಿಸಿದೆ.
ದಸರಾ ಜಂಬೂ ಸವಾರಿಗೆ 9 ಆನೆಗಳು ಆಯ್ಕೆಯಾಗಿವೆ. ಕ್ಯಾಪ್ಟನ್ ಅಭಿಮನ್ಯು, ಭೀಮ, ಮಹೇಂದ್ರ, ಅರ್ಜುನ, ಧನಂಜಯ, ಪಾರ್ಥಸಾರಥಿ, ವಿಜಯ, ಗೋಪಿ, ವಿಜಯಲಕ್ಷ್ಮಿ ಆನೆಗಳು ಆಯ್ಕೆಯಾಗಿವೆ. 9 ಆನೆಗಳ ಪೈಕಿ ಮತ್ತಿಗೋಡು ಆನೆ ಶಿಬಿರದಿಂದ ಅಭಿಮನ್ಯು, ಭೀಮ, ಮಹೇಂದ್ರ, ಬಳ್ಳೆ ಆನೆ ಶಿಬಿರದಿಂದ ಅರ್ಜುನ, ದುಬಾರೆ ಆನೆ ಶಿಬಿರದಿಂದ ಧನಂಜಯ್ ಮತ್ತು ಗೋಪಿ, ರಾಮಪುರ ಆನೆ ಶಿಬಿರದಿಂದ ಪಾರ್ಥಸಾರಥಿ ಜೊತೆಗೆ ಹೆಣ್ಣಾನೆಗಳಾದ ದುಬಾರೆ ಶಿಬಿರದಿಂದ ವಿಜಯ, ಭೀಮನಕಟ್ಟೆ ಆನೆ ಶಿಬಿರದಿಂದ ವಿಜಯಲಕ್ಷ್ಮಿ ಆನೆ ಬರುತ್ತಿವೆ. ಮೈಸೂರು ದಸರಾ ಮಹೋತ್ಸವಕ್ಕೆ ಸಕಲ ತಯಾರಿ ನಡೆಯುತ್ತಿದ್ದು, ಸೆ.1ಕ್ಕೆ ಗಜಪಯಣಕ್ಕೆ ಚಾಲನೆ ದೊರಕಲಿದೆ.
ಸೆ.4ಕ್ಕೆ ಅರಮನೆಗೆ ಆನೆಗಳ ಪ್ರವೇಶವಾಗಲಿದೆ. ಜಂಬೂಸವಾರಿ ಮೆರವಣಿಗೆಗೆ ಆನೆಗಳ ಆಯ್ಕೆ ಮಾಡಿದ್ದಾರೆ. ಸದ್ಯ ಈ 9 ಆನೆಗಳು ಬರಲಿವೆ. ಜಂಬೂ ಸವಾರಿ ಮೆರವಣಿಗೆಗೆ ಆಯ್ಕೆ ಮಾಡಿರುವ ಆನೆಗಳಿಗೆ ವಿವಿಧ ರೀತಿ ಪರೀಕ್ಷೆಗಳನ್ನು ಮಾಡಿದ್ದಾರೆ. ಆನೆಗಳನ್ನು ತಯಾರು ಮಾಡ್ತಿದ್ದಾರೆ. ಸೆಪ್ಟೆಂಬರ್ 1ರಂದು ವೀರನಹೊಸಳ್ಳಿಯಲ್ಲಿ ಗಜಪಯಣಕ್ಕೆ ಮುಹೂರ್ತ ನಿಗದಿಯಾಗಿದ್ದು, ಸಾಂಪ್ರದಾಯಿಕವಾಗಿ ಗಜಪಡೆಗೆ ಜಿಲ್ಲಾಡಳಿತ ಸ್ವಾಗತ ಕೋರಲಿದೆ. ಸೆಪ್ಟೆಂಬರ್ 4ರಂದು ಗಜಪಡೆ ಅರಮನೆ ಪ್ರವೇಶ ಮಾಡಲಿದೆ. ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ ಜಂಬೂಸವಾರಿ ಮೆರವಣಿಗೆ ನಡೆಯಲಿದೆ.
ವಿಶ್ವವಿಖ್ಯಾತ ಮೈಸೂರು ಅರಮನೆ ಸುತ್ತಮುತ್ತಲಿನ ಪ್ರದೇಶವನ್ನು ಹಳದಿ ವಲಯe ಎಂದು ಗುರುತು ಮಾಡಲಾಗಿದೆ. ಅರಮನೆ ಮಂಡಳಿಯ ಪೂರ್ವಾನುಮತಿ ಇಲ್ಲದೆ ಹಳದಿ ವಲಯದ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಡ್ರೋನ್ ಕ್ಯಾಮೆರಾ ಬಳಸುವಂತಿಲ್ಲ. ಹಳದಿ ವಲಯದಲ್ಲಿ ಅನುಮತಿ ಇಲ್ಲದೇ ಡ್ರೋನ್ ಬಳಸಿದರೆ, ಸಂಬಂಧಪಟ್ಟವರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದ್ದಾರೆ. ದೇಶ, ವಿದೇಶಗಳ ಪ್ರವಾಸಿಗರು ಪ್ರತಿನಿತ್ಯ ಅರಮನೆ ವೀಕ್ಷಣೆ ಬರುವುದರಿಂದ ಭದ್ರತಾ ದೃಷ್ಟಿಯಿಂದ ಅರಮನೆ ಆವರಣ ಹಳದಿ ವಲಯಕ್ಕೆ ಸೇರ್ಪಡೆ ಮಾಡಲಾಗಿದೆ. ಅರಮನೆಯ ಮಂಡಳಿಯಿಂದ ಪೂರ್ವ ಅನುಮತಿಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು. ನಂತರ ಡ್ರೋನ್ ಕ್ಯಾಮೆರಾ ಹಾರಾಟ ಮಾಡಬಹುದಾಗಿದೆ. ಅಲ್ಲದೇ ದಸರಾ ತಯಾರಿಗಳು ಸಹ ನಡೆಯುತ್ತಿವೆ. ಅದಕ್ಕೆ ಮುನ್ನೆಚ್ಚರಿಕಾ ಕ್ರಮವಾಗಿ ಡ್ರೋನ್ ಹಾರಾಟವನ್ನು ನಿರ್ಬಂಧಿಸಲಾಗಿದೆ.