ನಮಗೆ ಸಂಬಂಧಿಸಿದ್ದ ಅಲ್ಲ, ಕಾನೂನು ಇದೆ, ಇಲಾಖೆಗಳು ಇವೆ, ತನಿಖೆಯಾಗುತ್ತಿದೆ. ಹೀಗಾಗಿ ಮಾತನಾಡಬಾರದು, ಸರಿಯಾದ ತನಿಖೆಯಾಗಿ ಇಡೀ ಪ್ರಕರಣ ಮುಕ್ತಾಯವಾಗಬೇಕು. ನಮ್ಮ ಮುಂದಿನ ಪೀಳಿಗೆಯವರೆಗೆ ಇಂತಹದ್ದೊಂದು ಅಪವಾದ, ಸಂದೇಹ ಇರಬಾರದು. ಏಕೆಂದರೆ ಅದೊಂದು ಧರ್ಮದ ನೆಲೆ, ನಂಬಿಕೆಯ ಕ್ಷೇತ್ರ. ಒಂದು ಕಾಲದಲ್ಲಿ ಹೆಸರು ಹೇಳಲೇ ಭಯ ಇತ್ತು. ಹಾಗಂತ ಅದು ವ್ಯಕ್ತಿಗಳ ಮೇಲಿನ ಭಯ ಅಲ್ಲ, ಭಕ್ತಿಯೂ ಅಲ್ಲ. ದೇವರ ಮೇಲಿನ ನಂಬಿಕೆ, ಶಕ್ತಿಯ ಮೇಲಿನ ನಂಬಿಕೆ. ಅದಕ್ಕೇ “ಮಾತು ಬಿಡ ಮಂಜುನಾಥ” ಅನ್ನುತ್ತಿದ್ದರು. ಈ ಕಾರಣದಿಂದ ಮಂಜುನಾಥ ಅನ್ನಬೇಕಾಗಿಲ್ಲ, ಧರ್ಮಸ್ಥಳ ಎಂದರೇ ಸಾಕಿತ್ತು. “ಧರ್ಮಸ್ಥಳ” ಎನ್ನುವುದು ಒಂದು ಗ್ರಾಮವಾದರೂ ಅದೊಂದು ಶಕ್ತಿಯ ಕ್ಷೇತ್ರ ಅಂತಲೇ ಹೆಸರು. ಧರ್ಮಸ್ಥಳ ಅಂತಲ್ಲ, ಸುಬ್ರಹ್ಮಣ್ಯ, ಕಟೀಲು, ಕೊಲ್ಲೂರು ಇದೆಲ್ಲವೂ ಅದೇ ಹೆಸರಿನಿಂದಲೇ ಗುರುತಿಸಿಕೊಂಡಿದೆ.ದೇವರ ಊರೇ ಆ ಗ್ರಾಮ.
ಮಾತಿನ ನಡುವೆ ಚರ್ಚೆ ಬಂದರೆ, ಸತ್ಯಕ್ಕೆ ದೂರವಾದ ಸಂಗತಿಗಳು ಚರ್ಚೆಯಾದರೆ “ಧರ್ಮಸ್ಥಳಕ್ಕೆ ಇಡುತ್ತೇನೆ” “ಮಂಜುನಾಥ ನೋಡಿದಂತೆ ಇರಲಿ” ಎನ್ನುವುದು ಇತ್ತು. ಹಾಗೊಂದು ವೇಳೆ ಹೇಳಿಕೊಂಡರೆ ದೇವರ ಮುಂದೆ ನಿಂತು ತಪ್ಪು ಕಾಣಿಕೆಯನ್ನು ಹಾಕಲೇಬೇಕು. ಇಲ್ಲದಿದ್ದರೆ ತಲೆ ತಲಾಂತರಕ್ಕೆ ದೋಷ ಇದೆ ಎನ್ನುವುದು ನಂಬಿಕೆ. ಇಂತಹದ್ದು ಆಣೆ ರಾಜಕೀಯದಲ್ಲೂ ನಡೆದಿದೆ. ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ಅವರ ಪ್ರಕರಣ ಭಾರೀ ಚರ್ಚೆಯಾಗಿತ್ತು.ಆಣೆ ಪ್ರಮಾಣ ಮಾಡಿಯಾಗಿತ್ತು, ಅದರ ಮುಕ್ತಾಯವೂ ಹಾಗೇ ಭಾರೀ ಸುದ್ದಿಯಾಯಿತು. ಆಗ ವೀರೇಂದ್ರ ಹೆಗ್ಗಡೆಯವರೂ ಸಾರ್ವಜನಿಕರಿಗೆ ಹೇಳಿದ್ದರು, “ಮಾತಿನ ನಡುವೆ ದೇವರ ಹೆಸರನ್ನು ತರಬೇಡಿ, ತಾಳ್ಮೆಯಿಂದ ಇರಿ, ಕೆಟ್ಟದ್ದಾಗಿ ನಿಂದಿಸಬೇಡಿ, ಒಂದು ವೇಳೆ ನಿಂದಿಸುವ ವೇಳೆಯಲ್ಲೂ ಎಲ್ಲೂ ನಂಬಿಕೆಯನ್ನು ತರಬೇಡಿ, ಆಣೆ ಹಾಕಬೇಡಿ” ಎಂದು ಹೇಳಿದ್ದರು. ಅಂದರೆ ಮಂಜುನಾಥನ ಸಾನ್ನಿಧ್ಯವೇ ಅಷ್ಟು ಪುಣ್ಯ.
ಈಚೆಗೆ ಕೆಲವು ದಿನಗಳಿಂದ ಬೇಡ ಬೇಡ ಎಂದರೂ ಸೋಶಿಯಲ್ ಮೀಡಿಯಾದಲ್ಲಿ “ಧರ್ಮಸ್ಥಳ” ಪ್ರಕರಣವೇ ಕಾಣುತ್ತಿದೆ. ಒಂದು ದಿನ ಒಂದು ವಿಡಿಯೋ ನೋಡಿದೆ, ಕೆಲವು ಕಡೆ ನನಗೆ ಪರಿಚಯ ಇರುವ ಕೆಲವರ ಒಂದೆರಡು ಪೋಸ್ಟ್‌ಗಳಿಗೆ ಪ್ರತಿಕ್ರಿಯೆ ನೀಡಿದ್ದೆ ಕೂಡಾ. ಆ ದಿನದಿಂದ ನಮಗೆ ಬೇಡವೆಂದರೂ ಆ ಪ್ರಕರಣದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಕಾಣುತ್ತಿದೆ. ದೇವರು ಹಾಗೂ ಧರ್ಮ ಬಹಳ ಸೂಕ್ಷ್ಮ ವಿಷಯ. ತುಂಬಾ ಸಲ ಮೌನವಾಗಿರುವ ದೇವರು ಮಾತನಾಡಿಬಿಡಬೇಕು ಅಂತ ಈ ವಿಡಿಯೋಗಳನ್ನು ನೋಡುವಾಗ ಅನಿಸಿದೆ. ಏಕೆಂದರೆ ಯಬಾ… ಯಬಾ… ! ಬಹಳ ಕೆಟ್ಟ ಪದಪ್ರಯೋಗಗಳು ನಡೆಯುತ್ತಿವೆ. ಇವರಿಗೆ ಯಾರೂ ಏನೂ ಹೇಳುತ್ತಿಲ್ಲವಾ…? ಏಕೆ ಎಲ್ಲರೂ ಮೌನವಾಗಿದ್ದಾರೆ ಅಂತ ಅನಿಸಿದೆ. ದೇವರೇ ಈ ವಿಡಿಯೋಗಳು ಮಕ್ಕಳಿಗೆ ಕಾಣದಿರಲಿ ಅಂತ ಯೋಚಿಸುತ್ತಿದ್ದೆ, ನಿನ್ನೆ ಮಕ್ಕಳು ಕೂಡಾ ಇದೆಂತ ಧರ್ಮಸ್ಥಳದ ಕತೆ ಎನ್ನಲು ಶುರುಮಾಡಿದ್ದಾರೆ. ಹೌದಾ… ಹಾಗಾ… ಹೀಗಾ… ಎನ್ನುತ್ತಾರೆ. ಈ ಸೋಶಿಯಲ್ ಮೀಡಿಯಾ ಇಷ್ಟು ಪ್ರಭಾವ ಬೀರುತ್ತಿದೆ.
ನಮಗೆ ಯಾರ ಪರವೂ ಅಗತ್ಯವಿಲ್ಲ. ಏಕೆಂದರೆ ವ್ಯಕ್ತಿ ಪೂಜೆ ಮಾಡಬಾರದು ಎನ್ನುವುದನ್ನು ತಿಳಿದುಕೊಂಡ ಬಳಿಕ, ಎಲ್ಲೇ ಇರಲಿ, ಯಾವುದೇ ಇರಲಿ, ಯಾರೇ ಇರಲಿ ವ್ಯಕ್ತಿ ಪೂಜೆಯನ್ನು ಮಾಡುವುದನ್ನು ನಿಲ್ಲಿಸಿಯಾಗಿದೆ, ಹೀಗಾಗಿ ಸತ್ಯ ಹಾಗೂ ನ್ಯಾಯ. ಇದು ಸಾಧ್ಯವಿಲ್ಲದೇ ಇದ್ದರೆ ಮೌನವಾಗಿರುವುದು ಹೆಚ್ಚು ಕ್ಷೇಮ. ಸತ್ಯವು ದೇವರ ಸನ್ನಿಧಿಯಲ್ಲಿ ಹೊರಬರಬೇಕು, ಕೆಲವು ಸಲ ಕಾನೂನು ಮೂಲಕ ಈಗ ಹೊರಬರಬೇಕು. “ಮಾತು ಬಿಡ ಮಂಜುನಾಥ” ಇದುವರೆಗೂ ಸತ್ಯವನ್ನು ದಯಪಾಲಿಸಿದ್ದಾನೆ. ಈಗಲೂ ದಯಪಾಲಿಸುತ್ತಾನೆ. ಯಾರಿಗೆ ಗೊತ್ತು, ಮಂಜುನಾಥ ಎಲ್ಲಿ.. ಹೇಗೆ ಬರುತ್ತಾನೆ ಎಂದು. ನಂಬಿಕೆ ಇರುವಾಗ ಭಯವಿಲ್ಲ. ಈ ಕಾರಣದಿಂದ ನಮಗೆ ಮಂಜುನಾಥನ ಮೇಲೆ ನಂಬಿಕೆ ಇದೆ. ಇದಕ್ಕಾಗಿ ಯಾವ ಚರ್ಚೆಗಳೂ ಬೇಕಾಗಿಲ್ಲ. ಮಂಜುನಾಥನಿಗಿಂತ ದೊಡ್ಡವರು ಯಾರೂ ಇಲ್ಲ ಬಿಡಿ. ಈಗ ಅಂತಹ ಮಂಜುನಾಥನ ಭಕ್ತರೇ ಎರಡು ಗುಂಪುಗಳಾಗಿದ್ದಾರೆ, ಅಂದರೆ ಹಿಂದೂ.. ಹಿಂದೂ ಎನ್ನುವ ಎಲ್ಲರೂ ಗಮನಿಸಲೇಬೇಕಾದ ವಿಷಯ.
ಮಾತು ಬಿಡ ಮಂಜುನಾಥ. ಕಳೆದ ಕೆಲವು ವರ್ಷಗಳಿಂದ ಗಮನಿಸಿದ್ದೇವೆ ಅತ್ಯಂತ ಕೆಟ್ಟ ಪದಪ್ರಯೋಗಗಳು ಆಗುತ್ತಿವೆ. ಅದೂ ಮಂಜುನಾಥನ ಹೆಸರನ್ನು ಹೇಳಿಯೇ. ಈಗಲೂ ಅಂತಹದ್ದೇ ಆಗುತ್ತಿದೆ. ಮಾತು ಬಿಡ ಮಂಜುನಾಥ ಎಂದ ಮೇಲೆ ಎಲ್ಲಾ ಪದಪ್ರಯೋಗಗಳು ಸಾತ್ವಿಕವಾಗಿದ್ದರೆ ಹೆಚ್ಚು ಅರ್ಥಪೂರ್ಣ. ನಂಬಿಕೆ ಇರುವುದಾದರೆ , ಧರ್ಮ ಶ್ರದ್ಧೆ ಇರುವುದಾದರೆ ಇಂತಹ ಪದಗಳ ಪ್ರಯೋಗ ನಿಲ್ಲಿಸಿ ಎಂದು ಧರ್ಮನಿಷ್ಟರು ತಿಳಿಹೇಳಬೇಕಾಗಿತ್ತು. ಅವನು ಹೇಳಿದ ಎಂದು ತಾನೂ ಅದೇ ಮಾಡುವುದು ಧರ್ಮದ ಸಾರ ಅಲ್ಲವೇ ಅಲ್ಲ. ಆಗ ವ್ಯತ್ಯಾಸವೇ ಇರುವುದಿಲ್ಲ ಎಂದು ಧರ್ಮ ಗ್ರಂಥಗಳೂ ಸಾರುತ್ತವೆ. ಧರ್ಮವನ್ನು – ದೇವರನ್ನು ಬೀದಿಯಲ್ಲಿ ತಂದಿರಿಸಿ ಮತ್ತಷ್ಟು ಒಡಕುಗಳು ಉಂಟಾಗುವಾಗಲೂ ಧಾರ್ಮಿಕ ಮುಖಂಡರು ಮೌನವಾಗಿದ್ದಾರೆ..!, ಯಾರೂ ಮಾತನಾಡುವುದಿಲ್ಲ..ಇದೇ ಬಹಳ ಅಚ್ಚರಿ.
ಈಗ ಮೀಡಿಯಾಗಳು ಇಡೀ ದಿನ ಅಲ್ಲಿರಲಿ, ವರದಿ ಮಾಡಲಿ, ಯೂಟ್ಯೂಬರ್‌ಗಳೂ ಮಾಡಲಿ. ಪರ ಹಾಗೂ ವಿರುದ್ಧ ಮಾತನಾಡುವವರೂ ಮಾತನಾಡಲಿ. ಚರ್ಚೆಗಳೂ ಆಗಲಿ. ಈ ವಿಡಿಯೋಗಳು, ಮಕ್ಕಳಿಗೆ ಹಾಗೂ ಅಗತ್ಯ ಇಲ್ಲದವರಿಗೆ ಕಾಣದ ಹಾಗೆ ಆಗಬೇಕಾಗಿತ್ತು ಅಂತ ಈಗೀಗ ಅನಿಸಿದೆ. ನಮಗೆ ಇದು ಅಗತ್ಯವೇ ಇಲ್ಲ, ಮಂಜುನಾಥನೇ ನಮಗೆ ಸತ್ಯ.
ಈಗ ಎರಡು ಗುಂಪುಗಳ ನಡುವೆ ವೈಮನಸ್ಸು ಹೆಚ್ಚಾಗುತ್ತಿದೆ. ಸಂಘರ್ಷ ಹೆಚ್ಚಾಗುತ್ತಿದೆ. ಅತ್ಯಂತ ಕೆಟ್ಟ ಪದ ಬಳಕೆಗಳು ಆಗುತ್ತಿವೆ. ಇದು ಅಪಾಯಕಾರಿ. ಕೆರಳಿಸುವುದು ಮತ್ತು ಸಮಾಜವನ್ನು ಉದ್ವೇಗಗೊಳಿಸುವುದು ಅತ್ಯಂತ ಅಪಾಯಕಾರಿ. ಕೆರಳಿದ ಹಾಗೂ ಉದ್ವೇಗಕ್ಕೆ ಒಳಪಟ್ಟಾಗ ಅಂತ್ಯ ಹೇಗಾಗುತ್ತದೆ ಎನ್ನುವುದಕ್ಕೆ ಸಾಧ್ಯವೇ ಇಲ್ಲ. ಹೀಗಾಗಿ ಈಗ ತನಿಖೆಗಳು ಸರಿಯಾಗಿ ನಡೆಯಲಿ, ಅದರ ನಡುವೆ ನುಸುಳಿ ಇನ್ನೊಂದಿಷ್ಟು ಕೆಟ್ಟ ಪದಗಳ ಬಳಕೆ, ವ್ಯಂಗ್ಯ, ತಮ್ಮದೇ ತೀರ್ಪುಗಳು ನಡೆಯದೇ ಇರಲಿ ಅಷ್ಟೇ. ತನಿಖಾ ಸಂಸ್ಥೆಗಳು ಇದನ್ನೆಲ್ಲಾ ಗಮನಿಸಲೇಬೇಕು.


