ಸದ್ದಿರದ ಪಸುರೊಡೆಯ ಮಲೆನಾಡ ಬನಗಳಲಿ
ಮೊರೆವ ತೊರೆಯೆಡೆಯಲ್ಲಿ ಗುಡಿಸಲೊಂದಿರಲಿ
ಅಲ್ಲಿ ಗಿಳಿ ಗೊರವಂಕ ಕೋಗಿಲೆಗಳಿಂಚರವು
ಅಲೆಯು ಅಲೆಯಾಗಿ ತೇಲಿ ಬರುತಿರಲಿ……. (ಕುವೆಂಪು)
ಆಹ್…….
ಕಲ್ಮಡ್ಕದ ಮಣ್ಣಿನ ಗುಣವೇ ಅಂತಹದು…!. ಕಲ್ಮಡ್ಕ… ಕಲಾವಿದರ, ವಿದ್ಯಾರಾಧಕರ, ಪ್ರಕೃತಿಪ್ರಿಯರ, ಕಲಾರಸಿಕರ ಊರು. ಕಲ್ಮಡ್ಕದ ದಕ್ಷಿಣಕ್ಕೆ ಕಿರೀಟಪ್ರಾಯವಾಗಿ ತಲೆಯೆತ್ತಿ ನಿಂತ ಬಂಟಮಲೆ ಹಸಿರ ಶಿಖರ…ಅದರ ಉತ್ತರ ತಪ್ಪಲಿನ ಕಲ್ಮಡ್ಕದ ಕೃಷಿ ಪ್ರದೇಶದ ಜನಜೀವನ.. ಆಹಾ…ಪ್ರಕೃತಿಯ ರಮಣೀಯ ಸೊಬಗೇ….
ಹೌದು, ಇಲ್ಲಿ ಕೃಷಿಕನಿಗೆ ಕೃಷಿಯ ಸೆಲೆಯಿದೆ, ಓದುಗನಿಗೆ ಜ್ಞಾನ ಸಾಗರವಿದೆ, ಸಾತ್ವಿಕ ಸಜ್ಜನರಿಗೆ ಪೂರ್ವ ಪರಂಪರೆಯ ರಕ್ಷೆಯಿದೆ, ಕಲಾವಿದನಿಗೆ ಕಲೆಯ ಬೇರುಗಳಿವೆ,ರಸಿಕನಿಗೆ ರಸಗವಳದ ಅವಕಾಶಗಳಿವೆ…
ಹಾಂ…, ನಮ್ಮ ಮನೆಯ ಛಾವಣಿಯಲ್ಲೂ ಹಕ್ಕಿಗಳ ಗೂಡಿದೆ, ಹಕ್ಕಿಗಳ ಸಂಸಾರದ ಚಿಲಿಪಿಲಿಯ ಸೊಬಗಿದೆ….ನಿತ್ಯವೂ ಬೆಳಗಿನ ಜಾವ ಮತ್ತು ಸಂಜೆಯ ವೇಳೆ ಅವುಗಳ ಓಡಾಟ…ತಾಯಿ ಹಕ್ಕಿ ಮರಿಹಕ್ಕಿಗಳಿಗೆ ಪೋಷಣೆಯ ಒನಪು ವೈಯ್ಯಾರ…ವಾವ್ …ನೋಡುವುದೇ ಖುಷಿ. ಈ ಗೂಡಿನಲ್ಲಿ ಇರುವ ನಾಲ್ಕು ಹಕ್ಕಿಗಳೂ ಸಂಜೆ ಜೊತೆಯಾಗಿ ತಮ್ಮ ನೆಲೆಗೆ ಬರುವ, ಬಂದು ಚಿಲಿಪಿಲಿಗುಟ್ಟುತ್ತಾ…ಮೌನವಾಗುತ್ತಾ ನಿದ್ರಿಸುವ ಪರಿಯೋ…ವಾವ್..ವಾವ್..
ಅಬ್ಬಾ….! , ಈ ವರ್ಷದ ಮೊದಲ ಮಳೆಯ ಅಬ್ಬರದಲ್ಲೊಂದು ದಿನ ಮುಸ್ಸಂಜೆಯ ಹೊತ್ತು….ವರುಣನಾರ್ಭಟದೊಂದಿಗೆ ಚಟ್ ಛಟಾರನೆಂದು ಕೋರೈಸಿ ಆರ್ಭಟಿಸಿದ ಸಿಡಿಲು ಮಿಂಚಿನ ಗದ್ದಲಕ್ಕೆ ಜೊತೆಯಾಗಿ ಬಂದ ಹಕ್ಕಿಗಳಲ್ಲಿ, ಇನ್ನೇನು ಗೂಡು ಸೇರಬೇಕಿದ್ದ ಒಂದು ಮರಿ ನಮ್ಮ ಮನೆಯೊಳಗಣ ವಿದ್ಯುತ್ ಬೆಳಕಿಗೆ ಆಕರ್ಷಿತವಾಗಿ ದಾರಿ ತಪ್ಪಿ ಮನೆಯೊಳಗೆ ಬಂದಾಗ ನಮ್ಮ ಮಕ್ಕಳಿಗಾದ ನೋವು ಅಷ್ಟಿಷ್ಟಲ್ಲ…. ಹೆದರಿ ಬಸವಳಿದು.. ಅಂತೂ ಗೋಡೆಯ ಮೂಲೆಯಲ್ಲಿ ಹೆದರಿ ಕುಳಿತ ಹಕ್ಕಿಗೆ ಮಕ್ಕಳಿಂದ ಅನ್ನ ಕಾಳುಗಳ ಉಪಚಾರ ಮೊದಲ್ಗೊಂಡು… ಬೆಕ್ಕಿನ ಕಾಟದಿಂದ ರಕ್ಷಣೆಗಾಗಿ ಒಂದು ಪೆಟ್ಟಿಗೆಯೊಳಗೆ ತಾತ್ಕಾಲಿಕ ವಸತಿ ವ್ಯವಸ್ಥೆ ಆದ ನಂತರವೇ ನಾವೆಲ್ಲ ನಿದ್ರಿಸಿದ್ದು… ಅಂತೂ ಮರುದಿನ ಬೆಳಗ್ಗೆ ಈ ಹಕ್ಕಿಯನ್ನು ಗೂಡಿನ ಬಳಿ ತಂದು ಬಿಟ್ಟಾಗ ಹಾರಿ ಹಾರಿ ಚಿಲಿಪಿಲಿ ಗುಟ್ಟಿ ಸಂತಸಪಟ್ಟು ತನ್ನ ಗೂಡಿನೊಳಗೊಮ್ಮೆ ಹೋಗಿ ತನ್ನ ಸಂಗಡಿಗರೊಂದಿಗೆ ಸಂಭ್ರಮಿಸಿ… ಜೊತೆಯಾಗಿ ಹಾರಿ ಹೊರಹೋದಾಗ ನಾವೂ ಸಂಭ್ರಮಿಸಿದ್ದು ಸುಳ್ಲಲ್ಲ.ಇವುಗಳ ಪೈಕಿ ಸಂಜೆಯಾದಂತೆ ಒಂದೆರಡು ಹಕ್ಕಿಗಳು ಬಂದು ಮನೆಯೆದುರಿನ ತಂತಿಯ ಮೇಲೆ ಕುಳಿತು ಚಿಲಿಪಿಲಿ ಮಾಡುತ್ತಾ ಅತ್ತಿತ್ತ ನೋಡುತ್ತಾ, ಜೊತೆಗಾರರು ಬಂದಾಗ ಓಡಿ ಬಂದು ತಮ್ಮ ಗೂಡಿಗೆ ನುಗ್ಗುವ ಪರಿ… ಜೀವ ಸೆಲೆಯ,ನೆಲೆಯ ಆಕರ್ಷಣೆ………ಇದೆಲ್ಲವನ್ನೂ ನೋಡುತ್ತಾ ಮನದಲ್ಲಿ ವಾವ್..ಜಗನಿಯಮದ ಲಯವೇ ಎಂದೆಣಿಸುತ್ತಾ …..
“ತ್ವಮೇವ ಪ್ರತ್ಯಕ್ಷಂ ತತ್ವಮಸಿ |ತ್ವಮೇವ ಕೇವಲಂ ಕರ್ತಾಸಿ| ತ್ವಮೇವ ಕೇವಲಂ ಧರ್ತಾಸಿ| ತ್ವಮೇವ ಕೇವಲಂ ಹರ್ತಾಸಿ| ತ್ವಮೇವ ಸರ್ವಂ ಖಲ್ವಿದಂ ಬ್ರಹ್ಮಾಸಿ|….“
ಎಂದು ಜಪಿಸಿದ್ದೂ ಇದೆ.
ಹೌದು…., ಇಂತಿರುವಾಗ, ನಮ್ಮ ಕಲ್ಮಡ್ಕದ ಶಿವಣ್ಣ,ರಾಧಣ್ಣ .. ..ಇವರುಗಳ ಪಕ್ಷಿ ಪ್ರೇಮದ ಛಾಯಾಗ್ರಹಣ ನಮಗೆಲ್ಲ ದೀಪಗೋಪುರವಾದದ್ದು ಸತ್ಯ. ವಾವ್..ರಾಧಣ್ಣಾ..ಶಿವಣ್ಣಾ…ನಿಮ್ಮಗಳದ್ದು ತಪಸ್ಸೇ ಸರಿ……ನಿಮ್ಮ ಛಾಯಾಚಿತ್ರಗಳನ್ನು ನೋಡಿ ಅನುಭವಿಸುವುದೇ ರೋಮಾಂಚನ.
ಚಿತ್ರ : ಶಿವಸುಬ್ರಹ್ಮಣ್ಯ ಕೆನಿಜ ನಿಜ….., ನಮ್ಮ ನಿಜ ಸಂಪತ್ತು ಅಂದ್ರೆ ಯಾವುದು…ಸುಖ ಶಾಂತಿ ಮನದ ನೆಮ್ಮದಿಯೇ ಅಲ್ವೇ……ಅದು ನಿಮಗಿದೆ. ಪ್ರಕೃತಿಯ ಮಡಿಲಲ್ಲಿ ಟೆಂಟ್ ಹಾಕಿ ಝಂಡಾ ಊರ್ಬೇಕಂದ್ರೇ,ತಾಳ್ಮೆಯಿಂದ ಕಾಯಬೇಕಾದರೆ ನಿಮ್ಮಲ್ಲಿ ಆ ಪ್ರಶಾಂತ ಮನಸ್ಥಿತಿ ಇರಲೇಬೇಕು. ಪ್ರಕೃತಿಯ ವೈಭವ ಏನಿದ್ರೂ ಮೌನದಲೆಯಲ್ಲೇ ಹೊರತು ಗೌಜುಗದ್ದಲದಲ್ಲಲ್ಲ.ಅದಕ್ಕಾಗಿ ನೀವೂ ಎಲ್ಲರೊಳಗೊಂದಾಗ ಬೇಕಲ್ವೇ… ಅಂದ್ರೆ ಶಾಂತವಾಗಿ ದಿನಗಟ್ಟಲೆ ಕಾಯಲೇ ಬೇಕು.ನದಿ ತೊರೆ ಗಿರಿ ಬೆಟ್ಟಗಳೆನ್ನದೆ ,ಮಳೆ ಚಳಿಯೆನ್ನದೆ ಅನುಸರಿಸಬೇಕಲ್ವೇ….ಅದನ್ನೇ ನಮ್ಮೂರಿನ ಹಿರಿಯರಾದ ಸುಬ್ರಾಯ ಅಣ್ಣನವರು ನಿಮ್ಮ ಛಾಯಾಗ್ರಹಣದ ಛಲವನ್ನು ತಪಸ್ಸೆಂದದ್ದಿರಬಹುದು.ಕ್ಯಾಮರಾದೊಂದಿಗೆ ಸಹಬಾಳ್ವೆ , ಕಾಯುವಿಕೆಗಿಂತನ್ಯ ತಪವು ಇಲ್ಲಾ ಎಂಬ ದೃಢ ಸಂಕಲ್ಪದಿಂದ ಮಾತ್ರ ಸಾದ್ಯ….ನೀವು ತಾಳ್ಮೆಗೆಟ್ಟರೆ ಕ್ಯಾಮರವೂ ತಾಳ್ಮೆಗೆಟ್ಟೀತಲ್ವೇ….
ಎಸ್……, ಸುಬ್ರಾಯ ಅಣ್ಣನವರೆಂದಂತೆ ಕಲ್ಮಡ್ಕದಲ್ಲಿ ಕ್ಯಾಮರಾದೊಂದಿಗೆ ತಾಳ್ಮೆಯ ತಪವನ್ನಾಚರಿಸುವವರು ಇಬ್ಬರು…
ಒಬ್ಬರು ಶಿವಸುಬ್ರಹ್ಮಣ್ಯ ಕುಂಞಹಿತ್ಲು ಮತ್ತೊಬ್ಬರು ಉಡುವೆಕೋಡಿ ರಾಧಾಕೃಷ್ಣ ರಾವ್. ಶಿವಸುಬ್ರಹ್ಮಣ್ಯ ಅವರು ಅನುಭವೀ ಪತ್ರಕರ್ತರು, ನಾಡಿನ ಗಣ್ಯ ಪತ್ರಿಕೆಗಳಲ್ಲಿ ಸಂಪಾದಕರಾಗಿ ಶ್ರಮಿಸಿದವರು. ಅಂತೆಯೇ ಪಕ್ಷಿ ಪ್ರೇಮ ಬೆಳೆಸಿಕೊಂಡು ಹವ್ಯಾಸಿ ಛಾಯಾಗ್ರಹಣಗಳನ್ನೂ ಮಾಡಿದವರು. ಹಾಗೇ ಉಡುವೆಕೋಡಿ ರಾಧಾಕೃಷ್ಣ ರಾವ್ ಅವರು ಅತ್ಯುತ್ತಮ ಕೃಷಿಕರು, ಯಕ್ಷಗಾನ ಪ್ರೇಮಿ, ಉತ್ತಮ ವಾಲಿಬಾಲ್,ಬ್ಯಾಡ್ಮಿಂಟನ್ ಆಟಗಾರ, ಸ್ನೇಹ ಜೀವಿ….ಅಂತೆಯೇ ಹವ್ಯಾಸಿ ಛಾಯಾಗ್ರಾಹಕರು. ಮನೆಯಿಂದ ಹೊರ ಹೊರಡುವಾಗ ಪರ್ಸನ್ನಾದರೂ ಮರೆತಾರು….ಕೆಮರಾ ಮರೆಯಲಾರದವರು. ಇವರಿಬ್ಬರೂ ತಮ್ಮ ಹವ್ಯಾಸೀ ಛಾಯಾಚಿತ್ರಗಳನ್ನು ಫೇಸ್ಬುಕ್ಕಲ್ಲಿ ಹಂಚಿಕೊಳ್ಳೋದರೊಂದಿಗೆ ತಮ್ಮ ಸಂತಸವನ್ನು ಇಮ್ಮಡಿಗೊಳಿಸಿ ಕೊಳ್ಳುವುದರೊಂದಿಗೆ ನಮ್ಮನ್ನೂ ಆ ಕಡೆಗೆ ಸೆಳೆಯುವುತ್ತಿರುವುದು ಸುಳ್ಳಲ್ಲ. ಅವರ ಫೇಸ್ಬುಕ್ ಚಿತ್ರಗಳಿಗೆ ಒಂದೆರಡು ಮೆಚ್ಚುಗೆಯ ಬರಹ ಬರೆಯುತ್ತಾ ನಾವೂ ಅವರೊಂದಿಗೆ ಪ್ರಕೃತಿಯ ಚೆಲುವನ್ನು ಸವಿಯುತ್ತಿರುವುದು ನಿತ್ಯ ಸತ್ಯ. ಅವರ ಫೇಸ್ಬುಕ್ ಚಿತ್ರಗಳನ್ನು ಪ್ರೋತ್ಸಾಹಿಸೋಣ ಎಂಬ ಆಶಯದೊಂದಿಗೆ, ಹಸಿರೇ ಉಸಿರೆಂಬ ತಪವಗೈವ ಕೃಷಿಕರಾದ ನಾವೆಲ್ಲರೂ ಪಕ್ಷಿ ಮತ್ತು ಪರಿಸರ ಪ್ರೇಮಿಗಳಾಗೋಣವಲ್ವೇ, ಪ್ರಕೃತಿಯ ವಿಸ್ಮಯಗಳನ್ನು ನೋಡುವ ಒಳ ದೃಷ್ಟಿ ನಮ್ಮಲ್ಲೂ ತುಂಬಿಕೊಳ್ಳೋಣ ಎನ್ನುತ್ತಾ…ಇದಕೆಲ್ಲ ಸ್ಪೂರ್ತಿಯ ಸೆಲೆಯಾದ ನಿಮಗೆ ಧನ್ಯವಾದಗಳು ರಾಧಣ್ಣಾ, ಶಿವಣ್ಣಾ.
# ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ, ಕಲ್ಮಡ್ಕ
19.04.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…
ಯಾವುದೇ ಬದಲಾವಣೆ ಆಗಬೇಕಾದರೆ ವ್ಯಕ್ತಿಯ ಒಳಗೆ ಬದಲಾವಣೆ ಆರಂಭವಾಗಬೇಕು. ಮನಸ್ಸಿನಲ್ಲಿ ಪಾಸಿಟಿವ್ ಬದಲಾವಣೆಯ…
ಈ ಬಾರಿ ಮುಂಗಾರು ಮಳೆಯಲ್ಲಿ ಸರಾಸರಿ 105% ರಷ್ಟು ಮಳೆಯಾಗುವ ಸಾಧ್ಯತೆ ಇದೆ.…
ಪ್ರವಾಸಿ ತಾಣಗಳಲ್ಲಿ ಸ್ವಚ್ಛತೆ ಕಾಪಾಡುವುದು ಸ್ಥಳೀಯ ಆಡಳಿತಕ್ಕೆ ಎಷ್ಟು ಮುಖ್ಯವೋ ಅಲ್ಲಿಗೆ ಭೇಟಿ…
ಪ್ರಯಾಣಿಕರ ಸುರಕ್ಷತೆ ಮತ್ತು ಸೌಕರ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಬೆಂಗಳೂರು-ಮುರುಡೇಶ್ವರ ಮತ್ತು ಬೆಂಗಳೂರು-ಕಣ್ಣೂರು ನಡುವೆ…
ಜಾನುವಾರುಗಳ ಕಾಲುಬಾಯಿ ರೋಗ ನಿಯಂತ್ರಣಕ್ಕಾಗಿ 7 ನೇ ಸುತ್ತಿನ ಲಸಿಕಾ ಅಭಿಯಾನವನ್ನು ರಾಜ್ಯಾದ್ಯಂತ…