ಮ್ಯಾನ್ಮಾರ್‌ನಿಂದ ಅಡಿಕೆ ಕಳ್ಳಸಾಗಾಣಿಕೆ ನಿರಂತರವಾಗಿ ನಡೆಯುತ್ತಿದೆ. ಈ ಅಡಿಕೆಯನ್ನು ಯಾರು ಸಾಗಾಟ ಮಾಡುತ್ತಿದ್ದಾರೆ ? ಎಲ್ಲಿಗೆ ಸಾಗಾಟ ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಇದುವರೆಗೂ ಸಮಗ್ರವಾದ ತನಿಖೆ ಆಗಿಲ್ಲ. ಬುಧವಾರ ಕೂಡಾ ಸುಮಾರು 1.20 ಕೋಟಿ ರೂಪಾಯಿ ಮೌಲ್ಯದ ಅಡಿಕೆ ಕಳ್ಳಸಾಗಾಣಿಕೆ ಬೆಳಕಿಗೆ ಬಂದಿದೆ.
ಅಡಿಕೆ ಕಳ್ಳಸಾಗಾಣಿಕೆಯ ಖಚಿತ ಮಾಹಿತಿ ಮೇರೆಗೆ 172 ಬಿಎನ್ ಬಿಎಸ್ಎಫ್ ಮೇಘಾಲಯದ ಸೈನಿಕರು ಉಮ್ಕಿಯಾಂಗ್ ಪ್ರದೇಶದಿಂದ ಬೃಹತ್ ಪ್ರಮಾಣದಲ್ಲಿ ಅಡಿಕೆ ಕಳ್ಳಸಾಗಾಣಿಕೆ ಮಾಡುತ್ತಿದ್ದ ಟ್ರಕ್ ಅನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣದಲ್ಲಿ ಟ್ರಕ್ ಚಾಲಕನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಅಡಿಕೆಯು ಮ್ಯಾನ್ಮಾರ್‌ನಿಂದ ಹೊರಟಿದ್ದು ಅಸ್ಸಾಂನ ಸಿಲ್ಚಾರ್‌ನಿಂದ ಬರ್ಪೇಟಾಗೆ ಸಾಗಿಸಲಾಗುತ್ತಿದೆ ಎಂದು ಚಾಲಕ ಮಾಹಿತಿ ನೀಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಪ್ರದೇಶದಲ್ಲಿ ಸತತವಾಗಿ 3 ನೇ ಬಾರಿ ಅಧಿಕ ಪ್ರಮಾಣದಲ್ಲಿ ಅಡಿಕೆ ಸಾಗಾಣಿಕೆ ಪತ್ತೆಯಾಗಿದೆ. ಆದರೆ ಯಾರು ಈ ರೀತಿಯಲ್ಲಿ ಅಡಿಕೆ ಸಾಗಾಣಿಕೆ ಮಾಡುತ್ತಿದ್ದಾರೆ ? ಎಲ್ಲಿಗೆ ಸಾಗಾಟವಾಗುತ್ತಿದೆ, ಇದರ ಹಿಂದೆ ಯಾರಿದ್ದಾರೆ ಎನ್ನುವುದು ಇದುವರೆಗೂ ಸಮಗ್ರ ತನಿಖೆಯಾಗಿಲ್ಲ. ಭಾರತದೊಳಕ್ಕೆ ಸತತವಾಗಿ ಈ ಮಾದರಿಯಲ್ಲಿ ಅಡಿಕೆ ಕಳ್ಳಸಾಗಾಣಿಕೆಯಾಗುವಾಗಲೂ ಅಧಿಕಾರಿಗಳು, ಸರ್ಕಾರ ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಎನ್ನುವುದು ಅಡಿಕೆ ಮಾರುಕಟ್ಟೆ ವಲಯದ ಪ್ರಶ್ನೆಯಾಗಿದೆ.