ಅಡಿಕೆಯು ಮಲೆನಾಡು ಹಾಗೂ ಕರಾವಳಿ ಭಾಗದ ಪ್ರಮುಖ ವಾಣಿಜ್ಯ ಬೆಳೆ. ಈ ಅಡಿಕೆಯನ್ನು ದೇಶದ ಬಹುಪಾಲು ಕಡೆಗಳಲ್ಲಿ ಜಗಿಯುವುದಕ್ಕೆ ಬಳಸುತ್ತಾರೆ. ಆದರೆ ಅಡಿಕೆ ಬೆಳೆಯುವ ನಾಡಿನಲ್ಲಿ ಅಡಿಕೆ ಉಪಯೋಗವೇ ಕಡಿಮೆ ಎಂಬ ಹಂತದಲ್ಲಿತ್ತು. ಬೀಡ ಹಾಗೂ ಪಾನ್ ಗಳಲ್ಲಿ ಮಾತ್ರಾ ಅಡಿಕೆ ಬಳಕೆಯಾಗುತ್ತಿತ್ತು. ಕೆಲವು ಹಿರಿಯರು ಹಾಗೂ ಧಾರ್ಮಿಕ ಆಚರಣೆಗಳಲ್ಲಿ ಬಳಕೆ ಆಗುತ್ತಿತ್ತು. ಇದೀಗ ಕರಾವಳಿ ಸಹಿತ ಎಲ್ಲಾ ಜನರೂ ಬಳಕೆ ಮಾಡುವಂತಹ ಅಡಿಕೆಯ ಉತ್ಪನ್ನವನ್ನು ಕ್ಯಾಂಪ್ಕೋ ಬಿಡುಗಡೆ ಮಾಡಿದೆ. ಸದ್ಯ ಸ್ಥಳೀಯ ಮಾರುಕಟ್ಟೆಗಳಲ್ಲಿ ಲಭ್ಯವಿರುವ ಈ ಉತ್ಪನ್ನ “ಸೌಗಂಧ್ “
ಅಡಿಕೆ ಬೆಳೆಯುವ ನಾಡಿನಲ್ಲಿ ಕೂಡಾ ಅಡಿಕೆ ಬಳಕೆಯಾಗಬೇಕು ಎನ್ನುವ ಬೇಡಿಕೆ, ಚಿಂತನೆ ಹಲವು ಸಮಯಗಳಿಂದಲೂ ವ್ಯಕ್ತವಾಗುತ್ತಿತ್ತು. ಆದರೆ ಬೀಡಾ ಮಾದರಿಯಲ್ಲಿ, ಪಾನ್ ಮಾದರಿಯಲ್ಲಿ ಅಡಿಕೆ ಬಳಕೆ ಮಾಡುವುದಕ್ಕೆ ಹಲವು ಮಂದಿ ಸಮ್ಮತಿ ತೋರಿಸಿರಲಿಲ್ಲ. ಆದರೆ ದೇಶದ ಹಲವು ಕಡೆಗಳಲ್ಲಿ ಅಡಿಕೆಯನ್ನು ಪಾನ್ ಮೂಲಕ ಉಪಯೋಗಿಸುತ್ತಾರೆ. ಕೆಲವು ಅಡಿಕೆಯನ್ನು ಗುಟ್ಕಾ, ಪಾನ್ ಮಸಾಲಾಗಳಲ್ಲೂ ಉಪಯೋಗ ಮಾಡುತ್ತಾರೆ. ಆರೋಗ್ಯಕ್ಕೆ ಹಾನಿಕರ ಇಲ್ಲದೆಯೇ ಅಡಿಕೆಯನ್ನು ಬಳಕೆ ಮಾಡುವುದಕ್ಕೆ ಸಾಧ್ಯವಿದೆ ಎಂದು ಹಲವು ಸಂಶೋಧನೆಗಳೂ ಹೇಳಿದೆ. ದೇಶದ ಸಾಂಬಾರ ಮಂಡಳಿ ಹಾಗೂ ಆಹಾರ ಸುರಕ್ಷತಾ ವಿಭಾಗವೂ ಅಡಿಕೆ ಮಾತ್ರಾ ಜಗಿಯುವುದು ಆರೋಗ್ಯ ಉತ್ತಮ ಎಂದೂ ಹೇಳಿರುವ ವರದಿಗಳು ಬಂದಿತ್ತು. ಈ ಎಲ್ಲದರ ನಡುವೆಯೇ ಕ್ಯಾಂಪ್ಕೋ ಎಲ್ಲರೂ ಉಪಯೋಗಿಸಬಹುದಾದಂತಹ ಅಡಿಕೆ ಉತ್ಪನ್ನವನ್ನು ತಯಾರು ಮಾಡಿದೆ. ಈ ಹಿಂದೆ ಕಾಜುಸುಪಾರಿ ಎಂಬ ಹೆಸರಿನಲ್ಲಿ ಅಡಿಕೆ ಉತ್ಪನ್ನ ಬಿಡುಗಡೆ ಮಾಡಿತ್ತು. ಆ ಬಳಿಕ ಕೆಲವು ಕಾರಣಗಳಿಂದ ಉತ್ಪಾದನೆ ಸ್ಥಗಿತ ಮಾಡಲಾಗಿತ್ತು. ಇದೀಗ ಮತ್ತೆ ಕ್ಯಾಂಪ್ಕೋ ಹೊಸ ಹೆಜ್ಜೆ ಇಟ್ಟಿರುವುದು ಅಡಿಕೆ ಬೆಳೆಗಾರರಿಗೂ ಆಶಾದಾಯಕ.
ಯಾವುದೇ ರಾಸಾಯನಿಕ ಬಳಸದೆ “ಸೌಂಗಧ್” ಹೆಸರಿನಲ್ಲಿ ಬಿಡುಗಡೆ ಮಾಡಿರುವ ಈ ಅಡಿಕೆ ಉತ್ಪನ್ನವು, ಅಡಿಕೆಯ ಹುಡಿಯಿಂದ ಕೂಡಿದೆ. ಇದನ್ನು ಮೌತ್ ಫ್ರೆಶ್‌ನರ್ ಆಗಿಯೂ ಬಳಕೆ ಮಾಡಬಹುದು.ಇದರಲ್ಲಿ ಅಡಿಕೆಯನ್ನು ತೆಳುವಾಗಿ ಕತ್ತರಿಸಿ ಇದಕ್ಕೆ ಲವಂಗ, ಏಲಕ್ಕಿ ಸೇರಿದಂತೆ ಇತರ ವಸ್ತುಗಳ ಜೊತೆ ಫ್ರೈ ಮಾಡಲಾಗಿದೆ. ಹೀಗಾಗಿ ಬಾಯಿ ಸುವಾಸನೆ ಹಾಗೂ ಸಿಹಿಯಾಗಿದ್ದು ರುಚಿಕರವಾಗಿಯೂ ಇದೆ.ಸದ್ಯ 80 ಗ್ರಾಂ ಜಾರ್‌ಗಳಲ್ಲಿ ಲಭ್ಯವಿದ್ದು 100 ರೂಪಾಯಿ ದರ ನಿಗದಿಪಡಿಸಲಾಗಿದೆ. ಈಗ ಸ್ಥಳೀಯ ಮಾರುಕಟ್ಟೆಗಳಲ್ಲಿ ಈ ಸೌಗಂಧ್ ಮಾರಾಟಕ್ಕಿದೆ. ಕೃಷಿಕರ ಹಾಗೂ ಸಾರ್ವಜನಿಕರ ಬೇಡಿಕೆಗಳನ್ನು ಗಮನಿಸಿಕೊಂಡು ಕ್ಯಾಂಪ್ಕೋ ಈ ಉತ್ಪನ್ನವನ್ನು ವಿಸ್ತಾರ ಮಾಡುವ ಯೋಜನೆಯನ್ನು ಹೊಂದಿದೆ. ಮುಂದಿನ ಮಹಾಸಭೆಯಲ್ಲಿ ಈ ಉತ್ಪನ್ನವನ್ನು ಕ್ಯಾಂಪ್ಕೋ ಅಧಿಕೃತವಾಗಿ ಬಿಡುಗಡೆ ಕೂಡಾ ಮಾಡಲಿದೆ. ಈ ಉತ್ಪನ್ನವನ್ನು ಸಭೆ, ಸಮಾರಂಭಗಳಲ್ಲಿ ಪಾನ್ ಜೊತೆ ಬಳಕೆ ಮಾಡಬಹುದಾಗಿದೆ. ಈ ಕಾರಣದಿಂದ ಸೌಗಂಧ್ ಮಾರುಕಟ್ಟೆಯಲ್ಲಿ ಸ್ಥಾನಪಡೆಯುವ ಸಾಧ್ಯತೆ ಇದೆ.