ಒಬ್ಬಾತ ಸಿಟ್ಟಿನಲ್ಲಿ ಒಂದು ಸ್ಟೀಲ್ ಲೋಟೆಯನ್ನು ನೆಲಕ್ಕಪ್ಪಳಿಸುವಂತೆ ಎಸೆದರೆ ಹೆಕ್ಕಿ ತರಬಹುದು. ಒಂದು ಮಣ್ಣಿನ ಪಾತ್ರೆಯನ್ನು ಒಗೆದು ಒಡೆದರೆ ಹೊಸತು ಖರೀದಿಸಬಹುದು. ಒಂದು ಮೊಬೈಲನ್ನು ಗೋಡೆಗೆ ಹೊಡೆದರೆ ರಿಪೇರಿ ಮಾಡಿಸಬಹುದು. ಆದರೆ ಮಗನನ್ನು ಸಾಯುವ ತನಕವೂ ಹೊಡೆದರೆ ಮತ್ತೆ ಆ ಮಗು ಉಳಿಯುತ್ತದೆಯೆ? ಆಸ್ತಿಗಾಗಿ ಅಣ್ಣ ತಮ್ಮಂದಿರು ಕೊಲ್ಲುವಷ್ಟು ಮುಂದೆ ಹೋದರೆ ಮತ್ತೆ ಆಸ್ತಿಯನ್ನು ಅನುಭವಿಸುವುದಕ್ಕಿದೆಯೆ? ಅಕ್ರಮ ಸಂಬಂಧದ ಗೀಳಿಗೆ ಒಳಗಾಗಿ ಪತಿಯನ್ನೋ ಪತ್ನಿಯನ್ನೋ ಕೊಂದರೆ ಪಾಪಪ್ರಜ್ಞೆಯಿಂದ ಬಿಡುಗಡೆ ಇದೆಯೇ? ಅದೇ ಆತ್ಮಗ್ಲಾನಿಯನ್ನುಂಟು ಮಾಡಿ ಕೊಲೆಗಾರನನ್ನು ಪೊಲೀಸರ ಬಳಿಗೆ ಎಳೆದು ತರುತ್ತದೆ. ಅಂದರೆ ನಾವು ಮಾಡುವ ಒಂದೊಂದು ತಪ್ಪು ಕೂಡಾ ಕೆಟ್ಟ ನೆನಪಾಗಿ ಸ್ಮೃತಿಪಟಲದಲ್ಲಿ ಕಾಡುತ್ತಿರುತ್ತದೆ.
ನಮಗೆ ಅನ್ಯಾಯವಾಗಿದೆಯೆಂದು ನಮ್ಮ ದೃಷ್ಟಿಯಲ್ಲಿ ಅಪರಾಧಿಗಳೆಂದು ಗುರುತಿಸಿದವರನ್ನು ಕೊಲ್ಲುವುದು ಪರಿಹಾರವಲ್ಲ ಎಂಬ ಪ್ರಜ್ಞೆ ಸಮಾಜದಲ್ಲಿ ಹರಡಬೇಕಾಗಿದೆ. ನಮಗೆ ಉಪದ್ರ ಕೊಡುವ ನಾಯಿಯನ್ನು ಕೊಂದರೂ ಮಂಗನನ್ನು ಕೊಂದರೂ ಕೇಸ್ ಆಗಿ ಶಿಕ್ಷೆಗೆ ಗುರಿಯಾಗುವಷ್ಟು ಬಲವಾದ ಕಾನೂನುಗಳು ಈಗ ಇವೆ. ಅಂತಿರುವಾಗ ಮಾನವ ಜೀವಿಯನ್ನು, ಅದು ಸಂಬಂಧಿಕನೇ ಇರಲಿ ಇನ್ಯಾರೇ ಇರಲಿ, ಕೊಲ್ಲುವ ಹಕ್ಕು ಅಂತೂ ಇಲ್ಲವೇ ಇಲ್ಲ ಎಂಬುದರ ಅರಿವು ಜನರಿಗೆ ಯಾಕಿಲ್ಲ? “ಮುತ್ತು ಒಡೆದರೆ ಹೋಯಿತು, ಮಾತು ಆಡಿದರೆ ಆಯಿತು” ಎಂಬುದು ಗಾದೆ ಮಾತು. ಮುತ್ತನ್ನು ಮತ್ತೊಮ್ಮೆ ತರಬಹುದು. ಮಾತಾಡಿ ತಪ್ಪಿದರೆ ಕ್ಷಮೆ ಕೇಳಿ ಸಮಾಧಾನಿಸಬಹುದು. ಆದರೆ ಕೊಂದೇ ಬಿಟ್ಟರೆ ಮತ್ತೆ ಬದುಕಿಸುವುದು ಹೇಗೆ? ಬುದ್ಧಿ ಕಲಿಸಬೇಕೆಂಬ ಉದ್ದೇಶದಿಂದ ಹೊಡೆಯುವುದಾದರೆ ಕಲಿಸಿದ ಬುದ್ಧಿಯಂತೆ ನಡೆದುಕೊಳ್ಳುವುದಕ್ಕಾಗಿ ಬದುಕಲು ಬಿಡಬೇಕಲ್ಲ? ಅಷ್ಟೊಂದು ಸಾಮಾನ್ಯ ಜ್ಞಾನವು ಯಾಕೆ ತಪ್ಪುತ್ತದೆ?
ಜೀವಕ್ಕೆ ವಿಶೇಷವಾದ ಅಸ್ತಿತ್ವವಿದೆ. ನಮ್ಮ ಜೀವ ಮತ್ತು ಜೀವನವಷ್ಟೇ ಮುಖ್ಯವೆನ್ನಿಸಿ ನಮಗೆ ಆತಂಕ ಉಂಟುಮಾಡುವ ಇನ್ನೊಬ್ಬರ ಜೀವ ತೆಗೆದರೆ ಸಮಸ್ಯೆ ಪರಿಹಾರವಾಗುವುದಿಲ್ಲ. ಬದಲಿಗೆ ಅದು ಮತ್ತೂ ದೊಡ್ಡದಾಗುತ್ತದೆ. ಪೋಲೀಸರಿಂದ ತಪ್ಪಿಸಿಕೊಂಡು ಬದುಕುವುದರಲ್ಲಿ ಅಥವಾ ಜೈಲಿನಲ್ಲಿ ಅಪರಾಧಿಯ ಜೀವನ ನರಕವಾಗುತ್ತದೆ. ಹೆಂಡತಿ ನಡತೆಗೆಟ್ಟವಳೆಂದು ಅನುಮಾನಪಟ್ಟ ಒಬ್ಬಾತ ನಡುರಸ್ತೆಯಲ್ಲಿ ಆಕೆಯ ಕತ್ತನ್ನು ಕಡಿದು ರುಂಡವನ್ನು ಎತ್ತಿಕೊಂಡು ಪೊಲೀಸ್ ಸ್ಟೇಶನ್‍ಗೆ ನಡೆದುಕೊಂಡು ಬಂದ ಪ್ರಕರಣ ನಡೆದಿತ್ತು. ಆತನನ್ನು ಬಂಧಿಸಿ ಕಸ್ಟಡಿಗೆ ಹಾಕಿದರು. ಅಲ್ಲಿಗೆ ಅವನ ಪ್ರತೀಕಾರವೂ, ಕೋಪವೂ, ಜೀವನವೂ ಮುಗಿಯಿತು. ಮಕ್ಕಳಿಗೆ ತಾಯಿ ಇಲ್ಲದಂತೆ ಮಾಡಿ ತನ್ನ ಬದುಕಿಗೂ ಅರ್ಥವಿಲ್ಲದಂತೆ ಮಾಡಿಕೊಂಡದ್ದೇ ಬಂತು. ಇತ್ತೀಚೆಗೆ ಹೆಂಡತಿ ಮಕ್ಕಳನ್ನು ಬಿಟ್ಟ ವಿವಾಹಿತನೊಬ್ಬ ಒಬ್ಬ ಕಾಲೇಜು ಕನ್ಯೆಯ ಮನೆಗೆ ಬಂದು “ನಿಮ್ಮ ಮಗಳನ್ನು ಕೊಡಿ” ಎಂತ ಕಿರಿಕ್ ಮಾಡುತ್ತಿದ್ದನಂತೆ. ಆತನ ಕಾಟ ತಡೆಯಲಾಗದೆ ಆ ಮಗಳ ತಂದೆ ತಾಯಿ ಅವನನ್ನು ಕೊಂದೇ ಬಿಟ್ಟರು. ಮತ್ತೆ ಅವರೇ ಹೋಗಿ ಪೊಲೀಸರಿಗೆ ಶರಣಾದರು. ಅವರಿನ್ನು ಜೈಲಿನಲ್ಲಿ ದಿನ ಕಳೆಯಬೇಕು. ಇನ್ನು ಮಗಳು ಏಕಾಂಗಿ. ಆಕೆಯ ರಕ್ಷಣೆಗೆ ಇವರೇ ಇರೋದಿಲ್ಲ! ಅಂದರೆ ತಮಗೆ ರಕ್ಷಣೆ ಮತ್ತು ನ್ಯಾಯವನ್ನು ಹೇಗೆ ಪಡೆಯಬಹುದೆಂಬುದರ ಬಗ್ಗೆ ಅವರು ಯೋಚಿಸಿಯೇ ಇಲ್ಲ! ಆ ಹೆತ್ತವರು ಪೊಲೀಸರಿಗೆ ದೂರು ನೀಡಿ ಆ ದುರುಳನನ್ನು ಬಂಧಿಸುವಂತೆ ಮಾಡಿದ್ದರೆ ಅವರೂ ನೆಮ್ಮದಿಯಿಂದ ಇರಬಹುದಿತ್ತು. ಮಗಳ ಬದುಕಿಗೂ ಭದ್ರತೆಯನ್ನು ನೀಡಬಹುದಿತ್ತು. ಸಿಟ್ಟಿನ ಭರದಲ್ಲಿ ಅಪರಾಧಕ್ಕಿಂತಲೂ ಮುಖ್ಯವಾಗಿ ಅಪರಾಧಿಯನ್ನೇ ನಿವಾರಣೆ ಮಾಡಲು ಹೊರಟರೆ ಆಗುವ ಪ್ರಮಾದ ಇದು. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಬೇಕು.
ಸಮಾಜದಲ್ಲಿ ಯಾಕೆ ಇಷ್ಟೊಂದು ಸಿಟ್ಟು? ಈ ಪ್ರಶ್ನೆಯನ್ನು ನಾನು ಫೇಸ್‍ಬುಕ್ ನಲ್ಲಿ ಹಾಕಿದಾಗ ಬಂದ ಪ್ರತಿಕ್ರಿಯೆಗಳಲ್ಲಿ ಎಲ್ಲವೂ ಶಿಕ್ಷಣದ ವಿಫಲತೆಯತ್ತ ಬೊಟ್ಟು ಮಾಡಿವೆ. ಅಂದರೆ ಈಗ ಶಾಲೆಗಳಲ್ಲಿ ಶಿಕ್ಷೆ ಎಂಬುದೇ ಇಲ್ಲ. ಅಪರಾಧಿ ತಲೆಯೆತ್ತಿ ನಡೆಯುತ್ತಾನೆ. ಸಂಕಷ್ಟಕ್ಕೆ ಒಳಗಾದವನು ತಲೆತಗ್ಗಿಸಿ ಇರಬೇಕಾಗುತ್ತದೆ. ಅಪರಾಧಿಗಳು ಶ್ರೀಮಂತರೂ ದೈಹಿಕ ಬಲ ಉಳ್ಳವರೂ ಆಗಿರುವುದು ಇದಕ್ಕೆ ಕಾರಣ. ಶಿಕ್ಷಕರಲ್ಲಿ ಈಗ ಪವರ್ ಇಲ್ಲ. ನೋವುಂಡ ವಿದ್ಯಾರ್ಥಿಗೆ ಆತ್ಮಸ್ಥೈರ್ಯ ತುಂಬಲು ಅವರಲ್ಲೇ ಆತ್ಮಸ್ಥೈರ್ಯವಿಲ್ಲ. ಹಾಗಾಗಿ ಸರಿದಾರಿಯಲ್ಲಿ ಹೋಗಿ ನ್ಯಾಯ ಪಡೆಯುವ ಸಾಧ್ಯತೆಗಳು ಕ್ಷೀಣಿಸಿವೆ. ಶಿಕ್ಷಕರಿಗೇ ಸುರಕ್ಷೆ ಇಲ್ಲ. ಒಬ್ಬ ಹೈಸ್ಕೂಲು ಶಿಕ್ಷಕಿಯಂತೂ “ನಾವಿಲ್ಲಿ ಭಯದಿಂದಲೇ ಪಾಠ ಮಾಡುತ್ತಿದ್ದೇವೆ” ಎಂದು ಬರೆದಿದ್ದಾರೆ. ವಿದ್ಯಾರ್ಥಿಗಳು ಪರಸ್ಪರ ಹೊಡೆದುಕೊಳ್ಳುತ್ತಿದ್ದರೆ ತಡೆಯಲು ಹೋಗುವುದು ಕೂಡಾ ಅಪಾಯವೆಂಬ ಸ್ಥಿತಿ ಶಿಕ್ಷಕರದ್ದು. ಇಂದು ವಿದ್ಯಾರ್ಥಿಗಳು ಕಲಿಯುವ ಜವಾಬ್ದಾರಿಯನ್ನು ಮರೆತು ಪರೀಕ್ಷೆಯಲ್ಲಿ ಏನೇ ಗೀಚಿದರೂ ಅಂಕ ನೀಡಿ ತೇರ್ಗಡೆ ಮಾಡಬೇಕಾದ ಅನಿವಾರ್ಯತೆ ಶಿಕ್ಷಕರದ್ದು. ಇದು ಬಾಲ್ಯದಿಂದ ಹೈಸ್ಕೂಲು ದಾಟುವವರೆಗೂ ಮಕ್ಕಳಿಗೆ ಒದಗಿಸಿದ ಸೌಲಭ್ಯವಾಗಿದೆ. ಈ ಪ್ರಾಯವೇ ಮಕ್ಕಳಲ್ಲಿ ಸಿಟ್ಟು ಪ್ರಜ್ವಲಿಸುವ ಪ್ರಾಯ. ಭಾರತದಲ್ಲಿ ಪುಣ್ಯಕ್ಕೆ ಮಕ್ಕಳ ಕೈಗೆ ಪಿಸ್ತೂಲು ಸಿಗುವುದಿಲ್ಲ. ಅಮೇರಿಕಾದಲ್ಲಿ ಅದೂ ಸಿಗುತ್ತದೆ. ಹಾಗಾಗಿ ಅಲ್ಲಿ ಎಳೆಯ ವಯಸ್ಸಿನವರೇ ಸಹಪಾಠಿಗಳನ್ನು ಕೊಲ್ಲುವ ಪ್ರಕರಣಗಳು ನಡೆಯುತ್ತವೆ.
ನಾಲ್ಕು ದಶಕಗಳ ಹಿಂದೆ ಶಿಕ್ಷಕರು ಶಾಲೆಗಳಲ್ಲಿ ಬೆತ್ತ ಹಿಡಿಯುತ್ತಿದ್ದರು. ತಪ್ಪಿತಸ್ಥ ಮಕ್ಕಳಿಗೆ ಥಳಿಸುತ್ತಿದ್ದರು. ತಪ್ಪು ಮಾಡಿದವರಿಗೆ “ನ್ಯಾಯವನ್ನು ಕೈಗೆ ತೆಗೆದುಕೊಳ್ಳಬೇಡಿ” ಎಂತ ಬೋಧಿಸುತ್ತಿದ್ದರು. ಅನ್ಯಾಯಕ್ಕೊಳಗಾದವನು ದೂರು ನೀಡಬೇಕು. ಪ್ರತಿಯಾಗಿ ಹೊಡೆಯುವುದೂ ಅಪರಾಧವೆಂಬ ಬುದ್ಧಿವಾದ ಹೇಳುತ್ತಿದ್ದರು. ಹೀಗಾಗಿ ನಾಗರಿಕ ಪ್ರಜ್ಞೆಗೆ ಒಂದು ದಾರಿ ಸಿಗುತ್ತಿತ್ತು. ಈಗ ಸಿಟ್ಟು ಬರುವ ಮಕ್ಕಳಿಗೆ ನಿಜಕ್ಕೂ ದಾರಿ ಕಾಣದಾಗಿದೆ. ಹಾಗಾಗಿಯೇ ನ್ಯಾಯಾಧೀಶರೊಬ್ಬರು ಹೇಳಿದ್ದಾರೆ: “ಹಿಂದೆ ಶಾಲೆಯಲ್ಲಿ ಪೆಟ್ಟು ಸಿಗುತ್ತಿತ್ತು. ಈಗ ಅದು ಕಡಿಮೆಯಾಗಿದೆ. ಹಾಗಾಗಿ ಅದು ಪೊಲೀಸ್ ಸ್ಟೇಶನ್‍ಗಳಲ್ಲಿ ಹೆಚ್ಚಾಗಿದೆ”. ಆದರೆ ಈಗ ಪೋಲೀಸರೂ ನಿಷ್ಪಕ್ಷಪಾತಿಗಳಾಗಿ ಉಳಿದಿಲ್ಲದಿರುವುದು ಜನರು ಕಾನೂನನ್ನು ಕೈಗೆ ತೆಗೆದುಕೊಳ್ಳುವುದಕ್ಕೆ ಕಾರಣವಾಗಿದೆ.
************
ವಾಸ್ತವದಲ್ಲಿ ಸಿಟ್ಟನ್ನು ಶಮನಗೊಳಿಸುವ ಕೆಲಸ ಶಾಲೆಗಳಲ್ಲೂ ಆಗಬೇಕು. ಮನೆಗಳಲ್ಲೂ ಆಗಬೇಕು. ಶಾಲೆಯಲ್ಲಿ ಮಗುವಿಗೆ ಏಟು ಬಿದ್ದರೆ ಹೆತ್ತವರು ಕಾರಣ ತಿಳಿಯಲು ಪ್ರಯತ್ನಿಸದೆ ಶಿಕ್ಷಕರಿಗೇ ಹೊಡೆಯುವ ಪೋಷಕರು ಇದ್ದಾರೆ. ಅವರು ಶಾಲೆಗಳಲ್ಲಿ ಶಿಕ್ಷೆ ಇಲ್ಲದೇ ಬೆಳೆದ ತಲೆಮಾರಿನವರು. ಮನೆಯಲ್ಲಿಯೂ ಮಕ್ಕಳಿಗೆ ತಪ್ಪು ಒಪ್ಪುಗಳನ್ನು ಮನಗಾಣಿಸಬೇಕು. ಸಮಾಜದಲ್ಲಿ ತಪ್ಪು ಮಾಡಿದರೆ ಶಿಕ್ಷೆಯಿಂದ ತಪ್ಪಿಸಿಕೊಳ್ಳುವುದು ಅಸಾಧ್ಯವೆಂಬ ಸತ್ಯವು ಪ್ರತಿಯೊಬ್ಬರಿಗೂ ತಿಳಿದಿರಬೇಕು. ಪೊಲೀಸರು ಮನಸ್ಸು ಮಾಡಿದರೆ ಯಾವುದೇ ಕೊಲೆಯ ಜಾಡನ್ನು ಹಿಡಿದು ಕೊಲೆಗಾರನನ್ನು ಬಂಧಿಸದೇ ಬಿಡುವುದಿಲ್ಲ. ಅವರಲ್ಲಿ ಅಂತಹ ನೈಪುಣ್ಯವಿದೆ. ಅದಕ್ಕೆ ರಾಜಕಾರಣಿಗಳು, ಧರ್ಮಗುರುಗಳು ಹಾಗೂ ಪ್ರತಿಷ್ಟಿತ ವ್ಯಕ್ತಿಗಳು ಜನರನ್ನು ಉದ್ರೇಕಿಸುವ ಬದಲು ಸಂಯಮಶೀಲರನ್ನಾಗಿಸಬೇಕು. ಏಕೆಂದರೆ ಕೊಂದ ಪಾಪ ತಿಂದು ಪರಿಹಾರ ಎಂಬ ಮಾತು ಸುಳ್ಳಲ್ಲ.
ನಮ್ಮೊಳಗೆ ಸೇರಿಕೊಂಡಿರುವ ಕಾಮ, ಕ್ರೋಧ, ಲೋಭ, ಮೋಹ, ಮದ ಮತ್ತು ಮತ್ಸರವೆಂಬ ಆರು ವೈರಿಗಳನ್ನು ಗೆಲ್ಲಬೇಕೆಂಬ ಬೋಧನೆಯು ಭಜನೆ, ಹರಿಕಥೆ, ಸತ್ಸಂಗ, ಧಾರ್ಮಿಕ ಉಪನ್ಯಾಸಗಳಲ್ಲಿ ಸಿಗುತ್ತಿತ್ತು. ಈಗ ಇಂತಹ ಕಾರ್ಯಕ್ರಮಗಳೇ ಮಹತ್ವ ಕಳೆದುಕೊಂಡಿವೆ. ಜೊತೆಯಲ್ಲೇ ಸಜ್ಜನಿಕೆಯೂ ಅಪರೂಪವಾಗಿದೆ. ಭಗವದ್ಗೀತೆಯಲ್ಲಿ ವೈಜ್ಞಾನಿಕವಾಗಿ ಸಿಟ್ಟಿನಿಂದಾಗುವ ದುರಂತವನ್ನು ವಿಶ್ಲೇಷಿಸಲಾಗಿದೆ. ವಿಷಯಾಸಕ್ತಿಯಿಂದ ಕಾಮವೂ, ಕಾಮದಿಂದ ಕ್ರೋಧ(ಕೋಪ)ವೂ, ಕ್ರೋಧದಿಂದ ಸಮ್ಮೋಹವೂ, ಸಮ್ಮೋಹದಿಂದ ಸ್ಮೃತಿಭ್ರಂಶವೂ, ಸ್ಮೃತಿಭ್ರಂಶದಿಂದ ಬುದ್ಧಿನಾಶವೂ, ಬುದ್ಧಿನಾಶದಿಂದ ಸರ್ವನಾಶವೂ ಆಗುತ್ತದೆ. ಇದು ಸಾರ್ವಕಾಲಿಕ ಸತ್ಯ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಅಡಿಕೆಗೆ ಎಲೆಚುಕ್ಕಿ ಹಾಗೂ ಹಳದಿ…
ಈಗಿನಂತೆ ನವೆಂಬರ್ 29 ರಿಂದ ದಕ್ಷಿಣ ಒಳನಾಡು ಹಾಗೂ 30 ರಿಂದ ಮಲೆನಾಡು…
ಅಡಿಕೆಯ ಮೇಲೆ ಕ್ಯಾನ್ಸರ್ಕಾರಕ ಎನ್ನುವ ಅಪವಾದ ನಿರಂತರವಾಗಿದೆ. ಈ ಬಗ್ಗೆ ವೈಜ್ಞಾನಿಕ ಅಧ್ಯಯನ…
ಎಂಟು ಶತಮಾನಗಳ ಭವ್ಯ ಇತಿಹಾಸ ಮತ್ತು ಪರಂಪರೆಯನ್ನು ಹೊಂದಿರುವ ನಾಡಿನ ಪವಿತ್ರ ಕ್ಷೇತ್ರ…
ಖಾದಿ ದೇಶದ ಅಸ್ಮಿತೆಯಾಗಿದ್ದು, ಇದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಉತ್ತೇಜನ-ಪ್ರೋತ್ಸಾಹ ಅತ್ಯಗತ್ಯವಾಗಿದೆ ಎಂದು…
ಎಲ್ಲಾ ಪಡಿತರ ಕಾರ್ಡ್ಗಳನ್ನು ಯಥಾವತ್ತಾಗಿ ಮುಂದುವರಿಸಲು ಮುಖ್ಯಮಂತ್ರಿಯವರ ಆದೇಶದಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು…