ಸಿಂಡಿಕೇಟ್ ಬ್ಯಾಂಕ್ ಹಾಗೂ ಕೆನರಾ ಬ್ಯಾಂಕ್ ವಿಲೀನದ ಬಳಿಕವೂ ಮೂಲತ: ಸಿಂಡಿಕೇಟ್ ಬ್ಯಾಂಕ್‌ನ ಸೇವಾ ಅವ್ಯವಸ್ಥೆ ಕಡಿಮೆಯಾಗಿಲ್ಲ. ಸುಳ್ಯ ತಾಲೂಕಿನ 7 ಎಟಿಎಂ ಗಳು ಆಗಾಗ ಕೈಕೊಡುವುದು ಒಂದಾದರೆ ಬ್ಯಾಂಕ್ ನಲ್ಲಿ ಸೇವೆಯೂ ಅಸಮರ್ಪಕವಾಗಿದೆ. ಇದೀಗ ಸುಳ್ಯ ತಾಲೂಕಿನ ಗುತ್ತಿಗಾರಿನಲ್ಲಿ ಅಸಮಾಧಾನಗಳು ಹೆಚ್ಚಾಗಿದ್ದು ಇಲ್ಲಿನ ವರ್ತಕ ಸಂಘ ಹೋರಾಟಕ್ಕೆ ಸಿದ್ಧವಾಗಿದೆ. ನಾಗರಿಕರಿಂದ ಉತ್ತಮ ಸ್ಪಂದನೆ ಲಭ್ಯವಾಗುತ್ತಿದೆ.
ಸಿಂಡಿಕೇಟ್ ಬ್ಯಾಂಕ್ ಆರಂಭದಿಂದಲೂ ಅಸಮರ್ಪಕ ಸೇವೆಯನ್ನು ಅಲ್ಲಿನ ಸಿಬಂದಿಗಳು ನೀಡುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿದ್ದವು. ಹಲವು ಬಾರಿ ವಿಭಾಗೀಯ ಮೆನೇಜರ್ ಅವರಿಗೂ ದೂರುಗಳನ್ನು ಸಾಕಷ್ಟು ಜನರು ನೀಡಿದ್ದರು. ಹಾಗಿದ್ದರೂ ಸೇವೇಯಲ್ಲಿ ಗುಣಮಟ್ಟ ಕಂಡುಬಂದಿರಲಿಲ್ಲ. ಅದಾದ ಬಳಿಕ ಕೆನರಾ ಬ್ಯಾಂಕ್ ಜೊತೆ ವಿಲೀನವಾದ ಬಳಿಕ ಇದೀಗ ಎರಡೂ ಬ್ಯಾಂಕ್ ಗಳ ಸೇವೆಯ ಮೇಲೂ ಅಸಮಾಧಾನಗಳು ಕೇಳಿಬಂದಿದೆ. ಅನೇಕ ಗ್ರಾಹಕರು ದೂರು ನೀಡುತ್ತಿದ್ದರೂ ಸರಿಯಾದ ಸ್ಪಂದನೆ ಲಭ್ಯವಾಗುತ್ತಿಲ್ಲ ಎಂದು ಗ್ರಾಹಕರು ದೂರುತ್ತಾರೆ. ಇದೀಗ ಈ ಅಸಮಾಧಾನ ಹೋರಾಟದ ಹಾದಿಯನ್ನು ತಲುಪಿದೆ. ಗುತ್ತಿಗಾರಿನಲ್ಲಿ ವರ್ತಕ ಸಂಘವು ಇದರ ನೇತೃತ್ವ ವಹಿಸಿಕೊಂಡಿದೆ.
ಸುಳ್ಯ ತಾಲೂಕಿನ ಗುತ್ತಿಗಾರಿನಲ್ಲಿ ಇರುವ ಕೆನರಾ ಬ್ಯಾಂಕ್ ಶಾಖೆಯಲ್ಲಿ ಅವ್ಯವಸ್ಥೆಯ ತಾಂಡವವಾಡುತ್ತಿದೆ ಎಂದು ಗ್ರಾಹಕರು ದೂರುತ್ತಿದ್ದಾರೆ. ಇಲ್ಲಿನ ಸಿಬಂದಿಗಳ ಬಗ್ಗೆಯೇ ಮೊದಲ ಆರೋಪ ಇದ್ದು ಗ್ರಾಹಕರೊಂದಿಗೆ ಉದ್ದಟತನದಿಂದ ವರ್ತಿಸುತ್ತಾರೆ ಎಂಬುದು ದೂರು. ಪಾಸ್ ಎಂಟ್ರಿಗೆ ಹೋದರೆ ಈಗಾಗದು ಎನ್ನುವುದು ಸಿಬಂದಿಗಳ ನಿತ್ಯದ ಉತ್ತರವಾದರೆ , ನೆಟ್ವರ್ಕ್ ಇಲ್ಲ ಎನ್ನುವುದು ಇನ್ನೊಂದು ನಿತ್ಯದ ಉತ್ತರ. ಹೆಚ್ಚು ವಿಚಾರಿಸಿದರೆ ಉದ್ದಟತನದ ಉತ್ತರ ಇಲ್ಲಿನ ಸಿಬಂದಿಗಳಿಂದ ಸದಾ ಸ್ವಾಗತವಿದೆ ಎಂಬುದು ಗ್ರಾಹಕರ ನೇರ ಆರೋಪ.
ಇನ್ನು ಬ್ಯಾಂಕ್ ನಲ್ಲಿ ಸಾಲಕ್ಕೆ ಹೋದರೆ ಅಲೆದಾಟ ತಪ್ಪಿದ್ದಲ್ಲ, ಇದಕ್ಕಾಗಿ ಒಂದು ಬೇಕಾದ ದಾಖಲೆಗಳ ಪಟ್ಟಿ ಇಲ್ಲವೇ ಇಲ್ಲ. ನಗದಿಗಾಗಿ ಕ್ಯೂ ರಸ್ತೆ ಬದಿಯವರೆಗೆ ತಲುಪಿದರೂ ತಕ್ಷಣದ ಸ್ಪಂದನೆ ಇಲ್ಲ, ಭಾಷಾ ಸಮಸ್ಯೆ ತೀವ್ರವಾಗಿ ಕಾಡುತ್ತದೆ. ಕನ್ನಡ ಬಲ್ಲವರು ಇಲ್ಲಿಲ್ಲ, ಕನ್ನಡ ಬಲ್ಲವರು ಮಾತನಾಡುವುದೂ ಇಲ್ಲ, ಯಾವ ಮಾಹಿತಿಯೂ ಸರಿಯಾಗಿ ಸಿಗುತ್ತಿಲ್ಲ ಎನ್ನುವುದು ಆರೋಪ. ಒಂದು ವೇಳೆ ದೂರು ನೀಡಿದ ಗಣ್ಯ ವ್ಯಕ್ತಿಗಳಿಗೆ ಉತ್ತಮ ಸೇವೆ ನೀಡುವುದು ಅಥವಾ ಖಾತೆ ವರ್ಗಾವಣೆ ಮಾಡಿಸಿ ಬೇರೆ ಶಾಖೆಗಳಿಗೆ ತೆರಳುವಂತೆ ಮಾಡುವುದು ಕೂಡಾ ಈ ಹಿಂದೆ ನಡೆದಿದೆ.
ಗುತ್ತಿಗಾರು ಎನ್ನುವುದು ಗ್ರಾಮೀಣ ಭಾಗ. ಗ್ರಾಮೀಣ ಭಾಗದ ಎಲ್ಲಾ ಜನರಿಗೆ ಇಂಗ್ಲಿಷ್ ಜ್ಞಾನ ಅಥವಾ ಫಾರಂ ತುಂಬಿಸುವ ಜ್ಞಾನ ಇದೆ ಎನ್ನಲು ಆಗುವುದಿಲ್ಲ ಇದಕ್ಕೆ ಸಿಬಂದಿಗಳು ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕು, ಗ್ರಾಹಕರೇ ದೇವರು ಎನ್ನುವ ಈ ಕಾಲದಲ್ಲಿ ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಿ ಉದ್ದಟತನದ ಸೇವೆ ನಿರೀಕ್ಷೆ ಮಾಡುವುದಿಲ್ಲ ಎಂದು ಗ್ರಾಹಕರು ಹೇಳುತ್ತಾರೆ. ಈ ಎಲ್ಲಾ ಕಾರಣದಿಂದ ಗುತ್ತಿಗಾರು ವರ್ತಕ ಸಂಘದ ನೇತೃತ್ವದಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಈ ಬ್ಯಾಂಕ್ ಗ್ರಾಹಕರಿಗೆ ಸರಿಯಾದ ಸೇವೆ ನೀಡುವಲ್ಲಿ ವಿಫಲವಾದ್ದರಿಂದ, ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಬ್ಯಾಂಜ್ ಮೇಲಾಧಿಕಾರಿಗಳಿಗೆ ಆರಂಭದಲ್ಲಿ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ. ಅದಾದ ಬಳಿಕವೂ ಗ್ರಾಮೀಣ ಜನರಿಗೆ ಉತ್ತಮ ಸೇವೆ ನೀಡದೇ ಇದ್ದರೆ ಪ್ರತಿಭಟನೆಯನ್ನು ನಡೆಸುವುದಾಗಿ ತೀರ್ಮಾನಿಸಲಾಗಿದೆ.
ಕೆನರಾ ಬ್ಯಾಂಕ್ ಎಟಿಎಂ ಶಾಖೆಗಳು ತಾಲೂಕಿನಲ್ಲಿ 7 ಕಡೆಗಳಲ್ಲಿ ಇವೆ. ಅದರಲ್ಲಿ ಸಂಪಾಜೆ, ಗುತ್ತಿಗಾರು, ನಿಂತಿಕಲ್ಲು , ಪಂಜ ಈ ಶಾಖೆಗಳು ಬಹುತೇಕ ದಿನಗಳಲ್ಲಿ ಹಣ ಖಾಲಿಯಾಗಿರುತ್ತದೆ. ಈಗಿನ ನಿಯಮದ ಪ್ರಕಾರ ಇತರ ಎಟಿಎಂ ಮೂಲಕ ಕೆಲವೇ ಕೆಲವು ಬಾರಿ ಮಾತ್ರಾ ಹಣ ಪಡೆಯಲು ಅವಕಾಶ ಇದೆ. ಆ ನಂತರ ಪ್ರತೀ ಬಾರಿಯೂ ಖಾತೆಯಿಂದ ಸೇವಾ ಶುಲ್ಕ ಕಡಿತವಾಗುತ್ತದೆ. ಬ್ಯಾಂಕ್ ಅವ್ಯವಸ್ಥೆಯಿಂದ ಈಗ ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ ಎನ್ನುವ ಆರೋಪ ಇದೆ. ಈ ಬಗ್ಗೆಯೂ ಬ್ಯಾಂಕ್ ಮೌನ ವಹಿಸಿದೆ.
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…
ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…
ಮುಂಜಾನೆಯ ಸಮಯದಲ್ಲಿ ಸ್ಥಬ್ಧವೆನ್ನಿಸುವ ವಾತಾವರಣದಲ್ಲೂ ಸಾಕಷ್ಟು ಹಕ್ಕಿಗಳ ಚಿಲಿಪಿಲಿ ಶಬ್ದ ಕೇಳುತ್ತಿರುತ್ತದೆ. ಆದರೆ…
ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಸಣ್ಣ ಪ್ರಮಾಣದ ತಿರುಗುವಿಕೆ ಉಂಟಾಗುವ ಸಾಧ್ಯತೆಗಳಿದ್ದು, ಜನವರಿ 18 ರಂದು…
ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಗೆ ರಾಜ್ಯದಿಂದ 3.5 ಲಕ್ಷ ಮೆಟ್ರಿಕ್ ಟನ್ ಹೆಚ್ಚುವರಿ…