ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲವಾಗಿ ಟ್ರೋಲ್ ಮಾಡಿದವರಿಗೆ ಕಾಂಗ್ರೆಸ್ ನಾಯಕಿ, ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಕಾರ್ಪೋರೇಟರ್, ಬಿಲ್ಲವ ಮುಖಂಡೆ ಪ್ರತಿಭಾ ಕುಳಾಯಿ ತಿರುಗೇಟು ನೀಡಿದ್ದಾರೆ. ಅಶ್ಲೀಲವಾಗಿ ಬರೆದವರ ವಿರುದ್ಧ ಪೊಲೀಸ್ ದೂರು ನೀಡಿದ್ದು ಹಲವು ಮಂದಿ ಅಶ್ಲೀಲವಾದ ಬರಹವನ್ನು ಖಂಡಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ಮೂಲದ ಸುದ್ದಿ ಮಾಧ್ಯಮವೊಂದರ ಮುಖ್ಯಸ್ಥ ಶ್ಯಾಮ ಸುದರ್ಶನ ಭಟ್ ವಿರುದ್ಧ ಪ್ರಕರಣ ದಾಖಲಾಗಿದೆ.
ಸುರತ್ಕಲ್ ಟೋಲ್‌ಗೇಟ್ ವಿರುದ್ಧ ಪ್ರತಿಭಟನೆ ನಡೆಸಿದ ಚಿತ್ರವೊಂದಕ್ಕೆ ಅಶ್ಲೀಲವಾಗಿ ಪದಪ್ರಯೋಗ ಮಾಡಿರುವುದು ಇಡೀ ಘಟನೆಗೆ ಮೂಲ ಕಾರಣವಾಗಿದೆ. ಟೋಲ್ ಗೇಟ್ ವಿರುದ್ಧ ಸಾರ್ವಜನಿಕರು ಕೂಡಾ ಅಸಮಾಧಾನ ವ್ಯಕ್ತಪಡಿಸಿದ್ದರು. ಹಲವು ಬಾರಿ ಟೋಲ್‌ಗೇಟ್ ತೆರವು ಬಗ್ಗೆಯೂ ಒತ್ತಾಯ ವ್ಯಕ್ತವಾಗಿತ್ತು. ಆದರೂ ಟೋಲ್ ಗೇಟ್ ಸಂಬಂಧಿಸಿ ಯಾವುದೇ ಕ್ರಮವಾಗದ ಹಿನ್ನೆಲೆಯಲ್ಲಿ ಪ್ರತಿಭಾ ಕುಳಾಯಿ ಹಾಗೂ ಸಾಮಾಜಿಕ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಈ ಪ್ರತಿಭಟನೆಯ ಫೋಟೊಕ್ಕೆ ಅಶ್ಲೀಲವಾಗಿ ಕಮೆಂಟ್ ಮಾಡಿದ್ದರು. ಸುದ್ದಿಸಂಸ್ಥೆಯ ಮುಖ್ಯಸ್ಥ ಶ್ಯಾಮ ಸುದರ್ಶನ್ ಭಟ್ ಆ ಬಳಿಕ ಸ್ಪಷ್ಟನೆಯನ್ನೂ ನೀಡಿ, ಕಮೆಂಟ್ ಹಾಕಿರುವುದು ಹೌದು, ಆದರೆ ಕೆಟ್ಟ ಅರ್ಥದಿಂದ ಅಲ್ಲ ಎಂದು ಹೇಳಿದ್ದರು. ಆದರೆ ಬೇರೆ ಯಾವ ಅರ್ಥದಲ್ಲಿ ಹೇಳಿರುವುದು ಎಂಬುದನ್ನು ಸ್ಪಷ್ಟಪಡಿಸಿರಲಿಲ್ಲ.
ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಿರುವ ಹಾಗೂ ಅಶ್ಲೀಲವಾಗಿ ಕಮೆಂಟದ ಮಾಡಿರುವ ಬಗ್ಗೆ ಪ್ರತಿಭಾ ಕುಳಾಯಿ ಅವರು ಖಡಕ್ ಆಗಿ ಪ್ರತಿಕ್ರಿಯೆ ನೀಡಿದ್ದರು. ನಾನು ಟೋಲ್ ವಿರೋಧಿ ಪ್ರತಿಭಟನೆಯಲ್ಲಿ ಅಡ್ಡವಾಗಿ ಮಲಗಿದ ಫೋಟೋ ಬಳಸಿ ಅಶ್ಲೀಲವಾಗಿ ಟ್ರೋಲ್ ಮಾಡಿದ್ದಾರೆ. ಕೀಳಾಗಿ ನನ್ನ ವಿರುದ್ಧ ಬರೆದಿದ್ದಾರೆ. ಬ್ರಾಹ್ಮಣ ಆಗಿ ಈ ರೀತಿಯ ಮಾನಗೆಟ್ಟ ರೀತಿಯಲ್ಲಿ ಬರೆದವನಿಗೆ ನಾನು ಹೆಣ್ಮಗಳಾಗಿ ಓದಲು ನಾಚಿಕೆ ಇಲ್ಲ ಎಂದು ಸುದ್ದಿಗೋಷ್ಟಿಯಲ್ಲಿ ಪ್ರತಿಕ್ರಿಯೆಯನ್ನು ಓದಿದ್ದರು. ಇಂತಹವರಿಗೆ ಸರಿಯಾದ ಪಾಠ ಕಲಿಸಬೇಕು ಎಂದು ಹೇಳಿದ್ದರು.
ಘಟನೆಯನ್ನು ಹಲವು ಮಂದ ಖಂಡಿಸಿದ್ದಾರೆ. ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರ, ಪುತ್ತೂರು ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಕೆಪಿಸಿಸಿ ಸಂಯೋಜಕ ಅಮಳ ರಾಮಚಂದ್ರ, ಮಂಗಳೂರು ಕಾಂಗ್ರೆಸ್ ಮುಖಂಡರು ಸೇರಿದಂತೆ ಹಲವು ಮಂದಿ ಖಂಡಿಸಿದ್ದಾರೆ. ತಕ್ಷಣವೇ ಆರೋಪಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ. ಸಾಮಾಜಿಕ ಕಾರ್ಯಕರ್ತರು ಕೂಡಾ ಇಂತಹ ಅವಹೇಳನವನ್ನು ಖಂಡಿಸಿದ್ದಾರೆ. ಸೂಕ್ತ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.
ಪೊಲೀಸರು ಆರೋಪಿಗಳ ಬಂಧನಕ್ಕೆ ತಂಡ ರಚನೆ ಮಾಡಿದ್ದು ಶ್ಯಾಮ ಸುದರ್ಶನ ಭಟ್ ಹಾಗೂ ಇತರ ಆರೋಪಿಗಳು ಸದ್ಯ ನಾಪತ್ತೆಯಾಗಿದ್ದಾರೆ.