ಮಳೆಗಾಲದಲ್ಲಿ ಒಂದಷ್ಟು ಹೊಸ ಹಣ್ಣಿನ ಗಿಡಗಳನ್ನು ತರಲು ನರ್ಸರಿಗಳಿಗೆ ಹೋಗಿದ್ದೀರಿ. ಲೋಂಗಾನ್, ಬಾಕುಪಾರಿ, ಕೈಮಿತೋ, ಜಬೋಟಿಕಾಬಾ ಹೀಗೆ ಚಿತ್ರವಿಚಿತ್ರ ಹಾಗೂ ಆಕರ್ಷಕ ಹೆಸರುಗಳಿರುವ ಗಿಡಗಳನ್ನು ಕೊಳ್ಳುತ್ತೀರಿ. ಆದರೆ ಖರೀದಿಸುವಾಗ ನೆನಪಿರುವ ಈ ಗಿಡಗಳ ಹೆಸರು ನಂತರದ ದಿನಗಳಲ್ಲಿ ಮರೆತುಹೋಗುತ್ತದೆ!
ಹಲವು ಕೃಷಿಕರು ಈ ಸಮಸ್ಯೆಗೆ ಸಿಲುಕಿದ್ದನ್ನು ಸ್ವತ: ಕಂಡಿದ್ದೇನೆ. ಅದರಲ್ಲೂ ನೂರೆಂಟು ರೀತಿಯ, ಹೆಸರೇ ಕೇಳದ ಹಣ್ಣಿನ ಗಿಡಗಳಿರುವಾಗ ಹೀಗಾಗುವುದು ಬಹಳ ಸಹಜ. ಇನ್ನು, ಪರಿಚಿತ ಗಿಡಗಳಲ್ಲಿ ಇರುವ ವಿವಿಧ ತಳಿಗಳ ಹೆಸರು ಮರೆತುಹೋಗುವ ಸಂಭವ ಇದೆ. ದೀರ್ಘಾವಧಿ ಬೆಳೆಗಳಲ್ಲಿ ಹೂವು-ಹಣ್ಣು ಆಗದ ಹೊರತು ತಳಿಗಳ ಪತ್ತೆಹಚ್ಚುವುದು ಕಷ್ಟ. ಹಾಗಾಗಿ ಇವುಗಳ ಸಂಕ್ಷಿಪ್ತ ಮಾಹಿತಿ, ಕೃಷಿಕ್ರಮ ಹಾಗೂ ಫೋಟೋಗಳು ತಕ್ಷಣಕ್ಕೆ ಸಿಕ್ಕರೆ ಬಹಳ ಅನುಕೂಲ. ಇಲ್ಲಿ ತಂತ್ರಜ಼್ಞಾನ ಉಪಯೋಗಕ್ಕೆ ಬರಬಲ್ಲುದು. ಈಗಂತೂ ಮೊಬೈಲಿನಿಂದ ಸ್ಕ್ಯಾನ್ ಮಾಡುವ ಮಾಡುವ ಕ್ಯೂಆರ್ ಕೋಡ್ ಗಳು ಎಲ್ಲರಿಗೂ ಪರಿಚಿತ. ಇದನ್ನೇ ಗಿಡಗಳ ಮಾಹಿತಿ ನೀಡಲು ಬಳಸಿಕೊಂಡರೆ?
ಈ ನಿಟ್ಟಿನಲ್ಲಿ ರಾಷ್ಟ್ರೀಯ ಗೇರು ಸಂಶೋಧನಾ ಕೇಂದ್ರ, ಪುತ್ತೂರಿನ ವಿಜ್ನಾನಿ ಡಾ. ಮೋಹನ್ ತಲಕಾಲುಕೊಪ್ಪ ಮತ್ತವರ ತಂಡ ಗೇರು ತಳಿಗಳ ಗುರುತಿಸುವಿಕೆಗೆ ಕ್ಯೂಆರ್ ಕೋಡ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. ಅಲ್ಲಿನ ಗೇರು ನರ್ಸರಿಯಲ್ಲಿ ಗಿಡ ಕೊಂಡಾಗ ಬಿಲ್ ಮೇಲೆ ಕ್ಯೂಆರ್ ಕೋಡ್ ಬರುತ್ತದೆ. ಅದನ್ನು ಮೊಬೈಲಿನಲ್ಲಿ ಸ್ಕ್ಯಾನ್ ಮಾಡಿದರೆ ನೀವು ಖರೀದಿಸಿದ ತಳಿಗಳ ಸಂಕ್ಷಿಪ್ತ ಮಾಹಿತಿ, ಸಂಪರ್ಕ ಸಂಖ್ಯೆ ಹಾಗೂ ಕೆಲವು ಉಪಯುಕ್ತ ಕೊಂಡಿಗಳು ಸಿಗುತ್ತವೆ. ಹಿಮ್ಮಾಹಿತಿ ನೀಡುವ ಅವಕಾಶವೂ ಇದೆ. ಗಿಡಗಳಿಗೆ ಕ್ಯೂಆರ್ ಕೋಡ್ ಲೇಬಲ್ ಗಳನ್ನು ಹಾಕಿದರೆ ಮಳೆ, ಸಾಗಣೆ, ಮಣ್ಣಿನ ಸಂಪರ್ಕ ಇತ್ಯಾದಿಗಳಿಂದ ಹಾಳಾಗುವ ಸಾಧ್ಯತೆ. ಜೊತೆಗೆ ಕೆಲವು ಬೆಳೆಗಳಲ್ಲಿ ನೂರರ ಲೆಕ್ಕದಲ್ಲಿ ಗಿಡ ಕೊಳ್ಳುವಾಗ ಎಲ್ಲ ಗಿಡಗಳಿಗೂ ಲೇಬಲ್ ಹಾಕಿದರೆ ವೆಚ್ಚ ಜಾಸ್ತಿ. ಹಾಗಾಗಿ ಬಿಲ್ಲಿನಲ್ಲೇ ಕ್ಯೂಆರ್ ಕೋಡ್ ಬರುವ ಹಾಗೆ ವ್ಯವಸ್ಥೆ. ಈ ಕೋಡ್ ನ್ನು ನೀವು ನಿಮ್ಮ ಮೊಬೈಲಿನಲ್ಲಿಟ್ಟುಕೊಂಡು ಬೇಕೆಂದಾಗ ಮಾಹಿತಿ ಪಡೆಯಬಹುದು.
ಈ ತಂತ್ರಾಂಶ ಇಷ್ಟಕ್ಕೇ ಸೀಮಿತವಲ್ಲ. ದೇಶದಾದ್ಯಂತ ಸಾವಿರಾರು ಕೃಷಿಕರು ಗೇರು ಸಂಶೋಧನಾ ಕೇಂದ್ರದಿಂದ ಗಿಡಗಳನ್ನು ತೆಗೆದುಕೊಂಡು ಹೋಗುತ್ತಾರೆ. ಇವರೆಲ್ಲರ ಮಾಹಿತಿಯನ್ನು ಪತ್ತೆಹಚ್ಚುವುದು ಕಷ್ಟಸಾಧ್ಯ. ಗಿಡಗಳು ಯಾವ್ಯಾವ ಜಿಲ್ಲೆ, ತಾಲೂಕು, ಹಳ್ಳಿಗಳಿಗೆ ಯಾವಾಗ ತಲುಪಿದೆ ಎಂಬ ವಿವರ ಸುಲಭಕ್ಕೆ ಸಿಗುವುದಿಲ್ಲ. ಇವೆಲ್ಲದರ ಜೊತೆಗೆ ಒಂದು ನಿರ್ದಿಷ್ಟ ಅವಧಿಗೆ ಎಷ್ಟು ಮಾರಾಟವಾಯಿತು ಅಥವಾ ನಿರ್ದಿಷ್ಟ ಸಂಖ್ಯೆಯ ಗಿಡ/ತಳಿ ಕೊಂಡುಹೋದ ಗೇರು ಕೃಷಿಕರನ್ನು ಪತ್ತೆಹಚ್ಚುವುದು, ವಿವಿಧ ತಿಂಗಳುಗಳ ಮಾರಾಟ ಇತ್ಯಾದಿ ವಿವರ ಪಡೆಯುವುದು ಈ ತಂತ್ರಾಂಶದಿಂದ ಚಿಟಿಕೆ ಹೊಡೆದಷ್ಟು ಸುಲಭ. ಇಷ್ಟಲ್ಲದೆ ತಂತ್ರಾಂಶದ ಮಾಹಿತಿಯಿಂದ ಗಿಡ/ತಳಿ ಹಂಚಿಕೆಯ ವಿವಿಧ ಪ್ರದೇಶಗಳ ನಕ್ಷೆ ತಯಾರಿಸಲು ಅನುಕೂಲ. ಅಂದರೆ ಇದು ಒಂದು ನರ್ಸರಿ ಅಥವಾ ಸಂಸ್ಥೆಯ ಕೆಲಸದ ಪ್ರಭಾವವನ್ನು ಪರೀಕ್ಷಿಸಲೂ ಅನುವಾಗುತ್ತದೆ.
ಇದಲ್ಲದೆ, ಗೇರು ಕೃಷಿಕರ ತೋಟಗಳಲ್ಲಿ ಎಷ್ಟು ಗಿಡ ಈಗ ಉಳಿದಿದೆ ಹಾಗೂ ಅವರು ಯಾವ ಅಂತರದಲ್ಲಿ ಗಿಡ ನೆಟ್ಟಿದ್ದಾರೆ ಅಂತ ವಿವರ ಪಡೆದು ದೇಶದ ಎಷ್ಟು ಎಕರೆ ಪ್ರದೇಶದಲ್ಲಿ ಸಂಸ್ಥೆಯ ಗಿಡಗಳಿವೆ ಎಂಬುದನ್ನು ಅಂದಾಜು ಮಾಡಬಹುದು! ಕೃಷಿಮಾಹಿತಿ ನಿಜವಾಗಿ ಯಾರಿಗೆ/ ಎಲ್ಲಿಗೆ ಅಗತ್ಯ ಎಂಬುದೂ ಗೊತ್ತಾಗುತ್ತದೆ. ಜೊತೆಗೆ ಹಲವು ವರ್ಷಗಳ ಗಿಡ/ತಳಿ ಬೇಡಿಕೆಯನ್ನು ವಿಶ್ಲೇಷಿಸಿ ಈ ವರ್ಷ ಎಷ್ಟು ಬೇಡಿಕೆ ಬರಬಹುದು ಎಂಬ ಮುನ್ಸೂಚನೆಯನ್ನೂ ಕೆಲಮಟ್ಟಿಗೆ ಪಡೆಯಲು ಸಾಧ್ಯ. ಇವು ಕೃಷಿ ಸಂಶೋಧಕರಿಗೆ/ನರ್ಸರಿ ಮಾಡುವವರಿಗೆ ಬಹು ಅಮೂಲ್ಯ ದತ್ತಾಂಶ. ಹಾಂ, ಗಿಡ ತೆಗೆದುಕೊಂಡು ಹೋದ ಕೃಷಿಕರ ವಿವರ ಪಡೆದು ವಾಟ್ಸಪ್ ಗುಂಪು ಮಾಡಿ ಅವರೊಡನೆ ನಿರಂತರ ಸಂಪರ್ಕದಲ್ಲಿರಲು ಸಾಧ್ಯ.
ಮೂಲತ: ಗೇರಿಗೆ ಅಭಿವೃದ್ಧಿಪಡಿಸಿದ್ದರೂ, ರೈತಸ್ನೇಹಿಯಾದ ಈ ತಂತ್ರಾಂಶವನ್ನು ಭಾರತೀಯ ಕೃಷಿ ಸಂಶೋಧನಾ ಪರಿಷತ್ತಿನಡಿಯಲ್ಲಿ (ಐಸಿಎಆರ್) ಬರುವ ಹಲವು ಸಂಶೋಧನಾ ಸಂಸ್ಥೆಗಳು ಹಾಗೂ ಕೃಷಿ ವಿಶ್ವವಿದ್ಯಾಲಯಗಳೂ ತಮ್ಮ ಬೆಳೆಗಳಿಗೆ ಅಲ್ಪಸ್ವಲ್ಪ ಬದಲಾವಣೆಗಳೊಂದಿಗೆ ಅಳವಡಿಸಿಕೊಳ್ಳಬಹುದು. ಅಂತೆಯೇ ವಿವಿಧ ರೀತಿಯ ಹೂ, ಹಣ್ಣಿನ ಗಿಡಗಳನ್ನು ಮಾರುವ ಖಾಸಗಿ ನರ್ಸರಿಯವರೂ ಲಾಭದಾಯಕವಾಗಿ ಇದನ್ನು ಬಳಸಿಕೊಳ್ಳಲು ಸಾಧ್ಯ.
ಸಂಪರ್ಕ : 99022 73468
ಅಡಿಕೆ ಬೆಳೆ ರಾಜ್ಯದಲ್ಲಿ ಮಾತ್ರವಲ್ಲ ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ವಿವಿಧ ಕಡೆಗಳಲ್ಲಿ ವಿಸ್ತರಣೆ…
ಶುದ್ಧತೆಯ ವಿಚಾರ ಬಂದಾಗ ನಂಬಿಕೆಯೂ ಮುಖ್ಯ. ಅದಕ್ಕಾಗಿ, 8 ದಶಕಗಳಿಂದ ನಿಮ್ಮ ಎದುರಿನಲ್ಲಿ…
ಹವಾಮಾನ ಬದಲಾವಣೆ ಪ್ರಪಂಚದ ಎಲ್ಲೆಡೆಯೂ ಸವಾಲಾಗುತ್ತಿದೆ.ತಾಪಮಾನ ಏರಿಕೆಯ ಕಾರಣದಿಂದ ಚಂಡಮಾರುತಗಳ ಸಂಖ್ಯೆ ಹೆಚ್ಚಾಗುವ…
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಘಟ್ಟದ ಕೆಳಗಿನ ಪ್ರದೇಶಗಳಲ್ಲಿ ಅಲ್ಲಲ್ಲಿ ಸಂಜೆ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಹರಿಯಾಣ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಯಮುನಾ ನಗರದಲ್ಲಿ ಇಂದು ಧೀನಬಂಧು ಚೋಟು…