ಮೀಸಲಾತಿಗಾಗಿ ಜಾತಿಯಾಗುವ ಮತಧರ್ಮ

April 16, 2025
9:41 PM
ಜಾತಿಗಣತಿ ಮಾಡಿ ಏನನ್ನು ಸಾಧಿಸಲು ಸಾಧ್ಯ? ಸದ್ಯ ಬಹಿರಂಗ ಆಗಿರುವ ವರದಿಯು ಇನ್ನಷ್ಟು ಜಾತಿ ವೈಷಮ್ಯವನ್ನು ಬಿತ್ತುವಲ್ಲಿ ಕಾರಣವಾಗಲಿದೆ.

ಹತ್ತು ವರ್ಷಗಳ ಹಿಂದೆ ಸಿದ್ಧವಾಗಿದ್ದರೂ ಈಗ (2025ರ ಏಪ್ರಿಲ್ ತಿಂಗಳಲ್ಲಿ) ಗಜಪ್ರಸವಗೊಂಡ ಕರ್ನಾಟಕದ ಜಾತಿಗಣತಿ ವರದಿಯು ಹೊಸ ಜಾತಿ ಸಮೀಕರಣಗಳಿಗೆ ಎಡೆಮಾಡಿದೆ. ಹತ್ತು ವರ್ಷಗಳಿಗೊಮ್ಮೆ ನಡೆಯುವ ಸಾರ್ವತ್ರಿಕ ಜನಗಣತಿಯಲ್ಲೇ ಜಾತಿಗಳ ಹೆಸರು ಬರುವುದರಿಂದ ಅದರಿಂದಲೇ ಜಾತಿ ಸಮೀಕರಣವನ್ನು ರೂಪಿಸಿಕೊಳ್ಳಬಹದಾಗಿತ್ತು. ಆದರೆ ಜಾತಿಗಣತಿ ಮಾಡಿಸಿದ ಮೇಲ್ಮೆಯ ಕುರುಹಿಗಾಗಿ 2015ರಲ್ಲಿ ಅಂದಿನ ಶಾಶ್ವತ ಹಿಂದುಳಿದ ವರ್ಗಗಳ ಸಮಿತಿಯ ಅಧ್ಯಕ್ಷರಾಗಿದ್ದ ಶ್ರೀ ಎಚ್. ಎ. ಕಾಂತರಾಜು ಅವರ ನೇತೃತ್ವದಲ್ಲಿ ಆರಂಭಿಸಿದ ಮಾಹಿತಿ ಸಂಗ್ರಹದ ಸರ್ವೆ ಕಾರ್ಯವು ಮೂರೇ ತಿಂಗಳಲ್ಲಿ ಮುಗಿದರೂ ವರದಿಯನ್ನು ಸಿದ್ದಪಡಿಸಲು ಹತ್ತು ವರ್ಷಗಳು ತಗಲಿ ಅದೀಗ 2025ರ ಮಾರ್ಚ್‍ನಲ್ಲಿ ಎರಡನೇ ಅಧ್ಯಕ್ಷರಾದ ಶ್ರೀ ಜಯಪ್ರಕಾಶ್ ಹೆಗ್ಗಡೆಯವರ ನೇತೃತ್ವದಲ್ಲಿ ಸರಕಾರಕ್ಕೆ ಸಲ್ಲಿಕೆಯಾಗಿದೆ. ಆದರೆ ಸರಕಾರವು ಈ ವರದಿಯನ್ನು ಅಂಗೀಕರಿಸಲು ಸಾಧ್ಯವೇ? ಏಕೆಂದರೆ ವರದಿಯಲ್ಲಿ ಒಂದು ಮತಧರ್ಮವಾದ ಮುಸ್ಲಿಮರನ್ನು ಒಂದು ಜಾತಿ ಎಂಬುದಾಗಿ ಪರಿಗಣಿಸಿರುವುದು ಮತ್ತು ಹಿಂದೂ ಜಾತಿಗಳನ್ನು ಛಿದ್ರ ಛಿದ್ರ ವಾಗಿ ಒಡೆದು ಲೆಕ್ಕಾಚಾರ ನೀಡಿರುವುದನ್ನು ಕಂಡಾಗ ಈ ವರದಿಯ ಹಿಂದೆ ಒಂದು ಹಿಡನ್ ಅಜೆಂಡಾ ಇರುವುದು ಸ್ಪಷ್ಟವಾಗುತ್ತದೆ. ಮುಸ್ಲಿಮರಲ್ಲಿರುವ ಒಳ ಪಂಗಡಗಳನ್ನು ಗುರುತಿಸದೇ ಅವರೆಲ್ಲರನ್ನು ಒಂದೇ ಜಾತಿ ಎಂದು ಪರಿಗಣಿಸಿರುವುದನ್ನು ಜಾಣ್ಮೆ ಎನ್ನಬೇಕೋ ಕುಯುಕ್ತಿ ಎನ್ನಬೇಕೋ ಎಂಬ ಜಿಜ್ಞಾಸೆ ಕಾಡುತ್ತದೆ. ಮುಸ್ಲಿಮರಲ್ಲಿಯೂ ಶಿಯಾ, ಸುನ್ನಿ ಹಾಗೂ ಇನ್ನಿತರ ಒಳಪಂಗಡಗಳು ಇರುವುದಲ್ಲದೆ ಆರ್ಥಿಕವಾಗಿ ಸಾಕಷ್ಟು ಸ್ಥರಬೇಧಗಳಿವೆ. ಹಾಗಾಗಿ ಸಾಮಾಜಿಕ ಸುಧಾರಣೆಯ ದೃಷ್ಟಿಯಿಂದ ನೋಡುವುದಾದರೆ ಬಡ ಮುಸ್ಲಿಂ ಪಂಗಡಗಳನ್ನು ಪ್ರತ್ಯೇಕವಾಗಿ ಗುರುತಿಸಬೇಕಿತ್ತು. ಹಾಗೆ ಮಾಡದಿರುವುದರ ಹಿಂದೆ ಯಾವ ಯೋಚನೆ ಇದೆ ಎಂಬುದು ಚರ್ಚಾರ್ಹ ವಿಷಯ.

Advertisement

ಆಡಳಿತ ಪಕ್ಷದವರು ಮತ್ತು ವಿರೋಧ ಪಕ್ಷದವರು ತಮ್ಮ ನೆಲೆಗಳಿಂದ ಪರ ವಿರೋಧ ಅಭಿಪ್ರಾಯಗಳನ್ನು ನೀಡುತ್ತಿದ್ದಾರೆ. ಆದರೆ ಇದು ಯಾರೇ ಒಬ್ಬ ಸಾಮಾನ್ಯ ನಾಗರಿಕನು ತನ್ನ ಅಭಿಪ್ರಾಯ ಮುಂದಿಡುವ ಸಂದರ್ಭವಾಗಿದೆ. ಈ ವರದಿಯ ಪ್ರಕಾರ ಮುಸಲ್ಮಾನರ ಎಲ್ಲಾ ಪಂಗಡಗಳನ್ನು ಮಾತ್ರ ಒಂದು ಜಾತಿಯಾಗಿ ಪರಿಗಣಿಸಿ ಇನ್ನುಳಿದ ಜಾತಿಗಳಲ್ಲಿ ಉಪಜಾತಿಗಳನ್ನು ಗುರುತಿಸಿ ಜನಸಂಖ್ಯೆಯನ್ನು ಲೆಕ್ಕ ಹಾಕಿರುವುದು ಹೇಗೆ ಸರಿ ಎಂಬುದನ್ನು ಕೇಳಬೇಕಾಗಿದೆ. ಈ ಪ್ರಶ್ನೆಯನ್ನು ಆಡಳಿತ ಪಕ್ಷದಲ್ಲಿರುವ ಸಚಿವರು, ಶಾಸಕರು ಹಾಗೂ ಇನ್ನಿತರ ನಾಯಕರು ಕೇಳುತ್ತಿದ್ದಾರೆ. ಉದಾಹರಣೆಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‍ರವರು ವೀರಶೈವ ಮತ್ತು ಲಿಂಗಾಯತರನ್ನು ಒಟ್ಟಾಗಿ ಪರಿಗಣಿಸಿ ಇನ್ನೊಮ್ಮೆ ಜಾತಿಗಣತಿ ಮಾಡಲು ಸಲಹೆ ನೀಡಿದ್ದಾರೆ. ಸಚಿವ ಶ್ರೀ ರಾಮಲಿಂಗಾ ರೆಡ್ಡಿಯವರು ತಮ್ಮ ಜಾತಿಯವರ ಸಭೆ ಕರೆದಿದ್ದಾರೆ. ಒಕ್ಕಲಿಗರ ನಾಯಕರೂ ಕೂಡ ಈ ರೀತಿಯ ಜಾತಿಗಣತಿಯನ್ನು ವಿರೋಧಿಸುತ್ತಿದ್ದಾರೆ. ಉಪಮುಖ್ಯಮಂತ್ರಿ ಶ್ರೀ ಡಿ.ಕೆ ಶಿವಕುಮಾರ್‍ರವರು ಗಣತಿಯ ಬಗ್ಗೆ ಅಭಿಪ್ರಾಯ ಸಂಗ್ರಹಿಸುವುದಾಗಿ ಹೇಳಿದ್ದಾರೆ. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾವು ಇದೀಗ ವರದಿಯ ಸಾಧಕ ಬಾಧಕಗಳನ್ನು ಪರಿಶೀಲಿಸಲು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸಲು ಮುಂದಾಗಿದೆ. ಬ್ರಾಹ್ಮಣರು ಕೂಡ ತಮ್ಮ ಜಾತಿಗಳನ್ನು ವಿಂಗಡಿಸಿದ್ದನ್ನು ಖಂಡಿಸಿ ವರದಿಯ ಔಚಿತ್ಯವನ್ನು ಪ್ರಶ್ನಿಸಿದ್ದಾರೆ. ಇನ್ನು ದಲಿತರು ಅಥವಾ ಅವರ ಪರವಾಗಿ ಎಡಪಂಥೀಯ ಸಾಹಿತಿಗಳು ಧ್ವನಿ ಎತ್ತಿರುವುದು ಎಲ್ಲಿಯೂ ಕೇಳಿಸುವುದಿಲ್ಲ. ಪರಿಶಿಷ್ಟ ಜಾತಿಯವರು ಒಂದು ಕೋಟಿಗಿಂತ ಹೆಚ್ಚಿದ್ದರೂ ಅವರನ್ನು 101 ಪಂಗಡಗಳಲ್ಲಿ ವಿಂಗಡಿಸಿರುವ ವರದಿಗಾರರು ಅವರನ್ನು ಮುಸ್ಲಿಮರಿಗಿಂತ ಬಹಳ ದುರ್ಬಲ ನೆಲೆಯಲ್ಲಿ ನಿಲ್ಲಿಸಿದ್ದಾರೆ. ಆದರೆ ಯಾರೊಬ್ಬರೂ ಎಲ್ಲಾ ಹಿಂದೂಗಳನ್ನು ಒಂದೇ ಜಾತಿಯಾಗಿ ಗುರುತಿಸಲು ಬೇಡಿಕೆ ಇಟ್ಟಿಲ್ಲ.

ಪ್ರಸ್ತುತ ವರದಿಯಲ್ಲಿ ಹೇಳಿರುವಂತೆ ಮುಸಲ್ಮಾನ್ ಜಾತಿಗಳವರೆಲ್ಲರೂ ಒಂದು ಎಂತಾದರೆ ಹಿಂದೂ ಜಾತಿಗಳನ್ನು ಒಂದೇ ಎಂದು ಪರಿಗಣಿಸಲು ತೊಡಕಾಗುವ ಅಂಶಗಳನ್ನು ನಮೂದಿಸಬೇಕು. ಮೇಲು ಕೀಳು, ಮಡಿ ಮೈಲಿಗೆ, ಬಡವ ಶ್ರೀಮಂತ ಇತ್ಯಾದಿ ಭೇದಗಳು ಮುಸ್ಲಿಂ ಮತ್ತು ಕ್ರಿಶ್ಚಿಯನ್ನರ ನಡುವೆಯೂ ಇವೆಯೇ ಎಂದು ಪರಿಶೀಲಿಸಬೇಕು. ಆಗ ಸಹಜವಾಗಿ ಈ ವರದಿಯನ್ನು ನ್ಯಾಯಬದ್ಧಗೊಳಿಸಲು ಸಾಧ್ಯ. ಅದಕ್ಕೆ ಸರಕಾರದಲ್ಲಿಯೂ ಸಮದರ್ಶಿತ್ವದ ಮನಸ್ಸು ಇರಬೇಕು.

ಪ್ರಾಯಶಃ ಈಗಲಾದರೂ ಜಾತಿ ವೈಶಮ್ಯದ ವಿಷವನ್ನು ನಿವಾರಿಸಿ ಏಕತೆಯನ್ನು ಸಾಧಿಸಲು ಮೇಲು ಕೀಳಿನ ಧೂಳನ್ನು ಕಳೆದು ಸಮಸ್ತ ಹಿಂದುಗಳು ಒಂದಾಗಬೇಕೆಂಬ ಎಚ್ಚರವನ್ನು ಈ ವರದಿಯು ನೀಡುತ್ತದೆ. ಅದೇನೂ ಸುಲಭವಲ್ಲ, ಹಾಗೆಲ್ಲ ಸಮಾನತೆಯನ್ನು ತರಲು ಇಂದಿನಿಂದ ನಾಳೆಗೆ ಸಾಧ್ಯವಿಲ್ಲವೆಂಬ ಪ್ರತಿಮಾತು ಕೇಳಿ ಬರುವುದರಲ್ಲಿ ಅಚ್ಚರಿ ಇಲ್ಲ. ಆದರೆ ಅಂತಹ ಪರಿವರ್ತನೆ ಮತ್ತು ಏಕತೆಯನ್ನು ಸಾಧಿಸುವ ಅನಿವಾರ್ಯತೆಯನ್ನು ಈ ವರದಿ ಒತ್ತಿ ಹೇಳುತ್ತದೆ.

ಏಕತೆಯ ಕೊರತೆ ಎಷ್ಟೊಂದು ವಿನಾಶಕಾರಿ ಎಂಬುದು ಕಾಸರಗೋಡನ್ನು ಕನ್ನಡನಾಡಿನಿಂದ ಕಳಕೊಂಡ ಘಟನೆಯಲ್ಲಿ ಸ್ಪಷ್ಟವಾಗುತ್ತದೆ. ಭಾಷಾವಾರು ಪ್ರಾಂತಗಳ ಗಡಿನಿರ್ಣಯಕ್ಕಾಗಿ ಸಮೀಕ್ಷೆ ನಡೆಸಿದಾಗ ಕಾಸರಗೋಡು ಪ್ರಾಂತದಲ್ಲಿ ಕನ್ನಡ ಮಾತನಾಡುತ್ತಿದ್ದವರು ತಮ್ಮ ಮನೆ ಮಾತನ್ನು ಕನ್ನಡ, ಹವ್ಯಕ, ತುಳು, ಮರಾಟಿ. ಕರ್ಹಾಡ ಬ್ರಾಹ್ಮಣ ಎಂಬಿತ್ಯಾದಿಯಾಗಿ ವಿಭಿನ್ನವಾಗಿ ದಾಖಲು ಮಾಡಿದರು. ಹೀಗಾಗಿ ಅವರೆಲ್ಲರೂ ಭಾಷಾ ಅಲ್ಪಸಂಖ್ಯಾಕರಾದರು. ಮಲಯಾಳ ಮಾತಾಡುತ್ತಿದ್ದವರೆಲ್ಲ ತಮ್ಮ ಭಾಷೆ ಮಲಯಾಳ ಎಂದಷ್ಟೇ ಹೇಳಿದ್ದರಿಂದ ಕಾಸರಗೋಡು ಬಹುಸಂಖ್ಯಾತ ಮಲಯಾಳಿ ಭಾಷಿಕರ ಜಿಲ್ಲೆಯಾಗಿ ಘೋಷಿಸಲ್ಪಟ್ಟಿತು. ಇನ್ನೀಗ ಕಾಸರಗೋಡಿನಲ್ಲಿ ಕನ್ನಡ ಮಾತಾಡುವವರು ಹೆಚ್ಚಿದ್ದಾರೆಂದು ಗೋಗರೆದು ಫಲವಿಲ್ಲದಾಗಿದೆ.

ಭಾರತದ ಜಾತಿ ಪದ್ಧತಿಯು ಸ್ತರೀಕರಣಗೊಂಡ ಸಂಕೀರ್ಣ ವ್ಯವಸ್ಥೆ. ಕಾಲಕ್ರಮೇಣ ಜಾತಿ ಸ್ತರೀಕರಣವು ವರ್ಣ ಸ್ತರೀಕರಣ ಮತ್ತು ಆರ್ಥಿಕ ವರ್ಗ ಸ್ತರೀಕರಣದೊಂದಿಗೆ ಸಂಕೀರ್ಣಗೊಂಡಿತು. ಪ್ರತ್ಯೇಕತೆ, ಅಸ್ಪೃಶ್ಯತೆ, ಸ್ತ್ರೀಯರ ಅಸಮಾನತೆಗಳ ನಿಯಮದೊಂದಿಗೆ ಸಮಾಜವು ಕಟ್ಟಲ್ಪಟ್ಟ ಸ್ಥಿತಿಯಲ್ಲಿ ಚಲನಶೀಲತೆಯನ್ನು ಕಳಕೊಂಡಿತು. ಆದರೂ ಆಂತರ್ಯದಲ್ಲಿ ಬದಲಾವಣೆಯ ತುಡಿತ ಮತ್ತು ಸಾಹಸ ಪ್ರವೃತ್ತಿಯ ಸಾಧಕರಿಂದ ಸಂಸ್ಕೃತಾನುಕರಣ ಮತ್ತು ಪಾಶ್ವಾತ್ತಿಕರಣದ ಪ್ರಕ್ರಿಯೆಗಳು ಜರಗಿವೆ. ಬ್ರಹ್ಮಸಮಾಜ, ಆರ್ಯಸಮಾಜ, ರಾಮಕೃಷ್ಣ ಮಿಷನ್, ಪ್ರಾರ್ಥನಾ ಸಮಾಜ, ದಾಸ ಪಂಥ, ನಾರಾಯಣಗುರುಗಳ ಚಳುವಳಿ ಇತ್ಯಾದಿಗಳಲ್ಲದೆ ಗಾಂಧೀಜೀ, ಜ್ಯೋತಿಬಾ ಫುಲೆ, ಕುದ್ಮಲ್ ರಂಗರಾವ್ ಮುಂತಾದವರ ಪ್ರೇರಣೆಯಿಂದ ಸಮಾಜದಲ್ಲಿ ಮಹಿಳೆಯರನ್ನೂ ಸೇರಿದಂತೆ ಅಂತರ್ಗತೀಕರಣದ ಪರಿವರ್ತನೆ ನಡೆದಿದೆ. ಈ ಪರಿವರ್ತನೆಗಳ ಹೊರತಾಗಿಯೂ ದಲಿತರ ಮೇಲೆ ದೌರ್ಜನ್ಯ, ಮಲ ಹೊರುವಂತಹ ಹೀನಾಯ ಪದ್ಧತಿ, ಮಹಿಳೆಯರ ಶೋಷಣೆ ಮುಂತಾಗಿ ಸಮಸ್ಯೆಗಳು ಉಳಿದಿವೆ. ಇವುಗಳ ಪರಿಹಾರಕ್ಕಾಗಿ ಸ್ವತಂತ್ರ ಭಾರತದಲ್ಲಿ ಶಾಸನಗಳೂ ಸುಧಾರಣಾ ಕಾರ್ಯಕ್ರಮಗಳೂ ನಡೆಯುತ್ತಿವೆ. ಆದರೆ ಇವುಗಳ ವೇಗ ನಿಯಂತ್ರಣವನ್ನು ಮಾಡುವಲ್ಲಿ ಕ್ಷತ್ರಿಯ, ವೈಶ್ಯ, ಶೂದ್ರ ಪಂಗಡಗಳ ಮಧ್ಯಮ ಜಾತಿಗಳೂ ಸರಕಾರಿ ಅಧಿಕಾರಿಗಳ ಭ್ರಷ್ಟಾಚಾರವೂ ಕಾರಣವಾಗಿದೆ. ಈ ಒಳಸುಳಿಗಳನ್ನಿಟ್ಟುಕೊಂಡು ಜಾತಿಗಣತಿ ಮಾಡಿ ಏನನ್ನು ಸಾಧಿಸಲು ಸಾಧ್ಯ? ಸದ್ಯ ಬಹಿರಂಗ ಆಗಿರುವ ವರದಿಯು ಇನ್ನಷ್ಟು ಜಾತಿ ವೈಷಮ್ಯವನ್ನು ಬಿತ್ತುವಲ್ಲಿ ಕಾರಣವಾಗಲಿದೆ.

ಈ ವಿಫಲ ವರದಿಯ ತಯಾರಿಗೆ 772 ಅಧಿಕಾರಿಗಳು, 560 ‘ಗ್ರೇಡ್ 2’ ಅಧಿಕಾರಿಗಳು, 1,33,000 ಶಿಕ್ಷಕರು, ಪಂಚಾಯತ್ ರಾಜ್ ಇಲಾಖೆಗಳ 22,190 ಮಂದಿಯಲ್ಲದೆ ಇವರಿಗೆ ತರಬೇತಿ ನೀಡಿದ 2788 ತಜ್ಞರು ಸೇರಿದಂತೆ ಸುಮಾರು 1,60,000 ಜನರ ಪರಿಶ್ರಮ ನಡೆದಿದೆ. ತಗಲಿದ ಒಟ್ಟು ವೆಚ್ಚ 192 ಕೋಟಿ ರುಪಾಯಿ. ಇನ್ನು ಇದನ್ನು ಶೈತ್ಯಾಗಾರಕ್ಕೆ ತಳ್ಳಿದರೆ ಉಳಿಯುವ ಪ್ರಶ್ನೆ “ಬೇಕಿತ್ತಾ ಇದು?”

ನಮ್ಮ WhatsApp ಚಾನೆಲ್‌ ಫಾಲೋ ಮಾಡಲು ಇಲ್ಲಿ ಕ್ಲಿಕ್‌ ಮಾಡಿರಿ..

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಡಾ.ಚಂದ್ರಶೇಖರ ದಾಮ್ಲೆ

ಡಾ. ಚಂದ್ರಶೇಖರ ದಾಮ್ಲೆಯವರು ಸುಳ್ಯದ ನೆಹರು ಮೆಮೋರಿಯಲ್ ಕಾಲೇಜ್ ನಲ್ಲಿ ಸಮಾಜಶಾಸ್ತ್ರ ಪ್ರಾಧ್ಯಾಪಕರಾಗಿ 35 ವರ್ಷಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು. ವೃತ್ತಿಯಲ್ಲಿರುವಾಗಲೇ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾಗಿ ಸಮಾಜಸೇವೆಯಲ್ಲಿ ತೊಡಗಿಕೊಂಡವರು. ಸಾಂಸ್ಕೃತಿಕ ಸಂಘದ ಮೂಲಕ ಮಕ್ಕಳಿಗೆ ಯಕ್ಷಗಾನ ನಿರ್ದೇಶಕನ, ಸುಳ್ಯದಲ್ಲಿ ಯಕ್ಷಗಾನ ಹಿತರಕ್ಷಣಾ ವೇದಿಕೆಯ ಸ್ಥಾಪನೆ, ಸಂಪೂರ್ಣ ಸಾಕ್ಷರತಾ ಆಂದೋಲನದಲ್ಲಿ ಸಂಪನ್ಮೂಲ ವ್ಯಕ್ತಿ, ಕನ್ನಡಮಾಧ್ಯಮದಲ್ಲಿ ಸ್ನೇಹ ಶಿಕ್ಷಣ ಸಂಸ್ಥೆಯ ಸ್ಥಾಪನೆ ಮುಂತಾದ ಸಮಾಜಮುಖಿ ಕಾರ್ಯಗಳಲ್ಲಿ ಸೇವೆ ನೀಡಿದವರು. ಶಿಕ್ಷಣದಲ್ಲಿ ಸೃಜನಶೀಲತೆಗೆ ಒತ್ತು ನೀಡುವ ದಾಮ್ಲೆಯವರು ಸಂಶೋಧಕರಾಗಿದ್ದು ಕನ್ನಡ ಇಂಗ್ಲಿಷ್ ಭಾಷೆಗಳಲ್ಲಿ ಕೃತಿ ರಚನೆ ಮಾಡಿದವರು. 'ನೆಲದನಂಟು' ಮತ್ತು "ಶಾಲೆ ಎಲ್ಲಿದೆ?" ಇವು ಇವರ ಪ್ರಸಿದ್ಧ ಕಾದಂಬರಿಗಳು. ಅನೇಕ ಪ್ರಶಸ್ತಿ ಸಮ್ಮಾನಗಳಿಂದ ಗೌರವಿಸಲ್ಪಟ್ಟ ದಾಮ್ಲೆಯವರಿಗೆ ಅಸಾಮಾನ್ಯ ಕನ್ನಡಿಗ ಪ್ರಶಸ್ತಿ, ಯಕ್ಷಮಂಗಳ ಪ್ರಶಸ್ತಿ, ಅರಣ್ಯಮಿತ್ರ ಮತ್ತು ಜಲಮಿತ್ರ ಪ್ರಶಸ್ತಿ, Nation Builder ಪ್ರಶಸ್ತಿ ಮುಂತಾದುವು ಲಭಿಸಿವೆ. ಹೊಸದಿಗಂತ ಪತ್ರಿಕೆಯಲ್ಲಿ "ಇದ್ಯಾಕೆ ಹೀಗೆ " ಅಂಕಣವನ್ನು ಬರೆಯುತ್ತಿದ್ದರು.

ಇದನ್ನೂ ಓದಿ

ಪಹಲ್ಗಾಮ್‌ನಲ್ಲಿ ಭಯೋತ್ಪಾದಕರ ದಾಳಿ | ಮೃತಪಟ್ಟ ಕುಟುಂಬಗಳಿಗೆ  ಶೃಂಗೇರಿ ಮಠದಿಂದ 2 ಲಕ್ಷ ಪರಿಹಾರ
May 2, 2025
7:13 AM
by: The Rural Mirror ಸುದ್ದಿಜಾಲ
ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಇಂದು ಮಳೆ ಸಾಧ್ಯತೆ
May 2, 2025
6:58 AM
by: The Rural Mirror ಸುದ್ದಿಜಾಲ
ಜೀವನ ಪೂರ್ತಿ ಈ ರಾಶಿಯವರ ಮೇಲಿರುವುದು ಗುರು ಬಲ !
May 2, 2025
6:39 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 01-05-2025 | ಕೆಲವು ಕಡೆ ಸಂಜೆ ಮಳೆ ನಿರೀಕ್ಷೆ | ಮೇ.6 ರಿಂದ ಮತ್ತೆ ಮಳೆ ಆರಂಭ |
May 1, 2025
1:42 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror

Join Our Group