ಜಾತಿಯ ಶುದ್ಧತೆ ಮತ್ತು ನೈತಿಕ ಮುಕ್ತತೆ ಎರಡು ಜೊತೆಯಲ್ಲಿ ಸಾಧ್ಯವಿಲ್ಲ

July 4, 2025
9:02 PM
ಹಿರಿಯ ತಲೆಮಾರಿನವರಿಗೆ ಅಸಹ್ಯವೆನಿಸುವ ಲೈಂಗಿಕ ವರ್ತನೆಗಳಲ್ಲಿ ಮುಂದುವರೆಯಲು ಹೊಸ ತಲೆಮಾರಿನ ಯುವ ಜನರಿಗೆ ಹೇಗೆ ಧೈರ್ಯ ಬರುತ್ತದೆ? ಸಮಾಜ ವಿಧಿಸಿರುವ ವಿಧಿ ನಿಷೇಧಗಳ ಅರಿವು ಹೆತ್ತವರಿಂದ ಮಕ್ಕಳಿಗೆ ಹರಿಯದಿರುವಂತೆ ಆಗಲು ಕಾರಣಗಳೇನು? ಯುವ ಜನರ ಮುಕ್ತ ಸಂಬಂಧಗಳು ಮತ್ತು ಅವುಗಳ ಫಲಿತಗಳು ಹಿರಿಯರ ಆಕ್ಷೇಪಗಳಿಗೆ ಒಳಗಾಗಲು ಕಾರಣಗಳೇನು?

ಇಂದಿನ ದಿನಗಳಲ್ಲಿ ಕನ್ನಡ ದೃಶ್ಯ ಮಾಧ್ಯಮಗಳ ಸಂಜೆಯ ವಾರ್ತೆಗಳಲ್ಲಿ ದಿನಾಲು ಮುಕ್ಕಾಲು ಅಂಶ ಸುದ್ದಿಗಳು ಅನೈತಿಕ ಸಂಬಂಧಗಳು, ಪ್ರತಿಕಾರ, ಕೊಲೆ ಕಸ್ಟಡಿಗಳದ್ದೇ ಆಗಿವೆ. ಇದರಲ್ಲಿ ಬಹುತೇಕ ಘಟನೆಗಳಲ್ಲಿ ಗಂಡು ಹೆಣ್ಣಿನ ಆಕರ್ಷಣೆ, ಭೇಟಿಯ ಅವಕಾಶಗಳು, ”ಏನೂ ಆಗುವುದಿಲ್ಲ” ಎಂಬ ಅರೆಜ್ಞಾನದಿಂದ ಮುಂದುವರೆದು ಹೆಣ್ಣು ಗರ್ಭಿಣಿಯಾಗುವುದು, ಗರ್ಭಪಾತಕ್ಕೆ ಹೆಣ್ಣಿನ ಮನವೊಲಿಸಲು ಗಂಡು ಯತ್ನಿಸುವುದು, ಅದು ವಿಫಲವಾಗಿ ಮದುವೆಗೆ ಒತ್ತಾಯಿಸುವುದು, ಮತ್ತೆ ಗಂಡಿನ ಮನೆಯವರ ತಕರಾರು, ಹೆಣ್ಣಿನ ಧರಣಿ ಸತ್ಯಾಗ್ರಹ, ಮಾರಾಮಾರಿ ಇತ್ಯಾದಿ ಸಾಮಾಜಿಕ ಅಶಾಂತಿಯ ಘಟನೆಗಳು ಗ್ರಾಮೀಣ ವಲಯದಲ್ಲಿ ನಡೆಯುವುದು ಹೆಚ್ಚಾಗಿದೆ. ಇದಕ್ಕಿಂತಲೂ ಪ್ರಮುಖವಾಗಿ ಮಕ್ಕಳಿರುವ ವಿವಾಹಿತ ಸ್ತ್ರೀ ಪರಪುರುಷರಿಗೆ ಮರುಳಾಗುವುದು, ಗಂಡಸರನ್ನು ಮರಳು ಮಾಡಿ ತನ್ನ ಗಂಡನ ಕೊಲೆಗೆ ಸಂಚು ಮಾಡುವುದು, ಪ್ರಾಣಿ ದಯೆ ಇಲ್ಲದಂತೆ ಹೊಡೆದು ಸಾಯಿಸಿದ ಬಳಿಕ ಪೊಲೀಸರಿಗೆ ಏನಾದರೂ ಸಾಕ್ಷಿ ದೊರೆತು ಬಂಧಿಸಲ್ಪಟ್ಟು ಜೈಲು ಪಾಲಾಗಿ ಬದುಕನ್ನೇ ಕಳೆದುಕೊಳ್ಳುವ ಅನೇಕ ಘಟನೆಗಳ ವರದಿಗಳು ಕನ್ನಡದ ಪ್ರತಿಯೊಂದು ಸುದ್ದಿವಾಹಿನಿಯಲ್ಲಿ ಬರುತ್ತಲೇ ಇರುತ್ತವೆ. ಇವರ ದುರ್ವರ್ತನೆಯ ದುಶ್ಫಲವನ್ನು ಮಕ್ಕಳು ಅನುಭವಿಸಬೇಕಾಗುತ್ತದೆ. ಇಂತಹ ಅಸಹನೀಯ ಭವಿಷ್ಯದ ಬಗ್ಗೆ ಒಂದಿನಿತೂ ಚಿಂತಿಸಲಾಗದವರಾಗಿ ದೇಹ ಸುಖದ ಆಸೆಗೆ ಯಾಕೆ ಒಳಗಾಗುತ್ತಾರೆ ಎಂಬುದೇ ಆತಂಕದ ಪ್ರಶ್ನೆ.

ಹಿರಿಯ ತಲೆಮಾರಿನವರಿಗೆ ಅಸಹ್ಯವೆನಿಸುವ ಲೈಂಗಿಕ ವರ್ತನೆಗಳಲ್ಲಿ ಮುಂದುವರೆಯಲು ಹೊಸ ತಲೆಮಾರಿನ ಯುವ ಜನರಿಗೆ ಹೇಗೆ ಧೈರ್ಯ ಬರುತ್ತದೆ? ಸಮಾಜ ವಿಧಿಸಿರುವ ವಿಧಿ ನಿಷೇಧಗಳ ಅರಿವು ಹೆತ್ತವರಿಂದ ಮಕ್ಕಳಿಗೆ ಹರಿಯದಿರುವಂತೆ ಆಗಲು ಕಾರಣಗಳೇನು? ಯುವ ಜನರ ಮುಕ್ತ ಸಂಬಂಧಗಳು ಮತ್ತು ಅವುಗಳ ಫಲಿತಗಳು ಹಿರಿಯರ ಆಕ್ಷೇಪಗಳಿಗೆ ಒಳಗಾಗಲು ಕಾರಣಗಳೇನು? ಈ ವಿಚಾರದಲ್ಲಿ ಕಾನೂನು, ಪೋಲೀಸ್ ಮತ್ತು ಕೋರ್ಟುಗಳು ತೆಗೆದುಕೊಳ್ಳುವ ನಿರ್ಧಾರಗಳು ವಿರೋಧಾಭಾಸದ ತೀರ್ಮಾನಗಳಾಗುವುದೇಕೆ? ಎಲ್ಲಕ್ಕಿಂತ ಮುಖ್ಯವಾಗಿ ಇಂತಹ ಘಟನೆಗಳು ನಡೆದಾಗ ಅದರ ವಿಚಾರದಲ್ಲಿ ಸಮಾಜದ ಗಣ್ಯರು, ಮಠಾಧಿಪತಿಗಳು, ರಾಜಕೀಯ ನಾಯಕರು ಕ್ರಾಂತಿಕಾರಿ ನಿರ್ಧಾರಗಳನ್ನು ಪ್ರಕಟಿಸಲು ಹಿಂದುಳಿಯುವುದೇಕೆ?

ಆರಂಭದಲ್ಲಿ ಪರಸ್ಪರ ಪರಿಚಯ, ಸಲುಗೆ, ಜೋಕು, ಜೊತೆಯಲ್ಲಿ ಕಿರು ಪ್ರಯಾಣ, ಪಾರ್ಕ್ ಗಳಲ್ಲಿ ಸಂಜೆ ಕಳೆಯುವುದು, ಇತ್ಯಾದಿಗಳನ್ನು ಹೆತ್ತವರಿಗೆ ಗೊತ್ತಾಗದಂತೆ ಮಾಡುತ್ತಾ ಗಟ್ಟಿಗೊಳ್ಳುವ ಪ್ರೇಮಾಲಾಪಗಳು ಮುಂದೆ “ಗೊತ್ತಾದರೆ ಆಗಲಿ, ಏನು ಪರವಾಗಿಲ್ಲ” ಎಂಬ ಧೈರ್ಯ ಸ್ಥಿತಿಗೆ ಮುಂದುವರಿದು ಮತ್ತೆ ಹಿಂದಿರುಗಲಾಗದ ಒಲವಿಗೆ ಜಾರಿದ ಬಳಿಕ ಸಂಬಂಧದ ಜಾಲದಿಂದ ಬಿಡಿಸಿಕೊಳ್ಳುವುದು ಕಷ್ಟ. ಆದರೆ ಜಾತಿಯ ಸಮೀಕರಣ, ಆರ್ಥಿಕ ವರ್ಗಭೇದ, ಹೆತ್ತವರ ಸಾಮಾಜಿಕ, ರಾಜಕೀಯ ಸ್ಥಾನಮಾನಗಳ ಅಂತರ ಹೀಗೆ ಹೊರಗಿನ ಪ್ರಭಾವಗಳು ಒಲವಿನ ಸಂಬಂಧಗಳಿಗೆ ಅಡ್ಡಿಯಾಗುತ್ತವೆ ಎಂದೆನಿಸಿದಾಗ ವಾಸ್ತವವನ್ನು ಎದುರಿಸಲು ಬೇಕಾಗುವುದೇ ಧೈರ್ಯ. ಆದರೆ ಅದೇ ಉಡುಗಿ ಹೋಗಿದ್ದರೆ ಮತ್ತೆ ವಾಮ ಮಾರ್ಗಗಳೇ ಕಾಣಿಸತೊಡಗುತ್ತವೆ. ಆಗ “ಕಾಮಾತುರಣಾo ನ ಭಯಂ ನ ಲಜ್ಜಾ” ಎಂಬುದಕ್ಕೆ “ನ ದಾಕ್ಷಿಣ್ಯಂ” ಎಂಬುದೂ ಸೇರಬೇಕು. ಇದು ಗಂಡು ಅಥವಾ ಹೆಣ್ಣಿನ ಕೊಲೆಯಲ್ಲಿ ಪರ್ಯವಸಾನವಾದ ಘಟನೆಗಳು ಹೆಚ್ಚುತ್ತವೆ. ಬಹುತೇಕ ಗಂಡುಗಳೇ ತಪ್ಪಿತಸ್ಥರಾಗಿ ಗುರುತಿಸಲ್ಪಟ್ಟು ಹೆಣ್ಣು ಅನುಕಂಪಕ್ಕೆ ಪಾತ್ರಳಾಗುವ ಪ್ರಕರಣಗಳೇ ಇದ್ದರೂ ಇಂತಹ ಅನೈತಿಕ ಸಂಬಂಧಗಳಲ್ಲಿ ಮುಂದುವರಿಯುವಲ್ಲಿ ಹೆಣ್ಣಿನ ಪಾತ್ರವೂ ಇರುತ್ತದೆ. ಅಂದರೆ ನೈತಿಕ ಎಚ್ಚರ ವಹಿಸುವಲ್ಲಿ ಹೆಣ್ಣಿನ ಹೊಣೆಯು ಇರುತ್ತದೆ. ಆದರೆ ಇತ್ತೀಚಿನ ಎರಡು ಪ್ರಕರಣಗಳಲ್ಲಿ ಶ್ರೀಮಂತ ಕುಲದ ಹೆಣ್ಣುಗಳೇ ವಿವಾಹ ಪೂರ್ವ ಪ್ರೇಮ ಸಂಬಂಧಗಳನ್ನು ಬೆಳೆಸಿ ಅದನ್ನೆಲ್ಲ ಮರೆಮಾಚಿ ಹೆತ್ತವರು ಏರ್ಪಡಿಸಿದ ವಿವಾಹಕ್ಕೆ ಒಪ್ಪಿ ಅಮಾಯಕರಂತೆ ವರ್ತಿಸಿ ಮುಂದೆ ಪ್ರೇಮಿಯೊಂದಿಗೆ ಸೇರಿ ತನ್ನ ಪತಿಯನ್ನೇ ಕೊಲೆ ಮಾಡಿದ ಘಟನೆಗಳು ವರದಿಯಾಗಿವೆ. ಇದು ನಿಜಕ್ಕೂ ಮೋಸ ವಂಚನೆಗಳ ಒಗ್ಗರಣೆಯಾಗಿ ಮನುಷ್ಯತ್ವ ಎಂಬುದು ಮೂಲೆ ಪಾಲಾದ ನೀಚತ್ವದ ಮಟ್ಟಕ್ಕೆ ಮುಟ್ಟಿದೆ. ತೀರಾ ಇತ್ತೀಚಿನ ಘಟನೆಯೊಂದರ ಪ್ರಕಾರ ಶಾಸ್ತ್ರೋಕ್ತವಾಗಿ ವಿಜೃಂಭಣೆಯಿಂದ ಮದುವೆಯಾದ ಬಳಿಕ ಪ್ರಸ್ಥದ ಮಂಚದಲ್ಲಿ ಹೆಂಡತಿಯು ಗಂಡನಿಗೆ “ನನ್ನನ್ನು ಮುಟ್ಟಿದರೆ ಜೋಕೆ ನಿನ್ನನ್ನು 35 ತುಂಡುಗಳಾಗಿ ಕೊಯ್ದು ಬಿಡುತ್ತೇನೆ” ಎಂದು ಹೆದರಿಸಿದ ಘಟನೆ ನಡೆದಿದೆ. ಈಕೆ ತನ್ನ ಗಂಡನಿಗೆ ಮಾತ್ರವಲ್ಲ ತಂದೆ ತಾಯಿ ಮತ್ತು ಬಂಧುಗಳಿಗೆ ವಂಚಿಸಿದ್ದಾಳೆ. ಮುಂಬೈಯಲ್ಲಿ ಒಬ್ಬಾತ ಯುವಕ ತನ್ನನ್ನು ನಂಬಿ ಬಂದು ಜೊತೆಯಲ್ಲಿ ಬಾಳುತ್ತಿದ್ದ ಪ್ರೇಮಿಕೆಯನ್ನು 35 ತುಂಡು ಮಾಡಿ ವಿವಿಧ ಪಾರ್ಕುಗಳಲ್ಲಿ ಎಸೆದ ಘಟನೆ ನೆನಪಾಗುತ್ತದೆ. ಅಂದರೆ ಈ ದಾರಿಯನ್ನು ತುಳಿದವರ ಹೃದಯದಿಂದ ಭಯ, ಲಜ್ಜೆ ಮತ್ತು ದಾಕ್ಷಿಣ್ಯಗಳು ಮರೆಯಾಗುತ್ತವೆ.

ಸಾರ್ವತ್ರಿಕ ಶಿಕ್ಷಣದಲ್ಲಿ ಮುಕ್ತತೆ ಪಾಠೇತರ ಚಟುವಟಿಕೆಗಳಲ್ಲಿ ಮುಕ್ತತೆ, ಉದ್ಯೋಗಗಳ ಆಯ್ಕೆಯಲ್ಲಿ ಮುಕ್ತತೆ, ಕೆಲಸದ ಸಂದರ್ಭಗಳಲ್ಲಿ ಸಾಮಿಪ್ಯ ವಹಿಸುವಲ್ಲಿ ಮುಕ್ತತೆ ಹೀಗೆ ಹೆಣ್ಣು ಗಂಡಿನ ನಡುವಿನ ಸಮಾನತೆ ಮತ್ತು ಸಂಬಂಧಗಳಲ್ಲಿ ಸಂಕುಚಿತತೆಯನ್ನು ದೂರವಿಡುವ ಆಧುನಿಕ ಯುಗದಲ್ಲಿ ಜಾತಿ ಮತ್ತು ಆರ್ಥಿಕ ಪ್ರತಿಷ್ಠೆಗಳು ಬದಿಗೆ ಸರಿಸಲ್ಪಡುತ್ತಿವೆ. ಈ ವಾಸ್ತವವನ್ನು ಅರಿತುಕೊಂಡರೆ ಅದಕ್ಕೆ ಕೊಡಬೇಕಾದ ಹಿರಿಯರ ಸ್ಪಂದನೆಯ ಸ್ವರೂಪವು ಬದಲಾಗುತ್ತದೆ. ಹಿಡಿತ ತಪ್ಪಿ ಮುಂದೆ ಹೋದ ಸಂಬಂಧಗಳನ್ನು ಸಾಮಾಜಿಕ ಗೌರವದ ಹಿಡಿತಕ್ಕೆ ತರಲು ಸಾಧ್ಯವಾಗುತ್ತದೆ. ಆದರೆ ನಮ್ಮ ದೇಶದಲ್ಲಿ ಇಂದು ಕೂಡಾ ಜಾತಿ ವ್ಯವಸ್ಥೆಯು ಮತ್ತು ಆರ್ಥಿಕ ವರ್ಗ ವ್ಯವಸ್ಥೆಯು ಹೆಚ್ಚು ಹೆಚ್ಚು ಘನೀಕರಿಸಲ್ಪಡುತ್ತಿದೆ. ಇದರಲ್ಲಿ ಆಚಾರ ವಿಚಾರಗಳಿಗಿಂತ ಹೆಚ್ಚಾಗಿ ಪರಂಪರೆ ಮತ್ತು ಸಾಮಾಜಿಕ ಸ್ಥಾನಮಾನಗಳ ಎಳೆಗಳು ಸೆಳೆಯಲ್ಪಡುತ್ತವೆ. ಉಪಜಾತಿಗಳ ಪ್ರಭೇದಗಳೂ ಹೆಚ್ಚುತ್ತಿವೆ. ಇದೇ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳು, ಸಿನಿಮಾಗಳು, ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗುವ ಧಾರವಾಹಿಗಳು “ಯಾವುದು ಸರಿ ಮತ್ತು ಯಾವುದು ಸರಿಯಲ್ಲ” ಎಂಬುದನ್ನು ಗೊಂದಲಕ್ಕೀಡು ಮಾಡಿವೆ. ಯುವಜನರಿಗೆ ಖುಷಿಪಡುವುದೇ ಇಷ್ಟವಾಗಿ ಸಾಮರ್ಥ್ಯ ವೃದ್ಧಿಯ ಪ್ರಯತ್ನಗಳ ಪ್ರೇರಣೆ ಸಿಗುವುದಿಲ್ಲ. ಹಣವು ವೆಚ್ಚ ಮಾಡುವುದಕ್ಕೆ ಇದೆಯಷ್ಟೇ ಹೊರತು ಜೀವನಾಧಾರದ ನಿರ್ಮಾಣಕ್ಕೆ ಎಂದು ತಿಳಿಯುತ್ತಿಲ್ಲ.

ಸಮಾಜದಲ್ಲಿ ಇಂತಹ ಘಟನೆಗಳಾದಾಗ ನೋಯುವವರು ಕೇವಲ ಪ್ರಕರಣದಲ್ಲಿ ಸಿಲುಕಿದವರಷ್ಟೇ ಅಲ್ಲ. ಅವರ ಸಂಬಂಧಿಗಳೂ ಕೂಡಾ ಎಂಬುದು ಮುಖ್ಯ. ತಂದೆ ತಾಯಿಯರು, ಸೋದರ ಸೋದರಿಯರು, ಆತ್ಮೀಯ ಹಿತ ಚಿಂತಕರೆಲ್ಲರೂ ನೊಂದುಕೊಳ್ಳುತ್ತಾರೆ. ನೋವು ಮಾಡಿದವರಿಗೆ ತಾವು ಎಷ್ಟು ಮಂದಿಯ ಆತಂಕಕ್ಕೆ ಕಾರಣರಾಗಿದ್ದೇವೆ ಎಂಬ ಕಲ್ಪನೆ ಇರುವುದಿಲ್ಲ. ಆ ಬಗ್ಗೆ ಅವರು ಚಿಂತಿಸುವುದೂ ಇಲ್ಲ. ಹಾಗಾಗಿ ಬಾಲ್ಯದಲ್ಲಿ ಪೋಷಕರು ಮಕ್ಕಳಿಗೆ ಬೇಕಾದ್ದನ್ನೆಲ್ಲಾ ತೆಗೆದುಕೊಟ್ಟರೆ ಸಾಲದು, ಯೌವನದಲ್ಲಿ ಅವರೇನು ಮಾಡುತ್ತಿದ್ದಾರೆ ಎಂಬ ಬಗ್ಗೆ ಕಣ್ಣಿಡಬೇಕು. ಜಾತಿಯ ಮತ್ತು ಮತದ ಶುದ್ಧತೆಯ ಬಗ್ಗೆ ವಹಿಸುವಷ್ಟೇ ಎಚ್ಚರವನ್ನು ನೈತಿಕ ಶುದ್ಧತೆಯ ಬಗ್ಗೆ ತಿಳಿಸಿಕೊಡುವಲ್ಲಿ ಮನ ಮಾಡಬೇಕು. ಬೇರೆಯವರ ಮನೆಯ ಮಕ್ಕಳಲ್ಲಿ ಕಾಣುವ ಅನಿಷ್ಟ ವರ್ತನೆಗಳು ಎಲ್ಲಿಯಾದರೂ ನಮ್ಮ ಮಕ್ಕಳಲ್ಲೂ ಇವೆಯೇ ಎಂಬ ಬಗ್ಗೆ ಪರಿಶೀಲಿಸಬೇಕು. ಯಾರಿಂದಾದರೂ ತಮ್ಮ ಮಕ್ಕಳ ಬಗ್ಗೆ ಟೀಕೆ ಬಂದಾಗ ಅಸಹನೆ ತಾಳುವ ಪಾಲಕರು ಅಂತಹ ವಾರ್ತೆಗಳಲ್ಲಿಯೂ ಏನಾದರೂ ಸತ್ಯವಿದೆಯೇ ಎಂದು ತಿಳಿಯಲು ಸಿದ್ದರಾಗುವ ಹೃದಯ ವೈಶಾಲ್ಯ ಹೊಂದಿರಬೇಕು. ಅಂತಹ ಕೌಟುಂಬಿಕ ಸಂಬಂಧಗಳು ಇಂತಹ ಪ್ರಮಾದಗಳಿಗೆ ಅವಕಾಶ ಕೊಡಲಾರವು.

Advertisement
Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಡಾ.ಚಂದ್ರಶೇಖರ ದಾಮ್ಲೆ

ಡಾ. ಚಂದ್ರಶೇಖರ ದಾಮ್ಲೆಯವರು ಸುಳ್ಯದ ನೆಹರು ಮೆಮೋರಿಯಲ್ ಕಾಲೇಜ್ ನಲ್ಲಿ ಸಮಾಜಶಾಸ್ತ್ರ ಪ್ರಾಧ್ಯಾಪಕರಾಗಿ 35 ವರ್ಷಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು. ವೃತ್ತಿಯಲ್ಲಿರುವಾಗಲೇ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾಗಿ ಸಮಾಜಸೇವೆಯಲ್ಲಿ ತೊಡಗಿಕೊಂಡವರು. ಸಾಂಸ್ಕೃತಿಕ ಸಂಘದ ಮೂಲಕ ಮಕ್ಕಳಿಗೆ ಯಕ್ಷಗಾನ ನಿರ್ದೇಶಕನ, ಸುಳ್ಯದಲ್ಲಿ ಯಕ್ಷಗಾನ ಹಿತರಕ್ಷಣಾ ವೇದಿಕೆಯ ಸ್ಥಾಪನೆ, ಸಂಪೂರ್ಣ ಸಾಕ್ಷರತಾ ಆಂದೋಲನದಲ್ಲಿ ಸಂಪನ್ಮೂಲ ವ್ಯಕ್ತಿ, ಕನ್ನಡಮಾಧ್ಯಮದಲ್ಲಿ ಸ್ನೇಹ ಶಿಕ್ಷಣ ಸಂಸ್ಥೆಯ ಸ್ಥಾಪನೆ ಮುಂತಾದ ಸಮಾಜಮುಖಿ ಕಾರ್ಯಗಳಲ್ಲಿ ಸೇವೆ ನೀಡಿದವರು. ಶಿಕ್ಷಣದಲ್ಲಿ ಸೃಜನಶೀಲತೆಗೆ ಒತ್ತು ನೀಡುವ ದಾಮ್ಲೆಯವರು ಸಂಶೋಧಕರಾಗಿದ್ದು ಕನ್ನಡ ಇಂಗ್ಲಿಷ್ ಭಾಷೆಗಳಲ್ಲಿ ಕೃತಿ ರಚನೆ ಮಾಡಿದವರು. 'ನೆಲದನಂಟು' ಮತ್ತು "ಶಾಲೆ ಎಲ್ಲಿದೆ?" ಇವು ಇವರ ಪ್ರಸಿದ್ಧ ಕಾದಂಬರಿಗಳು. ಅನೇಕ ಪ್ರಶಸ್ತಿ ಸಮ್ಮಾನಗಳಿಂದ ಗೌರವಿಸಲ್ಪಟ್ಟ ದಾಮ್ಲೆಯವರಿಗೆ ಅಸಾಮಾನ್ಯ ಕನ್ನಡಿಗ ಪ್ರಶಸ್ತಿ, ಯಕ್ಷಮಂಗಳ ಪ್ರಶಸ್ತಿ, ಅರಣ್ಯಮಿತ್ರ ಮತ್ತು ಜಲಮಿತ್ರ ಪ್ರಶಸ್ತಿ, Nation Builder ಪ್ರಶಸ್ತಿ ಮುಂತಾದುವು ಲಭಿಸಿವೆ. ಹೊಸದಿಗಂತ ಪತ್ರಿಕೆಯಲ್ಲಿ "ಇದ್ಯಾಕೆ ಹೀಗೆ " ಅಂಕಣವನ್ನು ಬರೆಯುತ್ತಿದ್ದರು.

ಇದನ್ನೂ ಓದಿ

ಅಡಿಕೆ ತೋಟಗಳಿಗೆ ಸವಾಲಾಗಿರುವ ಎಲೆಚುಕ್ಕಿ ರೋಗ – ವಿಜ್ಞಾನ ಏನು ಹೇಳುತ್ತದೆ?
January 9, 2026
7:43 AM
by: ಮಹೇಶ್ ಪುಚ್ಚಪ್ಪಾಡಿ
ಕನ್ನಡದಲ್ಲಿ ಕಲಿತರೆ ಹಿನ್ನಡೆ ಇಲ್ಲ
January 7, 2026
7:42 PM
by: ಡಾ.ಚಂದ್ರಶೇಖರ ದಾಮ್ಲೆ
ಹೊಸರುಚಿ | ಬದನೆಕಾಯಿ ಪಲ್ಯ
January 3, 2026
9:07 AM
by: ದಿವ್ಯ ಮಹೇಶ್
ಆತ್ಮವಿಶ್ವಾಸ ಮತ್ತು ಸಂವಹನ ಕೌಶಲ್ಯ ವ್ಯಕ್ತಿತ್ವದ ಬೆನ್ನೆಲುಬು
January 2, 2026
7:42 PM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ

You cannot copy content of this page - Copyright -The Rural Mirror