ಗಣಪತಿ ತನ್ನ ವಾಹನ ಇಲಿಯನ್ನೇರಿ ಹೋಗುತ್ತಿದ್ದಾಗ ಆಯತಪ್ಪಿ ಬೀಳುತ್ತಾನೆ. ಇದನ್ನು ಕಂಡು ಆಕಾಶದಲ್ಲಿದ್ದ ಚಂದ್ರ ನಗುತ್ತಾನೆ. ಇದನ್ನು ನೋಡಿದ ಗಣೇಶ, ಚೌತಿಯ ದಿನ ಚಂದ್ರನನ್ನು ನೋಡಿದರೆ ಅಪವಾದ ಬರಲಿ ಎಂದು ಶಾಪ ನೀಡುತ್ತಾನೆ ಎಂಬುದು ಎಲ್ಲರಿಗೂ ಗೊತ್ತಿದೆ. ಈ ಶಾಪ ವಿಮೋಚನೆಗೆ ಯುಗಾದಿ ಚಂದ್ರನ ದರ್ಶನ ಮಾಡಬೇಕು ಎಂಬ ನಂಬಿಕೆ ಇದೆ.
ಚಂದ್ರ ಶುದ್ಧತೆ, ಬುದ್ಧಿವಂತಿಕೆಯ ಸಂಕೇತ : ಹಿಂದೂ ಧರ್ಮದ ಪ್ರಕಾರ, ಚಂದ್ರ ನವಗ್ರಹಗಳಲ್ಲಿ ಒಬ್ಬ, ಶುದ್ಧತೆ, ಬುದ್ಧಿವಂತಿಕೆ ಹಾಗೂ ಉತ್ತಮ ನಡವಳಿಕೆಯ ಸಂಕೇತವಾಗಿ ಆತನನ್ನು ಬಿಂಬಿಸಲಾಗುತ್ತದೆ. ಅಂತಹ ಚಂದ್ರನನ್ನು ವರ್ಷದ ಆದಿ ಪರ್ವವಾದ ಯುಗಾದಿಯಂದು ದರ್ಶನ ಪಡೆದರೆ, ಇಡೀ ವರ್ಷವೆಲ್ಲಾ ಸುಖ-ಸಂತೋಷದಿಂದ ಇರುತ್ತಾರೆ ಎಂಬ ನಂಬಿಕೆ ಇದೆ. ಇದೇ ನಂಬಿಕೆಯಿಂದ ಹಿಂದಿನಿಂದಲೂ ಯುಗಾದಿ ಚಂದ್ರನನ್ನು ನೋಡುವುದು ವಾಡಿಕೆಯಾಗಿದೆ. ಯುಗಾದಿಯ ಹಿಂದಿನ ದಿನ ಅಮಾವಾಸ್ಯೆಯಲ್ಲಿ ಬರುವುದರಿಂದ ಮರು ದಿನ ಚಂದ್ರನ ದರ್ಶನಕ್ಕೆ ಪುಣ್ಯ ಮಾಡಿರಬೇಕು
ಚಂದ್ರ ದರ್ಶನದಿಂದ ಮಳೆ-ಬೆಳೆ ಲೆಕ್ಕಾಚಾರ: ಯುಗಾದಿ ದಿನದಂದು ಕಾಣಿಸುವ ಚಂದ್ರನನ್ನು ಆಧರಿಸಿ ಹಿಂದೆ ಆ ವರ್ಷದ ಮಳೆ-ಬೆಳೆ, ರೋಗ-ರುಜಿನಗಳು, ಏಳು-ಬೀಳುಗಳ ಬಗ್ಗೆ ಚಿಂತನೆ ಮಾಡುತ್ತಿದ್ದರು. ಯುಗಾದಿಯಂದು ಚಂದ್ರನು ಅತ್ಯಂತ ಚಿಕ್ಕದಾಗಿ ಸಣ್ಣ ಗೆರೆಯ ರೀತಿಯಲ್ಲಿ ಕಾಣ ಸಿಗುತ್ತಾನೆ. ಇದನ್ನು ಆಧರಿಸಿ ವರ್ಷದ ಭವಿಷ್ಯವನ್ನು ನಿರ್ಧರಿಸುತ್ತಿದ್ದರು. ಅದಕ್ಕೆಂದೇ ಹೊಸ ವರ್ಷದ ಪಂಚಾಂಗವನ್ನು ಪಠಿಸಿ, ಅನಂತರ ಚಂದ್ರ ದರ್ಶನವನ್ನು ಮಾಡಲಾಗುತ್ತದೆ.
– ಅಂತರ್ಜಾಲ ಮಾಹಿತಿ