ಮಹಿಳಾ ದಿನಾಚರಣೆಯು ಇದೇ ಮಾರ್ಚ್ 8 ರಂದು ಪ್ರತಿವರ್ಷದಂತೆ ಆಚರಿಸಲ್ಪಟ್ಟಿತು. ಗಂಡಿನ ಯಜಮಾನಿಕೆ ಮತ್ತು ಹೆಣ್ಣಿನ ಪರಾವಲಂಬನೆ ಹಾಗೂ ಶೋಷಣೆಯ ಚಿತ್ರಣವೇ ಭಾಷಣದ ಮುಖ್ಯ ವಸ್ತುವಾಗಿರುತ್ತಿತ್ತು. ಜಿ.ಎಸ್. ಶಿವರುದ್ರಪ್ಪನವರ “ನಿನಗೆ ಬೇರೆ ಹೆಸರು ಬೇಕೆ? ಹೆಣ್ಣು ಎಂದರೆ ಅಷ್ಟೆ ಸಾಕೆ?” ಎಂಬ ಕವನವನ್ನು ಆಧರಿಸಿ ವಿಶ್ಲೇಷಣೆ ನಡೆಸಲಾಯಿತು. ಸಹಜವಾಗಿಯೇ ಸಮಾನತೆಯ ಚಿಂತನೆಗಳು ಹರಿದಾಡಿದುವು.
ಮಾತೆ, ಮಡದಿ, ಮತ್ತು ಮಗಳು ಇವು ಸಮಾಜದಲ್ಲಿ ಹೆಣ್ಣಿಗಿರುವ ಹೊಣೆಗಾರಿಕೆಯ ಪಾತ್ರಗಳು. ಇನ್ನು ಅಕ್ಕ, ತಂಗಿ, ಅತ್ತಿಗೆ, ನಾದಿನಿ, ಚಿಕ್ಕಮ್ಮ, ದೊಡ್ಡಮ್ಮ, ಅಜ್ಜಿ, ಪುಳ್ಳಿ ಮುಂತಾದುವು ಸಂಬಂಧವಾಚಕ ಪಾತ್ರಗಳು. ಅವುಗಳಿಗೂ ಮಹತ್ವವಿದೆ. ಆದರೆ ಅವು ಶೋಷಣೆಯ ಬಲೆಯಿಂದ ತಪ್ಪಿಸಿಕೊಳ್ಳುವ ಸುಲಭ ಮಾರ್ಗಗಳು ಇರುವಂತಹವುಗಳಾಗಿವೆ. ಹಾಗಾಗಿ ಹೆಣ್ಣಿನ ಸ್ಥಾನಮಾನ, ಶೋಷಣೆ ಮತ್ತು ಸಬಲೀಕರಣದ ಪ್ರಶ್ನೆ ಬಂದಾಗ ತ್ಯಾಗ ಮತ್ತು ಮಮತೆಯ ಮೂಟೆಯಾದ ಮಾತೆಯೂ, ಭಕ್ತಿ ಮತ್ತು ಋಣ ಮುಕ್ತಿಯ ಭಾವದ ಮಗಳೂ ಸಮಸ್ಯೆಯ ವ್ಯಾಪ್ತಿಯಿಂದ ಹೊರಗುಳಿಯುತ್ತಾರೆ. ಅಂತಿಮವಾಗಿ ಅಸಮಾನತೆ ಮತ್ತು ಶೋಷಣೆಯ ವಿಶ್ಲೇಷಣೆಗೆ ಗಂಡ-ಹೆಂಡತಿಯ ಸಂಬಂಧವೇ ಮುಖ್ಯವಾಗುತ್ತದೆ.
ಗಂಡು ಮತ್ತು ಹೆಣ್ಣಿನ ಸಂಬಂಧದಲ್ಲಿ ಅಧಿಕಾರದ ಹಾಗೂ ಅವಲಂಬನೆಯ ಸಂಬಂಧಗಳ ಚರ್ಚೆ ಬಹುಕಾಲದಿಂದ ಕಡೆಯುತ್ತಿದೆ. ಪ್ರಪಂಚದ ಎಲ್ಲಾ ದೇಶಗಳಲ್ಲೂ ನಡೆದಿದೆ. ಹಾಗೆಯೇ ಸುಧಾರಣೆಗಳು ಸಾಮಾಜಿಕವಾಗಿಯೂ ಕಾನೂನಾತ್ಮಕವಾಗಿಯೇ ಆಗಿವೆ. ಆದ್ದರಿಂದಲೇ ಇಂದಿನ ಸಮಾಜದಲ್ಲಿ ಹೆಣ್ಮಕ್ಕಳ ಪರಿಸ್ಥಿತಿಯು ಹಿಂದಿನದಕ್ಕಿಂತ ಉತ್ತಮವಾಗಿದೆ. ಇಂದು ಶಿಕ್ಷಣ ಕೊಡಿಸುವ ವಿಚಾರದಲ್ಲಿ ಮಗಳಂದಿರ ಕಡೆಗಿನ ತಾರತಮ್ಯ ಕಡಿಮೆಯಾಗಿದೆ. ಉದ್ಯೋಗ ವಲಯದಲ್ಲಿಯೂ ಹೆಣ್ಮಕ್ಕಳ ಪ್ರಮಾಣ ಹೆಚ್ಚು ಇದೆ. ಕ್ರೀಡೆ ಮತ್ತು ಕಲೆಗಳ ಕ್ಷೇತ್ರಗಳಲ್ಲಿಯೂ ಹೆಣ್ಮಕ್ಕಳು ಸಾಧನೆ ತೋರುತ್ತಿದ್ದಾರೆ. ಹಿಂದೆ ಸ್ತ್ರೀಯರಿಗೆ ನಿಶಿದ್ಧವೆಂದು ಪರಿಗಣಿಸಲ್ಪಟ್ಟಿದ್ದ ಡ್ರೈವಿಂಗ್, ಪೊಲೀಸ್, ಪೈಲಟ್, ಮಿಲಿಟರಿ ಮುಂತಾದ ಕ್ಷೇತ್ರಗಳಲ್ಲಿಯೂ ಸ್ತ್ರೀಯರು ತಮ್ಮ ಸಾಮರ್ಥ್ಯವನ್ನು ಮೆರೆದಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲಿ ಬಹಳ ಹಿಂದೆಯೇ ಪಾರಮ್ಯ ಮೆರೆದಿದ್ದ ಮಹಿಳೆಯರು ಈಗ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಮುನ್ನಡೆದು ತಾಂತ್ರಿಕತೆಯ ವಲಯದಲ್ಲಿ ಸಂಪನ್ನ ಬದುಕನ್ನು ಕಟ್ಟಿಕೊಂಡಿದ್ದಾರೆ. ವ್ಯಾಪಾರೋದ್ಯಮದ ವಿವಿಧ ವಿಭಾಗಗಳಲ್ಲಿ, ತರಬೇತಿ ಪಡೆದು ವೃತ್ತಿಪರರಾಗಿದ್ದಾರೆ. ಅಂತೆಯೇ ಶಿಕ್ಷಣ ಕ್ಷೇತ್ರದಲ್ಲಿ ಪ್ರಾಥಮಿಕ-ಮಾಧ್ಯಮಿಕವಷ್ಟೇ ಅಲ್ಲದೆ ಉನ್ನತ ಶಿಕ್ಷಣ ಸಂಸ್ಥೆಗಳಲ್ಲೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ವಿಜ್ಞಾನ ಕ್ಷೇತ್ರದಲ್ಲಿ ಸಂಶೋಧಕರಾಗಿಯೂ, ರಾಜಕೀಯದಲ್ಲಿ ಆಡಳಿತ ಸಾಮರ್ಥ್ಯ ಉಳ್ಳವರಾಗಿಯೂ ಮಿಂಚುತ್ತಿದ್ದಾರೆ. ಹೀಗೆ ಪುರುಷಾಧಿಕ್ಯದ ಎಲ್ಲಾ ಅವಕಾಶಗಳನ್ನು ಮೊಟಕುಗೊಳಿಸಬಲ್ಲಷ್ಟು ಸಮಾನತೆಯ ಎತ್ತರಕ್ಕೆ ಏರಿದ್ದರೂ ಸ್ತ್ರೀಯರ ಮಾನ-ಪ್ರಾಣ ಮತ್ತು ಗೌರವದ ಪ್ರಶ್ನೆ ಇನ್ನೂ ಜಿಗುಟಾಗಿದೆ.
ಸೈನ್ಯದಲ್ಲಿ ಕೇಪ್ಟನ್‍ಗಳಾಗಿ, ಜಿಲ್ಲಾಧಿಕಾರಿಗಳಾಗಿ, ಪೊಲೀಸ್ ವರಿಷ್ಟಾಧಿಕಾರಿಗಳಾಗಿ, ಮುಖ್ಯ ವೈದ್ಯರಾಗಿ, ಶಿಕ್ಷಣಾಧಿಕಾರಿಗಳಾಗಿ, ಮಂತ್ರಿಗಳಾಗಿ, ಅನುದಾನಗಳ ವಿತರಕರಾಗಿ, ಆಸ್ತಿ ನೋಂದಣಾಧಿಕಾರಿಗಳಾಗಿ, ನ್ಯಾಯಾಧೀಶರಾಗಿ ಮುಂತಾಗಿ ಅನೇಕಾನೇಕ ಉನ್ನತ ಹುದ್ದೆಗಳನ್ನು ಅಲಂಕರಿಸಿದ ಮಹಿಳೆಯರಿದ್ದಾರೆ. ಅವರ ಅಧೀನದಲ್ಲಿ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡುವ ಮಹಿಳೆಯರೂ ಇದ್ದಾರೆ; ಪುರುಷರೂ ಇದ್ದಾರೆ.
ಗ್ರಾಮೀಣ ವಲಯದಲ್ಲಿಯೂ ಜನಪ್ರತಿನಿಧಿಗಳಾಗಿ ಮಹಿಳೆಯರು ಮುನ್ನೆಲೆಗೆ ಬಂದಿದ್ದಾರೆ. ಅದರಲ್ಲೂ ಅನಕ್ಷರಸ್ಥ ಮಹಿಳೆಯರೂ ಸ್ವಸಹಾಯ ಸಂಘಗಳನ್ನು ಸ್ಥಾಪಿಸಿಕೊಂಡು ಆರ್ಥಿಕ ಸ್ವಾವಲಂಬನೆಯತ್ತ ಮುಖ ಮಾಡಿದ್ದಾರೆ. ತಮ್ಮ ಹೆಣ್ಮಕ್ಕಳು ವಿದ್ಯಾವಂತರಾಗಿ ಉನ್ನತ ಸ್ತರಗಳಲ್ಲಿ ಬದುಕನ್ನು ಕಟ್ಟಿಕೊಳ್ಳುವಂತೆ ಪ್ರೋತ್ಸಾಹಿಸುತ್ತಿದ್ದಾರೆ. ಬಸ್‍ಗಳಲ್ಲಿ ನಗರಗಳಿಗೆ ಒಬ್ಬರೇ ಹೋಗಿ ಬರಬಲ್ಲವರಾಗಿದ್ದಾರೆ. ಹಳ್ಳಿಗಳಿಂದ ನಗರಗಳಿಗೆ ಹೋಗಿ ಪಿಜಿಗಳಲ್ಲಿ ಅಥವಾ ಬಾಡಿಗೆ ರೂಂ ಮಾಡಿಕೊಂಡು ಕೆಲಸಕ್ಕೆ ಸೇರಿ ಸಂಪಾದನೆ ಮಾಡುವವರಿದ್ದಾರೆ.
ಸಮಾಜದಲ್ಲಿ ಶಿಕ್ಷಣ, ಉದ್ಯೋಗ ಮತ್ತು ಸ್ವಾವಲಂಬನೆಗಳು ಹೆಣ್ಣಿಗೆ ಹೊಸ ಸ್ಥಾನಮಾನಗಳನ್ನು ಕೊಟ್ಟಿರುವ ಜತೆಗೆ ಹೊಸ ಅನಿವಾರ್ಯತೆಗಳನ್ನು ಉಂಟು ಮಾಡಿದೆ. ಸಾರ್ವಜನಿಕ ಸಂಚಾರ ವ್ಯವಸ್ಥೆಯಲ್ಲಿ ನಿತ್ಯ ಪ್ರಯಾಣ, ಗಂಡಸರ ನಡುವೆ ಕೆಲಸ ಮಾಡಬೇಕಾದ ಸಂದರ್ಭದಲ್ಲಿ ನೈತಿಕತೆಯ ಒತ್ತಡ, ಟೀಕೆ, ವ್ಯಂಗ ಮತ್ತು ದುರ್ವರ್ತನೆಗಳಿಗೆ ಈಡಾಗುವುದು, ಮೇಲಧಿಕಾರಿಗಳು ಹೆಚ್ಚು ದುಡಿಸುವುದು ಮುಂತಾದ ಮನೆಯ ಹೊರಗಿನ ಸಮಸ್ಯೆಗಳು ಎದುರಾಗಿವೆ. ಇನ್ನು ವಿವಾಹಿತ ಮಹಿಳೆಯರಿಗೆ ಗಂಡನ ಕಡೆಗಿನ ನಿಷ್ಠೆ, ಅಲ್ಲದೆ ಅತ್ತೆ ಮಾವ, ನಾದಿನಿ ಮೈದುನರ ನಿರೀಕ್ಷೆಗಳಿಗನುಸಾರ ನಡೆದುಕೊಳ್ಳಬೇಕಾದ ಒತ್ತಡದ ಬಾಧೆಗೊಳಗಾದವರು ಅನೇಕರಿದ್ದಾರೆ. ನಗರಗಳಲ್ಲಿ ಪ್ರತ್ಯೇಕ ಮನೆ ಮಾಡಿಕೊಂಡ ದಂಪತಿಗಳ ಬದುಕು ಸುಂದರವಾಗಿದೆ ಎಂಬುದು ನಿಶ್ಚಿತವಿಲ್ಲ. ಏಕೆಂದರೆ ಆಧುನಿಕ ಹುಡುಗಿಯರು ಮನಸ್ಸಿನಲ್ಲಿ ಸಮಾನತೆಯ ನೆಪದಲ್ಲಿ ಗಂಡನನ್ನು ದುಡಿಸುವುದು ಹೇಗೆಂಬ ಪ್ಲಾನ್‍ಗಳ ಕಸ ತುಂಬಿಸಿಕೊಂಡಿರುತ್ತಾರೆ. ಮನೆಕೆಲಸದ ಹಂಚೋಣದ ವಿಚಾರದಲ್ಲಿ ಆಗುವ ಜಗಳ ನಿರಂತರ ಮನಸ್ತಾಪಕ್ಕೆ ಕಾರಣವಾಗುತ್ತದೆ. ಕೆಲವೊಮ್ಮೆ ತಮ್ಮ ಕಂಪೆನಿಯ ಕೆಲಸದ ಒತ್ತಡಗಳು ಮನೆಯೊಳಗಿನ ಸೌಹಾರ್ದಕ್ಕೆ ಭಂಗ ತರುತ್ತವೆ. ಅಂದರೆ ಹೆಣ್ಣು ಆಧುನಿಕ ಜಗತ್ತಿನಲ್ಲಿ ಸಮಸ್ಯೆಗೆ ಒಳಗಾಗುವುದಷ್ಟೇ ಅಲ್ಲದೆ ತಾನೂ ಸಮಸ್ಯೆಗೆ ಕಾರಣಗಳಾಗುತ್ತಾಳೆ. ಆಧುನಿಕ ಜಗತ್ತಿನಲ್ಲಿ ಸ್ತ್ರೀಯರ ಸಮಸ್ಯೆಗಳಿಗೆ ಹೊಸದಾದ ಕಾರಣಗಳೇ ಇವೆ.
ಬಾಲ್ಯದಲ್ಲಿ ಹೆತ್ತವರು ನೀಡುವ ಅತಿಯಾದ ಸ್ವಾತಂತ್ರ್ಯದಿಂದಾಗಿ ಇಂದಿನ ಯುಗದಲ್ಲಿ ಹುಡುಗಿಯರು ತಮ್ಮ ಸಾಮರ್ಥ್ಯದ ಬಗ್ಗೆ ಅಪರಿಮಿತ ಧೈರ್ಯ ಹೊಂದಿರುತ್ತಾರೆ. ಹೆಣ್ಣಿಗೆ ಲಭಿಸಿರುವ ಪಿತ್ರಾರ್ಜಿತ ಆಸ್ತಿಯ ಹಕ್ಕು, ತನ್ನ ಗಂಡನ ಪಿತ್ರಾರ್ಜಿತ ಆಸ್ತಿಯ ಮೇಲಿನ ಹಕ್ಕು, ಪೋಕ್ಸೊ ಕಾನೂನಿನ ರಕ್ಷಣೆ, ತನ್ನ ದೇಹದ ಮೇಲಿರುವ ಹಕ್ಕು ಇತ್ಯಾದಿಗಳು ಹುಡುಗಿಯರ ಆಲೋಚನಾ ಲಹರಿಯನ್ನು ಬದಲಿಸಿವೆ. ಹುಡುಗಿಯರು ತಮ್ಮ ಭವಿಷ್ಯವನ್ನು ತಾನೇ ರೂಪಿಸಿಕೊಳ್ಳಬಲ್ಲೆನೆಂಬ ಆತ್ಮವಿಶ್ವಾಸದಿಂದ ಮಾಡುವ ಕೆಲವು ನಿರ್ಧಾರಗಳು ವಿಫಲವಾಗುವ ಸಂದರ್ಭಗಳು ಎದುರಾಗುತ್ತವೆ. ಮುಖ್ಯವಾಗಿ ಪ್ರೇಮ ಪ್ರಕರಣಗಳಿಗೆ ಈಡಾಗುವ ಹುಡುಗಿಯರು ತಮ್ಮ ತಂದೆ ತಾಯಿಯ ಮಾತು ಕೇಳದೆ ಅವರನ್ನು ಚಿಂತೆಗೀಡು ಮಾಡಿಯಾದರೂ ತಮ್ಮ ಹಟ ಸಾಧಿಸಲು ಯತ್ನಿಸುತ್ತಾರೆ. ಆದರೆ ತನ್ನ ಆಯ್ಕೆ ‘ಲವ್ ಜಿಹಾದ್’ ಗೆ ಒಂದು ಉದಾಹರಣೆಯಾಗುತ್ತದೆ ಎಂದು ತಿಳಿಯುವ ಹೊತ್ತಿಗೆ ಸಮಯ ಮೀರಿರುತ್ತದೆ. ಆಗ ಸ್ತ್ರೀಯರಿಗೆ ನೀಡಿದ ಯಾವುದೇ ಕಾನೂನುಗಳ ರಕ್ಷಣೆಯು ನೆರವಿಗೆ ಬರುವುದಿಲ್ಲ. ಹೀಗೆ ತಮ್ಮನ್ನು ತಾವೇ ಖೆಡ್ಡಾಕ್ಕೆ ಕೆಡವಿಕೊಳ್ಳುವ ಪರಿಸ್ಥಿತಿ ಹಿಂದಿನ ದಿನಗಳಲ್ಲಿ ಇರಲಿಲ್ಲ. ಆದರೆ ಇದು ಹೊಸ ಯುಗದ ಶೋಷಣೆಯ ಕ್ರಮವಾಗಿದೆ.
ದಿಲ್ಲಿಯಲ್ಲಿ 2012ರಲ್ಲಿ ಕತ್ತಲೆ ಬಿದ್ದ ಬಳಿಕ ಚಲಿಸುತ್ತಿದ್ದ ಬಸ್ಸಿನಲ್ಲಿ ನಡೆಸಿದ ರೇಪ್ ಮತ್ತು ಮರ್ಡರ್ ಪ್ರಕರಣವು ‘ನಿರ್ಭಯಾ’ ಎಂಬ ಹೆಸರಿನ ಕಾನೂನಿನ ರಚನೆಗೂ ಕಾರಣವಾಗಿ ಅಪರಾಧಿಗಳಿಗೆ ಕಠಿಣ ಶಿಕ್ಷೆಯ ಭಯ ಮೂಡಿಸಿದರೂ ನಂತರದ ದಿನಗಳಲ್ಲಿ ಸಿಕ್ಕಿದ ಅವಕಾಶಗಳನ್ನು ದುಷ್ಟರು ಬಿಡಲಿಲ್ಲ. ಅವರು ದುಶ್ಕೃತ್ಯ ನಡೆಸಿಯೇ ಬಿಟ್ಟರು. ಇತ್ತೀಚೆಗೆ ಹಂಪಿಯಲ್ಲಿ ವಿದೇಶೀ ಮಹಿಳೆಯ ಮೇಲೆ ಮಹಿಳಾ ದಿನಾಚರಣೆಯ ಮುನ್ನಾ ದಿನವೇ ಅಂತಹ ಘಟನೆ ನಡೆಯಿತು. ಇದು ಪುರುಷರಲ್ಲಿ ರಾಕ್ಷಸೀ ಪ್ರವೃತ್ತಿಯು ಬೆಳೆಯದಂತೆ ತಡೆಯುವ ಅಗತ್ಯವನ್ನು ಮನಗಾಣಿಸುತ್ತದೆ. ಆದರೆ ಪ್ರೀತಿ ಪ್ರೇಮದ ಜಾಲದಲ್ಲಿ ಸಿಲುಕಿ ತಂದೆ ತಾಯಿಯನ್ನು ಕಡೆಗಣಿಸಿ ಗಂಡಿನ ಹಿಂದೆ ಹೋಗಿ ಮನೆ ಮಾಡಿದ ಹುಡುಗಿ ಅಸಹಾಯಕಗಳಾಗಿ ಕೊಲೆಯಾದರೆ ಅಂತಹ ಪ್ರಕರಣವು ಆಧುನಿಕ ಜಗತ್ತಿನ ಕೊಳಕನ್ನು ತೋರಿಸುತ್ತದೆ. ದಿನಾಲೂ ಇಂತಹ ಪ್ರಕರಣಗಳ ವರದಿಗಳು ದೃಶ್ಯ ಮಾಧ್ಯಮಗಳಲ್ಲಿ ಬರುತ್ತಲೇ ಇರುತ್ತವೆ. ಅವುಗಳನ್ನು ನಿಯಂತ್ರಿಸಲು ಕೌಟುಂಬಿಕ ಮೌಲ್ಯಗಳನ್ನು ಬಲಪಡಿಸುವ “ಸ್ಟ್ರಾಂಗ್ ಫಾದರ್ ಮತ್ತು ಕಲ್ಚರ್ಡ್ ಮದರ್” ಇರುವ ಕುಟುಂಬಗಳು ರೂಪುಗೊಳ್ಳಬೇಕು. ಇದೇ ಶಿರೋನಾಮೆಯಲ್ಲಿ ನನ್ನ ಹಿಂದಿನ ವಾರದ ಲೇಖನವಿದೆ.
ಬರಹ :
ಡಾ. ಚಂದ್ರಶೇಖರ ದಾಮ್ಲೆ
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel