ಚಂದ್ರಯಾನ-3 ಆ.23 ರಂದು ಚಂದ್ರನ ದಕ್ಷಿಣ ಧ್ರುವದಲ್ಲಿ ದೋಷರಹಿತ ಲ್ಯಾಂಡಿಂಗ್ ಮಾಡುವ ಮೂಲಕ ಇಸ್ರೋ ಬಹುದೊಡ್ಡ ಸಾಧನೆ ಯಶಸ್ಸಾಗಿದೆ. ಇನ್ನು ಮುಂದೆ ಚಂದ್ರನ ಪರಿಶೋಧನೆಯ ಪ್ರಮುಖ ಹಂತ ಪ್ರಾರಂಭಗೊಳ್ಳಲಿದೆ. ಮುಂದಿನ 14 ದಿನಗಳ ಕಾಲ ಪ್ರಗ್ಯಾನ್ ರೋವರ್, ವಿಕ್ರಮ್ ಲ್ಯಾಂಡರ್ ಮಾಡಲಿರುವ ಕೆಲಸಗಳು ಮಹತ್ವದ್ದಾಗಿದೆ.
ಚಂದ್ರಯಾನ 3ರ ಒಟ್ಟು ತೂಕ 3,900 ಕೆ.ಜಿ. ಪ್ರೊಪಲ್ಷನ್ ಮಾಡ್ಯೂಲ್ 2,148 ಕೆಜಿ ಮತ್ತು ಲ್ಯಾಂಡರ್ ಮಾಡ್ಯೂಲ್ 1,752 ಕೆಜಿ ಹಾಗೂ ರೋವರ್ 26 ಕೆಜಿ ತೂಗುತ್ತವೆ. ಚಂದ್ರಯಾನ 3 ಲ್ಯಾಂಡರ್ ಇಳಿದ ಜಾಗದ ಫೋಟೋವನ್ನು ಇಸ್ರೋ ಈಗಾಗಲೇ ಹಂಚಿಕೊಂಡಿದೆ. ಬುಧವಾರ ಸಂಜೆ 6.04ಕ್ಕೆ ನಡೆದ ನಿಖರವಾದ ಸಾಫ್ಟ್ ಲ್ಯಾಂಡಿಂಗ್ ನಂತರ ವಿಕ್ರಮ್ ಅದರ ಕ್ಯಾಮೆರಾದಿಂದ ಫೋಟೋ ತೆಗೆದಿದೆ. ಚಂದ್ರನ ದಕ್ಷಿಣ ಧ್ರುವದ ಭಾಗಶಃ ಸಮತಟ್ಟಾದ ಪ್ರದೇಶದಲ್ಲಿ ಲ್ಯಾಂಡರ್ ಇಳಿದಿದೆ.
ವಿಕ್ರಮ್ ಲ್ಯಾಂಡರ್‌ನಲ್ಲಿದ್ದ ಪ್ರಗ್ಯಾನ್ ರೋವರ್ ಲ್ಯಾಂಡರ್ ನಿಂದ ಹೊರಬಂದು ಈಗ ಚಂದ್ರನ ಮೇಲ್ಮೈಯಲ್ಲಿ ತನ್ನ ತನಿಖಾ ಪ್ರವಾಸವನ್ನು ಆರಂಭಿಸಿದೆ. ಮುಂದಿನ 14 ದಿನಗಳಲ್ಲಿ, ಒಂದು ಚಂದ್ರನ ದಿನಕ್ಕೆ ಸಮನಾಗಿರುತ್ತದೆ. ಹೀಗಾಗಿ ಪ್ರಗ್ಯಾನ್ ಚಂದ್ರನ ರಹಸ್ಯಗಳನ್ನು ತಿಳಿಯಲು ವಿನ್ಯಾಸಗೊಳಿಸಲಾದ ಪ್ರಯೋಗಗಳ ಸರಣಿಯನ್ನು ಪ್ರಾರಂಭಿಸುತ್ತದೆ. ಇಷ್ಟು ದಿನ ಕಾಲ ನಡೆಸುವ ಪ್ರಯೋಗಗಳಿಂದ ಪಡೆದ ಡೇಟಾವನ್ನು ರೋವರ್ ಲ್ಯಾಂಡರ್‌ಗೆ ಕಳುಹಿಸುತ್ತದೆ, ಲ್ಯಾಂಡರ್ ಅದನ್ನು ಭೂಮಿಗೆ ಕಳುಹಿಸುತ್ತದೆ. ವಿಕ್ರಮ್ ಲ್ಯಾಂಡರ್ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತದೆ, ವಿಜ್ಞಾನಿಗಳ ಸಮಗ್ರ ವಿಶ್ಲೇಷಣೆಗಾಗಿ ಅದನ್ನು ಭೂಮಿಗೆ ರವಾನಿಸುತ್ತದೆ.
14 ದಿನಗಳ ಚಂದ್ರನ ದಿನವು ಅಂತ್ಯಗೊಳ್ಳುತ್ತಿದ್ದಂತೆ, ಆಳವಾದ ರೂಪಾಂತರವು ನಡೆಯುತ್ತದೆ. ಈ ಸಂದರ್ಭ ವಿಪರೀತ ಚಳಿಯ ವಾತಾವರಣವಿರುತ್ತದೆ. ವಿಕ್ರಮ್ ಮತ್ತು ಪ್ರಗ್ಯಾನ್ ಬಿಸಿಲಿನಲ್ಲಿ ಮಾತ್ರ ಕೆಲಸ ಮಾಡಬಹುದು. ಅವುಗಳ ಸೆಲ್‌ಗಳು ಸೂರ್ಯನ ಬಿಸಿಲು- ಶಾಖದಿಂದ ರಿಚಾರ್ಜ್ ಆಗಬೇಕಿವೆ. ಹೀಗಾಗಿ 14 ದಿನಗಳ ನಂತರ ಇವು ನಿಷ್ಕ್ರಿಯವಾಗುತ್ತವೆ. ಲ್ಯಾಂಡರ್ ಮತ್ತು ರೋವರ್ ಎರಡನ್ನೂ 14 ದಿನ ಕಾರ್ಯಾಚರಿಸುವಂತೆಯೇ ವಿನ್ಯಾಸಗೊಳಿಸಲಾಗಿದೆ.
ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಅನ್ನು ಚಂದ್ರನ ಈ ಬದಲಾವಣೆ ತಡೆದುಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದ್ದರೂ ದಿಗಂತದಲ್ಲಿ ಒಂದು ಕುತೂಹಲಕಾರಿ ಅಂಶಗಳ ಸಾಧ್ಯತೆಯಿದೆ. ಸೂರ್ಯನ ಕಿರಣಗಳು ಮತ್ತೊಮ್ಮೆ ಹೊರಹೊಮ್ಮುತ್ತಿದ್ದಂತೆ, ಮತ್ತೆ ಚೇತರಿಸಿಕೊಳ್ಳುವ ಸಾಧ್ಯತೆ ಇದೆ. ಇದು ವಿಜ್ಞಾನಿಗಳಿಗೆ ಇನ್ನಷ್ಟು ಅಧ್ಯಯನಕ್ಕೆ ಕಾರಣವಾಗಬಹುದು.
ವಿಕ್ರಮ್ ಮತ್ತು ಪ್ರಗ್ಯಾನ್‌ಗಳನ್ನು ಮತ್ತೆ ಭೂಮಿಗೆ ಕರೆತರುವ ಚಿಂತನೆಯನ್ನು ಇಸ್ರೋ ಮಾಡಿಲ್ಲ. ಇವು ಕೆಲಸ ಮಾಡುವಷ್ಟು ಕಾಲ ಇವುಗಳನ್ನು ಮುಂದುವರಿಸಲಾಗುತ್ತದೆ. ಕೆಲಸ ಮಾಡದ ಸ್ಥಿತಿಗೆ ತಲುಪಿದ ಬಳಿಕ ಇವುಗಳನ್ನು ಮರಳಿ ತರುವುದೂ ವ್ಯರ್ಥ. ಹೀಗಾಗಿ ನಮ್ಮ ವಿಜ್ಞಾನಿಗಳು ಚಂದ್ರನ ಮೇಲ್ಮೈಯಲ್ಲಿ ಅಳಿಸಲಾಗದ ಗುರುತು ಬಿಟ್ಟಿದ್ದಾರೆ. ವಿಕ್ರಮ್ ಮತ್ತು ಪ್ರಗ್ಯಾನ್ ಚಂದ್ರನ ಭೂದೃಶ್ಯದಲ್ಲಿ ಉಳಿಯಲು ನಿರ್ಧರಿಸಲಾಗಿದೆ, ಇದು ಭಾರತದ ತಾಂತ್ರಿಕ ಪರಾಕ್ರಮ ಮತ್ತು ಚಂದ್ರನ ಪರಿಶೋಧನೆಯ ಪರಾಕ್ರಮಕ್ಕೆ ಸಾಕ್ಷಿಯಾಗಿದೆ.