ಮಕ್ಕಳಿಗೆ ಬೇಕು ಪರಿಸರದ ಸ್ಪರ್ಶ

October 2, 2024
11:27 PM
"ಶಾಲೆಗಳು ಅಂಕ ನೀಡುವ ಕೇಂದ್ರಗಳಾಗಿ, ಅಂಕಗಳು ಉದ್ಯೋಗಾರ್ಹತೆಯ ಮಾಪಕಗಳಾಗಿ, ಈ ಮಾಪನವು ಹೆಚ್ಚು ವೇತನದ ಉದ್ಯೋಗವನ್ನು ಪಡೆಯಲು ದಾರಿಯಾಗಿ ಪರಿವರ್ತಿತವಾದದ್ದು ಶಿಕ್ಷಣ ವ್ಯವಸ್ಥೆಯ ಲಕ್ಷಣವನ್ನೇ ಬದಲಿಸಿತು"
Children Need Nature  ಎಂಬ  ವಿಷಯವನ್ನಿಟ್ಟುಕೊಂಡು ಒಂದು ರಾಷ್ಟ್ರೀಯ ವಿಚಾರ ಸಂಕಿರಣವನ್ನು ಏರ್ಪಡಿಸುವ ಯೋಚನೆಯೇ ಅದ್ಭುತವಾದುದು. ಇದು ಇಂದಿನ ಇಂಗ್ಲಿಷ್ ಮಾಧ್ಯಮದ ಆಕರ್ಷಣೆಯ ಧಾವಂತಕ್ಕೆ ವಿರುದ್ಧವಾದುದು. ಅರ್ಥಾತ್ ಸದ್ಯ ನಮ್ಮ ಶಿಕ್ಷಣ ವ್ಯವಸ್ಥೆಯು ಸಾಗುತ್ತಿರುವ ಮಾರ್ಗಕ್ಕೆ U Turn ನೀಡುವ ಪ್ರಯತ್ನ. ಅಂತಹ ಒಂದು ಪ್ರಯತ್ನಕ್ಕೆ ಬೆಂಗಳೂರಿನಲ್ಲಿರುವ “ಭೂಮಿ” ಸಂಸ್ಥೆಯವರು ತೊಡಗಿದ್ದು ಒಂದು ಹೊಸ ವಿದ್ಯಮಾನ. ಇದು “ಮರಳಿ ಮಣ್ಣಿಗೆ” ಎಂಬ ವಾಸ್ತವತೆಯತ್ತ ಜನರ ಗಮನವನ್ನು ಹೊರಳಿಸುವ ಒಂದು ಚಿಂತನೆ. ಈ ದಿಸೆಯಲ್ಲಿ ಅಲ್ಲಲ್ಲಿ ನಡೆಯುತ್ತಿರುವ ಶೈಕ್ಷಣಿಕ ಪ್ರಯತ್ನಗಳ ಮೇಲೆ ಬೆಳಕು ಚೆಲ್ಲುವ ವೇದಿಕೆಯನ್ನು ಈ ವಿಚಾರ ಸಂಕಿರಣವು ಏರ್ಪಡಿಸಿತು. ಇದರಲ್ಲಿ ಭಾಗವಹಿಸಲು ನಮ್ಮ ಸ್ನೇಹ ಶಿಕ್ಷಣ ಸಂಸ್ಥೆಗೂ ಆಹ್ವಾನವಿದ್ದುದರಿಂದ ನಾನು ಮತ್ತು ನನ್ನ ಪತ್ನಿ ಇಬ್ಬರೂ ಭಾಗವಹಿಸಿದೆವು. 2024 ರ ಸೆಪ್ಟೆಂಬರ್ 30 ಮತ್ತು ಅಕ್ಟೋಬರ್ ಒಂದರಂದು ಹೀಗೆ ಎರಡು ದಿನಗಳಲ್ಲಿ ನಡೆದ ಈ ಚಿಂತನ ಮಂಥನ ಕಾರ್ಯಕ್ರಮವು ಒಂದು ಆರಂಭಿಕ ಹೆಜ್ಜೆಯಾಗಿ ತನ್ನ ಛಾಪು ಮೂಡಿಸಿದೆ. ಇನ್ನು ಈ ಚಿಂತನೆಯು ಇಡೀ ಶಿಕ್ಷಣ ವ್ಯವಸ್ಥೆಯಲ್ಲಿ ವಿಸ್ತರಣೆಗೊಂಡರೆ ನಿಜವಾದ ಅರ್ಥದಲ್ಲಿ ಶಿಕ್ಷಣವು ಸರಳತೆ ಮತ್ತು ಸಹಜತೆಗೆ ಬರಲಿದೆ.
ಶಾಲೆಗಳು ಅಂಕ ನೀಡುವ ಕೇಂದ್ರಗಳಾಗಿ, ಅಂಕಗಳು ಉದ್ಯೋಗಾರ್ಹತೆಯ ಮಾಪಕಗಳಾಗಿ, ಈ ಮಾಪನವು ಹೆಚ್ಚು ವೇತನದ ಉದ್ಯೋಗವನ್ನು ಪಡೆಯಲು ದಾರಿಯಾಗಿ ಪರಿವರ್ತಿತವಾದದ್ದು ಶಿಕ್ಷಣ ವ್ಯವಸ್ಥೆಯ ಲಕ್ಷಣವನ್ನೇ ಬದಲಿಸಿತು. ಅನುಭವಾತ್ಮಕ ಕಲಿಕೆ (Experiential learning) ಇಲ್ಲದೆ ಕೇವಲ ವಿಷಯ ವಿವರಣೆಯ ಬಾಯಿಪಾಠದ ಕಲಿಕೆಯು ಅಂಕ ಗಳಿಕೆಗೆ ಸಾಕೆನ್ನಿಸುವ ಪ್ರವೃತ್ತಿ ಚಾಲನೆ ಪಡೆಯಿತು. ಆಧುನಿಕ ಪಾಶ್ಚಾತ್ಯ ಜಗತ್ತು ಈ ಪ್ರವೃತ್ತಿಗೆ ವೇಗವನ್ನು ನೀಡಿತು. ಪರಿಣಾಮವಾಗಿ ಸಿಲೆಬಸ್ ಮತ್ತು ಪಬ್ಲಿಕ್ ಪರೀಕ್ಷೆಗಳು ಶಿಕ್ಷಣ ವ್ಯವಸ್ಥೆಯಲ್ಲಿ ಪ್ರಾಧ್ಯಾನ್ಯ ಪಡೆದುವು. ಮಕ್ಕಳ ಕಲಿಕೆಯನ್ನು ಪರೀಕ್ಷೆಯಲ್ಲಿ ಅಂಕ ಗಳಿಸುವ ಉದ್ದೇಶಕ್ಕೆ ಸೀಮಿತಗೊಳಿಸಿ ಹೆತ್ತವರೂ ಶಾಲೆಗಳವರೂ ಶಿಕ್ಷಣ ವ್ಯವಸ್ಥೆಯ ವಾಸ್ತವಿಕ ಸಾಧ್ಯತೆಯನ್ನು ಮೊಟಕುಗೊಳಿಸಿದ್ದು ಒಂದು ವಿಪರ್ಯಾಸ. ಲಕ್ಷಗಟ್ಟಲೆ ರೂಪಾಯಿಗಳ ವೇತನವಿದ್ದರೂ ಊಟಕ್ಕೆ ಅಕ್ಕಿಯನ್ನು ತರಲೇಬೇಕು. ಈ ಅಕ್ಕಿಯನ್ನು ಗದ್ದೆಗಳಲ್ಲೇ ಬೆಳೆಸಬೇಕಲ್ಲದೆ ಫಾಕ್ಟರಿಗಳಲ್ಲಿ ಉತ್ಪಾದಿಸಲು ಆಗುವುದಿಲ್ಲ.
ಆದರೆ ಈ ಉತ್ಪಾದನಾ ಪ್ರಕ್ರಿಯೆಯಿಂದ ಹೊರಬರುವಂತೆ ಜನರ ಮನಸ್ಸನ್ನು ಆಕರ್ಷಿಸುವ ಶಕ್ತಿ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿದೆ. ಅದು ಮಕ್ಕಳನ್ನು ಪರಿಸರದಿಂದ ಹೊರಗೆ ತಳ್ಳುತ್ತದೆ. ಶಾಲೆಗಾಗಿ ಗುರುತಿಸಿದ ಜಾಗವೆಲ್ಲವನ್ನು ಕಾಂಕ್ರೀಟ್ ಕಟ್ಟಡಗಳು ಆಕ್ರಮಿಸುತ್ತವೆ. ಅದಕ್ಕಾಗಿ ಮರಗಳನ್ನು ಕಡಿಯಲಾಗುತ್ತದೆ. ಶಾಲೆಯ ಅಂಗಳದಲ್ಲಿ ಮಕ್ಕಳು ಶೂಗಳನ್ನು ಧರಿಸಿಯೇ ಆಡುತ್ತಾರೆ. ಇದಕ್ಕೆ ಪೂರಕವಾಗಿ ಧೂಳನ್ನು ನಿಯಂತ್ರಿಸಲು ಶಾಲಾ ಅಂಗಳವಿಡೀ ಟೈಲ್ಸ್ ಹಾಕಿಸುತ್ತಾರೆ. ಮಕ್ಕಳು ಮೈಗೆ ಮಣ್ಣು ಮಾಡಿಕೊಳ್ಳುವುದು ಅನೇಕ ಪೋಷಕರಿಗೆ ಅಸಹ್ಯವಾಗಿ ಕಾಣುತ್ತದೆ. ಮಕ್ಕಳು ವಾಹನಗಳಲ್ಲಿ ಹೋಗಿ ಶಾಲೆಯ ಅಂಗಳದಲ್ಲಿಳಿದು ತರಗತಿಗಳಿಗೆ ಹೋಗಿ ಮತ್ತೆ ಮಣ್ಣನ್ನು ಮುಟ್ಟದೇನೇ ಮನೆಗೆ ಬರುತ್ತಾರೆ. ಹೀಗೆ ನೆಲದ ಸ್ಪರ್ಶದಿಂದ ಮಕ್ಕಳನ್ನು ವಂಚಿಸುವ ಮೂಲಕ ಪ್ರಕೃತಿ ವಿರೋಧದ ಪ್ರಕ್ರಿಯೆ ಆರಂಭವಾಗುತ್ತದೆ. ಮಕ್ಕಳಿಗೆ ನಾಗರಿಕತೆಯ ವಿಕಾಸದ ಪಾಠಗಳನ್ನು ಸ್ಕ್ರೀನ್‍ನಲ್ಲಿ ವಿಡಿಯೋಗಳನ್ನು ತೋರಿಸುವ ಮೂಲಕ ಮಾಡಿಸಲಾಗುತ್ತದೆ. ಕಾಡಿನ ನಾಶದ ಮೂಲಕ ಕೃಷಿಗೆ ಇಳಿದ ಮನುಷ್ಯ ಗ್ರಾಮೀಣ ಬದುಕಿನ ಹಂತದಿಂದ ಮೇಲೇರಲು ಕೈಗಾರಿಕೀಕರಣ ಮತ್ತು ನಗರೀಕರಣ ಪ್ರಕ್ರಿಯೆಗಳು ಹೇಗೆ ಉಪಯುಕ್ತವಾದುವೆಂಬುದನ್ನು ವೀಡಿಯೊಗಳಲ್ಲಿ ವೈಭವೀಕರಿಸಲಾಗುತ್ತದೆ. ಈ ಮೂಲಕ ನಾವು ಸರಿಯಾದ ದಾರಿಯಲ್ಲಿದ್ದೇವೆಂದು ಮಕ್ಕಳು ಭಾವಿಸುವಂತೆ ಮಾಡಲಾಗುತ್ತದೆ.
ಆದರೆ ಇಂದು ಸಂಭವಿಸುತ್ತಿರುವ ಪ್ರಕೃತಿ ವಿಕೋಪಗಳು, ವಾತಾವರಣ ಬದಲಾವಣೆ ((Climate change), ಸುನಾಮಿಯ ಪರಿಣಾಮ ತೋರುವ ಚಂಡಮಾರುತಗಳು, ಪರ್ವತಗಳ ಮೈಕೊಡವಿದಂತೆ ಕಾಣುವ ಭೂಕುಸಿತಗಳು ಪರಿಸರ ಸಂರಕ್ಷಣೆಯನ್ನು ಮರೆಯಬಾರದೆಂಬ ಎಚ್ಚರವನ್ನು ನೀಡುತ್ತವೆ. ಇಂದಿನ ವಿದ್ಯೆಯಿಂದ ಸಂಪಾದಿಸುವ ಲಕ್ಷಗಟ್ಟಲೆ ವೇತನ ಕೌಟುಂಬಿಕ ನೆಮ್ಮದಿಯನ್ನು ನೀಡುವುದಿಲ್ಲ. ಗಗನಚುಂಬಿ ಕಟ್ಟಡಗಳಲ್ಲಿರುವ ಆಸ್ಪತ್ರೆಗಳು ರೋಗಶಮನ ಮಾಡುವುದಿಲ್ಲ. ಜೀವಂತ ಮರಗಳನ್ನು ಕಡಿದು ಮಾಡಿರುವ ಚತುಷ್ಪಥ ರಸ್ತೆಗಳು ಬದುಕಿನ ಸ್ಥಿರತೆಯನ್ನು ಕಾಪಾಡುವುದಿಲ್ಲ, ಕೃತಕ ಬುದ್ಧಿಮತ್ತೆಯು ಮಾನವನ ಸೃಜನಶೀಲ ಬುದ್ಧಿವಂತಿಕೆಗೆ ಯಾವತ್ತೂ ಪರ್ಯಾಯವಲ್ಲ.
ಶಿಕ್ಷಣವು ಸಮೃದ್ಧ ಪರಿಸರದ ಆವರಣದಲ್ಲಿ ಜರಗಬೇಕು. ಶಾಲೆಗಳಲ್ಲಿ ಮಕ್ಕಳಿಗೆ ನೋಡಲು, ಮುಟ್ಟಲು, ಹತ್ತಿ ಇಳಿಯುವ ಆಟವಾಡಲು ಮರಗಳಿರಬೇಕು. ಬರಿಗಾಲಲ್ಲಿ ನಡೆದಾಡಲು ಹುಲ್ಲು ಇರಬೇಕು. ಕುರುಚಲು ಗಿಡಗಳಿರಬೇಕು. ಅವುಗಳ ಹೆಸರು, ವೈವಿಧ್ಯತೆ, ಪ್ರಯೋಜನಗಳನ್ನು ಮಕ್ಕಳು ತಿಳಿದಿರಬೇಕು. ಏಕೆಂದರೆ ಪರಿಸರವೆಂದರೆ ಅದೊಂದು ಪಾಠಶಾಲೆ. Nature is teacher ಎಂಬ ಮಾತು ಸುಳ್ಳಲ್ಲ. ಕವಿವರ್ಯ ರವೀಂದ್ರನಾಥ ಠಾಗೋರರು ಮರದಡಿಯಲ್ಲಿ ಕುಳಿತು ಪಾಠ ಮಾಡುತ್ತಿದ್ದರು. ಆಗ ಅವರು ವಿದ್ಯಾರ್ಥಿಗಳಿಗೆ ಹೇಳುತ್ತಿದ್ದರಂತೆ. “ಇಲ್ಲಿ ನಿಮಗೆ ಇಬ್ಬರು ಶಿಕ್ಷಕರಿದ್ದಾರೆ, ಒಂದು ನಾನು ಮತ್ತೊಂದು ಈ ಮರ”. ಅಂದರೆ ಮರವು ಸಹಜವಾಗಿಯೇ ಪ್ರಾಯೋಗಿಕ ಶಿಕ್ಷಕ. ಅದು ನಿಸರ್ಗಕ್ಕೆ ಸ್ಪಂದಿಸಿ ತನ್ನ ಪರಿವರ್ತನೆಗಳಿಗೆ ಪಕ್ಕಾಗುತ್ತದೆ. ಆ ಪರಿವರ್ತನೆಗಳೇ ನಮಗೆ ಪಾಠಗಳು. ಹಿಂದೆ ಭಾರತದ ಋಷಿಮುನಿಗಳು ಮರಗಳ ನೆರಳಿನಲ್ಲಿ ವಿದ್ಯಾರ್ಥಿಗಳನ್ನು ಪಕ್ಕದಲ್ಲಿ ಕುಳ್ಳಿರಿಸಿಕೊಂಡು  ಪಾಠ ಮಾಡುತ್ತಿದ್ದರು. ಅಂತಹ ಒಂದು ಪರಿಸರದಲ್ಲಿ ಜೀವಕಳೆ ಇರುತ್ತದೆ. ಅದು ನಮ್ಮ ಅನುಭವಕ್ಕೆ ಬರುತ್ತದೆ. ಅಂತಹ ಅನುಭವವೇ ನಮ್ಮ ಕಲಿಕೆಯನ್ನು ಬಲಗೊಳಿಸುತ್ತದೆ.
ಮಕ್ಕಳು ಬಂದು ತುಂಬಿದಾಗಲೇ ಶಾಲೆಯು ಜೀವಂತಿಕೆ ಪಡೆಯುತ್ತದೆ. ಮಕ್ಕಳು ಮನೆಗೆ ಮರಳಿದ ಬಳಿಕ ಅಲ್ಲಿ ನಿರ್ಜೀವ ಕಟ್ಟಡಗಳಷ್ಟೇ ಉಳಿಯುತ್ತವೆ. ಶಾಲಾ ಆವರಣದಲ್ಲಿ ಮರಗಳಿಲ್ಲದಿದ್ದರೆ ಆಗ ಇರುವ ನಿರ್ಜೀವ ಕಟ್ಟಡಗಳನ್ನು ಶಾಲೆ ಎನ್ನಲಾಗುವುದಿಲ್ಲ. ಆದ್ದರಿಂದಲೇ ಶಾಲಾ ಆವರಣದಲ್ಲಿ ಗಿಡಮರಗಳಿರಬೇಕು. ಸಸ್ಯ ಮತ್ತು ಪ್ರಾಣಿಗಳ ಜೀವವೈವಿಧ್ಯತೆಯನ್ನು ಉಳಿಸಿಕೊಂಡು ಸಾಗುವಲ್ಲಿ ನಿಜವಾದ ಸಾಮಾಜಿಕ ವಿಕಸನವಿದೆ ಎಂಬುದು ಶಿಕ್ಷಣದಲ್ಲಿ ಒಂದು ಪಠ್ಯವಾಗಬೇಕು. ಆಗಲೇ ಪರಿಸರ ಪ್ರೀತಿ ಉಂಟಾಗುತ್ತದೆ. Nature is the best teacher ಎನ್ನುತ್ತಾರೆ. ಅಂತಹ ಕಲಿಕಾ ವ್ಯವಸ್ಥೆ ಇದ್ದರೆ ಶಾಲೆಗಳಲ್ಲಿ ಕಾಡುನಾಶ ಮಾಡುವ  ಅರಣ್ಯಾಧಿಕಾರಿಗಳು ಮೂಡಿ ಬರುವುದಿಲ್ಲ, ಆರೋಗ್ಯ ನಾಶ ಮಾಡುವ ವೈದ್ಯರು ರೂಪಿಸಲ್ಪಡುವುದಿಲ್ಲ. ಸೇತುವೆಗಳನ್ನು ನಿರ್ಮಾಣ ಹಂತದಲ್ಲಿ ಬೀಳುವಂತೆ ಕಟ್ಟುವ ಇಂಜಿನಿಯರ್‍ಗಳು ತಯಾರಾಗುವುದಿಲ್ಲ, ನ್ಯಾಯದಾನವನ್ನು ವಿಳಂಬ ಮಾಡುವ ನ್ಯಾಯವಾದಿಗಳು ಮತ್ತು ನ್ಯಾಯಾಧೀಶರು ಇರುವುದಿಲ್ಲ, ಲಂಚಕ್ಕೆ ಕೈ ಚಾಚುವಲ್ಲಿ ನಾಚಿಕೆ ಪಡದ ಅಧಿಕಾರಿಗಳು ಕಾಣಿಸುವುದಿಲ್ಲ. ಸರಿಯಾಗಿ ಕಲಿಯದೆ ಅಂಕಗಳಿಗೆ ಡಿಮಾಂಡು ಮಂಡಿಸುವ ವಿದ್ಯಾರ್ಥಿಗಳಿರುವುದಿಲ್ಲ. ಅಂದರೆ ಇಂದು ನಾವು ಕಾಣುವ ಅನೇಕ ವಿರೋಧಾಭಾಸದ ವಿದ್ಯಮಾನಗಳಿಗೆ ಪರಿಸರ ರಹಿತ ಶಿಕ್ಷಣವೇ ಕಾರಣ. ಹಾಗಾಗಿ “ಮಕ್ಕಳಿಗೆ ಬೇಕು ಪರಿಸರ” ಎಂಬ ಚಿಂತನೆಯು ಒಂದು ಚಳುವಳಿಯಾಗಿ ಬೆಳೆಯಬೇಕು. ಶಿಕ್ಷಣವು ಪರಿಸರ ಕೇಂದ್ರಿತವಾಗಿರಲಿ ಎಂಬ ನೀತಿಯು ಅನುಷ್ಟಾನಕ್ಕೆ ಬರಬೇಕು.
ಬರಹ :
ಚಂದ್ರಶೇಖರ ದಾಮ್ಲೆ

Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಡಾ.ಚಂದ್ರಶೇಖರ ದಾಮ್ಲೆ

ಡಾ. ಚಂದ್ರಶೇಖರ ದಾಮ್ಲೆಯವರು ಸುಳ್ಯದ ನೆಹರು ಮೆಮೋರಿಯಲ್ ಕಾಲೇಜ್ ನಲ್ಲಿ ಸಮಾಜಶಾಸ್ತ್ರ ಪ್ರಾಧ್ಯಾಪಕರಾಗಿ 35 ವರ್ಷಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು. ವೃತ್ತಿಯಲ್ಲಿರುವಾಗಲೇ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾಗಿ ಸಮಾಜಸೇವೆಯಲ್ಲಿ ತೊಡಗಿಕೊಂಡವರು. ಸಾಂಸ್ಕೃತಿಕ ಸಂಘದ ಮೂಲಕ ಮಕ್ಕಳಿಗೆ ಯಕ್ಷಗಾನ ನಿರ್ದೇಶಕನ, ಸುಳ್ಯದಲ್ಲಿ ಯಕ್ಷಗಾನ ಹಿತರಕ್ಷಣಾ ವೇದಿಕೆಯ ಸ್ಥಾಪನೆ, ಸಂಪೂರ್ಣ ಸಾಕ್ಷರತಾ ಆಂದೋಲನದಲ್ಲಿ ಸಂಪನ್ಮೂಲ ವ್ಯಕ್ತಿ, ಕನ್ನಡಮಾಧ್ಯಮದಲ್ಲಿ ಸ್ನೇಹ ಶಿಕ್ಷಣ ಸಂಸ್ಥೆಯ ಸ್ಥಾಪನೆ ಮುಂತಾದ ಸಮಾಜಮುಖಿ ಕಾರ್ಯಗಳಲ್ಲಿ ಸೇವೆ ನೀಡಿದವರು. ಶಿಕ್ಷಣದಲ್ಲಿ ಸೃಜನಶೀಲತೆಗೆ ಒತ್ತು ನೀಡುವ ದಾಮ್ಲೆಯವರು ಸಂಶೋಧಕರಾಗಿದ್ದು ಕನ್ನಡ ಇಂಗ್ಲಿಷ್ ಭಾಷೆಗಳಲ್ಲಿ ಕೃತಿ ರಚನೆ ಮಾಡಿದವರು. 'ನೆಲದನಂಟು' ಮತ್ತು "ಶಾಲೆ ಎಲ್ಲಿದೆ?" ಇವು ಇವರ ಪ್ರಸಿದ್ಧ ಕಾದಂಬರಿಗಳು. ಅನೇಕ ಪ್ರಶಸ್ತಿ ಸಮ್ಮಾನಗಳಿಂದ ಗೌರವಿಸಲ್ಪಟ್ಟ ದಾಮ್ಲೆಯವರಿಗೆ ಅಸಾಮಾನ್ಯ ಕನ್ನಡಿಗ ಪ್ರಶಸ್ತಿ, ಯಕ್ಷಮಂಗಳ ಪ್ರಶಸ್ತಿ, ಅರಣ್ಯಮಿತ್ರ ಮತ್ತು ಜಲಮಿತ್ರ ಪ್ರಶಸ್ತಿ, Nation Builder ಪ್ರಶಸ್ತಿ ಮುಂತಾದುವು ಲಭಿಸಿವೆ. ಹೊಸದಿಗಂತ ಪತ್ರಿಕೆಯಲ್ಲಿ "ಇದ್ಯಾಕೆ ಹೀಗೆ " ಅಂಕಣವನ್ನು ಬರೆಯುತ್ತಿದ್ದರು.

ಇದನ್ನೂ ಓದಿ

ಮನೆಯು ಮತ್ತೊಮ್ಮೆ ಮೊದಲ ಪಾಠಶಾಲೆಯಾಗಲಿ
November 20, 2024
8:49 PM
by: ಡಾ.ಚಂದ್ರಶೇಖರ ದಾಮ್ಲೆ
ಭತ್ತ ಬೆಳೆಸುವ ಪ್ರಯೋಗ, ಅಕ್ಕಿ ತಯಾರಿಸುವ ಪ್ರಕ್ರಿಯೆ
November 13, 2024
9:43 PM
by: ಡಾ.ಚಂದ್ರಶೇಖರ ದಾಮ್ಲೆ
ಆಧುನಿಕ ಯುಗದಲ್ಲಿ ಭಾರತೀಯ ಪ್ರಜೆ
November 6, 2024
6:42 AM
by: ಡಾ.ಚಂದ್ರಶೇಖರ ದಾಮ್ಲೆ
ವಕ್ಫ್ ಆಸ್ತಿ ವಿವಾದ | ಕಾಂಗ್ರೇಸ್ಸಿನ ತುಷ್ಟೀಕರಣದ, ಬಿಜೆಪಿಯ ದ್ವೇಷ ರಾಜಕಾರಣದ ಮತ್ತು ಮಾಧ್ಯಮಗಳ ವಿವೇಚನಾ ರಹಿತ ಚರ್ಚೆಗಳ ಭಾವನಾತ್ಮಕ ಪ್ರನಾಳ ಶಿಶು……..
November 5, 2024
7:22 AM
by: ವಿವೇಕಾನಂದ ಎಚ್‌ ಕೆ

You cannot copy content of this page - Copyright -The Rural Mirror