ಮುಂಜಾನೆ ರೇಡಿಯೋದಲ್ಲಿ ಬಿತ್ತರವಾಗುತ್ತಿದ್ದ ಸುಬ್ಬುಲಕ್ಷ್ಮಿಯವರ “ಕೌಸಲ್ಯಾ ಸುಪ್ರಜಾ ರಾಮ ಪೂರ್ವಾ ಸಂಧ್ಯಾ ಪ್ರವರ್ತತೇ| ಉತ್ತಿಷ್ಟ ನರಶಾರ್ದೂಲ ಕರ್ತವ್ಯಂ ದೈವಮಾನ್ವಿತಂ||” ಎಂಬ ಸುಪ್ರಭಾತವನ್ನು ಕೇಳುತ್ತಲೇ ನಮಗೆ ಬೆಳಗಾಗುತ್ತಿತ್ತು. ಎದ್ದು ಮಸುಕು ಬೆಳಕಿನಲ್ಲಿ ಸುಖವಾಗಿ ಕಣ್ತೆರೆದು ಉಗಮಿಸಿದ ಸೂರ್ಯನ ಬೆಳಕು ಹೆಚ್ಚಾಗುತ್ತಿದ್ದಂತೆ ಪರಿಸರದ ಸೌಂದರ್ಯವನ್ನು ಸವಿಯುತ್ತಿದ್ದೆವು. ಈಗಲೂ ಅದೇ ಅಭ್ಯಾಸ ಉಳಿದು ಬಂದಿದೆ. ಸೂರ್ಯ ಮೂಡುವ ಮೊದಲೇ ಅಂಗಳಕ್ಕಿಳಿದು ನಡೆದಾಡುವಾಗ ಸಿಗುವ ಅಹ್ಲಾದಕರ ವಾತಾವರಣದ ಶಕ್ತಿ ಅಪಾರವಾದದ್ದೆನ್ನುತ್ತಾರೆ. ಉಚಿತವಾಗಿ ಸಿಗುವ ಅದರ ಲಾಭವನ್ನು ಪಡೆಯುವ ಜಾಣ್ಮೆ ನಮ್ಮಲ್ಲಿರಬೇಕು.
ಆಧುನಿಕ ಜಗತ್ತಿನಲ್ಲಿ ಝಗಮಗಿಸುವ ವಿದ್ಯುದ್ದೀಪಗಳ ಬೆಳಕಿಗೆ ಹೊಂದಿಕೊಂಡಿರುವವರ ವೇಳಾಪಟ್ಟಿ ಬದಲಾಗಿದೆ. ಅವರು ಮಲಗುವುದು ತಡವಾಗಿ, ಏಳುವುದೂ ತಡವಾಗಿ. ಇದರಿಂದಾಗಿ ಬೆಳಗ್ಗೆ ಏಳು-ಏಳೂವರೆಗೆ ಎದ್ದ ಮಗು ಕಣ್ತೆರೆದಾಗ ಕಿಟಿಕಿಯಿಂದ ಕೋರೈಸುವ ಸೂರ್ಯನ ಬೆಳಕನ್ನು ಕಂಡು ಕಣ್ಮುಚ್ಚಿಕೊಳ್ಳುತ್ತದೆ. ಆಮೇಲೆ ನಿಧಾನವಾಗಿ ತೆರೆಯುವ ಕಣ್ಣಪಾಪೆ ಹೆಚ್ಚಿನ ಬೆಳಕಿಗೆ ಹೊಂದಿಕೊಳ್ಳುತ್ತಲೇ ಮಗು ಪೂರ್ತಿ ಕಣ್ತೆರೆಯುತ್ತದೆ. ಆದರೆ ಇದು ಸಹಜವಾಗಿ ಆಗಬೇಕಾದ ಪ್ರಕ್ರಿಯೆ. ಅಂದರೆ ಸೂರ್ಯೋದಯದ ಮೊದಲೇ ಮಗು ಎದ್ದರೆ ಆ ಹೊತ್ತಿನ ಬೆಳಕು ಅದರ ಕಣ್ಣಪಾಪೆಗೆ ಹಿತವಾಗುತ್ತದೆ. ಬೆಳಕು ಹೆಚ್ಚಿದಂತೆ ತೆರೆದುಕೊಳ್ಳುತ್ತ ಹೊಂದಿಕೊಳ್ಳುವ ಕಣ್ಣಪಾಪೆಯ ಆರೋಗ್ಯವೂ ದೀರ್ಘವಾಗಿರುತ್ತದೆ. ಅದಕ್ಕಾಗಿ ಮಕ್ಕಳಿಗೆ ಬೇಗ ಏಳುವ ಅಭ್ಯಾಸ ಬಾಲ್ಯದಿಂದಲೇ ಬಂದರೆ ಆಗ ಅವರಿಗೆ ನಿಸರ್ಗದ ಸಂಸರ್ಗ ದಿನದ ಬಹುದೀರ್ಘ ಅವಧಿಯಲ್ಲಿ ಸಿಗುತ್ತದೆ. ತಡವಾಗಿ ಏಳುವ ಮಗು ಬೇಗ ಹೊರಗೆ ಬರುವುದಿಲ್ಲ, ಕತ್ತಲಾಗುತ್ತಲೇ ವಿದ್ಯುದ್ದೀಪಗಳನ್ನು ಆಶ್ರಯಿಸುತ್ತದೆ. ಹಾಗಾಗಿ ಸೂರ್ಯ ಶಕ್ತಿಯ ಲಾಭ ಪಡೆಯುವುದರಲ್ಲಿ ಹಿಂದೆ ಬೀಳುತ್ತದೆ. ಸೂರ್ಯನ ಬೆಳಕಿನ ಪೋಷಕಾಂಶವನ್ನೇ ಅದು ಕಳೆದುಕೊಳ್ಳುತ್ತದೆ.
ನಮ್ಮ ಋಷಿ ಪರಂಪರೆಯಲ್ಲಿ ಸೂರ್ಯನನ್ನು ನಿತ್ಯ ಬರುವ ಅತಿಥಿ ಎನ್ನಲಾಗಿದೆ. ಅತಿಥಿ ಎಂದ ಬಳಿಕ ನಾವು ಆತನ ಸ್ವಾಗತಕ್ಕೆ ಸಿದ್ಧರಾಗಬೇಕು. ಅರ್ಥಾತ್ ಮುಂಜಾನೆ ಬೇಗ ಎದ್ದು ಅತಿಥಿಯನ್ನು ಬರಮಾಡಿಕೊಳ್ಳಬೇಕು. ಆಗಮಿಸುವ ಸೂರ್ಯನನ್ನು ನಾವು ಕಾಯಬೇಕೇ ಹೊರತು ಸೂರ್ಯನು ನಮ್ಮನ್ನು ಕಾಯುವುದಿಲ್ಲ. ಇಂತಹ ಒಂದು ಎಚ್ಚರವನ್ನು ಮಕ್ಕಳಲ್ಲಿ ಮೂಡಿಸಿದರೆ ಅವರಿಗೆ ಬೆಳಗ್ಗೆ ಏಳುವುದರಲ್ಲಿ ಉಲ್ಲಾಸವಿರುತ್ತದೆ. ಅದು ಮತ್ತೆ ಇಡೀ ದಿನ ಅವರ ದೇಹ-ಮನಸ್ಸುಗಳಲ್ಲಿ ವ್ಯಾಪಿಸಿರುತ್ತದೆ. ಇಂಗ್ಲಿಷ್ ನಲ್ಲೂ ““Early to bed and early to rise” ಎಂದೇ ನಾಣ್ನುಡಿ ಇರುವುದು. ಆದರೆ ಇದು ಮಕ್ಕಳಿಗೆ
ಬಾಯಿಪಾಠಕ್ಕೆ ಸೀಮಿತವಾಗಿರುವುದು ದುರಂತ. ಸಂಜೆ ಹೊತ್ತಿನಲ್ಲಿ ಟಿ.ವಿ. ವೀಕ್ಷಣೆ ಆರಂಭವಾದರೆ ಅದು ಗಂಟೆಗಟ್ಟಲೆ ಮುಂದುವರಿದು ಕಣ್ಮಣಿ ಬಿರಿದು ಬೇಗ ನಿದ್ರೆ ಬರುವುದು ಕಷ್ಟ. ಟಿ.ವಿ ಯ ಹೊರತಾಗಿ ಕಂಪ್ಯೂಟರ್ ಮತ್ತು ಮೊಬೈಲ್ ಫೆÇೀನ್‍ಗಳಲ್ಲಿ ಸಿನೆಮಾ ನೋಡುವ ಅಭ್ಯಾಸವನ್ನು ಅನೇಕ ಹೆತ್ತವರು ಬೆಳೆಸಿಕೊಂಡಿರುತ್ತಾರೆ. ಅವರೊಂದಿಗೆ ಜೋತಾಡುವ ಮಕ್ಕಳು ನಿದ್ರೆಗೆಟ್ಟು ಬೇಗ ಏಳಲಾಗದೆ ಮುಂಜಾವಿನ ಸೂರ್ಯನ ದರ್ಶನದಿಂದ ವಂಚಿತರಾಗುವುದು ಅನಿವಾರ್ಯ.
ಸೂರ್ಯನೆಂದರೆ ಕೇವಲ ಒಂದು ನಕ್ಷತ್ರ ಮಾತ್ರ. ಅವನಂತಹ ಅನೇಕ ನಕ್ಷತ್ರಗಳು ಅನಂತವಾದ ಆಕಾಶದಲ್ಲಿ ಇವೆ. ಸೂರ್ಯನಿಗಿಂತ ದೊಡ್ಡದಾದ ನಕ್ಷತ್ರಗಳೂ ಇವೆ. ಸೂರ್ಯನೊಂದು ನಿರಂತರ ಉರಿಯುವ ಗೋಲವೆಂದು ಖಗೋಳ ಶಾಸ್ತ್ರವು ತಿಳಿಸಿದ ಬಳಿಕ ದೇವರ ಸ್ಥಾನವನ್ನು ತಪ್ಪಿಸಿಕೊಂಡ ಸೂರ್ಯ ಒಂದು ವಸ್ತುವಾಗಿ ಗುರುತಿಸಲ್ಪಟ್ಟ. ಆದರೆ ಭೂಮಿಯಲ್ಲಿರುವ ನಮಗೆ ಸೂರ್ಯನ ಪ್ರಭಾವವು ಮೊದಲಿದ್ದಂತೆಯೇ ಇದೆ. ಸೂರ್ಯನಿಲ್ಲದೆ ಈ ಭೂಮಿಯಲ್ಲಿ ಜೀವಿಗಳ ಬದುಕು ಇರಲಾರದು. ಕತ್ತಲೆಯನ್ನು ಹೋಗಲಾಡಿಸುವುದೇ ಸೂರ್ಯನ ಮಹತ್ ಶಕ್ತಿಯಾಗಿದೆ. ಸೂರ್ಯನ ಸುತ್ತಲೂ ತನ್ನ ಅಕ್ಷದಲ್ಲೇ ಸುತ್ತುವ ಭೂಮಿಯ ವ್ಯವಸ್ಥೆ ಹೇಗಿದೆಯೆಂದರೆ ಸೂರ್ಯನ ಕಿರಣಗಳು ಬೀಳುವ ಭೂಭಾಗವು ದಿನದಿಂದ ದಿನಕ್ಕೆ ವ್ಯತ್ಯಸ್ಥವಾಗುತ್ತಲೇ ಇರುತ್ತದೆ. ಹೀಗಾಗಿ ನಮಗೆ ಆರು ತಿಂಗಳು ಉತ್ತರಾಯಣ ಮತ್ತು ಆರು ತಿಂಗಳು ದಕ್ಷಿಣಾಯನ ಎಂಬ ಚಲನೆಯ ಅನುಭವ
ಸಿಗುತ್ತದೆ. ಹೀಗಾಗದೆ ಒಂದೇ ಕಡೆಗೆ ಸೂರ್ಯನ ಕಿರಣಗಳು ಬೀಳುವುದಾಗಿದ್ದರೆ ಅದಷ್ಟು ಭಾಗ ಸುಟ್ಟೇ ಹೋಗುತ್ತಿತ್ತು. ಹೀಗೆ ಜೀವ ರಕ್ಷಕ ವ್ಯವಸ್ಥೆ ಹೇಗೆ ವಿಶ್ವವಿಸ್ಮಯವಾಗಿ ಉಳಿದು ಬಂದಿದೆ ಎಂಬುದೂ ನಮ್ಮ ಅರಿವಿಗೆ ಬರಬೇಕಾದ ಸಂಗತಿಯಾಗಿದೆ. ಬೆಳಗ್ಗೆದ್ದು ನೆರಳಿನ ಉದ್ದದಿಂದ ತನ್ನ ಎತ್ತರವನ್ನು ಅಂದಾಜಿಸುವ ಮಗುವಿನ ಕುತೂಹಲವು ಕಾಲಮಾನದ ವ್ಯತ್ಯಾಸಕ್ಕೆ ಹೊಂದಿಕೊಂಡು ಮರಗಿಡಗಳ ನೆರಳು ಹೇಗೆ ಸ್ಥಿತ್ಯಂತರವಾಗುತ್ತದೆ ಎಂತ ತಿಳಿಯ ಬಯಸಿದರೆ ಆಗ ಅದು ವೈಜ್ಞಾನಿಕ ಅಧ್ಯಯನಕ್ಕೆ ತೊಡಗಿದಂತಾಗುತ್ತದೆ.
ಸೂರ್ಯನನ್ನು ಜ್ಞಾನಚಕ್ಷು, ವಿಶ್ವದ ಕಣ್ಣು, ಸಕಲ ಚರಾಚರಗಳ ಅಸ್ತಿತ್ವದ ಆತ್ಮ, ಜೀವದ ಮೂಲ, ಮುಕ್ತಿಯ ಪ್ರತೀಕ ಮತ್ತು ಯೋಗಿಗಳ ಗುರಿ ಎಂದು ಭಾರತೀಯ ಜ್ಞಾನ ಪರಂಪರೆಯಲ್ಲಿ ವರ್ಣಿಸಲಾಗಿದೆ. ಸೂರ್ಯನಿಂದ ಸಿಕ್ಕುವ ಪ್ರಯೋಜನಗಳಿಗನುಸಾರವಾಗಿ ಆತನಿಗೆ ಹೆಸರುಗಳೂ ಹುಟ್ಟಿಕೊಂಡಿವೆ. ಸೂರ್ಯನ ಮೂಡುವ ಮತ್ತು ಮುಳುಗುವ ಗುಣದಿಂದಾಗಿ ಸವಿತೃ, ಆತನ ವೈಭವದಿಂದಾಗಿ ಆದಿತ್ಯ, ಜೀವಜಗತ್ತಿನ ಕಾರಕಶಕ್ತಿಯಾಗಿ ಮಿತ್ರ, ಕತ್ತಲೆಯನ್ನು ಓಡಿಸುವವನಾಗಿ ಪೂಷಾನ್ ಎಂಬಿತ್ಯಾದಿ ಹೆಸರುಗಳನ್ನು ಗಳಿಸಿದ್ದಾನೆ. ಸೂರ್ಯಾಷ್ಟಕವೆಂದು ಪ್ರಸಿದ್ಧವಾದ ಸೂರ್ಯನ ಸ್ತೋತ್ರದಲ್ಲಿ “ಆದಿದೇವ ನಮಸ್ತುಭ್ಯಂ” ಎಂದೇ ಪ್ರಾರ್ಥನೆಯ ಆರಂಭವಿದೆ. ದೇವುಡುರವರು ತನ್ನ ‘ಮಹಾದರ್ಶನ’ ಕಾದಂಬರಿಯಲ್ಲಿ ಸೂರ್ಯನನ್ನೇ ವಿಶ್ವದ ದೇವರೆಂದು ಪ್ರತಿಪಾದಿಸಿದ್ದಾರೆ. “ಪೂರ್ಣಮದ: ಪೂರ್ಣಮಿದಂ ಪೂರ್ಣಾತ್ ಪೂರ್ಣ ಮುದಚ್ಯತೇ. ಪೂರ್ಣಸ್ಯ
ಪೂರ್ಣಮಾದಾಯ ಪೂರ್ಣವೇವಾವ ಶಿಷ್ಯತೇ” ಎಂಬುದನ್ನು ಉಲ್ಲೇಖಿಸಿದ್ದಾರೆ. ಇದರೊಂದಿಗೆ ಜ್ಞಾನ ಸಂಗ್ರಹಕ್ಕಾಗಿ ದೇಹಾರೋಗ್ಯವನ್ನು ಸೂರ್ಯನಲ್ಲಿ ಬೇಡುವ “ಭದ್ರಂ ಕರ್ಣೇಭಿ ಶ್ರುಣುಯಾಮದೇವಾ| ಭದ್ರಂ ಪಶ್ಯೇಮಾಕ್ಷಭಿರ್ಯ ಜತ್ರಃ|| ಸ್ಥಿರೈ ರಂಗೈ ಸ್ತುಷ್ಟುವಾಂ ಸಸ್ತನೂಭಿಃ| ವ್ಯಶೇಮ ದೇವಹಿತಂ ಯದಾಯುಃ || ಎಂಬ ಮಂತ್ರದ ಪ್ರಾಮುಖ್ಯತೆಯನ್ನು ಹೇಳಿದ್ದಾರೆ. ಅಂದರೆ ನಮಗೆ ಒಳ್ಳೆಯ ವಿಷಯಗಳೇ ಕೇಳಿ ಬರಲಿ, ಒಳ್ಳೆಯ ವಿಷಯಗಳೇ ನೋಡಲು ಸಿಗಲಿ. ಹಾಗೆಯೇ ನಮ್ಮ ಶರೀರದ ಅಂಗಾಂಗಗಳಲ್ಲಿ ಶಕ್ತಿಯು ತುಂಬಿ ಪೂರ್ಣ ಆಯುಷ್ಯವನ್ನು ಅನುಭವಿಸುವಂತಾಗಲಿ” ಎಂಬ ಈ ಪ್ರಾರ್ಥನೆಯು ಮಹತ್ವಪೂರ್ಣವಾಗಿದೆ. ಮಕ್ಕಳಿಗೆ ಮುಂಜಾನೆ ಸೂರ್ಯನ ದರ್ಶನದೊಂದಿಗೆ ಈ ಮಂತ್ರ ಪಠಣವು ಅರ್ಥಸಹಿತವಾಗಿ ಹೇಳಲು ಗೊತ್ತಿದ್ದರೆ ಅದು ಸೂರ್ಯ ಶಕ್ತಿಯ ಆವಾಹನೆಯೇ ಆಗುತ್ತದೆ.
ಸೂರ್ಯನು ಮೂಡಿದಲ್ಲಿಂದ ಅಸ್ತಂಗತನಾಗುವಷ್ಟೂ ಹೊತ್ತು ನಾವು ಎಚ್ಚರದಲ್ಲಿದ್ದರೆ ನಮ್ಮ ಅನೇಕ ಕೆಲಸಗಳಿಗೆ ಸಾಕಷ್ಟು ಸಮಯ ಸಿಕ್ಕುತ್ತದೆ. ಪುರುಸೊತ್ತಿಲ್ಲ ಎನ್ನುವವರಿಗೆ ಬೆಳಗ್ಗೆ ಬೇಗ ಏಳುವುದೇ ಉಪಾಯವೆಂದು ಹೇಳಬೇಕು. ಸರ್ವಧರ್ಮದವರಿಗೂ ಸರ್ವ ಪ್ರಾಣಿಗಳಿಗೂ ದೇವರಾಗಿರುವ ಸೂರ್ಯನ ಆರಾಧನೆಯು ವಿಶ್ವ ಭ್ರಾತೃತ್ವಕ್ಕೂ ಕಾರಣವಾಗುತ್ತದೆ. ಪ್ರಾಚೀನ ಈಜಿಪ್ಟ್, ಗ್ರೀಸ್, ಬೆಬಿಲೋನಿಯಾ, ಅಮೇರಿಕಾ ಮುಂತಾದ ದೇಶಗಳಲ್ಲಿಯೂ ಸೂರ್ಯಾರಾಧನೆ ಇತ್ತು. ಸೂರ್ಯನನ್ನು ಪೂರ್ಣವಾಗಿ ಅವಲಂಬಿಸುವುದೇ ನಮ್ಮ ಸಂಪದಭಿವೃದ್ಧಿಯ ಮಾರ್ಗ. ಇದನ್ನು ಮಕ್ಕಳಿಗೆ ತಿಳಿಸಿದಷ್ಟು ನಮ್ಮ ಭಾವೀ ಜನಾಂಗ ಶಕ್ತಿಶಾಲಿಯಾಗಲಿದೆ.
ಇಂದು ಸೌರಶಕ್ತಿಯ ಬಹೂಪಯೋಗಗಳ ಸಂಶೋಧನೆ ನಡೆಯುತ್ತಲೇ ಇದೆ. ಶಕ್ತಿಗಾಗಿ ಪೆಟ್ರೋಲ್, ಡಿಸೇಲ್, ಕಲ್ಲಿದ್ದಲುಗಳ ಬಳಕೆಯನ್ನು ಕಡಿಮೆ ಮಾಡಲು ಯಥೇಷ್ಟವಾಗಿ ಸಿಗುತ್ತಿರುವುದೇ ಸೌರಶಕ್ತಿ. ಅದು ರಾತ್ರಿ ಕಾಲದಲ್ಲಿ ಸಿಗುವುದಿಲ್ಲ. ಹಗಲಿನಲ್ಲಿ ಸಂಚಯನ ಮಾಡಿ ಸಂಗ್ರಹಿಸಿಡುವುದೇ ಉಪಾಯ. ಅದನ್ನೇ ಮನುಷ್ಯರೂ ಮುಂಜಾನೆಯ ನಡಿಗೆ, ವ್ಯಾಯಾಮ, ಸೂರ್ಯನಮಸ್ಕಾರ, ಸೂರ್ಯನ ಬಿಸಿಲಿಗೆ ಮೈಯೊಡ್ಡುವುದು ಇತ್ಯಾದಿಗಳಿಂದ ಪಡೆಯಲು ಸಾಧ್ಯವಿದೆ. ಈ ಲಾಭಗಳನ್ನು ಪ್ರಾಯೋಗಿಕವಾಗಿ ಪಡೆಯಬೇಕಿದ್ದರೆ ಮಕ್ಕಳೊಂದಿಗೆ ಮುಂಜಾನೆಯ ಸೂರ್ಯನನ್ನು ಸ್ವಾಗತಿಸಲು ಹಿರಿಯರೂ ಏಳುವುದು ಅಗತ್ಯವಾಗಿದೆ.
26.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ಹಾಲಗುಂಡಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಲಕ್ಕುಂಡಿ ಪಾರಂಪರಿಕ…
ಬೆಂಗಳೂರಿನ ಬಸವನ ಗುಡಿಯಲ್ಲಿ ಐತಿಹಾಸಿಕ ಕಡಲೆಕಾಯಿ ಪರಿಷೆ ಸೊಬಗು ಕಳೆಗಟ್ಟಿದೆ. ಇಂದು ಕಡಲೆಕಾಯಿ…
ಚಿಕ್ಕಮಗಳೂರು ಜಿಲ್ಲೆಯಲ್ಲಿ ಆನೆಗಳ ಹಾವಳಿ ತಡೆಯಲು ಸರ್ಕಾರದ ಸಚಿವರು ಹಾಗೂ ಅರಣ್ಯ ಇಲಾಖೆ…
ಅಡಿಕೆ ಹಳದಿ ಎಲೆರೋಗ ಬಾಧಿಸಿದ ತೋಟದ ಕೃಷಿಕ ಶಂಕರಪ್ರಸಾದ್ ರೈ ಅವರು ಕೃಷಿ…
ಅಡಿಕೆ ಕೃಷಿಯ ಜೊತೆಗೆ ಮಿಶ್ರ ಕೃಷಿಯನ್ನು ಏಕೆ ಮಾಡಬೇಕು..? ಯಾವ ಕೃಷಿಯನ್ನು ಮಾಡಬಹುದು..?…