ಮನೆಯಲ್ಲಿ ಮಕ್ಕಳಿಗೆ ಸ್ಟ್ರಾಂಗ್ ಫಾದರ್ ಮತ್ತು ಕಲ್ಚರ್ಡ್ ಮದರ್ ಇರಬೇಕು

March 6, 2025
10:23 AM
ಶಿಕ್ಷಣವೆಂದರೆ ಅದು ಹಣ ಕೊಟ್ಟು ಪಡೆಯುವ ವಸ್ತುವಿನಂತೆ ಬಿಕರಿಯಾಗುತ್ತಿದೆ. ಈ ದೃಷ್ಠಿಯಿಂದ ಶಿಕ್ಷಣ ಕ್ಷೇತ್ರದಲ್ಲಿ ಕಂಡು ಬರುವ ಕೊರತೆಗಳನ್ನು ನೀಗಿಸುವ ಅಗತ್ಯವಿದೆ. ಆದರೆ ಶಾಲೆಗಳೆಂದರೆ ಸರ್ಟಿಫೀಕೇಟುಗಳ ವಿತರಣಾ ಕೇಂದ್ರಗಳಂತಾಗಿರುವುದು ದೇಶದ ದುರ್ದೈವ. ಸಮಾಜ, ಧರ್ಮ ಮತ್ತು ರಾಷ್ಟ್ರದ ಚಿಂತನೆಯನ್ನು ಮಕ್ಕಳಲ್ಲಿ ತುಂಬಬೇಕಾಗಿದೆ.

“ನನ್ನ ಮಗುವಿಗೆ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಸೀಟು ಸಿಗಬೇಕಾದರೆ ನಾನು ಕುಡಿಯೋದನ್ನು ಬಿಡಬೇಕಾ?” ಹೀಗೆ ಆತಂಕದಿಂದಲೇ ಪ್ರಶ್ನಿಸಿದ್ದ ಅಪ್ಪ, “ಸರಿ ನಾನು ಕುಡಿಯೋದನ್ನು ಬಿಡುತ್ತೇನೆ. ಆದರೆ ಮಗುವಿಗೆ ಸೀಟನ್ನು ತಪ್ಪಿಸುವುದಿಲ್ಲ” ಎಂಬ ನಿರ್ಧಾರಕ್ಕೆ ಬರುತ್ತಾನೆ. ಮಕ್ಕಳಲ್ಲಿ ಸಂಸ್ಕಾರ ಬೆಳೆಸುವ ಶಾಲೆಯೊಂದು ಹೀಗೆ ಪೋಷಕರ ವರ್ತನೆಗಳನ್ನು ಸುಧಾರಿಸುತ್ತದಾದರೆ ಅದು ಸಮಾಜಕ್ಕೆ ಶಾಲೆ ನೀಡುವ ಒಂದು ಕೊಡುಗೆಯೇ ತಾನೆ? ಇಂತಹ ಕೊಡುಗೆ ನೀಡುತ್ತಿರುವ ಖಡಕ್ ಶಿಕ್ಷಣ ತಜ್ಞ ಆಚಾರ್ಯ ಶ್ರೀ ವೆಂಕಟೇಶ ಮೂರ್ತಿಯವರ ಪ್ರತಿಪಾದನೆ ಏನೆಂದರೆ ಮಕ್ಕಳು ಸಂಸ್ಕಾರವಂತರಾಗಲು ಅವರಿಗೆ “ಸ್ಟ್ರಾಂಗ್ ಫಾದರ್ ಮತ್ತು ಕಲ್ಚರ್ಡ್ ಮದರ್” ಇರಬೇಕು.

Advertisement
Advertisement
Advertisement
Advertisement
Advertisement

“ತಂದೆ ಗಟ್ಟಿಯಾಗದಿದ್ದರೆ ಮತ್ತು ತಾಯಿ ಸಂಸ್ಕಾರಯುತಳಾಗದಿದ್ದರೆ ಮಕ್ಕಳಲ್ಲಿ ಸಂಸ್ಕಾರ ವಿಕಸನಗೊಳ್ಳಲು ಸಾಧ್ಯವಿಲ್ಲ. ಅಂತಹ ಮಕ್ಕಳಲ್ಲಿ ಸಂಸ್ಕಾರವನ್ನು ಮೂಡಿಸಲು ಶಾಲೆಗಳಲ್ಲಿ ನಡೆಸುವ ಪ್ರಯತ್ನವೂ ವ್ಯರ್ಥವಾಗುತ್ತದೆ. ಹಾಗಾಗಿ ಪೋಷಕರನ್ನು ಸರಿದಾರಿಗೆ ಪರಿವರ್ತಿಸಿಕೊಳ್ಳುವುದೂ ಮುಖ್ಯವಾಗುತ್ತದೆ. ನಾನು ಅಂತಹ ಪ್ರಯತ್ನ ಮಾಡುತ್ತೇನೆ” ಎನ್ನುತ್ತಾರೆ ಬೆಂಗಳೂರಿನ ಆಚಾರ್ಯ ವೆಂಕಟೇಶ ಮೂರ್ತಿಯವರು. ಅವರು ಬೆಂಗಳೂರಿನಲ್ಲಿ ಆಚಾರ್ಯ ಗುರುಕುಲ ವಿದ್ಯಾಕೇಂದ್ರವನ್ನು ಸ್ಥಾಪಿಸಿ ನಡೆಸಿಕೊಂಡು ಬರುತ್ತಿದ್ದಾರೆ. ಅದಲ್ಲದೆ Zen International Public School  ಹಾಗೂ ಇನ್ನೂ ಎರಡು ಶಾಲೆಗಳ ಸ್ಥಾಪಕರಾಗಿದ್ದಾರೆ. ಇಲ್ಲೆಲ್ಲ ಅವರ Slogan ಏನೆಂದರೆ ಕುಟುಂಬವು “Strong Father, cultured Mother   ಆಗಬೇಕು. ಇದಕ್ಕಾಗಿ “ನಿಮ್ಮಲ್ಲಿ ಕುಡಿಯುವ ಮತ್ತು ಜೂಜಾಡುವ ಚಟಗಳಿದ್ದರೆ ಅದನ್ನು ಬಿಡಬೇಕು. ಹಾಗಿದ್ದರೆ ಮಾತ್ರ ನಿಮ್ಮ ಮಕ್ಕ್ಳಿಗೆ ಇಲ್ಲಿ ಸೀಟು, ಇಲ್ಲವಾದರೆ ಇಲ್ಲಿಗೆ ಬರಲೇ ಬೇಡಿ. ನನಗೆ ಶಾಲೆಯನ್ನು ತುಂಬಿಸುವ ಗುರಿ ಇಲ್ಲ. ಸತ್‍ಪ್ರಜೆಗಳನ್ನು ರೂಪಿಸುವುದಕ್ಕಷ್ಟೇ ನನ್ನ ಶಾಲೆ ಇದೆ. ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ಇಲ್ಲಿ ಸಿಗಬೇಕಿದ್ದರೆ ನೀವು ಮೊದಲು ಸರಿಯಾಗಬೇಕು”. ಇದನ್ನೊಪ್ಪಿದ ಪೋಷಕರು ಅಲ್ಲಿ ಮಕ್ಕಳನ್ನು ಸೇರಿಸುತ್ತಾರೆ.

Advertisement

ಸ್ಟ್ರಾಂಗ್ ಫಾದರ್ ಅಂದ್ರೆ ಶಿಕ್ಷಿಸುವ ತಂದೆ ಅಂತ ಅರ್ಥ ಅಲ್ಲ. ಸ್ವತಃ ಸಂಸ್ಕಾರವಂತನಾಗಿ ನುಡಿದಂತೆ ನಡೆಯುವ ದಕ್ಷತೆ ಇದ್ದವರು ಸ್ವತಃ ಮಕ್ಕಳಿಗೆ ಮಾದರಿಯಾಗುತ್ತಾರೆ. ಅವರ ಮುಂದೆ ಸುಳ್ಳು ಹೇಳಲು, ಆಲಸಿಗಳಾಗಲು ಮತ್ತು ಮೋಸ ಮಾಡಲು ಮಕ್ಕಳು ಕೂಡ ಹೆದರುತ್ತಾರೆ. ಅಂತಹ ವ್ಯಕ್ತಿತ್ವದ ಅಪ್ಪ ತನ್ನ ಮಕ್ಕಳಿಗೆ ಯಾವ ಬುದ್ಧಿವಾದವನ್ನೂ ಹೇಳದೆ ಅವರನ್ನು ಸರಿ ದಾರಿಗೆ ತರಬಹುದು. ಇನ್ನು ತಾಯಿಯೂ ಸುಸಂಸ್ಕೃತಳಾಗಿರಬೇಕು. ನಮ್ಮ ಸಂಸ್ಕೃತಿಯ ಪಾಠ ಕಲಿಸುವ ಹೆಚ್ಚಿನ ಅವಕಾಶ ಇರುವುದೇ ಅಮ್ಮನಿಗೆ. ಆಕೆ ಸ್ವತಃ ನೈತಿಕವಾಗಿದ್ದು ಮಕ್ಕಳಿಗೆ ಹೊಣೆಗಾರಿಕೆಗಳ ಪಾಠವನ್ನು ಸರಿಯಾಗಿ ಹೇಳಿಕೊಡುವ ಜವಾಬ್ದಾರಿ ಹೊಂದಿದ್ದಾಳೆ. ತಂದೆ ತಾಯಿಯ ಬಗ್ಗೆ, ಸೋದರ ಸೋದರಿಯರ ಬಗ್ಗೆ, ಬಂಧುಗಳ ಬಗ್ಗೆ ವ್ಯಕ್ತಿಯು ಹೊಂದಿರಬೇಕಾದ ಬದ್ಧತೆಗಳ ಪಾಠವನ್ನು ಅಮ್ಮನೇ ನೀಡಬೇಕು. ದೊಡ್ಡವರಾದ ಬಳಿಕ ಮದುವೆಯಾಗಿ ಅತ್ತೆ ಮಾವನನ್ನು ತಂದೆ ತಾಯಿಯರಂತೆ ಕಾಣಬೇಕೆಂದು ಮಗಳಿಗೆ ಬುದ್ಧಿ ಹೇಳಬೇಕಾದದ್ದೂ ಅಮ್ಮನೇ. ಹೀಗೆ ಮಕ್ಕಳಿಗೆ ಸುಸಂಸ್ಕೃತ ಅಮ್ಮ ಲಭಿಸಿದರೆ ನಮ್ಮ ಸಮಾಜದಲ್ಲಿ ಅನೇಕ ಬಗೆಯ ಅಸಂತೋಷಗಳನ್ನು ಕಡಿಮೆ ಮಾಡಬಹುದು. ಇದು ತಲೆತಲಾಂತರಗಳಲ್ಲಿ ಸಾಗಿ ಬರಬೇಕಾದ ಸದ್ವರ್ತನೆ ಎಂಬುದು ಆಚಾರ್ಯ ವೆಂಕಟೇಶ ಮೂರ್ತಿಯವರ ಅನಿಸಿಕೆ.
ಇಂಗ್ಲಿಷ್ ಮಾಧ್ಯಮದಲ್ಲಿ ಶಾಲೆಗಳನ್ನು ನಡೆಸುತ್ತಿದ್ದರೂ ವಿದ್ಯಾರ್ಥಿಗಳಲ್ಲಿ ಭಾರತೀಯ ಸಂಸ್ಕಾರವನ್ನು ಮೂಡಿಸುತ್ತಿರುವ ಇವರು ಹೀಗೆ ಹೇಳುವ ಧೈರ್ಯವನ್ನು ತೋರುತ್ತಿದ್ದಾರೆ. ಏಕೆಂದರೆ ಶಾಲೆಗಳ ಸ್ಥಾಪನೆಯ ಹಿಂದೆ ಹಣ ಮಾಡುವ ಚಿಂತನೆ ಅವರಲ್ಲಿ ಇಲ್ಲ. ಮೊದಲೇ ದೊಡ್ಡ ಉದ್ಯಮಿಯಾಗಿರುವ ಅವರಲ್ಲಿ ಹಣ ಸಾಕಷ್ಟಿದೆ. ಹಾಗಾಗಿ ಅವರು ನಿಷ್ಟುರವಾಗಿ ಸಂಸ್ಕಾರದ ಕುರಿತಾಗಿ ಒತ್ತು ನೀಡಬಲ್ಲವರಾಗಿದ್ದಾರೆ. ಹಣಕ್ಕಾಗಿ ಶಾಲೆ ಮಾಡುವ ರಾಜಕಾರಣಿಗಳು ಹಾಗೂ ಅದನ್ನೇ ದಂಧೆ ಮಾಡಿಕೊಂಡವರಿಗಿಂತ ಪ್ರತ್ಯೇಕವಾಗಿ ಇವರು ನಿಲ್ಲುತ್ತಾರೆ.

ಬೆಂಗಳೂರಿನಲ್ಲಿ ಮಾತ್ರವಲ್ಲ ಹಳ್ಳಿ ಹಳ್ಳಿಗಳಲ್ಲೂ ಇಂಗ್ಲಿಷ್ ಮೀಡಿಯಂ ಎಂದರೆ ಅದು ಹಣದ ಸುರಿಮಳೆ, ಹಣವಿಲ್ಲದವರೂ ಹೇಗಾದರೂ ಹೊಂದಿಸಿಕೊಂಡು ಇಂಗ್ಲಿಷ್ ಶಾಲೆಗಳಿಗೆ ಮಕ್ಕಳನ್ನು ಸೇರಿಸುತ್ತಾರೆ. ಹಾಗಾಗಿ ಶಿಕ್ಷಣವು ಇಂದು ಒಂದು ಉದ್ಯಮವಾಗಿದೆ. ಆದರೆ ಈ ಹಣದ ಮಳೆಯಲ್ಲೂ ಸಂಯಮದ ಕೊಡೆ ಹಿಡಿದು ಮಕ್ಕಳ ಪೋಷಕರಲ್ಲಿಯೂ ಸುಧಾರಣೆಯ ಗುಣವನ್ನು ರೂಪಿಸುವ ವೆಂಕಟೇಶಮೂರ್ತಿಯವರು ನಿಜಕ್ಕೂ ಒಬ್ಬ ಆಚಾರ್ಯರು. ಇವರು ತಮ್ಮ ಶಾಲೆಗಳಲ್ಲಿ ನಡೆಸುವ ಕಾರ್ಯಕ್ರಮಗಳಿಗೆ ಪೋಷಕರು ಬಂದು ಭಾಗವಹಿಸುತ್ತಾರೆ. ಮಕ್ಕಳು ತಂದೆ ತಾಯಿಗೆ ಕಾಲು ಮುಟ್ಟಿ ನಮಸ್ಕರಿಸಿಯೇ ಶಾಲೆಗೆ ಬರಬೇಕು ಎಂಬ ಶಿಸ್ತು ಇದೆ. ಮಕ್ಕಳ ಇದೊಂದು ವರ್ತನೆಯೇ ಹೆತ್ತವರಿಗೆ ತಮ್ಮ ಹೊಣೆಯನ್ನು ನೆನಪಿಸಿಕೊಡಬಲ್ಲದು. ಇದಲ್ಲದೆ ಪ್ರತಿ ತರಗತಿಯಲ್ಲಿಯೂ ಬೆಳಗ್ಗಿನ ಆರಂಭವು ದೇವರಿಗೆ ದೀಪ ಉರಿಸುವ ಮೂಲಕ ಆಗುತ್ತದೆ. ಅಂದರೆ ನಮಗಿಂತ ಮೀರಿದ ಶಕ್ತಿಯೊಂದು ಈ ಜಗತ್ತನ್ನು ಆಳುತ್ತಿದೆ ಎಂಬ ಎಚ್ಚರ ಮಕ್ಕಳಲ್ಲಿ ಸ್ಥಿರವಾಗುತ್ತದೆ.

Advertisement

ಸುಳ್ಯದ ನಮ್ಮ ಸ್ನೇಹ ಶಾಲೆಯ ಬಗ್ಗೆ ತಿಳಿದಿದ್ದ ಅವರು ನಿನ್ನೆ (03.03.2025) ಬಂದರು. ನಮ್ಮ ಜಿಲ್ಲೆಯ ದೇವಾಲಯಗಳ ಮತ್ತು ಆಧ್ಯಾತ್ಮಿಕ ವ್ಯಕ್ತಿಗಳ ಭೇಟಿಯ ಪ್ರವಾಸದ ನಡುವೆ ನಮ್ಮ ಶಾಲೆಗೂ ಭೇಟಿ ನೀಡಿದರು. ಇಲ್ಲಿ ಮರ-ಗಿಡಗಳ ಅಚ್ಛಾದನೆಯಲ್ಲಿರುವ ಶಾಲೆಯ ಚಿತ್ರಣವು ಅವರಿಗೆ ನಮ್ಮ ಗುರುಕುಲಗಳ ಪರಂಪರೆಯನ್ನು ನೆನಪಿಸಿತು. ಸಿದ್ಧ ಪಠ್ಯಗಳ ಕಲಿಕೆಯೊಂದಿಗೆ ಶಿಕ್ಷಕರು ಹಾಗೂ ಮಕ್ಕಳು ಬೆಳೆಸಿಕೊಳ್ಳಬೇಕಾದ IQ (Intelligence Quotient), EQ (Emotional Quotient), CA (Creativity Quotient), , ಹಾಗೂ SQ (Social Quotient) ಇವುಗಳ ಬಗ್ಗೆ ಮಾತಾಡಿದರು ಈ ಶಾಲೆಯಲ್ಲಿ ಕಲಿಯುವ ಅವಕಾಶ ಪಡೆದಿರುವುದು ನಿಮ್ಮ ಭಾಗ್ಯವೆಂಬುದಾಗಿ ಮಕ್ಕಳಲ್ಲಿ ಭರವಸೆ ಮೂಡಿಸಿದರು. ಇಲ್ಲಿಯ ಸೂರ್ಯಾಲಯದಲ್ಲಿ ಮಕ್ಕಳಿಗೆ ದೊರಕುತ್ತಿರುವ ಆಧ್ಯಾತ್ಮದ ಸ್ಪರ್ಶದ ಕುರಿತಾಗಿ ಪ್ರಶಂಸೆಯನ್ನು ವ್ಯಕ್ತಪಡಿಸಿದರು.

ಒಬ್ಬ ಶ್ರೀಮಂತ ಉದ್ಯಮಿಯಾಗಿದ್ದು ಸುಮಾರು 5000 ವಿದ್ಯಾರ್ಥಿಗಳಿಗೆ ಸಂಸ್ಕಾರಯುತ ಶಿಕ್ಷಣ ನೀಡುವ ಶಾಲೆಗಳನ್ನು ನಡೆಸುತ್ತಿರುವವರಾಗಿಯೂ ಸರಳತೆ ಮತ್ತು ವಿನಯವುಳ್ಳ ಆಚಾರ್ಯರು ನಮ್ಮ ಪ್ರಕೃತಿಯ ಮಡಿಲಿನಲ್ಲಿರುವ ಸಣ್ಣ ಕನ್ನಡ ಮಾಧ್ಯಮದ ಶಾಲೆಯನ್ನು ಕುತೂಹಲ ಹಾಗೂ ಸಂಶೋಧಕ ದೃಷ್ಟಿಯಿಂದಲೇ ನೋಡಿದರು. ನಮ್ಮ ಶಿಕ್ಷಣ ಸೌಲಭ್ಯಗಳ ಬಗ್ಗೆ ಮೆಚ್ಚುಗೆ ಸೂಚಿಸಿದ್ದಲ್ಲದೆ ಈ ಗ್ರಾಮೀಣ ವಿದ್ಯಾರ್ಥಿಗಳಿಗೆ ಬೆಂಗಳೂರಿನಲ್ಲಿ ನಾಲ್ಕು ದಿನಗಳ ಆತಿಥ್ಯವನ್ನು ನೀಡಿ ಕೈಗಾರಿಕೆಗಳ ಬಗ್ಗೆ ಮಾಹಿತಿ ನೀಡುವುದಾಗಿ ಆಫರ್ ಕೊಟ್ಟರು.

Advertisement

ಮಕ್ಕಳಿಗೆ ಸಂಸ್ಕಾರವನ್ನು ನೀಡುವಲ್ಲಿ ಶಾಲೆಗಳೂ ವಿಫಲಗೊಳ್ಳುತ್ತಿರುವ ಬಗ್ಗೆಯೂ ಆಚಾರ್ಯರಿಗೆ ವಿಷಾದವಿದೆ. ಸರಕಾರಿ ಶಾಲೆಗಳಲ್ಲಿ ಶಿಕ್ಷಣವೇ ಸರಿಯಾಗಿ ನಡೆಯುತ್ತಿಲ್ಲ. ಪರ್ಯಾಯವಾಗಿ ಹುಟ್ಟಿಕೊಂಡಿರುವ ಖಾಸಗಿ ಶಾಲೆಗಳಲ್ಲೂ ಹಿಂದೂ ಮಕ್ಕಳಿಗೆ ಸಂಸ್ಕಾರಗಳ ಶಿಕ್ಷಣ ಸಿಗೋದಿಲ್ಲ. ಕ್ರಿಶ್ಚಿಯನ್ನರು ನಡೆಸುವ ಶಾಲೆಗಳಲ್ಲಿ ಅವರ ಚರ್ಚ್ ಫಾದರ್ ಇಡೀ ಕುಟುಂಬಕ್ಕೆ ಸಂಸ್ಕಾರಗಳ ಮಾರ್ಗದರ್ಶನ ನೀಡುತ್ತಾರೆ. ಹಾಗಾಗಿ ಅವರಿಗೆ ತಮ್ಮ ಧರ್ಮದ ತಳಪಾಯವನ್ನು ಬಲಗೊಳಿಸಲು ಸಾಧ್ಯವಾಗುತ್ತದೆ. ಮುಸ್ಲಿಮರ ಶಾಲೆಗಳಲ್ಲಿ ಮೌಲ್ವಿಗಳು ಆ ಕೆಲಸವನ್ನು ಮಾಡುತ್ತಾರೆ. ಆದರೆ ಹಿಂದೂ ಧರ್ಮೀಯರು ನಡೆಸುವ ಶಾಲೆಗಳಿಗೆ ಯಾರಿದ್ದಾರೆ? ಸೆಕ್ಯುಲರಿಸಂನ ಹೆಸರಲ್ಲಿ ಎಳೆಯ ಪ್ರಾಯದಲ್ಲಿ ಮಕ್ಕಳಿಗೆ ಕಲಿಸಬೇಕಾದ ನೈತಿಕ ನಿಯಮಗಳ ಪ್ರಜ್ಞೆ ನೀಡುವುದನ್ನು ಬಾಕಿ ಮಾಡುತ್ತೇವೆ. ಪ್ರಾಮಾಣಿಕತೆ, ಇನ್ನೊಬ್ಬರ ಸಂಪತ್ತಿಗೆ ಆಸೆ ಪಡೆದಿರುವುದು, ಸ್ವಪ್ರಯತ್ನದ ಮೇಲೆ ವಿಶ್ವಾಸ ಇಟ್ಟುಕೊಳ್ಳುವುದು, ತಂದೆ ತಾಯಿಗಳ ಮೇಲೆ ಗೌರವ ಇಟ್ಟುಕೊಳ್ಳುವುದು, ಬಡವರ ಬಗ್ಗೆ ಕಾಳಜಿ, ಅಸಹಾಯಕರಿಗೆ ನೆರವು ನೀಡುವುದು ಇತ್ಯಾದಿ ಸದ್ಗುಣಗಳನ್ನು ಹೇಳಿ ಕೊಡುವವರಿಲ್ಲ. ಶಿಕ್ಷಣವೆಂದರೆ ಅದು ಹಣ ಕೊಟ್ಟು ಪಡೆಯುವ ವಸ್ತುವಿನಂತೆ ಬಿಕರಿಯಾಗುತ್ತಿದೆ. ಈ ದೃಷ್ಠಿಯಿಂದ ಶಿಕ್ಷಣ ಕ್ಷೇತ್ರದಲ್ಲಿ ಕಂಡು ಬರುವ ಕೊರತೆಗಳನ್ನು ನೀಗಿಸುವ ಅಗತ್ಯವಿದೆ. ಆದರೆ ಶಾಲೆಗಳೆಂದರೆ ಸರ್ಟಿಫೀಕೇಟುಗಳ ವಿತರಣಾ ಕೇಂದ್ರಗಳಂತಾಗಿರುವುದು ದೇಶದ ದುರ್ದೈವ. ಸಮಾಜ, ಧರ್ಮ ಮತ್ತು ರಾಷ್ಟ್ರದ ಚಿಂತನೆಯನ್ನು ಮಕ್ಕಳಲ್ಲಿ ತುಂಬಬೇಕಾಗಿದೆ. ಇಲ್ಲಿ ಗ್ರಾಮೀಣ ವಲಯದಲ್ಲಿರುವ ನಿಮ್ಮ ಸ್ನೇಹ ಶಾಲೆಯೂ ಆ ದೃಷ್ಠಿಯಿಂದ ಮಹತ್ತರವಾದ ಕೆಲಸ ಮಾಡುತ್ತಿದೆ ಎಂಬುದು ಸಮಾಧಾನದ ಸಂಗತಿ ಎಂಬುದು ಆಚಾರ್ಯ ಉವಾಚ.

ಮರ, ಗಿಡ, ಬಳ್ಳಿಗಳಲ್ಲಿ ದೇವರನ್ನು ಕಾಣುತ್ತ ಆಕಾಶ, ಗಾಳಿ, ಬೆಳಕು, ನೀರು ಮತ್ತು ಮಣ್ಣುಗಳನ್ನು ಆರಾಧನೆಯ ಶಕ್ತಿಗಳಾಗಿ ಪರಿಭಾವಿಸುತ್ತ ಮಾತಾಪಿತೃ ಗುರು ಮತ್ತು ಸಮಾಜದ ಋಣಗಳ ಬಗ್ಗೆ ಎಚ್ಚರ ನೀಡುತ್ತ ತನ್ನ ಸ್ವಾಧ್ಯಾಯವನ್ನು ಶ್ರದ್ಧೆ ಭಕ್ತಿಗಳಿಂದ ಮಾಡುವ ಪ್ರೇರಣೆ ನೀಡುವ ಸ್ನೇಹ ಶಾಲೆಯು ನಿಜಾರ್ಥದಲ್ಲಿ ಗುರುಕುಲ ಎಂಬುದಾಗಿ ಅವರು ವ್ಯಾಖ್ಯಾನಿಸಿದಾಗ ನಮ್ಮ ಕೆಲಸ ಸಾರ್ಥಕವೆನ್ನಿಸಿತು.

Advertisement
ಬರಹ :
ಚಂದ್ರಶೇಖರ ದಾಮ್ಲೆ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಡಾ.ಚಂದ್ರಶೇಖರ ದಾಮ್ಲೆ

ಡಾ. ಚಂದ್ರಶೇಖರ ದಾಮ್ಲೆಯವರು ಸುಳ್ಯದ ನೆಹರು ಮೆಮೋರಿಯಲ್ ಕಾಲೇಜ್ ನಲ್ಲಿ ಸಮಾಜಶಾಸ್ತ್ರ ಪ್ರಾಧ್ಯಾಪಕರಾಗಿ 35 ವರ್ಷಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು. ವೃತ್ತಿಯಲ್ಲಿರುವಾಗಲೇ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾಗಿ ಸಮಾಜಸೇವೆಯಲ್ಲಿ ತೊಡಗಿಕೊಂಡವರು. ಸಾಂಸ್ಕೃತಿಕ ಸಂಘದ ಮೂಲಕ ಮಕ್ಕಳಿಗೆ ಯಕ್ಷಗಾನ ನಿರ್ದೇಶಕನ, ಸುಳ್ಯದಲ್ಲಿ ಯಕ್ಷಗಾನ ಹಿತರಕ್ಷಣಾ ವೇದಿಕೆಯ ಸ್ಥಾಪನೆ, ಸಂಪೂರ್ಣ ಸಾಕ್ಷರತಾ ಆಂದೋಲನದಲ್ಲಿ ಸಂಪನ್ಮೂಲ ವ್ಯಕ್ತಿ, ಕನ್ನಡಮಾಧ್ಯಮದಲ್ಲಿ ಸ್ನೇಹ ಶಿಕ್ಷಣ ಸಂಸ್ಥೆಯ ಸ್ಥಾಪನೆ ಮುಂತಾದ ಸಮಾಜಮುಖಿ ಕಾರ್ಯಗಳಲ್ಲಿ ಸೇವೆ ನೀಡಿದವರು. ಶಿಕ್ಷಣದಲ್ಲಿ ಸೃಜನಶೀಲತೆಗೆ ಒತ್ತು ನೀಡುವ ದಾಮ್ಲೆಯವರು ಸಂಶೋಧಕರಾಗಿದ್ದು ಕನ್ನಡ ಇಂಗ್ಲಿಷ್ ಭಾಷೆಗಳಲ್ಲಿ ಕೃತಿ ರಚನೆ ಮಾಡಿದವರು. 'ನೆಲದನಂಟು' ಮತ್ತು "ಶಾಲೆ ಎಲ್ಲಿದೆ?" ಇವು ಇವರ ಪ್ರಸಿದ್ಧ ಕಾದಂಬರಿಗಳು. ಅನೇಕ ಪ್ರಶಸ್ತಿ ಸಮ್ಮಾನಗಳಿಂದ ಗೌರವಿಸಲ್ಪಟ್ಟ ದಾಮ್ಲೆಯವರಿಗೆ ಅಸಾಮಾನ್ಯ ಕನ್ನಡಿಗ ಪ್ರಶಸ್ತಿ, ಯಕ್ಷಮಂಗಳ ಪ್ರಶಸ್ತಿ, ಅರಣ್ಯಮಿತ್ರ ಮತ್ತು ಜಲಮಿತ್ರ ಪ್ರಶಸ್ತಿ, Nation Builder ಪ್ರಶಸ್ತಿ ಮುಂತಾದುವು ಲಭಿಸಿವೆ. ಹೊಸದಿಗಂತ ಪತ್ರಿಕೆಯಲ್ಲಿ "ಇದ್ಯಾಕೆ ಹೀಗೆ " ಅಂಕಣವನ್ನು ಬರೆಯುತ್ತಿದ್ದರು.

ಇದನ್ನೂ ಓದಿ

ಹೊಸರುಚಿ | ಗುಜ್ಜೆ ಕಟ್ಲೇಟ್
March 6, 2025
11:27 AM
by: ದಿವ್ಯ ಮಹೇಶ್
ಕುಂಭಸ್ನಾನ ಮತ್ತು ವಿಜ್ಞಾನ
February 27, 2025
9:25 PM
by: ಡಾ.ಚಂದ್ರಶೇಖರ ದಾಮ್ಲೆ
“ನದಿ ಮತ್ತು ಪರಿಸರ” ಶುದ್ಧತೆ ಉಳಿಸಿಕೊಳ್ಳಬೇಕಾದರೆ ಭಾವನಾತ್ಮಕವಾಗಿ ಅಷ್ಟೇ ಕನೆಕ್ಟ್‌ ಆಗಬೇಕಾದ್ದಲ್ಲ…
February 26, 2025
8:21 AM
by: ಮಹೇಶ್ ಪುಚ್ಚಪ್ಪಾಡಿ
ಸಹಕಾರಿ ಪಾಠ | ಆರ್ಥಿಕ ಶಿಸ್ತು ಹಾಗೂ ಸಣ್ಣ ಸಣ್ಣ ಮೊತ್ತವೂ ಬ್ಯಾಂಕಿಗೆ ಏಕೆ ಬರಬೇಕು…?
February 24, 2025
9:25 PM
by: ರಮೇಶ್‌ ದೇಲಂಪಾಡಿ

You cannot copy content of this page - Copyright -The Rural Mirror