ಪ್ರಕೃತಿಯೊಂದಿಗೆ ಬದುಕುವುದು ಇಷ್ಟವಾದ ಸಂಗತಿ. ಅದೆಷ್ಟೋ ಬಗೆಯ ಪ್ರಾಣಿ, ಪಕ್ಷಿಗಳು ಪರಿಸರದಲ್ಲಿ ಕಾಣಸಿಗುತ್ತವೆ. ಅದರಲ್ಲೂ ಹಕ್ಕಿಗಳು ಎಷ್ಟೋ ಬಗೆಯವು. ಬಣ್ಣ ಬಣ್ಣದ ಹಕ್ಕಿಗಳು ಹಾರಾಡುತ್ತಾ ಸಾಗಿದಾಗ ದಿನವೂ ಹೊಸತು ಹೊಸತು. ಅಂತಹ ಹಕ್ಕಿಗಳ ಛಾಯಾಗ್ರಹಣ ಒಂದು ಹವ್ಯಾಸವಾದರೆ, ಆ ಹಕ್ಕಿಗಳ ಪರಿಚಯ ಇನ್ನೂ ಆಸಕ್ತಿದಾಯಕ. ಈಗ ಅಂತಹದ್ದೊಂದು ಪ್ರಯತ್ನದಲ್ಲಿ ನಾವಿದ್ದೇವೆ.
ಪ್ರಕೃತಿಯ ಹಲವು ಅಚ್ಚರಿಗಳಲ್ಲಿ ಈ ಪಕ್ಷಿ ಪ್ರಪಂಚವೂ ಒಂದು. ಗಮನಿಸಿದಷ್ಟು ಹೊಸ ಹೊಸ ಸಂಗತಿಗಳು . ಪರಿಸರದಲ್ಲಿರುವ ಪ್ರತಿಯೊಂದು ಜೀವಿಗೂ ಅದರದೇ ಮಹತ್ವವಿದೆ. ಪ್ರಕೃತಿಯ ಸಮತೋಲನ ಕಾಪಾಡುವಲ್ಲಿ ಸಣ್ಣ ದೊಡ್ಡ ಪ್ರಾಣಿ , ಪಕ್ಷಿಗಳೆನ್ನದೆ ಎಲ್ಲವೂ ಅನಿವಾರ್ಯ. ಯಾವುದೇ ಒಂದು ಜೀವಿಯ ಅಳಿವು ಅಥವಾ ನಿರ್ನಾಮವಾದರೆ ಪರಿಸರದಲ್ಲಿ ವಿಷಮ ಪರಿಸ್ಥಿತಿ ತಲೆದೋರಬಹುದು. ಆರೋಗ್ಯಯುತ ಪರಿಸರದ ನಿರ್ಮಾಣ ಕಾರ್ಯದಲ್ಲಿ ಪಕ್ಷಿಗಳ ಕೊಡುಗೆ ಅಪಾರ.
ನಮ್ಮ ಪರಿಸರದಲ್ಲಿ ವೈವಿಧ್ಯಮಯ ಪಕ್ಷಿಗಳಿವೆ. ಅವುಗಳ ಹಗುರ ದೇಹ ರಚನೆ, ಬಣ್ಣ, ವಿನ್ಯಾಸ, ಸ್ವರ, ಸಾಮರ್ಥ್ಯ ಎಲ್ಲವೂ ಭಿನ್ನ. ಪ್ರತಿಯೊಂದು ಅದರದೇ ಶೈಲಿಯಲ್ಲಿ ಆಹಾರ ಸಂಗ್ರಹಿಸುತ್ತವೆ. ಗೂಡು ಕಟ್ಟುತ್ತವೆ. ಇವುಗಳ ಜೀವನ ಕ್ರಮವೇ ಅಧ್ಯಯನ ಯೋಗ್ಯವಾದುದು.
ತಾಳ್ಮೆ , ಕಲಿಯುವ ಉತ್ಸಾಹ, ಪಕ್ಷಿಗಳ ಕುರಿತು ಒಂದು ಪುಟ್ಟ ಕುತೂಹಲವಿದ್ದರೆ ಪಕ್ಷಿಗಳು ಆಸಕ್ತಿದಾಯಕ ವಿಷಯ. ಸುಮ್ಮನೆ ಕುಳಿತು ಹಕ್ಕಿಗಳನ್ನು ವೀಕ್ಷಿಸಿದರೂ ಆನಂದವೇ. ಫೋಟೋಗ್ರಫಿಯನ್ನು ಹವ್ಯಾಸವಾಗಿ ರೂಡಿಸಿಕೊಂಡವರು ಹಕ್ಕಿಗಳ ಜೀವನದ ಹೆಚ್ಚಿನ ವಿಷಯಗಳನ್ನು ಆಸಕ್ತಿದಾಯಕವಾಗಿ ಸೆರೆ ಹಿಡಿಯ ಬಲ್ಲರು. ಅವುಗಳ ದಿನನಿತ್ಯದ ಚಟುವಟಿಕೆಗಳನ್ನು ಸೂಕ್ಷ್ಮ ವಾಗಿ ಅಭ್ಯಸಿಸಿ ಹೇಳಬಲ್ಲರು. ಪಕ್ಷಿಗಳ ಸುಂದರ ಪ್ರಪಂಚದತ್ತ ಸ್ವಲ್ಪ ಇಣುಕಿ ನೋಡುವ ಪ್ರಯತ್ನವನ್ನು ಲೇಖಕಿ, ಗೃಹಿಣಿ, ಪರಿಸರ ಆಸಕ್ತಿಯನ್ನು ಹೊಂದಿರುವ ಅಶ್ವಿನಿಮೂರ್ತಿ ಅಯ್ಯನಕಟ್ಟೆ ಅವರು ರೂರಲ್ ಮಿರರ್ ನಲ್ಲಿ ಚಿಲಿಪಿಲಿ ಅಂಕಣದ ಮೂಲಕ ಬರೆಯುತ್ತಿದ್ದಾರೆ.