ಸಂಸದ ತೇಜಸ್ವಿ ಸೂರ್ಯ ಅವರ ಪತ್ನಿ ಗಾಯಕಿ ಶಿವಶ್ರೀ ಸ್ಕಂದಪ್ರಸಾದ್ ಅವರು ರೈಲು ಪ್ರಯಾಣದ ವೇಳೆ ತಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಜೋರಾಗಿ ಮಾತನಾಡುವುದು, ಇತರರ ವೈಯಕ್ತಿಕ ನೆಮ್ಮದಿಗೆ ಧಕ್ಕೆ ತರುವುದು, ಮತ್ತೊಬ್ಬರ ಅಸೌಕರ್ಯವನ್ನು ಪರಿಗಣಿಸದಿರುವುದು ಇವೆಲ್ಲವೂ ಕೇವಲ ಒಂದು ರೈಲು ಪ್ರಯಾಣದ ಸಮಸ್ಯೆಯಲ್ಲ. ನಮ್ಮ ಸಾರ್ವಜನಿಕ ನಡವಳಿಕೆಯ ಬಗ್ಗೆ ಗಂಭೀರವಾಗಿ ಯೋಚಿಸಬೇಕಾದ ಸಂದರ್ಭ. ನಿಜಕ್ಕೂ ಅವರು ಹೇಳಿರುವ ವಿಷಯದಲ್ಲಿ ಸತ್ಯ ಅಡಗಿದೆ. ನಾವು ಯಾವಾಗ ನಮ್ಮ ಸಾರ್ವಜನಿಕ ನಡವಳಿಕೆಯನ್ನು ಸುಧಾರಿಸಿಕೊಳ್ಳುತ್ತೇವೆ?
ಶಿವಶ್ರೀಸ್ಕಂದ ಪ್ರಸಾದ್ ಅಷ್ಟೇ ಅಲ್ಲ, ದೂರ ಪ್ರಯಾಣ ಮಾಡುವ ಯಾರೇ ಆದರೂ ಇಂತಹ ಕೆಲವು ಅನುಭವ ಹೊಂದಿರುತ್ತಾರೆ. ಸ್ವತ: ನಾವೂ ಅನುಭವಿಸಿದ್ದೇವೆ. ಆದರೆ ನಾವೆಲ್ಲಾ ನಮ್ಮಲ್ಲೇ “ಮನಸ್ಸಲ್ಲಿ ಬೈದು” ಸುಮ್ಮನಿರುತ್ತೇವೆ ಅಷ್ಟೇ.
ನಾಗರಿಕ ಪ್ರಜ್ಞೆ ಎಂದರೆ ಕಾನೂನು ಭಯದಿಂದ ನಿಯಮ ಪಾಲಿಸುವುದಲ್ಲ. ಯಾರೂ ನೋಡದಿದ್ದರೂ ಸರಿಯಾದದ್ದನ್ನು ಮಾಡುವ ಮನಸ್ಥಿತಿ. ಅದು ಮನೆಯಲ್ಲೇ ಆರಂಭವಾಗಬೇಕು, ಶಾಲೆಯಲ್ಲಿ ಬೆಳೆಯಬೇಕು, ಪ್ರಯಾಣದಲ್ಲಿ ಕಾಣಬೇಕು ಮತ್ತು ಸಾರ್ವಜನಿಕ ಬದುಕಿನಲ್ಲಿ ವ್ಯಕ್ತವಾಗಬೇಕು.
ನಾವು ರಸ್ತೆಯಲ್ಲಿ ಹೇಗೆ ನಡೆಯುತ್ತೇವೆ, ಸಾರ್ವಜನಿಕ ಸಾರಿಗೆಯಲ್ಲಿ ಹೇಗೆ ವರ್ತಿಸುತ್ತೇವೆ, ಕಸವನ್ನು ಎಲ್ಲಿಗೆ ಹಾಕುತ್ತೇವೆ, ಸರದಿಯಲ್ಲಿ ಹೇಗೆ ನಿಲ್ಲುತ್ತೇವೆ, ಇತರರ ವೈಯಕ್ತಿಕ ಜಾಗವನ್ನು ಎಷ್ಟು ಗೌರವಿಸುತ್ತೇವೆ ಎಂಬ ಸಣ್ಣ ಸಣ್ಣ ಸಂಗತಿಗಳಲ್ಲೇ ನಮ್ಮ ನಾಗರಿಕ ಪ್ರಜ್ಞೆ ಕಾಣಿಸುತ್ತದೆ.
ನಾಗರಿಕ ಪ್ರಜ್ಞೆ ಎಂದರೆ ಸಮಾಜ, ಸಾರ್ವಜನಿಕ ಆಸ್ತಿ, ಸಾರ್ವಜನಿಕ ಸ್ಥಳಗಳು ಹಾಗೂ ಇತರ ನಾಗರಿಕರ ಬಗ್ಗೆ ಹೊಂದಿರುವ ಜವಾಬ್ದಾರಿ ಮತ್ತು ಅರಿವು. ಕಾನೂನು ಪಾಲಿಸುವುದು ಅದರ ಒಂದು ಭಾಗವಾದರೆ, ಇತರರಿಗೆ ತೊಂದರೆಯಾಗದಂತೆ ವರ್ತಿಸುವುದು, ಸಾರ್ವಜನಿಕ ಸಂಪನ್ಮೂಲಗಳನ್ನು ಗೌರವಿಸುವುದು ಮತ್ತು ತಮ್ಮ ಕ್ರಿಯೆಯ ಪರಿಣಾಮವನ್ನು ಅರ್ಥಮಾಡಿಕೊಳ್ಳುವುದು ಅದರ ಮತ್ತೊಂದು ಪ್ರಮುಖ ಭಾಗವಾಗಿದೆ.
ಕಸ ಹಾಕದಿರುವುದರಿಂದ ಹಿಡಿದು ಸರದಿಯಲ್ಲಿ ನಿಲ್ಲುವವರೆಗೆ : ಸಾರ್ವಜನಿಕ ಸ್ಥಳದಲ್ಲಿ ಕಸ ಹಾಕದಿರುವುದು, ಸರದಿಯನ್ನು ಪಾಲಿಸುವುದು, ಸಂಚಾರ ನಿಯಮಗಳನ್ನು ಅನುಸರಿಸುವುದು, ಸಾರ್ವಜನಿಕ ಆಸ್ತಿಯನ್ನು ಹಾನಿಗೊಳಿಸದಿರುವುದು, ಅಗತ್ಯವಿರುವವರಿಗೆ ನೆರವಾಗುವುದು ಇವೆಲ್ಲವೂ ನಾಗರಿಕ ಪ್ರಜ್ಞೆಯ ಸರಳ ಉದಾಹರಣೆಗಳು. ಇವು ದೊಡ್ಡ ಕಾರ್ಯಗಳಲ್ಲ. ಆದರೆ ಇಂತಹ ಸಣ್ಣ ನಡವಳಿಕೆಗಳು ಒಟ್ಟಾಗಿ ಸಮಾಜದ ಶಿಸ್ತು ಮತ್ತು ಗುಣಮಟ್ಟವನ್ನು ನಿರ್ಧರಿಸುತ್ತವೆ.
ಕಾನೂನಿನ ಭಯದಿಂದ ಮಾತ್ರ ಪ್ರಜ್ಞೆ ಬರಬಾರದು : ಪ್ರತಿಯೊಂದು ನಡವಳಿಕೆಯನ್ನು ಕಾನೂನು, ದಂಡ ಅಥವಾ ಪೊಲೀಸರ ನಿಯಂತ್ರಣದಿಂದ ಸರಿಪಡಿಸಲು ಸಾಧ್ಯವಿಲ್ಲ. ರಸ್ತೆ ಬದಿಯಲ್ಲಿ ಕಸ ಹಾಕಬಾರದು ಎಂಬ ಅರಿವಿಗೆ ಪ್ರತಿಯೊಂದು ಸ್ಥಳದಲ್ಲೂ ಪೊಲೀಸ್ ಇರಬೇಕಾಗಿಲ್ಲ, ಪಂಚಾಯತ್ ದಂಡ ವಿಧಿಸಬೇಕಾಗಿಲ್ಲ, ಆಸ್ಪತ್ರೆಯಲ್ಲಿ ಜೋರಾಗಿ ಮಾತನಾಡಬಾರದು ಎಂಬುದನ್ನು ದಂಡದ ಭಯದಿಂದ ಮಾತ್ರ ಕಲಿಯಬೇಕಾಗಿಲ್ಲ.
ಅದು ಮನೆಯಿಂದ, ಶಾಲೆಯಿಂದ, ಸಾಮಾಜಿಕ ಬದುಕಿನಿಂದ ಕಲಿಯುವ ಸಂಸ್ಕಾರ : ಮಕ್ಕಳು ಪೋಷಕರ ನಡವಳಿಕೆಯನ್ನು ನೋಡಿ ಕಲಿಯುತ್ತಾರೆ. ಶಾಲೆಗಳು ಸ್ವಚ್ಛತೆ, ಶಿಸ್ತು, ಸಾಮಾಜಿಕ ಜವಾಬ್ದಾರಿ ಮತ್ತು ಪರಿಸರ ಕಾಳಜಿಯ ಮೂಲಕ ಈ ಗುಣವನ್ನು ಬೆಳೆಸಬಹುದು.
ಸಾರ್ವಜನಿಕ ಸ್ಥಳ ನಮ್ಮ ಮನೆಯ ಮುಂದುವರಿಕೆಯೇ: ಬಸ್, ರೈಲು, ಆಸ್ಪತ್ರೆ, ಮಾರುಕಟ್ಟೆ, ಉದ್ಯಾನ, ರಸ್ತೆ ಇವೆಲ್ಲವೂ ಯಾರೊಬ್ಬರ ವೈಯಕ್ತಿಕ ಜಾಗವಲ್ಲ. ಎಲ್ಲರಿಗೂ ಸೇರಿದ ಜಾಗ. ಆದ್ದರಿಂದ ಸಾರ್ವಜನಿಕ ಸ್ಥಳದಲ್ಲಿ ಜೋರಾಗಿ ಕೂಗುವುದು, ಇತರರಿಗೆ ತೊಂದರೆಯಾಗುವಂತೆ ವರ್ತಿಸುವುದು, ಸರದಿ ತಪ್ಪಿಸುವುದು, ಕಸ ಎಸೆಯುವುದು ಅಥವಾ ಸಾರ್ವಜನಿಕ ಆಸ್ತಿಯನ್ನು ಹಾನಿಗೊಳಿಸುವುದು ಕೇವಲ ನಿಯಮ ಉಲ್ಲಂಘನೆಯಲ್ಲ; ಅದು ಇತರರ ಹಕ್ಕು ಮತ್ತು ನೆಮ್ಮದಿಯ ಮೇಲಿನ ಅತಿಕ್ರಮಣವೂ ಹೌದು.
ಡಿಜಿಟಲ್ ಜಗತ್ತಿಗೂ ನಾಗರಿಕ ಪ್ರಜ್ಞೆ ಬೇಕು : ನಾಗರಿಕ ಪ್ರಜ್ಞೆ ಈಗ ರಸ್ತೆ, ಬಸ್, ರೈಲು ಅಥವಾ ಮಾರುಕಟ್ಟೆಗೆ ಮಾತ್ರ ಸೀಮಿತವಾಗಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿನ ನಮ್ಮ ನಡವಳಿಕೆಯೂ ಅದರ ಭಾಗವಾಗಿದೆ. ನಮ್ಮ ಸ್ಟೇಟಸ್ ಕೂಡಾ ನಮ್ಮ ವ್ಯಕ್ತಿತ್ವದ ಅಭಿವ್ಯಕ್ತಿ. ತಪ್ಪು ಮಾಹಿತಿಯನ್ನು ಪರಿಶೀಲಿಸದೆ ಹಂಚಿಕೊಳ್ಳುವುದು, ಮತ್ತೊಬ್ಬರ ವೈಯಕ್ತಿಕ ಮಾಹಿತಿಯನ್ನು ಗೌರವಿಸದಿರುವುದು, ಅವಹೇಳನಕಾರಿ ಭಾಷೆ ಬಳಸುವುದು, ಭಿನ್ನ ಅಭಿಪ್ರಾಯ ಹೊಂದಿರುವವರನ್ನು ನಿಂದಿಸುವುದು, ಇನ್ನೊಬ್ಬನ ವಾಲ್ ನಲ್ಲಿ ಹೋಗಿ ಜಗಳ ತೆಗೆಯುವುದು.. ಇವೆಲ್ಲವೂ ಡಿಜಿಟಲ್ ನಾಗರಿಕ ಪ್ರಜ್ಞೆಯ ಕೊರತೆಯ ರೂಪಗಳೇ ಆಗಿವೆ.
ಗ್ರಾಮದಲ್ಲೂ ನಾಗರಿಕ ಪ್ರಜ್ಞೆ ಅಷ್ಟೇ ಮುಖ್ಯ : ನಾಗರಿಕ ಪ್ರಜ್ಞೆ ಎಂದರೆ ನಗರ ಜೀವನಕ್ಕೆ ಮಾತ್ರ ಸಂಬಂಧಿಸಿದ್ದಲ್ಲ. ಗ್ರಾಮೀಣ ಪ್ರದೇಶದಲ್ಲೂ ಸಾರ್ವಜನಿಕ ನೀರಿನ ಬಳಕೆ, ಸಾಮೂಹಿಕ ಜಾಗಗಳ ಸಂರಕ್ಷಣೆ, ರಸ್ತೆ ಮತ್ತು ಸಾರ್ವಜನಿಕ ಸೌಲಭ್ಯಗಳ ಕಾಳಜಿ, ಸ್ಥಳೀಯ ಆಡಳಿತದ ಗೌರವ, ಸಮುದಾಯದ ಸಹಕಾರ ಇವೆಲ್ಲವೂ ನಾಗರಿಕ ಪ್ರಜ್ಞೆಯ ಭಾಗವೇ.
ನಾಗರಿಕ ಪ್ರಜ್ಞೆ ಕೊರತೆಯಾದರೆ ಏನಾಗುತ್ತದೆ? : ಅರಿವಿನ ಕೊರತೆ, ದುರ್ಬಲ ನಿಯಮ ಪಾಲನೆ, ತಪ್ಪು ನಡವಳಿಕೆಯನ್ನು ಸಹಜವೆಂದು ಒಪ್ಪಿಕೊಳ್ಳುವುದು, ವೈಯಕ್ತಿಕ ಹಿತವನ್ನು ಸಾರ್ವಜನಿಕ ಹಿತಕ್ಕಿಂತ ಮೇಲಿಡುವುದು ಇವು ನಾಗರಿಕ ಪ್ರಜ್ಞೆ ಕುಸಿಯಲು ಕಾರಣವಾಗಬಹುದು. ಇದರ ಪರಿಣಾಮವಾಗಿ ಸಾರ್ವಜನಿಕ ಅಶಿಸ್ತು, ಪರಿಸರ ಮಾಲಿನ್ಯ, ಸಾರ್ವಜನಿಕ ಆಸ್ತಿಯ ಹಾನಿ, ಸಂಘರ್ಷ ಮತ್ತು ಜೀವನಮಟ್ಟದ ಕುಸಿತ ಉಂಟಾಗಬಹುದು.
ನಾವು ಯಾವಾಗ ಬದಲಾಗುತ್ತೇವೆ? : ನಾಗರಿಕ ಪ್ರಜ್ಞೆ ಬಗ್ಗೆ ಮಾತನಾಡುವಾಗ ನಾವು ಸಾಮಾನ್ಯವಾಗಿ ಸರ್ಕಾರವನ್ನು, ವ್ಯವಸ್ಥೆಯನ್ನು ಅಥವಾ ಇತರರನ್ನು ಪ್ರಶ್ನಿಸುತ್ತೇವೆ. ಆದರೆ ಪ್ರಶ್ನೆ ನಮ್ಮಿಂದಲೇ ಆರಂಭವಾಗಬೇಕು.
ರಸ್ತೆಯಲ್ಲಿ ನಿಯಮ ಪಾಲಿಸುವುದು, ಕಸವನ್ನು ಕಸದ ಬುಟ್ಟಿಗೆ ಹಾಕುವುದು, ಸಾರ್ವಜನಿಕ ಸ್ಥಳದಲ್ಲಿ ಇತರರ ನೆಮ್ಮದಿಯನ್ನು ಗೌರವಿಸುವುದು, ಸರದಿಯಲ್ಲಿ ನಿಲ್ಲುವುದು, ಹಿರಿಯರಿಗೆ ಜಾಗ ನೀಡುವುದು, ಆಂಬುಲೆನ್ಸ್‌ಗೆ ದಾರಿ ಮಾಡಿಕೊಡುವುದು, ಸಾಮಾಜಿಕ ಜಾಲತಾಣದಲ್ಲಿ ಪರಿಶೀಲಿಸದ ಮಾಹಿತಿಯನ್ನು ಹಂಚಿಕೊಳ್ಳದಿರುವುದು .. ಇನ್ನೂ ಇಂತಹ ಹಲವು ಸಂಗತಿಗಳು ನಾಗರಿಕ ಪ್ರಜ್ಞೆಯ ಅಭ್ಯಾಸಗಳು.
ಕಾನೂನು ಸಮಾಜವನ್ನು ನಿಯಂತ್ರಿಸಬಹುದು. ಆದರೆ ಸಂಸ್ಕಾರವೇ ಸಮಾಜವನ್ನು ಸುಧಾರಿಸಬೇಕಾಗುತ್ತದೆ. ಹಾಗೆಂದು ನಾಗರಿಕ ಪ್ರಜ್ಞೆ ಒಂದು ದಿನದಲ್ಲಿ ರೂಪುಗೊಳ್ಳುವುದಿಲ್ಲ. ಅದು ಮನೆಯಲ್ಲಿನ ಒಂದು ಸಣ್ಣ ಅಭ್ಯಾಸದಿಂದ ಆರಂಭವಾಗಿ, ಶಾಲೆಯಲ್ಲಿ ಬಲಗೊಂಡು, ಸಾರ್ವಜನಿಕ ಬದುಕಿನಲ್ಲಿ ವ್ಯಕ್ತವಾಗುತ್ತದೆ. ನಾವು ಮಕ್ಕಳಿಗೆ ಉತ್ತಮ ಅಂಕಗಳನ್ನು ಕಲಿಸುವಷ್ಟೇ, ಉತ್ತಮ ನಾಗರಿಕರಾಗುವುದನ್ನೂ ಕಲಿಸಬೇಕಿದೆ.
ಒಂದು ಸಮಾಜ ಎಷ್ಟು ಅಭಿವೃದ್ಧಿಯಾಗಿದೆ ಎಂಬುದನ್ನು ಅದರ ಕಟ್ಟಡಗಳು, ರಸ್ತೆಗಳು ಮತ್ತು ತಂತ್ರಜ್ಞಾನದಿಂದ ಮಾತ್ರ ಅಳೆಯಲಾಗುವುದಿಲ್ಲ. ಅದರ ಜನರು ಸಾರ್ವಜನಿಕ ಸ್ಥಳದಲ್ಲಿ ಹೇಗೆ ವರ್ತಿಸುತ್ತಾರೆ ಎಂಬುದೂ ಅದರ ಅಭಿವೃದ್ಧಿಯ ಒಂದು ಪ್ರಮುಖ ಅಳತೆ.
ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಫಾಲೋಮಾಡಲು ಇಲ್ಲಿ ಕ್ಲಿಕ್ ಮಾಡಿ
Civic sense is not limited to obeying laws; it is reflected in everyday behaviour and respect for public spaces, public property and fellow citizens. Simple habits such as following queues, obeying traffic rules, avoiding littering, respecting personal space, helping others and protecting the environment collectively shape a disciplined society. Civic responsibility begins at home and is strengthened through education, community participation and responsible public behaviour. In the digital age, it also includes respecting privacy, verifying information and communicating responsibly on social media


