ಅಡಿಕೆ ಮಾರುಕಟ್ಟೆ ಕುಸಿತವಾಗಿದ್ದು ತಕ್ಷಣವೇ ರಾಜ್ಯ ಸರ್ಕಾರ ಮಧ್ಯಪ್ರವೇಶ ಮಾಡಿ ಅಡಿಕೆಗೆ ಬೆಂಬಲ ಬೆಲೆ ಘೋಷಿಸಬೇಕು ಎಂದು ಮಾಜಿ ಶಾಸಕ , ರಾಜ್ಯ ಬಿಜೆಪಿ ಸಹಕಾರಿ ಪ್ರಕೋಷ್ಟಾದ ಸಂಚಾಲಕ ಸಂಜೀವ ಮಠಂದೂರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಕರಾವಳಿ ಜಿಲ್ಲೆಯ ಆರ್ಥಿಕ ಜೀವನಾಡಿಯಾದ ಅಡಿಕೆ ಬೆಳೆಯ ಧಾರಣೆ ಇದೀಗ ಕುಸಿತವಾಗಿದೆ. 500 ಗಡಿ ದಾಟಿದ್ದ ಅಡಿಕೆ ಬೆಲೆ ಇದೀಗ 340 ಕ್ಕೆ ಕುಸಿದಿದೆ,ಅಡಿಕೆಯನ್ನೇ ಜೀವನಾಧಾರವನ್ನಾಗಿ ಮಾಡಿಕೊಂಡ ಕೃಷಿಕನ ಮೇಲೆ ಇದು ದೊಡ್ಡ ಪರಿಣಾಮವನ್ನೇ ಬೀರಿದೆ ಎಂದರು. ಅಡಿಕೆ ಧಾರಣೆಯ ವ್ಯತ್ಯಾಸವು ಜಿಲ್ಲೆಯ ಆರ್ಥಿಕ ವಹಿವಾಟಿನ ಮೇಲೂ ಪರಿಣಾಮ ಬೀರುತ್ತದೆ. ಹೀಗಾಗಿ ತಕ್ಷಣವೇ ರಾಜ್ಯ ಸರ್ಕಾರ ಮಧ್ಯಪ್ರವೇಶ ಮಾಡಿ ಬೆಂಬಲ ಬೆಲೆ ಘೋಷಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇದೇ ವೇಳೆ ಶಿರಸಿಯ ಟಿಎಸ್‌ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಅವರು ಅಡಿಕೆ ದರ ಕುಸಿತಕ್ಕೆ ವಿದೇಶಿ ಅಡಿಕೆ ಆಮದು ಕಾರಣವಾಗಿದ್ದು, ಧಾರಣೆ ಕುಸಿತದ ಆತಂಕ ಬೇಡ ಎಂದು ಹೇಳಿದ್ದಾರೆ. ಅಡಿಕೆ ಆಮದು ತಡೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗುತ್ತಿದೆ. ಶೀಘ್ರದಲ್ಲೇ ಕೇಂದ್ರ ಸರ್ಕಾರದ ಸಚಿವರನ್ನು ಭೇಟಿ ಮಾಡಲಾಗುವುದು. ಈ ಸ್ಥಿತಿಯಲ್ಲಿ ಬೆಳೆಗಾರರು ಯಾವುದೇ ಆತಂಕಕ್ಕೆ ಒಳಗಾಗಬಾರದು ಎಂದು ಅವರು ಹೇಳಿದ್ದಾರೆ.
ರಾಜ್ಯದಲ್ಲಿ ಅಡಿಕೆ ಬೆಳೆಗಾರರು ಈಗ ಸಂಕಷ್ಟ ಪಡುವ ಸಮಯವಾಗುತ್ತಿದೆ ಕಳೆದ 15-20 ದಿನದಲ್ಲಿ ಅಡಿಕೆ ಧಾರಣೆ ಬರೋಬ್ಬರಿ 25-35 ರೂಪಾಯಿ ಕುಸಿತವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 80 – 90 ರೂಪಾಯಿಯಷ್ಟು ಕುಸಿತವಾಗಿದೆ. ಅಡಿಕೆ ಫಸಲೂ ಕಡಿಮೆಯಾಗುತ್ತಿದೆ, ಧಾರಣೆಯೂ ಇಳಿಕೆಯಾಗುತ್ತಿದೆ. ಇದರಿಂದ ಅಡಿಕೆ ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ. ಈಗ ಬರಗಾಲದ ಹೊಡೆತ ದಾವಣಗೆರೆ, ಚಿತ್ರದುರ್ಗ ಸೇರಿದಂತೆ ಅಡಿಕೆ ವಿಸ್ತರಣೆಯ ಪ್ರದೇಶದಲ್ಲಿ ಕಂಡುಬಂದಿದೆ. ಅಡಿಕೆ ಉಳಿಸಿಕೊಳ್ಳುವುದೇ ದೊಡ್ಡ ಸವಾಲಾಗಿದೆ.ಕರಾವಳಿ ಭಾಗದ ಕೃಷಿಕರ ಪ್ರಮುಖ ವಾಣಿಜ್ಯ ಬೆಳೆ ಅಡಿಕೆ. ಕರಾವಳಿ ಜಿಲ್ಲೆಯಲ್ಲಿ ಅಡಿಕೆ ಧಾರಣೆಗೆ ಹೊಡೆತ ಬಿದ್ದರೆ ಆರ್ಥಿಕವಾಗಿಯೂ ಜಿಲ್ಲೆಗೆ ಹೊಡೆತ ಬೀಳುತ್ತದೆ.
ಮೇಘಾಲಯದ ವಿಧಾನಸಭೆಯಲ್ಲೂ ಅಡಿಕೆ ಬೆಳೆಯ ಬಗ್ಗೆ ಚರ್ಚೆಯಾಗಿದೆ. ಅಡಿಕೆ ಬೆಳೆಗಾರರ ಸಂಕಷ್ಟದ ಬಗ್ಗೆ ಸುದೀರ್ಘ ಚರ್ಚೆಯಾಗಿದೆ. ಅಡಿಕೆಗೆ ಕನಿಷ್ಠ ಬೆಂಬಲ ಬೆಲೆಯನ್ನು (MSP) ತರಬಹುದೇ ಎಂಬ ಚರ್ಚೆಯಾಗಿದೆ.ಬಜೆಟ್ ಅಧಿವೇಶನದ ಪ್ರಶ್ನೋತ್ತರ ವೇಳೆಯಲ್ಲಿ ರಿಂಬುಯಿ ಅವರು ಈ ಪ್ರಶ್ನೆ ಎತ್ತಿದ್ದಾರೆ. ಅಡಿಕೆ ಬೆಲೆ ಕಳೆದ ವರ್ಷಕ್ಕಿಂತ ಅರ್ಧದಷ್ಟು ಇಳಿಕೆಯಾಗಿರುವುದರಿಂದ ಮೇಘಾಲಯದ ರಾಜ್ಯದಾದ್ಯಂತ ಅಡಿಕೆ ರೈತರು ಕಂಗಾಲಾಗಿದ್ದಾರೆ ಎಂದು ರಿಂಬುಯಿ ಹೇಳಿದರು.ಇದರಿಂದ ರೈತರ ಆದಾಯಕ್ಕೆ ಭಾರಿ ನಷ್ಟ ಉಂಟಾಗಿದೆ ಎಂದು ತಿಳಿಸಿದರು.2019-20 ನೇ ಸಾಲಿನಲ್ಲಿ ಅಡಿಕೆ ಬೆಳೆಯುವ ಪ್ರದೇಶವು 18,231 ಹೆಕ್ಟೇರ್‌ನಿಂದ ಇತ್ತು, ಈಗ ಅದು 34,410 ಹೆಕ್ಟೇರ್‌ಗೆ ಏರಿಕೆಯಾಗಿದೆ ಎಂದು ಉಲ್ಲೇಖಿಸಿದ್ದಾರೆ.
ಕೃಷಿ ಮತ್ತು ರೈತರ ಕಲ್ಯಾಣ ಸಚಿವ, ಡಾ ಮಜೆಲ್ ಅಂಪಾರೀನ್ ಲಿಂಗ್ಡೋಹ್ ಮಾತನಾಡಿ ರಾಜ್ಯದಲ್ಲಿ ಅಡಿಕೆ ಉತ್ಪಾದನೆಯೆ ಹೆಚ್ಚಾಗಿರುವುದು ನಿಜ, ಕೃಷಿಕರಿಗೆ ಅಗತ್ಯವಾದ ಎಲ್ಲಾ ನೆರವು ನೀಡಲಾಗುತ್ತಿದೆ. ಎಂಎಸ್‌ಪಿಗೆ ಸಂಬಂಧಿಸಿದಂತೆ ಸರ್ಕಾರವು ಪರಿಶೀಲಿಸುತ್ತದೆ ಎಂದು ಭರವಸೆ ನೀಡಿದರು.
ಚರ್ಚೆಯ ಬಳಿಕ ಮಾತನಾಡಿದ ಮೇಘಾಲಯದ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ, ಅಡಿಕೆಯನ್ನು ಸಂಸ್ಕರಿಸಿ ಮಾರಾಟ ಮಾಡಿದರೆ ಹೆಚ್ಚು ದರ ಸಿಗುತ್ತದೆ. ಸಂಸ್ಕರಿಸಿದ ಅಡಿಕೆಯ ಮೌಲ್ಯವು ಹತ್ತು ಪಟ್ಟು ಬೆಲೆಗೆ ಮಾರಾಟವಾಗುತ್ತದೆ .ಇಂದು ಸಂಸ್ಕರಿಸಿದ ಅಡಿಕೆ ಪ್ರತಿ ಕೆಜಿಗೆ 400-500 ರೂ.ಗಳಿಗೆ ಮಾರಾಟವಾಗುತ್ತಿದೆ, ಆದ್ದರಿಂದ ನಾವು ಅಡಿಕೆಯನ್ನು ಸಂಸ್ಕರಿಸುವ ಮುಂದಿನ ಮಾರ್ಗವನ್ನು ತಿಳಿದುಕೊಂಡು ಮೌಲ್ಯವರ್ಧನೆ ಕಡೆಗೂ ಗಮನಹರಿಸಬೇಕು ಎಂದು ಸಂಗ್ಮಾ ಹೇಳಿದರು.
collapsed Arecanut market. There is demand for announcement of Minimum support price.Arecanut market is also an important crop of economic transactions in the coastal district. Therefore, former MLA Sanjeeva Matandoor has urged the Karnataka government to immediately focus on Arecanut market support price.