ಮಕ್ಕಳಲ್ಲಿ ಅರಿವಿನ ಹರಿವಿಗೆ ನಿರಂತರತೆಯನ್ನು ಕೊಡುವುದೇ ಶಿಕ್ಷಣ. ಶಾಲೆಯಲ್ಲಿ ಶಿಕ್ಷಣ ಸರಿಯಾದರೆ ಮಾತ್ರ ಮಕ್ಕಳು ಕಲಿತದ್ದನ್ನು ಹೇಳಬಲ್ಲರು, ಅದನ್ನು ಉಪಯೋಗಕ್ಕೆ ತರಬಲ್ಲರು ಮತ್ತು ಉಪಕಾರಕ್ಕೆ ಬಳಸಬಲ್ಲರು. ಹೀಗಾಗಿ ವ್ಯಕ್ತಿತ್ವದ ವಿಕಸನಕ್ಕೂ ಸಾಮಾಜಿಕ ಸ್ವಾಸ್ಥ್ಯಕ್ಕೂ ಶಿಕ್ಷಣದ ಗುಣಮಟ್ಟವನ್ನು ಉತ್ತಮವಾಗಿಟ್ಟುಕೊಳ್ಳುವುದು ಅವಶ್ಯಕ. ಪ್ರಾಥಮಿಕ ಹಂತದಲ್ಲೇ ಅರಿವಿನ ನೆಲೆಗಳಾದ ಕೇಳಿ ತಿಳಿದುಕೊಳ್ಳುವ, ಅರ್ಥವತ್ತಾಗಿ ಮಾತಾಡುವ ಮತ್ತು ಓದಿ ಅರ್ಥೈಸಿಕೊಳ್ಳುವ ಸಾಮರ್ಥ್ಯಗಳನ್ನು ಬೆಳೆಸಬೇಕು. ಮಕ್ಕಳಲ್ಲಿ ಸೃಜನಶೀಲತೆಗೆ ಚಾಲನೆ ಕೊಡುವ ಇವು ಮೂರು ಸರಿಯಾದರೆ ಮತ್ತೆ ಬರೆಯುವುದು ಎಂಬುದು ಒಂದು ಯಾಂತ್ರಿಕ ಕ್ರಿಯೆ. ಬಳಪದಿಂದ ಆರಂಭಿಸಿ ಕಾಗದದಲ್ಲಿ ಬರೆದು ಕಂಪ್ಯೂಟರ್‍ಗೆ ಬರಹ ಸಾಗುವಷ್ಟರಲ್ಲಿ ಬರೆಯಬೇಕಾದ ಮಾಹಿತಿಯ ಧಾರೆ ಯೋಚನೆಯ ಪಾತಳಿಯಲ್ಲಿ ಹರಿಯುತ್ತಿರಬೇಕು. ಈ ಮಟ್ಟದಲ್ಲಿ ಕಲಿತವರಿಗೆ ತಾವು ವಿದ್ಯಾವಂತರೆಂದು ತೋರಿಸಿಕೊಳ್ಳಲು ಸೂಟು ಬೂಟು ಬೇಕಾಗುವುದಿಲ್ಲ. ಅವರ ಮುಖದ ವರ್ಚಸ್ಸೇ ಅವರ ಅರಿವಿನ ಭಂಡಾರದ ಬೆಳಕನ್ನು ಹೊರ ಸೂಸುತ್ತದೆ.
ನಮ್ಮ ಶಾಲೆಯಲ್ಲಿ ಒಬ್ಬ ಹುಡುಗ ಇದ್ದ. ಎರಡು ವರ್ಷಗಳ ಹಿಂದೆ ಅವನು ಎಸ್.ಎಸ್.ಎಲ್.ಸಿ ಯಲ್ಲಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿ ಪಿ.ಯು.ಸಿ ಗೆ ಸೇರಿದ. ಅಷ್ಟೇ ಆದರೆ ಅದೇನೂ ದೊಡ್ಡ ವಿಷಯವಲ್ಲ. ಆದರೆ ಅವನು ಶಾಲೆಗೆ ಬಂದ ಆರಂಭದ ನಾಲ್ಕು ವರ್ಷಗಳಲ್ಲಿ ಒಮ್ಮೆಯೂ ಚೀಲದಿಂದ ಸ್ಲೇಟು ತೆಗೆದು ಬರೆಯದ ಹುಡುಗ. ನಮ್ಮಲ್ಲಿ ಎಲ್.ಕೆ.ಜಿ ಮತ್ತು ಯು.ಕೆ.ಜಿ ಹಂತದಲ್ಲಿ ಹೇಗೂ ಬರೆಯುವ ಚಟುವಟಿಕೆಗೆ ಪ್ರಾಧಾನ್ಯವಿಲ್ಲ. ಹಾಡು, ನೃತ್ಯ, ಆಟಗಳಿಗೆ ಪ್ರಾಶಸ್ತ್ಯ. ಮೂವತ್ತಕ್ಕಿಂತಲೂ ಹೆಚ್ಚು ಅಭಿನಯ ಗೀತೆಗಳು ಮಕ್ಕಳಿಗೆ ಬಾಯ್ದೆರೆಯಾಗಿ ಗೊತ್ತಿರುತ್ತವೆ. ಹೀಗೆ ಆಲಿಸಿ ಕಲಿಯುವ ಮತ್ತು ಕಲಿಸಿದ್ದನ್ನು ಮಾತಾಡುವ ಶಿಕ್ಷಣವೇ ನಮ್ಮಲ್ಲಿ ನಡೆಯುತ್ತದೆ. ಮರಳಿನ ಮನೆಯ ಆಟವಂತೂ ಅವರಿಗೆ ಆಪ್ಯಾಯಮಾನ. ಅದೇನಿದ್ದರೂ ದಿನಕೊಮ್ಮೆಯಾದರೂ ಸ್ಲೇಟನ್ನು ಚೀಲದಿಂದ ತೆಗೆದು ಚಿತ್ರಗಳನ್ನು ಗೀಚುವ ಚಟುವಟಿಕೆ ಇರುತ್ತದೆ. ಆದರೆ ಈ ಹುಡುಗ ಒಮ್ಮೆಯೂ ಟೀಚರ್ ನೀಡಿದ ಸೂಚನೆಯನ್ನು ಪಾಲಿಸಲಿಲ್ಲ ಮತ್ತು ಒತ್ತಡಕ್ಕೂ ಮಣಿಯಲಿಲ್ಲ. ನನ್ನಲ್ಲಿ ಈ ವಿಷಯ ಬಂದಾಗ “ಅವನನ್ನು ಅವನ ಇಷ್ಟದಂತೆ ಇರಲು ಬಿಡಿ” ಎಂದಿದ್ದೆ. ಮುಂದೆ ನಮ್ಮಲ್ಲಿ ಒಂದನೇ ತರಗತಿಗೆ ಸೇರಿದ ಬಳಿಕವೂ ಇವನ ಸ್ವಭಾವ ಬದಲಾಗಲಿಲ್ಲ. “ಮಕ್ಳೆಲ್ಲಾ ಸ್ಲೇಟು ತೆಗೆಯಿರಿ” ಎಂದು ಟೀಚರ್ ಹೇಳಿದ ತಕ್ಷಣ ಈ ಹುಡುಗ ಚೀಲವನ್ನು ಎದೆಗೆ ಅಮುಕಿ ಹಿಡಿದು ಕುಳಿತು ಬಿಡುತ್ತಿದ್ದ. ಯಾವ ತಂಟೆಯೂ ಇಲ್ಲದೆ ಪಾಠಗಳನ್ನು ಕೇಳುತ್ತಿದ್ದ. ಎಷ್ಟು ಮಾತ್ರಕ್ಕೂ ಬರೆಯಲು ಒಪ್ಪದೇ ಇದ್ದ ಅವನ ಪ್ರಗತಿಯನ್ನು ತೋರಿಸುವ ಚಿಂತೆ ಶಿಕ್ಷಕಿಯನ್ನು ಕಾಡಿತ್ತು. ಆಗಾಗ ಈ ವಿಚಾರವನ್ನು ನನ್ನ ಗಮನಕ್ಕೆ ತರುತ್ತಿದ್ದ ಅವರಿಗೆ ನನ್ನ ಸಲಹೆ “ಒತ್ತಾಯಿಸುವುದು ಬೇಡ” ಎಂದಷ್ಟೇ ಆಗಿತ್ತು. ಹೀಗೆ ಎರಡನೇ ತರಗತಿಯ ಕೊನೆಯ ತನಕವು ನಾವು ಸಹಿಸುತ್ತಲೇ ಬಂದೆವು. ವಿಚಿತ್ರವೆಂದರೆ ಮತ್ತೆ ಮೂರನೇ ತರಗತಿಯಿಂದ ಆ ಹುಡುಗ ಒಮ್ಮೊಂದೊಮ್ಮೆಲೇ ಬರೆಯಲಾರಂಭಿಸಿದ. ಅವನಿಗೆ ಎಲ್ಲ ಅಕ್ಷರಗಳೂ ಶಬ್ದಗಳೂ ಗೊತ್ತಿದ್ದುವು. ಅವನು ತನ್ನ ಹಿಂದಿನ ತರಗತಿಗಳಲ್ಲಿದ್ದ ಸಹಪಾಠಿಗಳಿಗೆ ಸರಿಸಮಾನವಾಗಿ ಬರೆಯತೊಡಗಿದ. ಪರೀಕ್ಷೆಗಳಲ್ಲೂ ಅಂಕ ಗಳಿಸಿದ. ಆಲಿಸಿಯೇ ಕಲಿಯಲು ಸಾಧ್ಯವೆನ್ನುವುದಕ್ಕೆ ಅವನೊಬ್ಬ ಉದಾಹರಣೆಯಾದ.
ಪದವಿ ಕಾಲೇಜಿನಲ್ಲಿ ಒಬ್ಬ ವಿದ್ಯಾರ್ಥಿನಿ ನನಗೆ ಅಚ್ಚರಿ ಮೂಡಿಸಿದ್ದಳು. ಮೊದಲ ಬೆಂಚ್‍ನಲ್ಲೇ ಕುಳಿತುಕೊಳ್ಳುತ್ತಿದ್ದ ಆಕೆ ಸರಿಯಾಗಿ ಪಾಠ ಕೇಳಿ ಪ್ರಶ್ನೋತ್ತರಗಳಲ್ಲಿ ಭಾಗಿಯಾಗುತ್ತಿದ್ದ ಜಾಣೆಯಾಗಿದ್ದಳು. ಆದರೆ ಪರೀಕ್ಷೆಯ ಉತ್ತರ ಪತ್ರಿಕೆಯಲ್ಲಿ ಅಪೂರ್ಣ ಉತ್ತರಗಳಷ್ಟೇ ಅಲ್ಲ. ಬರೆದ ಶಬ್ದಗಳಲ್ಲಿ ತುಂಬಾ ಸ್ಲೆಲ್ಲಿಂಗ್ ತಪ್ಪು ಮಾಡಿ ಕಡಿಮೆ ಅಂಕಗಳನ್ನು ಪಡೆಯುತ್ತಿದ್ದಳು. “ಏಕೆ ಹೀಗೆ ಮಾಡ್ತೀಯಾ?” ಎಂದರೆ “ನಾನು ಸರಿಯಾಗಿಯೇ ಬರೀತೇನೆ ಸಾರ್. ಯಾಕೆ ತಪ್ಪಾಗ್ತದೋ ನನಗೂ ಗೊತ್ತಿಲ್ಲ” ಎಂದಳು. ಪರೀಕ್ಷಾ ಕೊಠಡಿಯಲ್ಲಿ ಸಮಯಕ್ಕೆ ಮೊದಲೇ ಉತ್ತರ ಪತ್ರಿಕೆಯನ್ನು ಹಿಂದಿರುಗಿಸಿ ಆತ್ಮವಿಶ್ವಾಸದಿಂದ ಹೊರಗೆ ಬರುತ್ತಿದ್ದ ಆಕೆ ತನಗೆ ಸಿಕ್ಕಿದ ಅಂಕಗಳನ್ನು ಕಂಡು ಮಂಕಾಗುತ್ತಿದ್ದಳು. ಹೀಗೆ ಪಬ್ಲಿಕ್ ಪರೀಕ್ಷೆಯಲ್ಲೂ ಉತ್ತರಗಳನ್ನು ಬರೆದರೆ ಆಕೆಗೆ ಸಿಗಬೇಕಾದ ಅರ್ಹತೆಯ ಅಂಕಗಳು ಸಿಗುವಂತಿರಲಿಲ್ಲ. ಆ ಬಗ್ಗೆ ವಿಶ್ಲೇಷಣೆ ಮಾಡಿದಾಗ ಸಮಸ್ಯೆ ತಿಳಿಯಿತು. ಆಕೆಯ ಮೆದುಳಿನ ವೇಗಕ್ಕೂ ಕೈಯ ವೇಗಕ್ಕೂ ಹೊಂದಾಣಿಕೆ ಇರಲಿಲ್ಲ. ಆಕೆ ಯೋಚಿಸಿದಷ್ಟು ವೇಗದಲ್ಲಿ ಬರೆಯಲಾಗುತ್ತಿರಲಿಲ್ಲ. ಹಾಗಾಗಿ ಶಬ್ದಗಳು ಮತ್ತು ಶಬ್ದಗಳ ನಡುವೆ ಅಕ್ಷರಗಳು ಬಿಟ್ಟುಹೋಗುತ್ತಿದ್ದವು. ಹಾಗೂ ಪದಗಳಲ್ಲಿ ಅಕ್ಷರಗಳು ಬಾಕಿಯಾಗುತ್ತಿದ್ದುವು. ಈ ಸಮಸ್ಯೆಯನ್ನು ಆಕೆಗೆ ವಿವರಿಸಿದೆ. ಉತ್ತರಗಳನ್ನು ಬರೆಯುವಾಗ ಪ್ರತ್ಯೇಕವಾಗಿ ಎಚ್ಚರವಹಿಸುವಂತೆ ಹೇಳಿದೆ. ಅದಕ್ಕಾಗಿ ಆಕೆ ದಿನಾಲೂ ಬರೆದು ಅಭ್ಯಾಸ ಮಾಡಬೇಕಾಗಿತ್ತು. ಈ ಪ್ರಯತ್ನ ಫಲಕಾರಿಯಾಗಿ ಆಕೆ ಅರ್ಥಪೂರ್ಣವಾಗಿ ಬರೆಯತೊಡಗಿದಳು.
ಮೇಲಿನ ಎರಡೂ ಘಟನೆಗಳಲ್ಲಿ ವಿಧ್ಯಾರ್ಥಿಯ ಆಲಿಸುವಿಕೆಯು ಅರಿವನ್ನು ಗಟ್ಟಿಗೊಳಿಸುವಲ್ಲಿ ಸಹಕಾರಿಯಾಗಿತ್ತು. ಅಂದರೆ ಶಿಕ್ಷಣವು ಗಟ್ಟಿಗೊಳ್ಳುವುದು ಮಕ್ಕಳಿಗೆ ಪಾಠವನ್ನು ಕೇಳಿಸುವ ಮೂಲಕ.
ಶಿಕ್ಷಣದಲ್ಲಿ ಸಂಭಾಷಣೆ ಬಹಳ ಮುಖ್ಯವಾದುದು. ತಾಯಿ ಮಗುವಿನಲ್ಲಿ ಸಂಭಾಷಣೆ ಮಾಡುವುದರಿಂದಾಗಿಯೇ ಮೊದಲ ಗುರು ಎನ್ನಿಸುವುದು. ಶಾಲೆಯಲ್ಲಿ ಗುರುಗಳು ಮಕ್ಕಳೊಂದಿಗೆ ಸಂಭಾಷಣೆ ನಡೆಸಬೇಕು. ಆಗ ಅಲ್ಲಿ ಆಲಿಸುವಿಕೆಯೂ ಇರುತ್ತದೆ. ಮಾತಾಡುವಿಕೆಯೂ ಜರಗುತ್ತದೆ. ಈ ಪ್ರಕ್ರಿಯೆಯಲ್ಲಿ ಮಗುವಿನ ಮಾತು ಮತ್ತು ಆಲೋಚನೆಗಳು ತಿದ್ದಲ್ಪಡುತ್ತವೆ. ಇದು ಆಗಬೇಕಿದ್ದರೆ ಒಂದನೆಯಿಂದಲೇ ತರಗತಿಗೊಬ್ಬರು ಶಿಕ್ಷಕರು ಇರಬೇಕು. ಅವರೇ ಮಾತಾಡಿದನ್ನು ಓದಿಸುವ ಚಾರ್ಟ್‍ಗಳನ್ನು ತಯಾರಿಸಬೇಕು. ಇವು ಶಿಕ್ಷಕರಿಂದ ಶಿಕ್ಷಕರಿಗೆ ಮತ್ತು ಶಾಲೆಯಿಂದ ಶಾಲೆಗೆ ಭಿನ್ನವಾಗಬಹುದು. ಶಾಲೆಯ ಪರಿಸರ, ಊರಿನ ಭಾಷೆ ಮತ್ತು ಸಾಂಸ್ಕೃತಿಕ ಆವರಣಗಳ ಭಿನ್ನತೆಯು ಈ ಚಾರ್ಟ್‍ಗಳ ವೈವಿಧ್ಯತೆಯಲ್ಲಿ ಕಾಣಬಹುದು. ಶಿಕ್ಷಕರ ಸೃಜನಶೀಲತೆ ಇರುವುದೇ ಇಲ್ಲಿ. ಅವರು ಸೃಜನಶೀಲರಾದರೆ, ಮಕ್ಕಳು ಸಹಜವಾಗಿಯೇ ಸೃಜನಶೀಲರಾಗುತ್ತಾರೆ. ಆದರೆ ಒಂದನೆಯಿಂದಲೇ ಪಾಠ ಪುಸ್ತಕ ಅಂತ ಇರುವುದರಿಂದಾಗಿ ಶಿಕ್ಷಕರಲ್ಲಿ ಸೃಜನಶೀಲತೆ ಅಗತ್ಯವಿಲ್ಲವಾಗಿದೆ.
ಸರ್ಕಾರಿ ಶಾಲೆಗಳಲ್ಲಿ ‘ನಲಿ-ಕಲಿ’ ಪದ್ಧತಿಯನ್ನು ಅಳವಡಿಸಿ ಮಕ್ಕಳಿಗೆ ಕಲಿಕೆಯ ಮುಕ್ತ ವಾತಾವರಣ ಲಭ್ಯವಾಗಿದೆ. ಆದರೆ ಅದರ ನಿಜವಾದ ಅನ್ವೇಷಣೆ ಆಗಬೇಕಿದ್ದರೆ ತರಗತಿಗೊಬ್ಬರು ಶಿಕ್ಷಕರಿರಬೇಕು. ಈಗ ಪರಿಸ್ಥಿತಿ ಹೇಗಿದೆ ಎಂದರೆ ಒಂದನೇಯಿಂದ ಮೂರನೆ ತನಕ “ನಲಿಕಲಿ” ತರಗತಿಗಳನ್ನು ಒಬ್ಬರೇ ಶಿಕ್ಷಕರು ನಿರ್ವಹಿಸಬೇಕಾಗಿದೆ. ಆ ಮಕ್ಕಳಿಗೆ ಮೂರು ವರ್ಷಗಳಲ್ಲಿ ಇಡೀ ದಿನಗಳಲ್ಲಿ ಕಲಿಸುವವರು ಒಬ್ಬರೇ ಎಂತಾದರೆ ಅಲ್ಲಿ ಪ್ರೇರಣಾದಾಯಕ ಕಲಿಕೆ ಹೇಗೆ ಸಾಧ್ಯ? ಈ ಸಮಸ್ಯೆಯನ್ನು ಶಿಕ್ಷಣ ಇಲಾಖೆ ಪರಿಗಣಿಸುತ್ತಿಲ್ಲ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಆಗಲು ಇದೂ ಒಂದು ಕಾರಣವೆಂದು ಅದು ತಿಳಿಯುತ್ತಿಲ್ಲ. ಮಕ್ಕಳಿಗೆ ಸರಿಯಾಗಿ ಓದಲು ಕಲಿಸಿ ಓದಿದ್ದನ್ನು ಬರೆಯಲು ಕಲಿಸುವುದು ಮುಂದಿನ ಪ್ರಕ್ರಿಯೆ. ಹಾಗಾಗಿ ಬರೆಯುವುದು ಕೊನೆಗೆ ಬರುತ್ತದೆ. ಪುಸ್ತಕದಿಂದ ಓದಿ ಕಾಪಿ ಬರೆಯುವುದನ್ನು ನಿಲ್ಲಿಸಿ ತಿಳಿದಿದ್ದನ್ನು ಬರೆಯುವ ಸಾಮರ್ಥ್ಯವನ್ನು ಮಕ್ಕಳು ಪಡೆಯಬೇಕು. ಈ ಬರವಣಿಗೆಯಲ್ಲಿ ಮಕ್ಕಳ ಕಲಿಕೆಯ ನಿಜವಾದ ಪರೀಕ್ಷೆ ಜರಗುತ್ತದೆ.
Communication plays a vital role in education. It is through dialogue that we are able to exchange ideas, share knowledge, and inspire one another. It is essential for educators to engage in meaningful conversations with their students, as it not only fosters a deeper understanding of the subject matter but also creates a sense of community and collaboration in the learning process. Dialogue is the key to unlocking the potential of every individual and creating a positive and enriching educational environment.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement