ಅಡಿಕೆಗೆ ಹೊಸ ಬಗೆಯ ಕೀಟವೊಂದು ಕಾಟ ಕೊಡುತ್ತಿರುವ ಬಗ್ಗೆ ಸಿಪಿಸಿಐಆರ್ ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಇದರಿಂದ ಅಡಿಕೆ ಗುಣಮಟ್ಟ ಕಡಿಮೆಯಾಗುವುದು ಕಂಡುಬರುತ್ತದೆ. ಸಣ್ಣ ಜೀರುಂಡೆಯಾದ ಕ್ಸಿಲೋಸಾಂಡ್ರಸ್ ಕ್ರಾಸಿಯಸ್ಕುಲಸ್ ಎಂಬ ಜೀರುಂಡೆ ಮಾದರಿಯ ಕೀಟ ದಾಳಿಯನ್ನು ಮಾಡುತ್ತಿರುವುದು ಪತ್ತೆಯಾಗಿದೆ.ಪ್ರಸ್ತುತ ಇದು ತುಂಬಾ ಗಂಭೀರವಾದ ಸಂಗತಿಯಾಗಿಲ್ಲ. ಆದರೆ ಅಡಿಕೆ ಮಾರುಕಟ್ಟೆ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಭವಿಷ್ಯದಲ್ಲಿ ವಾತಾವರಣದ ಕಾರಣದಿಂದ ಗಂಭೀರ ಸಮಸ್ಯೆಯಾಗುವ ಆತಂಕ ಇದೆ.
ಅಡಿಕೆಗೆ ಸಾಮಾನ್ಯವಾಗಿ ರಸ ಹೀರುವ ಕೀಟಗಳ ಕಾಟ ಇರುತ್ತದೆ. ಈಗಾಗಲೇ ಹಲವು ಕಡೆಗಳಲ್ಲಿ ಪೆಂಟಾಟೊಮಿಡ್ ಬಗ್ ಮತ್ತು ಪೆರಿಯಾಂತ್ ಮೈಟ್ ಎಳೆ ಅಡಿಕೆಯನ್ನು ಮುತ್ತಿಕ್ಕುವ ಪ್ರಮುಖ ಕೀಟಗಳಾಗಿವೆ. ಮಲೆನಾಡು ಹಾಗೂ ಬಯಲು ಸೀಮೆಯ ಹಲವು ಕಡೆಗಳಲ್ಲಿ ಈಗಾಗಲೇ ಈ ಕೀಟಗಳು ಕಂಡುಬರುತ್ತವೆ. ಇದರಿಂದ ಎಳೆ ಅಡಿಕೆ ಬೀಳುವುದು ಕಂಡುಬಂದಿದೆ. ಇದೀಗ ವಿಟ್ಲದ ಸಿಪಿಸಿಆರ್‌ಐ ಪ್ರಾದೇಶಿಕ ಕೇಂದ್ರದ ವಿಜ್ಞಾನಿಗಳ ತಂಡವು ಅಡಿಕೆ ಬೆಳೆಗಾರರ ತೋಟದಲ್ಲಿ ಅಡಿಕೆಗೆ ಬಾಧಿಸುವ ಹೊಸ ಕೀಟವನ್ನು ಗುರುತಿಸಿದ್ದಾರೆ.
ಈಚೆಗೆ ಕೃಷಿಕರ ತೋಟಗಳಿಗೆ ಭೇಟಿ ನೀಡುವ ಸಂದರ್ಭ ಸುಳ್ಯ ತಾಲೂಕಿನ ಮರ್ಕಂಜ ಗ್ರಾಮ ಮತ್ತು ಕಡಬ ತಾಲೂಕಿನ ಕಾಣಿಯೂರು ಗ್ರಾಮದಲ್ಲಿ ಎಳೆ ಅಡಿಕೆ ಬೀಳುತ್ತಿರುವ ಬಗ್ಗೆ ಅಧ್ಯಯನ ನಡೆಸಲು ವಿಜ್ಞಾನಿಗಳ ತಂಡವು ಭೇಟಿ ನೀಡಿತ್ತು. ಈ ಸಂದರ್ಭದಲ್ಲಿ ಈ ಹೊಸ ಬಗೆಯ ಕೀಟ ಇರುವುದು ಬೆಳಕಿಗೆ ಬಂದಿದೆ. ಸುಮಾರು 2.5-2.8 ಮಿಮೀ ಅಳತೆಯ ಜೀರುಂಡೆಯಾಕಾರದ ಕೀಟ ಕ್ಸಿಲೋಸಾಂಡ್ರಸ್ ಕ್ರಾಸಿಯಸ್ಕುಲಸ್ ಇರುವುದು ದೃಢಪಟ್ಟಿದೆ. ಈ ಕೀಟದ ವಯಸ್ಕ ಹೆಣ್ಣು ಜೀರುಂಡೆ 1.06-2.39 ಮಿಮೀ ಅಗಲದಲ್ಲಿ ಅಡಿಕೆಯನ್ನು ತೂತು ಮಾಡಿ ಒಳಗೆ ಪ್ರವೇಶಿಸುತ್ತದೆ. ಇದು ಅಡಿಕೆಯ ಒಳಗೆ ಪ್ರವೇಶ ಮಾಡುತ್ತಿರುವಂತೆಯೇ ಶಿಲೀಂದ್ರ ಕೂಡಾ ಜೊತೆಗೇ ಅಡಿಕೆಗೆ ಸೇರುತ್ತದೆ. ಅಡಿಕೆಯ ಒಳಗೆ ಈ ಕೀಟವು ಸಂತಾನೋತ್ಪತ್ತಿ ಮಾಡುತ್ತದೆ. ಕೀಟದ ಜೊತೆಗೆ ಒಳಹೋಗುವ ಶಿಲೀಂದ್ರ ಈ ಜೀರುಂಡೆಯ ಆಹಾರವೂ ಆಗಿರುತ್ತದೆ. ಇದರಿಂದ ಅಡಿಕೆಯ ಗುಣಮಟ್ಟ ಕಡಿಮೆಯಾಗುತ್ತದೆ. ಕೀಟದಿಂದ ಮಾಡಿದ ರಂಧ್ರ ಮತ್ತು ಕೊರೆತ ರಂಧ್ರದಿಂದ ಹೊರಬರುವ ಪುಡಿಯಿಂದ ಅಂದರೆ ಹಿಕ್ಕೆಯಿಂದ ಅಡಿಕೆ ಮೇಲೆ ಕೀಟ ಮಾಡಿರುವ ಧಾಳಿಯನ್ನು ತಿಳಿಯಬಹುದಾಗಿದೆ.
ಈಗ ಪತ್ತೆಯಾದ ಕ್ಸೈಲೋಸಾಂಡ್ರಸ್ ಕ್ರಾಸಿಯಸ್ಕುಲಸ್ ಕೀಟವು ಆಂಬ್ರೋಸಿಯೆಲ್ಲಾ ರೋಪೆರಿ ಎಂಬ ಶಿಲೀಂಧ್ರಗಳ ಸಹಜೀವನವೂ ಇಲ್ಲಿ ಪ್ರಮುಖವಾಗಿ ಕಂಡುಬಂದಿದೆ. ವಿಜ್ಞಾನಿಗಳು ಈ ಬಗ್ಗೆಯೂ ಗಮನಹರಿಸಿದಾಗ ಕುತೂಹಲಕಾರಿಯಾದ ಅಂಶವು ಬೆಳೆಕಿಗೆ ಬಂದಿದೆ. ಈ ಶಿಲೀಂಧ್ರವು ಕೀಟದ ಲಾರ್ವಾಗಳು ಮತ್ತು ಕೀಟಗಳಿಗೆ ಪೌಷ್ಟಿಕಾಂಶದ ಆಹಾರದ ಮೂಲವಾಗಿ ಕಾರ್ಯನಿರ್ವಹಿಸುತ್ತದೆ. ಶಿಲೀಂಧ್ರವು ಅಡಿಕೆಯ ಒಳಗೆ ಕಪ್ಪು ಕಲೆಗಳನ್ನು ಉಂಟುಮಾಡುತ್ತದೆ ಮತ್ತು ಬೂದು ಮಿಶ್ರಿತ ಶಿಲೀಂಧ್ರಗಳ ಸಮೃದ್ಧ ಬೆಳವಣಿಗೆಗೆ ಕಾರಣವಾಗುತ್ತದೆ. ಇದು ಅಡಿಕೆಯ ತೂಕವನ್ನು ಕಡಿಮೆ ಮಾಡುತ್ತದೆ ಮತ್ತು ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ.
ದಕ್ಷಿಣ ಕನ್ನಡ ಹಾಗೂ ಅಡಿಕೆಯ ಪ್ರದೇಶದಲ್ಲಿ ಸದ್ಯ ಕ್ಸೈಲೋಸಾಂಡ್ರಸ್ ಕ್ರಾಸಿಯಸ್ಕುಲಸ್‌ನ ಮೊದಲ ವರದಿಯಾಗಿದೆ. ಹೀಗಾಗಿ ಈ ಕೀಟದ ಬಗ್ಗೆ ವಿಟ್ಲದ ಸಿಪಿಸಿಐಆರ್ ನ ಯುವ ವಿಜ್ಞಾನಿಗಳಾದ ಡಾ. ಶಿವಾಜಿ ತುಬೆ ನೇತೃತ್ವದ ತಂಡವು ವರದಿ ಮಾಡಿದೆ. ಡಾ.ತವಪ್ರಕಾಶ ಪಾಂಡಿಯನ್ ಮತ್ತು ಡಾ.ಭವಿಷ್ಯ ಇದರ ಸದಸ್ಯರಾಗಿದ್ದರು. ಈ ವರದಿಯನ್ನು ಅಂತರಾಷ್ಟ್ರೀಯ ಜರ್ನಲ್ ಇನ್ಸೆಕ್ಟ್ಸ್ ನಲ್ಲಿ ಪ್ರಕಟಿಸಲಾಗಿದೆ.
ನಮ್ಮ ವಿಜ್ಞಾನಿಗಳು ಅಡಿಕೆಯನ್ನು ಮುತ್ತಿಕೊಂಡಿರುವ ಅಡಿಕೆಯ ಹೊಸಕೀಟವನ್ನು ಗುರುತಿಸಿದ್ದಾರೆ ಮತ್ತು ವರದಿ ಮಾಡಿದ್ದಾರೆ. ಇದಲ್ಲದೆ, ಪರಿಸರ ಸ್ನೇಹಿ ಕಾರ್ಯತಂತ್ರಗಳನ್ನು ಬಳಸಿಕೊಂಡು ಅದರ ನಿರ್ವಹಣೆಯನ್ನು ಅಧ್ಯಯನ ಮಾಡಲಾಗುತ್ತದೆ ಎಂದು ಸಿಪಿಸಿಐಆರ್ ನಿರ್ದೇಶಕಿ ಡಾ. ಅನಿತಾ ಕರುಣ್ ತಿಳಿಸಿದ್ದಾರೆ.
ಇದೊಂದು ಆಸಕ್ತಿದಾಯಕ ಆವಿಷ್ಕಾರವಾಗಿದೆ. ಪ್ರಸ್ತುತ ಇದು ತುಂಬಾ ಗಂಭೀರವಾಗಿಲ್ಲ. ಆದರೆ ಅಡಿಕೆ ಮಾರುಕಟ್ಟೆ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಇದು ಅಡಿಕೆ ಬೆಳೆಗಾರರ ಕಾಳಜಿಯ ವಿಷಯವಾಗಿದೆ. ಅದರ ನಿರ್ವಹಣೆಗಾಗಿ ಕ್ರಮಗಳ ಬಗ್ಗೆ ಅಭಿವೃದ್ಧಿಪಡಿಸುತ್ತಿದ್ದೇವೆ ಎಂದು ವಿಜ್ಞಾನಿ ಡಾ.ಶಿವಾಜಿ ತುಬೆ ಹೇಳಿದ್ದಾರೆ.
ನಾವು ಈ ಕೀಟಗಳನ್ನು ಹೆಚ್ಚಾಗಿ ಯುವ ಉದ್ಯಾನಗಳಲ್ಲಿನ ಸಸ್ಯಗಳಲ್ಲಿ ಗಮನಿಸಿದ್ದೇವೆ. ಇಳುವರಿಯನ್ನು ಉಳಿಸಿಕೊಳ್ಳಲು ಮತ್ತು ಕೀಟ ಮತ್ತು ರೋಗಗಳಿಂದ ಬೆಳೆಯನ್ನು ಸಂರಕ್ಷಿಸಲು ಸಮತೋಲಿತ ಪೋಷಣೆ ಬಹಳ ಮುಖ್ಯ ಎಂದು ವಿಜ್ಞಾನಿ ಡಾ. ಭವಿಷ್ಯ ಮಾಹಿತಿ ನೀಡಿದ್ದಾರೆ.
ಕಳೆದ ಒಂದು ವಾರದಲ್ಲಿ ಚಾರ್ಮಾಡಿ ಘಾಟ್ನಲ್ಲಿ ಉಂಟಾದ ಎರಡನೇ ಕಾಡ್ಗಿಚ್ಚು ಪ್ರಕರಣ ಇದಾಗಿದೆ.…
ಅಡಿಕೆ ಆಮದು ವ್ಯವಹಾರದಲ್ಲಿ ತಪ್ಪು ಮಾಹಿತಿ ನೀಡಿ ವಿದೇಶದಿಂದ ಕಳ್ಳಸಾಗಾಣಿಕೆ ಮಾಡುತ್ತಿದ್ದ ಪ್ರಕರಣದಲ್ಲಿ ತೂತುಕುಡಿಯ…
ಸಾರಡ್ಕದ ಆರಾಧನಾ ಕಲಾಭವನದಲ್ಲಿ ಜ.26 ರಂದು ಕೃಷಿ ಹಬ್ಬ ನಡೆಯಲಿದೆ.ಬೆಳಗ್ಗೆ ಉದ್ಘಾಟನೆಗೊಳ್ಳುವ ಕೃಷಿ…
ಆಮದು ಸುಂಕವನ್ನು ತಪ್ಪಿಸಲು ಹುರಿದ ಅಡಿಕೆಯನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಹುರಿದ ಅಡಿಕೆಯ ಆಮದು…
ಇತ್ತೀಚಿನ ಅಧ್ಯಯನಗಳ ಪ್ರಕಾರ, ಭಾರತವು ಜಾಗತಿಕವಾಗಿ ಪ್ಲಾಸ್ಟಿಕ್ ತ್ಯಾಜ್ಯದ ಅಗ್ರ ಉತ್ಪಾದಕ ಎಂದು…
115 ವರ್ಷಗಳ ಇತಿಹಾಸ ಇರುವ ಹಾಗೂ ರಾಜ್ಯದಲ್ಲಿ ನಿರ್ಮಾಣವಾದ ಮೊದಲ ಜಲಾಶಯ ವಾಣಿವಿಲಾಸ…