ಕರ್ನಾಟಕ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೆಸೆಯಬೇಕು ಎನ್ನುವ ಉದ್ದೇಶದಿಂದ ಸಿಪಿಐ(ಎಂಎಲ್) ರೆಡ್ ಸ್ಟಾರ್ ಪಕ್ಷ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಘೋಷಿಸಿದೆ. ಪಕ್ಷದ ಈ ನಿರ್ಧಾರಕ್ಕೆ ಕನಾ೯ಟಕ ರೈತ ಸಂಘ, ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ, ಅಖಿಲ ಭಾರತ ಕ್ರಾಂತಿಕಾರಿ ಯುವಜನ ರಂಗ, ಅಖಿಲ ಭಾರತ ಕ್ರಾಂತಿಕಾರಿ ವಿದ್ಯಾಥಿ೯ ಸಂಘಟನೆ, ಅಖಿಲ ಭಾರತ ಕ್ರಾಂತಿಕಾರಿ ಮಹಿಳಾ ಸಂಘಟನೆ, ಕ್ರಾಂತಿಕಾರಿ ಸಾಂಸ್ಕೃತಿಕ ರಂಗ, ಜಾತಿ ನಿಮೂ೯ಲನಾ ಚಳುವಳಿ ಹಾಗೂ ಇನ್ನು ಅನೇಕ ಸಂಘಟನೆಗಳು ಕೂಡ ಬೆಂಬಲ ವ್ಯಕ್ತಪಡಿಸಿವೆ.
ಈ ಬಗ್ಗೆ ಸಿಪಿಐ(ಎಮ್‌ಎಲ್) ರೆಡ್ ಸ್ಟಾರ್ ಪಕ್ಷ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ”ರಾಜ್ಯದ ವಿರಾಜಪೇಟೆ, ಎನ್‌ಆರ್‌ಪುರ (ಚಿಕ್ಕ ಮಗಳೂರು) ಕೊಪ್ಪಳ, ಸಿಂಧನೂರು ಮತ್ತು ಮಸ್ಕಿ ಈ ಐದು ಕ್ಷೇತ್ರಗಳಲ್ಲಿ ಮಾತ್ರ ಸಿಪಿಐ(ಎಂಎಲ್) ಅಭ್ಯರ್ಥಿಗಳು ಸ್ಪರ್ಧೆ ಮಾಡಲಿದ್ದಾರೆ. ಕಳೆದ ರಾಜ್ಯ ಸಮಿತಿಯಲ್ಲಿ ಈ ನಿಣ೯ಯವನ್ನು ಸವ೯ ಸಮ್ಮತಿಯೊಂದಿಗೆ ಅಂಗೀಕರಿಸಲಾಗಿದೆ” ಎಂದು ತಿಳಿಸಿದೆ.
”ನಮ್ಮ ಬಹು ಮುಖ್ಯವಾದ ಕರ್ತವ್ಯವೆಂದರೆ RSS ಎಂಬ ನಿಯ್ಯೋ ಫ್ಯಾಸಿಸ್ಟ್ ಶಕ್ತಿಯನ್ನು ಸೋಲಿಸುವುದಾಗಿದೆ. ರಾಜ್ಯದಲ್ಲಿ ಒಂದೇ ಪಕ್ಷ ಅಥವಾ ಒಂದೇ ಸಂಘಟನೆಯು ಈ ಫ್ಯಾಸಿಸ್ಟ್ ವಿರೋಧಿ ಹೋರಾಟವನ್ನು ಯಶಸ್ವಿಯಾಗಿ ಮಾಡಬಲ್ಲದು ಎನ್ನುವುದು ಅಸಂಬದ್ಧವಾದುದ್ದಾಗುತ್ತದೆ” ಹಾಗಾಗಿ ಈ ಫ್ಯಾಸಿಸ್ಟ್ ಶಕ್ತಿಯನ್ನು ಸೋಲಿಸಲು ಒಂದಾಗಬೇಕಿದೆ” ಎಂದು ತಿಳಿಸಲಾಗಿದೆ.
”ಹೋರಾಟನಿರತ ಜನತೆ, ಎಡಪಕ್ಷಗಳು, ಕ್ರಾಂತಿಕಾರಿ ಕಮ್ಯುನಿಸ್ಟ್ ಪಕ್ಷಗಳು, ಸಂಘರ್ಷಶೀಲ ದಲಿತ ಹಾಗೂ ರೈತ ಚಳುವಳಿಗಳು, ವಿಶಾಲವಾದ ಮಧ್ಯಮ ವರ್ಗ ಹಾಗೂ ಬುದ್ದಿವಂತ ಸಮುದಾಯಗಳು ವಿಶೇಷವಾಗಿ ಮಹಿಳಾ, ವಿದ್ಯಾರ್ಥಿ ಹಾಗೂ ಯುವಜನ ಸಂಘಟನೆಗಳೆಲ್ಲಾ ಒಂದಾಗಿ ನಡೆ ಹಾಗೂ ನುಡಿಯಲ್ಲೂ ಈ ಕರ್ತವ್ಯಕ್ಕೆ ಸಿದ್ದರಾಗಬೇಕಾಗಿದೆ. ಅಲ್ಲದೆ, ಫ್ಯಾಸಿಸ್ಟ್ ಅಲ್ಲದ ಕಾಂಗ್ರೆಸ್ ಪಕ್ಷವನ್ನು ಬೇಷರತ್ತಾಗಿ ಬೆಂಬಲಿಸುವುದರ ಮೂಲಕ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಾರದಂತೆ ತಡೆಯಬೇಕಾಗಿದೆ” ಎಂದು ಹೇಳಿದೆ.”
”ಬಿಜೆಪಿ ಹಾಗೂ ಆರ್‌ಎಸ್‌ಎಸ್, ದನಗಳಿಗೆ ನೀಡುವ ಸ್ಥಾನಮಾನವನ್ನು ಜನಗಳಿಗೆ ನೀಡಲು ನಿರಾಕರಿಸುತ್ತವೆ. ಸಂವಿಧಾನದ ಬದಲು ಮನಸ್ಮ್ರುತಿಯ ಜಾರಿಗೆ ತರುತ್ತೇವೆ, ಇಂಡಿಯಾವನ್ನು ದ್ವಂಸಗೊಳಿಸಿ ಹಿಂದೂರಾಷ್ಟ್ರ ನಿರ್ಮಾಣ ಮಾಡುತ್ತೇವೆ ಎನ್ನುತ್ತವೆ. ಸಾಮಾಜಿಕ ಮೀಸಲಾತಿಯನ್ನು ರದ್ದುಪಡಿಸಿ ಆರ್ಥಿಕ ಮೀಸಲಾತಿಯನ್ನು ಹೇರುವ, ಸರಣಿ ನರಮೇಧ ಕೊಲೆ ಸುಲಿಗೆ ಅತ್ಯಾಚಾರ ನಡೆಯಿಸಿ ಬೋಲೊ ಭಾರತ ಮಾತಾಕೀ ಜೈ ಎನ್ನುವ ಸಂಘ ಪರಿವಾರದ ಸರ್ವಾಧಿಕಾರದ ವಿರುದ್ದ ,ಈ ಚುನಾವಣೆಯನ್ನು ಒಂದು ಚಳುವಳಿಯಾಗಿ ಮಾರ್ಪಡಿಸಬೇಕೆಂದು ಸಿಪಿಐ(ಎಂಎಲ್)ನ ಕರೆಯಾಗಿದೆ” ಎಂದು ತಿಳಿಸಿದೆ.
”ನಾಡಿನ ಜನತೆಯ ಜೀವ ಹಾಗೂ ಜೀವನದ ಎರಡು ಅತೀ ದೊಡ್ಡ ಸವಾಲುಗಳು ಈ ಚುನಾವಣೆಯ ಅಜೆಂಡಾಗಳಾಗಿವೆ. ಕೊಲೆಗಡುಕ ಬಿಜೆಪಿಯಿಂದ ಜನತೆಯ ಜೀವ ರಕ್ಷಿಸುವ ಹೋರಾಟ ಇದಾಗಬೇಕಿದೆ. ಹಾಗೆಯೆ, ಜೀವನಕ್ಕೆ ಆಪತ್ತಾಗಿ ನಿಂತಿರುವ ನವ ಉದಾರವಾದಿ ನೀತಿಗಳ ವಿರುದ್ಡದ ಹೋರಾಟವು ಬಿಜೆಪಿಯೇತರ ಪಕ್ಷ ಅಧಿಕಾರ ಹಿಡಿದ ನಂತರವೂ ಮುಂದುವರೆಯಲಿದೆ. ಆದ್ದರಿಂದ ನಮ್ಮ ಎಲ್ಲ ಜನಪರ ಶಕ್ತಿಗಳು ಒಟ್ಟಾಗಿ ಮನುವಾದಿಗಳಿಗೆ ಮುಣ್ಣುಮುಕ್ಕಿಸಬೇಕು ಎಂದು ಸಿಪಿಐ(ಎಂಎಲ್) ಪಕ್ಷವು ಕರ್ನಾಟಕದ ಎಲ್ಲ ನಾನ್ ಫ್ಯಾಸಿಸ್ಟ್ ಪಕ್ಷಗಳಿಗೆ ಹಾಗೂ ಮತದಾರರಿಗೆ ಈ ಮೂಲಕ ಮನವಿ ಮಾಡುತ್ತದೆ” ಎಂದು ಪ್ರಕಟಣೆ ಹೊರಡಿಸಿದೆ.