ಕೃಷಿ, ತೋಟಗಾರಿಕೆ ಕೃಷಿಯಲ್ಲಿ ಆಧುನಿಕ ಪದ್ಧತಿಯನ್ನು ಅನುಸರಿಸಿ ಆದಾಯ ಕಂಡುಕೊಳ್ಳಬೇಕು. ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಆದಾಯ ಬರುವಂತಹ ಬೆಳೆಗಳನ್ನು ಬೆಳೆಯುವ ಕಡೆಗೆ ರೈತರು ಮುಂದಾಗಬೇಕು ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.
ಮೈಸೂರು ತಾಲ್ಲೂಕಿನ ತೋಟಗಾರಿಕೆ ಮಹಾವಿದ್ಯಾಲಯದ ಆವರಣದಲ್ಲಿ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಪುತ್ತೂರು ಗೇರು ಸಂಶೋಧನಾ ನಿರ್ದೇಶನಾಲಯದ ಸಹಯೋಗದೊಂದಿಗೆ ಹುಣಸೂರು ತಾಲ್ಲೂಕಿನ ಕೆಬ್ಬೆಕೊಪ್ಪಲು ಗ್ರಾಮದ ರೈತರಿಗೆ ಏರ್ಪಡಿಸಿದ್ದ ತೋಟಗಾರಿಕೆ ಆಧಾರಿತ ಕೃಷಿ ಪದ್ಧತಿಯ ತರಬೇತಿ ಹಾಗೂ ಪರಿಕರಗಳ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಎರಡು ಎಕರೆಯಲ್ಲಿ ಒಂದು ಎಕರೆಯನ್ನು ಸಮಗ್ರ ಕೃಷಿ ಪದ್ಧತಿಗೆ ಅನುಸರಿಸಬೇಕು. ಇಂದು ತರಕಾರಿ, ಹಣ್ಣುಗಳ ದರ ಹೆಚ್ಚಾಗಿರುವ ಕಾರಣ ಆದಾಯ ಮಾತ್ರ ತಪ್ಪುವುದಿಲ್ಲ. ತೋಟಗಾರಿಕೆ ಕೃಷಿಮಾಡಲು ಹೆಚ್ಚು ನೀರು ಬೇಕಿಲ್ಲ. ಹನಿ ನೀರಾವರಿ ಬಳಸಬಹುದು. ಸರ್ಕಾರದಿಂದಲೂ ಹನಿ, ತುಂತುರು ನೀರಾವರಿಗೆ ಸಬ್ಸಿಡಿ ಕೊಡುವುದರಿಂದ ರೈತರು ಬಳಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.