ಇಂದು ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಿದೆ. ಉತ್ತರ ಹಾಗೂ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಮೋಂಥಾ ಚಂಡಮಾರುತದ ಪ್ರಭಾವದಿಂದ ಕರಾವಳಿ ಜಿಲ್ಲೆಗಳಲ್ಲಿ ಇನ್ನೆರಡು ದಿನಗಳ ಕಾಲ ವ್ಯಾಪಕ ಮಳೆಯಾಗಲಿದೆ. ಮೀನುಗಾರರು ಸಮುದ್ರಕ್ಕಿಳಿಯದಂತೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲೂ ಭಾರೀ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಡಾ. ಸಿ.ಎಸ್. ಪಾಟೀಲ್ ತಿಳಿಸಿದ್ದಾರೆ. ಬೆಂಗಳೂರಿನಲ್ಲೂ ಮೋಡ ಕವಿದ ವಾತವರಣವಿದ್ದು ಹಗುರದಿಂದ ಸಾಧಾರಣ ಮಳೆಯಾಗಲಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಗಾಳಿ ಸಹಿತ ಮಳೆಯಾಗುತ್ತಿದೆ. ಚಿಕ್ಕಮಗಳೂರು, ಮೂಡಿಗೆರೆ , ತರೀಕೆರೆ ತಾಲೂಕು ಸೇರಿ ಹಲವೆಡೆ ಸಾಧಾರಣ ಮಳೆ ಮುಂದುವರೆದಿದೆ. ನಿರಂತರ ಮಳೆಯ ಕಾರಣ ಜಿಲ್ಲೆಯ ಕಾಫಿ, ಅಡಿಕೆ, ತರಕಾರಿ ಬೆಳೆಗಳಿಗೆ ಹಾನಿಯುಂಟಾಗಿದೆ. ಜಿಲ್ಲೆಯ ಚಂದ್ರದ್ರೋಣ ಪರ್ವತ ಶ್ರೇಣಿಯ ಮುಳ್ಳಯ್ಯನಗಿರಿ ಕೆಮ್ಮಣುಗುಂಡಿ, ಮಲ್ಲೇನಹಳ್ಳಿ ಸುತ್ತ ಮುತ್ತಲಿನ ಕೆಲ ತೋಟಗಳಲ್ಲಿ ಮಳೆಯಿಂದ ಕಾಫಿಗೆ ಕೊಳೆ ರೋಗ ಕಂಡುಬಂದಿದೆ. ಹಲವೆಡೆ ಕಾಫಿ ಕಾಯಿಗಳು ನೆಲಕ್ಕುದುರಿವೆ.
ಮೋಂಥಾ ಚಂಡಮಾರುತದ ಅಬ್ಬರ ತೀವ್ರಗೊಂಡಿದೆ. ಆಂಧ್ರಪ್ರದೇಶದ ಕರಾವಳಿಯ ಕಾಕಿನಾಡದಲ್ಲಿ ಚಂಡಮಾರುತದ ಕೇಂದ್ರಬಿಂದು ಕಂಡುಬಂದಿದೆ. ಚಂಡಮಾರುತದಿಂದಾಗಿ ಆಂಧ್ರಪ್ರದೇಶ, ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಗಳಿವೆ. ಅಲ್ಲದೆ, ಚೆನ್ನೈ ಸೇರಿದಂತೆ ಉತ್ತರ ತಮಿಳುನಾಡಿನಲ್ಲಿಯೂ ಭಾರೀ ಮಳೆ ನಿರೀಕ್ಷಿಸಲಾಗಿದೆ. ತಮಿಳುನಾಡಿನ ತಿರುವೆಲ್ಲೂರ್, ಚೆನ್ನೈ, ರಾಣಿಪೆತ್, ಕಂಚೀಪುರಂ, ಚಂಗಲ್ ಪಟ್ಟು, ವಿಲ್ಲುಪುರಂ ಜಿಲ್ಲೆಗಳಲ್ಲಿ ಭಾರೀ ಗಾಳಿಯಿಂದಾಗಿ ಮಳೆಯಾಗುವ ನಿರೀಕ್ಷೆ ಇದೆ. ರಾಜ್ಯದ 11 ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಒಳನಾಡು, ಉತ್ತರ ಒಳನಾಡು, ಉಡುಪಿ ಜಿಲ್ಲೆಗಳಲ್ಲಿ ಅರೆಂಜ್ ಅಲರ್ಟ್ . ಬೀದರ್, ವಿಜಯಪುರ, ರಾಯಚೂರು, ಕಲಬುರಗಿ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

